ಕೋಮುರಂ ಭೀಮು ವರ್ತಮಾನದ ಮುಖಾಮುಖಿ
ಈ ಹೊತ್ತಿನ ಹೊತ್ತಿಗೆ
ದೇಶದೊಳಗಿಂದು ಕಾಡು ಮತ್ತು ನಗರಗಳು ಮುಖಾಮುಖಿಯಾಗುತ್ತಿವೆ. ಅಭಿವೃದ್ಧಿ ಕಾಡಿನ ಸೂಕ್ಷ್ಮ ಬದುಕನ್ನು ಚೆಲ್ಲಾಪಿಲ್ಲಿಗೊಳಿಸುತ್ತಿವೆ. ಹಿಂಸೆ ಬೇರೆ ಬೇರೆ ಮುಖಗಳಲ್ಲಿ ಕಾಡನ್ನು ಸುತ್ತುವರಿದಿವೆ. ಈಶಾನ್ಯ ಭಾರತದಲ್ಲಿ ಈ ಘರ್ಷಣೆ ಉಗ್ರವಾದದ ಹುಟ್ಟಿಗೆ ಕಾರಣವಾಗಿದೆ. ಇಂತಹ ಹೊತ್ತಿನಲ್ಲಿ ಲಡಾಯಿ ಪ್ರಕಾಶನ ಗದಗ ಇವರು ‘ಕಾಡು ನಮ್ಮದು’ ಎಂದು ಹೋರಾಟದ ನಗಾರಿ ಬಾರಿಸಿದ ಕೋಮುರಂ ಭೀಮು ಕುರಿತಂತೆ ಕೃತಿಯನ್ನು ಹೊರತಂತಿದೆ. ವರವರರಾವು ತೆಲುಗಿನಲ್ಲಿ ಬರೆದಿರುವ ‘ಆದಿವಾಸಿ ಹೋರಾಟಗಾರ ಕೋಮುರಂ ಭೀಮು-ವರ್ತಮಾನದ ಮುಖಾಮುಖಿ’ ಕೃತಿಯನ್ನು ಬಿ. ಸುಜ್ಞಾನಮೂರ್ತಿಯವರು ಕನ್ನಡಕ್ಕೆ ಇಳಿಸಿದ್ದಾರೆ. ನಿಜಾಮನ ಸರಕಾರಕ್ಕೆ ಎದುರಾಗಿ, ತಮಗಿರುವ ಅತೀ ಕಡಿಮೆ ಸಂಪನ್ಮೂಲಗಳೊಡನೆ ರಾಜಿಯಿಲ್ಲದೆ ಹೋರಾಟ ಮಾಡಿದ, ಮುಗ್ಧರಾದ ಗೋಂಡಿ ಬುಡಕಟ್ಟಿನವರನ್ನು ಜಾಗೃತಿಗೊಳಿಸಿ ಯುದ್ಧ ಫಿರಂಗಿಗಳಾಗಿ ಪರಿವರ್ತಿಸಿದ, ಭೂಮಿ, ನೀರು, ಸಂಪನ್ಮೂಲಗಳಿಗಾಗಿ ನಡೆಸುವ ಹೋರಾಟ ಅಂತಿಮವಾಗಿ ರಾಜ್ಯಾಧಿಕಾರ ಹೋರಾಟವಾಗಿ ಹೇಗೆ ಬೆಳೆಯಬೇಕಾಗಿರುತ್ತದೆ ಎಂದು ಕೋಮುರಂ ಭೀಮು ಹೋರಾಟ ಚರಿತ್ರೆ ಹೇಳುತ್ತದೆ.
ಹಾಗೆ ನೋಡಿದರೆ ವರವರರಾವು ಅವರು ಇದನ್ನು ಪ್ರತ್ಯೇಕ ಲೇಖನವಾಗಿ ಬರೆದಿರುವುದಲ್ಲ. ‘ಕೋಮುರಂ ಭೀಮು’ ತೆಲುಗಿನ ಮಹತ್ವ ಪೂರ್ಣ ಜಾರಿತ್ರಿಕ ಕಾದಂಬರಿ. ಇದನ್ನು ಬರೆದವರು ಸಾಹು ಮತ್ತು ಅಲ್ಲಂ ರಾಜಯ್ಯ ಎಂಬ ಹೋರಾಟಗಾರರು. ಈ ಕಾದಂಬರಿಗೆ ವರವರರಾವು ಅವರು ಅಧ್ಯಯನ ಶೀಲ ಸುದೀರ್ಘ ಮುನ್ನುಡಿಯನ್ನು ಬರೆದಿದ್ದಾರೆ. ಕಾದಂಬರಿಯಾಚೆಗೆ ಆ ಮುನ್ನುಡಿ ಸ್ವತಂತ್ರ ಲೇಖನವಾಗಿಯೂ ಮುಂದೆ ಗುರುತಿಸಲ್ಪಟ್ಟಿತು. ಆ ಮುನ್ನುಡಿಯ ಅನುವಾದ ಇಲ್ಲಿದೆ. ಕೋಮುರ ಭೀಮು ಹೋರಾಟವನ್ನು ಇಟ್ಟುಕೊಂಡು, ವರ್ತಮಾನದ ಹೋರಾಟಗಳ ಸೋಲು ಗೆಲುವುಗಳನ್ನು ಲೇಖಕರು ವಿಶ್ಲೇಷಿಸುತ್ತಾರೆ. ವರ್ತಮಾನದಲ್ಲಿ ತಳಸ್ತರದ ಶೋಷಿತ ಜನರನ್ನು ಒಳಗೊಳ್ಳದ ಹೋರಾಟಗಳು ಹೇಗೆ ಬೇಗ ನೆಲಕಚ್ಚುತ್ತವೆ ಮತ್ತು ಈ ನಿಟ್ಟಿನಲ್ಲಿ ಕೋಮುರ ಭೀಮು ಹೋರಾಟದಿಂದ ನಾವು ಕಲಿಯಬೇಕಾದುದೇನು ಎನ್ನುವುದನ್ನು ಲೇಖಕರು ವಿವರಿಸುತ್ತಾರೆ.112 ಪುಟಗಳ ಈ ಕೃತಿಯ ಮುಖಬೆಲೆ80 ರೂಪಾಯಿ.