varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂಬ ಹೊಸ ಜುಮ್ಲಾ

ವಾರ್ತಾ ಭಾರತಿ : 2 Nov, 2017
ರವೀಶ್ ಕುಮಾರ್, ಕನ್ನಡಕ್ಕೆ :ಆಬಿದ ಬಾನು

ವಿಶ್ವವಿದ್ಯಾನಿಲಯವೊಂದರಲ್ಲಿ ವೈಫೈ ಸೌಲಭ್ಯ ನೀಡುವಾಗ ಅದನ್ನು ವಿಶ್ವಗುರು ಆಗುವ ಕನಸಿನೊಂದಿಗೆ ಜೋಡಿಸಲಾಗುತ್ತದೆ. ವೈಫೈ ಸಂಪರ್ಕದಿಂದ ಒಂದು ದೇಶ ವಿಶ್ವ ಗುರು ಆಗಲು ಸಾಧ್ಯವಿಲ್ಲ ಎಂದು ತಿಳಿದಿದ್ದೂ ಹೆಚ್ಚಿನ ಜನರು ಭಾರತ ವಿಶ್ವಗುರು ಆಗುತ್ತಿದೆ ಎಂಬ ಭ್ರಮೆಯಲ್ಲೇ ಇರುತ್ತಾರೆ. ಭಾರತವನ್ನು ವಿಶ್ವಗುರು ಮಾಡುವ ಈ ಕನಸು ಬೇರೇನೂ ಅಲ್ಲ, ಇದು ಭಾರತೀಯರನ್ನು ವಂಚಿಸುವ ಒಂದು ಹೊಸ ರಾಜಕೀಯ ವರಸೆ (ಜುಮ್ಲಾ) ಅಷ್ಟೇ.   

ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರತಿ ರಾಜಕೀಯ ಭಾಷಣದಲ್ಲೂ ಭಾರತವನ್ನು ವಿಶ್ವಗುರು ಮಾಡುವ ವಿಷಯ ಮಂಡನೆಯಾಗುತ್ತಲೇ ಬಂದಿದೆ. ಜ್ಞಾನಕ್ಕೆ ಸಂಬಂಧಿತ ಯಾವುದೇ ಯೋಜನೆಯ ವಿಷಯ ಮಾತನಾಡುವಾಗ ಭಾರತವನ್ನು ವಿಶ್ವಗುರು ಮಾಡುವ ಮಾತು ಬಂದೇ ಬರುತ್ತದೆ. ವಿಶ್ವವಿದ್ಯಾನಿಲಯವೊಂದರಲ್ಲಿ ಪ್ರಬಂಧ ಸ್ಪರ್ಧೆ ನಡೆದರೆ ಅಥವಾ ಎಲ್ಲಾದರೂ ವೈಫೈ ಸೌಲಭ್ಯ ನೀಡುವಾಗಲೂ ಅದನ್ನು ವಿಶ್ವಗುರು ಆಗುವ ಕನಸಿನೊಂದಿಗೆ ಜೋಡಿಸಲಾಗುತ್ತದೆ. ವೈಫೈ ಸಂಪರ್ಕದಿಂದ ಒಂದು ದೇಶ ವಿಶ್ವ ಗುರು ಆಗಲು ಸಾಧ್ಯವಿಲ್ಲ ಎಂದು ತಿಳಿದಿದ್ದೂ ಹೆಚ್ಚಿನ ಜನರು ಭಾರತ ವಿಶ್ವಗುರು ಆಗುತ್ತಿದೆ ಎಂಬ ಭ್ರಮೆಯಲ್ಲೇ ಇರುತ್ತಾರೆ. ಭಾರತವನ್ನು ವಿಶ್ವಗುರು ಮಾಡುವ ಈ ಕನಸು ಬೇರೇನೂ ಅಲ್ಲ, ಇದು ಭಾರತೀಯರನ್ನು ವಂಚಿಸುವ ಒಂದು ಹೊಸ ರಾಜಕೀಯ ವರಸೆ (ಜುಮ್ಲಾ) ಅಷ್ಟೇ. ಗುರುವಿನ ಸಂಬಂಧ ಇರುವುದು ಜ್ಞಾನದೊಂದಿಗೆ. ನಮ್ಮ ದೇಶದಲ್ಲಿ ಇಂದು ಜ್ಞಾನ ನಿರ್ಮಾಣದ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ. ಇದು ಕೇವಲ ಒಂದು ರಾಜ್ಯದಲ್ಲಿ ಗಂಭೀರವಾಗಿರುವ ಸಮಸ್ಯೆ ಅಲ್ಲ, ದೇಶಾದ್ಯಂತ ಇರುವ ಪರಿಸ್ಥಿತಿ.

ಭಾರತದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಬೋಧಕರ ಹುದ್ದೆಗಳ ಪೈಕಿ ಮೂವತ್ತರಿಂದ ಎಪ್ಪತ್ತು ಶೇಕಡಾ ಹುದ್ದೆಗಳು ಖಾಲಿ ಇವೆ. ಭಾರತದಲ್ಲಿ ಕಾಲೇಜಿನಲ್ಲಿ ಪಾಠ ಮಾಡುವವರಿಗೆ ಪ್ರಾಧ್ಯಾಪಕ (ಪ್ರೊಫೆಸರ್) ಎಂದೇ ಕರೆಯಲಾಗುತ್ತದೆ. ಆದ್ದರಿಂದ ನಾನೂ ಅವರನ್ನು ಪ್ರಾಧ್ಯಾಪಕರು ಎಂದೇ ಕರೆಯುತ್ತೇನೆ. ಅಂದರೆ, ನಮ್ಮ ವಿವಿಗಳಲ್ಲಿ ಕೋಟಿಗಟ್ಟಲೆ ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಿದ್ದಾರೆ, ಆದರೆ ಅವರಿಗೆ ನಾವು ಕಲಿಸುತ್ತಿಲ್ಲ. ರಾಜಧಾನಿ ದಿಲ್ಲಿಯಿಂದ ಪ್ರಾರಂಭಿಸಿ ದೂರದೂರದ ಊರುಗಳ ಕಾಲೇಜುಗಳಲ್ಲೂ ಸಾಕಷ್ಟು ಶಿಕ್ಷಕರಿಲ್ಲ. ಹಾಗಾದರೆ, ಈ ಕಾಲೇಜುಗಳು ಶುಲ್ಕ ವಸೂಲಿ ಮಾಡಿದ್ದು ಯಾವುದಕ್ಕೆ? ಒಬ್ಬ ಶಿಕ್ಷಕನಿಗೆ 40 ವಿದ್ಯಾರ್ಥಿಗಳು ಎಂಬುದು ಮಾದರಿ. ಆದರೆ ಕೆಲವು ಕಾಲೇಜುಗಳಲ್ಲಿ ಒಬ್ಬೊಬ್ಬ ಶಿಕ್ಷಕರ ಮೇಲೆ 300 ರಿಂದ 1,200 ವಿದ್ಯಾರ್ಥಿಗಳ ಹೊರೆ ಇದೆ. ಬಿಹಾರದ ಒಂದು ಕಾಲೇಜಲ್ಲಿ ಒಬ್ಬ ಶಿಕ್ಷಕರಿಗೆ 1,200 ವಿದ್ಯಾರ್ಥಿಗಳಿದ್ದಾರೆ! ಪ್ರತೀ ಶಿಕ್ಷಕನಿಗೆ 300 ರಿಂದ 500 ವಿದ್ಯಾರ್ಥಿಗಳ ಅನುಪಾತ ಸಾಮಾನ್ಯವಾಗಿಬಿಟ್ಟಿದೆ. ಮಾಧ್ಯಮಗಳೆದುರು ಬಾಯಿ ಬಿಟ್ಟರೆ ಕ್ರಮ ಎದುರಿಸಬೇಕಾಗುತ್ತೆ ಎಂಬ ಭಯದಿಂದ ಶಿಕ್ಷಕರೂ ಎಲ್ಲ ಮಾಹಿತಿ ಬಹಿರಂಗಪಡಿಸುವುದಿಲ್ಲ. ತಾವು ಎಲ್ಲ ವಿಷಯಗಳನ್ನು ಕಲಿಸುತ್ತೇವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ, ಒಂದು ವಿಷಯದಲ್ಲಿ ಹಲವು ಪೇಪರ್‌ಗಳಿರುತ್ತವೆ. ಹಾಗಾದರೆ, ಭಾರತದ ಒಬ್ಬನೇ ಪ್ರೊಫೆಸರ್ ಎಂಟು ಪ್ರೊಫೆಸರ್‌ಗಳ ಬದಲಿಗೆ ಪ್ರತಿದಿನ ಕ್ಲಾಸ್ ತೆಗೆದುಕೊಳ್ಳಲು ಸಾಧ್ಯವೇ?

ಕಳೆದ ಇಪ್ಪತ್ತು ವರ್ಷಗಳಿಂದ ಕಾಲೇಜುಗಳಲ್ಲಿ ನಾವು ಗುಜರಿ ಸಂಗ್ರಹಿಸುತ್ತಿದ್ದೇವೆ. ಶಿಕ್ಷಣ ಸಚಿವರು ಹಾಗೂ ಶಿಕ್ಷಣ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಜನತೆಗೆ ತೋರಿಸಲು ದಾಖಲಾತಿ ಪ್ರಕ್ರಿಯೆ ನಿಯಮಿತವಾಗಿ ನಡೆಯುತ್ತಿರುತ್ತದೆ. ಆದರೆ, ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡಿ ಉದ್ಯೋಗಕ್ಕೆ ಸಜ್ಜುಗೊಳಿಸದೇ ಇರುವ ಯೋಜನೆಯೇ ಇಲ್ಲಿ ಜಾರಿಯಲ್ಲಿದೆ. ಕೊನೆಗೆ ಈ ವಿದ್ಯಾರ್ಥಿಗಳನ್ನು ಸರಕಾರದ ಸ್ಕಿಲ್ ಇಂಡಿಯಾದಂತಹ ಕಾಗದದಲ್ಲಿ ಮಾತ್ರ ಇರುವ ಕಾರ್ಯಕ್ರಮಗಳ ಗ್ರಾಹಕರಾಗಲು ಕಾಲೇಜುಗಳು ಕಳಿಸುತ್ತವೆ. ಪ್ರಾಧ್ಯಾಪಕರಿಗಾಗಿ ಮೂರು ಮೂರು ವರ್ಷ ಕಾಯುವ ವಿದ್ಯಾರ್ಥಿಗಳು ಕೊನೆಗೆ ಕಾಲೇಜಿಗೆ ಬರುವುದನ್ನೇ ಬಿಟ್ಟು ಬಿಡುತ್ತಾರೆ. ಅದೆಷ್ಟೋ ಕಾಲೇಜುಗಳು ಸರಿಯಾಗಿ ತೆರೆಯುವುದೇ ಇಲ್ಲ. ಏಕೆಂದರೆ ಅಲ್ಲಿ ಪೂರ್ಣಕಾಲಿಕ ಪ್ರಾಂಶುಪಾಲರೇ ಇರುವುದಿಲ್ಲ. ಇದು ಕೇವಲ ಒಂದೆರಡು ಕಾಲೇಜುಗಳ ವ್ಯಥೆಯ ಕತೆಯಲ್ಲ. ಇಂತಹ ಅದೆಷ್ಟೋ ಸಾವಿರಾರು ಕಾಲೇಜುಗಳು ನಮ್ಮ ದೇಶದಲ್ಲಿವೆ. ಆದರೆ ಅವುಗಳತ್ತ ಯಾರೂ ನೋಡುವುದೇ ಇಲ್ಲ.

ಈ ಇಪ್ಪತ್ತು ವರ್ಷಗಳಲ್ಲಿ ವಿವಿಗಳನ್ನು ನಾಶಪಡಿಸಿ ರುವುದರಿಂದ ಸಾಮಾಜಿಕ, ರಾಜಕೀಯ ಪರಿಣಾಮ ಕೂಡ ಆಗಿದೆ. ಜ್ಞಾನವನ್ನು ಗುರುತಿಸುವ ಸಾಮಾಜಿಕ ಶಕ್ತಿ ಈಗ ದುರ್ಬಲವಾಗಿದೆ. ಮಾತುಕತೆಗಳಲ್ಲಿ ಸಂದರ್ಭಕ್ಕೆ ತಕ್ಕ ಸಹನಶೀಲತೆ ಈಗ ಮಾಯವಾಗಿದೆ. ಎಲ್ಲರಿಗೂ ಒಂದೇ ವಾಕ್ಯದಲ್ಲಿ ಘೋಷಣೆ ಬೇಕಾಗಿದೆ. ಅದು ಸುಳ್ಳಾದರೂ ಪರವಾಗಿಲ್ಲ. ಕೋಟಿಗಟ್ಟಲೆ ಯುವಕರು ಓದದೆಯೇ ಪಾಸ್ ಆಗುತ್ತಾರೆ ಹಾಗೂ ಜೀವನ ಸಾಗಿಸುತ್ತಾರೆ ಎಂದಾದರೆ ಒಂದು ಸುಳ್ಳು ವಾಕ್ಯ ಅವರನ್ನೇನೂ ತುಂಬಾ ಕೆಡಿಸುವುದಿಲ್ಲ. ಎರಡೂ ಸಂದರ್ಭಗಳಲ್ಲಿ ನಷ್ಟ ಆ ಯುವಕರಿಗೇ ಎಂಬುದು ಬೇರೆ ಮಾತು. ಆ ಯುವಕರನ್ನು ಈ ಹಿಂದೆಯೂ ವಂಚಿಸಲಾಯಿತು, ಈಗಲೂ ವಂಚಿಸಲಾಗುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಭಾರತ ಒಂದು ದುರ್ಬಲ ಸಮಾಜವನ್ನು ನಿರ್ಮಾಣ ಮಾಡಿದೆ. ಆ ಸಮಾಜದಲ್ಲಿ ಪ್ರಜಾಪ್ರಭುತ್ವದ ವೌಲ್ಯಗಳ ಕುರಿತು ಗೌರವ ಕಡಿಮೆಯಾಗಿದೆ. ಆ ಯುವಕರ ಅನುಭವದಲ್ಲಿ ನೋಡಿದ್ದು ಹಾಗೂ ಕಲಿತಿದ್ದು ಇದನ್ನೇ. ತಾವು ಮೂರು, ಐದು ವರ್ಷ ಪ್ರಾಧ್ಯಾಪಕರೇ ಇಲ್ಲದೆ ವಿವಿ ವ್ಯವಸ್ಥೆಯನ್ನು ನಂಬಿ ಇದ್ದು ಬಂದಿರುವಾಗ ಕೆಲಸ ಮಾಡದ, ಸುಳ್ಳು ಹೇಳುವ ನಾಯಕರ ಮೇಲೆ ತಾವು ಏಕೆ ನಂಬಿಕೆ ಇಡಬಾರದು ಎಂಬುದು ಅವರ ಪ್ರಶ್ನೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ವಿವಿಗಳನ್ನು ಹಾಳು ಮಾಡಿ ಹಾಕುತ್ತಿರುವಾಗ ದೇಶದಲ್ಲಿ ಒಂದೇ ಒಂದು ಗಮನಾರ್ಹ ವಿದ್ಯಾರ್ಥಿ ಆಂದೋಲನ ಮೂಡಿ ಬರಲಿಲ್ಲ ಎಂಬುದು ಆಶ್ಚರ್ಯದ ವಿಷಯವಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ಸರಿಯಾದ ತಿಳುವಳಿಕೆಯೇ ಇಲ್ಲಿ ಬೆಳೆಯಲಿಲ್ಲ. ಯಾವುದಾದರೂ ನಾಯಕನೊಬ್ಬನ ಬೆಂಬಲಿಗರಾಗಿ ಮುಖವಾಡ ಅಥವಾ ಟೋಪಿ ಧರಿಸಿ ಬೀದಿಗಿಳಿಯುವುದಕ್ಕಷ್ಟೇ ವಿದ್ಯಾರ್ಥಿಗಳು ಸೀಮಿತರಾಗಿದ್ದಾರೆ. ತಮ್ಮ ರಾಜಕೀಯದಲ್ಲೇ ವ್ಯಸ್ತರಾದ ಶಿಕ್ಷಕರೂ ಈ ಬಗ್ಗೆ ಗಮನ ಹರಿಸಲಿಲ್ಲ. ಅಲ್ಲಲ್ಲಿ ಅಲ್ಪಸ್ವಲ್ಪ ವಿದ್ಯಾರ್ಥಿ ನಾಯಕರು ಬೆಳೆದು ಬಂದರೂ ಅವರಲ್ಲಿ ಹಿಂಬಾಲಕರಾದವರು ಗೆದ್ದರು, ದಿಟ್ಟರು ಕೆಟ್ಟರು. ಕೆಟ್ಟ ಪ್ರಾಧ್ಯಾಪಕರಿಂದಾಗಿ ಯುವಪೀಳಿಗೆಯಲ್ಲಿ ಜ್ಞಾನಾರ್ಜನೆಯ ಆಕರ್ಷಣೆಯೇ ಕಡಿಮೆಯಾಯಿತು. ಗಹನವಾದ ಅಧ್ಯಯನ ಹಾಗೂ ವಿಚಾರ ವಿಮರ್ಶೆಯ ಪ್ರಕ್ರಿಯೆ ನಮ್ಮ ಸಂಸ್ಥೆಗಳಿಂದ ಪ್ರಾರಂಭವಾಗಿ ನಮ್ಮ ವೈಯಕ್ತಿಕ ಜೀವನದಲ್ಲಿ ಮಾಯವಾಗಿಬಿಟ್ಟಿದೆ.

ಇದೇ ಕಾರಣದಿಂದಾಗಿ ಭಾರತದ ರಾಜಕಾರಣದಲ್ಲಿ ಯುವಜನರ ಭಾಗೀದಾರಿಕೆಯಿಂದ ಯಾವುದೇ ದೊಡ್ಡ ಗುಣಾತ್ಮಕ ಪರಿವರ್ತನೆ ಆಗಲಿಲ್ಲ. ಸ್ವತಃ ಅವರ ಜೀವನದಲ್ಲೇ ಗುಣಾತ್ಮಕ ಪರಿವರ್ತನೆ ಬರದಿದ್ದರೆ ಅವರು ರಾಜಕೀಯದಲ್ಲಿ ಪರಿವರ್ತನೆ ತರುವುದಾದರೂ ಹೇಗೆ? ಹಾಗಾಗಿ ಇವತ್ತಿನ ಯುವಕ ಸರ್ದಾರ್ ಪಟೇಲರನ್ನು ಅವರ ವಿಚಾರಗಳಿಂದ ತಿಳಿದುಕೊಳ್ಳುವ ಬದಲು ಅವರ ಹೆಸರಲ್ಲಿ ನಿರ್ಮಾಣವಾಗಿರುವ ಸಾವಿರಾರು ಕೋಟಿ ವೆಚ್ಚದ ಪ್ರತಿಮೆಗಳ ಮೂಲಕ ತಿಳಿದುಕೊಳ್ಳಲು ಬಯಸುತ್ತಾನೆ. ಇನ್ನು 21ನೆ ಶತಮಾನದಲ್ಲೂ 1970 ರಲ್ಲೇ ಬದುಕುತ್ತಿರುವ ಅಳಿದುಳಿದ ಕೆಲವರ ಪಾಲಿಗೆ ಜಯಪ್ರಕಾಶ್ ನಾರಾಯಣ್ ಮಾದರಿಯಾಗಿದ್ದಾರೆ.

ಹೀಗೆ ನಮ್ಮ ಯುವಜನರು ತಿರುಳಿಲ್ಲದೆ ಟೊಳ್ಳಾದ ಪರಿಣಾಮ ಈಗಿನ ರಾಜಕೀಯ ನಾಯಕರಲ್ಲೂ ಕಾಣಲು ಶುರುವಾಗಿದೆ. ಜನರಿಂದ ಸವಾಲು ಎದುರಾದಾಗ ನೇತಾಗಳ ಚಿಂತನೆಯಲ್ಲಿ ಪ್ರಖರತೆ ಬರುತ್ತದೆ. ಆದರೆ ಈಗಿನ ನೇತಾಗಳು ಈ ಹಿಂದಿನವರಿಗೆ ಹೋಲಿಸಿದರೆ ಹೆಚ್ಚು ಮೂರ್ಖತನದ ಮಾತುಗಳನ್ನು ಆಡುತ್ತಾರೆ. ನಮ್ಮ ರಾಜಕೀಯದಲ್ಲಿ ಇನ್ನೊಂದು ಬದಲಾವಣೆ ಈಗ ಬರುತ್ತಿದೆ. ಅದು ಪ್ರಜಾಪ್ರಭುತ್ವ ಸಮಾಜದ ಪತನದ ಸಂಕೇತವಾಗಿದೆ. ಹಿಂದೆ ರಾಜಕೀಯ ನಾಯಕರು ಬೇರೆ ಬೇರೆ ರೀತಿಯ ವಿಚಾರಗಳಿಂದ ಪ್ರೇರಿತರಾಗಿರುತ್ತಿದ್ದರು. ಆದರೆ ಈಗಿನ ರಾಜಕಾರಣಿಗಳು ದೇವಿ ದೇವತೆಗಳ ಭಕ್ತಿಯ ಪ್ಯಾಕೇಜುಗಳ ಹಿಂದಿದ್ದಾರೆ. ಅವರಲ್ಲಿ ಸಾಧು ಸಂತರು ಹಾಗೂ ಆಧುನಿಕ ಬಾಬಾಗಳಂತೆ ಆಗುವ ಬಯಕೆ ಹೆಚ್ಚಾಗುತ್ತಿದೆ. ಹಾಗಾಗಿ ಇಂದಿನ ನೇತಾಗಳು ನೈತಿಕ ಶಿಕ್ಷಣ, ಸಾಮಾಜಿಕ ಶಿಕ್ಷಣ ಇತ್ಯಾದಿ ಕೆಲಸ ಮಾಡುತ್ತಿದ್ದಾರೆ. ಈಗ ವ್ಯವಸ್ಥೆಯನ್ನು ರಾಜಕೀಯ ವಿಚಾರದ ಮೇಲೆ ನಡೆಸುವ ಅಥವಾ ಅದರಂತೆ ರೂಪಿಸುವ ಸಾಮರ್ಥ್ಯ ತಮಗೇ ಇಲ್ಲ ಎಂಬುದು ಈ ನೇತಾಗಳಿಗೆ ಗೊತ್ತಾಗಿದೆ. ಹಾಗಾಗಿ ಅವರೀಗ, ನೀವು ಯಾವಾಗ ಸ್ನಾನ ಮಾಡಬೇಕು? ಉಡುಗೊರೆಯಾಗಿ ಏನನ್ನು ಕೊಡಬೇಕು? ಮದುವೆಯಲ್ಲಿ ಏನು ತೆಗೆದುಕೊಳ್ಳಬೇಕು? ಏನನ್ನು ತೆಗೆದುಕೊಳ್ಳಬಾರದು? ಇತ್ಯಾದಿ ಸಾಮಾಜಿಕ ಸುಧಾರಣಾ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಸಾರ್ವಜನಿಕರ ಎದುರು ನೇತಾ ಆಗಿ ಹೋಗುವ ಕಾಲ ಮುಗಿದಿದೆ ಎಂಬುದು ಅವರಿಗೆ ಈಗ ಗೊತ್ತಾಗಿಬಿಟ್ಟಿದೆ. ಹಾಗಾಗಿ ಈಗ ಅವರು ಒಮ್ಮೆ ನೇತಾ ಆಗಿ ಬಂದರೆ ಇನ್ನೊಮ್ಮೆ ಸಮಾಜ ಸುಧಾರಕರ ವೇಷದಲ್ಲಿ ಬರುತ್ತಾರೆ ಮತ್ತೊಮ್ಮೆ ನೈತಿಕ ಶಿಕ್ಷಕನಾಗಿ ನಮ್ಮೆದುರು ಬರುತ್ತಾರೆ.

ಭಾರತದ ರಾಜಕಾರಣದಲ್ಲಿ ಯುವಜನರ ಭಾಗೀದಾರಿಕೆಯಿಂದ ಯಾವುದೇ ದೊಡ್ಡ ಗುಣಾತ್ಮಕ ಪರಿವರ್ತನೆ ಆಗಲಿಲ್ಲ. ಸ್ವತಃ ಅವರ ಜೀವನದಲ್ಲೇ ಗುಣಾತ್ಮಕ ಪರಿವರ್ತನೆ ಬರದಿದ್ದರೆ ಅವರು ರಾಜಕೀಯದಲ್ಲಿ ಪರಿವರ್ತನೆ ತರುವುದಾದರೂ ಹೇಗೆ? ಹಾಗಾಗಿ ಇವತ್ತಿನ ಯುವಕ ಸರ್ದಾರ್ ಪಟೇಲರನ್ನು ಅವರ ವಿಚಾರಗಳಿಂದ ತಿಳಿದುಕೊಳ್ಳುವ ಬದಲು ಅವರ ಹೆಸರಲ್ಲಿ ನಿರ್ಮಾಣವಾಗಿರುವ ಸಾವಿರಾರು ಕೋಟಿ ವೆಚ್ಚದ ಪ್ರತಿಮೆಗಳ ಮೂಲಕ ತಿಳಿದುಕೊಳ್ಳಲು ಬಯಸುತ್ತಾನೆ. ಇನ್ನು 21ನೆ ಶತಮಾನದಲ್ಲೂ 1970 ರಲ್ಲೇ ಬದುಕುತ್ತಿರುವ ಅಳಿದುಳಿದ ಕೆಲವರ ಪಾಲಿಗೆ ಜಯಪ್ರಕಾಶ್ ನಾರಾಯಣ್ ಮಾದರಿಯಾಗಿದ್ದಾರೆ. ಹೀಗೆ ನಮ್ಮ ಯುವಜನರು ತಿರುಳಿಲ್ಲದೆ ಟೊಳ್ಳಾದ ಪರಿಣಾಮ ಈಗಿನ ರಾಜಕೀಯ ನಾಯಕರಲ್ಲೂ ಕಾಣಲು ಶುರುವಾಗಿದೆ.

ಭಾರತದಲ್ಲಿ ಶಿಕ್ಷಣ ಈಗ ಮುಗಿದ ಕತೆಯಾಗಿದೆ. ಶಿಕ್ಷಣವೇ ಸಾಮಾಜಿಕ ಅಂತರ ಹೆಚ್ಚಿಸುವ ಕಾರಣವಾಗಿಬಿಟ್ಟಿದೆ. ಇಲ್ಲಿ ಶ್ರೀಮಂತನ ಮಗು ಮಾತ್ರ ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯವಿದೆ. ಬಡವನ ಮಗು ಕಳಪೆ ಶಿಕ್ಷಣ ಪಡೆದು ಇನ್ನೊಂದು ಪೀಳಿಗೆಗೆ ಬಡತನವನ್ನು ತನ್ನ ಮೇಲೆ ಹೊತ್ತುಕೊಳ್ಳುತ್ತಾನೆ. ಉಚಿತ ಶಿಕ್ಷಣದ ಹೆಸರಲ್ಲಿ ಸರಕಾರಗಳು ಬಡವರ ಮಕ್ಕಳನ್ನು ಕಾಲೇಜುಗಳೆಂಬ ಗೋದಾಮುಗಳಲ್ಲಿ ತುಂಬಿಸಿಕೊಳ್ಳುತ್ತಾರೆ. ಮೂರು ವರ್ಷಗಳ ಬಳಿಕ ಇಲ್ಲಿಂದ ಆ ಬಡವರ ಮಕ್ಕಳು ಹೊರಬರುವಾಗ ಮತ್ತೆ ಬಡವರಾಗಿಯೇ ಇರಲು ಅರ್ಹರಾಗಿರುತ್ತಾರೆ, ಅಷ್ಟೇ. ಇನ್ನು ಬರುವ ವರ್ಷಗಳಲ್ಲಿ ಶಿಕ್ಷಣದಿಂದಾಗಿ ಕೆಲವರ್ಗಗಳಲ್ಲಿ ಯಾವುದೇ ಬದಲಾವಣೆ ಬರುವುದಿಲ್ಲ. ಆದರೆ ಶಿಕ್ಷಣದ ಕಾರಣದಿಂದ ಅವರು ಉಳಿತಾಯ ಮಾಡಿದ ಅಲ್ಪಸ್ವಲ್ಪ ಹಣವೂ ಲೂಟಿಯಾಗಲಿದೆ. ಅಪವಾದವೆಂಬಂತೆ ಅಲ್ಲೊಬ್ಬ ಇಲ್ಲೊಬ್ಬ ರಿಕ್ಷಾವಾಲಾನ ಮಗ ಐಎಎಸ್ ಅಧಿಕಾರಿಯಾಗುತ್ತಾನೆ. ಆದರೆ ಹೆಚ್ಚಿನ ಬಡವರ ಮಕ್ಕಳು ಯಾವುದಕ್ಕೂ ಸಲ್ಲದವರಾಗುವಂತೆ ಮಾಡಲು ಇಲ್ಲಿನ ವಿವಿಗಳಲ್ಲಿ ಪ್ರಾಧ್ಯಾಪಕರೇ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ.

ಭಾರತದ ಒಟ್ಟು ಜಿಡಿಪಿಯ ಶೇ.50ರಷ್ಟನ್ನು ತನ್ನಲ್ಲೇ ಇಟ್ಟುಕೊಂಡಿರುವ ಒಂದು ಶೇಕಡಾ ಜನರ ಮಕ್ಕಳು ಮಾತ್ರ ಇಲ್ಲಿ ಉತ್ತಮ ಶಿಕ್ಷಣ ಪಡೆಯಬಹುದು. ಈಗ ಎಲ್ಲೆಡೆ ಖಾಸಗಿ ವಿವಿಗಳು ಪ್ರಾರಂಭವಾಗಿವೆ. ಈ ಪೈಕಿ ಕೆಲವು ಅತ್ಯುತ್ತಮವಾಗಿವೆ. ಆದರೆ ಅವುಗಳ ಶುಲ್ಕ 8 ಲಕ್ಷ, 10 ಲಕ್ಷ ಇದೆ. ಇದ್ದ ಎಲ್ಲ ಪ್ರತಿಭಾವಂತ ಪ್ರಾಧ್ಯಾಪಕರು ಈಗ ಅಲ್ಲೇ ಸೇರಿಕೊಂಡಿದ್ದಾರೆ. ಉಳಿದ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳು ರಾಜಕೀಯ ಪಕ್ಷಗಳ ಹೊರೆ ಹೊರುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಹಳ್ಳಿಗಾಡಿನ ಕಾಲೇಜುಗಳಿಂದ ಬರುವ ವಿದ್ಯಾರ್ಥಿಗಳ ಪ್ರತಿಭೆ ಬೆಳಗುವುದಾದರೂ ಹೇಗೆ? ನೀವೇ ಯೋಚಿಸಿ. ಯೋಚಿಸಿ ನೋಡಿ. ಭಾರತ ತನ್ನ ಅಗಾಧ ಮಾನವ ಸಂಪನ್ಮೂಲವನ್ನು ಬಳಸಲೇ ಇಲ್ಲ. ಯುವಜನರು ಮುಂದೆ ದೇಶವನ್ನು, ಜಗತ್ತನ್ನು ಬದಲಿಸುವಂತೆ ಅವರನ್ನು ನಾವು ಬೆಳೆಸಲೇ ಇಲ್ಲ. ನಮ್ಮ ವ್ಯವಸ್ಥೆ ಅವರ ಉತ್ಸಾಹವನ್ನೇ ಬತ್ತಿಸಿಬಿಟ್ಟಿದೆ. ಎರಡೆರಡು ದಶಕಗಳಿಂದ ಏನನ್ನೂ ಮಾಡದೆ, ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ನಮ್ಮ ಯುವಜನರೇ ಒಪ್ಪಿಕೊಳ್ಳುವಂತಹ ಪರಿಸ್ಥಿತಿಯನ್ನು ನಾವು ನಿರ್ಮಿಸಿದ್ದೇವೆ. ಏನಾದರೂ ಆಗುವುದಿದ್ದರೂ, ನೆಹರೂ ಹಾಗೂ ದೀನ್ ದಯಾಳ್ ಉಪಾಧ್ಯಾಯರ ಹೆಸರಿನ ಯೋಜನೆಗಳಲ್ಲೇ ಆಗಬೇಕು. ಅದಕ್ಕಿಂತ ಹೆಚ್ಚಿನದನ್ನೇನನ್ನೂ ನಿರೀಕ್ಷಿಸುವಂತಿಲ್ಲ. ಒಂದು ದೊಡ್ಡ ಜನಸಂಖ್ಯೆಯನ್ನು ನಾವು ಜ್ಞಾನಾರ್ಜನೆಯಿಂದ ದೂರ ಇಟ್ಟಿದ್ದೇವೆ. ಅವರ ಪ್ರತಿಭೆಯನ್ನು ಬೆಳೆಸಲು ಅವಕಾಶವನ್ನೇ ಕೊಟ್ಟಿಲ್ಲ.

ಈಗಲಾದರೂ ನಮ್ಮ ಪಾಲಿಸಿಗಳ ಬಗ್ಗೆ ಸಾರ್ವಜನಿಕ ಹಾಗೂ ಮಾಹಿತಿಪೂರ್ಣ ಚರ್ಚೆ ಆಗಬೇಕಾಗಿದೆ. ರಾಜಕಾರಣಿಗಳ ಹೇಳಿಕೆಗಳ ಮೇಲೆ ಭರವಸೆ ಇಡಬೇಡಿ. ಇಲ್ಲದಿದ್ದರೆ ಈಗಾಗಲೇ ಶಿಕ್ಷಣ ಕ್ಷೇತ್ರವನ್ನು ನಾಶ ಮಾಡಿರುವ ನಮ್ಮ ರಾಜಕೀಯ ನಮ್ಮ ನಾಗರಿಕತೆ, ನಾಗರಿಕ ಪ್ರಜ್ಞೆಯನ್ನೂ ನಾಶ ಮಾಡಿಬಿಡುತ್ತದೆ. ಆಗ ನಾವು ಇರುತ್ತೇವೆ, ಜೀವಂತ ಇರುತ್ತೇವೆ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಲ. ಪ್ರಜಾತಂತ್ರದ ಬದಲು ಇನ್ಯಾವುದೋ ತಂತ್ರದ ಒಂದು ಭಾಗವಾಗಿ ನಮ್ಮನ್ನು ಫಿಟ್ ಮಾಡಿಬಿಡಲಾಗುತ್ತದೆ. ಅಲ್ಲಿ ನಮ್ಮ ನಾಲಗೆಯಿಂದ ಯಾವುದೇ ಧ್ವನಿ ಹೊರಡುವುದಿಲ್ಲ. ಹೊರಟರೂ ಅದು ಯಾವುದೇ ಕೆಲಸಕ್ಕೆ ಬಾರದ ಬೀಸು ಕಲ್ಲಿನಲ್ಲಿ ಸಿಲುಕಿ ಸವೆದು ಹೋದ ಧ್ವನಿಯಾಗಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)