ಅಮೆರಿಕಾ: ಡಾ. ವರದರಾಜ ಪ್ರಭು ಅವರಿಗೆ 'ಅಹಿಮ ಟ್ರಯಂಫ್' ಪ್ರಶಸ್ತಿ
ಮಂಗಳೂರು, ಅ. 16: 'ದಿ ಅಮೆರಿಕನ್ ಹೆಲ್ತ್ ಇನ್‌ಫಾರ್ಮೇಷನ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್' (AHIMA)ನ ವಾರ್ಷಿಕ ಅಹಿಮಾ ಟ್ರಯಂಫ್ ವಿಶೇಷ ಪ್ರಶಸ್ತಿ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಅಹಿಮಾದ 89ನೆ ವಾರ್ಷಿಕ ಘಟಿಕೋತ್ಸವವನ್ನೂ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸದಸ್ಯರನ್ನು ಸನ್ಮಾನಿಸಲಾಯಿತು. ಆರೋಗ್ಯ, ಮಾಹಿತಿ ನಿರ್ವಹಣಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಸೇವಾ ತತ್ಪರತೆಯನ್ನು ಒಡಗೂಡಿದ ವೃತ್ತಿಪರರು ತಮ್ಮ ಕ್ಷೇತ್ರದ ಕಾರ್ಯ ಚಟುವಟಿಕೆ ಶ್ರೀಮಂತಿಕೆಗೊಳಿಸುವ ನಿಟ್ಟಿನಲ್ಲಿ ಮನ್ನಣೆ ನೀಡಲಾಯಿತು.
ಅಹಿಮಾದ ಮಧ್ಯಂತರ ಸಿಇಒ ಪಮೇಲಾ ಲೇನ್ ಮಾತನಾಡುತ್ತಾ, ಈ ಟ್ರಯಂಫ್ ಪ್ರಶಸ್ತಿಯನ್ನು ಆರೋಗ್ಯ ಮಾಹಿತಿ ನಿರ್ವಹಣಾ ವೃತ್ತಿಪರತೆಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ ಎಂದರು.
ಮಂಗಳೂರಿನ ಯುವ ಶಿಕ್ಷಣ ತಜ್ಞ ಡಾ. ವರದರಾಜ ಪ್ರಭು ಗುರುಪುರ ಅವರಿಗೆ 2017ರ ಸಾಲಿನ ರಿಸರ್ಚ್ ಟ್ರಯಂಫ್ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.
ಡಾ. ವರದರಾಜ ಪ್ರಭು ಅವರ ಸಂಶೋಧನಾ ಕಾರ್ಯವು ಡಾಟಾ ವಿಜ್ಞಾನ ಮತ್ತು ಜ್ಞಾನ ನಿರ್ವಹಣಾ ವಿಷಯಗಳಿಂದ ಆರೋಗ್ಯ ಕಾಳಜಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಕಂಡಿದೆ. ಇವರು ಜರ್ನಲ್ ಆರ್ಟಿಕಲ್ಸ್, ಪೇಪರ್ಸ್, ಅಬ್ಸ್‌ಟ್ರಾಕ್ಸ್, ಪ್ರಕಟಿತ ವಿಮರ್ಶೆ, ಪೋಸ್ಟರ್ಸ್, ಬಂಕ್ ಚಾಪ್ಟರ್ಸ್ ಹಾಗೂ ಪ್ರಕಟಿತ ಜರ್ನಲ್‌ಗಳ ವಿಶೇಷ ಪುರವಣಿ ಸೇರಿ 85 ಪಬ್ಲಿಕೇಷನ್‌ಗಳನ್ನು ಬರೆದಿದ್ದಾರೆ. ಡಾ ಗುರುಪುರ್ ಬರ್ಮಿಂಗ್ ಹ್ಯಾಮ್‌ನ ಅಲ್‌ಬಾಮಾ ವಿಶ್ವವಿದ್ಯಾನಿಲಯದಿಂದ 2005ರಲ್ಲಿ ಕಂಪ್ಯೂಟರ್ ಸಾಯನ್ಸ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, 2010ರಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿ ಗಳಿಸಿದ್ದಾರೆ.
ಡಾ. ವರದರಾಜ ಪ್ರಭು ಅವರು ಮಂಗಳೂರಿನವರಾಗಿದ್ದು, ಬಾಲ್ಯದ ಶಿಕ್ಷಣ ಮತ್ತು ಇಂಜಿನಿಯರಿಂಗ್‌ನ್ನು ಮಂಗಳೂರಿನಲ್ಲಿ ಪೂರೈಸಿರುವ ಇವರು ಮಂಗಳೂರು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ.