ತಪ್ಪಿ ಕಳಿಸಿದ ವಾಟ್ಸ್ ಆ್ಯಪ್ ಮೆಸೇಜಿನ ಬಗ್ಗೆ ಇನ್ನು ತಲೆಕೆಡಿಸಿಕೊಳ್ಳಬೇಡಿ
ಬಂದಿದೆ ಬಹುನಿರೀಕ್ಷಿತ ಫೀಚರ್
ಇಂದಿನ ತಂತ್ರಜ್ಞಾನ ಯುಗದಲ್ಲಿ ವಾಟ್ಸ್ ಆ್ಯಪ್, ಫೇಸ್ಬುಕ್ ಗಳಂತಹ ವ್ಯವಸ್ಥೆಗಳು ಮನುಷ್ಯನಿಗೆ ಎಷ್ಟು ಉಪಕಾರಿಯೋ, ಅಷ್ಟೇ ಅಪಾಯಕಾರಿಯೂ ಹೌದು. ಸಾಮಾಜಿಕ ಜಾಲತಾಣದಲ್ಲಿ ಪ್ರಮುಖವಾಗಿರುವ ವಾಟ್ಸ್ ಆ್ಯಪನ್ನು ಬಳಸದವರು ವಿರಳ ಎಂದೇ ಹೇಳಬಹುದು. ಕೆಲವೊಮ್ಮೆ ನಾವು ಮೆಸೇಜ್ ಕಳುಹಿಸುವ ಭರದಲ್ಲಿ ಕಣ್ತಪ್ಪಿನಿಂದಾಗಿ ಪ್ರಮಾದಗಳು ಸಂಭವಿಸುತ್ತದೆ. ಯಾರಿಗೋ ಕಳುಹಿಸಬೇಕಾದ ಸಂದೇಶಗಳನ್ನು ಮತ್ಯಾರಿಗೋ ಕಳುಹಿಸುತ್ತೇವೆ. ಇಂತಹ ತಪ್ಪುಗಳು ಮುಜುಗರಕ್ಕೀಡು ಮಾಡುವುದು ಸುಳ್ಳಲ್ಲ.
ಆದರೆ ವಾಟ್ಸ್ ಆ್ಯಪ್ ಪರಿಚಯಿಸಿರುವ ಹೊಸ ಫೀಚರೊಂದು ಈ ತಲೆಬಿಸಿಯನ್ನು ದೂರ ಮಾಡಬಹುದು. ‘ಡಿಲಿಟ್ ಫಾರ್ ಎವರಿವನ್’ ಎನ್ನುವ ಹೊಸ ಫೀಚರ್ ಮೂಲಕ ಕಣ್ತಪ್ಪಿನಿಂದಾಗಿ ಬೇರೆಯವರಿಗೆ ಕಳುಹಿಸಿದ ಮೆಸೇಜ್ ಗಳನ್ನು 7 ನಿಮಿಷಗಳೊಳಗಾಗಿ ಹಿಂದೆಗೆದುಕೊಳ್ಳಬಹುದಾಗಿದೆ. ಒಂದು ಬಾರಿ ಈ ಫೀಚರ್ ಮೂಲಕ ಕಳುಹಿಸಿದ ಮೆಸೇಜ್ ಡಿಲಿಟ್ ಮಾಡಿದರೆ, ರಿಸೀವರ್ ಗೆ ‘ಈ ಸಂದೇಶ ಡಿಲಿಟ್ ಆಗಿದೆ’ ಎಂದಷ್ಟೇ ತೋರಿಸುತ್ತದೆ.
ಭಾರತದ ವಾಟ್ಸ್ ಆ್ಯಪ್ ಬಳಕೆದಾರರಿಗೂ ಈ ಫೀಚರ್ ಸೌಲಭ್ಯ ಲಭ್ಯವಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ ಫಾರ್ಮ್ ಗಳಲ್ಲಿ ಈ ಫೀಚರ್ ಇರಲಿದೆ.
ನೀವು ಡಿಲಿಟ್ ಮಾಡಲು ಬಯಸುವ ಸಂದೇಶಗಳನ್ನು ಚಾಟ್ ವಿಂಡೋದಲ್ಲಿ ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಪ್ರಮುಖ ವಿಷಯವೇನೆಂದರೆ ಸಂದೇಶ ಕಳುಹಿಸಿದ ಏಳು ನಿಮಿಷಗಳವರೆಗೆ ಮಾತ್ರ ಈ ಫೀಚರ್ ವರ್ಕ್ ಆಗಲಿದೆ.
ಸಂದೇಶವನ್ನು ಆಯ್ಕೆ ಮಾಡಿದ ನಂತರ ಚಾಟ್ ವಿಂಡೋದ ಮೇಲಿರುವ ರಿಸೈಕಲ್ ಬಿನ್ ಅನ್ನು ಟ್ಯಾಪ್ ಮಾಡಬೇಕು.
ಆಗ 'ಕ್ಯಾನ್ಸಲ್', 'ಡಿಲಿಟ್ ಫಾರ್ ಮಿ' ಹಾಗು 'ಡಿಲಿಟ್ ಫಾರ್ ಎವರಿವನ್' ಎಂಬ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತದೆ. ಮೂರನೆ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಕಳುಹಿಸಿದ ಮೆಸೇಜ್ ಅವರ ಮೊಬೈಲ್ ನಿಂದ ಡಿಲಿಟ್ ಆಗುತ್ತದೆ.