ಮಾಡದ ಅಪರಾಧಕ್ಕೆ ನರಕಯಾತನೆಯ ಶಿಕ್ಷೆ
ಭಾಗ-2
ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ತಪ್ಪು ಟೀಕೆ (ಕಮೆಂಟ್ಸ್)ಗಳಿಗಾಗಿ ತನ್ನನ್ನು ತತ್ಕ್ಷಣವೇ ಬಂಧಿಸಬೇಕೆಂದು ಮೇಲಿನ ಅಧಿಕಾರಿಗಳಿಂದ ತಮಗೆ ಸೂಚನೆ ಬಂದಿತ್ತೆಂದು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ತನ್ನ ಸಂಬಂಧಿಕರೊಡನೆ ಹೇಳಿದ್ದರು ಎಂದು ತ್ಯಾಗಿ ಹೇಳಿದ್ದಾನೆ. ಅದೇನಿದ್ದರೂ ಫೇಸ್ಬುಕ್ನಲ್ಲಿ ಈ ಪೋಸ್ಟ್ಗಳನ್ನು ಮೂಲತಃ ಹಾಕಿದವರು ಬೇರೆ ಯಾರೋ; ಇವರಲ್ಲಿ ಉರ್ದು ಪತ್ರಿಕೆಗಳ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರೂ ಸೇರಿದ್ದರು. ತಾನು ಇವರ ಅಭಿಪ್ರಾಯಗಳನ್ನು ತನ್ನ ಫೇಸ್ಬುಕ್ನಲ್ಲಿ ಇತರರೊಂದಿಗೆ ಹಂಚಿಕೊಂಡಿದ್ದೆ, ಅಷ್ಟೆ ಎಂದು ತ್ಯಾಗಿ ಸ್ಪಷ್ಟೀಕರಣ ನೀಡಿದ್ದಾನೆ.
ಅಲ್ಲದೆ ಆದಿತ್ಯನಾಥ್ರ ಕುರಿತು ತಾನು ಮಾಡಿದ್ದು ಎನ್ನಲಾದ ಟೀಕೆಯು ತನ್ನನ್ನು ವಿಚಾರಣೆಗೆ ಒಳಪಡಿಸಲು ಕಾರಣವೆಂದು ಪೊಲೀಸರು ಸಬೂಬು ನೀಡಿದರೆಂದೂ ಆತ ಹೇಳಿದ್ದಾನೆ. ಆದರೆ ಪ್ರಥಮ ಮಾಹಿತಿ ವರದಿಯಲ್ಲಿ ಇದರ ಉಲ್ಲೇಖವಿರಲಿಲ್ಲ.
ಪ್ರಥಮ ಮಾಹಿತಿ ವರದಿಯಲ್ಲಿ ನೀಡಲಾಗಿರುವ ತ್ಯಾಗಿಯ ಬಂಧನದ ವಿವರ, ಅವನು ನೀಡಲಾಗಿರುವ ಘಟನಾವಳಿಗಳ ವಿವರಣೆಗಿಂತ ಭಿನ್ನವಾಗಿದೆ ಎಂಬುದು ಕೂಡ ಗಮನಾರ್ಹ. ಪ್ರಥಮ ಮಾಹಿತಿ ವರದಿಯ ಪ್ರಕಾರ, ದೂರು ನೀಡಿದ ಓರ್ವ ಗುರುತು ಮಾಡಲಾಗದ (ಅನ್ಐಡೆಂಟಿಫೈಡ್) ವ್ಯಕ್ತಿ ಮತ್ತು ಧರ್ಮೇಂದ್ರ ಸಿಂಗ್ ಎಂಬ ಹೆಸರಿನ ಓರ್ವ ಪೊಲೀಸ್ಅಧಿಕಾರಿ ವಾರಿಸ್ ಖಾನ್ ಮನೆಯ ಹೊರಗೆ ತ್ಯಾಗಿಗಾಗಿ ಕಾಯುತ್ತಿದ್ದರು. ಮನೆಯಿಂದ ಸುಮಾರು 50 ಮೀಟರ್ ದೂರದ ಒಂದು ಸ್ಪಾಟ್ನಿಂದ ತ್ಯಾಗಿಯನ್ನು ಬಂಧಿಸಲಾಗಿತ್ತು. ದೂರು ನೀಡಿದಾತ ತ್ಯಾಗಿಯನ್ನು ಗುರುತು ಹಿಡಿದ ಬಳಿಕ, ಸಿಂಗ್ ತ್ಯಾಗಿಯ ಮೊಬೈಲ್ ಫೋನನ್ನು ವಶಪಡಿಸಿಕೊಂಡ ಮತ್ತು ಆಕ್ಷೇಪಾರ್ಹವೆನ್ನಲಾದ ಫೇಸ್ಬುಕ್ ಪೋಸ್ಟ್ಗಳು ಆ ಮೊಬೈಲ್ನಲ್ಲಿರುವುದನ್ನು ನೋಡಿದ.
‘ನನ್ನನ್ನು ಕುಖ್ಯಾತ ಕ್ರಿಮಿನಲ್ಗಳೊಂದಿಗೆ ಕೂಡಿಹಾಕಲಾಯಿತು’
ಮೇ 13ರಂದು ತ್ಯಾಗಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ನಂತರ ತಾನು ಮಾಡಿದ ಮೊದಲ ಕೆಲಸವೆಂದರೆ ತನ್ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿದ್ದು, ಎಂದಿದ್ದಾನೆ ಆತ. ಅವನು ಜೈಲಿನಿಂದೇನೋ ಬಿಡುಗಡೆ ಪಡೆದಿದ್ದ, ಆದರೆ ತತ್ಕ್ಷಣ ಇನ್ನೊಂದು ಸಮಸ್ಯೆ ಅವನಿಗೆ ಎದುರಾಯಿತು. ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಕೂಡ ಆಗಿದ್ದ ವಾರಿಸ್ಖಾನ್ ತನ್ನ ಕಂಪೆನಿಯಲ್ಲಿ ನಷ್ಟವಾದ ಬಳಿಕ ತನ್ನ ಕಚೇರಿಯನ್ನು ಮುಚ್ಚಿದ್ದ. ಪರಿಣಾಮವಾಗಿ ತ್ಯಾಗಿಗೆ ನೌಕರಿಯೂ ಇಲ್ಲವಾಯಿತು. ಆ ನೌಕರಿಯೊಂದಿಗೆ ಬರುತ್ತಿದ್ದ ಮಾಸಿಕ 8,000 ರೂಪಾಯಿ ವೇತನವೂ ನಿಂತುಹೋಯಿತು.
ಜೈಲಿನಲ್ಲಿ ನಾನು ಕಳೆದ ಸಮಯವನ್ನು ಜ್ಞಾಪಿಸಿಕೊಳ್ಳುತ್ತಾ ‘ತನ್ನನ್ನು ಕುಖ್ಯಾತ ಕ್ರಿಮಿನಲ್ಗಳೊಂದಿಗೆ ಜೈಲಿನ ಒಂದು ಕೋಣೆಯಲ್ಲಿಡಲಾಗಿತ್ತು’ ಎಂದು ಹೇಳಿರುವ ತ್ಯಾಗಿ, ನನ್ನನ್ನು ಯಾಕೆ ಬಂಧಿಸಿ ಜೈಲಿಗೆ ಕಳುಹಿಸಲಾಯಿತು ಎಂಬುದು ತನಗಿನ್ನೂ ಅರ್ಥವಾಗಿಲ್ಲ ಎನ್ನುತ್ತಾನೆ. ‘‘ನನ್ನ ಅಪರಾಧವೇನೆಂದು ನನಗಿನ್ನೂ ತಿಳಿಯುತ್ತಿಲ್ಲ. (2015ರಲ್ಲಿ ದಾದ್ರಿಯಲ್ಲಿ ಗೋಮಾಂಸ ಸೇವಿಸಿದನೆಂಬ ಗಾಳಿ ಮಾತನ್ನಾಧರಿಸಿ ನಡೆಸಲಾದ ಗುಂಪು ಹಲ್ಲೆಯಲ್ಲಿ ಮೃತಪಟ್ಟ) ಮುಹಮ್ಮದ್ ಅಖ್ಲಾಕ್ ಮತ್ತು ರೋಹಿತ್ ವೇಮುಲಾನ ಫೊಟೋಗಳನ್ನು ಜನರು ಬಳಸುವುದನ್ನು ನಾನು ನೋಡಿದ್ದೆ. ಅದೇ ರೀತಿಯಾಗಿ ಮೃತ ಪೊಲೀಸ್ ಚಿತ್ರವನ್ನು ಆ ಹುತಾತ್ಮನಿಗೆ ಗೌರವ ಸೂಚಕವಾಗಿ ನನ್ನ ಫೇಸ್ಬುಕ್ನಲ್ಲಿ ಪ್ರೊಫೈಲ್ ಚಿತ್ರವಾಗಿ ಬಳಸಿದ್ದೆ. ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಚಿತ್ರವನ್ನೂ ಹಲವರು ಫೇಸ್ಬುಕ್ನಲ್ಲಿ ಪ್ರೊಫೈಲ್ ಆಗಿ ಬಳಸುವುದನ್ನು ನಾನು ನೋಡಿದ್ದೆ’’ ಎಂದೂ ತ್ಯಾಗಿ ಹೇಳಿದ್ದಾನೆ. ಆ ಬಳಿಕ ಪೊಲೀಸರು ತ್ಯಾಗಿಯ ವಿರುದ್ಧ ದೇಶ ದೇಶದ್ರೋಹದ ಅಪರಾಧಗಳನ್ನು ಆತನ ಮೇಲಿನ ಆಪಾದನೆಗಳ ಪಟ್ಟಿಗೆ ಸೇರಿಸಿದ್ದರೆಂದು ತ್ಯಾಗಿಯ ವಕೀಲ ಖಾಝಿ ಅಹ್ಮದ್ ಹೇಳಿದ್ದಾರೆ.
ಕಾನೂನಿನ ಪ್ರಕಾರ ದೇಶದ್ರೋಹ ಎಂಬುದು ‘ಸರಕಾರದ ವಿರುದ್ಧ ಅಪ್ರೀತಿ (ಡಿಸ್ ಅಫೆಕ್ಷನ್)ಯನ್ನು ಕೆರಳಿಸುವ’ ಉದ್ದೇಶ ಹೊಂದಿದ ಯಾವುದೇ ಕೃತ್ಯವನ್ನು ಒಳಗೊಳ್ಳುತ್ತದೆ ಮತ್ತು ಅಪರಾಧ ಸಾಬೀತಾದಲ್ಲಿ, ಅಪರಾಧಿಗೆ ಜೀವಾವಧಿ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಪ್ರೆಸ್ಟ್ರಸ್ಟ್ ಆಫ್ ಇಂಡಿಯಾ, ಸಾಮಾಜಿಕ ಕಾರ್ಯಕರ್ತ ವಾಸಿಕ್ ನದೀಂಖಾನ್ ಕೂಡ ಹೀಗೆ ಹೇಳಿರುವುದಾಗಿ ವರದಿ ಮಾಡಿದೆ: ‘‘ಝಾಕಿರ್ನ ಮೊದಲ ಜಾಮೀನು ಅರ್ಜಿ ವಿಚಾರಣೆಯ ವೇಳೆ ನ್ಯಾಯಾಧೀಶರು ತಡವಾಗಿ ನ್ಯಾಯಾಲಯಕ್ಕೆ ಬಂದರು ಮತ್ತು ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದರು. ಎರಡನೆಯ ಬಾರಿ ವಿಚಾರಣೆಗೆ ಬಂದಾಗ ವಿಷಯ ಗಂಭೀರವಾಗಿದೆ ಎಂಬ ನೆಲೆಯಲ್ಲಿ ಜಾಮೀನಿಗೆ ಮಾಡಿಕೊಂಡ ವಿನಂತಿಯನ್ನು ಸಾರಾಸಗಟಾಗಿ ವಜಾಗೊಳಿಸಲಾಯಿತು. ತರುವಾಯ ಝಾಕಿರ್ ಮುಝಫ್ಫರ್ನಗರ ಜೈಲಿನಲ್ಲಿ 42 ದಿನಗಳನ್ನು ಕಳೆಯಬೇಕಾಯಿತು. ನಾವೀಗ ಆತನಿಗಾದ ಅನ್ಯಾಯಕ್ಕೆ ಪರಿಹಾರ ಕೊಡಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದೇವೆ.’’ ಎಂದು.
ತಾನು ಎಪ್ರಿಲ್ ತಿಂಗಳಲ್ಲಷ್ಟೆ ಅಧಿಕಾರ ವಹಿಸಿಕೊಂಡದ್ದರಿಂದ ತನಗೆ ಈ ಮೊಕದ್ದಮೆಯ ಕುರಿತು ಏನೂ ತಿಳಿದಿಲ್ಲವೆಂದು ಮುಝಫ್ಫರ್ ನಗರದ ಪೊಲೀಸ್ ಸೂಪರಿಂಟೆಂಡೆಂಟ್ ವಾರ್ತಾ ಏಜೆೆನ್ಸಿಗೆ ಹೇಳಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳಿಗೆ ಸಂಬಂಧಿಸಿದ ಮೊಕದ್ದಮೆಗಳು ಸಾಮಾನ್ಯವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪರಿಧಿಯೊಳಗೆ ಬರುತ್ತವೆಂದು ಅವರು ಹೇಳಿದ್ದಾರೆ. ಈ ಕಾಯ್ದೆಯು ಮುಖ್ಯವಾಗಿ ಸೈಬರ್ ಅಪರಾಧಗಳು ಮತ್ತು ವಿದ್ಯುನ್ಮಾನ ಸಂವಹನಕ್ಕೆ ಸಂಬಂಧಿಸಿದ ಮೊಕದ್ದಮೆಗಳನ್ನು ಪರಿಗಣಿಸುವ ಒಂದು ಕಾಯ್ದೆಯಾಗಿದೆ.
ಕೃಪೆ: scroll.in