ನೂತನ ಐಫೋನ್ ಎಕ್ಸ್ ಖರೀದಿಸಲು ತುದಿಗಾಲಲ್ಲಿ ನಿಂತಿದ್ದೀರಾ?
ಆ್ಯಪಲ್ ಸಹ ಸ್ಥಾಪಕ ಹೇಳಿದ್ದನ್ನು ಕೇಳಿದರೆ...
ಹೊಸದಿಲ್ಲಿ, ಅ.24: ನವೆಂಬರ್ 3ರಂದು ಲಾಂಚ್ ಆಗಲಿರುವ ಆ್ಯಪಲ್ ಸಂಸ್ಥೆಯ ಐಫೋನ್ ಎಕ್ಸ್ ಹೇಗಿರಬಹುದು ಎಂದು ಮೊಬೈಲ್ ಪ್ರಿಯರು ಕಾತರದಿಂದಿದ್ದಾರೆ. ಸಾವಿರಾರು ಮಂದಿ ಐಫೋನ್ ಎಕ್ಸ್ ಅನ್ನು ಲಾಂಚ್ ಆದ ಮೊದಲ ದಿನವೇ ಖರೀದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಸಾಮಾನ್ಯವಾಗಿ ಹೊಸದಾಗಿ ಲಾಂಚ್ ಆಗುವ ಆ್ಯಪಲ್ ಐಫೋನ್ ಗಳನ್ನು ಮೊದಲ ದಿನವೇ ಖರೀದಿಸುವ ಆಪಲ್ ಸಹ ಸ್ಥಾಪಕ ಸ್ಟೀವ್ ವೋಝ್ನಿಯಾಕ್ ಈ ಬಾರಿ ಲಾಂಚ್ ಆಗಲಿರುವ ಐಫೋನ್ ಎಕ್ಸ್ ಅನ್ನು ಮೊದಲ ದಿನವೇ ಖರೀದಿಸುವುದಿಲ್ಲವಂತೆ.
“ನಾನು ಐಫೋನ್ 8 ಬಳಕೆಯಲ್ಲೇ ತೃಪ್ತಿಯಾಗಿದ್ದೇನೆ. ಐಫೋನ್ 8 ಐಫೋನ್ 7ರಂತೆಯೂ, ಐಫೋನ್ 7 ಐಫೋನ್ 6ರಂತೆಯೇ ಇದೆ ಎಂದು ನನಗನಿಸುತ್ತದೆ. ಕೆಲ ಕಾರಣಗಳಿಂದ ನಾನು ಮೊದಲ ದಿನವೇ ಖರೀದಿಸದ ಫೋನ್ ಆಗಿರುತ್ತದೆ ಐಫೋನ್ ಎಕ್ಸ್. ಆದರೆ ನನ್ನ ಪತ್ನಿ ಇದನ್ನು ಖರೀದಿಸುತ್ತಾರೆ” ಎಂದವರು ಹೇಳಿದ್ದಾರೆ.
ಎಡ್ಜ್-ಟು-ಎಡ್ಜ್ 5.8 ಇಂಚು ಡಿಸ್ ಪ್ಲೇ ಹೊಂದಿರುವ ಐಫೋನ್ ಎಕ್ಸ್, ಐಫೋನ್ 8 ಪ್ಲಸ್ ಗಿಂತಲೂ ತುಸು ವಿಭಿನ್ನವಾಗಿದೆ. ಫೇಶಿಯಲ್ ರೆಕಗ್ನನೈಸೇಶನ್ ಆಪ್ಶನ್ ಕೂಡ ಇದರ ವಿಶೇಷತೆಯಾಗಿದೆ. ಆದರೆ ರೂಟರ್ಸ್ ನಡೆಸಿರುವ ಸರ್ವೇ ಒಂದು ಐಫೋನ್ ಎಕ್ಸ್ ನ ಬಗ್ಗೆ ಕುತೂಹಲ ಹೆಚ್ಚಿದ್ದರೂ ಅದನ್ನು ಖರೀದಿಸಲು ಮುಂದಾಗಿರುವವರ ಸಂಖ್ಯೆ ಕಡಿಮೆಯಿದೆ ಎಂದಿದೆ. ಈ ಐಫೋನ್ ಗೆ ಭಾರೀ ಬೇಡಿಕೆಯಿದ್ದರೂ ಅದ್ಭುತ ಎನ್ನುವಂತಿಲ್ಲ ಎಂದಿದೆ.
ಈ ನಡುವೆ ವೋಝ್ನಿಯಾಕ್ ಕೂಡ ಐಫೋನ್ ಎಕ್ಸ್ ಬಗ್ಗೆ ನೀಡಿರುವ ಹೇಳಿಕೆ ಕೂಡ ಇದನ್ನು ಸಮರ್ಥಿಸುವಂತಿದೆ. ಐಫೋನ್ 6, 7, 8 ಎಲ್ಲವೂ ಒಂದೇ ರೀತಿಯಿದೆ ಎಂದವರು ಹೇಳಿದ್ದಾರೆ. ಈ ಮೂಲಕ ಐಫೋನ್ ಎಕ್ಸ್ ಇವುಗಳಿಂದ ಭಿನ್ನವೇನಿಲ್ಲ ಎಂದವರು ಪರೋಕ್ಷವಾಗಿ ಹೇಳಿದ್ದಾರೆ.