varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ರಾಜ್ಯಗಳ ಸ್ವಾಯತ್ತತೆಯ ಮಾರಣಹೋಮ

ವಾರ್ತಾ ಭಾರತಿ : 2 Nov, 2017
ಪ್ರೊ.ರವಿವರ್ಮ ಕುಮಾರ್, ಹಿರಿಯ ನ್ಯಾಯವಾದಿ ಹಾಗೂ ಸಂವಿಧಾನ ತಜ್ಞ

ಭಾರತ ಒಂದು ಸಂಕೀರ್ಣ ರಾಜಕೀಯ ಒಕ್ಕೂಟ. ಭಾರತದ ಸಂವಿಧಾನ ಇದನ್ನು ರಾಜ್ಯಗಳ ಒಕ್ಕೂಟ ಎಂದು ಕರೆದಿದೆ. ಅತ್ಯಂತ ಸೂಕ್ಷ್ಮ ಮತ್ತು ಜಾಗರೂಕ ಪ್ರಕ್ರಿಯೆಗಳ ಮೂಲಕ ರಾಜ್ಯ ಮತ್ತು ಕೇಂದ್ರಗಳ ಸಂಬಂಧವನ್ನು ಸಮತೋಲನವಾಗಿ ಇಡಲು ಭಾರತದ ಸಂವಿಧಾನ ಸುದೀರ್ಘವಾದ ಅಧಿಕಾರ ವಿಂಗಡಣೆ ಮಾಡಿ ಪೂರ್ಣವಾಗಿ ಅಲ್ಲದಿದ್ದರೂ ಒಂದು ವಿಶೇಷವಾದ ಸಹಕಾರಿ ಒಕ್ಕೂಟ ವ್ಯವಸ್ಥೆಯ ಮೂಲಕ ರಾಜ್ಯಗಳಿಗೆ ಪ್ರಮುಖವಾದ ವಿಚಾರಗಳಲ್ಲಿ ಸ್ವಾಯತ್ತತೆ ನೀಡಿದೆ. ಸಂವಿಧಾನ ಸಭೆಯಲ್ಲಿ ನಡೆದಂತಹ ಅತ್ಯಂತ ಪಾಂಡಿತ್ಯಪೂರ್ಣ ಸಂವಾದದ (ಚೆರ್ಚೆ) ಮೂಲಕ ಭಾರತದ್ದೇ ಒಂದು ವಿಶೇಷವಾದ ರಾಜ್ಯಗಳ ಸ್ವಾಯತ್ತತೆ ವ್ಯವಸ್ಥೆಯನ್ನು ನೋಡಬಹುದಾಗಿದೆ.

ಸಂವಿಧಾನದ 51 ‘ಎ’ ಪರಿಚ್ಛೇದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಅನುಸರಿಸಬೇಕು ಮತ್ತು ಸಂವಿಧಾನದ ವೌಲ್ಯಗಳನ್ನು ಮತ್ತು ಸಂಸ್ಥೆಗಳನ್ನು ಗೌರವಿಸಬೇಕೆಂಬ ಮೂಲಭೂತ ಕರ್ತವ್ಯವನ್ನು ಎಲ್ಲ ಪ್ರಜೆಗಳಿಗೂ ಕಟ್ಟಪ್ಪಣೆ ಮಾಡಿದೆ.

ಅದರಲ್ಲೂ ರಾಷ್ಟ್ರದ ಚುಕ್ಕಾಣಿ ಹಿಡಿದ ಮಂತ್ರಿವರ್ಯರಿಗೆ ಪರಿಚ್ಛೇದ 75 ಮತ್ತು ಅನುಬಂಧ ಮೂರು ಸಂವಿಧಾನವನ್ನು ಸಂಪೂರ್ಣವಾಗಿ ಒಪ್ಪಿ ಅದಕ್ಕೆ ಕಾಯಾ, ವಾಚಾ, ಮನಸಾ ಬದ್ಧತೆಯನ್ನು ಇರಿಸಿ ಮತ್ತು ಸಂವಿಧಾನದ ನಿರ್ದೇಶನದಂತೆ ಎಲ್ಲ ಬಗೆಯ ಜನರಿಗೆ ಒಳಿತನ್ನು ಮಾಡಲು ರಾಗ- ದ್ವೇಷಗಳಿಂದ ಮುಕ್ತವಾಗಿ ಕೆಲಸ ಮಾಡಬೇಕೆಂದು ಪ್ರಮಾಣ ವಚನವನ್ನು ಕಡ್ಡಾಯಗೊಳಿಸಿದೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯ ಗಳಿಗೆ ಧಕ್ಕೆ ಮಾಡಿ ಸಂವಿಧಾನದ ಅಸ್ತಿತ್ವಕ್ಕೇ ಸಂಚಕಾರ ತರುವಂತಹ ಬೆಳವಣಿಗೆಗಳನ್ನು ಕಾಣಬಹುದಾಗಿದೆ.

ಏಕೆಂದರೆ ಇಂದಿನ ಮಂತ್ರಿವರ್ಯರ ನಿಷ್ಠೆ ತಾವು ತೆಗೆದುಕೊಂಡ ಪ್ರಮಾಣ ವಚನಕ್ಕಾಗಲೀ, ಸಂವಿಧಾನಕ್ಕಾಗಲೀ ಅಲ್ಲ. ಬದಲಾಗಿ ಸಂವಿಧಾನ ವನ್ನು ಪ್ರಾರಂಭದಿಂದಲೂ ವಿರೋಧಿಸುತ್ತಿರುವ ಸಂಘ ಪರಿವಾರಕ್ಕೆ. ಯಾವುದೇ ಪ್ರಮಾಣ ವಚನ ತೆಗೆದುಕೊಳ್ಳದೆ ಸಂವಿಧಾನಕ್ಕೆ ಗೌರವವನ್ನು ಕೊಡದ ಸಂಘ ಪರಿವಾರ ಚುನಾವಣೆಗೆ ಇಳಿಯಲಿಲ್ಲ, ಗೆಲ್ಲಲಿಲ್ಲ. ಆದರೂ, ರಾಷ್ಟ್ರದ ಜುಟ್ಟು ಅದರ ಕೈಯಲ್ಲಿಟ್ಟು ಅದರ ಆಣತಿಯಂತೆ ಇಂದು ಆಡಳಿತ ನಡೆಯುತ್ತಿದೆ.

ರಾಜಕೀಯದಲ್ಲಿ ಧರ್ಮ ಬೆರೆಸುವ ಮೂಲಕ ಇಡೀ ಪ್ರಜಾತಂತ್ರ ವ್ಯವಸ್ಥೆಗೆ ಮಸಿ ಬಳಿಯಲಾಗಿದೆ. ಅದರಲ್ಲಿ ಭಾರತದ ಒಕ್ಕೂಟ ವ್ಯವಸ್ಥೆ ಒಂದು ಪ್ರಮುಖ ವಾದ ವಿಚಾರ. ಅದನ್ನು ನಾಶ ಮಾಡುವ ಆತಂಕಕಾರಿ ಬೆಳವಣಿಗೆಗಳನ್ನು ಗುರುತಿಸಿ ರಾಜ್ಯಗಳು ಮತ್ತು ಪ್ರಜೆಗಳು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಪ್ರಜಾ ತಂತ್ರ, ಜಾತ್ಯತೀತ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಹೆಚ್ಚು ದಿನ ಉಳಿಯುವುದಿಲ್ಲ.

1956ರಲ್ಲಿ ಭಾಷಾವಾರು ರಾಜ್ಯಗಳ ರಚನೆಯ ಸಮಯದಲ್ಲಿ ಸಂವಿಧಾನ ವನ್ನು ಖಂಡತುಂಡವಾಗಿ ಖಂಡಿಸಿ ಅದರಲ್ಲಿ ಅಡಗಿರುವ ಒಕ್ಕೂಟ ವ್ಯವಸ್ಥೆಯ ನ್ನು ರಾಜ್ಯಗಳ ಸ್ವಾಯತ್ತತೆಯನ್ನು ಅಳಿಸಿಹಾಕಿ ಭಾರತದ ಉದ್ದಗಲಕ್ಕೆ ಕೇಂದ್ರಾ ಡಳಿತ ಕೊಡುವ ಒಂದೇ ಶಾಸಕಾಂಗ ಮತ್ತು ಕಾರ್ಯಾಂಗದ ಹೊಸ ಸಂವಿಧಾನ ರಚನೆಗೆ ಕರೆ ಕೊಟ್ಟ ಸರಸಂಘಚಾಲಕ ಎಂ.ಎಸ್.ಗೋಳ್ವಾಲ್ಕರ್ ಧ್ವನಿಯನ್ನು ಇಂದಿನ ಬೆಳವಣಿಗೆಗಳಲ್ಲಿ ಗುರುತಿಸಬಹುದಾಗಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಯನ್ನೂ ಮತ್ತು ಸಮಾಜವಾದಿ ಚಿಂತಕ ಡಾ.ರಾಮ ಮನೋಹರ ಲೋಹಿಯಾರ ಚತುರ್‌ಸ್ತಂಭ ರಾಷ್ಟ್ರದ ಪರಿಕಲ್ಪನೆಯನ್ನೂ ಸಂಪೂರ್ಣ ವಾಗಿ ಒಪ್ಪಿಕೊಳ್ಳದಿದ್ದರೂ ಒಂದು ಸುಧಾರಿತ ವಿಕೇಂದ್ರಿಕರಣ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಸ್ವೀಕರಿಸಲಾಗಿದೆ. ಇದರ ಮೇಲೆ ಇತ್ತೀಚಿನ ದಿನಗಳಲ್ಲಿ ಗಂಭೀರವಾದ ದಾಳಿ ನಡೆದಿರುವುದು ಸಂವಿಧಾನದ ಉಳಿವು-ಅಳಿವಿನ ಪ್ರಶ್ನೆಯಾಗಿ ಉದ್ಭವಿಸಿದೆ.

ಭಾರತ ಒಂದು ಸಂಕೀರ್ಣ ರಾಜಕೀಯ ಒಕ್ಕೂಟ. ಭಾರತದ ಸಂವಿಧಾನ ಇದನ್ನು ರಾಜ್ಯಗಳ ಒಕ್ಕೂಟ ಎಂದು ಕರೆದಿದೆ. ಅತ್ಯಂತ ಸೂಕ್ಷ್ಮ ಮತ್ತು ಜಾಗರೂಕ ಪ್ರಕ್ರಿಯೆಗಳ ಮೂಲಕ ರಾಜ್ಯ ಮತ್ತು ಕೇಂದ್ರಗಳ ಸಂಬಂಧವನ್ನು ಸಮತೋಲನ ವಾಗಿ ಇಡಲು ಭಾರತದ ಸಂವಿಧಾನ ಸುದೀರ್ಘವಾದ ಅಧಿಕಾರ ವಿಂಗಡಣೆ ಮಾಡಿ ಪೂರ್ಣವಾಗಿ ಅಲ್ಲದಿದ್ದರೂ ಒಂದು ವಿಶೇಷವಾದ ಸಹಕಾರಿ ಒಕ್ಕೂಟ ವ್ಯವಸ್ಥೆಯ ಮೂಲಕ ರಾಜ್ಯಗಳಿಗೆ ಪ್ರಮುಖವಾದ ವಿಚಾರಗಳಲ್ಲಿ ಸ್ವಾಯತ್ತತೆ ನೀಡಿದೆ. ಸಂವಿಧಾನ ಸಭೆಯಲ್ಲಿ ನಡೆದಂತಹ ಅತ್ಯಂತ ಪಾಂಡಿತ್ಯ ಪೂರ್ಣ ಸಂವಾದದ (ಚೆರ್ಚೆ) ಮೂಲಕ ಭಾರತದ್ದೇ ಒಂದು ವಿಶೇಷವಾದ ರಾಜ್ಯಗಳ ಸ್ವಾಯತ್ತತೆ ವ್ಯವಸ್ಥೆಯನ್ನು ನೋಡಬಹುದಾಗಿದೆ.

ಬಹುಮುಖಿ ಸಮಾಜ

ಭಾರತದ ವೈಶಿಷ್ಟತೆ ಎಂದರೆ ಇದು ಒಂದು ಭಾಷೆಯ ದೇಶವಲ್ಲ, ಒಂದು ಧರ್ಮದ ದೇಶವೂ ಅಲ್ಲ. ಒಂದು ಜನಾಂಗದ ದೇಶವೂ ಸಹ ಅಲ್ಲ. ಅದಕ್ಕಿಂತಲೂ ಹೆಚ್ಚಾಗಿ ಭಾರತ ಸಾಮಾಜಿಕವಾಗಿ ಹರಿದು-ಹಂಚಿ ಹೋಗಿರುವ ರಾಷ್ಟ್ರ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ ಇದೊಂದು ಶ್ರೇಣೀಕೃತ ಸಮಾಜ ಮೆಟ್ಟಿಲು ಹತ್ತಿದಂತೆ ಗೌರವ ಇಳಿದಂತೆ ಕೀಳುಮಟ್ಟ ಬೆಳೆಸುವ ಜಾತಿಗಳ ಆಗರ.

ಈ ರೀತಿ ಐದು ಸಹಸ್ರ ಜಾತಿಗಳನ್ನು ಒಂದರ ಮೇಲೊಂದು ಕೂರಿಸಲಾ ಗಿದೆ. ಇಂತಹ ಅಸಮಾನತೆ ಇರುವ ಬಹುಮುಖಿ ಸಮಾಜದಲ್ಲಿ ಸಾಮರಸ್ಯ ಕಾಪಾಡಲು ತಾತ್ವಿಕವಾಗಿ ವಿಕೇಂದ್ರಿಕರಣವನ್ನು ಒಪ್ಪಿ, ಭಾಷೆಯ ಆಧಾರದ ಮೇಲೆ ರಚನೆ ಆಗಿರುವ ಎಲ್ಲ ರಾಜ್ಯಗಳಿಗೆ ಸ್ವಾಯತ್ತ ಅಧಿಕಾರವನ್ನು ನೀಡಲಾಗಿದೆ.

ಶಾಸನ ರಚನೆಯ ಸ್ವಾಯತ್ತತೆ

ರಾಜ್ಯ ಶಕ್ತಿ ಒಬ್ಬ ವ್ಯಕ್ತಿ ಅಥವಾ ಒಂದು ಇಲಾಖೆಯಲ್ಲಿ ಕೇಂದ್ರೀಕೃತವಾಗು ವುದನ್ನುತಪ್ಪಿಸಲು ವಿಕೇಂದ್ರೀಕರಣದ ಪ್ರಥಮ ಹೆಜ್ಜೆಯಾಗಿ ರಾಷ್ಟ್ರದ ಸಾರ್ವಭೌಮ ಅಧಿಕಾರವನ್ನು ಮೂರು ವಿವಿಧ ಅಂಗಗಳಲ್ಲಿ ಹಂಚಲಾಗಿದೆ. ಪರಮೋಚ್ಚ ಅಧಿಕಾರವಾದ ಶಾಸನ ರಚನೆಯ ಅಧಿಕಾರವನ್ನು ಶಾಸಕಾಂಗಕ್ಕೂ, ಶಾಸನಗ ಳನ್ನು ವ್ಯಾಖ್ಯಾನ ಮಾಡುವ ಅಧಿಕಾರವನ್ನು ನ್ಯಾಯಾಂಗಕ್ಕೂ ಹಾಗೂ ಶಾಸನ ಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಕಾರ್ಯಾಂಗಕ್ಕೂ ಕೊಡುವುದರ ಮೂಲಕ 'separation of powers' ತತ್ವವನ್ನು ಒಪ್ಪಿಕೊಳ್ಳಲಾಗಿದೆ. ಅದರ ಯಶಸ್ವೀ ಜಾರಿಗೋಸ್ಕರ  ‘Doctrine of checks and balances’ನೀತಿಯನ್ನು ಅನುಸರಿಸಲಾಗಿದೆ.

ಇದನ್ನು ಭದ್ರವಾಗಿ ಸಂವಿಧಾನದಲ್ಲಿ ರೂಪಿಸಲಾಗಿದೆ. ಅದರಲ್ಲಿ ಮುಖ್ಯ ವಾಗಿ ಶಾಸನ ರಚನೆಯ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ವಿತರಣೆ ಮಾಡಲಾಗಿದೆ. ಸಂವಿಧಾನದ ಪರಿಚ್ಛೇದ 246ರಲ್ಲಿ ಸಂಸತ್ತಿಗೆ ಎಲ್ಲ ಕಾನೂನುಗಳ ರಚನೆ ಅಧಿಕಾರವನ್ನು ನೀಡುತ್ತಾ... ರಾಜ್ಯಗಳ ಸ್ವಾಯತ್ತತೆ ಕಾಪಾಡುವ ಸಲುವಾಗಿ ಸಂಸತ್ತು ರಾಜ್ಯಗಳ ಅಧಿಕಾರದಲ್ಲಿ ಮೂಗು ತೂರಿಸ ಬಾರದೆಂದು ರಾಜ್ಯದ ವಿಧಾನ ಮಂಡಲಕ್ಕೆ ಬರೋಬ್ಬರಿ 66 ವಿಷಯಗಳ ಶಾಸನ ರಚನೆಯ ಪರಮೋಚ್ಚ ಅಧಿಕಾರವನ್ನು ನೀಡಲಾಗಿದೆ.

ಕೆಲವು ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಸಹ ಕಾನೂನು ರಚಿಸಲು ಅಧಿಕಾರವನ್ನು ನೀಡಲಾಗಿದೆ. ಈ ರೀತಿ ಮೂರು ಪಟ್ಟಿಗಳನ್ನು ಮಾಡಿ ಸಂವಿಧಾನದ ಏಳನೆ ಪರಿಚ್ಛೇದದಲ್ಲಿ ಸಂಸತ್ ಮಾತ್ರ ಮಾಡುವ ವಿಷಯಗಳ ಪಟ್ಟಿ ಯೂನಿಯನ್ ಲಿಸ್ಟ್, ರಾಜ್ಯ ವಿಧಾನ ಮಂಡಲಗಳು ಶಾಸನ ಮಾಡುವ ಅಧಿಕಾರ ನೀಡುವ ರಾಜ್ಯಗಳ ಪಟ್ಟಿ ಮತ್ತು ಸಂಸತ್ತು, ಸಂಸತ್ ಕಾನೂನು ರಚಿಸದೇ ಇದ್ದ ವಿಷಯಗಳಲ್ಲಿ ವಿಧಾನ ಮಂಡಲ ಶಾಸನ ಮಾಡಬಹುದಾದ ಕನ್‌ಕರೆಂಟ್ ಲಿಸ್ಟ್ ಈ ರೀತಿ ಮೂರು ಪಟ್ಟಿಗಳಲ್ಲಿ ಶಾಸನ ರಚನೆ ಅಧಿಕಾರವನ್ನು ಹಂಚಿಕೆ ಮಾಡಲಾಗಿದೆ.

ಅದರಲ್ಲೂ ವಿಶೇಷವಾಗಿ ಕಾನೂನು ವ್ಯವಸ್ಥೆ ಆರೋಗ್ಯ, ಕೃಷಿ, ನೆಲ, ಜಲ, ವಾಣಿಜ್ಯ ಮತ್ತು ವ್ಯವಹಾರ ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳಲ್ಲಿ ರಾಜ್ಯಗಳಿಗೆ ಶಾಸನ ರಚಿಸುವ ವಿಶೇಷ ಅಧಿಕಾರವನ್ನು ನೀಡಿದೆ. ಈ ವಿಷಯದಲ್ಲಿ ಸಂಸತ್ ಮೂಗು ತೂರಿಸುವಂತಿಲ್ಲ. ಅದರಲ್ಲೂ ಮುಖ್ಯವಾಗಿ ಸುಮಾರು ಹತ್ತು- ಹನ್ನೆರಡು ವಿಷಯಗಳಲ್ಲಿ ತೆರಿಗೆ ವಿಧಿಸುವ ಅಧಿಕಾರವನ್ನು ಸಹ ರಾಜ್ಯಗಳ ಪಾಲಿಗೆ ಕೊಡಲಾಗಿದೆ.

ಈ ಅಧಿಕಾರದ ಮೂಲಕ ಭಿಕ್ಷಾಪಾತ್ರೆ ಹಿಡಿದು ಕೇಂದ್ರ ಸರಕಾರದ ಮುಂದೆ ರಾಜ್ಯಗಳು ನಿಲ್ಲಬೇಕಾದ ಅನಿವಾರ್ಯತೆ ಇಲ್ಲದೆ, ರಾಜ್ಯಗಳು ತಮ್ಮದೇ ಆದ ತೆರಿಗೆಯಿಂದ ಸಂಪನ್ಮೂಲ ಕ್ರೋಡೀಕರಣದ ಮೂಲಕ ಖಜಾನೆ ತುಂಬಲು ಆರ್ಥಿಕ ಶಕ್ತಿಯನ್ನು ಕೊಟ್ಟಿರುವುದು ಬಹುಮುಖ್ಯ ವಿಚಾರವಾಗಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯ ಈ ರೀತಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರವನ್ನು ವಿಂಗಡಿಸಿ ರಾಜ್ಯಗಳ ಪಾಲಿಗೆ ಬಂದಿರುವ ವಿಷಯಗಳಲ್ಲಿ ಅಧಿಕಾರ ಚಲಾಯಿಸಲು ರಾಜ್ಯಗಳೇ ಸುಪ್ರೀಂ ಎಂದೂ ಘೋಷಿಸಿದೆ. ಅಷ್ಟೇ ಅಲ್ಲದೆ, ಈ ಅಧಿಕಾರ ವಿಂಗಡಣೆ ಸೂಕ್ಷ್ಮ ವ್ಯವಸ್ಥೆ ಭಾರತದ ಸಂವಿಧಾನದ ಬುನಾದಿ ಎಂದು ಘೋಷಿಸಿದೆ.

ಸಂವಿಧಾನದ ತಿದ್ದುಪಡಿಯ ಮೂಲಕವೂ ಅದನ್ನು ರಾಜ್ಯ ಗಳಿಂದ ಕಸಿಯಲು ಬರುವುದಿಲ್ಲ. ಹೀಗಾಗಿ ಸಂಸತ್ತು ಈ ವಿಷಯ ದಲ್ಲಿ ಮಧ್ಯೆಪ್ರವೇಶಿಸುವುದನ್ನು ನಿಷೇಧಿಸಿಬಿಟ್ಟಿದೆ. ಇದರಿಂದ ರಾಜ್ಯಗಳ ಸ್ವಾಯತ್ತತೆಯನ್ನು ಎಷ್ಟು ಕಷ್ಟಪಟ್ಟು ಸಾಧಿಸಿರುವ ಅಧಿಕಾರವಾಗಿದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಸಂಸತ್ತಿಗೆ ಇರು ವಂತೆ ಈ ಅಧಿಕಾರ ರಕ್ಷಣೆ ಮಾಡುವುದು ಈ ಸ್ವಾಯತ್ತತೆ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಭಯದ ಕರಿನೆರಳು

ಭಾರತದ ಸಂವಿಧಾನ ರಚನಾ ಸಭೆಯಲ್ಲಿಯೂ ಸಹ ಭಾರತ ಒಂದು ಹಿಂದೂರಾಷ್ಟ್ರವನ್ನಾಗಿ ಘೋಷಿಸಬೇಕು, ಒಂದೇ ದೇಶ, ಒಂದೇ ಭಾಷೆ, ಒಂದೇ ಧರ್ಮ ಇಲ್ಲಿ ಸ್ಥಾಪನೆಯಾಗಬೇಕೆಂ ಬುದು ಪುರೋಹೀತಶಾಹಿಗಳ ಒತ್ತಾಯ ಆಗಿತ್ತು. ಕೇವಲ ಬೆರಳೆಣಿಕೆಯಷ್ಟು ಜನ ಇಡೀ ಸಮಾಜದ ಜುಟ್ಟು ಹಿಡಿದು ಅಧಿಕಾರವನ್ನು ಬಿಟ್ಟುಕೊಡದ ಹಠಮಾರಿ ಧೋರಣೆಯನ್ನು ಧಿಕ್ಕರಿಸಿ ಭಾರತವನ್ನು ಒಂದು ಬಹುಮುಖಿ ಸಮಾಜವೆಂದು ಒಪ್ಪಿಕೊಳ್ಳಲಾಯಿತು.

‘ಹಿಂದೂರಾಷ್ಟ್ರವೆಂದು ಘೋಷಿಸಬೇಕೆಂಬ ಪುರೋಹಿತರ ಬೇಡಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಲಾಯಿತು. ಹಿಂದಿ ಭಾಷೆ ಯನ್ನು ಎಲ್ಲರ ಮೇಲೆ ಹೇರುವುದನ್ನು ತಿರಸ್ಕರಿಸಲಾಯಿತು’. ಅಷ್ಟೇ ಮುಖ್ಯವಾಗಿ ಎಲ್ಲ ರಾಜ್ಯಶಕ್ತಿಯನ್ನು ಕೇಂದ್ರದಲ್ಲಿ ಕ್ರೋಡೀಕರಿಸದೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಮಾಡಲಾಯಿತು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನೂ ಮತ್ತು ಸಮಾಜವಾದಿ ಚಿಂತಕ ಡಾ.ರಾಮ ಮನೋಹರ ಲೋಹಿಯಾರ ಚತುರ್‌ಸ್ತಂಭ ರಾಷ್ಟ್ರದ ಪರಿಕಲ್ಪ ನೆಯನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ ಒಂದು ಸುಧಾರಿತ ವಿಕೇಂದ್ರಿಕರಣ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಸ್ವೀಕರಿ ಸಲಾಗಿದೆ. ಇದರ ಮೇಲೆ ಇತ್ತೀಚಿನ ದಿನಗಳಲ್ಲಿ ಗಂಭೀರವಾದ ದಾಳಿ ನಡೆದಿರುವುದು ಸಂವಿಧಾನದ ಉಳಿವು-ಅಳಿವಿನ ಪ್ರಶ್ನೆಯಾಗಿ ಉದ್ಭವಿಸಿದೆ.

ಭಾರತದ ಧರ್ಮ ನಿರಪೇಕ್ಷತೆ

ಸ್ಪಷ್ಟವಾಗಿ ಮತ್ತು ನೇರವಾಗಿ ಸ್ವೀಕರಿಸಿದ ಪ್ರಧಾನ ವಿಷಯವೇ ನೆಂದರೆ ಒಂದೇ ಧರ್ಮ ಮತ್ತು ಒಂದೇ ರಾಷ್ಟ್ರವೆಂಬ ಕೂಗನ್ನು ತಿರಸ್ಕರಿಸಿ ಸಂವಿಧಾನದಲ್ಲಿ ಎಲ್ಲ ಧರ್ಮಗಳು ಕೂಡ ಸಾಮರಸ್ಯ ದಿಂದ ಬದುಕಲು ಬೇಕಾದಂತಹ ಕೋಮು ಸೌಹಾರ್ದಕ್ಕೆ ಭದ್ರ ಬುನಾದಿಯಾಗಿ ಜಾತ್ಯತೀತತೆ ಅಥವಾ ಧರ್ಮನಿರಪೇಕ್ಷತೆ ಯನ್ನು ಅಸ್ತಿತ್ವಕ್ಕೆ ತರಲಾಗಿದೆ.

ವ್ಯಕ್ತಿಗತ ಧಾರ್ಮಿಕ ಸ್ವಾತಂತ್ರವನ್ನು ಎತ್ತಿ ಹಿಡಿಯುತ್ತಾ...ಅಲ್ಪಸಂಖ್ಯಾತರ ರಕ್ಷಣೆಗೆ ಕಟಿಬದ್ಧವಾಗಿ ನಿಂತಿದ್ದರೂ, ಧರ್ಮದ ಉದ್ಧಾರಕ್ಕಾಗಿ ಯಾವುದೇ ತೆರಿಗೆಯನ್ನು ವಿಧಿಸುವಂತಿಲ್ಲ ಮತ್ತು ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಲಿಕ್ಕೆ ಬರುವುದಿಲ್ಲ ಎಂಬ ವಿಚಾರವನ್ನು ಮೂಲಭೂತ ಹಕ್ಕುಗಳೆಂದೇ ಗುರುತಿಸಲಾಗಿದೆ.

ಇಂತಹ ಸಂವಿಧಾನ ರಚನೆಯಾಗುವುದರ ವಿರುದ್ಧವೂ ಬಹಳಷ್ಟು ಶಕ್ತಿಗಳು ಕೆಲಸ ಮಾಡಿದ್ದವು. ಅಂತಹ ದುಷ್ಟ ಶಕ್ತಿಗಳನ್ನು ಮೆಟ್ಟಿನಿಂತು ಒಂದು ಜಾತ್ಯತೀತ ಸಂವಿಧಾನವನ್ನು ರಚನೆ ಮಾಡಲಿಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಅಂದಿನ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು.

ಕಷ್ಟಪಟ್ಟು ಸಾಧಿಸಿದ ಈ ಸಮತೋಲನವನ್ನು ನಾಶ ಮಾಡಿ, ಸಂವಿಧಾನ ಧಿಕ್ಕರಿಸಿ, ಕಾನೂನು ಕೈಗೆತ್ತಿಕೊಂಡು ಹಿಂದೂ ರಾಷ್ಟ್ರದ ಸ್ಥಾಪನೆಗೋಸ್ಕರವೇ ಹೊರಟಿರುವಂತಿರುವ ಗೋರಕ್ಷಕರು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಎಲ್ಲ ಕೋಮುವಾದಿ ಗಳು ರಾಜ್ಯಗಳ ಸ್ವಾಯತ್ತತೆ ಮತ್ತು ರಾಷ್ಟದ ಬುಹುಮುಖಿ ಸಮಾಜದ ಅಸ್ತಿತ್ವದ ಮೇಲೆ ಗಧಾ ಪ್ರಹಾರ ಮಾಡಿವೆ. ಇತ್ತೀಚಿನಕೆಲ ಬೆಳವಣಿಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸೋಣ.

ಆರ್ಥಿಕ ಸ್ವಾಯತ್ತತೆ

ಯಾವುದೇ ರಾಜ್ಯದ ಸ್ವಾಯತ್ತತೆ ಸದೃಢವಾಗಿ ಮತ್ತು ಆರೋಗ್ಯ ವಾಗಿರಬೇಕೆಂದರೆ ಅಂತಹ ರಾಜ್ಯಗಳ ಖಜಾನೆಗೆ ಹಣವನ್ನು ಬರುವಂತೆ ಮಾಡಲು ಇರುವ ಪ್ರಧಾನವಾದಂತಹ ಅಸ್ತ್ರ ವೆಂದರೆ ತೆರಿಗೆ ಹಾಕುವುದು. ಅದರಲ್ಲೂ ವಿಶೇಷವಾಗಿ ರಾಜ್ಯಗಳ ಬೆನ್ನೆಲುಬು ಆಗಿದ್ದು ವಾಣಿಜ್ಯ ತೆರಿಗೆ. ಆದರೆ, ಸಂಸತ್ ಇತ್ತೀಚೆಗೆ ತಂದಿರುವ ಸಂವಿಧಾನದ ತಿದ್ದುಪಡಿ, ರಚಿಸಿರುವ ಕಾನೂನು ಮತ್ತು ಹೇರಿರುವ ಜಿಎಸ್‌ಟಿ ರಾಜ್ಯಗಳ ವಾಣಿಜ್ಯ ತೆರಿಗೆ ಅಧಿಕಾರವನ್ನು ಸಂಪೂರ್ಣವಾಗಿ ಕಿತ್ತು ಆರ್ಥಿಕ ಸಂಪನ್ಮೂಲಕ್ಕೆ ಕೇಂದ್ರವನ್ನು ಆಶ್ರಯಿಸುವ ಒಂದು ಊಳಿಗಮಾನ್ಯ ಪದ್ಧತಿಯನ್ನು ಜಾರಿಗೊಳಿಸಲಾಗಿದೆ.

ಆ ಮೂಲಕ ಪ್ರತಿವರ್ಷ ರಾಜ್ಯಗಳ ಸಂಪನ್ಮೂಲಗಳಿಗಾಗಿ ಕೇಂದ್ರದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲಬೇಕಾದ ಅನಿ ವಾರ್ಯತೆಯನ್ನು ಈ ಹೊಸ ಬೆಳವಣಿಗೆ ತಂದಿದೆ. ಆರ್ಥಿಕ ಸ್ವಾಯತ್ತತೆ ಹೋದರೆ ಇನ್ಯಾವ ಸ್ವಾಯತ್ತತೆಯನ್ನೂ ಉಳಿಸಿಕೊಳ್ಳಲು ಆಗುವುದಿಲ್ಲ. ಇದಕ್ಕೆ ಇಂಬು ಕೊಡುವಂತೆ ಕೆಲಸ ಮಾಡಿದ ಮತ್ತೊಂದು ವಿಷಯವೆಂದರೆ ಕಳೆದ ವರ್ಷ ಜಾರಿಗೆ ತರಲಾದ ಗರಿಷ್ಠ ಮೊತ್ತದ 1 ಸಾವಿರ ಮತ್ತು 500 ರೂ. ನೋಟುಗಳ ಚಲಾವಣೆ ರದ್ದತಿ.

ನೋಟು ರದ್ದತಿಯಾದ ಕೂಡಲೇ ನಡೆದ ಉತ್ತರಪ್ರದೇಶ ವಿಧಾನಸಭೆ ಚುನಾ ವಣೆಯಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷವೇ ಆ ರಾಜ್ಯದಲ್ಲಿಯೂ ಆಡಳಿತಕ್ಕೆ ಬರಲು ಸಾಧ್ಯಮಾಡಿಕೊಟ್ಟಿತು. ಅಲ್ಲದೆ, ಅಲ್ಲಿ ಅಧಿಕಾ ರದಲ್ಲಿದ್ದ ಪ್ರಾದೇಶಿಕ ಪಕ್ಷವಾದ ಸಮಾಜವಾದಿ ಪಕ್ಷ(ಎಸ್ಪಿ) ಮತ್ತು ಅದಕ್ಕೆ ಬದಲಾಗಿ ಸರಕಾರ ರಚಿಸುತ್ತಿದ್ದ ಬಹುಜನ ಸಮಾಜ (ಬಿಎಸ್ಪಿ) ಪಕ್ಷಗಳ ಮುಲೋತ್ಪಾಟನೆ ಮಾಡಿ ರುವುದೇ ಒಂದೇ ಪಕ್ಷದ ಆಡಳಿತ ಸ್ಥಾಪನೆಗೆ ಪ್ರತ್ಯಕ್ಷ ಕಾರಣವಾಗಿರುವುದು ಈ ನೋಟು ರದ್ದತಿ. ಆರ್ಥಿಕವಾಗಿ ಅಷ್ಟೇ ಅಲ್ಲದೆ ರಾಜಕೀಯವಾಗಿ ಯೂ ಇದರ ಪರಿಣಾಮವನ್ನು ಕಾಣಬಹು ದಾಗಿದೆ.

ಸಾಮಾಜಿಕ ಸ್ವಾಯತ್ತತೆ

ಭಾರತದ ಸಂವಿಧಾನದಡಿಯಲ್ಲಿ ಇರುವ ಪ್ರತಿ ಯೊಂದು ರಾಜ್ಯಕ್ಕೂ ಸಹ ತನ್ನದೇ ಆದಂತಹ ಸಾಮಾಜಿಕ ನ್ಯಾಯದ ನೀತಿಯನ್ನು ರೂಪಿಸಿ ಆಯಾ ರಾಜ್ಯಗಳಲ್ಲಿರುವ ವಸ್ತು ಸ್ಥಿತಿಗೆ ಅನುಗು ಣವಾಗಿ ಹಿಂದುಳಿದ ಜಾತಿಗಳ ಪಟ್ಟಿ ಸಿದ್ಧಮಾಡಿ ಅವುಗಳ ಮುನ್ನಡೆಗೆ ಜಾರಿಗೊಳಿಸಬೇಕಿದ್ದ ನೀತಿ- ನಿಯಮಗಳನ್ನು ಮತ್ತು ಕಾರ್ಯಕ್ರಮಗಳನ್ನು ಜಾರಿಗೊ ಳಿಸುವ ಅಧಿಕಾರ ಆಯಾ ರಾಜ್ಯ ಸರಕಾರಗಳಿಗೆ ಇತ್ತು.

1962ನೆ ಇಸವಿಯ ಬಾಲಾಜಿ ಮೊಕದ್ದಮೆಯ ತೀರ್ಪಿನ ಕಾಲ ದಿಂದಲೂ ರಾಜ್ಯಗಳ ಈ ಸಾಮಾಜಿಕ ನ್ಯಾಯ ಕೊಡುವ ಅಧಿಕಾರವನ್ನ್ನು ಸರ್ವೋಚ್ಚ ನ್ಯಾಯಾಲಯವೂ ಎತ್ತಿ ಹಿಡಿದಿದೆ. ಇತ್ತೀಚಿನ ಸಂವಿಧಾನದ 123ನೆ ತಿದ್ದುಪಡಿಯ ರಾಜ್ಯಗಳ ಈ ಅಧಿಕಾರವನ್ನು ಕಸಿಯುವ ಹುನ್ನಾರವಾಗಿದೆ. ಲೋಕಸಭೆಯಲ್ಲಿ ಮಂಡಿಸಿ, ಯಶಸ್ವಿಯಾಗಿ ಅನುಮೋದನೆ ಪಡೆದ 123ನೆ ತಿದ್ದುಪಡಿಯಂತೆ ಕೇಂದ್ರ ಸರಕಾರಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಅದಕ್ಕೆ ಸಂವಿಧಾನದ ಸ್ಥಾನಮಾನ ನೀಡಿದರೆ ಉಳಿದೆಲ್ಲ ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗಗಳಿಗೆ ಮಾರಕವಾಗಲಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಸರಕಾರಗಳು ಯಾವುದೇ ಸಾಮಾಜಿಕ ನೀತಿ-ನಿಯ ಮಗಳನ್ನು ಜಾರಿಗೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷ ಸ್ಥಾಪಿಸಿದ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಮಾತ್ರ ಸಲಹೆ-ನಿರ್ದೇಶನ ಪಡೆದುಕೊಳ್ಳಬೇಕು. ಆ ಮೂಲಕ ಈ ದೇಶದ ಬಹುಸಂಖ್ಯಾತರು ಕೇಂದ್ರದ ಶೇ.27 ಮತ್ತು ರಾಜ್ಯದ ಶೇ.32ರಷ್ಟಿರುವ ಮೀಸಲಾತಿಗೆ ಭಾಜನರಾಗಿರುವ ಸುಮಾರು 55 ರಿಂದ 60 ಪ್ರತಿಶತ ಜನಸಂಖ್ಯೆಯ ಹಿಂದುಳಿದ ವರ್ಗಗಳ ಮೇಲೆ ರಾಜ್ಯಗಳ ಅಧಿಕಾರ ಕಸಿದುಕೊಂಡಂತಾಗಿದೆ.

ಅಂದರೆ ಪ್ರತಿಯೊಂದು ರಾಜ್ಯಗಳ ಹಿಂದುಳಿದ ವರ್ಗಗಳು (ಆಯಾ ರಾಜ್ಯಗಳ ಬಹುಸಂಖ್ಯಾತರು) ಸಾಮಾಜಿಕ ನ್ಯಾಯದ ನಿರ್ಣಯಗಳನ್ನು ಸಹ ಕೇಂದ್ರ ಸರಕಾರದ ಅಧೀನಕ್ಕೆ ಒಳಪಡುತ್ತಾರೆ. ಈ ಮೂಲಕ ರಾಜ್ಯಗಳಿಗೆ ಇರುವ ಸ್ವಾಯತ್ತ ಅಧಿಕಾರ ನಶಿಸಿ ಕೇಂದ್ರದ ಆಣತಿಯಂತೆ ಕೆಲಸ ಮಾಡಬೇಕಾಗುವ ಅನಿವಾರ್ಯತೆ ಸೃಷ್ಟಿಸಿ ಸಾಮಾಜಿಕ ಸ್ವಾಯತ್ತತೆ ಸಂಪೂರ್ಣ ನಾಶವಾಗುವುದನ್ನು ನೋಡಬಹುದಾಗಿದೆ.

ಶೈಕ್ಷಣಿಕ ಸ್ವಾಯತ್ತತೆ

ಕರ್ನಾಟಕ ರಾಜ್ಯದಲ್ಲಿ ಬಹುದೊಡ್ಡ ರೀತಿಯಲ್ಲಿ ಶಿಕ್ಷಣದಲ್ಲಿ ಮುಂದುವರಿಯಲು ಪ್ರಮುಖ ಕಾರಣ ಈ ರಾಜ್ಯಕ್ಕೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಸ್ವಾಯತ್ತ ಅಧಿಕಾರವಿರುವುದೇ ಆಗಿದೆ. ಕೇಂದ್ರದ ಮೇಲೆ ಅವಲಂಬಿಸದೆ ರಾಜ್ಯದ ಹಿತಾಸಕ್ತಿಯಂತೆ ತನಗೆ ಇಷ್ಟ ಬಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುವ ಅಧಿಕಾರ ಕರ್ನಾಟಕ ರಾಜ್ಯಕ್ಕೆ ಅನಿರ್ಬಂಧಿತವಾಗಿ ಸಂವಿ ಧಾನದಿಂದ ಬಂದಿದೆ.

ಆದರೆ, ಇತ್ತೀಚೆಗೆ ತಾನೆ ಕೇಂದ್ರ ಸರಕಾರ ಜಾರಿಗೊಳಿಸಿರುವ ವೈದ್ಯ ಮತ್ತು ದಂತ ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ‘ನೀಟ್’ ಪರೀಕ್ಷಾ ಪದ್ಧತಿ ಎಲ್ಲ ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆಗೆ ಮಾರಕವಾಗಿದೆ. ಅಲ್ಲದೆ, ಕೇವಲ ಕೇಂದ್ರ ಸರಕಾರದ ವ್ಯಾಪ್ತಿಯ ಶಿಕ್ಷಣ ವ್ಯವಸ್ಥೆ ಯಲ್ಲಿ ಕಲಿತ, ಸಿಬಿಎಸ್ಸಿ ಶಾಲೆಗಳಲ್ಲಿ ಅಭ್ಯಾಸ ಮಾಡಿದ ಮಕ್ಕಳಿಗೆ ಮಾತ್ರವೇ ವರದಾನವಾಗಲಿದೆ.

ಹಿಂದಿ ಹೇರಿಕೆ

ರಾಷ್ಟ್ರದಲ್ಲಿ ಒಂದೇ ಭಾಷೆಯನ್ನಾಗಿ ಹಿಂದಿ ಹೇರುವ ಹುನ್ನಾರಕ್ಕೆ ಇತಿಶ್ರೀ ಹಾಡಿದ್ದೂ ಭಾರತದ ಸಂವಿಧಾನ. ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಪರಿಚ್ಛೇದ 345ರ ಪ್ರಕಾರ ಒಂದು ರಾಜ್ಯದ ಆಡಳಿತ ಭಾಷೆಯಾಗಿ ಆಯಾ ರಾಜ್ಯಗಳಲ್ಲಿ ಆಡುವ ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡುವ ಪರಮೋಚ್ಚ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ.

ಆ ರೀತಿ ಕಾನೂನು ಮಾಡುವವರೆಗೆ ಇಂಗ್ಲಿಷ್ ಭಾಷೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಡಲಾಗಿದೆ. ಅದರಲ್ಲೂ ವಿಶೇಷವಾಗಿ ಭಾಷಾವಾರು ಪ್ರಾಂತಗಳ ರಚನೆಯಾದ ನಂತರ ಪರಿಚ್ಛೇದ 350 ‘ಎ’ ಸೇರಿಸಿ ರಾಜ್ಯಗಳ ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ಅವರ ಮಾತೃಭಾಷೆಯಲ್ಲಿಯೂ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣವನ್ನು ಕೊಡುವಂತೆ ನಿರ್ದೇಶನ ನೀಡಲಾಗಿದೆ.

ಅದರಲ್ಲೂ ಪರಿಚ್ಛೇದ 344 ಮತ್ತು 351ರ ಮತ್ತು ಎಂಟನೇ ಅನುಬಂಧದಲ್ಲಿ, ಒಟ್ಟು 22 ಭಾಷೆಗಳನ್ನು ಗುರುತಿಸಿ ಆ 22 ಭಾಷೆಗಳಿಗೆ ಹಿಂದಿಯೆಷ್ಟೇ ಪ್ರಧಾನ ಸ್ಥಾನಮಾನವನ್ನು ನೀಡಲಾಗಿದೆ. ಇತ್ತೀಚೆಗೆ ಹಿಂದಿ ಭಾಷೆಯನ್ನು ಇತರ ಭಾಷೆಗಳ ಜನರ ಮೇಲೆ ಹೇರುವ ಹುನ್ನಾರ ಸಂವಿಧಾನದ ನೇರ ಮತ್ತು ಸ್ಪಷ್ಟ ಉಲ್ಲಂಘನೆಯಾಗಿದೆ. ಭಾಷೆ ವಿಷಯದಲ್ಲಿ ಇರುವಂತಹ ರಾಜ್ಯಗಳ ಸ್ವಾಯತ್ತತೆಗೆ ತೀವ್ರ ಧಕ್ಕೆಯುಂಟುಮಾಡಿದೆ. ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆಯಾದ ನಂತರ ಅಂತಹ ರಾಜ್ಯಗಳ ಭಾಷೆಯನ್ನು ಕಡೆಗಣಿಸಿ ಆ ಜನರ ಮೇಲೆ ಹಿಂದಿಯನ್ನು ಹೇರುವುದು ರಾಜ್ಯದ ಒಕ್ಕೂಟ ವ್ಯವಸ್ಥೆಗೆ ಗಂಭೀರ ಧಕ್ಕೆಯುಂಟು ಮಾಡುತ್ತಿದೆ.

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಮತ್ತು ವಿಶೇಷವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳನ್ನು ವೈದ್ಯಕೀಯ, ದಂತ ವೈದ್ಯ ಸೇರಿದಂತೆ ವೃತ್ತಿಪರ ಶಿಕ್ಷಣ ಕೋರ್ಸ್ ಗಳಿಂದ ವಂಚನೆ ಮಾಡಲಾಗಿದೆ. ಇದು ಎಲ್ಲ ರಾಜ್ಯಗಳ ಶೈಕ್ಷಣಿಕ ಪ್ರಗತಿಗೆ ಮಾರಕ ವಾಗಿದೆ. ಕೆಲವೇ ವರ್ಷಗಳಲ್ಲಿ ಹಿಂದಿಯೇ ತರ ರಾಜ್ಯಗಳಲ್ಲಿ ಸಾಮಾಜಿಕವಾಗಿ ಮಾತ್ರ ವಲ್ಲದೆ, ಶೈಕ್ಷಣಿಕವಾಗಿಯೂ ಹಿಂದುಳಿ ಯುವ ದುರಂತವನ್ನು ನಿರೀಕ್ಷೆ ಮಾಡಬ ಹುದಾಗಿದೆ. ಇಂತಹ ಮಾರಕ ನೀಟ್ ಪರೀಕ್ಷಾ ಪದ್ಧತಿಗೆ ಕೇವಲ ತಮಿಳುನಾಡು ಮಾತ್ರ ವಿರೋಧ ವ್ಯಕ್ತ ಪಡಿಸಿದೆ. ವಿಕೇಂದ ರ್ರೀಕೃತ ಶೈಕ್ಷಣಿಕ ಸ್ವಾಯತ್ತತೆ ಅನುಭವಿಸಿದ ಬೇರೆ ಯಾವುದೇ ರಾಜ್ಯಗಳು ತಕರಾರು ಎತ್ತದೆ ಇರುವುದು ಒಂದು ಗಂಭೀರವಾದ ಸಮಸ್ಯೆಯಾಗಿದೆ.

ರಾಜಮನ್ನಾರ್ ಸಮಿತಿ

ರಾಜ್ಯಗಳ ಸ್ವಾಯತ್ತತೆಯನ್ನು ಇನ್ನೂ ಹೆಚ್ಚು ಸದೃಢವಾಗಿ ಮಾಡಲು ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಡಿಎಂಕೆ ಸರಕಾರ ನ್ಯಾಯಮೂರ್ತಿ ರಾಜಮನ್ನಾರ್ ಸಮಿತಿಯನ್ನು ನೇಮಿಸಿತು. ಸಮಿತಿಯು ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಹೆಚ್ಚು ಆರೋಗ್ಯಕರವಾಗಿ ಮಾಡುವ ಸಲುವಾಗಿ ಗಂಭೀರ ಶಿಫಾರಸುಗಳನ್ನು ಮಾಡಿತು. ಆದರೆ, ಇವು ಇದುವರೆಗೆ ಜಾರಿಗೊಳ್ಳಲಿಲ್ಲ. ಎಂದಾದರೂ ಮೂಲ ಸಂವಿಧಾನದಲ್ಲಿ ಅಡಕವಾಗಿರುವ ರಾಜ್ಯಗಳ ಸ್ವಾಯತ್ತತೆಗೆ ಯಾರೂ ಧಕ್ಕೆ ಮಾಡಿಲ್ಲ.

ಸರಕಾರಿಯಾ ಮತ್ತು ವೆಂಕಟಾಚಲಯ್ಯ ಕಮಿಶನ್‌ಗಳು

ಈ ಎರಡೂ ಕಮಿಶನ್‌ಗಳು ರಾಜ್ಯಗಳ ಸ್ವಾಯತ್ತತೆಯನ್ನು ಇನ್ನೂ ಶ್ರೀಮಂತಗೊ ಳಿಸುವಂತೆ ಹೇಳದೆ ಯಥಾಸ್ಥಿತಿ ಮುಂದುವರಿಯುವಂತೆ ಮಾಡಿರುವ ಶಿಫಾರಸುಗಳು, ಯಾವುದೇ ಸಂವಿಧಾನ ತಿದ್ದುಪಡಿ ಬಗ್ಗೆ ಗಂಭೀರವಾದ ಪ್ರಶ್ನೆ ಎತ್ತಲಿಲ್ಲ. ಬದಲಾಗಿ ರಾಜಮನ್ನಾರ್ ಸಮಿತಿಯ ಬಲವಾದ ಶಿಫಾರಸುಗಳನ್ನು ಮರೆಸಲು ಉಪಯೋಗಿಸಿ ಕೊಳ್ಳಲಾಗಿದೆ.

ದುರಂತವೆಂದರೆ ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ರಾಜ್ಯ ಸರಕಾರ ಮೊದಲಿನಿಂದಲೂ ರಚಿತವಾಗಿರುವುದರಿಂದ ಒಮ್ಮೆ ದೇವರಾಜ ಅರಸರ ಕಾಲದಲ್ಲಿ ಮಾಡಿದ ವಿಫಲ ಪ್ರಯತ್ನ ಬಿಟ್ಟರೆ ಮುಂದೆಂದೂ ರಾಜ್ಯಗಳ ಸ್ವಾಯತ್ತತೆ ಪರವಾಗಿ ಧ್ವನಿ ಎತ್ತಿಲ್ಲ. ಪ್ರಾರಂಭದಲ್ಲಿ ಪೆರಿಯಾರ್ ರಾಮಸ್ವಾಮಿಯವರ ಆದರ್ಶಗಳಿಗೆ ಕಟ್ಟುಬಿದ್ದು ಸ್ವಾಯತ್ತತೆಯನ್ನು ಪ್ರಬಲವಾಗಿ ಪ್ರತಿಪಾದಿಸಿದರೂ ತಮಿಳುನಾಡು ಸರಕಾರ ಅವರ ನಿಧನ ನಂತರ ಸ್ವಾಯತ್ತತೆಯ ಧ್ವನಿಯನ್ನೇ ಎತ್ತುತ್ತಿಲ್ಲ.

ಹೀಗೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆಗುತ್ತಿರುವ ಎಲ್ಲ ಬದಲಾವಣೆಗಳನ್ನು ಕೇಂದ್ರದಲ್ಲಿ ಅಧಿಕಾರ ಕೇಂದ್ರೀಕೃತವಾಗುತ್ತಿರುವುದು ಮಾತ್ರವಲ್ಲದೆ, ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಅನಾವರಣ ಮಾಡಬೇಕಾದ ಭೂಮಿಕೆಯನ್ನು ರಾಷ್ಟ್ರದ ಸ್ವಾಯತ್ತತೆ ನಾಶದ ಮೂಲಕ ಸಾಧಿಸುವುದೇ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)