varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಒಲಿದ ಸ್ವರಗಳು

ವಾರ್ತಾ ಭಾರತಿ : 2 Nov, 2017
ಡಾ. ಗಿರಿಜಾ ಶಾಸ್ತ್ರಿ, ಮುಂಬೈ

ಬ್ರಹ್ಮಕಮಲ

ರಟ್ಟೆ ಸೋತು ಕೈ ಬಿದ್ದು ಹೋಗುವವರೆಗೆ

ಗಟ್ಟಿ ಪಾಕ ಮಾಡಿ ಅಟ್ಟು ಬಗೆ ಬಗೆ

ಮನೆ ಸಾರಿಸಿ ಕನ್ನಡಿ ಮಾಡಿ

ನಾನೂ ಸಿಂಗರಿಸಿಕೊಂಡು ಇನ್ನಿಲ್ಲದಂತೆ

ಕಾಯುತ್ತಲೇ ಇದ್ದೇನೆ

ಶತಮಾನ ಸಂವತ್ಸರಗಳು

ಉರುಳಿ ಹೋಗಿವೆ.

ಈಗಲೂ ಹೊಸಿಲ ಹೊರಗೆ

ನಿತ್ಯ ರಂಗವಲ್ಲಿಯ ನೃತ್ಯ

ಮಣಿ ಮಾವು ತೋರಣ

ಕಾಯುತ್ತಲೇ ಇದ್ದೇನೆ

ನೀನು ಬರುವುದೇ ಇಲ್ಲ.

ಮನೆಯಂಗಳದ ಮೂಲೆಯಲೊಂದು

ನಡುರಾತ್ರಿ ಅರಳುತ್ತದೆ ಬ್ರಹ್ಮಕಮಲ

ಯಾರಿಗೂ ತಿಳಿಯುವುದೇ ಇಲ್ಲ.

ಚೀರುವ ಕವಿತೆ..

ಕವಿತೆಯೊಂದು ಬೋರೆಂದು

ಚೀರುತ್ತಿತ್ತು

ಎದೆಸೋರುತ್ತಿತ್ತು

ಬೆಂಕಿ ಕೆನ್ನಾಲಗೆ ಆಡುತ್ತ್ತಿತ್ತು

ಉಧೋ ಉಧೋ ಕುಣಿಯುತ್ತ್ತಿತ್ತು

 ಎತ್ತ್ತಿಕೋ ಎತ್ತ್ತಿಕೋ.. ಕವಿತೆ ಚೀರುತ್ತ್ತಿತ್ತು ಒಳಗೆ

ಬೇಲಿ ಹಾರಲು ತವಕಿಸುತ್ತ್ತಿತ್ತು

ಏರಿ ಏರಿ ಮುಟ್ಟುತ್ತ್ತಿತ್ತು

ಜಾರಿ ಜಾರಿ ಬೀಳುತ್ತಿತ್ತು

ಊರ ಹೊರಗೆ ಒಂಟಿಗೂಗೆ

ಗೂ ಗೂ ಎನುತಲಿತ್ತು

ಕವಿತೆ ಚೀರುತ್ತಿತ್ತು ಒಳಗೆ..

ಹಾ ಹಾ..ಘಾಟು

ಒಳಗೊಳಗೇ ಪದಗಳ ಹುರಿಯುತ್ತಿತ್ತು

ಕಿವಿ ಣ್ಣು ಮೂಗು

ಹೊಗೆ ಕಾರುತ್ತಿತ್ತು

ಸಾರುತ್ತಿತ್ತು

ಅಕ್ಷರ ಮೈಲಿಗೆಯಾಗಿತ್ತು

ಕೆರೆ ಬಾವಿ ಹುಡುಕುತ್ತಿತ್ತು

ಕವಿತೆ ಚೀರುತ್ತಿತ್ತು...

ಬೆಂಕಿಯಿಂದ ಪುಟ ನೆಗೆದಿತ್ತು

ಅರೆ ಬೆಂದಿತ್ತು

ಗರ ಗರ ತ್ತಿರುಗುತ್ತಿತ್ತು

ಬಾಲಕತ್ತರಿಸಿಕೊಂಡು

ವಿಲ ವಿಲ ಒದ್ದಾಡುತ್ತಿತ್ತು

ಕವಿತೆ ಚೀರುತ್ತಿತ್ತು.

ಕರಣಾಲಾಪ

ಹಾರಿಬಿಡಬಹುದು ಕಿಟಕಿಯಿಂದ ಹೊರಗೆ

ಕನಸಿನ ಒಳಗೆ

ತೂರಿಬಿಡಬಹುದು ಕನ್ನಡಿಯೊಳಗೆ

ಬಿಂಬ ಪ್ರತಿಬಿಂಬ ಕವಿತೆಯೊಳಗೆ

ಶಬ್ದಗಳಾಚೆ ನಿನ್ನ ಹಿಡಿಯಲಾರೆ

ಕವಿತೆಯೊಳಗೆ ನೀ ಬರಲಾರೆ

ಹಟ ನಿನ್ನದು ಶಠ ನನ್ನದು

ಅಕ್ಷರಗಳಲಿ ಮೈದೋರುವೆ

ಹಿಡಿಯಲೆಂದು ಹಾರಿದರೆ

ಅಲ್ಲೇ ಕಲಸಿ ಹೋಗುವೆ

ಕನ್ನಡಿಯೇ ಕಿಟಕಿಯೇ

ಕಣ್ಣೇ ಕರಣವೇ

ನೀನೇ ನಾನೇ

ನೀರೇ ನೆಳಲೇ

ಸಾವಿರದ ಕನಸು

ಹಗಲು ವೇಷ ತೊಟ್ಟಮೇಲೆ
ಬಿಸಿಲೇರದೆ ಇದ್ದೀತೇ
ಕಾದು ಡಾಂಬರು ರಸ್ತೆ
ಬರಿಗಾಲ ನಡಿಗೆ

‘ಕತ್ತಲೆಗೆ ಕಾಯಬೇಕು’
ಸರಕು ಹೊತ್ತು ಸಾಗಿಸಲು
‘ನೂರಾರು ತಲೆ’
ಸಂತೆಯೊಳಗೆ ಕರಾಮತ್ತು
ಜನಜಾತ್ರೆ ನೂಕುನುಗ್ಗಲು

ಯಾರ ಸಲುವಾಗಿಯೂ ಇಲ್ಲ
ವ್ಯಾಪಾರ ಬದಲಾಗುವುದಿಲ್ಲ
ವ್ಯಾಪಾರಿಯೇ ಬದಲಾದರೆ
ಹೊಸಹಾದಿಯೇ ಎಲ್ಲ......

‘ಅವರಿವರ ತಳ್ಳಿ ಮುನ್ನುಗ್ಗಿ’
ಆಯತಪ್ಪದೇ ನಡೆಯಬಹುದೇ
‘ನಗರದಲ್ಲಿ ಬೆಳಗಾಗುವುದೇ ಹೀಗೆ’
ಎಂದರೆ ನಂಬಬಹುದೇ

ಸಣ್ಣ ಸಣ್ಣ ಆಸೆ ಭರವಸೆಗಳ
ನೂರು ಚಕ್ರಗಳ ಮೇಲೆ
ಚೆಂದ ಉರುಳುವುದಾದರೆ
ಸಾವಿರದ ಕನಸು ಬೀಳಬಹುದೇ.

ನೀಲ ಗರಳ

ಎರಡಲಗಿನ ಕತ್ತಿ ಸತ್ಯ ಹೋಗುತ್ತಾ

ಕೊಯ್ಯುತ್ತದೆ

ಬರುತ್ತಾ....

ಕಹಿರಕ್ತ ನುಂಗಲು ಸಿದ್ಧಳಿರುವೆ

ನಂಜುಂಡಾ

ನೀ ಬಂದು ಎನ್ನ

ಗರಳ ಹಿಡಿಯಬಲ್ಲೆಯಾ

ಕರುಳ ಕಬಾಬು

ಹೊಟ್ಟೆ ಹರಿದು ಹೊರತೆಗೆದು

ರಕ್ತ ಸಿಕ್ತ ಬಳ್ಳಿಯಲಿ ಹತ್ತಿ ಹೂ ಅರಳಿ

ಮುದ್ದು ಉಕ್ಕಿ ಹರಿದು

ಮೊಲೆತುಂಬಾ ಹಾಲು

ಮಡಿಲ ತುಂಬ

‘ಗುಲಾಬಿಯ ಮೃದು ಪಾದ’

ಒದ್ದಾಗ ಎದೆಗೆ

ಮೈಯೆಲ್ಲಾ ಪುಳಕ

ತುಸು ಸೀನಿದರೆ

ಮೈ ಬೆಚ್ಚಗಾದರೆ

ನಿದ್ದೆಯಲಿ ಬೆಚ್ಚಿದರೆ

ನಕ್ಕರೆ ಅತ್ತರೆ

ಅಯ್ಯೋ ದೇವರೇ..

ಕಳ್ಳಬೆಕ್ಕು ಕೊಂಡೊಯ್ದರೇ..

ಎದೆಯೊಳಗೆ ಕುದಿವ ಕೂಳು

‘ಇರುಳೆಲ್ಲಾ ಜಾಗರಾಗಿ’ ಮಡುಗಟ್ಟಿ ಅಳು

ಕಣ್ಣ ತುಂಬುವ ಸಕ್ಕರೆ ಬೊಂಬೆ

ನಾಯಿಕಣ್ಣು ನರಿಕಣ್ಣು

ತುಂಬ ತುಂಬಿ ತಾಯಿಕಣ್ಣು

ಆ ಮರಾ ಈ ಮರಾ

ಮರಾಮರಾಮರಾ

ಅಲೆದು

ಬೀದಿ ಬೀದಿ ತಿಪ್ಪೆ ಹುಡುಕಿ

ಕಾಳು ಕಡ್ಡಿ ಹೆಕ್ಕಿ

ಮೆತ್ತನೆಯ ಗೂಡು

ಒದ್ದೆ ಹಾಸಿಗೆ

ಬದಲಿಸಿ ಹೊದಿಕೆ ಬೆಚ್ಚಗೆ

ಹೊಟ್ಟೆಯೊಳಗೆಲ್ಲಾ ಹಬೆ ಹಬೆ

ಕನಸಿನೊಳಗೂ ಎಚ್ಚರಿಕೆ

ನೀರು ಗೊಬ್ಬರ

ಭರವಸೆಯ ಮಣ್ಣು

ಸುರಿದು ಭರಪೂರ

ಉದ್ದೋ ಉದ್ದ ಬೆಳೆದು

ಎದೆಮಟ್ಟ...ಅಲ್ಲಲ್ಲ..

ಬರೋಬ್ಬರಿ ಆರುಪೂಟು

ಒದ್ದ ಬೂಟುಗಾಲಿನ ಮೊಳೆ

ಬತ್ತಿದ ಜೋಲು ಮೊಲೆಯ ಮೇಲೆ

ಕುದಿವ ಎಣ್ಣೆ ಕೊಪ್ಪರಿಯೊಳಗೆ

ಕರಿದ ಕರುಳ ಕಬಾಬು

ಅಮ್ಮಂದಿರೆಲ್ಲಾ ಸಾಯಲಿ....

ಆಗ ನಾನು ಪುಟ್ಟ ಮಗುವಾಗಿದ್ದೆ

ಅಮ್ಮ ಯುವತಿ

ಅದು ಏನು, ಇದು ಯಾಕೆ, ಹೇಗೆ

ಸಾವಿರ ಸವಾಲು, ಕಾಲಿಗೆ ತೊಡರುತ್ತಿದ್ದೆ

ಅಮ್ಮನಿಗೆ ಸಂಭ್ರಮ

ಮುತ್ತುಕೊಟ್ಟು ಎದೆಗವಚಿಕೊಂಡು

ಕಂದಾ...

ಹೂಬಳ್ಳಿಯಲಿ ಉಯ್ಯಿಲೆಯಾಡಿಸಿದ್ದಳು

ಹಕ್ಕಿಯಂತೆ ಹಾರಿಸಿ ಮೇಲೆ

‘‘ಜಾಮೂನು ನಾದದಲಿ ಜಾಳಿಸಿ’’ದ್ದಳು

ಚಂದಮಾಮನ ಲೋಕಕ್ಕೆ ಒಯ್ದಿದ್ದಳು..

ಅಮ್ಮ ಬಟ್ಟೆಯೊಗೆಯುವಾಗ

ನಾನೂ ಪುಟ್ಟ ಕೈಜೋಡಿಸುತ್ತಿದ್ದೆ ಮನೆಯಲ್ಲಾ ಓಕುಳಿ

ಚೆಲ್ಲಿದ ಹಾಲು ಆಟಿಕೆಗಳು ದಿಕ್ಕಾಪಾಲು

ಅಮೇಧ್ಯ ಅನ್ನ ಗುರುತು ಹತ್ತದೆ

ಮೈಯೆಲ್ಲಾ ಬಳಿದುಕೊಳ್ಳುತ್ತಿದ್ದೆ

ಅಮ್ಮ ಬಿಸಿನೀರು ಕಾಯಿಸಿ

ಮೃದು ಮಧುರ ಮೀಯಿಸಿ

ಸ್ವಚ್ಛ ಬಟ್ಟೆತೊಡಿಸಿ

ದೃಷ್ಟಿತೆಗೆಯುತ್ತಿದ್ದಳು ನಸುನಗುತ್ತಲೇ

ಕಾಗೆ ಗುಬ್ಬಿಯ ಗೂಡಿಗೆ ಗರಿ ಮೂಡಿಸಿದ್ದಳು.

ಈಗ ಅಮ್ಮನ ಕುರುಡುಗಣ್ಣುಗಳಲ್ಲಿ

ಗೂಡುವೋದ ಒಡಲಲ್ಲಿ

ಒಂಬತ್ತು ದಶಕದ ನೀರು ಸೋರಿಹೋಗಿದೆ

ಆದರೂ ಅವಳು ಅಂಗನವಾಡಿಯ ಆರರ ಬಾಲೆ

ಹಠಮಾರಿ ಜಗಮೊಂಡಿ ಜೀವಂತಿಕೆಯ ಸೆಲೆ

ನಿಂತರೆ ನಿಲ್ಲದೆ ಕೂತಲ್ಲಿ ಕೂರದೆ

ಬಾಲಸುಟ್ಟ ಬೆಕ್ಕು.....

ತೊಂಬತ್ತರ ಅರೆ ಕುರುಡಿ

ಎಡವುತ್ತಾಳೆ

ತೊಡರುತ್ತಾಳೆ

ಚೆಲ್ಲಿ ಸುರಿಯುತ್ತಾಳೆ

ಕೊಟ್ಟ ಆಹಾರವನ್ನು ಅವಳ ಬಟ್ಟೆಯೇ ಹೆಚ್ಚು ತಿನ್ನುತ್ತದೆ

ಮನೆಮಂದಿಯ ವೌನವೂ.......

ತರ್ಜನಿ ಬೆರಳಲ್ಲಿ ಆಜ್ಞೆ ಹೊರಡಿಸಿದರೆ

ಕಲ್ಲುಗೊಂಬೆಯಂತೆ ನಿಲ್ಲುತ್ತಾಳೆ

ಅವಳೂ ಕೇಳುತ್ತಾಳೆ

ಅದು ಏನು ಇದು ಯಾಕೆ, ಹೇಗೆ

ನೂರು ಪ್ರಶ್ನೆ

ಸಾವಿರ ವಿಸ್ಮಯಗಳಿಗೆ

ದೊರಕುವುದು

ಬೆದರು ಬೆತ್ತ ಗದರು ದೊಣ್ಣೆ

ದೇಹ ಮದದ ಠೇಂಕಾರ

ಪಾಯಸದೊಳಗೆ ಬಿದ್ದ ನೊಣ

ಹೆಕ್ಕಿ ಉಗುರಿನಿಂದ ಹಾರಿಸುವ ತಾತ್ಸಾರ

ಮಾತಿನ ಚಾಟಿಯ ಬೀಸು ಅತಿಯಾದರೆ

ಆಗಸಕ್ಕೆ ಕೈಚೆಲ್ಲಿ ನಿಲ್ಲುತ್ತಾಳೆ

ನಕ್ಷತ್ರಗಳಿಗೆ ಅವಳ ಕಣ್ಣುಗಳು ಈಗ ಬೀಳುವುದಿಲ್ಲ...

ಕಾಶಿಗೆ ಹೋಗಬೇಕೆೆನ್ನುತ್ತಾಳೆ

‘‘ಕಾಲಿದ್ದ ಮುರುವ (ಕಾಸಿದ್ದ?) ಕೈಲಾಸಕ್ಕೆ ಹೋದರೆ ನೀನೆಲ್ಲಿಗೆ ಹೋದಿಯೇ ಮುರ್ಕಾಟಿ’’

ಎಲ್ಲ ಅಮ್ಮಂದಿರೂ ಕಾಶಿಗೆ ಹೋಗಲಿ

ಕಾಶಿಪಟ್ಟಣದ ನೆಲವೇ ಅವರ ನುಂಗಿ ನೀರು ಕುಡಿಯಲಿ

ಗಂಗೆ ರೋಸಿ ತನ್ನ ಪ್ರವಾಹದೊಳಗೆ ಎಳೆದೊಯ್ಯಲಿ

ಬದರಿಯ ಪ್ರಪಾತದೊಳಗೆ

ಕೇದಾರದ ಕಣಿವೆಗಳೊಳಗೆ ಜಾರಿ ಬಿದ್ದೇ ಹೋಗಲಿ

ಹಿಮಾಲಯದ ಕಾಡ್ಗಿಚ್ಚುಗಳು ಸುಡಲಿ

ಆದರೆ ಅವರ ಅಸ್ಥಿಗಳು ಮಾತ್ರ

ಯಾವ ಮಕ್ಕಳ ಕೈಗೂ ದಕ್ಕದೇ ಹೋಗಲಿ...

ಬಯಲ ಮಾತು

ಆಡಲಾರದ ಮಾತಿದು ನುಡಿಯಬಾರದು ಆಲಯದ ಹೊರಗೆ

ಬಿದ್ದು ಬಯಲಾಗಬಾರದು

ಕೆಸರೊಳಗೆ

ಹದ್ದು ಮೀರಿದರೆ ಹದ್ದುಗಳು

ಹಾರಾಡುತ್ತವೆ ಮೇಲೆ

ಸತ್ತ ಹೆಗ್ಗಣಗಳು ಕೆಳಗೆ...

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)