ಕನ್ನಡ ತಂತ್ರಾಂಶ ಲಭ್ಯವಿಲ್ಲದ ಕಾಲದಲ್ಲಿ ಸಂಶೋಧನೆಗೆ ಕಂಪ್ಯೂಟರ್ ಬಳಸಿದ ಸಾಹಸಿ 'ಡಾ.ಶ್ರೀನಿವಾಸ ಹಾವನೂರ'
ಡಿಜಿಟಲ್ ಕನ್ನಡ

ಮೊದಲಿಗೆ ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳನ್ನು ಕಾಣಲು ಹಂಬಲಿಸಿದವರಲ್ಲಿ ತಂತ್ರಜ್ಞರಿಗಿಂತ ಸಾಹಿತಿಗಳು ಮತ್ತು ಸಂಶೋಧಕರೇ ಪ್ರಮುಖವಾಗಿದ್ದರು. ನಮ್ಮ ನಾಡಿನ ಖ್ಯಾತ ಸಾಹಿತ್ಯೇತಿ ಹಾಸ ಸಂಶೋಧಕರಾದ ಡಾ.ಶ್ರೀನಿವಾಸ ಹಾವನೂರ ಇತಿಹಾಸ ಮತ್ತು ಸಾಹಿತ್ಯ ಕೃತಿಗಳ ವಸ್ತುನಿಷ್ಠ ವಿಮರ್ಶೆ ಮತ್ತು ತೌಲನಿಕ ಅಧ್ಯಯನಕ್ಕಾಗಿ ಕಂಪ್ಯೂಟರನ್ನು ಯಶಸ್ವಿಯಾಗಿ ಬಳಸಿದವರಲ್ಲಿ ದೇಶದಲ್ಲಿಯೇ ಮೊದಲಿ ಗರು. ಕನ್ನಡ ಲಿಪಿಯು ಕಂಪ್ಯೂಟರ್‌ನಲ್ಲಿ ಲಭ್ಯವಿರದಿದ್ದ ಕಾಲದಲ್ಲಿ ಕನ್ನಡದ ಕೃತಿಗಳ ಪದಗಳನ್ನು ರೋಮನ್ (ಇಂಗ್ಲಿಷ್) ಲಿಪಿಗೆ ಪರಿವರ್ತಿಸಿ,ಕಂಪ್ಯೂಟರ್‌ಗೆ ಮೂಡಿಸಿ, ದತ್ತಸಂಚಯಗಳನ್ನು (ಡೇಟಾಬೇಸ್‌ಗಳು) ಇವರು ರಚಿಸಿದ್ದಾರೆ. ಈ ದತ್ತಸಂಚಯಗಳನ್ನು ಬಳಸಿ ಸಾಹಿತ್ಯ ಕೃತಿಗಳ ಸಾವಿರಾರು ಪದಗಳ ಮತ್ತು ಆ ಪದಗಳು ಇರುವ ಎಲ್ಲಾ ವಾಕ್ಯ ಗಳನ್ನು ಹೆಕ್ಕಿತೆಗೆದು, ಅವುಗಳನ್ನು ಅಕಾರಾದಿಯಾಗಿ ವಿಂಗಡಿಸಿರುವ ‘ಪದಪ್ರಯೋಗ ಕೋಶ’ಗಳನ್ನು (ಕನ್‌ಕಾರ್ಡೆನ್ಸ್ ಇಂಡೆಕ್ಸ್) ಇವರು ಸಿದ್ಧಪಡಿಸಿದ್ದಾರೆ. ಈ ‘ಪದಪ್ರಯೋಗ ಕೋಶ’ಗಳು ಸಾಹಿತ್ಯ ಮತ್ತು ಇತಿಹಾಸದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅತ್ಯುತ್ತಮ ಪರಾ ಮರ್ಶನ ಆಕರವಾಗಿವೆ. ಇತಿಹಾಸ ಅಧ್ಯಯನದಲ್ಲಿ ಮಹತ್ವದ ಪಾತ್ರ ವಹಿಸುವ ಶಾಸನಗಳ ವಿವರಗಳನ್ನು ದತ್ತಸಂಚಯ ರೂಪದಲ್ಲಿ ಸಂಗ್ರಹಿಸುವುದು, ಗ್ರಂಥಕತೃತ್ವ ತಿಳಿಯಲು ಆ ಗ್ರಂಥದ ಪದಪ್ರಯೋಗ ಗಳು ಮತ್ತು ಕೃತಿಕಾರರ ಇತರ ವಿಶೇಷ ಅಂಶಗಳ ವಿಶ್ಲೇಷಣೆಗಾಗಿ ಕಂಪ್ಯೂಟರ್ ಬಳಸಿ ಯಶಸ್ವಿಯಾಗಿರುವುದು ಇವರ ಹೆಗ್ಗಳಿಕೆಯಾಗಿದೆ. ಇವೇ ವಿಚಾರಗಳ ಕುರಿತಾಗಿ ಹಲವಾರು ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ತಮ್ಮ ವಿದ್ವತ್ಪೂರ್ಣ ಪ್ರಬಂಧಗಳನ್ನು ಅವರು ಮಂಡಿಸಿದ್ದಾರೆ.
ಸ್ಥಳನಾಮಗಳು ಮತ್ತು ಶಾಸನಗಳ ವಿಶ್ಲೇಷಣೆಯಲ್ಲಿ ಹಾಗೂ ತೌಲನಿಕ ಸಾಹಿತ್ಯ, ವಿಜ್ಞಾನ ಪದಗಳ ಪರಿಭಾಷೆ ಇವುಗಳಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಹಲವು ಪ್ರಬಂಧಗಳನ್ನು ದೇಶ ವಿದೇಶಗಳ ವಿವಿಧ ವಿಚಾರ ಸಂಕಿರಣಗಳಲ್ಲಿ ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಮಂಡಿಸಿ ದ್ದಾರೆ. ಕರ್ನಾಟಕ ಇತಿಹಾಸದಲ್ಲಿ ಬ್ರಿಟಿಷರ ಕಾಲ, ಕನ್ನಡ ಪತ್ರಿಕೋದ್ಯ ಮ, ಕರ್ನಾಟಕದಲ್ಲಿನ ಕ್ರೈಸ್ತರು, ಕನ್ನಡದಲ್ಲಿ ದಾಸ ಸಾಹಿತ್ಯ ಮತ್ತು ವಿಜ್ಞಾ ನೇತರ ವಿಷಯಗಳ ಅಧ್ಯಯನದಲ್ಲಿ ಕಂಪ್ಯೂಟರ್‌ನ ಬಳಕೆ-ಇವುಗಳಲ್ಲಿ ಹಾವನೂರರು ವಿಶೇಷ ಪರಿಣತಿಯನ್ನು ಗಳಿಸಿದ್ದರು.
ಸಂಶೋಧನೆಯಲ್ಲಿ ಕಂಪ್ಯೂಟರ್ ಹೇಗೆ ಸಹಾಯಕ ಎಂಬುದನ್ನು ಅವರು ವಿವರಿಸಿದ್ದಾರೆ. ‘‘ಗ್ರಂಥಕರ್ತೃತ್ವ ನಿರ್ಣಯ, ಶೈಲಿ, ಭಾಷಾಭ್ಯಾಸ, ಗ್ರಂಥಸಂಪಾದನಾ ಕಾರ್ಯ - ಈ ಎಲ್ಲಾ ರಂಗಗಳಲ್ಲಿ ‘ಪದಪ್ರಯೋಗ ಕೋಶ’ಗಳು ಕೃತಿಗಳ ತೌಲನಿಕ ಅಧ್ಯಯನಕ್ಕೆ ಪೂರಕವಾಗುತ್ತವೆ. ಕವಿ ಅಥವಾ ಬರಹಗಾರ ಬಳಸಿರುವ ಶಬ್ದಗಳು ಮತ್ತು ಆ ಶಬ್ದಗಳನ್ನು ಒಳಗೊಂಡಿರುವ ವಾಕ್ಯಗಳ ಸಹಿತ ಅಕಾರಾದಿ ಸೂಚಿಗೆ ‘ಪದಪ್ರಯೋಗ ಕೋಶ’ ಎನ್ನಲಾಗಿದೆ. ಇದನ್ನು ತಯಾರಿಸಲು ಕೃತಿಯಲ್ಲಿನ ಪ್ರತಿಯೊಂದೂ ಶಬ್ದವನ್ನು ಪಟ್ಟಿಮಾಡಿ, ಆ ಶಬ್ದವನ್ನು ಹೊಂದಿರುವ ಎಲ್ಲಾ ವಾಕ್ಯಗಳನ್ನು ಒಂದೆಡೆಯಲ್ಲಿ ಬರೆದುಕೊಂಡು, ಎಲ್ಲಾ ಶಬ್ದಗಳ ವಾಕ್ಯಸಹಿತ ಅಕಾರಾದಿ ಪಟ್ಟಿಯನ್ನು ತಯಾರಿಸಬೇಕು. ಇದು ತುಂಬಾ ಕಷ್ಟಕರವಾದ ಕೆಲಸ ಮತ್ತು ಅತ್ಯಂತ ಪರಿಶ್ರಮದ್ದು, ದೀರ್ಘಕಾಲ ತೆಗೆದುಕೊಳ್ಳುವಂತಹದ್ದು. ಹಾಗೂ ಇದರ ಸಂಕಲನ ಕಾರ್ಯ ಅತೀವ ಬೇಸರ-ದಣಿವನ್ನು ಉಂಟು ಮಾಡುವಂತಹುದು. ಕಂಪ್ಯೂಟರ್ ಬಳಕೆಯಿಂದಾಗಿ ಇವೆಲ್ಲವನ್ನೂ ಇಂದು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಿದೆ’’
ಸಾಹಿತ್ಯ-ಸಂಶೋಧನಾ ರಂಗದಲ್ಲಿ ಕಂಪ್ಯೂಟರ್‌ನ ಬಳಕೆ 1959ರಲ್ಲಿ (ಕಾರ್ನೆಲ್ ವಿಶ್ವವಿದ್ಯಾನಿಲಯ) ‘ಪದಪ್ರಯೋಗ ಕೋಶ’ದ ರಚನೆ ಯಿಂದ ಆರಂಭಗೊಂಡಿತು. ಎಮಿಲಿ ಡಿಕಿನ್ಸನ್ ಅಮೆರಿಕದ ಒಬ್ಬ ಪ್ರಸಿದ್ಧ ಕವಿಯಿತ್ರಿ. ಆಕೆಯ ಭಾವಗೀತೆಗಳಲ್ಲಿ ಹೆಚ್ಚಾಗಿ ಆತ್ಮನಿವೇದನೆಯ ಅಂಶಕಂಡುಬರುತ್ತದೆಂಬುದನ್ನು ಪರೀಕ್ಷಿಸಲು ಒಬ್ಬ ವಿಮರ್ಶಕ ಆಕೆ ಉಪ ಯೋಗಿಸಿದ ಎಲ್ಲಾ ಪದಗಳ ಪಟ್ಟಿ ಮಾಡಿ ವಿಶ್ಲೇಷಿಸಿದಾಗ ಆಕೆಯ ಜೀವನ ದರ್ಶನ ಅತ್ಯಂತ ನಿಚ್ಚಳವಾಗಿ ಕಂಡುಬಂತು. ಹೀಗೆ, ಸಾಹಿತ್ಯ ಸಂಶೋ ಧನಾ ಕ್ಷೇತ್ರದಲ್ಲಿ ಕಂಪ್ಯೂಟರನ್ನು ಬಳಕೆ ಪಾಶ್ಚಾತ್ಯರಲ್ಲಿ ಆರಂಭಗೊಂಡಿತು.
ಡಾ.ಶ್ರೀನಿವಾಸ ಹಾವನೂರರು ಮುಂಬೈಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿದ್ದಾಗ, ಅಲ್ಲಿ ಪ್ರತಿಯೊಂದಕ್ಕೂ ಕಂಪ್ಯೂಟರನ್ನೇ ಅವಲಂಬಿಸಿರುವುದನ್ನು ನಿತ್ಯವೂ ನೋಡುತ್ತಿದ್ದರು. ಕನ್ನಡ ಸಾಹಿತ್ಯಕ್ಕೆ ಅನ್ವಯಿಸಿ ನಾವೇಕೆ ಈ ಕಂಪ್ಯೂಟರ್‌ನ ನೆರವನ್ನು ಪಡೆಯಬಾರದು ಎಂಬ ಆಲೋಚನೆ ಅವರಿಗೆ ಬಂತು. ಇದಕ್ಕೆ ಪ್ರೇರಣೆ ಒದಗಿಸಿದ್ದು ಎಂ.ಎ. ರಾಮಾನುಜಯ್ಯಂಗಾರರ ಒಂದು ಹೇಳಿಕೆ. ಮುದ್ದಣನ ಮೂರೂ ರಾಮಾಯಣ ಕೃತಿಗಳನ್ನು ಮೊದಲಿಗೆ ಅವರು ಪ್ರಕಟಿಸಿದ್ದರು. ಆ ಮೂರೂ ಕೃತಿಗಳು ಒಬ್ಬನೇ ಕವಿಯು ರಚಿಸಿರುವುದು ಎಂದು ಒಪ್ಪಲುರಾಮಾನುಜಯ್ಯಂಗಾರರು ಸಿದ್ಧರಿರಲಿಲ್ಲ. ‘‘ಯಾರು ಏನೇ ಹೇಳಲಿ, ಅಂದರೆ ‘ಶ್ರೀರಾಮಪಟ್ಟಾಭಿಷೇಕ’ ಕೃತಿಯನ್ನು ಮುದ್ದಣ್ಣನೇ ಬರೆದಿದ್ದಾ ನೆಂದು ನಾನು ಎಷ್ಟು ಮಾತ್ರಕ್ಕೂ ಒಪ್ಪಲಾರೆ’’ ಎಂಬುದಾಗಿ, ಮುದ್ದಣ ತೀರಿಹೋಗಿ 25 ವರ್ಷಗಳು ಸಂದುಹೋದ ಮೇಲೂ ಅವರು ಬರೆದರು. ಹಾಗಿದ್ದರೆ, ಕೃತಿ ಪ್ರಮಾಣಗಳನ್ನು ಹುಡುಕಿ ಮುದ್ದಣ್ಣನೇ ಈ ಕೃತಿಯ ರಚನೆಕಾರ ಎಂಬುದನ್ನು ನಿರ್ಧರಿಸಬಯಸಿ ಅದಕ್ಕಾಗಿ ಕಂಫ್ಯೂಟರ್‌ನ ನೆರವನ್ನು ಪಡೆಯಬೇಕೆಂದು 1973ರಲ್ಲಿ ಹಾವನೂರರು ಯೋಚಿಸಿದರು. ಸಾಹಿತ್ಯ ಕಾರ್ಯಕ್ಕಾಗಿ ಕಂಪ್ಯೂಟರನ್ನು ಅದುವರೆಗೆ ಭಾರತದಲ್ಲಿ ಯಾರೂ ಬಳಸಿರಲಿಲ್ಲ. ಸಹೋದ್ಯೋಗಿಗಳ ನೆರವಿನಿಂದ ಅವರು ಈ ಕಾರ್ಯವನ್ನು ಕೈಗೆತ್ತಿಕೊಂಡು ಅವರ ಸಹಕಾರದಿಂದ ಯಶಸ್ವಿಯಾದರು. ‘ಶ್ರೀರಾಮಪಟ್ಟಾಭಿಷೇಕ’ ಕೃತಿಯನ್ನು ಮುದ್ದಣನೇ ರಚಿಸಿದುದು ಎಂಬುದು ದೃಢಪಡಿಸಿದರು. ಅವರು ಈ ಕುರಿತು ಇಂಗ್ಲೆಂಡ್‌ನ ಅಸೋಸಿಯೇಷನ್ ಫಾರ್ ಲಿಟರರಿ ಆ್ಯಂಡ್ ಲಿಂಗ್ವಿ ಸ್ಟಿಕ್ ಕಂಪ್ಯೂಟಿಂಗ್‌ನ ಭಾರತೀಯ ಪ್ರತಿನಿಧಿಯಾಗಿ ಸಂಶೋಧನಾ ಪ್ರಬಂಧವನ್ನೂ ಸಹ ಮಂಡಿಸಿದರು.
ಸಂಶೋಧನೆಗೆ ಕಂಪ್ಯೂಟರಿನ ಸರ್ವಸಾಮರ್ಥ್ಯವನ್ನು ಬಳಸುವಲ್ಲಿ ಅವರು ಹೀಗೆ ಹೇಳಿದ್ದಾರೆ: ‘‘ಕಂಪ್ಯೂಟರನ್ನು ಇಂದಿಗೂ ಕೇವಲ ಬೆರಳಚ್ಚು ಯಂತ್ರದಂತೆ ಬಳಸಿಕೊಳ್ಳಲಾಗುತ್ತಿದೆ. ಮುದ್ರಣಕ್ಕಾಗಿ ಅಕ್ಷರ ಜೋಡಣೆಯಂತಹ ಕೆಲಸಕ್ಕೆ ಮಾತ್ರ ಕಂಪ್ಯೂಟರ್ ಸೀಮಿತಗೊಂಡರೆ ಸಾಲದು, ಮಾಹಿತಿ ಸಂಗ್ರಹಣೆ ಮತ್ತು ಸಂಸ್ಕರಣೆಯಂತಹ ಕಾರ್ಯ ಗಳು ನಡೆದಾಗ ಮಾತ್ರ ಕಂಪ್ಯೂಟರ್‌ನ ಸಾಮರ್ಥ್ಯವನ್ನು ಎಲ್ಲರೂ ಬಳಸಿಕೊಂಡಂತಾಗುತ್ತದೆ. ಸಾಹಿತ್ಯ ಸಂಶೋಧನೆಯಲ್ಲಿ ಉಪಯುಕ್ತ ವಾಗಿರುವ ‘ಪದಪ್ರಯೋಗ ಕೋಶಗಳ’ ತಯಾರಿಕೆಯಲ್ಲಿ ಕಂಪ್ಯೂಟರ್‌ನ ಇಂತಹ ಸಾಮರ್ಥ್ಯವನ್ನು ಬಳಸಿಕೊಂಡಿರುವುದರಿಂದ ಸಾಕಷ್ಟು ಸಮಯ, ಶ್ರಮ ಉಳಿತಾಯವಾಗಿದೆ. ಆದುದರಿಂದ, ಎಲ್ಲರೂ ಸಹ ಕಂಪ್ಯೂಟರ್ ಡೇಟಾಬೇಸ್ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು. ಸಂಶೋಧನೆಯಲ್ಲಿ ಅಗಾಧವಾದ ಮಾಹಿತಿಯ ಸಂಗ್ರಹಣೆ, ಸಂಸ್ಕರಣೆ, ತುಲನೆ, ವಿಶ್ಲೇಷಣೆ ಮಾಡಬೇಕಾದ ಸಂದರ್ಭದಲ್ಲಿ ಕಂಪ್ಯೂಟರ್‌ನ ಸಹಾಯವನ್ನು ಪಡೆದರೆ ಮಾಹಿತಿಗಳು ಕರಾರುವಾಕ್ಕಾಗಿ ಇರುತ್ತವೆ. ಇದರಿಂದಾಗಿ ಸಂಶೋಧನೆಗೆ ಹೆಚ್ಚಿನ ನ್ಯಾಯವನ್ನು ಒದಗಿಸಿದಂತಾಗುತ್ತದೆ’’
ಇತಿಹಾಸ ಮತ್ತು ಸಾಹಿತ್ಯ ಸಂಶೋಧಕರು ಕಂಪ್ಯೂಟರ್ ಬಳಸುವ ವಿಚಾರದಲ್ಲಿ ಹಾವನೂರರ ನಿರೀಕ್ಷೆ ಹೀಗಿತ್ತು : ‘‘ನಮ್ಮ ರಾಜ್ಯದ ವಿಶ್ವವಿದ್ಯಾ ನಿಲಯಗಳು, ಕನ್ನಡ ಕೇಂದ್ರಗಳು ಮತ್ತು ಇತರ ಕನ್ನಡ ವಿದ್ವಾಂಸರು ಹಾಗೂ ಬಹುಮುಖ್ಯವಾಗಿ ಸಂಶೋಧಕರು ಈ ಕ್ರಾಂತಿಕಾರಕ ಸಾಧನವಾದ ಕಂಪ್ಯೂಟರ್‌ನತ್ತ ತಮ್ಮ ಗಮನ ಹರಿಸಿ, ಸಾಹಿತ್ಯ ಸಂಶೋಧನೆಗೆ ಹೊಸ ಆಯಾಮಗಳನ್ನು ತಂದುಕೊಡುವಂತಾಗಲಿ. ಇತಿಹಾಸ ಮತ್ತು ಸಾಹಿತ್ಯ ಸಂಶೋಧನೆಯಲ್ಲಿ ಬಹುಮುಖಿ ಪ್ರಯೋಜನ ಇರುವ ‘ಪದಪ್ರಯೋಗ ಕೋಶ’ಗಳು ಎಲ್ಲಾ ಪ್ರಮುಖ ಕೃತಿಗಳಿಗೆ ರಚನೆಯಾಗಲಿ. ಇದರತ್ತ ಎಲ್ಲಾ ಕನ್ನಡಿಗರು ಗಮನಹರಿಸಲಿ. ಪುಸ್ತಕ ರೂಪದಲ್ಲಿ ಪ್ರಕಟವಾಗುವ ಎಲ್ಲ ಕೃತಿಗಳೂ ಸಹ ಡಿಜಿಟಲ್ ರೂಪದಲ್ಲಿಯೂ ದೊರೆಯುವಂತಾಗಲಿ. ಎಲ್ಲಾ ಹೊಸ ಕೃತಿಗಳ ಪದಗಳು ದತ್ತಸಂಚಯಕ್ಕೆ ಸೇರಿಕೆಯಾಗಿ, ಪದಪ್ರಯೋಗ ಕೋಶಗಳೂ ಸಹ ಸಿದ್ಧವಾಗಿ ತೌಲನಿಕ ಅಧ್ಯಯನಕ್ಕೆ ಹಾಗೂ ಸಂಶೋಧನೆಗೆ ಹೆಚ್ಚಿನ ಅವಕಾಶವಾಗಲಿ ಎಂದು ಆಶಿಸುತ್ತೇನೆ’’ ಎಂದಿದ್ದಾರೆ.
ಅಂದು ಹಾವನೂರರು ಕನ್ನಡ ಲಿಪಿ ಲಭ್ಯವಿರದ ಕಾಲದಲ್ಲಿ ಕನ್ನಡ ಪದಗಳನ್ನು ರೋಮನ್ ಲಿಪಿಗೆ ಪರಿವರ್ತಿಸಿ, ಅಂತಹ ಪರಿವರ್ತನೆಗೆ ಹಲವು ನಿಯಮಗಳನ್ನು ರಚಿಸಿಕೊಂಡು, ಮಾಹಿತಿ ಸಂಸ್ಕರಣೆಗೆ ಕಸರತ್ತನ್ನು ಮಾಡಿದರು. ಹಾವನೂರರು ಮಾಡಿದ ಕಸರತ್ತು ಇಂದು ಅಗತ್ಯವಿಲ್ಲ. ಏಕೆಂದರೆ, ಈಗ ತಂತ್ರಜ್ಞಾನವು ಸುಧಾರಿಸಿದೆ. ಕನ್ನಡ ಲಿಪಿಯನ್ನು ನೇರವಾಗಿ ಕಂಪ್ಯೂಟರ್‌ನಲ್ಲಿ ಬಳಸಬಹುದು. ಕಂಪ್ಯೂಟರಿನಲ್ಲಿ ‘ಸಹಜ ಭಾಷಾ ಸಂಸ್ಕರಣೆ’ಯ ಕೆಲವು ಮೂಲಸೌಲಭ್ಯಗಳಾದ ವಿಂಗಡಣೆ (ಸಾರ್ಟಿಂಗ್), ಸೂಚೀಕರಣ (ಇಂಡೆಕ್ಸಿಂಗ್) ಇತ್ಯಾದಿಗಳು ಕನ್ನಡಕ್ಕೂ ದೊರೆತಿವೆ. ಯುನಿಕೋಡ್ ಅನುಷ್ಠಾನಕ್ಕೆ ಬಂದ ಮೇಲಂತೂ ಕಾರ್ಯಾ ಚರಣಾ ವ್ಯವಸ್ಥೆಯ ಹಂತದಿಂದಲೇ ಕನ್ನಡ ಲಿಪಿಯ ಬೆಂಬಲ ದೊರೆತಿದೆ. ಇದರಿಂದ ಕನ್ನಡ ಭಾಷೆಯ ಮಾಹಿತಿ ಸಂಸ್ಕರಣೆಯು ಮತ್ತಷ್ಟು ಸುಲಭಗೊಂಡಿದೆ. ಹಾಗಿದ್ದೂ, ಇಂದು ಕನ್ನಡ ಸಾರಸ್ವತ ಲೋಕದ ಸಂಶೋಧಕರು ಕಂಪ್ಯೂಟರ್‌ನ ಸರ್ವಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿಲ್ಲ ಎಂಬುದು ವಾಸ್ತವ ಸತ್ಯ.