ಕತ್ತೆಗೊಂದು ಕಾಲ
ಶರ್ಮಾ ದಂಪತಿಯನ್ನು ಶ್ರೀಮಠದ ಆಡಳಿತವರ್ಗ ಅತಿಗಣ್ಯಾತಿಗಣ್ಯ ಅತಿಥಿಗಳೆಂದು ಪರಿಗಣಿಸಿತ್ತು. ಅವರಿಗೆ ತಿಪ್ಪೆ ಹೆಸರಿನ ವೈಭವೋಪೇತ ಅತಿಥಿಗೃಹದಲ್ಲಿ ವಾಸ್ತವ್ಯ ಕಲ್ಪಿಸಲಾಯಿತು. ಇಲ್ಲೊಂದು ವಿಶೇಷ ಸಂಗತಿ ಎಂದರೆ ಗಾರ್ದಭಾನಂದ ಪ್ರಭುಪಾದರನ್ನು ಉತ್ತರಾಧಿಕಾರಿಗಳೆಂದು ಪೂಜ್ಯ ಹಿರಿಯ ಸ್ವಾಮೀಜಿ ಘೋಷಿಸಿದ ಬಳಿಕ ಶ್ರೀಮಠ ಶರವೇಗದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ದೇಶದ ನಾನಾಕಡೆಯಿಂದ ಕೋಟ್ಯಧೀಶರು, ಉದ್ಯಮಿಗಳು, ರಾಜಕಾರಣಿಗಳು ‘ಅದನ್ನು ನಾನು ಇದನ್ನು ನೀನು ಎಂದು’ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಶ್ರೀಮಠದ ಶ್ರೇಯೋಭಿವೃದ್ಧ್ದಿಗೆ ಶ್ರಮಿಸುತ್ತಿದ್ದರು.
ಪೀಠಿಕಾ ಪ್ರಕರಣ
ಮಾತೃಭಾಷೆಯಲ್ಲಿ ಬರೆದರೆ ಕಷ್ಟ ಓದುವುದು, ಇನ್ನು ಮೃತಭಾಷೆಯಲ್ಲಿ ಬರೆದರೆ ಓದುವುದುಂಟೆ! ಈ ಸಮಸ್ಯೆಯನ್ನು ಅಕ್ಷರಶಃ ಎದುರಿಸಿದ್ದು ಪಂಡಿತ್ ವಿಲೋಮ ಶರ್ಮಾ. ಅವರು ಧರಿಸುತ್ತಿದ್ದುದೋ ಅಚ್ಚ ಬಿಳಿ ಉಡುಪು, ದಿನನಿತ್ಯ ಕ್ಷೌರ ಮಾಡಿಕೊಳ್ಳುತ್ತಿದ್ದುದರಿಂದಲೂ ಅಕ್ಷರಶಃ ಕೇಸರಿವರ್ಣದವರಾಗಿದ್ದರಿಂದಲೂ ಅವರ ಮುಖ ತಾಮ್ರದ ಪಾತ್ರೆಯಂತೆ ಹೊಳೆಯುತ್ತಿತ್ತು, ಪುಷ್ಕಲವಾಗಿದ್ದ ತಲೆಗೂದಲು ಬಿರುಗಾಳಿಗೂ ಮಿಸುಕುತ್ತಿರಲಿಲ್ಲ. ಇನ್ನು ಅದೇ ಮುಖದ ಮೇಲೆ ತ್ರಿಪುಂಡ್ರ ನಾಮಗಳಿತ್ಯಾದಿ ಜಾತಿಸೂಚಕ ಮುದ್ರಿತ ಲಾಂಛನಗಳು ಬೇರೆ. ಇನ್ನು ಕೊರಳಲ್ಲಿ ಅಭಿಮಂತ್ರಿತ ರುದ್ರಾಕ್ಷಿ ಮಾಲೆಗಳ ನಡುವೆ ತರಾವರಿ ಚಿನ್ನದ ಸರಗಳು, ಇನ್ನು ಅವರ ನೀಳಕಾಯವೋ ಅದರ ವಝನವೋ! ಶ್ರೀಯುತರು ಭೂಮಿ ಕಂಪಿಸುವಂತೆ ಹೆಜ್ಜೆ ಇಕ್ಕುತ್ತ ನಡೆಯುತ್ತಿದ್ದರು, ಶ್ರೀಯುತರು ಬಾಯಿ ತೆರೆದರೆ ಗುಡುಗು ಸಿಡಿಲುಗಳನ್ನು ನೆನಪಿಸುತ್ತಿದ್ದರು. ಇನ್ನು ಬಾಹುಗಳು ಮೊಣಕಾಲವರೆಗೆ ವಿಸ್ತರಿಸಿದ್ದರಿಂದ ಶ್ರೀಯುತರು ತಮ್ಮನ್ನು ತಾವು ವಿಷ್ಣುಪರಮಾತ್ಮನ ವ್ಯಕ್ತಿತ್ವಕ್ಕೆ ಹೋಲಿಸಿಕೊಳ್ಳಲು ನಾಚಿಕೊಳ್ಳುತ್ತಿರಲಿಲ್ಲ. ಅದಕ್ಕೆಂದೆ ತಮ್ಮ ಹಸ್ತಗಳನ್ನು ಚಿನ್ನದ ಕಡಗಗಳಿಂದಲೂ ನವರತ್ನಖಚಿತ ಹರಳುಗಳಿಂದ ಶೃಂಗರಿತ ಉಂಗುರಗಳಿಂದಲೂ ಸಿಂಗರಿಸಿ ವಿಷ್ಣು ಮೇಲಿನ ಅಪಾರಭಕ್ತಿಯನ್ನು ಪ್ರಕಟಿಸುತ್ತಿದ್ದರು. ಇನ್ನು ಅವರ ವಿದ್ವತ್ತಿಗೆ ಬಂದರೆ ಕಾಶಿಯಲ್ಲೊಂದೇ ಅಲ್ಲದೆ ಜರ್ಮನ್ ದೇಶದಲ್ಲೂ ಸಂಸ್ಕೃತವನ್ನು ಅಧ್ಯಯನ ಮಾಡಿದ್ದರು, ಕಾಳಿದಾಸ ಬಾಣ ಬಾರವಿಗಳಂಥ ಸೃಜನಶೀಲ ಲೇಖಕರ ಹಾಗೂ ದಂಡಿ ಕುಂತಕ ಅಭಿನವ ಗುಪ್ತರಂಥ ವೈಯಾಕರಣಿಗಳ ಅಭೇದ್ಯ ಕೃತಿಗಳನ್ನು ಜೀರ್ಣಿಸಿಕೊಂಡು ವಾತಾಪಿ ಎಂದು ಮಠಮಾನ್ಯಗಳಿಂದ ಶ್ಲಾಘಿಸಿಕೊಂಡಿದ್ದರು. ಸಂಸ್ಕೃತ ಭಾಷೆಯಲ್ಲಿ ಅವು ಇವು ಮಾತ್ರವಲ್ಲದೆ ಮಹಾಕಾವ್ಯಗಳನ್ನು ರಚಿಸಿ ರಾಷ್ಟ್ರಪತಿಗಳ ಮುಗುಳುನಗೆಗೆ ಪಾತ್ರರಾಗಿದ್ದರು, ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಹೊರತುಪಡಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಅಂಥ ತಮ್ಮ ಬಗ್ಗೆ ಈ ಪ್ರಾದೇಶಿಕ ಭಾಷಾ ಲೇಖಕರಿಗೇಕೆ ಅಸಡ್ಡೆ ಎನ್ನುವುದು ಅರ್ಥವಾಗುತ್ತಿಲ್ಲ! ಕನಿಷ್ಠಪಕ್ಷ ತಮ್ಮ ಷಷ್ಠ್ಯಬ್ಧಿ ಸಮಾರಂಭವನ್ನು ಆಚರಿಸಬಾರದೇನು ಇವರು! ತಮ್ಮ ಸಾಧನೆ ಕುರಿತು ಅಭಿನಂದನಾ ಗ್ರಂಥವನ್ನೆಂದೋ ಸಂಪಾದಿಸಿ ಗೌರವಿಸಿ ವಾಗ್ದೇವಿಯ ಕೃಪೆಗೆ ಪಾತ್ರರಾಗಬಹುದಿತ್ತು ಎಂದು ತಮ್ಮಷ್ಟಕ್ಕೆ ತಾವೇ ಗೊಣಗುವುದು ಶ್ರೀಯುತರ ದಿನಚರಿಯ ಭಾಗವಾಗಿತ್ತು. ಹ್ಹಾ ಅಂದಹಾಗೆ.. ಈ ಅತೃಪ್ತಿ ಶ್ರೀಯುತರನ್ನು ಕಾಡಲಾರಂಭಿಸಿದ್ದು ಅರವತ್ತರ ಬಳಿಕ. ಅವೆರಡು ಹಾಳಾಗಿ ಹೋಗಲಿ, ಹೋಗುವಾಗ ಬರುವಾಗ ಸ್ಥಳೀಯರು ತಮ್ಮನ್ನು ಗುರುತಿಸಿ ನಮಸ್ಕರಿಸದಿರುವುದು ಅಪಮಾನವೆಂದು ಭಾವಿಸಿದರು. ಆ ನಗರದಲ್ಲಿ ಲೇಖಕ ಸಾಹಿತಿಗಳಿದ್ದರು, ಸಾಹಿತ್ಯಿಕ ಸಂಘ ಸಂಸ್ಥೆಗಳು ಸಹ ಇದ್ದವು. ಸಾಹಿತ್ಯ ಅಕಾಡಮಿಗಳಿದ್ದವು. ಅಲ್ಲಿನ ಲೇಖಕರು ಎಲ್ಲೆಲ್ಲೊ ಹೋಗಿ ಉಪನ್ಯಾಸಗಳನ್ನು ನೀಡಿ ಮಾಧ್ಯಮಗಳಲ್ಲಿ ಮಿಂಚುತ್ತಿದ್ದರು. ನೀನೆನಗಿದ್ದರೆ ನಾನಿನಗೆ ಎಂಬ ಸಹಕಾರ ತತ್ವದ ಆಧಾರದ ಮೇಲೆ ಬೇರೆ ಬೇರೆ ನಗರವಾಸಿ ಸಾಹಿತಿಗಳನ್ನು ತಮ್ಮ ನಗರಕ್ಕೆ ಬರಮಾಡಿಕೊಂಡು ಸತ್ಕರಿಸುತ್ತಿದ್ದರು. ಆದರೆ ಅವರ್ಯಾರು ಇವರನ್ನು ಅಪ್ಪಿತಪ್ಪಿ ಮಾತಾಡಿಸುತ್ತಿರಲಿಲ್ಲ. ಇವರು ಸ್ವಯಂಪ್ರೇರಣೆಯಿಂದ ಮಾತಾಡಿಸಿದರು ಮಾತಾಡಿಸದೆ ಕಂಡು ಕಾಣದವರಂತೆ ಹೋಗುತ್ತಿದ್ದರು. ಇದು ಇವರ ಸಮಸ್ಯೆ ಮಾತ್ರವಾಗಿರಲಿಲ್ಲ, ಶ್ರೀಯುತರ ಧರ್ಮಪತ್ನಿ ಪ್ರಸೂನಮಾಂಬೆಯವರದ್ದು ಸಹ ಆಗಿತ್ತು. ಪ್ರಸಿದ್ಧ ಸಂಸ್ಕೃತ ಭಾಷೆಯ ಸಾಹಿತಿಯ ಪತ್ನಿಯಾದ ತಮಗೆ ನೆರೆಹೊರೆಯ ಮಹಿಳೆಯರು ಕನಿಷ್ಠ ಗೌರವ ಕೊಡುವುದು ಬೇಡವೆ! ಸಕ್ಕರೆ ಕಾಫಿಪುಡಿ ಇತ್ಯಾದಿ ಕೇಳಿ ಪಡೆದು ತಮ್ಮ ಹಂಗಿನಲ್ಲಿರುವುದು ಬೇಡವೆ! ತಮ್ಮ ಮನೆಯನ್ನು ಪ್ರವೇಶಿಸಿ ಕಪಾಟೊಳಗೆ ಅಲಂಕರಿಸಲ್ಪಟ್ಟಿರುವ ಸ್ಮರಣಿಕೆಗಳನ್ನು ಕಣ್ತುಂಬ ನೋಡುವುದು ಬೇಡವೆ! ತಮ್ಮ ಮನೆಯ ಆಕರ್ಷಕ ಕಪಾಟಿನಲ್ಲಿ ಜೋಡಿಸಿಟ್ಟಿರುವ ಸಂಸ್ಕೃತ ಪಾಲಿ ಪೈಶಾಚಿಕ ಹಾಗೂ ಇನ್ನಿತರ ಅಲಭ್ಯ ಭಾಷೆಗಳ ತೂಕದ ಗ್ರಂಥಗಳನ್ನು ತೆರೆದು ನೋಡುವುದೊತ್ತಟ್ಟಿಗಿರಲಿ ಅಬ್ಬಾ ಎಂದು ಉದ್ಗರಿಸುವುದಾದರು ಬೇಡವೇನು! ಛೀ ಛೀ ಎಂದು ಅಭಿರುಚಿಹೀನರು ಎಂದು ಸಿಡಿಮಿಡಿಗುಟ್ಟುತ್ತಿದ್ದರು. ತಾವು ವಾಸಿಸುತ್ತಿರುವುದು ಕಾಡಲ್ಲೊ ಊರಲ್ಲೋ! ಪ್ರತಿನಿತ್ಯ ವಟಗುಟ್ಟುತ್ತಿದ್ದರು. ಇವೊಂದೇ ಅಲ್ಲದೆ ದಿನಂಪ್ರತಿ ಒಂದಲ್ಲಾ ಒಂದು ಅಪಶಕುನಗಳು ಬೇರೆ. ಈ ಸಸ್ಯಾಹಾರಿ ದಂಪತಿ ಮೃಷ್ಟಾನ್ನ ಭೋಜನ ಮಾಡುತ್ತಿದ್ದರು ಸಹ ಈ ತೆರನ ಚಿಂತೆಯಿಂದ ರಕ್ತಹೀನತೆಯಿಂದ ನರಳಲಾರಂಭಿಸಿದರು. ಅಲ್ಲದೆ ನಿದ್ರಾಹೀನತೆ ಬೇರೆ, ಅಲ್ಲದೆ ತಮಗೆ ಬೀಳುತ್ತಿದ್ದ ದುಃಸ್ವಪ್ನಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ತಮ್ಮ ಮಲಮೂತ್ರ ಪರೀಕ್ಷಿಸಿದ ವೈದ್ಯರ ಪಾಲಿಗೆ ಅವರು ಆಶ್ಚರ್ಯಚಕಿತ ಚಿಹ್ನೆಗಳಂತೆ ಗೋಚರಿಸಿದರು. ದಿನಗಳೆದಂತೆ ಅವರಿಬ್ಬರು ಎಂಥ ಭ್ರಾಂತಿಗೊಳಗಾದರೆಂದರೆ ಸ್ಥಳೀಯ ಲೇಖಕರು ತಮ್ಮನ್ನು ನಾಶ ಮಾಡಲು ಸಂಚು ನಡೆಸುತ್ತಿರಬಹುದೇ ಎಂದು ಸಂದೇಹಿಸತೊಡಗಿದರು. ಅಲ್ಲದೆ ಅದನ್ನು ಮಾಧ್ಯಮದೆದುರು ಹೊರಹಾಕಿ ಅವರ ಹರಿತ ಮಾತುಗಳ ಹಲ್ಲೆಗೆ ತುತ್ತಾದರು. ಈ ಅನರ್ಥ ಉಪಟಳ ಬೇಗುದಿಯಿಂದ ಬಿಡುಗಡೆ ಪಡೆಯಲಿಕ್ಕೆಂದು..
ಹ್ಹಾಂ ಅಂದಹಾಗೆ ಶಾಸ್ತ್ರ ಚೂಡಾಮಣಿ ಪ್ರಶಸ್ತಿ ಪುರಸ್ಕೃತ ಪಂ. ವಿಲೋಮಶರ್ಮಾರು ಎಂದು ಶಾಸ್ತ್ರೋಕ್ತ ರೀತಿಯಲ್ಲಿ ಕರೆದದ್ದು ಶ್ರೀಗಾರ್ದಭಪುರಿ ಕ್ಷೇತ್ರದ ಶ್ರೀ ಶ್ರೀ ವಿಪುಲಾನಂದ ಭಗವತ್ಪಾದರು, ಅಂದರೆ ಈಗ ಭೌತಿಕವಾಗಿ ಜೀವಂತವಿರುವ ಶ್ರೀಶ್ರೀ ವ್ಯಾಕುಲಾನಂದ ಭಗವತ್ಪಾದರ ತೀರ್ಥರೂಪ ಸಮಾನರು. ಅವತ್ತಿನಿಂದ ಇವತ್ತಿನ ತನಕ ಶರ್ಮಾರು ಗಾರ್ದಭಪುರಿ ಮಠಕ್ಕೆ ಶ್ರದ್ಧೆ ಭಕ್ತಿಯಿಂದ ನಡೆದುಕೊಳ್ಳುತ್ತಿರುವರು. ಶ್ರೀಗಳು ಹಾಕಿದ ಗೆರೆಯನ್ನು ಲಕ್ಷ್ಮಣರೇಖೆ ಎದೇ ಭಾವಿಸಿ ಇದುವರೆಗೆ ಶರ್ಮಾರು ಉಲ್ಲಂಘಿಸಿಲ್ಲವೆನ್ನುವುದು ಅತಿಶಯೋಕ್ತಿ ಅಲ್ಲವೆ ಅಲ್ಲ. ಸಾಹಿತಿವೇತ್ತರು ವರ್ಷಕ್ಕೆರಡು ಸಲವಾದರು ಶ್ರೀಕ್ಷೇತ್ರದಲ್ಲಿ ಹಲವು ದಿವಸಗಳ ಪರ್ಯಂತ ವಾಸ್ತವ್ಯ ಹೂಡಿ ತಮ್ಮ ದೈಹಿಕ ಹಾಗೂ ಮಾನಸಿಕ ಕ್ಲೇಷಗಳನ್ನು ನಿವಾರಿಸಿಕೊಂಡಿರುವುದುಂಟು. ಅಂಥ ಗಣ್ಯಾತಿಗಣ್ಯ ವ್ಯಕ್ತಿಗಳಿಗೆಂದೇ ಶ್ರೀಗಳು ಶ್ರೀಮಠದಲ್ಲಿ ಯುನಾನಿ ಅಲೋಪತಿ ಹೊರತುಪಡಿಸಿ ಇನ್ನಿತರೆ ವೈದ್ಯಕೀಯ ಪದ್ಧತಿಗಳನ್ನು ಅಳವಡಿಸಿ ರಾಷ್ಟ್ರದಾದ್ಯಂತ ಹೆಸರು ಗಳಿಸಿರುವರು. ಮೃತಭಾಷೆ ಮೃತಸಂಸ್ಕೃತಿಗೆ ಸಂಬಂಧಿಸಿದ ಸನಾತನಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುವರು. ಅಂಥವರಲ್ಲಿ ಪಂ. ಶರ್ಮಾರು ಅಗ್ರಗಣ್ಯಮಾನ್ಯರು.
ಅದೇ ಸಮಯಕ್ಕೆ ಸರಿಯಾಗಿ ಶ್ರೀಗಳಿಂದ ಬಂದ ಆಮಂತ್ರಣದ ಒಕ್ಕಣಿಕೆಯಲ್ಲಿ ಏನಿತ್ತೆಂದರೆ.. ಶ್ರೀಶ್ರೀ ವ್ಯಾಕುಲಾನಂದ ಭಗವತ್ಪಾದರು ಪೀಠಾರೋಹಣ ಮಾಡಿ ಐವತ್ತು ವರ್ಷಗಳು ಉರುಳಿರುವ ವಿಷಯ ತಿಳಿದು ಶರ್ಮಾರು ಆನಂದಾತಿಶಯದಿಂದ ಬೀಗಿದರು. ಕಾರಣ ಷೋಡಷಪ್ರಾಯದವರಿದ್ದ ಶ್ರೀಗಳ ಅಂಗಸೌಷ್ಠವ ಕುರಿತು ಸೌಂದರ್ಯ ಲಹರಿ ರಚಿಸಿದಾಗ ಶರ್ಮಾರ ವಯಸ್ಸು ಕೇವಲ ಇಪ್ಪತ್ತೈದರ ಒಳಗೆ ಇತ್ತು. ಆ ಖಂಡಕಾವ್ಯ ಆರ್ಯಾವರ್ತ ವಿಶ್ವವಿದ್ಯಾನಿಲಯಗಳಲ್ಲಿ ಕಳೆದ ಐವತ್ತು ವರ್ಷಗಳಿಂದ ಪಠ್ಯವಾಗಿರುವುದು, ಅಲ್ಲದೆ ಅದು ಪೈಶಾಚಿಕ ಪ್ರಾಕೃತ ಹಿಬ್ರೂ ಪಾಳಿ ಭಾಷೆಗಳಿಗೆ ಅನುವಾದಗೊಂಡು ಈಜಿಪ್ಟ್ ದೇಶದ ಕೈರೋ ನಗರದ ವಸ್ತುಸಂಗ್ರಹಾಲಯದ ಪಾಲಾಗಿರುವುದು. ಅದನ್ನು ಕಲಿಸುತ್ತಿರುವ ಪ್ರಾಧ್ಯಾಪಕರ ಪಂಡಿತೋತ್ತ ಮರ ಮುಗುಳ್ನಗೆಯನ್ನು ಅಪಹರಿಸಿರುವುದು. ಆದರೂ ಆ ಕಬ್ಬಿಣದ ಕಡಲೆಯು ಇಂದಿಗೂ ಆಶ್ಚರ್ಯಚಕಿತ ಚಿಹ್ನೆಯ ಪ್ರಭಾವಳಿ ಧರಿಸಿರುವುದು. ಶರ್ಮಾರ ಹಾಗೂ ಶ್ರೀಗಳ ಅನ್ಯೋನ್ಯತೆಗೆ ಇಂಥ ಕಾರಣಗಳು ಅನೇಕ ಇರುವವು. ಇದು ಕಥಾನಕದ ಪೀಠಿಕಾಪ್ರಕರಣವಾದ್ದರಿಂದ ಅವೆಲ್ಲವನ್ನು ಪ್ರಸ್ತಾಪಿಸುವುದು ಒಳಿತಲ್ಲ. ಒಂದೆ ಮಾತಲ್ಲಿ ಹೇಳುವುದಾದರೆ ಶರ್ಮಾರು ಭಗವತ್ಪಾದರ ಆತ್ಮದ ಪರಿಚ್ಛೇದವೆಂದು ಹೇಳಬಹುದು. ಕ್ಲೇಷಕ್ಕೆ ತುತ್ತಾದ ಶರ್ಮಾರ ಕನಸಿನಲ್ಲಿ ಹೊಳೆದು ಶ್ರೀಮಠದಲ್ಲಿ ವಿಶ್ರಾಂತಿ ಪಡೆದು ಪಾಂಡಿತ್ಯಕ್ಕೆ ಸಂಬಂಧಿಸಿದ ದಣಿವು ನಿವಾರಿಸಿಕೊ ಎಂದು ಅಪ್ಪಣೆ ನೀಡುವ ಪರಿಪಾಟ ಅನೂಚಾನವಾಗಿ ನಡೆದು ಬಂದಿರುವುದು. ಅದರಂತೆ!
ಅಪ್ಪಣೆಯಾಯಿತೆ ಎಂದು ಪ್ರಸೂನಾಂಬೆಯು ಇನ್ನು ಇಲ್ಲವೆಂದು ಸಚ್ಚಾರಿತ್ರರು! ಹೀಗೆ ಮುಂದುವರಿದಲ್ಲಿ ತಮ್ಮ ಮನಸ್ಸು ಕ್ಲೇಷಗಳ ಸೆರೆಮನೆಯಾಗುವುದು ನಿಸ್ಸಂದೇಹವೆಂದು ಊಹಿಸಿ ಆ ಸಾದ್ವಿ ವಿಶೇಷ ಅರ್ಚನೆ ಮಾಡಿದಳು. ಪಾತಿವ್ರತ್ಯದ ಫಲವೋ ಎಂಬಂತೆ! ಆ ದಿವಸ ಅರುಣೋದಯ ಸಮಯದಲ್ಲಿ ಶರ್ಮಾರು ಪ್ರಸೂನಾ ಎಂದು ಆನಂದಾತಿಶಯದಿಂದ ಉದ್ಗರಿಸಿದರಲ್ಲದೆ ಆಕೆಯನ್ನು ಆಲಂಗಿಸಿ ವಿಷಯ ತಿಳಿಸಿದರು. ಅಪ್ಪಣೆಯಾಗಲಿ ಮಹಾಸ್ವಾಮಿ ಎಂದು ಅಂಗಲಾಚಿದ್ದಕ್ಕೆ ದ್ವಿಪಾದಿ ಭಗವತ್ಪಾದರ ಬದಲಿಗೆ ಶ್ರೀಶ್ರೀ ಚತುಷ್ಪಾದಿ ಭಗವತ್ಪಾದರು ಗೋಚರಿಸಿ ಉಲಿದು ಅಪ್ಪಣೆ ಕೊಡಿಸಿದರೆಂದು ವಿವರಿಸಿದರು. ಶ್ರೀಶ್ರೀ ವ್ಯಾಕುಲಾನಂದ ಭಗವತ್ಪಾದರ ಆತ್ಮ ಶ್ರೀಮಠದ ಉತ್ತರಾಧಿಕಾರಿ ಶ್ರೀಚತುಷ್ಪಾದಾನಂದ ಸ್ವಾಮೀಜಿಯವರ ದೇಹದೊಳಗೆ ವಿಹರಿಸುತ್ತಿರುವುದೆಂದು ವಾಡಿಕೆ. ಅದರಂತೆ ಅವತ್ತು ಸಹ. ದ್ವಿಪಾದಿಗಳು ಚತುಷ್ಪಾದಿಗಳು ಅಧ್ಯಾತ್ಮ ಎಂಬ ನಾಣ್ಯದ ಎರಡು ಮುಖಗಳಷ್ಟೆ.
ಪಂ. ವಿಲೋಮಶರ್ಮಾರು ಪತ್ನಿಯೊಂದಿಗೆ ಬ್ರಾಹ್ಮಿಮುಹೂರ್ತದಲ್ಲಿ ಹೊರಟು ಗೋಧೂಳಿ ಮುಹೂರ್ತಕ್ಕೆ ಸರಿಯಾಗಿ ಶ್ರೀಕ್ಷೇತ್ರ ಗಾರ್ದಭಪುರಿ ಪ್ರವೇಶಿಸಿದರು. ಅದು ಪರಮ ಪವಿತ್ರ ದಿವಸವಾಗಿತ್ತು, ಕಾರಣ ಚತುಷ್ಪಾದಾನಂದ ಭಗವತ್ಪಾದರು ಉತ್ತರದಾಯಿತ್ವದ ಪೀಠಾರೋಹಣ ಮಾಡಿದ್ದು ಅದೇ ದಿವಸ. ಆದ್ದರಿಂದ ಭಕ್ತಾದಿಗಳು ನಾಡಿನ ಅಷ್ಟದಿಕ್ಕುಗಳಿಂದ ಆಗಮಿಸಿದ್ದರು. ಬಜಾರಗಳಲ್ಲಿ ರಸ್ತೆ ರಸ್ತೆಗಳಲ್ಲಿ ಗಾರ್ದಭೇಶ್ವರರ ಆಕರ್ಷಕ ಪ್ರತಿಕೃತಿಗಳನ್ನು ಮಾರುತ್ತಿದ್ದರು. ಸ್ವಯಂಪ್ರೇರಿತರಾಗಿ ತಂಡೋಪತಂಡಗಳಾಗಿ ಆಗಮಿಸಿದ್ದ ಜಾನಪದ ಕಲಾವಿದರಲ್ಲಿ ಕೆಲವರು ಹಾಡುತ್ತಿದ್ದರು, ಇನ್ನು ಕೆಲವರು ಕುಣಿಯುತ್ತಿದ್ದರು. ಶರ್ಮಾ ದಂಪತಿಯ ಮನಸ್ಸನ್ನು ಸೂರೆಗೊಂಡ ದೃಶ್ಯವೆಂದರೆ ಶ್ರೀಮಠದ ಪ್ರತಿಭಾವಂತ ವಿದ್ಯಾರ್ಥಿಗಳು ಶ್ರೀಗಳ ಪ್ರೀತ್ಯರ್ಥ ಗಾರ್ದಭಗಳಂತೆ ವೇಷಧಾರಣ ಮಾಡಿ ಅವುಗಳ ಧ್ವನಿಯನ್ನು ಅನುಕರಿಸುತ್ತಿದ್ದುದು, ಭಕ್ತಾದಿಗಳು ಕೇಕೆ ಹಾಕಿ ಅವರ ಪ್ರತಿಭೆಯನ್ನು ಮುಕ್ತಕಂಠದಿಂದ ಮತ್ತೇಭವಿಕ್ರೀಡಿತ ವೃತ್ತದಲ್ಲಿ ಶ್ಲಾಘಿಸುತ್ತಿದ್ದುದು ನಯನಮನೋಹರವಾಗಿತ್ತು.
ಶರ್ಮಾ ದಂಪತಿಯನ್ನು ಶ್ರೀಮಠದ ಆಡಳಿತವರ್ಗ ಅತಿಗಣ್ಯಾತಿಗಣ್ಯ ಅತಿಥಿಗಳೆಂದು ಪರಿಗಣಿಸಿತ್ತು. ಅವರಿಗೆ ತಿಪ್ಪೆ ಹೆಸರಿನ ವೈಭವೋಪೇತ ಅತಿಥಿಗೃಹದಲ್ಲಿ ವಾಸ್ತವ್ಯ ಕಲ್ಪಿಸಲಾಯಿತು. ಇಲ್ಲೊಂದು ವಿಶೇಷ ಸಂಗತಿ ಎಂದರೆ ಗಾರ್ದಭಾನಂದ ಪ್ರಭುಪಾದರನ್ನು ಉತ್ತರಾಧಿಕಾರಿಗಳೆಂದು ಪೂಜ್ಯ ಹಿರಿಯ ಸ್ವಾಮೀಜಿ ಘೋಷಿಸಿದ ಬಳಿಕ ಶ್ರೀಮಠ ಶರವೇಗದಲ್ಲಿ ಅಭಿವೃದ್ದಿ ಪಥದಲ್ಲಿ ಸಾಗಿತ್ತು. ದೇಶದ ನಾನಾಕಡೆಯಿಂದ ಕೋಟ್ಯಧೀಶರು, ಉದ್ಯಮಿಗಳು, ರಾಜಕಾರಣಿಗಳು ‘ಅದನ್ನು ನಾನು ಇದನ್ನು ನೀನು ಎಂದು’ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಶ್ರೀಮಠದ ಶ್ರೇಯೋಭಿವೃದ್ಧ್ದಿಗೆ ಶ್ರಮಿಸುತ್ತಿದ್ದರು. ಶ್ರೀಕ್ಷೇತ್ರವನ್ನು ಆವರಿಸಿದ್ದ ಪರ್ವತಗಳ ಮೇಲೆ ಅತಿಥಿಗೃಹಗಳು ತಲೆ ಎತ್ತಿದ್ದವು. ಗಾರ್ದಭಾನಂದ ಪ್ರಭೂಜಿಯವರ ಪ್ರೀತ್ಯರ್ಥ ತ್ಯಾಜ್ಯವೆಲ್ಲವು ಪೂಜ್ಯವೆಂದು ಪರಿಗಣಿಸಲ್ಪಟ್ಟಿತ್ತು. ಆದ್ದರಿಂದ ಆ ಗಿರಿಶಿಖರದ ಮೇಲೆ ನಿರ್ಮಿಸಲಾಗಿದ್ದ ಅತಿಥಿಗೃಹಕ್ಕೆ ಕಸ ಎಂದು ನಾಮಕರಣ ಮಾಡಿದ್ದರು. ಶ್ರೀಮಠದಲ್ಲಿ ಆಸ್ಥಾನ ವಿದ್ವಾನ್ ಕೀರಲುಕುಮಾರ್ ಅವರ ಕರ್ಕಶ ಸ್ವರಾಲಾಪನೆಯನ್ನು ಬೆಟ್ಟಗಳೆಲ್ಲವು ಪ್ರತಿಧ್ವನಿಸುತ್ತಿದ್ದವು. ಅದರ ಪರಿಣಾಮ ಆ ಪ್ರಾಂತದಲ್ಲಿದ್ದ ಕೋಗಿಲೆಗಳು ದೂರದೂರಕ್ಕೆ ವಲಸೆ ಹೋಗಿದ್ದವು. ಅವುಗಳ ಸ್ಥಾನದಲ್ಲಿ ಅಪಾರ ಸಂಖ್ಯೆಯಲ್ಲಿ ಕಾಗೆಗಳು ಆಗಮಿಸಿ ವಿರಾಜಮಾನವಾಗಿದ್ದವು. ಹೀಗಾಗಿ ಕರ್ಕಶ ಎಂಬ ಪದಕ್ಕೆ ತಾರಾವೌಲ್ಯ ಪ್ರಾಪ್ತವಾಗಿತ್ತು.
ಮಾರನೆ ದಿವಸ ಶ್ರೀಶ್ರೀಗಾರ್ದಭಾನಂದ ಭಗವತ್ಪಾದರ ಪೀಠಾರೋಹಣದ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಸಂಗೀತ ಸಂಸ್ಕೃತಿ ಇಲಾಖೆ ಸಚಿವೆ ಕು ಗ್ರಾಂಥಿಕಾ ದೋಮೆ ಉದ್ಘಾಟಿಸಿದರು. ಬಳಿಕ ಪ್ರಸಿದ್ಧ ಉದ್ಯಮಿ ಪದ್ಮಶ್ರೀ ಜಲಕಾಕ್ ಮತ್ತವರ ಕುಟುಂಬದ ಸದಸ್ಯರು ಶ್ರೀಶ್ರೀ ಗಾರ್ದಭಾನಂದ ಪ್ರಭುಪಾದರಷ್ಟೆ ತೂಕದ ಬೆಳ್ಳಿರೂಪಾಯಿಗಳನ್ನು ಶ್ರೀಮಠಕ್ಕೆ ಅರ್ಪಿಸಿ ಕೃತಾರ್ಥರಾದರು. ಬಳಿಕ ಎಂದಿನಂತೆ ನಡೆದ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಮಿಗಿಲಾಗಿದ್ದವು, ಅವೆಲ್ಲ ಭಕ್ತಿಪೂರ್ವಕವಾಗಿ ಹಾಜರಿದ್ದ ಭಕ್ತಸ್ತೋಮವನ್ನು ರೋಮಾಂಚನಗೊಳಿಸಿದವು. ಹೀಗೆ ಸಮಾರಂಭ ಸಾಂಗೋಪಾಂಗವಾಗಿ ಮುಕ್ತಾಯಗೊಳ್ಳುವಷ್ಟರಲ್ಲಿ!
ಅಂದು ಸಮಯ ಹನ್ನೆರಡು ದಾಟಿದ್ದರಿಂದ ಹಿರಿಯ ಸ್ವಾಮೀಜಿಯವರ ದರ್ಶನ ಪ್ರಾಪ್ತವಾಗಲಿಲ್ಲ. ಮಾರನೆ ದಿವಸದವರೆಗೆ ಶರ್ಮಾ ದಂಪತಿಯು ನಿರೀಕ್ಷಣಾನೋಂಪಿ ಆಚರಿಸುವುದು ಅನಿವಾರ್ಯವಾಯಿತು. ತಾವಿದ್ದ ಅತಿಥಿಗೃಹದಲ್ಲಿ ಅತಿಗಣ್ಯರಿಗೆ ಮೀಸಲಿರಿಸಿದ್ದ ಸುಸಜ್ಜಿತ ಕೋಣೆಗಳಲ್ಲಿ ವಿವಿಧ ನಗರಗಳಿಂದ ಆಮಂತ್ರಿಸಲ್ಪಟ್ಟಿದ್ದ ಗಾರ್ದಭಿನಿಯರಿಗೆ ವಸತಿ ಕಲ್ಪಿಸಲಾಗಿತ್ತು. ಅವೆಲ್ಲ ಬೆದೆಗೆ ಬಂದಿದ್ದರಿಂದ ಕೆರಳಿ ಚೀರಿಕೊಳ್ಳುತ್ತಿದ್ದವಲ್ಲದೆ ತಮ್ಮ ಪೋಷಕರ ಮೇಲೆ ಹಲ್ಲೆ ನಡೆಸಿ ಹಿಂಸಿಸುತ್ತಿದ್ದವು. ತೀರಾ ಪಕ್ಕದ ಕೋಣೆಯಲ್ಲಿದ್ದ ಶರ್ಮಾ ದಂಪತಿಯು ನಿದ್ದೆ ಮಾಡದೆ ಎಲ್ಲಿಯವರೆಗೆ ಮಗ್ಗುಲು ಬದಲಾಯಿಸುತ್ತ ಕೃತಕ ನಿದ್ದೆಯನ್ನು ಅಭಿನಯಿಸಲಾದೀತು! ಪೂರ್ಣ ಎಚ್ಚರಗೊಂಡು ಪರಸ್ಪರ ಮುಖಗಳನ್ನು ನೋಡುತ್ತಲು, ಅದು ಇದು ಮಾತನಾಡುತ್ತಲು ಕಾಲಕ್ಷೇಪ ಮಾಡಲಾರಂಭಿಸಿದರು. ತಮಗೆ ಮೂರೂವರೆ ಮಕ್ಕಳಿದ್ದರು ಸಹ ಅವರು ಅಕ್ಷರಶಃ ಒಂಟಿಯಾಗಿದ್ದರು. ಕಾರಣ ಅವೆಲ್ಲ ಇನ್ನಿತರೆ ದೇಶಗಳಿಗೆ ವಲಸೆ ಹೋಗಿದ್ದವು. ಅವುಗಳ ಹೆಸರುಗಳನ್ನು ಹೇಳುವುದಾದರೆ ಜೇಷ್ಠಪುತ್ರ ವಿಷಪ್ರಾಶನಶರ್ಮಾ, ಮಧ್ಯಮಪುತ್ರ ಪಂ. ಅಪವ್ಯಯಶರ್ಮಾ ಹಾಗೂ ತೃತೀಯಪುತ್ರನ ಹೆಸರು ವೃಕೋದರಶರ್ಮಾ. ಆ ಸಂತಾನವು ನಿಮ್ಮಂಥ ಮತಿಹೀನರು ನಮ್ಮ ತಂದೆತಾಯಿಗಳು ಎಂದು ಹೇಳಿಕೊಳ್ಳಲು ನಾಚಿಕೆಯಾಗುವುದು ಎಂದು ಖತಿಯಿಂದ ನುಡಿದಂದಿನಿಂದ ಅವರ ಮುಖಗಳನ್ನು ತಾವಾಗಲಿ, ತಮ್ಮ ಮುಖಗಳನ್ನು ಅವರಾಗಲಿ ನೋಡಿಲ್ಲ. ಆದರು ತಮ್ಮವು ಹೆತ್ತ ಕರುಳುಗಳು ಅಲ್ಲವೆ! ಮಕ್ಕಳ ಸೊಸೆಯಂದಿರ ಹಾಗೂ ಚಿನಕುರುಳಿಗಳಂಥ ಮೊಮ್ಮಕ್ಕಳ ನೆನಪುಗಳನ್ನು ಆವಾಹಿಸಿಕೊಂಡು ಮೆಲಕು ಹಾಕಿದರು. ಕಾಲಕ್ಷೇಪಕ್ಕೆ ನೆನಪುಗಳೆ ಆಹಾರ ತಾನೆ! ಇನ್ನು ತಾವು ಊಹಾತ್ಮಕವಾಗಿ ವಿದೇಶಗಳನ್ನು ಸುತ್ತುವವರಿದ್ದರು, ಆದರೆ ಅಷ್ಟರಲ್ಲಿ..
ಏಕಕಾಲಕ್ಕೆ ಸಹಸ್ರಾರು ಗಾರ್ದಭಗಳು ಒಕ್ಕೊರಲಿನಿಂದ ಸುಪ್ರಭಾತ ಹಾಡಲಾರಂಭಿಸಿದೊಡನೆ ಭಕ್ತಾದಿಗಳು ಬಡಿದೆಬ್ಬಿಸಿದಂತೆ ಎಚ್ಚರವಾದರು. ಶ್ರೀಶ್ರೀ ಗಾರ್ದಬೇಶ್ವರರು ಮಠದ ಉತ್ತರದಾಯಿತ್ವ ವಹಿಸಿಕೊಂಡ ಕ್ಷಣವೇ ಉತ್ತರಾದಿ ದಕ್ಷಿಣಾದಿ ಸಂಗೀತವನ್ನು ಶ್ರೀಮಠದಿಂದ ಉಚ್ಛಾಟಿಸಲ್ಪಟ್ಟಿತು, ಸುಪ್ರಸಿದ್ಧ ಸಂಗೀತಗಾರರನ್ನು ಅಲ್ಲಿಂದ ಓಡಿಸಲಾಯಿತೆನ್ನುವುದಕ್ಕಿಂತ ಅವರೆ ಅಲ್ಲಿಂದ ತಮ್ಮ ತಮ್ಮ ಕಾಲುಗಳಿಗೆ ಬುದ್ದಿ ಹೇಳಿದರೆನ್ನುವುದೆ ಸೂಕ್ತ. ಎಲ್ಲ ಸಂಗೀತಗಾರರ ಮನಸ್ಥಿತಿ ಒಂದೇೆ ಇದ್ದರು ಆರ್ಥಿಕ ಸ್ಥಿತಿ ಒಂದೇ ಇರಲು ಸಾಧ್ಯವೇ? ಅದು ಅವರವರ ಅದೃಷ್ಟವಲ್ಲದೆ ಇನ್ನೇನು? ಆದ್ದರಿಂದ ತೀರಾ ಹತಾಶ ಸ್ಥಿತಿಯಲ್ಲಿದ್ದ ಕಳಪೆ ಸಂಗೀತಗಾರರು ತಮ್ಮ ಪ್ರಾರಾಬ್ಧದ ಮೇಲೆ ಬಾರಹಾಕಿ ಅಲ್ಲಿಯೆ ಉಳಿದರು. ತಮ್ಮ ಧ್ವನಿಯನ್ನು ಗಾರ್ದಭ ಧ್ವನಿಗೆ ಬದಲಾಯಿಸಿಕೊಂಡರು. ಗಾರ್ದಭ ಸ್ವರವಿನ್ಯಾಸದಲ್ಲಿ ಹಲವು ರಾಗಗಳನ್ನು ಸಂಶೋಧಿಸಿ ಶ್ರೀಗಳ ಕೃಪೆಗೆ ಪಾತ್ರರಾದರು. ಆದ್ದರಿಂದ ಶ್ರೀಮಠದ ಸಾತ್ವಿಕ ಪರಿಸರದಲ್ಲಿ ಸುಶುಪ್ತಿ ಜಾಗರಗಳ ನಡುವೆ ಅಂತರವಿರಲಿಲ್ಲ, ನಿದ್ದೆ ನೆಮ್ಮದಿಗೆ ಆಸ್ಪದವಿರಲಿಲ್ಲ. ನಶ್ವರ ಮನುಷ್ಯನನ್ನು ಅತೃಪ್ತಿ ಆಶಾಂತಿ ಕಾಡುತ್ತಿರಬೇಕೆನ್ನುವುದು, ಹಾಗೆ ಕಾಡಿದಾಗಲೆ ಮೋಕ್ಷ ಪ್ರಾಪ್ತಿಯಾಗುವುದು ಎನ್ನುವುದು ಶ್ರೀಗಳ ಆಶೀರ್ವಚನ. ಆದ್ದರಿಂದ ಶರ್ಮಾ ದಂಪತಿ ತಮ್ಮ ದೇಹಗಳನ್ನು ಹಾಸಿಗೆಯಿಂದ ಬೇರ್ಪಡಿಸಿದರು.
ಮೊದಲು ಸ್ನಾನ ಸಂಧ್ಯಾವಂದನೆ ಮುಗಿಸಿದ ಶ್ರೀಯುತರು ಪಂಚಾಂಗದ ಪುಟಗಳನ್ನು ತಿರುವಿ ಗ್ರಹಗತಿಗಳನ್ನು ಪರಿಶೀಲಿಸಿದರು. ಕಾಕತಾಳೀಯವೆಂದರೆ ತಾವು ನಿರ್ಧರಿಸಿದ ವೇಳೆಗೆ ಸರಿಯಾಗಿ ಶ್ರೀಮಠದಿಂದ ಆಮಂತ್ರಣ ಕೋಣೆಯ ಹೊಸ್ತಿಲು ಪ್ರವೇಶಿಸಿತು. ಶ್ರೀಮತಿ ಪ್ರಸೂನಾಂಬೆ ಅರ್ಧ ತಾಸಿನಲ್ಲಿ ಮಡಿಯುಡಿ ಧರಿಸಿ ಸಿದ್ಧ್ದರಾದರು. ಹೊರಟರೆನ್ನುವುದಕ್ಕಿಂತ..
ಹಿಂದಿನ ದಿವಸವಷ್ಟೇ ರಾಜ್ಯಮಟ್ಟದ ಗಾರ್ದಭಗಳ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಲೆಂದು ನಾಡಿನ ನಾಲ್ಮೂಲೆಯಿಂದ ನೂರಾರು ಗಾರ್ದಭಗಳು ಶ್ರೀಮಠಕ್ಕೆ ಆಗಮಿಸಿದ್ದವು. ಅವೆಲ್ಲ ರಸ್ತೆ ಇಕ್ಕೆಲದಲ್ಲಿ ಪೌಷ್ಟಿಕಯುಕ್ತ ಆಹಾರ ನಮಲುತ್ತಿದ್ದವು. ಅವುಗಳಲ್ಲಿ ಕೆಲವು ಆವೇಶದಿಂದ, ಇನ್ನು ಕೆಲವು ಭಾವುಕತೆಯಿಂದ ಮತ್ತು ಕೆಲವು ಲೈಂಗಿಕ ವಾಂಛೆಯಿಂದ ಹೇಷಾರವ ಮಾಡಿ ದ್ವಿಪಾದಿಗಳನ್ನು ಬೆಚ್ಚಿ ಬೀಳಿಸುತ್ತಿದ್ದವು. ಅದೇ ಸಮಯಕ್ಕೆ ಸರಿಯಾಗಿ ಎದುರಿಗೆ ಆಗಮಿಸಿದ ಡಾ ವೃಶ್ಚಿಕಾನಂದ್ ಅವಾಸ್ತವ್ ಹತ್ತಿರ ಬಂದೊಡನೆ ಗುರುತಿಸಿ ಓಹೋ ಹಾಹ್ಹಾ ಎಂದು ಉದ್ಗರಿಸಿ ಸಖೇದಾನಂದವನ್ನು ಅಭಿವ್ಯಕ್ತಿಸಿದರು. ಅವರು ಭೂತಾನ್ ರಾಷ್ಟ್ರದಲ್ಲಿನ ಪಿಲಿಪಿಲಿ ವಿಶ್ವವಿದ್ಯಾನಿಲಯದಲ್ಲಿನ ಪೈಶಾಚಿಕ ಭಾಷಾ ವಿಭಾಗದ ಮುಖ್ಯಸ್ಥರೆಂದು ಕಾರ್ಯ ನಿರ್ವಹಿಸುತ್ತಿರುವುದು ತಮ್ಮ ಆರನೆ ಇಂದ್ರಿಯಕ್ಕೆ ಹೊಳೆದ ವಿಷಯ. ಅಂಥವರು ಇಲ್ಲಿ! ತಮ್ಮ ಸಮಕ್ಷಮದಲ್ಲಿ! ಆಶ್ಚರ್ಯವಾಗದಿರುವುದೆ! ಕೇಳಿದ್ದಕ್ಕೆ ಮಹೋದಯ್!
ಶ್ರೀಮಠ ಗಾರ್ದಭಗಳಿಗೆಂದೇ ಸಾಂಸ್ಕೃತಿಕ