ಮಾಧ್ಯಮಗಳ ಸೋಲು ಸರ್ವಾಧಿಕಾರದ ಗೆಲುವು
ಅದು 2013ನೆ ಇಸವಿಯ ಜೂನ್ ತಿಂಗಳು. ಮುಂದಿನ ಕೆಲವು ತಿಂಗಳುಗಳ ಬಳಿಕ ನಡೆಯಲಿದ್ದ ಲೋಕಸಭಾ ಚುನಾವಣೆಗಳಿಗೆ ವಿವಿಧ ರಾಜಕೀಯ ಪಕ್ಷಗಳು ಭರದ ಸಿದ್ಧತೆ ಪ್ರಾರಂಭಿಸುತ್ತಿದ್ದ ಕಾಲವದು. ಅಂದು ಉತ್ತರಾಖಂಡ ರಾಜ್ಯದಲ್ಲಿ ಮಹಾಪ್ರವಾಹವೊಂದು ಸಂಭವಿಸಿದ ಪರಿಣಾಮವಾಗಿ ಕೇದಾರನಾಥ ದರ್ಶನಕ್ಕೆ ತೆರಳಿದ್ದ ಭಾರತದಾದ್ಯಂತದ ಸಾವಿರಾರು ಯಾತ್ರಾರ್ಥಿಗಳು ಅಲ್ಲೇ ಸಿಕ್ಕಿಹಾಕಿಕೊಂಡು ಭಾರೀ ಕಷ್ಟನಷ್ಟ ಅನುಭವಿಸಿದ ಘಟನೆ ನಿಮಗೆ ನೆನಪಿರಬಹುದು. ಆದರೆ ಆ ದುರ್ಘಟನೆ ದಿಲ್ಲಿ ಗದ್ದುಗೆ ಮೇಲೆ ಕಣ್ಣಿಟ್ಟಿದ್ದ ಗುಜರಾತ್ ಮುಖ್ಯಮಂತ್ರಿ ಮೋದಿಯವರ ಪಾಲಿಗೆ ತನ್ನ ಅತಿಮಾನವ ಅಥವಾ ಸೂಪರ್ಮ್ಯಾನ್ ಇಮೇಜನ್ನು ಬೆಳೆಸಲು ತಾನಾಗಿಯೇ ಒದಗಿಬಂದ ಒಂದು ಸದವಕಾಶವಾಗಿತ್ತು. ಅದಾಗಲೇ ತಮ್ಮ ಮೂಲ ಕರ್ತವ್ಯವನ್ನು ಮರೆತು ನಾಚಿಕೆಯ ಲವಲೇಷವೂ ಇಲ್ಲದೆ ಅವರ ಪಾದದೂಳಿಯಲ್ಲಿ ಹೊರಳಾಡತೊಡಗಿದ್ದ ಕೆಲವು ಮುಖ್ಯವಾಹಿನಿಯ ಮಾಧ್ಯಮಗಳು ನಾಮುಂದೆ ತಾಮುಂದೆ ಎನ್ನುತ್ತಾ ಮೋದಿಯ ವ್ಯಕ್ತಿತ್ವವನ್ನು ವೈಭವೀಕರಿಸಲು ಶುರುಮಾಡಿದ್ದವು. ಹೀಗಿರುವಾಗ ಜೂನ್ 24ರ ‘ಟೈಮ್ಸ್ ಆಫ್ ಇಂಡಿಯ’ ಪತ್ರಿಕೆಯಲ್ಲಿ ‘‘ಉತ್ತರಾಖಂಡಕ್ಕೆ ಆಗಮಿಸಿ 15,000 ಗುಜರಾತಿಗಳನ್ನು ಪಾರು ಮಾಡಿದ ನರೇಂದ್ರ ಮೋದಿ’’ ಎಂಬ ಶೀರ್ಷಿಕೆಯಡಿ ಆನಂದ್ ಸೂಂದಾಸ್ ಎಂಬಾತ ಬರೆದ ವಿಶೇಷ ಸುದ್ದಿಯೊಂದು ಪ್ರಕಟಗೊಂಡಿತು:
‘ನರೇಂದ್ರ ಮೋದಿ ತಾನು ಉತ್ತರಾಖಂಡದಲ್ಲಿದ್ದ ಎರಡು ದಿನಗಳ ಅವಧಿಯಲ್ಲಿ ಪ್ರವಾಹದ ಮಧ್ಯೆ ಸಿಕ್ಕಿಬಿದ್ದಿದ್ದ ಸುಮಾರು 15,000 ಗುಜರಾತಿ ಯಾತ್ರಿಕರನ್ನೆಲ್ಲ ಗುಜರಾತಿಗೆ ಮರಳಿ ಕರೆತಂದುಬಿಟ್ಟರು. ಜೂನ್ 21ರ ಸಂಜೆ ವಿಮಾನ ಮೂಲಕ ಆಗಮಿಸಿದ ಗುಜರಾತ್ ಮುಖ್ಯಮಂತ್ರಿಯವರು ತನ್ನ ಐವರು ಐಎಎಸ್, ಒಬ್ಬ ಐಪಿಎಸ್, ಒಬ್ಬ ಐಎಫ್ಎಸ್ ಮತ್ತು ಇಬ್ಬರು ಗುಜರಾತಿನ ಆಡಳಿತಾಧಿಕಾರಿಗಳ ಜೊತೆ ತಡರಾತ್ರಿ 1 ಗಂಟೆ ತನಕ ಸಭೆ ನಡೆಸಿದರು. ಇಬ್ಬರು ಡಿಎಸ್ಪಿ ಮತ್ತು ಐವರು ಇನ್ಸ್ಪೆಕ್ಟರ್ಗಳು ಕೂಡಾ ಹಾಜರಿದ್ದರು. ಜೂನ್ 22ರಂದು ಮತ್ತೆ ಪ್ರಾರಂಭವಾದ ಸಭೆ ತಡರಾತ್ರಿ 1ರ ವರೆಗೆ ನಡೆಯಿತೆಂದು ಹಿರಿಯ ಬಿಜೆಪಿ ನಾಯಕ ಅನಿಲ್ ಬಲೂನಿ ತಿಳಿಸಿದ್ದಾರೆ. ಶನಿವಾರದಂದು ಸಂತ್ರಸ್ತ ಗುಜರಾತಿಗಳನ್ನು 25 ಲಕ್ಷುರಿ ಬಸ್ಗಳ ಮೂಲಕ ದಿಲ್ಲಿಗೆ ವಾಪಸ್ ಕರೆತರಲಾಯಿತು. 4 ಬೋಯಿಂಗ್ ವಿಮಾನಗಳೂ ಸಿದ್ಧವಾಗಿ ನಿಂತಿದ್ದವು. ‘‘ಮೋದಿ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ’’ ಎಂದ ಅನಿಲ್ ಬಲೂನಿ, ‘‘ಅದು ಯಾರಿಗಾದರೂ ಇಷ್ಟವಾಗದಿದ್ದಲ್ಲಿ ನಾವೇನು ಮಾಡಬಲ್ಲೆವು?’’ ಎಂದು ಪ್ರಶ್ನಿಸಿದರು.’
ಅಂದು ವಿರೋಧ ಪಕ್ಷಗಳ ಬಿಡಾರದಲ್ಲಿದ್ದ ನಿತೀಶ್ ಕುಮಾರ್ ಈ ವಿಚಿತ್ರ ಕಥಾನಕವನ್ನು ಕಟುವಾಗಿ ಟೀಕಿಸಿದಾಗ ಮೋದಿ, ‘‘ಅವರೇಕೆ ಉತ್ತರಾಖಂಡಕ್ಕೆ ಹೋಗಿ ಬಿಹಾರಿಗಳನ್ನು ರಕ್ಷಿಸಲಿಲ್ಲ?’’ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ ನಿತೀಶ್, ತಾನು ರ್ಯಾಂಬೊ ಅಲ್ಲ; ಆ ಪರಿಸ್ಥಿತಿಯಲ್ಲಿ ಒಂದು ದಿನದೊಳಗಾಗಿ 15,000 ಜನರನ್ನು ಪಾರು ಮಾಡುವುದು ಅಸಾಧ್ಯ ಎಂದು ತನ್ನ ಅನುಮಾನಗಳನ್ನು ಹೊರಹಾಕಿದ್ದರು. ಟೆಲಿಗ್ರಾಫ್ ಪತ್ರಿಕೆಯ ಸುಜನ್ ದತ್ತ ಮತ್ತು ಇನ್ನೂ ಅನೇಕರು ಬಲೂನಿಯ ಈ ಕಥನವನ್ನು ಕಚಡಾ ಎಂದು ಕರೆದು ತಿರಸ್ಕರಿಸಿದ್ದರು. ಆದರೆ ಸಂಘ ಪರಿವಾರ ತಮ್ಮ ರ್ಯಾಂಬೊನನ್ನು ವೈಭವೀಕರಿಸಿದುದಷ್ಟೇ ಅಲ್ಲ, ಸೇನೆಗೆ ಅವಮಾನವನ್ನೂ ಮಾಡಿತು.
ಹೋದಲ್ಲಿ ಬಂದಲ್ಲಿ ಸೇನಾಪಡೆಗಳ ಗುಣಗಾನ ಮಾಡುವ ಅದರ ಈ ಟ್ವಿಟರ್ ಸಂದೇಶ ಹೇಗಿದೆ ನೋಡಿ: ‘‘ನರೇಂದ್ರ ಮೋದಿ ಮಾಡಿರುವಂತಹ ಕೆಲಸವನ್ನು ಭಾರತೀಯ ಸೇನೆಯೂ ಯಾಕೆ ಮಾಡಬಾರದು?’’ ಟೈಮ್ಸ್ ವರದಿಗಾರ ಆನಂದ್ ಸೂಂದಾಸ್ಗೆ ಈ ಮಾಹಿತಿಯನ್ನು ಕೊಟ್ಟಾತ ಅನಿಲ್ ಬಲೂನಿ. ಸೂಂದಾಸ್ ಅದನ್ನು ಬೇರೆ ಮೂಲಗಳ ಮೂಲಕ ದೃಢೀಕರಿಸುವ ಗೋಜಿಗೆ ಹೋಗದೆ ಹಾಗೇ ಕಳುಹಿಸಿದ್ದರು. ಆದರೆ ಇಡೀ ಸುದ್ದಿಯನ್ನು ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಿ ಅಭೀಕ್ ಬರ್ಮನ್ ಎಂಬಾತ ಬರೆದ ಲೇಖನವೊಂದು ‘ಇಕನಾಮಿಕ್ ಟೈಮ್ಸ್’ನಲ್ಲಿ ಪ್ರಕಟವಾಗುತ್ತಿದ್ದಂತೆ ಟೈಮ್ಸ್ ಪತ್ರಿಕೆಯ ವರದಿ ಸದ್ದಿಲ್ಲದೆ ಮಂಗಮಾಯವಾಗಿದೆ! (ಈ ವರದಿ Forum For Hindu Awakening ಎಂಬ ಜಾಲತಾಣದಲ್ಲಿ ಈಗಲೂ ಲಭ್ಯವಿದೆ) ಹಾಗಾದರೆ ಅಭೀಕ್ ಬರ್ಮನ್ರ ಲೇಖನದಲ್ಲಿ ಅಂಥದ್ದೇನಿತ್ತು? ವರದಿಗಳ ಪ್ರಕಾರ ಮೋದಿಯವರು ತನ್ನ ಈ ದಿಢೀರ್ ಕಾರ್ಯಾಚರಣೆಗೆ 80 ಇನ್ನೋವಾ ಕಾರುಗಳನ್ನು ಬಳಸಿದ್ದರು.
ಆದರೆ ರಸ್ತೆಗಳು ಇಡಿ ಇಡಿಯಾಗೇ ಕೊಚ್ಚಿಹೋಗಿದ್ದಾಗ, ಭೂಕುಸಿತಗಳಿಂದಾಗಿ ಅದೆಷ್ಟೋ ಮಾರ್ಗಗಳು ಮುಚ್ಚಿದ್ದಾಗ ಆ ವಾಹನಗಳು ಕೇದಾರನಾಥ ಮತ್ತಿತರ ಜಾಗಗಳಿಗೆ ತಲುಪಿದ್ದಾದರೂ ಹೇಗೆ? ಹೋಗಲಿ ಬಿಡಿ, ಅವುಗಳಿಗೆ ರೆಕ್ಕೆಗಳು ಮತ್ತು ಹೆಲಿಕಾಪ್ಟರ್ ರೋಟರ್ಗಳನ್ನು ಅಳವಡಿಸಲಾಗಿತ್ತೆಂದು ಊಹಿಸಿಕೊಳ್ಳೋಣ. ಈಗ ಒಂದು ಇನ್ನೋವಾದಲ್ಲಿ ಚಾಲಕ ಸೇರಿದಂತೆ ಏಳು ಮಂದಿ ಕೂರಬಹುದು. ಹೀಗಿದ್ದರೂ ಹೇಗಾದರೂ ಮಾಡಿ 9 ಮಂದಿಯನ್ನು ತುರುಕಿಸಬಹುದು ಎಂದಿಟ್ಟುಕೊಳ್ಳೋಣ. ಈ ರೀತಿ ಲೆಕ್ಕ ಹಾಕಿದರೆ 80 ವಾಹನಗಳ ಒಂದು ಟ್ರಿಪ್ನಲ್ಲಿ 720 ಜನರನ್ನು ಡೆಹರಾಡೂನ್ಗೆ ಸಾಗಿಸಬಹುದು. ಆದುದರಿಂದ 15,000 ಜನರನ್ನು ಸಾಗಿಸಲು ಇಂತಹ 21 ಟ್ರಿಪ್ಗಳನ್ನು ಮಾಡಬೇಕಾಗುತ್ತದೆ. ಡೆಹರಾಡೂನ್ ಕೇದಾರನಾಥದಿಂದ 221 ಕಿ.ಮೀ. ದೂರದಲ್ಲಿದೆ. ಹೀಗೆ ಪ್ರತಿ ಟ್ರಿಪ್ಗೆ 221x 2 = 442 ಕಿ.ಮೀ.ಗಳ ಹಾಗೆ 21 ಟ್ರಿಪ್ಗಳನ್ನು ಮಾಡಿದ ಆ ವಾಹನಗಳು ಒಟ್ಟು ಸುಮಾರು 9,300 ಕಿ.ಮೀ.ಗಳಷ್ಟು ದೂರವನ್ನು ಕ್ರಮಿಸಿರಬೇಕು. ಆದರೆ ಅದು ಗುಡ್ಡ ಬೆಟ್ಟಗಳ ಪ್ರದೇಶ. ಅಲ್ಲಿ ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚು ವೇಗದಿಂದ ಚಲಿಸಲು ಸಾಧ್ಯವಿಲ್ಲ. ಆದುದರಿಂದ 9300 ಕಿ.ಮೀ. ದೂರವನ್ನು ಕ್ರಮಿಸಲು ಕನಿಷ್ಠ 233 ಗಂಟೆಗಳು ಬೇಕು. ಅರ್ಥಾತ್ ನಿದ್ರಾಹಾರ ಬಿಟ್ಟು ದಿನದ 24 ಗಂಟೆ ಕೆಲಸ ಮಾಡಿದರೂ ಸುಮಾರು ಹತ್ತು ದಿನಗಳು ಬೇಕು. ಆದರೆ ಮೋದಿಯವರಿಗೆ ಇದನ್ನು ಮಾಡಿಮುಗಿಸಲು ಪೂರ್ತಿ ಒಂದು ದಿನವೂ ಬೇಕಾಗಲಿಲ್ಲ!!
ಅದೇ ಕಾಲದಲ್ಲಿ ಮೋದಿಯವರ 24 ಹೆಲಿಕಾಪ್ಟರ್ಗಳ ಕೊಡುಗೆಯನ್ನು ನಿರಾಕರಿಸಿದುದಕ್ಕೆ ಭಕ್ತಗಣಗಳು ಯುಪಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನವೂ ನಡೆಯಿತು. ಆದರೆ ವಾಸ್ತವವೇನು? ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆ ಈ ಬಗ್ಗೆ ಮುಖ್ಯಮಂತ್ರಿ ಮೋದಿಯ ಪ್ರಧಾನ ಕಾರ್ಯದರ್ಶಿಯನ್ನು ವಿಚಾರಿಸಿದಾಗ ಹೆಲಿಕಾಪ್ಟರ್ಗಳ ಕೊಡುಗೆ ನೀಡಿಯೇ ಇರಲಿಲ್ಲವೆೆಂದು ತಿಳಿದುಬಂದಿದೆ. ಆದರೆ ಇದನ್ನೆಲ್ಲಾ ಕಂಡೂ ಕಾಣದವರಂತಿದ್ದ ಮೋದಿಭಕ್ತರು ಮತ್ತು ತುತ್ತೂರಿ ಮಾಧ್ಯಮಗಳು ತಮ್ಮ ಜಾಯಮಾನಕ್ಕನುಗುಣವಾಗಿ ಸುಳ್ಳು ಸುದ್ದಿ ಹರಡುವುದನ್ನು ಮುಂದುವರಿಸಿದವು. ಇತ್ತೀಚಿನ ವರದಿಗಳು ಹೇಳುವಂತೆ ಅಂದು ತನಗೆ ಪುನರ್ನಿರ್ಮಾಣಕ್ಕೆ ಅವಕಾಶ ನೀಡಲಾಗಿಲ್ಲವಾದರೂ ಈ ಬಾರಿ ಅದನ್ನು ಮಾಡಿಯೇ ಸಿದ್ಧ ಎಂಬ ದೃಢಸಂಕಲ್ಪವನ್ನು ಮೋದಿಯವರು ತೊಟ್ಟಿದ್ದಾರಂತೆ.
ಜೂನ್ 24, 2013ರ ಟೈಮ್ಸ್ ವರದಿಯಲ್ಲಿ ಪುನರ್ನಿರ್ಮಾಣದ ವಿಷಯವನ್ನೂ ಪ್ರಸ್ತಾಪಿಸಲಾಗಿತ್ತು. ಅದರಲ್ಲಿ ‘‘ಮೋದಿಯವರು ತಾನು ಇತ್ತೀಚಿನ ತಂತ್ರಜ್ಞಾನ ಬಳಸಿ ಕೇದಾರನಾಥ ಮಂದಿರವನ್ನು ಮುಂದೆಂದೂ ಹಾನಿಗೀಡಾಗದ ರೀತಿಯಲ್ಲಿ ಸಂಪೂರ್ಣವಾಗಿ ಪುನರ್ನಿರ್ಮಿಸುವುದಾಗಿ ಹೇಳಿದರಾದರೂ ಉತ್ತರಾಖಂಡದ ಮುಖ್ಯಮಂತ್ರಿಗಳು ಈ ಕೊಡುಗೆಯನ್ನು ತಳ್ಳಿಹಾಕಿದರೆಂದು ನಂಬಲಾಗಿದೆ’’ ಎಂದು ಹೇಳಲಾಗಿತ್ತು. ಆದರೆ ಮೋದಿಯವರ ಇತ್ತೀಚಿನ ಹೇಳಿಕೆಯ ಪ್ರಕಾರ ಕೇದಾರನಾಥ ಮಂದಿರದ ಮರುನಿರ್ಮಾಣ ಕೈಗೊಳ್ಳುವ ತನ್ನ ಅಪೇಕ್ಷೆಯನ್ನು ಅಂದಿನ ಮುಖ್ಯಮಂತ್ರಿಯವರಿಗೆ ತಿಳಿಸಿದಾಗ ಅವರು ತತ್ವಶಃ ಒಪ್ಪಿದ್ದರು. ತಾನು ಈ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಒಂದು ಗಂಟೆಯೊಳಗಾಗಿ ಟಿವಿ ಚಾನೆಲ್ಗಳು ಅದನ್ನು ಪ್ರಸಾರ ಮಾಡಿದವು. ಇದನ್ನು ವೀಕ್ಷಿಸಿದ ಯುಪಿಎ ಸರಕಾರ ಗುಜರಾತಿನ ಮುಖ್ಯಮಂತ್ರಿ ಈಗ ಕೇದಾರನಾಥವನ್ನು ಎಟಕಿಸಿಕೊಳ್ಳಲು ಯತ್ನಿಸುತ್ತಿದ್ದಾರೆಂದು ಬೆದರಿತು.
ಅದು ರಾಜ್ಯ ಸರಕಾರದ ಮೇಲೆ ಒತ್ತಡ ತಂದು ಈ ಕೋರಿಕೆಯನ್ನು ಒಪ್ಪಬಾರದೆಂದು ಹೇಳಿತು. ತಾನು ನಿರಾಶನಾಗಿ ರಾಜ್ಯಕ್ಕೆ ಮರಳಿದೆ. ಆದರೆ ಬಹುಶಃ ಕೇದಾರನಾಥದ ಮರುನಿರ್ಮಾಣ ಕಾರ್ಯವನ್ನು ತನ್ನ ಪುತ್ರನಿಗಲ್ಲದೆ ಇನ್ಯಾರಿಗೂ ವಹಿಸಬಾರದೆಂಬುದು ಬಾಬಾನ (ಶಿವ) ನಿರ್ಧಾರವಾಗಿತ್ತು. ಅಂದಹಾಗೆ ಇನ್ನೊಂದು ಸಂದರ್ಭದಲ್ಲಿ ಮೋದಿ ತಾನು ಗಂಗೆಯ ಪುತ್ರ ಎಂದದ್ದೂ ಇದೆ! ದೇಶದ ಪ್ರಧಾನಿಯ ಸ್ಥಾನದಲ್ಲಿರುವವರು ಆ ಸ್ಥಾನದ ಗೌರವವನ್ನು ಉಳಿಸಿಕೊಳ್ಳಬೇಕು, ವಿವೇಕದಿಂದ ಮಾತನಾಡಬೇಕು ಎಂದು ನಿರೀಕ್ಷಿಸಲಾಗುತ್ತದೆ. ಆದರೆ ಮೋದಿಯವರಿಗೆ ಇಂತಹ ಯಾವುದೇ ಶಿಷ್ಟಾಚಾರಗಳ ಪರಿವೆಯೇ ಇಲ್ಲವೆಂಬುದು ಕಳೆದ ಮೂರೂವರೆ ವರ್ಷಗಳಲ್ಲಿ ಸಾಬೀತಾಗಿದೆ. ಈಗ ನೋಡಿ, 2002ರ ಗಲಭೆಗಳ ಕಾಲದಲ್ಲಿ ಹಾನಿಗೀಡಾದ ಮಸೀದಿ, ದರ್ಗಾ ಇತ್ಯಾದಿಗಳ ಮರುನಿರ್ಮಾಣಕ್ಕೆ ಸಾರ್ವಜನಿಕ ಬೊಕ್ಕಸದ ಹಣವನ್ನು ಬಳಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಜಾತ್ಯತೀತತೆಯ ಸೂತ್ರಗಳಿಗೆ ಅನುಸಾರವಾಗಿ ಒಂದು ನಿರ್ದಿಷ್ಟ ಧರ್ಮದ ಪೂಜಾ ಅಥವಾ ಯಾತ್ರಾ ಸ್ಥಳದ ಮರುನಿರ್ಮಾಣಕ್ಕೆ ತೆರಿಗೆದಾರರ ಹಣವನ್ನು ಖರ್ಚು ಮಾಡಬಾರದು ಎಂದು ಈ ಆದೇಶ ಸ್ಪಷ್ಟವಾಗಿ ಹೇಳುತ್ತಿರುವಾಗ ಮೋದಿಯವರು ಹೀಗೆ ಬುಲ್ಡೋಝರ್ ಚಲಾಯಿಸುವ ಥರದ ಹೇಳಿಕೆ ನೀಡುವುದು ಸ್ಪಷ್ಟವಾಗಿ ನ್ಯಾಯಾಂಗ ನಿಂದನೆಯಲ್ಲವೇ? ಗುಜರಾತ್ ರಾಜ್ಯ ಪೆಟ್ರೋಲಿಯಂ ಕಾರ್ಪೊರೇಷನ್ ದಿವಾಳಿ ಎದ್ದ ಪರಿ
‘‘ಸರಕಾರಿ ಸ್ವಾಮ್ಯದ ಸಂಸ್ಥೆಯಾದ ಗುಜರಾತ್ ರಾಜ್ಯ ಪೆಟ್ರೋಲಿಯಂ ಕಾರ್ಪೊರೇಷನ್ ಈಗ ಆಂಧ್ರ ಪ್ರದೇಶದಲ್ಲಿ ಶೋಧಿಸಿರುವ ನೈಸರ್ಗಿಕ ಅನಿಲ ನಿಕ್ಷೇಪ ಭಾರತದ ಅತೀ ದೊಡ್ಡ ನಿಕ್ಷೇಪವಾಗಿದೆ. 20 ಟ್ರಿಲಿಯ ಘನ ಅಡಿಗಳಷ್ಟಿರುವ (ಟಿಸಿಎಫ್) ಅನಿಲದ ಬೆಲೆ 50 ಬಿಲಿಯ ಡಾಲರು ದಾಟುತ್ತದೆ.’’ ಹೀಗಿತ್ತು ಮುಖ್ಯಮಂತ್ರಿ ಮೋದಿಯವರ ಅಂದಿನ ಸಾರ್ವಜನಿಕ ಘೋಷಣೆ. ಆದರೆ ಇದೊಂದು ಹುಸಿ ಘೋಷಣೆ ಯಾಗಿತ್ತು. ಜನರಿಂದ ಸಂಗ್ರಹಿಸಿದ ತೆರಿಗೆ ದುಡ್ಡಿನ ಜವಾಬ್ದಾರಿ ಹೊತ್ತಿರುವವರು ಇಂಥಾ ಖೊಟ್ಟಿ ಹೇಳಿಕೆಗಳನ್ನು ನೀಡುವ ವಿದ್ಯಮಾನ ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಈ ತಥಾಕಥಿತ ತೈಲ ಶೋಧ ಕಾರ್ಯಕ್ಕೆ ಸುಮಾರು 2 ಬಿಲಿಯ ಡಾಲರುಗಳಷ್ಟು ದುಡ್ಡನ್ನು ವ್ಯಯಿಸಲಾಗಿತ್ತು. ಇದರ ಹೆಚ್ಚಿನಂಶವನ್ನು ಬ್ಯಾಂಕು ಮತ್ತಿತರ ಹಣಕಾಸು ಸಂಸ್ಥೆಗಳಿಂದ ಸಾಲರೂಪವಾಗಿ ಪಡೆಯಲಾಗಿತ್ತು. ಗಮನಿಸಬೇಕಿರುವ ಅಂಶವೆಂದರೆ ಸಂಸ್ಥೆ ಯಾವುದೇ ತಜ್ಞರ ಸಲಹೆಯನ್ನು ಪಡೆದುಕೊಂಡಿರಲಿಲ್ಲ.
ಹೈಡ್ರೊಕಾರ್ಬನ್ಸ್ನ ಪ್ರಧಾನ ನಿರ್ದೇಶನಾಲಯದ ಅಭಿಪ್ರಾಯದಲ್ಲಿ ಅಲ್ಲಿ ಬರೀ 2 ಟಿಸಿಎಫ್ ಅನಿಲ ಮಾತ್ರ ಇರಬಹುದು; ಆದರೂ ಅದನ್ನು ಹೊರತೆಗೆಯಲು ತುಂಬಾ ಕಷ್ಟವಿದೆ. ಇದು ಮೋದಿ ಘೋಷಿಸಿದ ಪ್ರಮಾಣದ ಕೇವಲ ಶೇಕಡಾ 10ರಷ್ಟು ಮಾತ್ರ! ಅಂತಿಮವಾಗಿ 2012ರಲ್ಲಿ ಅನಿಲದ ಸುಳಿವೇ ಇಲ್ಲ ಎಂದಾದಾಗ ಸಂಸ್ಥೆ ದಿವಾಳಿ ಎದ್ದಿತು. ಆ ಸಂದರ್ಭದಲ್ಲಿ ಮೋದಿ ಕೊಟ್ಟ ಜಾಣ ಸಲಹೆ ಏನು ಗೊತ್ತೇ? ‘‘ನಗರ ಪ್ರದೇಶಗಳಲ್ಲಿ ಅನಿಲ ವಿತರಣೆಯ ಕಾರ್ಯವನ್ನು ಕೈಗೆತ್ತಿಕೊಳ್ಳಿ!’’ ಎಂದು. ಸಹಜವಾಗಿಯೇ ಸಾರ್ವಜನಿಕ ವಲಯದ ಸಂಸ್ಥೆಯೊಂದನ್ನು ಈ ರೀತಿ ವಿನಾಶದಂಚಿಗೆ ದೂಡಿದ ಗುಜರಾತ್ ಮುಖ್ಯಮಂತ್ರಿಯನ್ನು ಯಾಕೆ ಯಾರೂ ಇದುವರೆಗೆ ಪ್ರಶ್ನಿಸಿಲ್ಲವೆಂದು ನೀವು ಕೇಳಬಹುದು. ಪ್ರಶ್ನಿಸಲು ಅಲ್ಲಿ ಲೋಕಾಯುಕ್ತ, ಲೋಕಪಾಲ ಇದ್ದರೆ ತಾನೆ!!!
ಇವತ್ತು ಭಾರತೀಯ ಮಾಧ್ಯಮರಂಗದ ವೈಫಲ್ಯ ಎದ್ದುಕಾಣುವಂತಿದೆ. ಇದೇ ಮಾಧ್ಯಮಗಳು ಈ ಹಿಂದೆ, ಅದರಲ್ಲೂ ವಿಶೇಷವಾಗಿ ಯುಪಿಎ ರಕಾರದ ಕಾಲದಲ್ಲಿ ಪ್ರತಿಪಕ್ಷಗಳ ಹಾಗೆ ಕಾರ್ಯ ನಿರ್ವಹಿಸಿ ಆಳುವ ಪಕ್ಷದ ಮುಖಕ್ಕೆ ಕನ್ನಡಿ ಹಿಡಿಯುವ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದವು. ಆದರೆ ಇಂದು ಹಿಂದೆಂದೂ ಇರದ ರೀತಿಯಲ್ಲಿ ಭಟ್ಟಂಗಿತನ ಬೆಳೆಸಿಕೊಂಡಿರುವ ಮಾಧ್ಯಮಗಳು ಮೋದಿಯವರ ಹೇಳಿಕೆಗಳನ್ನು ಸೂಕ್ಷ್ಮ ಪರಿಶೀಲನೆಗೊಡ್ಡುತ್ತಲೂ ಇಲ್ಲ, ಹಿಂದಿನ ತದ್ವಿರುದ್ಧ ಹೇಳಿಕೆಗಳೊಂದಿಗೆ ಹೋಲಿಸುವ ಗೋಜಿಗೂ ಹೋಗುತ್ತಿಲ್ಲ. ಬದಲು ಅವರನ್ನು ಅತಿಯಾಗಿ ವೈಭವೀಕರಿಸುತ್ತಿರುವುದನ್ನು ಕಾಣಬಹುದು. ಏಕ ವ್ಯಕ್ತಿಯ ವೈಭವೀಕರಣ ಎಂತಹ ಪ್ರಭುತ್ವಗಳಲ್ಲಿ ನಡೆಯುತ್ತದೆ ಎನ್ನುವುದು ಇವರಿಗೆ ತಿಳಿಯದ ವಿಚಾರವೇನೂ ಅಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಪ್ರಜಾಪ್ರಭುತ್ವದ ನಾಲ್ಕನೆ ಆಧಾರಸ್ಥಂಭ ಇಂದು ಪ್ರಜಾಪ್ರಭುತ್ವವನ್ನು ಕಾಪಿಡುವ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಸೋಲುತ್ತಿದೆ. ಪರಿಣಾಮವಾಗಿ ಭಾರತದ ಪ್ರಜಾಪ್ರಭುತ್ವ ದಿನದಿಂದ ದಿನಕ್ಕೆ ಸ್ವಲ್ಪಸ್ವಲ್ಪವಾಗಿಯೇ ಸಾಯುತ್ತಿದೆ. ಅತ್ತ ಅದನ್ನು ಕಬಳಿಸಲು ಸಿದ್ಧವಾಗಿ ನಿಂತಿದೆ ಕೆನ್ನಾಲಿಗೆಯನ್ನು ಹೊರಚಾಚಿರುವ ಸರ್ವಾಧಿಕಾರ.
(ಆಧಾರ: ದ ವೈರ್.ಕಾಮ್ನಲ್ಲಿ ಅಪೂರ್ವಾನಂದ್ರ ಲೇಖನ)