ಅಮ್ಮ ಸುರುಟಿದ ಬೀಡಿಯೊಳಗಿನ ಕವಿತೆಗಳು...
ಈ ಹೊತ್ತಿನ ಹೊತ್ತಿಗೆ
‘‘ಕವಿತೆಯೆಂದರೆ ಉಮ್ಮ’’ ಯುವ ಕವಿ ಯಂಶ ಬೇಂಗಿಲ ಅವರ ಮೊದಲ ಕವನ ಸಂಕಲನ. ಧುಮ್ಮಿಕ್ಕುವ ಭಾವನೆಗಳ ಹೊಸಿಲಲ್ಲಿ ನಿಂತು ಬರೆಯುವ ಯಂಶ ಬೇಂಗಿಲ ಅವರ 30ಕ್ಕೂ ಅಧಿಕ ಕವಿತೆಗಳು ಇಲ್ಲಿವೆ. ಉಮ್ಮ ಎಂದರೆ ತಾಯಿ. ಕವಿತೆಯನ್ನುವ ಈ ತಾಯಿಯ ಮಡಿಲಲ್ಲಿ ಈತ ಇನ್ನೂ ಮಗು. ಆದುದರಿಂದಲೇ ಇಲ್ಲಿರುವ ಕವಿತೆಗಳ ಸಾಲುಗಳಲ್ಲಿ ಒಂದಿಷ್ಟು ಜಾತಿ ಮುದ್ದು, ಮೊದ್ದು, ನವೋದಯದ ಭಾವುಕತೆಗಳು ವ್ಯಾಪಕವಾಗಿ ಕಾಣಬಹುದು. ಮಾನವೀಯ ಸಮಾಜವೊಂದನ್ನು ಕಟ್ಟುವ ನಿಟ್ಟಿನಲ್ಲಿ ಇಲ್ಲಿನ ಎಲ್ಲ ಕವಿತೆಗಳೂ ತುಡಿಯುತ್ತವೆ.
ತನ್ನ ಬದುಕು, ಸಂಸ್ಕೃತಿ, ಕುಟುಂಬ, ಸಮಾಜದಿಂದ ರೂಪುಗೊಂಡ ಸಾಲುಗಳು ಇಲ್ಲಿವೆ. ‘ಅಜ್ಜನ ಕಲ್ಲು’ ಕವಿತೆಗಳು ತನ್ನ ಅಜ್ಜನ ಬದುಕನ್ನು ಹೇಳುತ್ತಾ, ಆತನಿಲ್ಲದ ವರ್ತಮಾನದ ಬರಡುತನವನ್ನು ಕವಿ ಹೇಳುತ್ತಾನೆ. ‘ಬಾನಂಗಳದ ಹೊಸಿಲು/ ದಾಟಿಹಳು ಮಳೆ ಮಗಳು...’ ಬಾನಿನಿಂದ ಭುವಿಗಿಳಿಯುವ ಮಳೆಯನ್ನು ರಮ್ಯವಾಗಿ ವರ್ಣಿಸುವ ಯಂಶ, ಮಗದೊಂದೆಡೆ ತನ್ನ ಕವನಗಳನ್ನು ಸೂರಿಲ್ಲದ ಮುದುಕಿಯ ಬದುಕಿನ ಚೂರುಗಳಿಗೆ ಹೋಲಿಸುತ್ತಾರೆ. ಬೆಳೆದವರ ಅಹಮಿಕೆಯನ್ನು ತೊಳೆವ ಇರುವೆಯನ್ನೂ ಬಿಡದೆ ಕವಿತೆ ಕಟ್ಟುವ ಕವಿ, ‘ಉಮ್ಮ ಮತ್ತು ನಾನು’ ಕವಿತೆಯಲ್ಲಿ ತಾಯಿಯ ಮುಗ್ಧತೆ ಮತ್ತು ಆಕೆಯ ಅಗಾಧತೆಯನ್ನು ದಾಖಲಿಸುತ್ತಾರೆ. ‘ಅಪ್ಪ ಮತ್ತು ವಾಸು’ವಿನ ಆಪ್ತತೆಯನ್ನು ಹೇಳುತ್ತಾ ವರ್ತಮಾನದ ದುರಂತದ ಕಡೆಗೆ ಗಮನ ಸೆಳೆಯುತ್ತಾರೆ. ತಾಯಿ ಬೀಡಿಗೆ ಸುರುಟುತ್ತಿರುವುದು, ನನ್ನ ಕನಸು ಮತ್ತು ನಾಳೆಗಳನ್ನು ಎಂದು ಬರೆಯುವ ಕವಿ ನಮ್ಮ ಹೃದಯವನ್ನು ಆರ್ದೃಗೊಳಿಸುತ್ತಾರೆ. ಕೆಲವೆಡೆ ಸಣ್ಣ ಪುಟ್ಟ ತಪ್ಪುಗಳು ಕೃತಿಯಲ್ಲಿ ಕಾಣಿಸಿಕೊಂಡು ಇರಿಸುಮುರಿಸು ಉಂಟು ಮಾಡುತ್ತವೆಯಾದರೂ, ಕವಿ ತನ್ನ ಕವಿತೆಗಳಲ್ಲಿ ಪ್ರತಿಪಾದಿಸಿದ ಮಾನವೀಯ ಸಂವೇದನೆ ಅವೆಲ್ಲವನ್ನು ಮರೆಯುವಂತೆ ಮಾಡುತ್ತದೆ. ಎಂಬತ್ತು ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ.