varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಲಂಕೇಶ್ ಮತ್ತು ಗೌರಿ ಎರಡು ಪತ್ರಿಕೆಗಳ ಕತೆ

ವಾರ್ತಾ ಭಾರತಿ : 3 Nov, 2017
ಡಾ. ನಟರಾಜ್ ಹುಳಿಯಾರ್

 ಸಾಹಿತ್ಯ ಮತ್ತು ವಿಚಾರಗಳ ನಡುವೆ ಸಮನ್ವಯವನ್ನು ಸಾಧಿಸಿ ಬರೆಯುತ್ತಾ ಬರುತ್ತಿರುವವರು ಡಾ. ನಟರಾಜ್ ಹುಳಿಯಾರ್. ಪಿ. ಲಂಕೇಶ್ ಅವರು ಬದುಕಿದ್ದ ಕಾಲಘಟ್ಟದ ಲಂಕೇಶ್ ಪತ್ರಿಕೆಯಲ್ಲಿ ಸುದೀರ್ಘವಾಗಿ ಬರೆಯುತ್ತಾ ಒಂದು ತಲೆಮಾರಿನ ತಲ್ಲಣಗಳಿಗೆ ಮುಖಾಮುಖಿಯಾದವರು. ಗುರು ಡಿ. ಆರ್. ನಾಗರಾಜ್ ಮತ್ತು ಲಂಕೇಶ್ ಅವರ ಗರಡಿಯಲ್ಲಿ ರೂಪುಗೊಂಡವರಾದರೂ ಈ ಇಬ್ಬರು ಚಿಂತಕರ ಪ್ರಭಾವಕ್ಕೆ ಸಂಪೂರ್ಣ ಆಹುತಿಯಾಗದೆ ಅಂತರವೊಂದನ್ನು ಕಾಪಾಡಿ ಕೊಳ್ಳುತ್ತಲೇ, ತಮ್ಮದೇ ಮಾರ್ಗದ ಮೂಲಕ ಕನ್ನಡ ಬರಹ ಲೋಕಕ್ಕೆ ಗಾಳಿ ಬೆಳಕನ್ನು ಕೊಟ್ಟವರು. ಈ ಬರಹದಲ್ಲಿ ಪಿ. ಲಂಕೇಶ್ ಮತ್ತು ಅವರ ಪುತ್ರಿ ಗೌರಿ ಅವರ ಸಂದರ್ಭಗಳನ್ನು ಜೊತೆಗಿಟ್ಟು ವರ್ತಮಾನದ ಆತಂಕಗಳನ್ನು ಚರ್ಚಿಸಿದ್ದಾರೆ.

ಇಪ್ಪತ್ತನೆಯ ಶತಮಾನ ಮುಗಿದು ಇನ್ನೇನು ಇಪ್ಪತ್ತೊಂದನೆಯ ಶತಮಾನ ಅಡಿಯಿಡುತ್ತಿತ್ತು. 1999ರ ಡಿಸೆಂಬರ್ ತಿಂಗಳಲ್ಲಿ ಕೆಲವು ಮಿತ್ರರು ಪಿ.ಲಂಕೇಶರನ್ನು ಕೇಳಿದರು: ‘ಕರ್ನಾಟಕಕ್ಕೆ ಸಂಬಂಧಿಸಿದಂತೆ ಸಹಸ್ರಮಾನದ ವ್ಯಕ್ತಿಯನ್ನು ಆರಿಸುವುದಾದರೆ ಯಾರನ್ನು ಆರಿಸುತ್ತೀರಿ?’ ಲಂಕೇಶ್ ಒಂದೆರಡು ವಾರ ಯೋಚಿಸಿ, ಕೊನೆಗೆ ಇಬ್ಬರನ್ನು ಆಯ್ಕೆ ಮಾಡಿದರು: ಒಂದು, ಬಸವಣ್ಣ; ಎರಡು, ಡಿ. ದೇವರಾಜ ಅರಸು. ಎರಡು ವಿಭಿನ್ನ ಘಟ್ಟಗಳಲ್ಲಿ ಈ ಇಬ್ಬರೂ ಕನ್ನಡನಾಡಿನ ಚರಿತ್ರೆಯ ನಿರ್ಣಾಯಕ ಚಲನೆಗೆ ಕಾರಣರಾಗಿದ್ದರು. ಕೊನೆಗೆ ದೇವರಾಜ ಅರಸರನ್ನು ಸಹಸ್ರಮಾನದ ವ್ಯಕ್ತಿಯಾಗಿ ಆರಿಸುತ್ತಾ ಲಂಕೇಶ್ ಹೇಳಿದರು: ‘ಡಿ. ದೇವರಾಜ ಅರಸು ಕರ್ನಾಟಕದ ಹಲವು ಸ್ತರಗಳ ಜನವರ್ಗಗಳಲ್ಲಿ ಅತ್ಯಂತ ಮೂರ್ತ ಬದಲಾವಣೆಗೆ ಕಾರಣರಾದ ವ್ಯಕ್ತಿ. ಆದ್ದರಿಂದ ಅರಸು ನನ್ನ ಆಯ್ಕೆ. ಅದರ ಜೊತೆಗೇ, ನಾನು ಬಸವಣ್ಣನವರ ಜಾತಿಗೆ ಸೇರಿರುವುದರಿಂದ ನನ್ನ ಜಾತಿಯ ನಾಯಕನನ್ನು ಆಯ್ಕೆ ಮಾಡಲು ನನ್ನ ಮನಸ್ಸು ಹಿಂಜರಿಯುತ್ತಿದೆ’. ಲಂಕೇಶರು ಈ ಆಯ್ಕೆ ಮಾಡಿದ ಸುಮಾರು ಹದಿನಾರೂವರೆ ವರ್ಷಗಳ ನಂತರ ಅವರ ಮಗಳು ಗೌರಿ ಲಂಕೇಶ್ ಕರ್ನಾಟಕದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದ ಚಳವಳಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು. ತಮ್ಮ ‘ಸಂಕ್ರಾಂತಿ’ ನಾಟಕದಲ್ಲಿ ವಚನ ಚಳವಳಿಯನ್ನು ತೀವ್ರ ಪರೀಕ್ಷೆಗೆ ಒಳಪಡಿಸಿದ್ದ ಲಂಕೇಶರು ಈ ಕಾಲದಲ್ಲಿ ಇದ್ದಿದ್ದರೆ, ಇವತ್ತು ನಡೆಯುತ್ತಿರುವ ಚಳವಳಿಗೂ ಸಾಮಾನ್ಯ ಲಿಂಗಾಯತರ ನಿಜವಾದ ಕಷ್ಟ, ದುಗುಡ,ದುಮ್ಮಾನಗಳಿಗೂ ಸಂಬಂಧವಿದೆಯೇ ಎಂಬ ಪ್ರಶ್ನೆಯನ್ನೆತ್ತಿಕೊಂಡು ಈ ಕಾಲದ ಜನಪ್ರಿಯ ಪ್ರಗತಿಪರ ನಿಲುವುಗಳಿಗಿಂತ ಭಿನ್ನವಾದ ಸಂಕೀರ್ಣವಾದ ನಿಲುವನ್ನು ತಳೆಯುತ್ತಿದ್ದರೆಂಬುದು ನನ್ನ ಊಹೆ. ಅದೇನೇ ಇರಲಿ, ಇಪ್ಪತ್ತನೆಯ ಶತಮಾನದ ಕೊನೆಗೆ ಹಾಗೂ ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಲಂಕೇಶರ ಅಂತಿಮ ಆಯ್ಕೆ ಕರ್ನಾಟಕದ ಚರಿತ್ರೆಯ ಚಲನೆಯ ಎರಡು ಬಗೆಗಳಲ್ಲಿ ಒಂದನ್ನು ಹೆಚ್ಚು ಮುಖ್ಯವೆಂದು ತೀರ್ಮಾನಿಸಿತ್ತು.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನ ನಾಯಕತ್ವದಲ್ಲಿ ಉಂಟಾದ ಮಹತ್ವದ ಸಾಂಸ್ಕೃತಿಕ ಚಲನೆಗಿಂತ, ದೇವರಾಜ ಅರಸರ ಕಾಲದ ಭೂ ಸುಧಾರಣೆ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯ ಮೂಲಕ ಸಾಧ್ಯವಾದ ಮೂರ್ತ ಸಾಮಾಜಿಕ-ಆರ್ಥಿಕ ಚಲನೆ ಹೆಚ್ಚು ಮುಖ್ಯವೆಂದು ಲಂಕೇಶ್ ತೀರ್ಮಾನಿಸಿದ್ದರು. ಇತ್ತ, ಇಪ್ಪತ್ತೊಂದನೆಯ ಶತಮಾನದ ಎರಡನೆಯ ದಶಕದಲ್ಲಿ ಹಠಾತ್ತನೆ ಕೊನೆಗೊಂಡ ತಮ್ಮ ಜೀವಿತದ ಕಡೆಯ ದಿನಗಳಲ್ಲಿ ಗೌರಿ ಬೆಂಬಲಿಸಿದ ಲಿಂಗಾಯತ ಧರ್ಮದ ಚಳವಳಿ ಅವರು ಮುಂಚೂಣಿಯಲ್ಲಿದ್ದ ಕೆಲ ಬಗೆಯ ಪ್ರಗತಿಪರ ಚಳವಳಿಗಳ ಐಡಿಯಲಾಜಿಕಲ್ ಒತ್ತಡದಿಂದಲೂ ಹುಟ್ಟಿದಂತಿತ್ತು. ಗೌರಿ ಈ ಘಟ್ಟ ತಲುಪಿದ ರೀತಿ ಕೂಡ ಒಂದು ರೀತಿಯಲ್ಲಿ ಆಕಸ್ಮಿಕವಾಗಿತ್ತು. ಕರ್ನಾಟಕದ ಇತಿಹಾಸದಲ್ಲಿ ಅಪ್ಪ ಹಾಗೂ ಮಗಳು ನಡೆಸಿದ ಎರಡೂ ಪತ್ರಿಕೆಗಳು ಒಂದು ಅರ್ಥದಲ್ಲಿ ಚಾರಿತ್ರಿಕ ಆಕಸ್ಮಿಕಗಳಾಗಿದ್ದವು. ತಮ್ಮ ವ್ಯಕ್ತಿತ್ವದಲ್ಲಿದ್ದ ವಿಚಿತ್ರ ಸೃಜನಶೀಲ ಚಡಪಡಿಕೆಯಿಂದಾಗಿ ಒಂದು ಬರವಣಿಗೆಯ ಪ್ರಕಾರ ಬಿಟ್ಟು ಇನ್ನೊಂದಕ್ಕೆ ಜಿಗಿಯುವ ತುರ್ತು ಇಲ್ಲದಿದ್ದರೆ ಲಂಕೇಶರು ತಮ್ಮ ಹೆಸರನ್ನುಳ್ಳ ‘ಲಂಕೇಶ್ ಪತ್ರಿಕೆ’ಯನ್ನು ಶುರು ಮಾಡುತ್ತಿರಲಿಲ್ಲವೇನೋ. ಅದರಲ್ಲೂ ತಮ್ಮ ಕತೆಗಳ ಸಂಕೀರ್ಣ ಸ್ಫೋಟಗಳನ್ನು ಹೆಚ್ಚು ಜನರಿಗೆ ತಲುಪಿಸುವ ಚಡಪಡಿಕೆಯಿಂದ ನಾಟಕ, ಆನಂತರ ಸಿನೆಮಾ ಮಾಡಹೊರಟಿದ್ದ ಲಂಕೇಶರು, 1979ರಲ್ಲಿ ಅಕಸ್ಮಾತ್ತಾಗಿ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಒಂದು ಅಂಕಣದ ಹೆಸರು ಕೂಡ ಇಲ್ಲದೆ ಕೆಲವು ಶನಿವಾರಗಳು ಅನನ್ಯವಾದ ರಾಜಕೀಯ ವಿಶ್ಲೇಷಣೆಗಳನ್ನು ಮಾಡಿದರು. ಕನ್ನಡಕ್ಕೆ ಅತ್ಯಂತ ಹೊಸ ಬಗೆಯವಾಗಿದ್ದ ಆ ಬರಹಗಳ ವಿಶಿಷ್ಟ ಯಶಸ್ಸು ಅವರನ್ನು ಪತ್ರಿಕೋದ್ಯಮದತ್ತ ಎಳೆದೊಯ್ಯದಿದ್ದರೆ, ‘ಲಂಕೇಶ್ ಪತ್ರಿಕೆ’ ಹುಟ್ಟುತ್ತಿರಲಿಲ್ಲವೇನೋ! ಅವರು ದಿಲ್ಲಿಗೆ ತಮ್ಮದೇ ಆದ ವಾರಪತ್ರಿಕೆಯ ನೋಂದಣಿಗೆಂದು ಕಳಿಸಿದ ಹಲವು ಹೆಸರುಗಳಲ್ಲಿ ಇದೂ ಒಂದಾಗಿತ್ತು. ಅವುಗಳಲ್ಲಿ ‘ಜಾಣ’ ಎಂಬ ಹೆಸರು ನೋಂದಣಿಯಾಗಬಹುದೆಂಬ ವಿಶ್ವಾಸ ಲಂಕೇಶರಿಗಿತ್ತು. ಕೊನೆಯ ಗಳಿಗೆಯಲ್ಲಿ ಏನೋ ವ್ಯತ್ಯಾಸವಾಗಿ ಅವರ ಹೆಸರನ್ನುಳ್ಳ ಪತ್ರಿಕೆ ನೋಂದಣಿಯಾಯಿತು. ಅಂದಿನಿಂದ ಸುಮಾರು ಇಪ್ಪತ್ತು ವರ್ಷಗಳ ಕಾಲ ಲಂಕೇಶರು ತಾವು ಸಂಪಾದಿಸಿದ ಈ ಚಾರಿತ್ರಿಕ ಪತ್ರಿಕೆಯನ್ನು ‘ಕನ್ನಡ ಜಾಣ ಜಾಣೆಯರ ವಾರಪತ್ರಿಕೆ’ ಎಂದು ಕರೆದರು; ಪತ್ರಿಕೆಯ ಆಶಯವಾಗಿದ್ದ ‘ರಂಜನೆ ಬೋಧನೆ ಪ್ರಚೋದನೆ’ ಎಂಬ ಪದಗುಚ್ಛ ಪತ್ರಿಕೆಯ ಪ್ರಚಾರದ ಪೋಸ್ಟರುಗಳಲ್ಲಿ, ಅಥವಾ ಎಲ್ಲೋ ಒಮ್ಮೋಮ್ಮೆ ಇತರ ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ, ಮೈಸೂರು ರಸ್ತೆಯಲ್ಲಿ ಪ್ರಕಟಿಸಿದ್ದ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು.

ಹದಿನೇಳು ವರ್ಷಗಳ ಕೆಳಗೆ, 2000ನೆ ಇಸವಿಯ ಜನವರಿ 24ನೇ ತಾರೀಕು ಪತ್ರಿಕೆಯ ಕೆಲಸ ಮುಗಿಸಿ, ರಾತ್ರಿ 9:30ರ ಹೊತ್ತಿಗೆ, ‘ಬರ್ಲೇನೋ?’ ಎನ್ನುತ್ತಾ, ನಾನು ನೋಡನೋಡುತ್ತಿರುವಂತೆಯೇ ‘ಲಂಕೇಶ್ ಪತ್ರಿಕೆ’ಯ ಆಫೀಸಿನ ಮೆಟ್ಟಲಿಳಿದು ಹೋದ ಲಂಕೇಶರು ಮತ್ತೆ ಆಫೀಸಿಗೆ ಬರಲಿಲ್ಲ. ಜನವರಿ 24-25ರ ನಡುವಣ ನಡುರಾತ್ರಿಯಲ್ಲಿ ಲಂಕೇಶರು ತೀರಿಕೊಂಡರು. ಅದಾದ ನಾಲ್ಕೇ ದಿನಕ್ಕೆ ಅವರ ಹಿರಿ ಮಗಳು ಗೌರಿ ಅಪ್ಪನ ಪತ್ರಿಕೆಯ ಸಂಪಾದಕರಾಗಿದ್ದು ಕೂಡ ಒಂದು ರೀತಿಯಲ್ಲಿ ಆಕಸ್ಮಿಕವಾಗಿತ್ತು. ಜನವರಿ 26ನೆಯ ತಾರೀಕು ಲಂಕೇಶರ ತೋಟದಲ್ಲಿ ಅವರ ಅಂತ್ಯಸಂಸ್ಕಾರ ನಡೆದ ದಿನ ಗೌರಿ ತಮ್ಮ ತಂದೆಗೆ ಸಾಂಪ್ರದಾಯಿಕ ರೀತಿಯ ಸಂಸ್ಕಾರ ಮಾಡುವುದನ್ನು ಏಕಾಂಗಿಯಾಗಿ ವಿರೋಧಿಸಿದ್ದರು. ಅವತ್ತು ಅಲ್ಲಿ ಸೇರಿದ್ದ ಸಾವಿರಾರು ಜನರ ಮನಸ್ಸಿನಲ್ಲಿ ಲಂಕೇಶರ ಅಂತ್ಯಸಂಸ್ಕಾರದ ಪ್ರಶ್ನೆಗಿಂತ ತಮ್ಮ ಆತ್ಮೀಯ ವೇದಿಕೆಯಾದ ‘ಲಂಕೇಶ್ ಪತ್ರಿಕೆ’ಯ ಭವಿಷ್ಯದ ಬಗೆಗಿನ ಕಾಳಜಿ ಮುಖ್ಯವಾಗಿ ಕಾಡುತ್ತಿದ್ದಂತಿತ್ತು. ಲಂಕೇಶರ ಒಳಬಳಗದಲ್ಲಿದ್ದ ಖ್ಯಾತ ವಿಚಾರವಾದಿ ಕೆ. ರಾಮದಾಸ್ ಅವತ್ತು ‘ಮೇಷ್ಟ್ರೇ ಇಲ್ಲವೆಂದಾದ ಮೇಲೆ, ‘ಲಂಕೇಶ್ ಪತ್ರಿಕೆ’ ಯನ್ನು ಇಲ್ಲಿಗೇ ನಿಲ್ಲಿಸಬೇಕು’ ಎಂದು ಭಾವುಕ ಉದ್ವೇಗದಿಂದ ಹೇಳಿದ್ದರು. ‘ಲಂಕೇಶ್ ಪತ್ರಿಕೆ’ ಒಂದು ಕಾಲಘಟ್ಟ ಹಾಗೂ ಜನರ ಆಶೋತ್ತರಗಳು ಕೂಡ ಸೃಷ್ಟಿಸಿದ ಪತ್ರಿಕೆಯಾದ್ದರಿಂದ ‘ಪತ್ರಿಕೆ’ಯನ್ನು ಸಾಮೂಹಿಕ ಪ್ರಯತ್ನದಿಂದ ನಡೆಸಬೇಕು ಎಂದು ಅಷ್ಟೇ ಉದ್ವೇಗದಿಂದ ವಾದಿಸಿದವರಲ್ಲಿ ನಾನೂ ಒಬ್ಬನಾಗಿದ್ದೆ. ಆ ಕಾಲಕ್ಕೆ ಲಂಕೇಶರು ತಮ್ಮ ‘ದುಷ್ಟಕೂಟ’ ಎಂದು ತಮಾಷೆಯಿಂದ ಕರೆಯುತ್ತಿದ್ದ ಬಳಗದ ‘ಸಂಧ್ಯಾಸದಸ್ಯ’ನೂ, ಪತ್ರಿಕೆಯ ಅಂಕಣಕಾರನೂ ಆಗಿದ್ದ ನಾನೂ ಒಂದು ಬಗೆಯಲ್ಲಿ ಆ ಪತ್ರಿಕೆಯ ಭಾಗವಾಗಿದ್ದೆ.

ಲಂಕೇಶರ ಅಂತ್ಯಸಂಸ್ಕಾರವಾದ ಎರಡು ದಿನಗಳ ನಂತರ ಲಂಕೇಶರಿಲ್ಲದ ಪತ್ರಿಕೆಯ ಮೊದಲ ವಾರದ ಮೀಟಿಂಗ್ ನಡೆಯಿತು. ಹಲವು ಸರಕಾರಗಳನ್ನು, ರಾಜಕೀಯ ನಾಯಕರನ್ನು, ಭ್ರಷ್ಟ ಅಧಿಕಾರಿಗಳನ್ನು ನಡುಗಿಸಿದ್ದ ದಿಟ್ಟ ವರದಿಗಾರರಾದ ರವೀಂದ್ರ ರೇಶ್ಮೆ ಅಥವಾ ಟಿ.ಕೆ.ತ್ಯಾಗರಾಜ್ ಪತ್ರಿಕೆಯ ಸಂಪಾದಕತ್ವ ವಹಿಸಿಕೊಳ್ಳಬಹುದೆಂಬುದು ನನ್ನ ಊಹೆಯಾಗಿತ್ತು. ಯಾರಾದರೂ ಸಂಪಾದಕರಾಗಲಿ, ‘ಲಂಕೇಶ್ ಪತ್ರಿಕೆ’ ಎನ್ನುವ ಚಳವಳಿ ಮುನ್ನಡೆಯಬೇಕೆಂಬುದು ನನ್ನಂಥ ಸಾವಿರಾರು ಜನರ ಆಳದ ಹಂಬಲವಾಗಿತ್ತು. ಆದರೆ ಅವತ್ತಿನ ಮೀಟಿಂಗಿಗೆ ಮೊದಲೇ ಪ್ರಾಯಶಃ ಎಲ್ಲವೂ ನಿರ್ಧಾರವಾಗಿತ್ತೆಂದು ತೋರುತ್ತದೆ. ನೋಡನೋಡುತ್ತಲೇ ಗೌರಿ ಸಂಪಾದಕರಾಗಿದ್ದರು. ಅದೇನೂ ಉತ್ತಮ ಆಯ್ಕೆಯಲ್ಲ ಎಂದು ಇತರರಂತೆ ನನಗೂ ಅನ್ನಿಸಿತ್ತು. ಆದರೆ ಲೋಹಿಯಾವಾದದ ಎಳೆಯೊಂದು ನನ್ನೊಳಗಿದ್ದುದರಿಂದ, ಮಹಿಳಾ ಸಂಪಾದಕರೊಬ್ಬರ ನಾಯಕತ್ವ ಈ ಪತ್ರಿಕೆಯ ಆಶಯಕ್ಕೆ ಪೂರಕವಾಗಿಯೇ ಇದೆ ಎಂದು ತಾತ್ವಿಕ ಸಮಜಾಯಿಷಿ ನೀಡಿಕೊಂಡೆ; ಇದನ್ನು ಕೆಲವು ಗೆಳೆಯರಿಗೂ ಹೇಳಿದ್ದೆ. ತಮ್ಮ ತಂದೆಯ ಫೋಟೊ ಎದುರಿಗಿಟ್ಟುಕೊಂಡು ಪುಟ್ಟ ಹುಡುಗಿಯಂತೆ ಅಳುತ್ತಲೇ ತಮ್ಮ ಆ ವಾರದ ಮೊದಲ ಟಿಪ್ಪಣಿ ಬರೆದ ಗೌರಿಯವರ ಮೊದಲ ‘ಕಾಪಿ’ ಇನ್ನೂ ನೆನಪಿದೆ. ಅದುವರೆಗೆ ಎಂದೂ ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆಯದಿದ್ದ, ಇಂಗ್ಲಿಷ್ ಪತ್ರಕರ್ತೆಯಾಗಿದ್ದ ಗೌರಿ ಅಲ್ಲಲ್ಲಿ ಇಂಗ್ಲಿಷ್ ಪದಗಳನ್ನು ಸೇರಿಸಿ ತಮ್ಮ ಟಿಪ್ಪಣಿ ಬರೆದಿದ್ದರು. ಅದನ್ನು ಕೊಂಚ ಒಪ್ಪಗೊಳಿಸುವ ಕೆಲಸವನ್ನೂ, ಎಲ್ಲರ ಪರವಾಗಿ ಸಂಪಾದಕೀಯ ಟಿಪ್ಪಣಿ ಬರೆಯುವ ಕೆಲಸವನ್ನೂ ಬದ್ಧತೆಯಿಂದ ಮಾಡಿದ ಆ ಗಳಿಗೆಗಳು ನಾನು ನಿನ್ನೆ ಮೊನ್ನೆಯಷ್ಟೇ ಹಾದುಬಂದ ಗಳಿಗೆಗಳಂತಿವೆ.

ನಾಡಿನ ಎಲ್ಲ ದಿಕ್ಕುಗಳಿಂದಲೂ ಪತ್ರಗಳು, ಬರಹಗಳು, ಬೆಂಬಲ ಸೂಚಿಸುವ ಸಂದೇಶಗಳು ಪತ್ರಿಕೆಗೆ ಹರಿದು ಬರುತ್ತಿದ್ದವು. ಪತ್ರಿಕೆ ಎಂದಿನಂತೆ ಸೋಮವಾರ ರಾತ್ರಿ ಸಮಯಕ್ಕೆ ಸರಿಯಾಗಿ ಸಿದ್ಧವಾಯಿತು. ಮಂಗಳವಾರ ಬೆಳಗ್ಗೆ ಗಲ್ಲಕ್ಕೆ ಕೈಯಿಟ್ಟ ಲಂಕೇಶರ ಮುಖಪುಟ ಹೊತ್ತು, ‘ಇಂತಿ ನಮಸ್ಕಾರಗಳು’ ಎಂಬ ಶೀರ್ಷಿಕೆಯಿದ್ದ ‘ಲಂಕೇಶ್ ಪತ್ರಿಕೆ’ ಅಂಗಡಿಗಳಿಗೆ ಬಂದಾಗ ಜನ ಕಾತರದಿಂದ ಕೊಂಡು ಬೆಂಗಳೂರಿನ ಜಯನಗರದ ಫುಟ್ ಪಾತಿನ ಮೇಲೆ ನಿಂತು ಸರಸರ ಪುಟ ತೆಗೆದು ಕಾತರದಿಂದ ಓದುತ್ತಿದ್ದದ್ದನ್ನು ನೋಡಿದೆ. ಪತ್ರಿಕೆಯ ನಿಷ್ಠ ಓದುಗರು ತಮ್ಮ ಪತ್ರಿಕೆ ನಿಂತಿಲ್ಲವೆಂದು ನಿರಾಳವಾದಂತಿದ್ದರು. ಎರಡು ದಶಕಗಳ ಅನನ್ಯ ಚಳವಳಿ ಮುನ್ನಡೆಯುತ್ತಿದೆಯೆಂದು ನನ್ನಂತೆಯೇ ಅನೇಕರಿಗೆ ನಿಜಕ್ಕೂ ನೆಮ್ಮದಿಯಾಗಿತ್ತು. ಗೌರಿಗೆ ಸಹಜವಾಗಿಯೇ ಲಂಕೇಶರ ಜಾತ್ಯತೀತತೆ ಹಾಗೂ ನಿರ್ಭಯತೆ ಒಂದು ಮಟ್ಟದಲ್ಲಿ ಸಿದ್ಧಿಸಿದ್ದಂತಿದ್ದವು. ಆದರೆ ಲಂಕೇಶರ ಆಳ ಇತರರಿಗೆ ಹೇಗೋ ಹಾಗೆ ಗೌರಿಗೂ ಅಷ್ಟು ಸುಲಭವಾಗಿ ಬರುವಂತಹದ್ದಾಗಿರಲಿಲ್ಲ; ಅದನ್ನು ಆ ಘಟ್ಟದಲ್ಲಿ ಅವರಿಂದ ನಿರೀಕ್ಷಿಸುವುದು ಕೂಡ ಅವಸರವಾಗುತ್ತಿತ್ತು. ವಿಶೇಷವೆಂದರೆ, ‘ಲಂಕೇಶ್ ಪತ್ರಿಕೆ’ಯ ಓದುಗರು, ಪ್ರಗತಿಪರ ಲೇಖಕರು ಹಿಂದೆಂದಿಗಿಂತ ಈಗ ಪತ್ರಿಕೆಗೆ ಹೆಚ್ಚು ಬದ್ಧರಾಗುವ ಸೂಚನೆ ತೋರತೊಡಗಿದರು. ಲಂಕೇಶರಿಂದ ಅತ್ಯಂತ ಕಟುವಾಗಿ ಟೀಕಿಸಿಕೊಂಡ ಅನಂತಮೂರ್ತಿ ಕೂಡ ಪತ್ರಿಕೆಗೆ ಬರೆಯುವ ಉತ್ಸಾಹ ತೋರಿಸಿದರು.

ಅಷ್ಟೊತ್ತಿಗೆ ಲಂಕೇಶರ ಜೊತೆ ಮುನಿಸಿಕೊಂಡು ಪತ್ರಿಕೆಗೆ ಬರೆಯುವುದನ್ನು ನಿಲ್ಲಿಸಿದ್ದ ಪೂರ್ಣಚಂದ್ರ ತೇಜಸ್ವಿ ಕೂಡ ಮತ್ತೆ ಪತ್ರಿಕೆಗೆ ಬರೆಯುವ ಸಾಧ್ಯತೆ ಕಾಣತೊಡಗಿತ್ತು. ಲಂಕೇಶರಿಂದ ಬೈಸಿಕೊಂಡಿದ್ದ ಅನೇಕರಿಗೆ ಕೂಡ ಈ ಪತ್ರಿಕೆ ನಾಡಿಗೆ ಅವಶ್ಯವಾಗಿ ಬೇಕೇ ಬೇಕು ಎನ್ನಿಸುವ ವಾತಾವರಣ ಕಾಣತೊಡಗಿತು. ಲಂಕೇಶರಿದ್ದ ಕಾಲಕ್ಕಿಂತ ಈಗ ಪತ್ರಿಕೆ ಹೆಚ್ಚಿನ ಓದುಗರನ್ನು ಪಡೆಯಬಹುದು ಎನ್ನಿಸತೊಡಗಿತು. ಯಾರನ್ನು ಕೇಳಿದರೂ ಪತ್ರಿಕೆಗೆ ಬರೆಯಲು ಉತ್ಸಾಹದಿಂದ ಒಪ್ಪಿಕೊಳ್ಳುತ್ತಿದ್ದರು. ಪತ್ರಿಕೆ ನಡೆದುಕೊಂಡು ಹೋಗುತ್ತದೆ ಎಂಬ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಅಷ್ಟೊತ್ತಿಗಾಗಲೇ ನಾನು ಪತ್ರಿಕೆಗೆ ‘ಗಾಳಿ ಬೆಳಕು’ ಅಂಕಣವೂ ಸೇರಿದಂತೆ, ಪುಸ್ತಕ ವಿಮರ್ಶೆ, ‘ಬಿಡಿ ಹೂ’, ‘ಕಾಡೇಗೂಡೇ’ ಎಂಬ ಪ್ರಶ್ನೋತ್ತರ ಪುಟ? ಹೀಗೆ ಮೂರು ನಾಲ್ಕು ಪೀಸ್ ಬರೆಯುತ್ತಿದ್ದೆ. ಹೀಗಿರುವಾಗ ಒಂದು ರವಿವಾರ ಬೆಳಗ್ಗೆ ಪತ್ರಿಕೆಯಿಂದ ಫೋನ್ ಬಂತು. ಮೊದಲ ಫೋನ್ ‘ಸಾರ್, ನಿಮ್ಮ ಅಂಕಣ ಬೇಡವಂತೆ’ ಎಂದಿತು. ಅರ್ಧ ಗಂಟೆಯ ನಂತರ ಬಂದ ಮತ್ತೊಂದು ಫೋನ್ ‘ಇನ್ನುಳಿದ ಬರಹಗಳೂ ಬೇಡವಂತೆ’ ಅಂದಿತು. ‘ಓಕೇ’ ಎಂದ ನಾನೂ ‘ಯಾಕೆ?’ ಎಂದು ಕೇಳಲಿಲ್ಲ; ಯಾರೂ ವಿವರಣೆಯನ್ನೂ ನೀಡಲಿಲ್ಲ! ಅಂದಿನಿಂದ ನಾನು ಅತ್ತ ಮುಖ ಹಾಕಲಿಲ್ಲ. ಈ ಥರದ ಖಾಸಗಿ ವಿವರಗಳಿಗೆ ಹೆಚ್ಚಿನ ಸಾಂಸ್ಕೃತಿಕ ಮಹತ್ವವಿರುವುದಿಲ್ಲವಾದ್ದರಿಂದ ಈ ವಿವರಗಳನ್ನು ಇಲ್ಲಿ ಬೆಳೆಸುವ ಅಗತ್ಯವಿಲ್ಲ. ಯಾರಿರಲಿ, ಬಿಡಲಿ; ಒಂದು ಚಳವಳಿಯಂತಿದ್ದ ಪತ್ರಿಕೆ ತನ್ನ ಪಾಡಿಗೆ ತಾನು ನಡೆಯುತ್ತಿತ್ತು; ಆದರೆ ನಾನು ಪತ್ರಿಕೆಯನ್ನು ಗಮನಿಸುವುದು ಕಡಿಮೆಯಾಯಿತು.

ಗೌರಿ ಸಂಪಾದಕತ್ವದ ಪತ್ರಿಕೆಗೆ ಬೌದ್ಧಿಕ ಶಕ್ತಿ ಕಡಿಮೆಯಿದ್ದಾಗಲೂ ಅದು ಕೆಲ ಬಗೆಯಲ್ಲಿ ವಿರೋಧ ಪಕ್ಷದ ಕೆಲಸವನ್ನು ಮಾಡುತ್ತಿತ್ತು ಎಂದು ಕೆಲವರು ಹೇಳುತ್ತಿದ್ದರು. ಮುಂದೆ ಒಳಜಗಳಗಳಿಂದ ಗೌರಿ ತಮ್ಮದೇ ಪತ್ರಿಕೆ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆಗ ಅವರಿಗೆ ಅಧಿಕೃತವಾಗಿ ಸಿಕ್ಕ ಶೀರ್ಷಿಕೆ ‘ರಂಜನೆ ಬೋಧನೆ ಪ್ರಚೋದನೆ ಲಂಕೇಶ್.’ ಆ ಹೆಸರಿನಲ್ಲೇ ಪತ್ರಿಕೆ ಪ್ರಕಟವಾಗುತ್ತಿದ್ದಾಗ ಮತ್ತೆ ಕೆಟ್ಟ ಕೌಟುಂಬಿಕ ಜಗಳವಾಗಿ ಗೌರಿ ತಮ್ಮ ಪತ್ರಿಕೆಯ ಹೆಸರನ್ನು ‘ರಂಜನೆ ಬೋಧನೆ ಪ್ರಚೋದನೆ ಗೌರಿ ಲಂಕೇಶ್’ ಎಂದು ಬದಲಿಸಬೇಕಾಯಿತು. ಓದುಗರು ‘ಗೌರಿ ಲಂಕೇಶ್ ಪತ್ರಿಕೆ’ ಎಂದು ಕರೆಯುತ್ತಿದ್ದ ಈ ಪತ್ರಿಕೆಯಲ್ಲೂ ಲಂಕೇಶರ ಹಾಗೆ ಗೌರಿ ದಲಿತ ಪರ, ಅಲ್ಪಸಂಖ್ಯಾತ ಪರ ನಿಲುವುಗಳನ್ನು ಮುಂದುವರಿಸಿದ್ದರು; ಪ್ರಗತಿಪರ ವಲಯಗಳು ಅವರ ಪತ್ರಿಕೆಯನ್ನು ಮೆಚ್ಚುತ್ತಿದ್ದವು; ಬಲಪಂಥೀಯರ ಬಗ್ಗೆ ಗೌರಿ ಖಚಿತ ತಾತ್ವಿಕ ವಿರೋಧದಿಂದ ಬರೆಯುತ್ತಿದ್ದರು. ‘ನಾನು ಇರುವ ತನಕ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಲಂಕೇಶ್ ಗಟ್ಟಿ ನಂಬಿಕೆಯಿಂದ ಹೇಳುತ್ತಿದ್ದರು. ಅದು ನಿಜವಾಯಿತು. ಕರ್ನಾಟಕದ ಬಹು ದೊಡ್ಡ ಸಮಾಜವಾದಿ, ರೈತ ನಾಯಕರಾದ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಕೂಡ ಎಲ್ಲ ರಾಜಕೀಯ ಪಕ್ಷಗಳನ್ನೂ ವಿರೋಧಿಸುತ್ತಿದ್ದರೂ ಬಿಜೆಪಿಯನ್ನು ಲಂಕೇಶರಷ್ಟೇ ದೃಢವಾಗಿ ವಿರೋಧಿಸುತ್ತಿದ್ದರು. ಎಲ್ಲ ಎಡಪಂಥಗಳೂ, ದಲಿತ ಚಳವಳಿಯ ಎಲ್ಲ ಬಣಗಳೂ ಬಿಜೆಪಿಗೆ ಹಾಗೂ ಕೋಮುವಾದಕ್ಕೆ ವಿರುದ್ಧವಾಗಿದ್ದವು.

‘ಲಂಕೇಶ್ ಪತ್ರಿಕೆ’ ಹಾಗೂ ಈ ಎಲ್ಲ ಜನಚಳವಳಿಗಳೂ ಗಟ್ಟಿಯಾಗಿದ್ದ ಕಾಲದಲ್ಲಿ ಬಲಪಂಥೀಯರು ಅಲ್ಲಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸುವ ತಂಟೆಕೋರರಾಗಿದ್ದರೇ ಹೊರತು ರಾಜಕೀಯ ಅಧಿಕಾರದ ಹತ್ತಿರ ಬರಲು ಅವರಿಗೆ ಆಗಿರಲಿಲ್ಲ. ಯಾಕೆಂದರೆ ಆಗ ಜನರ ಪ್ರಜ್ಞೆಯನ್ನು ತಿದ್ದುವ ಈ ಎಲ್ಲ ಚಳವಳಿಗಳೂ ಸಕ್ರಿಯವಾಗಿದ್ದವು. ಆ ಕಾಲದಲ್ಲಿ ಬಲಪಂಥಕ್ಕೆ ಸೇರಿದವರು ಕೂಡ ಲಂಕೇಶ್ ಅಥವಾ ನಂಜುಂಡಸ್ವಾಮಿಯವರು ಹೇಳಿದ ಮಾತುಗಳನ್ನು ಕೇಳಿಸಿಕೊಳ್ಳುವ ರೀತಿಯ ಪ್ರಖರ ಸತ್ಯ ಈ ಇಬ್ಬರ ಮಾತು-ಬರಹಗಳಲ್ಲಿರುತ್ತಿತ್ತು. ಲಂಕೇಶರ ವಿಷಾದ ಹಾಗೂ ಸತ್ಯದ ಹುಡುಕಾಟ; ಎಂ.ಡಿ.ಎನ್. ಅವರ ಸೀಳುವ್ಯಂಗ್ಯ ಹಾಗೂ ಖಚಿತ ಅಂಕಿ ಅಂಶಗಳನ್ನಾಧರಿಸಿದ ವಾದ ಇವೆಲ್ಲ ಮೇಲು ಜಾತಿಗಳ ಸೂಕ್ಷ್ಮ ಜನರನ್ನೂ? ಈಗ ಬಹುತೇಕ ಬಲಕ್ಕೆ ವಾಲಿರುವ ಜಾತಿಗಳ ಜನರನ್ನೂ- ಮುಟ್ಟುವ ಶಕ್ತಿ ಪಡೆದಿತ್ತು. ಇದು ಕರ್ನಾಟಕದ ಜನರಲ್ಲಿದ್ದ ಮಾನಸಿಕ ಆರೋಗ್ಯ ಕುರಿತ ಮಹತ್ವದ ಚಾರಿತ್ರಿಕ ಸತ್ಯವಾದ್ದರಿಂದ ಅದನ್ನು ಇಲ್ಲಿ ಒತ್ತಿ ಹೇಳುತ್ತಿರುವೆ. ಲಂಕೇಶರ ನಿರ್ಗಮನವಾದ ತಕ್ಷಣ ಅವರ ಶಕ್ತಿಯನ್ನು ಗೌರಿಯಿಂದ ನಿರೀಕ್ಷಿಸುವುದು ತಪ್ಪಾಗುತ್ತಿತ್ತು. ಆದರೆ ನಿಧಾನವಾಗಿ ಕರ್ನಾಟಕದ ಅನೇಕ ಪ್ರಗತಿಪರ ಚಳವಳಿಗಳ ಧ್ವನಿ ಅವರ ಸ್ವಂತ ಪತ್ರಿಕೆಯ ಮೂಲಕ ಸದಾ ಹೊಮ್ಮಿದ್ದು ನಿಜ. ಕಾಲವೂ ಹಲ ಬಗೆಯ ನಾಯಕರನ್ನು ಕೇಂದ್ರ ರಂಗಕ್ಕೆ ತಂದು ನಿಲ್ಲಿಸುವುದನ್ನು ನಾವು ಚರಿತ್ರೆಯಲ್ಲಿ ಆಗಾಗ್ಗೆ ನೋಡುತ್ತೇವೆ.

ಲಂಕೇಶರು ಕೂಡ ತುರ್ತು ಪರಿಸ್ಥಿತಿಯ ನಂತರದ ಕಾಲಘಟ್ಟ ಕರ್ನಾಟಕದಲ್ಲಿ ರೂಪಿಸಿದ ಬುದ್ಧಿಜೀವಿ ನಾಯಕರಾದಂತೆಯೇ ಗೌರಿ ಕೂಡ ಕರ್ನಾಟಕದ ತೀವ್ರ ಕೋಮುವಿರೋಧದ ಕಾಲಘಟ್ಟ ರೂಪಿಸಿದ ಆ್ಯಕ್ಟಿವಿಸ್ಟ್ ನಾಯಕಿಯಾಗಿ ಕೇಂದ್ರಕ್ಕೆ ಬಂದರು. ತಮ್ಮ ತಾರುಣ್ಯದಲ್ಲಿ ಒಂದು ಬಗೆಯ ದಿಟ್ಟ ವ್ಯಕ್ತಿತ್ವದ ಹಾಗೂ ನಗರಗಳಲ್ಲಿ ಕಾಣಬರುವ ಸ್ತ್ರೀ ವಿಮೋಚನಾ ಚಳವಳಿಯ ಪ್ರಾತಿನಿಧಿಕ ವ್ಯಕ್ತಿಯಾಗಿದ್ದ ಗೌರಿ ಹೀಗೆ ಆ್ಯಕ್ಟಿವಿಸ್ಟ್ ನಾಯಕಿಯಾದದ್ದು ಕೂಡ ಕಾಲದ ಒತ್ತಡದಿಂದ ಎಂಬುದನ್ನು ಮರೆಯಲಾಗದು. ಕರ್ನಾಟಕದ ಬಹುದೊಡ್ಡ ಚಳವಳಿಗಳ ನಾಯಕರಾದ ಬಿ.ಕೃಷ್ಣಪ್ಪ ಹಾಗೂ ಎಂ.ಡಿ. ನಂಜುಂಡಸ್ವಾಮಿಯವರ ನಿರ್ಗಮನದ ನಂತರ ಕರ್ನಾಟಕದ ಸಾಮಾಜಿಕ ಚಳವಳಿಗಳು ಒಗ್ಗೂಡುವ ಆಶಯವನ್ನು ವ್ಯಕ್ತಪಡಿಸಿದ್ದು, ಒಗ್ಗೂಡಲಾಗದೆ ಮುಗ್ಗರಿಸಿದ್ದು ಕಳೆದೊಂದು ದಶಕದ ಕರ್ನಾಟಕದ ಚರಿತ್ರೆಯ ಭಾಗವಾಗಿ ಹೋಗಿದೆ. ಆನಂತರ ಈ ಎಲ್ಲ ಚಳವಳಿಗಳು ಒಗ್ಗೂಡಿದ ಮೊದಲ ಸಂದರ್ಭ ಬಾಬಾಬುಡನ್‌ಗಿರಿ ವಿವಾದದ ಸಂದರ್ಭ; ಅದಾದ ಮೇಲೆ ರೈತ ಹಾಗೂ ದಲಿತ ಚಳವಳಿಗಳು ಒಗ್ಗೂಡಿದ್ದು ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆಯ ಕಲಿಕೆಗಾಗಿ ಒತ್ತಾಯಿಸಿದ ಸಂದರ್ಭದಲ್ಲಿ. ಇದಾದ ಮೇಲೆ ಈ ಚಳವಳಿಗಳು ಹಾಗೂ ಅವುಗಳ ಬಣಗಳು ತಂತಮ್ಮ ದಾರಿಯಲ್ಲಿ ನಡೆದವು. ಆದರೂ ಈ ಎಲ್ಲ ಚಳವಳಿಗಳ ನಾಯಕರೂ ಕೋಮುವಾದದ ಖಚಿತ ವಿರೋಧಿಗಳಾಗಿ ಮುಂದುವರಿದರು.

ಈ ಕಾಲಘಟ್ಟದಲ್ಲಿ ಕೋಮುವಾದ ವಿರೋಧದ ನೆಲೆಗಳಿಗೆ ಗೌರಿ ತಮ್ಮ ಪತ್ರಿಕೆಯ ಮೂಲಕ ಮಾತು ಕೊಟ್ಟರು. ಕೋಮುವಾದ ಕುರಿತಂತೆ ಅವರ ನಿಲುವು ಗಳು ನೇರವಾಗಿದ್ದವು, ಸ್ಪಷ್ಟವಾಗಿದ್ದವು. ಹಲ ಬಗೆಯ ಹೊಸ ತಲೆಮಾರಿನ ಪ್ರಗತಿಪರರಿಗೆ ಅವರ ಪತ್ರಿಕೆ ವೇದಿಕೆ ಒದಗಿಸಲೆತ್ನಿಸಿದ್ದು ನಿಜ. ಮಾವೋವಾದಿ ಚಿಂತನೆಯಲ್ಲಿ ನಂಬಿಕೆಯಿಟ್ಟವರು ಗೌರಿಯವರ ಪತ್ರಿಕೆಗೆ ಬರೆಯತೊಡಗಿದಾಗ ಗೌರಿಗೆ ಹೊಸ ಅನುಯಾಯಿಗಳೂ ಹಾಗೂ ಗೌರಿಯನ್ನು ಒಲ್ಲದವರೂ ಹುಟ್ಟಿಕೊಂಡಂತೆ ತೋರುತ್ತದೆ. ಆದರೂ ಮೂಲ ‘ಲಂಕೇಶ್ ಪತ್ರಿಕೆ’ಯ ಅನೇಕ ಕಾಳಜಿಗಳನ್ನು ಗೌರಿ ಮುಂದುವರಿಸುತ್ತಿದ್ದಾರೆಂದು ನಂಬಿದವರೂ ಇದ್ದರು. ಆದರೆ ಸ್ವ ವಿಮರ್ಶೆಯಿಲ್ಲದೆ ಯಾವ ಸಂಸ್ಥೆಯೂ ಮುನ್ನಡೆಯಲಾರದು. ಆದರೂ ಕಾಲ ಎಷ್ಟು ನಾಗಾಲೋಟದಲ್ಲಿ ಓಡತೊಡಗಿತ್ತೆಂದರೆ ಅವರು ಪತ್ರಿಕೆಯ ಧ್ವನಿ ಬದಲಾಯಿಸಿದರೂ ಅದು ಸ್ವೀಕೃತವಾಗುವ ಸ್ಥಿತಿ ಕರ್ನಾಟಕದಲ್ಲಿ ಇದ್ದಂತಿರಲಿಲ್ಲ. ಗಂಟೆಗೊಮ್ಮೆ ಸುದ್ದಿ ಬಿತ್ತರಿಸುವ ನ್ಯೂಸ್ ಚಾನಲ್ ಗಳು ಬಂದ ಮೇಲೆ ಇಡೀ ಟ್ಯಾಬ್ಲಾಯ್ಡಾ ಲೋಕವೇ ಬಿಕ್ಕಟ್ಟಿನಲ್ಲಿ ಸಿಲುಕಿತು. ಹಾಗೆಯೇ ಗೌರಿಯವರ ಪತ್ರಿಕೆ ಕೂಡ. ಇವತ್ತಿಗೂ ಟ್ಯಾಬ್ಲಾಯ್ಡಾಗಳಂತೆ ರಿಸ್ಕ್ ತೆಗೆದುಕೊಳ್ಳುವ ಹಾಗೂ ಮಾನನಷ್ಟ ಮೊಕದ್ದಮೆಗಳಿಗೆ ಹೆದರದೆ ಸುದ್ದಿಯ ಹಿಂದಿನ ಸುದ್ದಿಗಳನ್ನು ಪ್ರಕಟಿಸುವ ಧೈರ್ಯವನ್ನು ದಿನಪತ್ರಿಕೆಗಳು ತೋರಿಸಲಾರವು ಎಂಬ ಬಗ್ಗೆ ಈಚೆಗೆ ಇಂಗ್ಲಿಷ್ ದಿನಪತ್ರಿಕೆಯ ಸಂಪಾದಕರೊಬ್ಬರು ಹೇಳಿದ್ದರಲ್ಲಿ ಅರ್ಥವಿದೆ. ಟ್ಯಾಬ್ಲಾಯ್ಡಾ ಎಂಬ ವೇದಿಕೆಯೇ ಕೊಟ್ಟ ಧೈರ್ಯ ಕೂಡ ಗೌರಿಯನ್ನು ಆ್ಯಕ್ಟಿವಿಸ್ಟ್ ಆಗಿ ಮಾಡಿತೆಂದು ತೋರುತ್ತದೆ. ಅಥವಾ ಕರ್ನಾಟಕದಲ್ಲಿ ಪ್ರಗತಿಪರ ನಾಯಕರು, ಅದರಲ್ಲೂ ದಿಟ್ಟ ಮಹಿಳಾ ನಾಯಕಿಯರು, ಕಡಿಮೆಯಾಗತೊಡಗಿದ ಕಾಲವೂ ಅವರನ್ನು ಕೇಂದ್ರ ರಂಗಕ್ಕೆ ತಂದು ನಿಲ್ಲಿಸಿರಬಹುದು. ಮಾವೋವಾದಿ ಚಿಂತಕ-ಹೋರಾಟಗಾರ ಸಾಕೇತ್ ರಾಜನ್ ಎನ್ ಕೌಂಟರಿನಲ್ಲಿ ಹತ್ಯೆಯಾದ ನಂತರ ಅವರ ಮೃತ ದೇಹವನ್ನು ಕುಟುಂಬದವರಿಗೆ ಕೊಡುವಂತೆ ಗೌರಿ ಸರಕಾರವನ್ನು ತೀವ್ರವಾಗಿ ಒತ್ತಾಯಿಸಿದರು. ಆ ಘಟ್ಟದಿಂದೀಚೆಗೆ ಅವರನ್ನು ಹಣಿಯಲು ಬಲಪಂಥೀಯ ಶಕ್ತಿಗಳು ‘ನಕ್ಸಲೈಟ್’ ಎಂದು ಬ್ರ್ಯಾಂಡ್ ಮಾಡಲೆತ್ನಿಸಿದವು. ಗೌರಿ ಮುಂದೊಮ್ಮೆ ನಕ್ಸಲೈಟರನ್ನು ಮುಖ್ಯವಾಹಿನಿಗೆ ತರುವ ಸಂಧಾನಗಳ ನೇತೃತ್ವ ವಹಿಸಿದ್ದು ಕೂಡ ಕಾಲಘಟ್ಟವೊಂದರ ತಿರುವಿನಿಂದ ಹುಟ್ಟಿದ ಆಕಸ್ಮಿಕ ಬೆಳವಣಿಗೆಯಾಗಿರಬಹುದು. ಸುಮಾರು ಮೂವತ್ತೈದು ವರ್ಷಗಳ ಕೆಳಗೆ ಕರ್ನಾಟಕದ ಒಂದು ವಿಶಿಷ್ಟ ಕಾಲಘಟ್ಟ ಲಂಕೇಶರನ್ನು ಸಾಮಾಜಿಕ ನಾಯಕರನ್ನಾಗಿಸಿದ ಸಂದರ್ಭ ಇಲ್ಲಿ ನೆನಪಾಗುತ್ತದೆ.

ಎಂಬತ್ತರ ದಶಕದಲ್ಲಿ ರೈತ ಚಳವಳಿ, ದಲಿತ ಚಳವಳಿ, ಭಾಷಾ ಚಳವಳಿಗಳು ಗುಂಡೂರಾವ್ ಸರಕಾರವನ್ನು ತೀವ್ರವಾಗಿ ವಿರೋಧಿಸುತ್ತಿದ್ದವು; ‘ಲಂಕೇಶ್ ಪತ್ರಿಕೆ’ ಈ ಎಲ್ಲ ಚಳವಳಿಗಳ ಸಖನಾಗಿತ್ತು ಹಾಗೂ ಜನತಾ ಪಕ್ಷದ ಬೆಳವಣಿಗೆಗೆ ಬೆಂಬಲ ಕೊಡುತ್ತಿತ್ತು. ಅಂದಿನ ಬಹುತೇಕ ಪ್ರಗತಿಪರ ಚಿಂತಕರ ಕಾಂಗ್ರೆಸ್ ವಿರೋಧವೂ ಇದರೊಡನೆ ಸೇರಿಕೊಂಡಿತ್ತು. ಇದೆಲ್ಲದರಿಂದಾಗಿ ಗುಂಡೂರಾವ್ ಸರಕಾರ ಹೋಗಿ, ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಸರಕಾರ ಅಧಿಕಾರಕ್ಕೆ ಬಂತು; ಕೆಲ ವರ್ಷಗಳಲ್ಲಿ ಆ ಸರಕಾರವೂ ಭ್ರಷ್ಟವಾಗತೊಡಗಿತು. ಲಂಕೇಶ್ ಜನತಾ ಸರಕಾರದ ವಿರುದ್ಧ ಕಟುವಾದ ದಾಳಿಯನ್ನು ಆರಂಭಿಸಿದರು. ಅಂದು ಯಾವ ಪರ್ಯಾಯ ಆರ್ಥಿಕ ಕಾರ್ಯಕ್ರಮವೂ ಇಲ್ಲದ ಬಿಜೆಪಿ ಅಧಿಕಾರ ಹಿಡಿಯಲು ಕೋಮುವಾದವನ್ನು ಹಬ್ಬಿಸಲೆತ್ನಿಸುತ್ತಿತ್ತು. ಆಗ ಕೋಮುವಾದದ ವಿರುದ್ಧ ಬೀದಿ ಮೆರವಣಿಗೆಗಳ ನಾಯಕತ್ವವನ್ನು ಕೂಡ ಕೆಲವೆಡೆ ಲಂಕೇಶ್ ವಹಿಸಿದ್ದರು. ಆ ಘಟ್ಟದಲ್ಲಿ ಲಂಕೇಶರು ‘ಕರ್ನಾಟಕ ಪ್ರಗತಿ ರಂಗ’ ಎಂಬ ವೇದಿಕೆ ಕಟ್ಟಿ ರಾಜಕೀಯ ಪ್ರಣಾಳಿಕೆ ರೂಪಿಸಿ, ರೈತ ಹಾಗೂ ದಲಿತ ಚಳವಳಿಗಳ ಜೊತೆಗೂಡಿ, ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವ ತನಕವೂ ಯೋಚಿಸಿದರು. ಆದರೆ ಲಂಕೇಶ್ ಒಂದು ಘಟ್ಟದಲ್ಲಿ ಇದ್ದಕ್ಕಿದ್ದಂತೆ ತಮ್ಮ ನಡೆಗಳ ಬಗೆಗೆ ಸ್ವಪರೀಕ್ಷೆ ಮಾಡಿಕೊಂಡು, ‘ಪ್ರಗತಿರಂಗ’ದ ರಾಜಕಾರಣದಿಂದ ಹಿಂದೆ ಸರಿದು ಮತ್ತೆ ಪತ್ರಿಕೆಯ ಲೋಕಕ್ಕೆ, ಸಾಹಿತ್ಯ ಲೋಕಕ್ಕೆ ವಾಪಸಾದರು. ತಮ್ಮೆಲ್ಲ ಮಾತು, ಕ್ರಿಯೆ, ನಡೆಗಳನ್ನೂ ಪರೀಕ್ಷಿಸಿಕೊಳ್ಳುತ್ತಲೇ ವಿಶ್ಲೇಷಣೆಗಳನ್ನು, ಕತೆಗಳನ್ನು ಬರೆಯತೊಡಗಿದರು.

‘ಕಲ್ಲು ಕರಗುವ ಸಮಯ’, ‘ಮುಟ್ಟಿಸಿಕೊಂಡವನು’, ‘ಸಹಪಾಠಿ’ಯಂಥ ಮಹತ್ವದ ಕನ್ನಡ ಕತೆಗಳು ಹುಟ್ಟಿದ್ದು ಆಗ. ಎಲ್ಲ ದಿಗ್ವಿಜಯ, ಮಹತ್ವಾಕಾಂಕ್ಷೆಗಳ ಜೀವದ್ರವ್ಯ, ಅರ್ಥ ಹಾಗೂ ನಿರರ್ಥಕತೆಗಳನ್ನು ಶೋಧಿಸುವ ಅವರ ‘ಗುಣಮುಖ’ ನಾಟಕ ಹುಟ್ಟಿದ್ದು ಕೂಡ ಈ ಘಟ್ಟಗಳಲ್ಲೇ. ಈ ಸರಿಸುಮಾರಿನಲ್ಲೇ ರಕ್ತದ ಒತ್ತಡದಿಂದಾಗಿ ಲಂಕೇಶರಿಗೆ ಬ್ರೈನ್ ಸ್ಟ್ರೋಕ್ ಆಯಿತು. ಆದರೆ ಲಂಕೇಶ್ ಮತ್ತೆ ಹುಟ್ಟಿ ಬಂದರು. ರಾಜಕೀಯ ಪಕ್ಷಗಳು, ಚಳವಳಿಗಳು, ಅಧಿಕಾರಿಗಳು ಎಲ್ಲರನ್ನೂ ಎದುರು ಹಾಕಿಕೊಳ್ಳುತ್ತಿದ್ದ ಲಂಕೇಶರ ಮೇಲೆ ಎಂಬತ್ತರ ದಶಕದ ಆರಂಭದಲ್ಲಿ ವಾಟಾಳ್ ನಾಗರಾಜ್ ಕಡೆಯ ಕನ್ನಡ ಚಳವಳಿಯವರು ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದವರ ವಿರುದ್ಧ ಕರ್ನಾಟಕದ ಮೂಲೆಮೂಲೆಗಳಲ್ಲೂ ಪ್ರತಿಭಟನೆಗಳಾದವು. ಆ ಕಾಲದಲ್ಲಿ ಲಂಕೇಶರ ಬಗ್ಗೆ ಜನಮಾನಸದಲ್ಲಿದ್ದ ಅಪಾರ ಗೌರವ ಹಾಗೂ ಬೆಂಬಲ ದುಷ್ಟರನ್ನು ಹಿಮ್ಮೆಟ್ಟಿಸಿತ್ತು. ಆನಂತರ ಕೂಡ ಲಂಕೇಶರು ಯಾರು ಹೇಳಿದರೂ ಗನ್ ಮ್ಯಾನ್ ನನ್ನಾಗಲೀ ಭದ್ರತೆಯನ್ನಾಗಲೀ ಇಟ್ಟುಕೊಳ್ಳಲಿಲ್ಲ. ಒಮ್ಮೆ ವಿಧಾನಸಭೆಯಲ್ಲಿ ಲಂಕೇಶರ ಪತ್ರಿಕೆಯ ವಿರುದ್ಧ ಶಾಸಕರು ಕೂಗಾಡಿದ ದಿನ ಬೆಳಗ್ಗೆ ಮಾತ್ರ ಲಂಕೇಶರ ಅಭಿಮಾನಿಯಾಗಿದ್ದ ಪೊಲೀಸ್ ಇನ್ ಸ್ಪೆಕ್ಟರೊಬ್ಬರು ಕಾನ್ ಸ್ಟೇಬಲ್ ಒಬ್ಬರನ್ನು ಅವರ ಮನೆಯೆದುರಿಗೆ ಇರಲು ಕಳಿಸಿದ್ದರು. ಎಂದೋ ಒಮ್ಮೆ ಕೊಂಡಿದ್ದ ಕೋವಿಯನ್ನು ಬಳಸುವ ಕಾಲ ಕೂಡ ಲಂಕೇಶರಿಗೆ ಬರಲಿಲ್ಲ.

ಭ್ರಷ್ಟರು ಮಾನನಷ್ಟ ಮೊಕದ್ದಮೆಗಳ ಮೂಲಕ ಲಂಕೇಶರಿಗೆ ಕಿರುಕುಳ ಕೊಡುತ್ತಿದ್ದರೂ, ಪತ್ರಿಕೆಯ ಆರಂಭ ಘಟ್ಟದ ಹಲ್ಲೆಯ ನಂತರ ಅವರ ಮೇಲೆ ದೈಹಿಕ ಹಲ್ಲೆಗಳು ನಡೆಯಲಿಲ್ಲ. ಕರ್ನಾಟಕದ ನಿಜವಾದ ವಿರೋಧ ಪಕ್ಷವಾಗಿದ್ದ ಪತ್ರಿಕೆಯ ಸಂಪಾದಕರಾದ ಮೇಲೆ ಲಂಕೇಶ್ ತಾವು ಮತ್ತೆ ಹುಡುಕಿಕೊಂಡ ಗಾಂಧೀಜಿಯಿಂದಾಗಿ ಕೂಡ ನಿರ್ಭಯವನ್ನು ಕಲಿತಿದ್ದರು. ಅವರು ತಮ್ಮ ಭದ್ರತೆಯ ಬಗ್ಗೆ ತೀರಾ ತಲೆ ಕೆಡಿಸಿಕೊಂಡಂತೆ ಕಾಣುತ್ತಿರಲಿಲ್ಲ. ಲಂಕೇಶರಿಗಿಂತ ನಿರ್ಭಯವಾಗಿದ್ದಂತೆ ಕಾಣುತ್ತಿದ್ದ ಗೌರಿ ಕೂಡ ತಮ್ಮ ಭದ್ರತೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲವೆಂಬಂತೆ ತೋರುತ್ತದೆ. ಚಳವಳಿಗಳ ಮುಖವಾಣಿಯಾಗಿದ್ದ ತನ್ನ ಬೆಂಬಲಕ್ಕೆ ಎಲ್ಲ ಚಳವಳಿಗಳೂ ಬರಬಲ್ಲವೆಂದು ಗೌರಿ ಆಳದಲ್ಲಿ ಮುಗ್ಧವಾಗಿ ನಂಬಿದ್ದರೆಂದು ತೋರುತ್ತದೆ. ಅವರ ನಂಬಿಕೆ ಒಂದರ್ಥದಲ್ಲಿ ನಿಜವಾಗಿತ್ತು ಎಂಬುದು ಅವರ ಹತ್ಯೆಗೆ ಕರ್ನಾಟಕ ತೋರಿದ ಪ್ರತಿಭಟನೆಯನ್ನು ನೋಡಿದಾಗ ಅನ್ನಿಸುತ್ತದೆ. ಆದರೆ ಗೌರಿಗೆ ಚಣ ನಿಂತು ತನ್ನ ನಿಜಸ್ಥಿತಿಯನ್ನು, ಕಟು ವಾಸ್ತವವನ್ನು ಅವಲೋಕಿಸಿಕೊಳ್ಳುವ ವೇಳೆಯನ್ನೂ ನಿಷ್ಕರುಣಿ ಕಾಲ ಕೊಡಲಿಲ್ಲವೆಂಬುದನ್ನು ನೆನೆದರೆ ದಟ್ಟ ವಿಷಾದ ಆವರಿಸತೊಡಗುತ್ತದೆ.

ಕರ್ನಾಟಕದಲ್ಲಿ ಜಾತ್ಯತೀತವನ್ನು ಬೆಳೆಸಿ, ಉಳಿಸಲು ಪ್ರಯತ್ನಿಸಿದ ‘ಲಂಕೇಶ್ ಪತ್ರಿಕೆ’ಗೂ ಹಾಗೂ ಆ ಪರಂಪರೆಯನ್ನು ಸರಳವಾಗಿಯಾದರೂ ಮುಂದುವರಿಸಿದ, ‘ಗೌರಿ ಲಂಕೇಶ್ ಪತ್ರಿಕೆ’ ಎಂದು ಕರೆಯಲಾಗುತ್ತಿದ್ದ ಪತ್ರಿಕೆಗೂ ಹಲವು ವ್ಯತ್ಯಾಸಗಳಿರುವುದು ಎಲ್ಲರಿಗೂ ಗೊತ್ತಿದೆ. ಆದರೂ ಅಂಥ ಯಾವ ಪತ್ರಿಕೆಯೂ ಈಗ ಇಲ್ಲವೆಂಬುದು ಕರ್ನಾಟಕದಲ್ಲಿ ಎಂಥ ಭಯಾನಕ ಶೂನ್ಯವನ್ನು ಸೃಷ್ಟಿಸಿದೆ ಎಂಬುದನ್ನು ನೆನೆದರೆ ಆ ವಿಷಾದ ಇನ್ನಷ್ಟು ಆಳಕ್ಕೆ ಹಬ್ಬತೊಡಗುತ್ತದೆ. ಇಷ್ಟಾಗಿಯೂ, ಕರ್ನಾಟಕದ ಹೊಸ ತಲೆಮಾರು ಹಾಗೂ ಹಳೆಯ ತಲೆಮಾರುಗಳ ಪ್ರಗತಿಪರರ ನಿರ್ಭೀತ ಪ್ರತಿಕ್ರಿಯೆಗಳ ನಡುವೆ ಬುರ್ಖಾಧಾರಿ ಮುಸ್ಲಿಂ ಮಹಿಳೆಯರು ಬೆಂಗಳೂರಿನಲ್ಲಿ ಹಾಗೂ ಮಂಗಳೂರಿನಲ್ಲಿ ಗೌರಿ ಹತ್ಯೆಗೆ ತೋರಿದ ಪ್ರತಿಭಟನೆ, ಹೊಸ ತಲೆಮಾರಿನ ಲಕ್ಷಾಂತರ ಜನ ‘ನಾನು ಗೌರಿ’ ಎಂದು ಘೋಷಿಸುತ್ತಿರುವ ರೀತಿ ನೋಡಿದರೆ ಕರ್ನಾಟಕದಲ್ಲಿ ಲಂಕೇಶ್ ಹಾಗೂ ಗೌರಿ ಇಬ್ಬರೂ ಇಲ್ಲಿ ಜೀವಂತವಾಗಿದ್ದಾರೆ ಎಂಬ ಸಣ್ಣ ಭರವಸೆಯೊಂದು ಮೂಡತೊಡಗುತ್ತದೆ.

ಕರ್ನಾಟಕದಲ್ಲಿ ನಡೆದಿರುವ ಕಲಬುರ್ಗಿ ಹಾಗೂ ಗೌರಿಯವರ ಭೀಕರ ಹತ್ಯೆಗಳು ಇತರ ವೈಚಾರಿಕರಲ್ಲಿ ಭಯೋತ್ಪಾದನೆಯನ್ನುಂಟು ಮಾಡಲು ಹಾಗೂ ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ಅಲುಗಾಡಿಸಲು ನಡೆದಿರುವುದು ಖಚಿತವೆನ್ನಿಸುತ್ತದೆ. ಆದರೆ ಈ ಸನ್ನಿವೇಶದಲ್ಲಿ ಕೇವಲ ಕಾಂಗ್ರೆಸ್ ಸರಕಾರ ಮಾತ್ರವಲ್ಲ, ಬಿಜೆಪಿ, ಜೆಡಿಎಸ್, ಕಮ್ಯುನಿಸ್ಟ್ ಪಕ್ಷಗಳು ಕೂಡ ಒಟ್ಟಾಗಿ ಕೂತು ಆಳವಾದ ಜವಾಬ್ದಾರಿಯಿಂದ ಯೋಚಿಸಬೇಕು; ಈ ಥರದ ತೆರೆಮರೆಯ ಭಯೋತ್ಪಾದನೆಯ ಬೇರುಗಳನ್ನು ಬುಡಮಟ್ಟದಲ್ಲಿ ಕತ್ತರಿಸುವ ಕರ್ತವ್ಯದಲ್ಲಿ ತಾವೂ ಸಂಪೂರ್ಣವಾಗಿ ತೊಡಗಬೇಕೆಂಬುದರ ಬಗ್ಗೆ ಎಚ್ಚರಗೊಳ್ಳಬೇಕು. ಯಾಕೆಂದರೆ, ಇಂಥ ಭಯೋತ್ಪಾದನೆಗಳ ಹೃದಯಹೀನ ಗುರಿಗಳು ಯಾರ ವಿರುದ್ಧವಾ ದರೂ ತಿರುಗಬಹುದೆಂಬ ಪ್ರಜ್ಞೆ ಸಾರ್ವಜನಿಕ ವಲಯದಲ್ಲಿರುವ ಎಲ್ಲ ಬಗೆಯ ಪಕ್ಷಗಳು, ವೇದಿಕೆಗಳು ಹಾಗೂ ಗುಂಪುಗಳಿಗೂ ಇರಬೇಕು. ಸಾರ್ವಜನಿಕ ವಲಯದಲ್ಲಿರುವ ಈ ಎಲ್ಲರಿಗೂ ಒಂದಲ್ಲ ಒಂದು ಬಗೆಯ ಉಗ್ರ ವಿರೋಧಿಗಳು ಇದ್ದೇ ಇರುತ್ತಾರೆ. ಆ ಉಗ್ರ ವಿರೋಧ ಜನತಾಂತ್ರಿಕ ರೂಪದಲ್ಲಿ, ಅಹಿಂಸಾತ್ಮಕ ಮಾರ್ಗದಲ್ಲಿ ಮಾತ್ರ ಇರುವಂತೆ ನೋಡಿಕೊಳ್ಳುವ ಹೊಣೆ ನಮ್ಮ ರಾಜಕೀಯ ಪಕ್ಷಗಳ ಮೇಲೆ ಹೆಚ್ಚು ಇದೆ. ಒಂದು ಬಗೆಯ ಭಯೋತ್ಪಾದನೆಯಿಂದ ತನಗೆ ಲಾಭವಿದೆಯೆಂದು ಯಾವುದೇ ರಾಜಕೀಯ ಪಕ್ಷ ತಿಳಿದರೆ ಅದು ಕಡು ಮೂರ್ಖತನವಾಗುತ್ತದೆ; ಚರಿತ್ರೆಯ ಚಕ್ರದ ಚಲನೆಯಲ್ಲಿ ಮುಂದೊಮ್ಮೆ ಆ ಭಯೋತ್ಪಾದನೆಯ ಮತ್ತೊಂದು ಮುಖ ತನ್ನನ್ನೂ ಬಲಿ ತೆಗೆದುಕೊಳ್ಳಬಹುದೆಂಬ ಎಚ್ಚರ ಇಂಥ ದುರುಳತನವನ್ನು ಪೋಷಿಸುವ ನೀಚರಿಗೆಲ್ಲ ಇರಬೇಕು.

ನಿತ್ಯ ವಿಷ ಉಗುಳುತ್ತಾ ಅಮಾಯಕರಾದ, ಆದರೆ ಈಗಾಗಲೇ ಪೂರ್ವಗ್ರಹಗಳಿಂದ ಕಾಯಿಲೆಗೊಳಗಾದ, ಜನರನ್ನು ಉದ್ರೇಕಿಸುವ ಯಾವುದೇ ಪಕ್ಷದ, ಗುಂಪುಗಳ ನಾಯಕರು ತಮ್ಮ ವಿಷಪೂರಿತ ಭಾಷಣಗಳ ನಂತರ ಪೊಲೀಸ್ ಕಾವಲಿನಲ್ಲಿ, ಝಡ್ ಪ್ರೊಟೆಕ್ಷನ್‌ನಲ್ಲಿ ಅಥವಾ ಖಾಸಗಿ ಗೂಂಡಾಗಳ ರಕ್ಷಣೆಯಲ್ಲಿ ಹೇಗೋ ಬದುಕಿಕೊಳ್ಳಬಹುದು; ಆದರೆ ಈ ಪಕ್ಷಗಳ, ಗುಂಪುಗಳ ಸಣ್ಣ ಸಣ್ಣ ನಾಯಕರು, ಕಾರ್ಯಕರ್ತರು ಪರಸ್ಪರ ವಿರೋಧಿ ಗುಂಪುಗಳ ಹಲ್ಲೆ ಹಾಗೂ ಭಯೋತ್ಪಾದನೆಯ ಬಲಿಪಶುಗಳಾಗುತ್ತಿರುತ್ತಾರೆ ಎಂಬುದನ್ನು ಮರೆಯಬಾರದು. ಇಂಥ ಹಿಂಸೆಗಳನ್ನು ಬೆಂಬಲಿಸುವ, ಅವಕ್ಕೆ ಕುಮ್ಮಕ್ಕು ಕೊಡುವ ಫೇಸ್‌ಬುಕ್‌ಗಳ ಮುಖರಹಿತ ಹೇಡಿಗಳು ಕೂಡ ಪೊಲೀಸರ ಪಟ್ಟಿಯಲ್ಲಿ ಸೇರಿಕೊಳ್ಳುತ್ತಿರುತ್ತಾರೆ ಎಂಬ ಎಚ್ಚರ ಕೂಡ ಎಲ್ಲರಿಗೂ ಇರಬೇಕು. ಯಾವುದೇ ಸಮಾಜಕ್ಕೆ ಈ ಬಗೆಯ ಕೊಲೆಗಳು ಸಾಮಾನ್ಯವಾಗತೊಡಗಿದರೆ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೂ ಇದೇ ಮಾರ್ಗವನ್ನು ಸಾಮಾನ್ಯ ಜನರೂ ಬಳಸತೊಡಗುತ್ತಾರೆ.

ರಿಯಲ್ ಎಸ್ಟೇಟ್ ಕೊಲೆಗಳು ಈ ಅಂಶವನ್ನು ಮತ್ತೆ ಮತ್ತೆ ತೋರಿಸಿವೆ. ಆದ್ದರಿಂದಲೇ ಆರೆಸ್ಸೆಸ್, ಬಜರಂಗದಳ, ಕಮ್ಯುನಿಸ್ಟ್, ನಕ್ಸಲೈಟ್, ಪಿಎಫ್‌ಐ ಮೊದಲಾಗಿ ಯಾವುದೇ ಗುಂಪುಗಳ ಅಸಹಾಯಕ ಕಾರ್ಯಕರ್ತರ ಕೊಲೆಗಳನ್ನು ಎಲ್ಲ ಪಕ್ಷಗಳೂ ತೀವ್ರವಾಗಿ ಹಾಗೂ ಪ್ರಾಮಾಣಿಕವಾಗಿ ವಿರೋಧಿಸಬೇಕು. ಆಗ ಮಾತ್ರ ಎಲ್ಲ ಬಗೆಯ ಭಯೋತ್ಪಾದನೆಗಳನ್ನು ಹಿಮ್ಮೆಟ್ಟಿಸುವ ಧ್ವನಿ ಒಂದು ಸಮಾಜದಲ್ಲಿ ಹಬ್ಬತೊಡಗುತ್ತದೆ; ಯಾವುದೇ ಗುಂಪುಗಳ ಒಳಬೆಂಬಲವಿಲ್ಲದಿದ್ದರೆ ಭಯೋತ್ಪಾದನೆ ತಂತಾನೇ ಕ್ಷೀಣಿಸುತ್ತದೆ. ಇದೆಲ್ಲದರ ಜೊತೆಗೇ, ಗೌರಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ ಉಗ್ರ ಪ್ರತಿಕ್ರಿಯೆಗಳನ್ನು ಹಿನ್ನೆಲೆಯಲ್ಲಿ ನಿಂತೋ ಅಥವಾ ಉತ್ಸಾಹಿ ಓದುಗರಾಗಿಯೋ ಮೆಚ್ಚಿ, ಗೌರಿಯವರ ‘ಧೈರ್ಯ’ವನ್ನು ಹಲವು ‘ಉತ್ಸಾಹಿಗಳು’ ಅನಗತ್ಯವಾಗಿ ಉಬ್ಬಿಸಿದ ಕಾರಣದಿಂದಾಗಿ ಕೂಡ ಅವರು ಆ ಹಾದಿಯಲ್ಲಿ ಅನಿವಾರ್ಯವಾಗಿ ಬಹು ದೂರ ಸಾಗಬೇಕಾಯಿತೆಂದು ಕಾಣುತ್ತದೆ; ಚರಿತ್ರೆಯ ಚಲನೆಯೇ ತನ್ನನ್ನು ತಂದು ನಿಲ್ಲಿಸಿದ ಆ ಹಾದಿಯಲ್ಲಿ ನಿಜಕ್ಕೂ ಪ್ರಗತಿಪರ ಉದ್ದೇಶಗಳಿಗಾಗಿ, ಎಲ್ಲರ ಕಣ್ಣಿಗೆ ಎದ್ದು ಕಾಣುವಂತೆ ಆ್ಯಕ್ಟಿವಿಸ್ಟ್ ಗೌರಿ ಕಾದಾಡುತ್ತಿದ್ದರು; ಹೀಗಾಗಿ ಗೌರಿ ಹಲವು ದಿಕ್ಕುಗಳಿಂದ ತಮ್ಮ ವಿರುದ್ಧ ಸಿಡಿಯುತ್ತಿದ್ದ ವಿಷದ ಬಲಿಪಶುವೂ ಆಗಬೇಕಾಯಿತು. ಈ ಎಲ್ಲ ಕಟು ಸತ್ಯಗಳು ಹಾಗೂ ಸೂಕ್ಷ್ಮಗಳ ಬಗೆಗೂ ಎಲ್ಲ ಪ್ರಗತಿಪರರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹುತಾತ್ಮರ ನೆತ್ತರಿನ ಕಲೆಗಳು ಒಂದು ಸಮಾಜದ ಎಲ್ಲರ ಕೈಗಳಿಗೂ ಅಂಟಿಕೊಂಡಿರುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)