varthabharthi


ಅಂಬೇಡ್ಕರ್ ಚಿಂತನೆ

ಪೇಶ್ವಾಯಿ: ಪೇಶ್ವೆ ಕಾಲದ ಅಸ್ಪೃಶ್ಯರ ಜೀವನ

ವಾರ್ತಾ ಭಾರತಿ : 27 Oct, 2017

 ಬ್ರಾಹ್ಮಣರ ಕೈಯಲ್ಲಿ ರಾಜಕೀಯ ಮತ್ತು ಧಾರ್ಮಿಕ ಅಧಿಕಾರ ಬಂದ ನಂತರ ಸವರ್ಣ ಹಿಂದೂಗಳು ಪೇಶ್ವೆಗಳ ರಾಜ್ಯದಲ್ಲಿ ಎಷ್ಟು ಹಿಂಸೆ ಮಾಡಿದರು, ಎಂಬುದನ್ನು ತೋರಿಸುವ ಉದ್ದೇಶ ಇಷ್ಟೇ. ಅದೆಂದರೆ ಬ್ರಾಹ್ಮಣರು ಅಸ್ಪಶ್ಯರಿಗೆ ಎಷ್ಟು ಅಯೋಗ್ಯವಾಗಿ ಹಿಂಸೆ ಕೊಟ್ಟಿರಬಹುದು, ಎಂಬುದನ್ನು ವಾಚಕರು ತಿಳಿದುಕೊಳ್ಳಬಹುದು. ಅಸ್ಪಶ್ಯರು ಅನುಭವಿಸಿದ ಹಿಂಸೆಯ ಬಗ್ಗೆ ಸಂಪೂರ್ಣ ಐತಿಹಾಸಿಕ ಲಿಖಿತ ಮಾಹಿತಿ ಸಿಗುವುದು ಅಶಕ್ಯವಾಗಿದೆ. ಕಾರಣ ಅದನ್ನು ದಾಖಲಿಸುವವರು ಯಾರು? ದಾಖಲೆ ಇಡುವ ಯಂತ್ರ ಮತ್ತು ತಂತ್ರ ಬ್ರಾಹ್ಮಣರ ಕೈಯಲ್ಲಿದ್ದವು.

ಮತ್ತು ಬ್ರಾಹ್ಮಣರು ಅಸ್ಪಶ್ಯರನ್ನು ಪಶುಪಕ್ಷಿಗಳಿಗಿಂತ ಕಡೆಯಾಗಿ ನೋಡುತ್ತಿದ್ದರು. ಪಶುಗಳ ಹಿಂಸೆಯ ದಾಖಲಾತಿ ಇಲ್ಲ, ಹಾಗಾಗಿ ಪಶುಗಳಿಗಿಂತ ಹೀನವಾದ ಹಿಂಸೆಯನ್ನು ಯಾರು ಬರೆದಿಡುತ್ತಾರೆ? ಆದರೂ ಸಹ ಆ ವೇಳೆಯಲ್ಲಿ ಯಾವ ತರಹದ ಹಿಂಸೆಯು ಅಸ್ತಿತ್ವದಲ್ಲಿತ್ತು ಎನ್ನುವುದರ ಉಕ್ತಿ ಮತ್ತು ಚರ್ಚೆ ಪ್ರತಿಯೊಂದು ಪೀಳಿಗೆಯಲ್ಲೂ ಆಗುವುದು ಅನಿವಾರ್ಯವಾಗಿತ್ತು. ಕೆಲವು ಯುರೋಪಿಯನ್ನರು ಈ ಹಿಂಸೆಯನ್ನು ನೋಡಿದ್ದರು. ಅಸ್ಪಶ್ಯರ ಈ ಹಿಂಸೆಯ ದಾಖಲೆಯನ್ನು ಯುರೋಪಿಯನ್ ಲೇಖಕರು ಮಾಡಿದರು ಮತ್ತು ಅದನ್ನು ಹಿಂದಿ ಲೇಖಕರು ಬಳಸಿಕೊಂಡರು. ಮಹಾರರು ಬೆಳಗ್ಗೆ 9ರಿಂದ ಮಧ್ಯಾಹ್ನ 3ಗಂಟೆಯವರೆಗೆ ಹೊರಗೆ ಓಡಾಡಬಾರದಿತ್ತು. ಕಾರಣವೇನೆಂದರೆ ಅವರ ನೆರಳು ಬಿದ್ದರೆ ಸ್ಪಶ್ಯರಿಗೆ ಮೈಲಿಗೆಯಾಗುತ್ತಿತ್ತು. ಹೀಗೆ ಪೇಶ್ವೆಯವರ ಆಜ್ಞೆಯಾಗಿತ್ತು. ಅದರ ದಾಖಲಾತಿಯನ್ನು ರಸೆಲ್ ಎಂಬವರು ತಮ್ಮ ಕೃತಿಯೊಳಗೆ (The Tribes & Castes Of Central Provinces, London,1916,p.189, Vol,4) ಮಾಡಿದ್ದಾರೆ. ಈ ವಿಷಯದ ಮಾಹಿತಿಯನ್ನು ಡಾ.ಧುರ್ಯೆ ಅವರು ಸವಿಸ್ತಾರವಾಗಿ ಕೊಟ್ಟಿದ್ದಾರೆ. ಅದು ಹೀಗಿದೆ

  ‘‘ಮರಾಠಿ ದೇಶದಲ್ಲಿ ಮಹಾರ - ಅಂದರೆ ಅಸ್ಪಶ್ಯನೊಬ್ಬನು ರಸ್ತೆಯಲ್ಲಿ ಉಗುಳಬಾರದು,ಯಾಕೆಂದರೆ ಶುದ್ಧ ಬ್ರಾಹ್ಮಣರ ಕಾಲಿಗೆ ಅದು ತಾಕಿದರೆ, ಅವನಿಗೆ ಅದು ಮೈಲಿಗೆಯಾಗುತ್ತದೆ. ಆದ್ದರಿಂದ ಅವನು ತನ್ನ ಎಂಜಲನ್ನು ಉಗಿಯಲು, ಒಂದು ಮಡಕೆಯನ್ನು ಕುತ್ತಿಗೆಗೆ ಕಟ್ಟಿಕೊಂಡು ಓಡಾಡಬೇಕು ಅಷ್ಟೇ ಅಲ್ಲದೆ ಅವನು ಒಂದು ಕಡ್ಡಿ ಪೊರಕೆಯನ್ನು ಸೊಂಟಕ್ಕೆ ಕಟ್ಟಿಕೊಂಡು ತನ್ನ ಕಾಲ ಹೆಜ್ಜೆಯ ಗುರುತನ್ನು ಒರೆಸುತ್ತಾ ಹೋಗಬೇಕು. ಜೊತೆಗೆ ಯಾರಾದರೂ ಬ್ರಾಹ್ಮಣನು ದಾರಿಯಲ್ಲಿ ಎದುರಾದರೆ, ತನ್ನ ನೆರಳು ಅವರ ಮೇಲೆ ಬಿದ್ದು ಮೈಲಿಗೆಯಾಗದ ಹಾಗೆ, ದೂರದಿಂದಲೇ ನೆಲದ ಮೇಲೆ ಅಡ್ಡ ಬೀಳಬೇಕು.’’

ಡಾ.ದ.ಪು.ಖಾನಾಪುರಕರ್ ಅವರು ಮಹಾರರ ವಿಷಯದಲ್ಲಿ ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೋ ಅದು ಹೀಗಿದೆ:  ‘‘ ಎಲ್ಲ ಅಸ್ಪಶ್ಯರಲ್ಲಿ ಹಿಂದೂ ಸಮಾಜದ ಕಡೆಯಿಂದ ಹೆಚ್ಚಿನ ಹಿಂಸೆ ಮತ್ತು ಅವಮಾನವಾಗಿರುವುದೆಂದರೆ ಅದು ಮಹಾರ್‌ರದು. ಪೇಶ್ವೆಯವರ ಕಾಲದಲ್ಲಿ ಅವರು ಕುತ್ತಿಗೆಗೆ ಮಡಕೆ ಕಟ್ಟಿಕೊಂಡು ಓಡಾಡಾಬೇಕಾದ ಕಠೋರತೆ ಇತ್ತು. ಮತ್ತು ಊರಿನಲ್ಲಿ ಯಾರಾದರೂ ಬ್ರಾಹ್ಮಣರು ಎದುರಿಗೆ ಕಾಣಿಸಿಕೊಂಡರೆ ಅವರ ನೆರಳಿನಿಂದ ಅಪವಿತ್ರವಾಗಬಾರದೆಂದು ಅವರು ನೆಲದ ಮೇಲೆ ಮುಖ ಮಾಡಿ ಮಲಗಬೇಕಾದ ಆಜ್ಞೆ ಇತ್ತು. ಇಷ್ಟೇ ಅಲ್ಲದೆ ನೆಲದ ಮೇಲೆ ಬಿದ್ದ ಅವರ ಕಾಲಿನ ಧೂಳನ್ನು ತುಳಿದು ಯಾವ ಬ್ರಾಹ್ಮಣರೂ ಅಪವಿತ್ರವಾಗಬಾರದೆಮದು ಬೆನ್ನಿಗೆ, ಮುಳ್ಳಿನ ಗಿಡಗಂಟೆ ಕಟ್ಟಿಕೊಂಡು ಅಲೆದಾಡಬೇಕಾಗಿತ್ತು. ಮತ್ತು ಆ ಗಿಡಗಂಟೆಯಿಂದ ತಮ್ಮ ಕಾಲಿನ ಧೂಳನ್ನು ಒರೆಸಿಕೊಂಡು ಹೋಗಬೇಕಾಗಿತ್ತು. ಮಹಾರರ ಇನ್ನೊಂದು ಹೆಸರೇ ಅತಿಶೂದ್ರ ಮತ್ತು ಭೂಮಿಪುತ್ರ,(ಭೂಜ್ಯ ಎಮದು ಒರಿಸ್ಸದಲ್ಲಿ ಹೆಸರಿದೆ. ಅದರ ಅರ್ಥ ಭೂಮಿಯ ಮಗ ಎಂದು. ಇದು ಸಹಧರ್ಮವನ್ನು ಲಕ್ಷದಲ್ಲಿಡುವಂತೆ ಮಾಡುತ್ತದೆ.) ಈ ಎರಡು ಹೆಸರಿನ ಮೇಲೆ ಅವರು ಆದಿವಾಸಿಗಳಾಗಿದ್ದಿರಬಹುದು ಮತ್ತು ಆರ್ಯರು ತಮ್ಮೊಳಗೇ ಅವರನ್ನು ಕೂಡಿಸಿಕೊಂಡಾಗ ಅವರನ್ನು ಖಾಯಮ್ಮಾಗಿ ಅಸ್ಪಶ್ಯರನ್ನಾಗಿ ಮಾಡಿರಬಹುದು.

ಅಂತೊವನ್‌ನ ಅಭಿಪ್ರಾಯದ ಪ್ರಕಾರ ಅದರಲ್ಲಿನ ಬೇರೆ ಬೇರೆ ಐವತ್ತು ವಿಭಾಗಗಳಿವೆ. ಅದು ಎಲ್ಲ ಆದಿವಾಸಿಗಳ ಭಾಗಗಳಾಗಿರಬಹುದು ಮತ್ತು ಆ ಭಾಗಗಳು ಆರ್ಯರ ಆಕ್ರಮಣ ನಂತರ ಒಟ್ಟಾಗಿ ಬಂದು ತಮ್ಮನ್ನು ಮಹಾರ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರಬಹುದು. ಬಹುಶಃ ಮಹಾರಾಷ್ಟ್ರ ಎನ್ನುವ ಹೆಸರು ಮಹಾರ್ ಎನ್ನುವ ಪದದಿಂದ ಬಂದಿರುವ ಸಂಭವವಿದೆ. ಈಗಲೂ ಆದಿವಾಸಿ ಕಾಲದ ಮುಂದಾಳುಗಳ ಪ್ರಕಾರ ನಾಕ್ ಎಂದರೆ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಕೆಲವರ ಅಭಿಪ್ರಾಯದಲ್ಲಿ ನಾಕ್ ಎಂದರೆ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಕೆಲವರ ಅಭಿಪ್ರಾಯದಲ್ಲಿ ನಾಕ್ ಅನ್ನುವುದು ನಾಗ ಈ ಶಬ್ದದ ಅಪಭ್ರಂಶವಾಗಿದ್ದು ವೇದಪುರಾಣದಲ್ಲಿ ನಾಗ ಹೆಸರಿನ ಯಾವ ಜನರನ್ನು ವರ್ಣಿಸಿದ್ದಾರೋ ಅವರು ಇವರೇ ಇರಬೇಕು. ‘‘(ಪಾ.118-121)-ನವಾ ಮಹಾರಾಷ್ಟ್ರ ಪುಸ್ತಕದ ‘ದಲಿತ ಸಮಾಜ’ ದ ಲೇಖ. 2

‘‘ಒಂದು ಕಾಲದಲ್ಲಿ ಕೊಂಕಣದಲ್ಲಿ ಮಹಾರ್ ಅವರ ಸ್ವತಂತ್ರ ರಾಜ್ಯವಿತ್ತು. ಅವರನ್ನು ಆರ್ಯಾದಿ ಜನರು ಗೆದ್ದುಕೊಂಡು, ಬಂಡಾಯದ ಪ್ರವೃತ್ತಿ ಬರಲು ಎಳ್ಳಷ್ಟೂ ಅವಕಾಶ ಸಿಗದಂತೆ, ಅವರ ಮೇಲೆ ಸಾಕಷ್ಟು ಶರಣಾಗತಿಯ ಅಲಾವಿ ಹಾಕಿದ್ದರು. ಈ ಐತಿಹಾಸಿಕ ಘಟನೆಯ, ಐತಿಹಾಸಿಕ ಮುದ್ರೆ ಅಂದರೆ ಮಹಾರ್‌ರಿಗೆ ಕೊಂಕಣದ ಊರಿನಲ್ಲಿ ತುಂಬಾ ಗೌರವದ ಮತ್ತು ಮಹತ್ವದ ಸ್ಥಾನ ಕೊಡಬೇಕಾಗಿ ಬಂತು. ಅದು ಸಾವಿರಾರು ವರ್ಷದಿಂದ ನಡೆದು ಬಂದಿದೆ. ಮಹಾರ್‌ರಿಗೆ ಕೊಟ್ಟ ‘ಭೂಮಿಪುತ್ರ’ ಎನ್ನುವ ಹೆಸರು ಕೊಂಕಣದಲ್ಲಿ ಈಗಲೂ ಇದೆ. ಊರಿ ದೇವಾಲಯದ ಮಹಾರ್‌ರ ಕೈಯಿಂದಪೂರಿ ಮಾಡಿಸುತ್ತಾರೆ. ಮಹಾರರು ದೇವದೇವತೆಗಳನ್ನು ಕೂಗಿ ಕರೆದು ಎಬ್ಬಿಸುತ್ತಾರೆ. ಅವರು ಕೋಲು ಬಾರಿಸುವ ತನಕ ದೇವದೇವತೆಯ ಮೇಲೆ ದೈವತ್ವ ಬರುವುದಿಲ್ಲ. ‘ದೇವಚಾರ್’ ಎಂದು ಒಬ್ಬ ದೇವತೆ ಕೊಂಕಣದಲ್ಲಿ ಇದ್ದಾಳೆ.ಅವಳನ್ನು ಶಾಂತಮಾಡಲು ಯಾವ ವಿಧಿಯನ್ನು ಮಾಡಬೇಕೋ, ಅದು ಮಹಾರ್‌ರಿಗೆ ಕಂಬಳಿ ಮತ್ತು ಅನ್ನವನ್ನು ಕೊಡದೆ ಪೂರ್ತಿಯಾಗುವುದಿಲ್ಲ.ಮತ್ತು ದೇವತೆ ಸಂತುಷ್ಟಿ ಹೊಂದುವುದಿಲ್ಲ. ಊರಿನಲ್ಲಿ ದೇವದೇವತೆಯ ಮುಂದೆ ವಿಶೇಷವಾಗಿ ಬೇಡಿಕೆ ಹಾಕಬೇಕಾದರೆ ಮರಾಠಾ ಮುಂತಾದ ಸ್ಪಶ್ಯರು ಮಹಾರರ ಮುಂದೆ ಹಲ್ಲಿನಲ್ಲಿ ಹುಲ್ಲು ಕಡ್ಡಿ ಮುಂದೆ ಹಿಡಿದು ವಿನಂತಿ ಮಾಡಬೇಕು, ಮತ್ತು ಮಹಾರರು ದೇವದೇವತೆಗಳ ಮುಂದೆ ಈ ಬೇಡಿಕೆಯನ್ನಿಟ್ಟಾಗ ದೇವದೇವತೆಗಳಿಂದ ಹರಕೆಗೆ ವರ ಸಿಕ್ಕುತ್ತದೆ. ಹೀಗೆ ಸಾವಿರಾರು ವರ್ಷದ ಪದ್ಧತಿ ನಡೆದು ಬಂದಿದೆ. ಇದರ ಮೇಲೆ ಸುಶಿಕ್ಷಿತ ಹಾಗೂ ಅಶಿಕ್ಷಿತ ಕೊಂಕಣಸ್ತರಿಗೆ ನಂಬಿಕೆ ಇದೆ.’’

‘‘ಪೂನಾ ಅಬ್ಸರ್ವರ್ ಸಿವಿಲ್ ಮಿಲಿಟರಿಯ ಜರ್ನಲ್’’ ಈ ಪತ್ರಕ್ಕೆ ಶುಕ್ರವಾರ ತಾರೀಕು 18 ಡಿಸೆಂಬರ್1903ರಂದು"The Condition Of The Mahars'' ಈ ಶೀರ್ಷಿಕೆಯಡಿ ಒಂದು ಅಗ್ರಲೇಖನ ಬಂದಿತ್ತು. ಅದರಲ್ಲಿ ಈ ಪ್ರಮುಖರೇ ಹೇಳಿದ್ದೇನೆಂದರೆ ಇವತ್ತು ಪದಭ್ರಷ್ಟರಾಗಿ ದಿನ ಕಳೆಯುತ್ತಿರುವ ದಲಿತರ ಪೂರ್ವಜರು ಒಂದು ಕಾಲದಲ್ಲಿ ರಾಜ್ಯವಾಳುತ್ತಿದ್ದರು; ‘‘ಬೇಡನ್ ಪೊವೆಲ್ ಪ್ರಕಾರ ‘ಮಹಾರಾಷ್ಟ್ರ’ ಎನ್ನುವ ಪದ ಪಶ್ಚಿಮ ಭಾರತದ ಪ್ರಭುತ್ವದ ಮೇಲಿನಿಂದ ಉತ್ಪತ್ತಿಯಾಗಿದೆ. ಇದು ಸತ್ಯವಿರಲೂ ಬಹುದು, ಇಲ್ಲದಿರಲೂ ಬಹುದು. ಆದರೆ ಸಾಕಷ್ಟು ದಾಖಲೆಗಳ ಪ್ರಕಾರ ಈ ನಿರ್ಣಯಕ್ಕೆ ಬರಬಹುದು. ಒಂದು ಕಾಲದಲ್ಲಿ ಅವರು ತಮ್ಮ ಸ್ವಂತ ರಾಜ, ರಾಜ್ಯ, ಶಾಸನ, ಧರ್ಮ ಮತ್ತು ಸಾಮಾಜಿಕ ಪದ್ಧತಿಗಳನ್ನು ಹೊಂದಿದ್ದರು. ನೋಡುವುದಕ್ಕೂ ಅವರು ಕಟ್ಟುಮಸ್ತಾಗಿ,ಸುಂದರವಾಗಿ, ಅವರಲ್ಲಿ ತುಂಬಾ ಜನರು ಬುದ್ಧಿವಂತರೂ ಆಗಿ, ಧ್ಯೆರ್ಯವುಳ್ಳವರೂ ಆಗಿದ್ದರು. ಅವರ ಹೆಂಗಸರಂತೂ ಹೆಚ್ಚಾಗಿ ನೋಡಲು ರೂಪವತಿಯರಾಗಿ, ಒಳ್ಳೆ ಲಕ್ಷಣವಂತರಾಗಿ ಎಲ್ಲ ಕೆಲಸದಲ್ಲೂ ಕುಶಲರಾಗಿದ್ದರು. "(The Life Of Shivam Janba Kamble.141)''2

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)