ಆರೋಗ್ಯವನ್ನು ಸುತ್ತಿಕೊಂಡ ಮೌಢ್ಯದ ಹಾವು....
ಈ ಹೊತ್ತಿನ ಹೊತ್ತಿಗೆ
ಮೌಢ್ಯ ಇಂದು ಸಾಮಾಜಿಕ ವಿಷಯವಾಗಿಯಷ್ಟೇ ಉಳಿದಿಲ್ಲ. ಅದು ರಾಜಕೀಯವಾಗಿಯೂ ನಮ್ಮನ್ನುಕಾಡತೊಡಗಿದೆ. ವೌಢ್ಯಗಳ ವಿರುದ್ಧ ಕಾನೂನನ್ನು ಜಾರಿಗೊ ಳಿಸಲು ಸರಕಾರವೇ ಅಂಜುವಂತಹ ಸ್ಥಿತಿ ಇದೆ ಎಂದ ಮೇಲೆ, ಇದು ಹೇಗೆ ಈ ಸಮಾಜದ ಆರೋಗ್ಯವನ್ನು ಕೆಡಿಸುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಇಂದು ನಮ್ಮ ಸಮಾಜ ದೈಹಿಕ ಅನಾರೋಗ್ಯದಿಂದಷ್ಟೇ ನರಳುತ್ತಿಲ್ಲ. ದೈಹಿಕ ಅನಾರೋಗ್ಯಗಳನ್ನು ಔಷಧಿಗಳ ಮೂಲಕ ಸರಿಪಡಿಸಬಹುದು. ಆದರೆ ಮಾನಸಿಕ ಆರೋಗ್ಯ ಒಂದು ದೊಡ್ಡ ಸವಾಲಾಗಿದೆ ಮತ್ತು ಈ ಮಾನಸಿಕ ಅನಾರೋಗ್ಯದ ಹಿಂದೆ ವೌಢ್ಯದ ಪಾತ್ರ ಬಹುದೊಡ್ಡದು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹೊರ ತಂದಿರುವ ಡಾ. ಎಚ್. ಆರ್. ಸ್ವಾಮಿ ಅವರ ಸಂಪಾದಕತ್ವದ ‘ಆರೋಗ್ಯ ಮತ್ತು ಮೂಢನಂಬಿಕೆ’ ಕೃತಿ ಮಹತ್ವವನ್ನು ಪಡೆಯುತ್ತದೆ. ಇಲ್ಲಿ ಒಟ್ಟು 9 ಲೇಖನಗಳಿವೆ. ಅವುಗಳಲ್ಲಿ ಆರು ಲೇಖನ ಗಳು ಕನ್ನಡದಲ್ಲಿದ್ದರೆ ಮೂರು ಲೇಖನಗಳು ಇಂಗ್ಲಿಷ್‌ನಲ್ಲಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಢನಂಬಿಕೆಗಳ ಬಗ್ಗೆ ಡಾ. ನರೇಂದ್ರ ನಾಯಕ್ ಅವರು ದೀರ್ಘ ಲೇಖನ ಬರೆದಿದ್ದಾರೆ. ಹೇಗೆ ಇಲ್ಲಿ ನಂಬಿಕೆ ಮತ್ತು ವೌಢ್ಯ ಪರಸ್ಪರ ಒಂದನ್ನೊಂದು ಬೆಸೆದು ಕೊಂಡಿವೆ ಮತ್ತು ಅದು ಜನರನ್ನು ಹೇಗೆ ನಿಯಂತ್ರಿಸುತ್ತಿದೆೆ ಎನ್ನುವುದನ್ನು ವಿವರವಾಗಿ ಅವರು ಬರೆದಿದ್ದಾರೆ. ಪವಾಡ ಬಯಲು ಕಾರ್ಯಕ್ರಮಗಳ ಮೂಲಕ ದೊಡ್ಡ ಚಳವಳಿಯನ್ನೇ ಮಾಡಿರುವ ನರೇಂದ್ರ ನಾಯಕ್, ತಾವು ಕಂಡುಂಡ ಸಂಗತಿಗಳನ್ನು ಉದಾಹರಣೆ ಸಹಿತವಾಗಿ ಇಲ್ಲಿ ವಿವರಿಸಿದ್ದಾರೆ. ವೌಢ್ಯದ ಕುರಿತ ಅವರ ಬರಹ ಕಥನರೂಪದಲ್ಲಿದ್ದು, ಕುತೂಹಲಕರವಾಗಿ ನಮ್ಮನ್ನು ಓದಿಸುತ್ತದೆ ಮಾತ್ರವಲ್ಲ, ಪ್ರಜ್ಞಾವಂತರನ್ನಾಗಿ ಮಾಡುತ್ತದೆ. ಅವರು ಇಲ್ಲಿ ವೌಢ್ಯಗಳನ್ನು ಬೇರೆ ಬೇರೆ ನೆಲೆಗಳಲ್ಲಿ ವಿಶ್ಲೇಷಿಸುತ್ತಾರೆ. ಮನಶ್ಶಾಸ್ತ್ರೀಯ ಹಿನ್ನೆಲೆಯನ್ನೂ ತೆರೆದಿಡುತ್ತಾರೆ. ಹಾಗೆಯೇ ವೌಢ್ಯವನ್ನು ಸಾಕಿ ಬದುಕು ಹೊರೆಯುವ ಮೋಸಗಾರರ ಬಗ್ಗೆಯೂ ಎಚ್ಚರಿಸುತ್ತಾರೆ. ಆರೋಗ್ಯ ರಕ್ಷಣೆಯಲ್ಲಿ ಮೂಢನಂಬಿಕೆ ಲೇಖನವನ್ನು ಶ್ರೀನಿವಾಸ ಕಕ್ಕಿಲ್ಲಾಯ ಅವರು ಬರೆದಿದ್ದಾರೆ. ಕೆಲವು ನಿಗೂಢ ರೋಗಗಳ ಕುರಿತಂತೆ ಸರಿಯಾದ ಮಾಹಿತಿಗಳು ಇಲ್ಲದೆ ವೌಢ್ಯಕ್ಕೆ ಮೊರೆ ಹೋಗಿ ಆರೋಗ್ಯ ಕಳೆದುಕೊಳ್ಳುವ ಘಟನೆಗಳನ್ನು ಪ್ರಸ್ತಾಪಿಸಿದ್ದಾರೆ. ಡಾ. ಬಾಲಚಂದ್ರರಾವ್ ಜ್ಯೋತಿಷ್ಯ ತಂದಿಡುವ ಅನಾಹುತಗಳನ್ನು ವಿವರಿಸಿದ್ದಾರೆ. ಸುಮಂಗಲ ಎಸ್. ಮಮ್ಮಿಗಟ್ಟಿ, ವಿದ್ಯಾನಂದ ನಂಜುಂಡ ಅವರು ವಿಜ್ಞಾನವನ್ನು ದುರ್ಬಳಕೆ ಮಾಡುವ ಮಾಂತ್ರಿಕ ವೇಷಧಾರಿಗಳನ್ನು ಬಯಲಿಗೆಳೆದಿದ್ದಾರೆ. ವಿದ್ಯಾರ್ಥಿಗಳು ಮಾತ್ರವಲ್ಲ, ಪೋಷಕರು, ಶಿಕ್ಷಕರು ತಮ್ಮದಾಗಿಸಿಕೊಳ್ಳಬೇಕಾದ ಹಲವು ವಿಷಯಗಳು ಇಲ್ಲಿವೆ. ವೌಢ್ಯಗಳು ವಿದ್ಯಾವಂತರನ್ನೂ ಬಿಟ್ಟಿಲ್ಲವಾಗಿರುವುದರಿಂದ ಸಮಾಜದ ಆರೋಗ್ಯ ಕಾಪಾಡಲು ಈ ಕೃತಿ ತನ್ನದೇ ಆದ ರೀತಿಯಲ್ಲಿ ಪ್ರಯತ್ನ ಮಾಡಿದೆ. 128 ಪುಟಗಳ ಈ ಕೃತಿಯ ಮುಖಬೆಲೆ 160 ರೂಪಾಯಿ.