ಸ್ಥಾವರಕ್ಕಳಿವುಂಟು
ಉಳ್ಳವರು ಶಿವಾಲಯ ಮಾಡಿಹರು
ನಾನೇನ ಮಾಡುವೆ ಬಡವನಯ್ಯ.
ಎನ್ನ ಕಾಲೇ ಕಂಬ, ದೇಹವೆ ದೇಗುಲ
ಶಿರ ಹೊನ್ನಕಲಶವಯ್ಯ.
ಕೂಡಲಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
- ಬಸವಣ್ಣ
ಶ್ರೀಮಂತರು ಶಿವಾಲಯಗಳನ್ನು ಕಟ್ಟಿಸಿದ್ದಾರೆ. ಏಕೆಂದರೆ ಅವರಿಗೆ ಶಿವಾಲಯವೆಂಬುದು ತಮ್ಮ ಸಂಪತ್ತನ್ನು ಇಡುವ ಸ್ಥಾನವಾಗಿದೆ. ನಾನು ಆ ಶಿವಾಲಯವನ್ನು ತೆಗೆದುಕೊಂಡು ಏನು ಮಾಡಲಿ? ಏಕೆಂದರೆ ನನ್ನ ಬಳಿ ನನ್ನದೇ ಆದ ಸಂಪತ್ತಿಲ್ಲ. ಇಂದಿಂಗೆ ನಾಳಿಂಗೆ ಎಂದೊಡೆ ನಿಮ್ಮಾಣೆ ನಿಮ್ಮ ಪ್ರಥಮರಾಣೆ ಕೂಡಲಸಂಗಮದೇವಾ ಎಂದು ಸರ್ವಸ್ವವನ್ನು ಶಿವನಿಧಿಗೆ ಅರ್ಪಿಸಿ, ಆ ಸಂಪತ್ತು ಶರಣಸಂಕುಲಕ್ಕೆ ಸೇರುವಂತೆ ಮಾಡಿದ್ದೇನೆ. ನಾನು ಸ್ವಂತಕ್ಕೆ ಬಡವನಾಗಿದ್ದೇನೆ. ಆದರೆ ಶರಣಸಂಕುಲ ಶ್ರೀಮಂತವಾಗುವುದಕ್ಕೆ ಎಲ್ಲ ಶರಣರಂತೆ ತನು ಮನ ಧನ ಅರ್ಪಿಸಿದ್ದೇನೆ. ಹೀಗೆ ಬಡವನಾಗಿದ್ದರಿಂದ ನನಗೆ ಶಿವಾಲಯದ ಅವಶ್ಯಕತೆ ಇಲ್ಲ ಎಂದು ಬಸವಣ್ಣನವರು ಈ ವಚನದಲ್ಲಿ ಸೂಚಿಸಿದ್ದಾರೆ.
ಇನ್ನೊಂದು ಕಾರಣಕ್ಕೆ ನಾನು ದೇವಾಲಯಗಳ ನಿರಾಕರಣೆ ಮಾಡುತ್ತೇನೆ. ನನ್ನ ದೇಹವೇ ಶಿವಾಲಯವಾಗಿದೆ. ಸಕಲ ಜೀವಾತ್ಮರಲ್ಲಿ ಇರುವಂತೆ ನನ್ನೊಳಗೂ ಶಿವನಿರುವ ಕಾರಣ ನನ್ನ ಕಾಲೇ ದೇಹವೆಂಬ ದೇಗುಲದ ಕಂಬಗಳಾಗಿವೆ. ಶಿರವು ಹೊನ್ನ ಕಲಶವಾಗಿದೆ.
ದೇವಾಲಯಗಳು ಉಳಿಯುವುದಿಲ್ಲ. ದೇಹವೆಂಬ ದೇವಾಲಯವೂ ಉಳಿಯು ವುದಿಲ್ಲ. ಏಕೆಂದರೆ ಸ್ಥಾವರಕ್ಕೆ ಅಳಿವುಂಟು. ಕಣ್ಣಿಗೆ ಕಾಣುವುದೆಲ್ಲವೂ ಸ್ಥಾವರವೇ ಆಗಿದೆ. ತಿರುಗುವ ಪೃಥ್ವಿಯೂ ಸ್ಥಾವರವೇ, ಬೆಳಕು ಕೊಡುವ ಸೂರ್ಯನೂ ಸ್ಥಾವರವೇ, ಚಲನಶೀಲವಾದವುಗಳು ಕೂಡ ಸ್ಥಾವರವೇ. ಏಕೆಂದರೆ ನಿಜವಾದ ಅರ್ಥದಲ್ಲಿ ಅವು ಚಲಿಸುವುದಿಲ್ಲ. ಅವುಗಳೊಳಗಿನ ಜಂಗಮಶಕ್ತಿಯೇ ಚಲನಶಕ್ತಿಯಾಗಿರುವುದರಿಂದ ಅವುಗಳ ಚಲನೆಗೆ ಆ ಜಂಗಮಶಕ್ತಿ ಕಾರಣವಾಗಿರುತ್ತದೆ. ಆ ಜಂಗಮಶಕ್ತಿಯೇ ದೇವರು. ಆದ್ದರಿಂದ ಜಂಗಮಕ್ಕಳಿವಿಲ್ಲ. ಕಣ್ಣಿಗೆ ಕಾಣವುದೆಲ್ಲ ನಾಶವಾಗುತ್ತದೆ. ಏಕೆಂದರೆ ಅದು ಸ್ಥಾವರವಾಗಿರುತ್ತದೆ. ಒಳಗಣ್ಣಿಗೆ ಮಾತ್ರ ಕಾಣುವಂಥದ್ದು ನಾಶವಾಗುವುದಿಲ್ಲ. ಏಕೆಂದರೆ ಅದು ಜಂಗಮವಾಗಿರುತ್ತದೆ ಎಂದು ಬಸವಣ್ಣನವರು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಚೈತನ್ಯದಿಂದ ಪಂಚಮಹಾಭೂತಗಳು ಹುಟ್ಟಿವೆ. ಇಡೀ ಭೂಲೋಕ, ಗ್ರಹ ಮತ್ತು ನಕ್ಷತ್ರಲೋಕ ಹಾಗೂ ವಿಶ್ವದಲ್ಲಿ ಕಾಣುವ ಸಕಲ ವಸ್ತುಗಳು ಪಂಚಮಹಾಭೂತಗಳಿಂದ ಹುಟ್ಟಿವೆ. ಹೀಗೆ ವಸ್ತುವಿನ ಹುಟ್ಟಿಗೆ ಕಾರಣವಾದ ಆ ಚೈತನ್ಯವೇ ಜಂಗಮ. ಆ ಜಂಗಮದಿಂದ ಹುಟ್ಟಿದ ಪಂಚಮಹಾಭೂತಗಳು ಹಾಗೂ ಆ ಪಂಚಮಹಾಭೂತಗಳಿಂದ ಹುಟ್ಟಿದ ವಸ್ತುವಿಶ್ವವೆಲ್ಲ ಸ್ಥಾವರ. ಜಂಗಮದಿಂದಲೇ ಹುಟ್ಟಿದ ಸ್ಥಾವರದೊಳಗೆ ಜಂಗಮವು ಶಕ್ತಿರೂಪದಲ್ಲಿದೆ. ಹೀಗಾಗಿ ಸ್ಥಾವರವೆಂಬುದು ಜಂಗಮದಿಂದ ಹುಟ್ಟಿದೆ ಮತ್ತು ಅದರ ಗರ್ಭದೊಳಗೆ ಜಂಗಮವು ಚೈತನ್ಯರೂಪದಲ್ಲಿದೆ. ಸ್ಥಾವರವು ಜಂಗಮದಿಂದ ಹುಟ್ಟಿದ ಕಾರಣ ಅದು ಅಳಿದ ನಂತರ ಜಂಗಮವನ್ನೇ ಸೇರುವುದು. ಜಂಗಮಕ್ಕೆ ಅಳಿವಿಲ್ಲ. ಕೊನೆಯಲ್ಲಿ ಸ್ಥಾವರವೆಲ್ಲ ಅಳಿದು ತನ್ನ ಮೂಲರೂಪವಾದ ಮತ್ತು ತನ್ನೊಳಗೇ ಇರುವ ಜಂಗಮವನ್ನು ಸೇರುವುದು. ಹೀಗೆ ಜಂಗಮ(ಚೈತನ್ಯ)ದಿಂದ ಹುಟ್ಟಿದ ಸ್ಥಾವರ (ವಿಶ್ವ) ಕೊನೆಯಲ್ಲಿ ಅಳಿದು ಜಂಗಮವನ್ನೇ ಸೇರುವುದು ಎಂದು ಬಸವಣ್ಣನವರು ವಿಶ್ವದ ರಹಸ್ಯವನ್ನೇ ಈ ವಚನದಲ್ಲಿ ತೆರೆದಿಟ್ಟಿದ್ದಾರೆ. ಈ ವಚನದಲ್ಲಿ ಜಂಗಮವೇ ಚೈತನ್ಯ; ಚೈತನ್ಯವೇ ಬಯಲು; ಬಯಲೇ ಶೂನ್ಯ. ಶೂನ್ಯವು ಎಲ್ಲವನ್ನೂ ಒಳಗೊಂಡಿರುವಂಥದ್ದು, ಪರಿಪೂರ್ಣವಾದುದು ಮತ್ತು ಅಳಿವಿಲ್ಲದ್ದು. ವಿಶ್ವದ ಪ್ರತೀ ಕಣದಲ್ಲಿಯೂ ಚೈತನ್ಯರೂಪದಲ್ಲಿ ಇರುವಂಥದ್ದು. ಕೊನೆಯಲ್ಲಿ ಇಡೀ ವಿಶ್ವವನ್ನೇ ಬಯಲು ಮಾಡಿ ಚೈತನ್ಯಮಯವಾಗಿಸುವಂಥದ್ದು.
ಬಸವಣ್ಣನವರು ಪರವಸ್ತುವಾದ ಚೈತನ್ಯವನ್ನು ಮತ್ತು ವಸ್ತುವಾದ ವಿಶ್ವವನ್ನು ನೋಡುವ ಕ್ರಮ ಇದಾಗಿದೆ. ಆ ಪರವಸ್ತುವನ್ನೇ ಬ್ರಹ್ಮವೆಂದು ಕರೆಯುತ್ತಾರೆ. ವಸ್ತುವಾದ ವಿಶ್ವವನ್ನು ಬ್ರಹ್ಮಾಂಡವೆಂದು ಕರೆಯುತ್ತಾರೆ. ಈ ಬ್ರಹ್ಮಾಂಡದ ಪರಿಕಲ್ಪನೆಯಲ್ಲೇ ದೊಡ್ಡ ಮೋಸ ಅಡಗಿದೆ. ‘ಜಗತ್ತು ಸುಳ್ಳು ಬ್ರಹ್ಮ ಸತ್ಯ’ ಎಂದು ಹೇಳುವವರು ಬದುಕಿನ ಎಲ್ಲ ಹೋರಾಟಗಳನ್ನು ಕಡೆಗಣಿಸುತ್ತಾರೆ. ಈ ಜಗತ್ತು ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದದಿಂದ ಕೂಡಿದೆ. ಎಲ್ಲ ರೀತಿಯ ಅಸಮಾನತೆಯಿಂದಾಗಿ ಮಾನವ ಕುಲ ತತ್ತರಿಸಿದೆ. ಶೋಷಣೆ ನಿರಂತರವಾಗಿ ಸಾಗಿದೆ. ಮಾನವನ ಐಹಿಕ ದುರಾಸೆಯಿಂದಾಗಿ ಪಶು ಪಕ್ಷಿ ಮೊದಲು ಮಾಡಿ ಸಕಲ ಜೀವಾತ್ಮರು ಸಂಕಷ್ಟಕ್ಕೀಡಾಗಿದ್ದಾರೆ. ‘ಬ್ರಹ್ಮ ಸತ್ಯ ಬ್ರಹ್ಮಾಂಡ ಸುಳ್ಳು’ ಎಂದು ವಾದಿಸುವವರಿಗೆ ಈ ವಾಸ್ತವದ ದರ್ಶನವಾಗುವುದಿಲ್ಲ. ಬಸವಣ್ಣನವರು ಈ ಅದ್ವೈತವನ್ನು ವಿರೋಧಿಸಿ ತಮ್ಮದೇ ಆದ ಅದ್ವೈತವನ್ನು ಪ್ರತಿಪಾದಿಸುತ್ತಾರೆ. ‘ಈ ಜಗತ್ತು ಸುಳ್ಳಲ್ಲ ವಾಸ್ತವ’ ಎಂಬ ಸತ್ಯವನ್ನು ಬಸವಣ್ಣನವರು ಸಾರಿದ್ದಾರೆ. ‘ಬ್ರಹ್ಮ ಸತ್ಯ ಆದರೆ ಬ್ರಹ್ಮಾಂಡ ವಾಸ್ತವ’ ಎಂಬುದೇ ಬಸವಾದ್ವೈತ. ಹೀಗೆ ಶಂಕರಾದ್ವೈತವನ್ನು ಬಸವಾದ್ವೈತ ಅಲ್ಲಗಳೆಯುತ್ತದೆ.
ಬ್ರಹ್ಮಾಂಡದ ವಾಸ್ತವಕ್ಕೆ ಕಾಲಮಿತಿ ಇದೆ. ಆದ್ದರಿಂದ ಅದಕ್ಕೆ ಅಳಿವಿದೆ. ಹುಟ್ಟಿದ್ದು ಸಾಯಲೇಬೇಕು. ಆದರೆ ಅದು ಸಾಯುವವರೆಗೆ ವಾಸ್ತವವಾಗಿ ಇರುತ್ತದೆ. ಬ್ರಹ್ಮವು ಹುಟ್ಟಿಲ್ಲ ಹೀಗಾಗಿ ಅದು ಸಾಯುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಬ್ರಹ್ಮವೆನಿಸಿದ ಜಂಗಮಕ್ಕೆ ಅಳಿವಿಲ್ಲ. ಆದರೆ ಬ್ರಹ್ಮಾಂಡವೆನಿಸಿದ ಸ್ಥಾವರವು ಶಂಕರಾಚಾರ್ಯರು ಹೇಳುವಂತೆ ಸುಳ್ಳಲ್ಲ, ಬಸವಣ್ಣನವರು ಹೇಳುವಂತೆ ವಾಸ್ತವ. ಈ ವಾಸ್ತವಕ್ಕೆ ಕಾಲದ ಕಟ್ಟಳೆಯುಂಟು. ಬ್ರಹ್ಮಾಂಡದ ಪ್ರತಿಯೊಂದಕ್ಕೆ ಕಾಲಮಿತಿಯುಂಟು. ಇದೇ ವಾಸ್ತವ. ಈ ವಾಸ್ತವ ಜಗತ್ತಿನಲ್ಲಿರುವ ಸಕಲಜೀವಾತ್ಮರ ಬದುಕು ನೆಮ್ಮದಿಯಿಂದ ಸಾಗಬೇಕೆಂಬುದೇ ಬಸವಣ್ಣನವರ ಆಶಯವಾಗಿದೆ.
ಬಸವಣ್ಣನವರು ಈ ವಚನದಲ್ಲಿ ‘ಉಳ್ಳವರು’ ಮತ್ತು ‘ಬಡವರು’ ಪದಗಳನ್ನು ವಿಶಿಷ್ಟ ರೀತಿಯಲ್ಲಿ ಬಳಸಿದ್ದಾರೆ. ‘ಉಳ್ಳವರು’ ಎಂದರೆ ಸಕಲಜೀವಾತ್ಮರ ಪರಿವೇ ಇಲ್ಲದೆ ಬದುಕುವವರು. ಸಮಾಜವನ್ನು ಮತ್ತು ನಿಸರ್ಗವನ್ನು ಬಡವಾಗಿಸುತ್ತ ತಾವು ಮಾತ್ರ ಎಲ್ಲ ಸಂಪತ್ತಿನ ಒಡೆಯರಾಗಬೇಕೆನ್ನುವವರು. ಬಡವರು ಎಂದರೆ ಸಕಲಜೀವಾತ್ಮರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಕಾಯಕದಲ್ಲಿ ನಿರತರಾಗಿ ದಾಸೋಹಂಭಾವದಿಂದ ಬದುಕುವವರು. ತಾವು ಗಳಿಸಿದ್ದನ್ನು ದೇವರ ಪ್ರಸಾದವೆಂದು ವಿನಮ್ರಭಾವದಿಂದ ಸ್ವೀಕರಿಸುವವರು. ಹಾಗೆ ಸ್ವೀಕರಿಸಿದ್ದನ್ನು ಸಮಾಜವೆಂಬ ದೇವರಿಗಾಗಿ ದಾಸೋಹ ರೂಪದಲ್ಲಿ ವಿನಿಯೋಗಿಸುವವರು ಮತ್ತು ತಮ್ಮ ಸ್ವಾವಲಂಬಿ ಬದುಕಿಗಾಗಿ ಬಳಸುವವರು. ವ್ಯಕ್ತಿಗತವಾಗಿ ಸಂಪತ್ತಿನ ಶೇಖರಣೆ ಮಾಡಲು ಹೇಸಿಕೊಳ್ಳುವವರು. ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದವಿಲ್ಲದ ಶರಣಸಂಕುಲದ ಏಳ್ಗೆಗಾಗಿ ಶಿವನಿಧಿಯಂಥ ಸಾಮಾಜಿಕ ಸಂಪತ್ತನ್ನು ಕೂಡಿಹಾಕಲು ಶ್ರಮಿಸುವವರು. ಹೀಗೆ ಕಲ್ಯಾಣ ರಾಜ್ಯದ ಪ್ರಧಾನಿ ಬಸವಣ್ಣ ಹಾಗೂ ಇತರ ಶರಣರು ಬಡವರಾಗಿದ್ದರು.
***