ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ
ಸಮರ್ಪಣೆ

ಈ ದಿನಕ್ಕೆ ಮತ್ತು ಈ ದಿನದ ನೋವುಗಳಿಗೆ,
ಬದುಕಿನ ತುಂಬು ತೋಟದ ಮೇಲೆ ಮುನಿಸಿಕೊಂಡಿರುವ ನೋವುಗಳಿಗೆ
ಒಣ ಎಲೆಗಳ ಬನ
ನನ್ನ ದೇಶವಾಗಿದೆ ಒಣ ಎಲೆಗಳ ಬನ
ನನ್ನ ದೇಶವಾಗಿದೆ ಸಂಕಟದ ಕೂಟ.
ಗುಮಾಸ್ತರುಗಳ ನೊಂದ ಜೀವಗಳಿಗೆ,
ಗೆದ್ದಲು ತಿಂದ ಮನಸು ಮತ್ತು ನಾಲಗೆಗಳಿಗೆ
ಅಂಚೆ ಹಂಚುವವರಿಗೆ,
ಜಟಕಾ ಬಂಡಿ ಓಡಿಸುವವರಿಗೆ
ಕಾರ್ಖಾನೆಗಳಲ್ಲಿನ ಹಸಿದ ದಿಟ್ಟ ಹಸ್ತಗಳಿಗೆ,
ಜಗದ ಪ್ರಭು, ಸರ್ವಸ್ವದೊಡೆಯ, ದೇವರ ಛಾಯೆಯಾಗಿರುವ,
ರೈತನಿಗೆ,
ಅವನ ದನಗಳನ್ನು ಆಕ್ರಮಿಗಳು ಕೊಂಡೊಯ್ದರು,
ಅವನ ಮಗಳನ್ನು ಡಕಾಯಿತರು ಹೊತ್ತೊಯ್ದರು
ಬೊಗಸೆಯಷ್ಟೇ ಇದ್ದ ಅವನ ನೆಲದ ಒಂದು ತುಂಡನ್ನು ಬಡ್ಡಿ ಕೋರನು ಕಬಳಿಸಿದ್ದರೆ,
ಇನ್ನೊಂದು ತುಂಡನ್ನು ತೆರಿಗೆಯ ಹೆಸರಲ್ಲಿ ಸರಕಾರ ನುಂಗಿದೆ
ಬಲಾಢ್ಯರ ಪಾದತಲದಲ್ಲಿ ಅವನ ಮುಂಡಾಸು ಚಿಂದಿಯಾಗಿದೆ.
ಆ ನೊಂದ ತಾಯಂದಿರಿಗೆ,
ಇರುಳೆಲ್ಲಾ ಬಿಕ್ಕಳಿಸುತ್ತಿರುವ ಅವರ ಕಂದಮ್ಮಗಳು,
ನಿದ್ದೆಗೆಟ್ಟ ನಿತ್ರಾಣ ಬಾಹುಗಳಲ್ಲಿ ಅವುಗಳಿಗೆ ಸಿಗದು ಸಾಂತ್ವನ,
ತಮ್ಮ ನೋವನ್ನು ಗುಟ್ಟಾಗಿಡುವ ಅವರ
ರೋದನ, ಓಲೈಕೆಗಳಿಗೆ ಒಲಿವವರು ಯಾರೂ ಇಲ್ಲ.
ಆ ಚೆಲುವೆಯರಿಗೆ, ಅವರ ಕಣ್ಣಲ್ಲಿನ ಗುಲಾಬಿಗಳು
ಒಲೆಗಳ ಮುಂದೆ, ಕಿಟಕಿಯ ಸಲಾಕೆಗಳ ಹಿಂದೆ ಸುಮ್ಮ ಸುಮ್ಮನೆ
ಅರಳಿ ಬಾಡಿ ಹೋಗಿವೆ.
ಆ ಗೃಹಿಣಿಯರಿಗೆ, ಅವರ ದೇಹಗಳು,
ಬರಿಯ ತೋರಿಕೆಯ ಪ್ರೇಮರಹಿತ ಹಾಸುಗಳಲ್ಲಿ
ತಮ್ಮನ್ನು ನಿತ್ಯ ಶೃಂಗರಿಸಿ ದಣಿದು ಹೋಗಿವೆ.
ವಿಧವೆಯರಿಗೆ, ಓಣಿ, ಬೀದಿ, ಕೇರಿಗಳಿಗೆ,
ಚಂದಿರನು ಹಲವೊಮ್ಮೆ ಇರುಳಲ್ಲಿ ಮತ್ತೆ ಮತ್ತೆ ಬಂದು
ಮಿಂದು ಹೋಗುವ ಅಲ್ಲಿನ ಕೆಸರ ನಾಲೆಗಳಿಗೆ,
ಅವರ ನೆರಳಲ್ಲಿ ತಮ್ಮ ಆಕ್ರಂದನವನು ಮೊಳಗಿಸುತ್ತಿರುತ್ತವೆ-
ಸೆರಗಿನಂಚಿನ ಮದಿರಂಗಿ,
ಬಳೆಗಳ ಝಣಕಾರ, ಜಡೆಯ ಕಂಪು,
ಆಶೆ ತುಂಬಿದ ಎದೆಗಳು ತಮ್ಮದೇ ಬೆವರಲ್ಲಿ ಸುಟ್ಟು ಉರಿಯುವ ವಾಸನೆ.
ವಿದ್ಯಾರ್ಥಿಗಳಿಗೆ,
ಅವರು ಅಧಿಕಾರಸ್ಥರ ಬಾಗಿಲನ್ನು ತಲುಪಿ
ಪುಸ್ತಕ, ಪೆನ್ನುಗಳ ಭಿಕ್ಷೆ ಬೇಡುತ್ತಾ ಕೈ ಚಾಚಿದವರು,
ಮರಳಿ ಮನೆಗೆ ಬಾರದವರು
ತಮ್ಮ ದೀಪ ಬೆಳಗಿಸುವ ಪೆದ್ದು ಆಸೆ ಹೊತ್ತು,
ಕೊನೆ ಇಲ್ಲದ ದಟ್ಟ ಇರುಳುಗಳ ಕರಾಳ ನೆರಳನ್ನು ಹಂಚುವವರ
ಬಳಿಗೆ ತಲುಪಿದ ಪರಮ ಮುಗ್ಧರು.
ಆ ಕೈದಿಗಳಿಗೆ, ಅವರ ಮನಗಳಲ್ಲಿದ್ದ, ನಾಳಿನ ಸ್ವಾತಂತ್ರದ ಉಜ್ವಲ ಕಿಡಿಗಳು
ಬಂದೀಖಾನೆಯ ಶೋಕತಪ್ತ ಇರುಳುಗಳ ಸಪ್ಪಳದಲ್ಲಿ
ಉರಿದುರಿದು ಆರಿ ಅದೃಶ್ಯ ತಾರೆಯಂತಾಗಿವೆ.
ಮುಂದಿನ ದಿನಗಳ ರಾಯಭಾರಿಗಳಿಗೆ, ಪುಷ್ಪಗಳ ಕಂಪಿನಂತೆ
ತಮ್ಮ ಸಂದೇಶದ ಸೊಬಗಿಗೆ ತಾವೇ ಮಾರು ಹೋದವರು ಅವರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ