ನನ್ನ ಕೊಲ್ಲಲು ಬಯಸಿದ್ದವರೊಂದಿಗಿನ ಮುಖಾಮುಖಿ!
ಮನುಷ್ಯ ಸಮಾಜದ ಪರಂಪರಾನುಗತ ನಂಬಿಕೆ, ಆಚರಣೆಗಳನ್ನು ಪರಿಶೀಲಿಸುವ, ವೈಜ್ಞಾನಿಕ ದೃಷ್ಟಿಕೋನದೊಂದಿಗೆ ವಿಶ್ಲೇಷಿಸುವ ಪ್ರವೃತ್ತಿಯು ಹೊಸದೇನಲ್ಲ. ಆದರೆ ಇಂತಹ ಪ್ರಕ್ರಿಯೆಗಳನ್ನು ಸಹನೆಯಿಂದ ನೋಡುವ ವಿವೇಚನಾಶಕ್ತಿಯು ಎಲ್ಲರಲ್ಲೂ ಇರುವುದಿಲ್ಲ. ನನ್ನ ನಂಬಿಕೆ, ಸಂಶೋಧನಾ ಮನೋಭಾವ ಹಾಗೂ ಬರವಣಿಗೆಯ ಕಾರಣದಿಂದಾಗಿ ಹಲವರು ನನ್ನನ್ನು ದ್ವೇಷಿಸುತ್ತಾರೆಂಬುದು ನನಗೆ ತಿಳಿದಿದೆ. ಆ ಕಾರಣಕ್ಕೇ ನನ್ನ ಮೇಲೆ ಹಲವು ದಾಳಿಗಳೂ ಆಗಿವೆ. ವಿಚಾರವಾದಿಗಳ ಮೇಲಿನ ದಾಳಿಗಳು ಕರ್ನಾಟಕಕ್ಕೆ ಹೊಸದೇನಲ್ಲ. ಪ್ರಸಿದ್ಧ ವಿದ್ವಾಂಸರಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಅವರ ವೈಚಾರಿಕ ನಿಲುವುಗಳ ಕಾರಣದಿಂದಲೇ ಗುಂಡಿಟ್ಟು ಕೊಲ್ಲಲಾಗಿದೆ. ಅದೇ ರೀತಿ ನನ್ನನ್ನು ಕೊಲ್ಲಲು ಈ ಹಿಂದೆ ಅಂತಹದ್ದೇ ಪ್ರಯತ್ನವೊಂದು ನಡೆದ ಬಗ್ಗೆ ಇಲ್ಲಿ ವಿವರಿಸಿದ್ದೇನೆ.
►ಮೊದಲ ಭೇಟಿ:
ಆಮಂತ್ರಣ ಪತ್ರಿಕೆಯ ನೆಪದಲ್ಲಿ.
2014, ನವೆಂಬರ್ ತಿಂಗಳ ಒಂದು ರಾತ್ರಿ. ಹತ್ತೂವರೆ ಗಂಟೆ ಸುಮಾರಿಗೆ ‘‘ಸಾರ್, ಸಾರ್’’ ಎಂದು ಯುವಕನೊಬ್ಬ ಕೂಗಿದ್ದು ಕೇಳಿಸಿತು. ಆಗ ತಾನೇ ಊಟ ಮುಗಿಸಿಕೊಂಡು ಮನೆ ಮಂದಿಯೆಲ್ಲಾ ಈಗ ಸದ್ಯಕ್ಕೆ ನೆನಪಿಲ್ಲದ ಯಾವುದೋ ವಿಷಯವನ್ನು ಕುರಿತು ಮಾತಾಡುತ್ತಿದ್ದೆವು. ಕೆಂಗೇರಿ ಪೊಲೀಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೀರಾ ಸಾಹೇಬ್ ಮುಲ್ಲಾ ಕೂಡ ಆಗ ನೈಟ್ ಡ್ಯೂಟಿಗೆ ಹೋಗಬೇಕಿತ್ತು. ಅವರೂ ಊಟ ಮುಗಿಸಿ ಕೈ ತೊಳೆಯುತ್ತಿದ್ದರು. ನಾನು ಹೊರಗೆ ಕೇಳಿ ಬಂದ ಕೂಗಿಗೆ ಕೂಡಲೇ ಸ್ಪಂದಿಸಿ ಹೊರಬಂದು ಆ ಯುವಕನನ್ನು ಸಮೀಪಿಸಿದೆ. ಅವನು ಸ್ಕಲ್ ಕ್ಯಾಪ್ ಹಾಕಿಕೊಂಡಿದ್ದು, ಅದಕ್ಕಂಟಿದ್ದ ಕೃತಕ ಕೂದಲುಗಳಿಂದ ಸರಿಯಾಗಿ ಮುಖ ಕಾಣದಂತಿತ್ತು.
‘‘ಸರ್, ನಿಮಗೆ ಒಂದು ಇನ್ವಿಟೇಷನ್ ಕೊಡಬೇಕಿತ್ತು’’ ಎಂದನಾತ. ಕೂಡಲೇ ನಾನು ಅವನ ಬಳಿಗೆ ಹೋದೆ. ಅವನ ಕೈಯಲ್ಲಿ ಮದುವೆಗೆ ಹಣವಿಟ್ಟು ಮುಯ್ಯಿ ಮಾಡುವ ಹಲವು ಕವರ್‌ಗಳಿದ್ದವು. ಅವುಗಳ ಮೇಲೆ ಅಸ್ಪಷ್ಟವಾಗಿ ಮೋಡಿ ಲಿಪಿಯಲ್ಲಿದ್ದಂತೆ ಹಲವು ಹೆಸರುಗಳನ್ನು ಬರೆಯಲಾಗಿತ್ತು. ಅವನು ಕೊಂಚ ಕೋಲು ಮುಖದ, ನೀಳ ಕಾಯದ, ಸುಮಾರು 25 ರಿಂದ 27 ವರ್ಷಗಳ ಯುವಕನಾಗಿದ್ದ. ಅವನು ಆ ಚಳಿಯ ರಾತ್ರಿಯಲ್ಲಿಯೂ ಅತಿಯಾಗಿ ಬೆವರಿದ್ದ. ಅವನ ಮುಖದಿಂದ ಬೆವರು ಧಾರಾಕಾರವಾಗಿ ಸುರಿಯುತ್ತಿತ್ತು. ನಾನೋ, ಎಲ್ಲೆಲ್ಲಿಂದಲೋ ಓಡಾಡಿಕೊಂಡು ಬಂದಿರುವ ಕಾರಣದಿಂದ ಬೆವತಿರಬೇಕೆಂದುಕೊಂಡೆ. ಅಥವಾ ನನ್ನಂತಹ ಸಮಾಜದ ಗಣ್ಯ ವ್ಯಕ್ತಿಯ (ಹಾಗೆಂದು ಅವನು ಭ್ರಮಿಸಿದ್ದಾನೆಂದು ನಾನು ಭ್ರಮಿಸಿದ್ದೆ) ಬಳಿ ನಿಂತು ಮಾತಾಡಲು ನರ್ವಸ್ ಆಗಿದ್ದಾನೆಂದು, ಅವನ ಹೆಗಲ ಮೇಲೆ ಬಳಸಿ ಕೈ ಹಾಕಿ ಕೊಂಡು ಅವನಿಗೆ ಮತ್ತಷ್ಟು ಆಪ್ತತೆಯನ್ನೂ ಮತ್ತು ಆತ್ಮೀಯತೆಯನ್ನು ಕೊಡಲು ಯತ್ನಿಸಿದಾಗ ಅವನ ನಡುಕ ಮತ್ತಷ್ಟು ಜಾಸ್ತಿಯಾಯ್ತು. ಅವನ ನಡುಗುವಿಕೆ, ಬೆವರುವಿಕೆ, ತೊದಲುವಿಕೆ ಹೆಚ್ಚಾದಷ್ಟು ನನ್ನ ಆಪ್ತತೆ ಮತ್ತು ಸರಳತೆಯ ಪ್ರದರ್ಶನವೂ ಜಾಸ್ತಿಯಾಗುತ್ತಿತ್ತು. ಆ ಹುಡುಗನೋ ನನ್ನ ಹೆಸರಿನ ಕವರನ್ನು ಹುಡುಕುತ್ತಲೇ ಇದ್ದ.
‘‘ನಾನು ನನ್ನ ಹೆಸರು ಬರೆದಿರಲೇ ಬೇಕೆಂದಿಲ್ಲ. ಇನ್ವಿಟೇಶನ್ ಯಾವುದಾದರೇನು ಕೊಡು ಪರವಾಗಿಲ್ಲ’’ ಎಂದೂ ಹೇಳಿದೆ.
ಅವನ ಬಗಲಲ್ಲಿ ಹೆಗಲಿಗೆ ಅಡ್ಡವಾಗಿ ಸಣ್ಣ ಚೀಲವನ್ನು ಹಾಕಿಕೊಂಡಿದ್ದ. ಅದರಲ್ಲೇನಾದರೂ ಇರಬಹುದೇನೋ ನೋಡು ಎಂದೆ. ಆದರೆ ಅವನು ಆ ಬ್ಯಾಗನ್ನು ತೆಗೆಯಲು ಹೋಗಲಿಲ್ಲ. ಅವನ ಕೈಗಳೋ ಥರಥರನೆ ನಡುಗುತ್ತಿದ್ದವು. ಅವನು ಹುಡುಕುವುದನ್ನು ಬಿಡಲಿಲ್ಲ. ಆದರೆ ಆ ಕವರ್‌ಗಳು ಖಾಲಿ ಇವೆ ಎಂದು ನನಗೆ ಅನ್ನಿಸತೊಡಗಿತ್ತು. ಅವನನ್ನು ಕರೆದುಕೊಂಡು ಬಂದಿರುವ ಹೆಲ್ಮೆಟ್ ಹಾಕಿದ್ದ ಮತ್ತೊಬ್ಬ ಯುವಕನೂ ಆ ಚಳಿಯಲ್ಲಿ ಬೆವತಿದ್ದ. ಅವನನ್ನೂ ಹತ್ತಿರಕ್ಕೆ ಬರುವಂತೆ ಕರೆದೆ. ಅವನು ಸಮ್ಮತಿಸುವಂತೆ ಮುಗುಳು ನಕ್ಕನೇ ಹೊರತು ಮುಂದೆ ಬರಲಿಲ್ಲ. ಯಾರನ್ನೋ ನೋಡಲು ಹೋದವನು ಇನ್ನೂ ಒಳಕ್ಕೆ ಬರಲಿಲ್ಲವೆಂದು ನನ್ನ ದೊಡ್ಡ ಮಗಳು ದೇವಿ, ಅವಳನ್ನು ಅನುಸರಿಸಿಕೊಂಡು ಚಿಕ್ಕ ಮಗಳು ಕೈವಲ್ಯ, ಅವರಿಬ್ಬರ ಹಿಂದೆಯೇ ಹೆಂಡತಿ ಗಂಗಾ, ನನ್ನ ತಾಯಿ, ಕೊನೆಗೆ ಪೊಲೀಸ್ ಮಿತ್ರ ಮೀರಾ ಸಾಬ್ ಎಲ್ಲರೂ ಮನೆಯಿಂದ ಹೊರಗೆ ಬಂದರು.
ಪೊಲೀಸ್ ಮಿತ್ರನಿಗೆ ಅದೇನನ್ನಿಸಿತೋ, ಅವರ ಉತ್ತರ ಕರ್ನಾಟಕದ ದೊಡ್ಡ ದನಿಯಿಂದ ‘‘ಯಾರ್ರೀ ಸರ್ ಅದು? ಏನಾಗಬೇಕಂತೆ’’ ಅಂತ ಧ್ವನಿ ಹೊರಡಿಸಿದ ಮೇಲೆ ಈ ಹುಡುಗರು ‘‘ಸರ್, ನಿಮ್ಮ ಹೆಸರು ಬರೆದಿರುವ ಇನ್ವಿಟೇಶನ್ ಸಿಗ್ತಿಲ್ಲ. ನಾವು ನಾಳೆ ಬೆಳಗ್ಗೆ ಬರುತ್ತೇವೆ’’ ಎಂದು ಹೇಳಿ ಅಲ್ಲಿಂದ ತರಾತುರಿಯಲ್ಲಿ ಹೊರಟು ಹೋದರು. ಆದರೆ ಆಮೇಲೆ ನಮ್ಮ ಬುದ್ಧಿಗೆ ಕವಿದಿದ್ದ ಮಂಕು ನಿಧಾನವಾಗಿ ಕರಗಿತು. ಇನ್ವಿಟೇಷನ್ ಅಂದ್ರೆ, ನನ್ನ ಹೆಸರೇ ಬರೆದಿರಬೇಕಾಗಿರಲಿಲ್ಲ. ಯಾವುದಾದರೂ ಕೊಡಬಹುದಾಗಿತ್ತು. ನಮ್ಮ ಚಳವಳಿಯ ಹುಡುಗರು, ಆ್ಯಕ್ಟಿವಿಸ್ ್ಟಗಳು ಹಾಗೆ ಕೃತಕ ಕೂದಲಿನ ಸ್ಕಲ್ ಕ್ಯಾಪ್ ಹಾಕಿಕೊಳ್ಳುವ ಅವತಾರಗಳಲ್ಲಿ ಬರುವುದಿಲ್ಲ. ತಮ್ಮ ಹೆಸರನ್ನು, ಸಂಘಟನೆಯನ್ನು ಹೇಳಿಕೊಂಡು ವಿವರ ನೀಡುತ್ತಾರೆ. ನಂತರ ಆಮಂತ್ರಣ ಪತ್ರಿಕೆ ನೀಡುತ್ತಾರೆ. ಅಲ್ಲದೇ ನನಗೆ ಕರೆ ಮಾಡಿಯೇ ಬರಬಹುದು. ಇಷ್ಟೆಲ್ಲದರ ಜೊತೆಗೆ ಬಂದಿದ್ದ ಹುಡುಗರು ಅವರು ಬೈಕ್ ಆಫ್ ಮಾಡಿರಲಿಲ್ಲ. ಅದು ಆನ್‌ನಲ್ಲಿಯೇ ಇತ್ತು. ಅವರು ಆತುರಾತುರವಾಗಿ ಹೊರಟು ಹೋದರು. ಅವರ ಬೆವರುವಿಕೆಗೆ, ನಡುಗುವಿಕೆಗೆ, ಮಾತನಾಡಲಾರದ ತೊದಲುವಿಕೆಗೆ ಮತ್ತು ಬೈಕ್‌ವಾಲಾನ ನಗೆಯಲ್ಲಿದ್ದ ಪೇಲವ ಭಾವಕ್ಕೆ ಈಗ ಕಾರಣ ಸಿಕ್ಕಿತು. ಅವನ ಬಗಲಿನ ಚೀಲದಲ್ಲಿ ಏನಿದ್ದಿರಬಹುದು ಎಂದೂ ಊಹಿಸಲು ನನಗೆ ಸಾಧ್ಯವಾಯಿತು.
ಮೊದಲು ಅವರು ಬಂದದ್ದು ನನ್ನ ಮೇಲಿನ ಹಲ್ಲೆಗೆ ಎಂದು ನಿರ್ಧರಿತವಾಯಿತು. ಆದರೆ, ನಂತರ ಅದು ಹಲ್ಲೆಯಾಗಿರಲು ಸಾಧ್ಯವಿಲ್ಲ, ಕೊಲೆಯೇ ಉದ್ದೇಶವಾಗಿರುತ್ತದೆ ಎಂದೂ ಅನ್ನಿಸಿತು. ಹಲ್ಲೆಗಳನ್ನು ಮಾಡುವವರು ಗುಂಪುಗಳಲ್ಲಿ ಬರುತ್ತಾರೆ. ಅವರ ಕೈಗಳಲ್ಲಿ ದೊಣ್ಣೆಗಳೋ ಮತ್ತೊಂದೇನೋ ಇರುತ್ತದೆ. ನಾಜೂಕಾಗಿ, ಕಾರಣಗಳನ್ನು ಹೇಳಿಕೊಂಡು ತೀರಾ ಸಾಮೀಪ್ಯವನ್ನು ಹೊಂದಲು ಬರುವವರೆಂದರೆ ಅವರು ಕೊಲೆಯ ಉದ್ದೇಶವನ್ನು ಹೊಂದಿದ್ದಾರೆ ಎಂದೇ ಯೋಚಿಸಿ ಮರುದಿನವೇ ಕುಂಬಳಗೋಡು ಪೊಲೀಸ್ ಸ್ಟೇಷನ್‌ಗೆ ದೂರು ದಾಖಲಿಸಲು ಹೋದೆ. ಯಾರ ಮೇಲೂ ನಿರ್ದಿಷ್ಟವಾಗಿ ದೂರು ನೀಡಲು ಸಾಧ್ಯವಿಲ್ಲದಿದ್ದುದರಿಂದ ಅವರು ಮಾಹಿತಿಯನ್ನು ಪಡೆದುಕೊಂಡರು. ಇನ್ನೊಮ್ಮೆ ಯಾರಾದರೂ ಹಾಗೆ ಬಂದಾಗ ತಮಗೆ ತಿಳಿಸಿ ಎಂದು ಪೋನ್ ನಂಬರ್ ಕೊಟ್ಟು ಕಳುಹಿಸಿದರು.
►ಎರಡನೆಯ ಭೇಟಿ:
ಹಿರೇಮಠ್ ಕಳುಹಿಸಿರುವ ಕೊಡುಗೆಯೊಂದಿಗೆ.
ಮೊದಲನೆಯ ರಾತ್ರಿ ಬಂದಾಗ ಮರುದಿನ ಬೆಳಗ್ಗೆ ನಾವು ಅಂದುಕೊಂಡಿರುವ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಆಮಂತ್ರಣ ಪತ್ರಿಕೆ ತೆಗೆದುಕೊಂಡು ಬಂದು ಬಿಟ್ಟಾರೇನೋ ಎಂದು ಎದುರು ನೋಡಿದ್ದಂತೂ ನಿಜ. ಆದರೆ ಅವರು ಹಾಗೆ ಬರುವುದಿಲ್ಲ ಎಂದೂ ಗೊತ್ತಿತ್ತು. ನಮ್ಮ ಊಹೆಯನ್ನವರು ನಿಜ ಮಾಡಿದ್ದರು. ಆದರೆ ಸುಮಾರು ಒಂದು ತಿಂಗಳ ತರುವಾಯ ಅದೇ ರೀತಿ ಮತ್ತೊಂದು ರಾತ್ರಿ ನಮ್ಮ ಮನೆಯ ನಾಯಿ ಗೇಟಿನ ಬಳಿ ಬಂದಿದ್ದ ಯಾರನ್ನೋ ಮೇಲಕ್ಕೆ ಬರಲು ಬಿಡದಂತೆ ಒಂದೇ ಸಮನೆ ಬೊಗಳುತ್ತಾ, ಕಚ್ಚುವಂತೆಯೇ ಎಗರಾಡುತ್ತಿತ್ತು. ಆಗ ಹತ್ತು ನಲವತ್ತೈದು. ಮನೆಯ ಮುಂಭಾಗದಲ್ಲಿರುವ ಗೇಟಿಗೆ ಬೀಗ ಹಾಕಿ ಮಲಗಲು ಸಿದ್ಧವಾಗುತ್ತಿದ್ದ ಹೊತ್ತು. ಹೊರಗೆ ಬಂದೆ. ಅವರಿಬ್ಬರನ್ನೂ ನೋಡಿದ ಕೂಡಲೇ ಅವರೇ ಇವರು ಎಂದು ಖಚಿತವಾಯ್ತು. ನನ್ನ ಆತ್ಮೀಯತೆ ಮತ್ತು ಆಪ್ತತೆಯ ರುಚಿ ಸವಿದಿದ್ದ ಅವನು ಕೂಡಲೇ ‘‘ಅದೇ ಸರ್, ನಾವು. ಅವತ್ತು ರಾತ್ರಿ ಬಂದಿದ್ದೆವಲ್ಲ!’’ ಎಂದು ನನ್ನ ಅನುಮಾನವನ್ನು ಮತ್ತಷ್ಟು ಖಾತ್ರಿಗೊಳಿಸಿದ.
‘‘ಯಾರಯ್ಯ ನೀನು? ಇಷ್ಟು ಹೊತ್ತಲ್ಲಿ ಬರ್ತೀರಲ್ಲಾ?’’ ಎಂದು ಜೋರು ಮಾಡಿದೆ. ನನ್ನ ಹೆಂಡತಿ ಮತ್ತು ಮಕ್ಕಳಿಗೂ ಅಂದು ಬಂದವನೇ ಇಂದೂ ಬಂದಿರುವವನು ಎಂದು ಗೊತ್ತಾಗಿತ್ತು. ಅವರೂ ನನ್ನೊಂದಿಗೆ ಮುಂದಿನದನ್ನು ನೋಡಲು ಕಾತರ ಮತ್ತು ಕುತೂಹಲದಿಂದ ಗಳಿಗೆಗಳನ್ನು ಎಣಿಸುತ್ತಿದ್ದರು. ನನ್ನ ವರ್ತನೆಯ ಮೇಲೆ ಮುಂದಿನದೆಲ್ಲಾ ನಿರ್ಧರಿತವಾಗಿದೆ ಎಂದು ಗಂಗಾಗೆ ಅನ್ನಿಸಿಬಿಟ್ಟಿತ್ತು. ‘ಗೇಟ್ ತೆಗಿಬೇಡಿ, ಗೇಟ್ ತೆಗಿಬೇಡಿ’ ಎಂದು ಅವಳು ನನಗೆ ಹೇಳಲು ಯತ್ನಿಸುತ್ತಿದ್ದಳು. ಅವಳ ಸಂಜ್ಞೆಗಳನ್ನು ಗುರುತಿಸಿದರೂ ನಾನು ನೋಡದವನಂತೆ ಅವನೊಂದಿಗೆ ಮಾತಾಡುತ್ತಲೇ ಇದ್ದೆ.
‘‘ಸರ್, ಹಿರೇಮಠ್ ಸರ್ ನಿಮಗೆ ಈ ಪುಸ್ತಕದ ಗಿಪ್ಟ್ ಕೊಟ್ಟು ಬರಲು ಕಳುಹಿಸಿದ್ದಾರೆ. ತಗೊಳ್ಳಿ ಸರ್’’ ಎಂದು ತನ್ನ ಕೈಯಲ್ಲಿರುವ ಪುಸ್ತಕವನ್ನು ತೋರಿದ. ಅದು ಹೊಳೆಯುವ ಸಿಲ್ವರ್ ಪೇಪರ್‌ನಲ್ಲಿ ರ್ಯಾಪ್ ಆಗಿತ್ತು. ನಾನು ‘‘ನನ್ನ ನೋಡಕ್ಕೆ ಬರಬೇಕಂದ್ರೆ ಫೋನ್ ಮಾಡಿ ಬರಬೇಕು. ಹಿರೇಮಠ್ ಆದರೂ ನನಗೆ ಫೋನ್ ಮಾಡಿರಬೇಕು ಇಂಥವರನ್ನು ಕಳುಹಿಸುತ್ತಿದ್ದೇನೆ ಎಂದು. ಮತ್ತೆ, ಎಂದಿಗೂ ಇಷ್ಟು ಹೊತ್ತಲ್ಲಿ ಬರಬಾರದು. ನನ್ನ ಕಾಣಲು ಬೆಳಗ್ಗೆಯೇ, ಅದೂ ಫೋನ್ ಮಾಡಿಯೇ ಬರಬೇಕು’’ ಎಂದೆ.
‘‘ಆಯ್ತು ಸರ್. ನಾವು ಬೆಳಗ್ಗೆನೇ ಬರುತ್ತೇವೆ’’ ಎಂದು ಅವರಿಬ್ಬರೂ ಹೋದರು. ನಾನು ಕೂಡಲೇ ಪೊಲೀಸ್‌ಗೆ ಫೋನ್ ಮಾಡಿದೆ. ಆದರೆ ಯಾರು ಬಂದರೋ ಬಿಟ್ಟರೋ ನಾವು ನಿದ್ರೆಯಂತೂ ಹೋದೆವು. (ಬಂದಿದ್ದ ಸೂಚನೆಗಳು ಏನೂ ಕೇಳಲಿಲ್ಲ. ಯಾಕಂದ್ರೆ ನಮ್ಮ ನಾಯಿಯ ಕೀರಲು ಕಂಠ ಬೆಳಗ್ಗೆಯವರೆಗೂ ವಿಶ್ರಾಂತಿಯಲ್ಲೇ ಇತ್ತು.) ನನ್ನ ಢುಂಢಿ ಪ್ರಕರಣದಲ್ಲಿ ಪ್ರಮೋದ್ ಮುತಾಲಿಕ್ ಜೊತೆಗೆ ಸೇರಿಕೊಂಡು ನನ್ನ ಮೇಲೆ ಕೇಸ್ ಹಾಕಿರುವ ಜಯಕುಮಾರ್ ಹಿರೇಮಠ್‌ಗೇ ಫೋನ್ ಮಾಡಿ ಕೇಳಿದೆ, ‘‘ನೀವು ಯಾರೋ ಹುಡುಗರನ್ನು ಕಳುಹಿಸಿದ್ದೀರಿ, ನನಗೆ ಪುಸ್ತಕದ ಕೊಡುಗೆ ನೀಡಲು’’ ಎಂದು. ‘ಅಯ್ಯೋ, ನಾನು ಯಾರನ್ನೂ ಕಳುಹಿಸಿಲ್ಲ’ ಎಂದು ಆತ ಹೇಳಿ ಸ್ಪಷ್ಟಪಡಿಸಿದ ಮೇಲೆ ಮತ್ತಾವ ಹಿರೇಮಟ್ಟೂ ನನಗೆ ಗೊತ್ತಿರಲಿಲ್ಲ. ಎಸ್.ಆರ್. ಹಿರೇಮಠ್‌ಗೆ ನನ್ನ ವ್ಯಕ್ತಿಗತ ಪರಿಚಯವೇನಿಲ್ಲ.
►ಮೂರನೆಯ ಭೇಟಿ:
ಅನುಪಸ್ಥಿತಿಯಲ್ಲಿನ ಮನೆಯ ಗೇಟಿಗೆ ಎರಡನೆಯ ಭೇಟಿಯ ನಂತರ ನಾನು ಕಾದೆ ಅವರ ಬರುವಿಕೆಗೆ. ನಾನೊಂದು ರೀತಿಯಲ್ಲಿಯೇ ಸಿದ್ಧನಾಗಿದ್ದೆ ಅವರನ್ನು ಸರಿಯಾಗಿ ಹಿಡಿದು ಹಾಕಲು. ಆದರೆ ಅವರು ಬಂದರು ನಾವಿಲ್ಲದ ಹೊತ್ತಲ್ಲಿ. ಮತ್ತೆ ಸುಮಾರು ಹದಿನೈದು ಇಪ್ಪತ್ತು ದಿನಗಳ ನಂತರ ಯಾರೋ ಇಬ್ಬರು (ನಮ್ಮ ಮನೆಯ ಎದುರು ಕಾರ್ ತೊಳೆಯುತ್ತಿದ್ದ ಮನೆಯವರು ವಿವರಿಸಿದ ಚಹರೆ ನಾವು ಆ ಎರಡು ರಾತ್ರಿಗಳಲ್ಲಿ ಕಂಡವರದ್ದೇ ಆಗಿತ್ತು.) ನಾವಿಲ್ಲದಿರುವಾಗ ಬಂದು ಗೇಟ್ ತೆಗೆದು ಒಳ ಪ್ರವೇಶಿಸಲು ನೋಡಿದ್ದಾರೆ. ನಾಯಿ ಬೊಗಳಿದೆ. ಮತ್ತೆ ಎದುರು ಮನೆಯ ಅಂಕಲ್ ನಾವಿಲ್ಲ ಎಂದ ಮೇಲೆ ಹೊರಟು ಹೋಗಿದ್ದರವರು.
►ನಾಲ್ಕನೆಯ ಭೇಟಿ:
ಶಸ್ತ್ರದರ್ಶನ ಮತ್ತು ಊಹೆಗೆ ಸಿಕ್ಕ ಸ್ಪಷ್ಟನೆ.
ನಾನೊಬ್ಬ ಸಿಂಗಲ್ ಮೈಂಡೆಡ್ ಪರ್ಸನ್. ಒಂದು ಕೆಲಸದಲ್ಲಿ ತೊಡಗಿದೆನೆಂದರೆ ಅಕ್ಕಪಕ್ಕ ಯಾರು ಬಂದು ಹೋದರೂ ಬಂದದ್ದು ಹೋದದ್ದು ಗೊತ್ತಾದರೂ ನಿಗಾ ಕೊಡಲು ಸಾಧ್ಯವಾಗದಂತಹ ಏಕಾಗ್ರತೆ. ಅವತ್ತು ಮೊಬೈಲ್‌ನಲ್ಲಿ ಮೈಲ್ ಚೆಕ್ ಮಾಡ್ತಿದ್ದೆ ಅವತ್ತು ಬೆಳಗ್ಗೆ ಗಂಗಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಂತೆ ಮನೆಯ ಮುಂದೆ, ಸರಿಯಾಗಿ ಗೇಟಿನ ಮುಂದೆ ಇದೇ ಹುಡುಗರಿಬ್ಬರೂ ಬಂದಿಳಿದರು. ಸದ್ದಿಲ್ಲದೇ ಅವರು ಗೇಟು ತೆಗೆದು ಒಳ ಬರುತ್ತಿರುವುದನ್ನು ನೋಡಿ ನಾನು ಅರ್ಧ ಮುಚ್ಚಿದ್ದ ಬಾಗಿಲನ್ನು ಪೂರ್ತಿ ಮುಚ್ಚಿ ಅಗುಳಿ ಹಾಕಿ, ಅಡುಗೆ ಮನೆಗೆ ಬಂದೆ. ಸ್ಲ್ಯಾಬ್ ಮೇಲೆ ಹತ್ತಿ ಅವರನ್ನು ನೋಡಿದೆ. ಹೌದು ಅದೇ ಹುಡುಗರು. ಇಂದು ಕ್ಯಾಪ್ ಹಾಕಿಕೊಂಡು, ನೀಟಾಗಿ ಇನ್‌ಶರ್ಟ್ ಮಾಡಿಕೊಂಡು, ಅದೇ ಬಗಲಿನ ತೆಳು ಮಿಲಿಟರಿ ಹಸಿರಿನ ಬ್ಯಾಗಿನಲ್ಲಿ ಪಿಸ್ತೂಲನ್ನು ಹಿಡಿಕೆ ಮೇಲೆ ಬರುವಂತೆ ಸರಿಯಾಗಿ ಇಟ್ಟುಕೊಂಡು, ಬ್ಯಾಗಿನ ಜಿಪ್ ಅರ್ಧ ಮಾತ್ರ ಹಾಕಿದಂತೆ ಇರಿಸಿ ಮನೆಯ ಮೆಟ್ಟಿಲೇರಿದ. ಅವನ ಹಿಂದೆ ವಾಹನ ಓಡಿಸುವ ದುಂಡು ಮುಖದ ಮತ್ತು ಕೊಂಚ ಸ್ಥೂಲ ಕಾಯದ ಇನ್ನೊಬ್ಬ ಹೆಲ್ಮೆಟ್ ಮತ್ತು ಜರ್ಕಿನ್ ಸಮೇತ ಶಸ್ತ್ರಧಾರಿಯನ್ನು ಅನುಸರಿಸಿದ.
ನಾನು ಕೂಡಲೇ ಒಳಗೆ ಓಡಿದೆ. ನನ್ನ ದಾವಣಗೆರೆಯ ಸ್ನೇಹಿತರಾದ ಗೋಪಿ ಸ್ನಾನ ಮಾಡುತ್ತಿದ್ದರು. ಅವರಿಗೆ ಕೂಡಲೇ ಬಾಗಿಲ ಬಳಿ ಬಂದಿರುವ ಹಂತಕರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿ, ಬಾಗಿಲು ತೆಗೆದು ನಾನಿಲ್ಲವೆಂದೂ, ಅವರ ವಿವರಗಳನ್ನು ಪಡೆಯಬೇಕೆಂದೂ ಹೇಳಿ ಕಳುಹಿಸಿದೆ. ಆದರೆ ಗೋಪಿಗೆ ಕೊಂಚ ಅಧೀರತೆ ಆವರಿಸಿತ್ತು. ಕೊಲೆ ಮಾಡಲು ಬಂದವರನ್ನು ಎದುರಾಗುವಷ್ಟು ಧೈರ್ಯ ಅವರಲ್ಲಿ ಇರಲಿಲ್ಲ. ಆದರೂ ಸಾವರಿಸಿಕೊಂಡು ಬಾಗಿಲು ತೆಗೆದು ಕೇಳಿದರು. ‘ಯೋಗೇಶ್ ಮಾಸ್ಟರ್ ಮನೆಯಲ್ಲಿ ಇಲ್ಲವೆಂದೂ, ಬರುವುದು ಎಷ್ಟು ಹೊತ್ತಾಗುತ್ತದೆಯೋ ಗೊತ್ತಿಲ್ಲವೆಂದೂ’ ಹೇಳಿದರು. ನಂತರ ಅವರು ವಿವರಗಳನ್ನು ಕೇಳಿದಾಗ ‘ಇಲ್ಲಾ ಬಿಜಾಪುರದಿಂದ ಬಂದಿದ್ದೇವೆ ಅಂತ ಹೇಳಿ, ಕಾರ್ಯಕ್ರಮಕ್ಕೆ ಕರೆಯಬೇಕಾಗಿತ್ತು. ಅವರಿಗೆ ಗೊತ್ತಾಗತ್ತೆ’ ಅಂದರು. ಆದರೆ ಗೋಪಿಗೆ ನಾನಿರುವ ಮನೆಯ ಬಾಗಿಲನ್ನು ಅವರ ಮುಂದೆಯೇ ಬಿಟ್ಟು ಇನ್ನೂ ಹೊರಕ್ಕೆ ಹೋಗಲು ಧೈರ್ಯವಿಲ್ಲದೇ, ಬಾಗಿಲು ಕಾದುಕೊಂಡೇ ನಿಂತ ಕಾರಣದಿಂದ ಅವರ ಬೈಕಿನ ನಂಬರನ್ನು ಸರಿಯಾಗಿ ನೋಡಲೂ ಆಗಲಿಲ್ಲ. ಅವರು ಹೊರಟು ಹೋದರು. ನಾನು ಮತ್ತೆ ಪೊಲೀಸ್ ಸ್ಟೇಷನ್‌ಗೆ ಹೋಗಿ ಮತ್ತೊಮ್ಮೆ ಮಾಹಿತಿ ನೀಡಿ, ಈ ಭೇಟಿ ಮತ್ತೆ ಮತ್ತೆ ಆಗುತ್ತಿರುವುದು ಆತಂಕ ತಂದಿದೆ ಎಂದೂ ತಿಳಿಸಿ ಬಂದೆ.
►ಐದನೆಯ ಭೇಟಿ:
ಪಲಾಯನ.
ಅಂದು ರಾಮನಗರದಲ್ಲಿ ಕರಗ, ಜುಲೈ 2015. ದಾವಣಗೆರೆಯ ಗೋಪಿ ನಮ್ಮ ಮನೆಯ ನಾಯಿಯನ್ನು ವಾಕಿಂಗ್‌ಗೆ ಎಂದು ಕರೆದುಕೊಂಡು ಹೋಗಿದ್ದವರು ಕೆಲವೇ ನಿಮಿಷಗಳಲ್ಲಿ ಹಿಂದಿರುಗಿದರು. ಅಂದು ಬಂದಿದ್ದ ಹಂತಕರು ಇಂದು ಅಲ್ಲಿ ಇದ್ದಾರೆ. ರಸ್ತೆಯ ಬದಿಯಲ್ಲಿ, ನಮ್ಮ ಮನೆಯ ಕಡೆಗೆ ಬರುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದರು. ಆಗ ಬೆಳಗ್ಗೆ 7:30. ಕೂಡಲೇ ಪೊಲೀಸ್‌ಗೆ ಫೋನ್ ಮಾಡಿದೆ. ವಿಷಯವನ್ನು ವಿವರಿಸಿದೆ.
ಅಷ್ಟರಲ್ಲಿ ಕಲಾವಿದ ಶಂಕರ್‌ಗೆ ಫೋನ್ ಮಾಡಿ ಕೂಡಲೇ ಬರುವಂತೆ ಹೇಳಿದೆ. ನನ್ನ ಮನೆಯಲ್ಲಿ ಅಂದು ಇದ್ದ ರಂಗಭೂಮಿಯ ತರಬೇತಿಗೆಂದು ಬಂದಿದ್ದ ತುಮಕೂರಿನ ನಾಗಭೂಷಣನನ್ನು ಆ ಹಂತಕರನ್ನು ಅನುಸರಿಸಲು, ಅವರ ಚಲನವಲನಗಳ ಮೇಲೆ ನಿಗಾ ಇಡಲು ಕಳುಹಿಸಿದೆ. ಆದರೆ, ಬಂದಿದ್ದವರು ಗೋಪಿಯನ್ನು ಗುರುತಿಸಿದ್ದರು. ಹಾಗಾಗಿ ಕೂಡಲೇ ಮುಖವನ್ನು ಮರೆ ಮಾಡಿಕೊಂಡು, ಮೆಲ್ಲನೆ ಜಾರಿಕೊಂಡಿದ್ದರು. ನಾನು ಕಳುಹಿಸಿದ್ದ ನಾಗಭೂಷಣ್ ಅವರನ್ನು ನೋಡಿದ. ಶಸ್ತ್ರಧಾರಿಯ ಬ್ಯಾಗಿನಲ್ಲಿ ಪಿಸ್ತೂಲ್ ಮಾದರಿಯ ಬಾರದ ವಸ್ತುವೇನೋ ಇರಬಹುದೆಂದು ಸೂಕ್ಷ್ಮವಾಗಿ ಗ್ರಹಿಸಿದ.
ಅವತ್ತು ನಾನು ಮತ್ತೆ ಪೊಲೀಸರಿಗೆ ಪೋನ್ ಮಾಡಿ ನಡೆದ ವಿಷಯ ತಿಳಿಸಿದೆ. ನನ್ನ ಕರೆ ಸ್ವೀಕರಿಸಿದ ಪೊಲೀಸ್ ಸ್ಟೇಷನ್ನಿನಲ್ಲಿ, ‘‘ಸರ್, ಯಾರೂ ಸ್ಟಾಪ್ ಇಲ್ಲ ಸಾರ್. ನೀವೇ ಸ್ಟೇಷನ್‌ಗೆ ಬಂದು ದೂರು ನೀಡಿ’’ ಎಂದಿತು ಅತ್ತ ಕಡೆಯ ದನಿ. ನಾನೋ ಗದರಿದೆ, ‘‘ನನ್ನ ಮನೆಯ ಸುತ್ತ ನನ್ನ ಕೊಲ್ಲಲೆಂದು ಯಾರೋ ಶಸ್ತ್ರ ಹಿಡಿದು ಕಾದು ನಿಂತು ಕೊಂಡಿರುವಾಗ ಹೇಗ್ರಿ ಬರಲಿ’’ ಎಂದು ಜೋರು ಮಾಡಿದೆ. ‘‘ಏನು ಮಾಡೋದು ಸಾರ್, ಸಿಎಂ ಬರ್ತಾರೇಂತ ಎಲ್ಲಾ ಅಲ್ಲಿ ಹೋಗಿದ್ದಾರೆ. ನಾನೇ ಸ್ಟಾಪ್‌ನ ಸೃಷ್ಟಿ ಮಾಡಿ ಕಳಿಸ್ಲಾ ಸರ್’’ ಎಂದು ಉಡಾಫೆ -ಅಸಹಾಯಕತೆಯನ್ನು ಪ್ರದರ್ಶಿಸಿದ.
ನಾನು ನಂತರ ಗೌರಿ ಲಂಕೇಶ್‌ಗೆ ಈ ವಿಷಯವೆಲ್ಲವನ್ನೂ ಹೇಳಿದ್ದೆ. ‘‘ಕಮಿಷನರ್ ಜೊತೆ ಮಾತಾಡೋಣ. ಆಫೀಸ್‌ಗೆ ಹೋಗಿ ಬರೋಣ’’ ಎಂದರು. ಆದರೆ ದಿನಗಳು ಕಳೆದಂತೆ ನಾನು ಬೇರೆ ಬೇರೆ ಪ್ರವಾಸಗಳಲ್ಲಿ ಬ್ಯುಸಿಯಾಗಿ ಅದು ಹಾಗೆಯೇ ಮುಂದೂಡಲ್ಪಡುತ್ತಲೇ ಬಂತು.
30ನೆ ತಾರೀಕು ಆಗಸ್ಟ್, 2015ರಂದು ಕೋಮು ಸೌಹಾದರ್ ವೇದಿಕೆಯು ಮಂಗಳೂರಿನಲ್ಲಿ ನಡೆಸುತ್ತಿದ್ದ ಸಭೆಯಲ್ಲಿದ್ದಾಗ ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆಯಾದ ವಿಷಯ ಮುಟ್ಟಿತು. ಹಂತಕರು ನನ್ನ ಮನೆಯ ಬಳಿ ನನ್ನ ಸಮೀಪಿಸುವ ತಂತ್ರವನ್ನೇ ಅಲ್ಲೂ ಬಳಸಿದ್ದರು.
ನಾನು ಗೌರಿ ಲಂಕೇಶ್‌ರವರಿಗೆ ಈ ಮೊದಲೇ ತಿಳಿಸಿದ್ದು, ಈಗ ಕಲಬುರ್ಗಿಯವರ ವಿಷಯದಲ್ಲಿ ನಿಜವಾಗಿದ್ದನ್ನು ಗೌರಿ ಕಮಿಷನರ್‌ಗೆ ಫೋನ್ ಮಾಡಿ ತಿಳಿಸಿ ನನ್ನ ಭದ್ರತೆಗೆ ಆಗ್ರಹಿಸಿ, ಗನ್ ಮ್ಯಾನ್ ರಕ್ಷಣೆ ಕೊಡುವುದರಲ್ಲಿ ಯಶಸ್ಸನ್ನು ಕಂಡರು.
ಪೊಲೀಸ್ ಇಲಾಖೆ ಕಲಬುರ್ಗಿಯವರ ಹಂತಕರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದಾಗ ಅವು ನಾನು ಕಂಡವರಿಗೆ ಬಹುಪಾಲು ಹೋಲುತ್ತಿತ್ತು.
ಈಗ ಅದೇ ರೀತಿಯಲ್ಲಿ ಗೌರಿಯ ಹತ್ಯೆಯೂ ಆಯಿತು. ಈಗಲೂ ಶಂಕಿತರ ರೇಖಾಚಿತ್ರಗಳನ್ನು ರೆಡಿ ಮಾಡಿದ್ದಾರೆ. ಮೂವರಲ್ಲಿ ಮತ್ತೆ ಇಬ್ಬರದು ನಾನು ಕಂಡವರ ಹೋಲಿಕೆಯೇ ಇದೆ.
ಕೆ.ಎಸ್. ಭಗವಾನ್
ಈ ಶಂಕಿತರು ನನ್ನ ಮನೆಯ ಬಳಿಗೆ ಬಂದಿದ್ದಾಗ ಒಮ್ಮೆ ಅವರ ಬೈಕಿನ ಎರಡನೇ ಸಾಲಿನ ರಿಜಿಸ್ಟರ್ ನಂಬರ್‌ನ್ನು ಗಮನಿಸಿ ಅದನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ. ಅಲ್ಲದೆ ಗೌರಿಯವರ ಹತ್ಯೆಯ ಸಂಚು ನಡೆಯುತ್ತಿದ್ದ ಸಂದರ್ಭದಲ್ಲೇ ಹಂತಕರು ನನ್ನ ಮನೆಯ ಬಳಿ ಅಥವಾ ಮೈಸೂರಿನ ವಿಚಾರವಾದಿ ಪ್ರೊಫೆಸರ್ ಕೆ.ಎಸ್. ಭಗವಾನ್‌ರ ಮನೆಯ ಬಳಿಯು ಕೊಲ್ಲುವ ಅವಕಾಶಕ್ಕಾಗಿ ಓಡಾಡಿರುವ ಸಾಧ್ಯತೆಗಳಿವೆ. ಎಸ್‌ಐಟಿ ಅಧಿಕಾರಿಗಳು ಇಲ್ಲಿಯೂ ಲಭ್ಯವಾಗಬಹುದಾದ ಸಿಸಿಟಿವಿ ಕ್ಯಾಮರಾ ದಾಖಲೆಗಳನ್ನು ಪಡೆದು ಪರಿಶೀಲಿಸುವುದು ತನಿಖೆಯ ಪ್ರಗತಿಯ ದೃಷ್ಟಿಯಿಂದ ಮುಖ್ಯ ಎಂದು ನನಗನಿಸುತ್ತಿದೆ.
ಅದೇ ಉತ್ತರ ಕರ್ನಾಟಕದ ಸೊಗಡಿನ ಪದಗಳನ್ನು ಕೇಳಲು, ಎಂತದ್ದೋ ನೆಪ ಮಾಡಿಕೊಂಡು ನನ್ನ ಬಳಿಗೆ ಬರುವುದನ್ನು, ನನ್ನ ಆತ್ಮೀಯತೆ ಮತ್ತು ಆಪ್ತತೆಯನ್ನು ಅವನೊಂದಿಗೆ ಹಂಚಿಕೊಂಡು, ಅಪ್ಪಿಕೊಂಡು ಬಿಡದಿರಲು ಕಾಯುತ್ತಿದ್ದೇನೆ. ಆದರೆ ಅವನು ಯಾವಾಗ ತನ್ನ ಅಡಗುತಾಣದಿಂದ ಹೊರಗೆ ಬರುವನೋ. ನೋಡಬೇಕು.