ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ
ಭಾವ ಸಾಗರದಲ್ಲಿ ಸಿನೆಮಾ ದೋಣಿ

ಅಮೆರಿಕದಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ಬಹಳ ಸಮಯದವರೆಗೆ ಉದ್ದನೆ ಗಡ್ಡ ಬಿಟ್ಟಿದ್ದವರನ್ನೆಲ್ಲಾ ಭಯೋತ್ಪಾದಕರು ಎಂದು ಅಮೆರಿಕನ್ನರು ಸಂಶಯ ಪಡುತ್ತಿದ್ದುದು ನೆನಪಿಸಿಕೊಳ್ಳಬಹುದು. ಹಾಗೇ ಖಾದಿ ವಸ್ತ್ರಗಳನ್ನು ಧರಿಸುವವರನ್ನು ‘ಬುದ್ಧಿ ಜೀವಿ’ ಎಂದು ಸಾಮಾನ್ಯೀಕರಣ ಮಾಡುವುದೂ ಇರಬಹುದು, ಶಾರ್ಟ್ಸ್ ಧರಿಸುವ ಹುಡುಗಿಯರನ್ನು ಆಧುನಿಕ ಸ್ತ್ರೀ ಎಂದು ಗ್ರಹಿಸುವುದೇ ಇರಬಹುದು ಹೀಗೆ ಸಮಾಜದೊಳಗೆ ಹುಟ್ಟುವ ಅನೇಕ ಸಂಜ್ಞೆಗಳು ನಮ್ಮ ನಿತ್ಯ ಜೀವನದಲ್ಲಿ ಗಾಢವಾಗಿ ಅಡಕವಾಗಿವೆ. ಈ ಸಂಜ್ಞೆಗಳನ್ನು ಅಥವಾ ಸಾಮಾನ್ಯೀಕರಣವನ್ನು ವಿಮರ್ಶೆ ಮಾಡುವುದು ನಮ್ಮ ರಾಜಕೀಯ ಚರ್ಚೆಗಳ ಬಹುದೊಡ್ಡ ಭಾಗವೂ ಹೌದು.
ಇಂದು ಸಿನೆಮಾ ಎನ್ನುವುದು ಒಂದು ಭಾರೀ ದೊಡ್ಡ ವ್ಯವಹಾರವಾಗಿದೆ. ಈ ಮಾಧ್ಯಮದ ಆರಂಭದ ದಿನಗಳು ಬೇರೆ ದೇಶಗಳಲ್ಲೇ ಆದರೂ, ಅದಕ್ಕೆ ನಮ್ಮ ದೇಶದ ಪ್ರೇಕ್ಷಕರು ಮನಸೋತಂತೆ, ಇನ್ಯಾವ ದೇಶದವರೂ ಮನಸೋತಿಲ್ಲ. ತನ್ನ ಆರಂಭಿಕ ಹಂತದಲ್ಲಿ ಕೇವಲ ಘಟನೆಗಳ ದಾಖಲೀಕರಣದ ಸಾಧನವಾಗಿದ್ದ ಸಿನೆಮಾ, ತನ್ನದೇ ವ್ಯಾಕರಣವನ್ನು ಕಂಡುಕೊಳ್ಳುತ್ತಾ ಕಳೆದ ಸುಮಾರು ನೂರುವರ್ಷಗಳಲ್ಲಿ ಬೆಳೆಯಿತು. ಈ ಬೆಳವಣಿಗೆಯ ಉದ್ದಕ್ಕೂ ಎರಡು ಪ್ರಮುಖ ಹಾದಿಯನ್ನು ಈ ಮಾಧ್ಯಮ ಹಿಡಿಯಿತು. ಒಂದು ಕೇವಲ ಮನರಂಜನೆಗಾಗಿ ಕಥೆಗಳನ್ನು ಹೇಳುವ ಮಾಧ್ಯಮ. ಇನ್ನೊಂದು ಮನಸ್ಸನ್ನು ವಿಚಾರಕ್ಕೊಳಪಡಿಸಿ, ರಂಜಿಸುವ, ವಿಕಸಿಸುವ ಮಾಧ್ಯಮವಾಗಿ. ಈ ಎರಡೂ ಹಾದಿಗಳಲ್ಲಿ ಇಂದು ಸಾಕಷ್ಟು ದೂರವನ್ನು ನಾವು ಕ್ರಮಿಸಿದ್ದೇವೆ. ಎರಡೂ ಹಾದಿಗಳಲ್ಲಿ ಸಾಕಷ್ಟು ಪ್ರಯೋಗಗಳು ನಡೆದಿವೆ, ಕಥನಕ್ರಮದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ.
ಎರಡು ನೇರ ಸಂಬಂಧ ಇಲ್ಲದ ಚಿತ್ರಗಳನ್ನು ಒಂದರ ನಂತರ ಇನ್ನೊಂದನ್ನು ತೋರಿಸಿದಾಗ, ಮನುಷ್ಯನ ಮನಸ್ಸು ಅವೆರಡನ್ನೂ ಕೂಡಿಸಿ ನೋಡಿ, ಅವೆರಡರ ನಡುವೆ ಒಂದು ಸಂಬಂಧವನ್ನು ಕಲ್ಪಿಸುತ್ತದೆ ಎನ್ನುವುದನ್ನು ಕುಲಶೋವ್ ಎನ್ನುವ ವಿಜ್ಞಾನಿ ತನ್ನ ಪ್ರಯೋಗವೊಂದರಲ್ಲಿ ಕಂಡುಕೊಂಡ. ಇದರಿಂದಾಗಿ ಸಿನೆಮಾದಲ್ಲಿ ಸಂಕಲನ (ಎಡಿಟಿಂಗ್) ಅಥವಾ ಜಕ್ಸ್ಟಪೊಸಿಷನ್ ಆರಂಭವಾಗುತ್ತದೆ. ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿ ಮಾಧ್ಯಮಗಳಲ್ಲಿ ಇದ್ದ ಸಮಯ-ವಸ್ತು-ಪರಿಸರದ ಶಿಸ್ತು ಈ ಮೂಲಕ ಸಿನೆಮಾಕ್ಕೂ ಬಂತು. ಇದರಿಂದಾಗಿ ಇದಕ್ಕೆ ಒಂದು ಕಥನ ಸಾಮರ್ಥ್ಯ ಮೂಡಿತು. ಕೇವಲ ಒಂದು ಚಿತ್ರವನ್ನು ತೋರಿಸಿದಾಗಲೂ ಈ ಶಕ್ತಿ ತಕ್ಕ ಮಟ್ಟಿಗೆ ಸಿನೆಮಾದಲ್ಲಿ ಇದ್ದರೂ, ಸಂಕಲನ ಸಾಧ್ಯತೆ ಕಥನದ ಮಹತ್ತರ ಬಾಗಿಲನ್ನು ಸಿನೆಮಾಕ್ಕೆ ತೆರೆದಂತಾಯಿತು.
ಹೀಗಾಗಿ ಆವರೆಗೆ ಬಹುತೇಕ ಸಿನೆಮಾದ ವೈಜ್ಞಾನಿಕ ಸಾಧ್ಯತೆಗಳನ್ನಷ್ಟೇ ಶೋಧಿಸುತ್ತಿದ್ದ ವಿಜ್ಞಾನಿಗಳ ಜೊತೆಗೆ, ಅನ್ಯ ಕಲಾಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದ ಕಲಾವಿದರೂ, ಇದನ್ನು ಒಂದು ಮಾಧ್ಯಮವಾಗಿ ನೋಡಲಾರಂಭಿಸಿದರು. ಅವರವರ ಹಿನ್ನೆಲೆಗೆ ಅನುಸಾರವಾಗಿ, ಈ ಮಾಧ್ಯಮವನ್ನು ದುಡಿಸಿ, ಬೆಳೆಸಿದರು. ಜಾದೂಗಾರರು, ಸಂಕಲನವನ್ನು ಚಮತ್ಕಾರಗಳಿಗೆ ಬಳಸಿದರು, ಬರಹಗಾರರು ಇದನ್ನು ಭಾವತೀವ್ರತೆಯ ಕಥನಕ್ಕೆ ಬಳಸಿದರು, ನಾಟಕಕಾರರು, ನಾಟಕಗಳ ದಾಖಲೀಕರಣಕ್ಕೆ ಬಳಸಿದರು. ಹೀಗೆ ಸಿನೆಮಾ ತನ್ನ ಕಥನ ವ್ಯಾಕರಣವನ್ನು ಕಂಡುಕೊಳ್ಳುವ ಕಡೆಗೆ ಅಂಬೆಗಾಲನ್ನು ಇಡಲಾರಂಭಿಸಿತು.
ಇಂದು ಸಿನೆಮಾದ ಕಥನ ವ್ಯಾಕರಣ ಬಹಳ ಬೆಳೆದು ನಿಂತಿರುವ ಕಾಲದಲ್ಲಿ, ಇದರ ಮೂಲವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ, ಸಿನೆಮಾವನ್ನು ನೋಡುವ ಕ್ರಮದ ಬಗ್ಗೆ ಮತ್ತೆ ಯೋಚಿಸಬೇಕಾದ ಅಗತ್ಯವಿದೆ. ಇಂದು ಮೊಬೈಲ್ ಫೋನ್‌ನಿಂದ ಹಿಡಿದು, ಟ್ಯಾಬ್, ಲ್ಯಾಪ್‌ಟಾಪ್, ಟಿವಿ, ಸಿನೆಮಾ ಮಂದಿರ, ದಾರಿಯಲ್ಲಿ ಹೋಗುವಾಗ ಕಾಣಬಹುದಾದ ಹಿರಿಯದಾದ ಜಾಹೀರಾತು ಪರದೆಗಳು ಹೀಗೆ ಎಲ್ಲೆಂದರಲ್ಲಿ, ಮಾಹಿತಿ ಇಂದು ಚಲಿಸುವ ಚಿತ್ರದ ರೂಪದಲ್ಲಿ ಆವರಿಸಿಕೊಳ್ಳುತ್ತಿದೆ. ಇಲ್ಲೆಲ್ಲವೂ ಮೂಲದಲ್ಲಿ ಕೆಲಸ ಮಾಡುತ್ತಿರುವುದು ಸಿನೆಮಾದ ವ್ಯಾಕರಣವೇ. ಇದು ಖಚಿತ (ಕಾಂಕ್ರಿಟ್) ಚಿತ್ರಣಗಳ ಮೂಲಕ ಅಮೂರ್ತವನ್ನು ಕಲ್ಪಿಸುತ್ತಾ, ಮನಸ್ಸನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪುವ ಸಾಧನ ಎನ್ನುವುದನ್ನು ಹೊಸ ಜಗತ್ತಿನ ಜಾಹೀರಾತುಗಾರರು ಅರಿತಿದ್ದಾರೆ. ಹೀಗಾಗಿ ಈ ಮಾಧ್ಯಮದ ವಶೀಕರಣ ಶಕ್ತಿಯನ್ನು ನೋಡುಗರ ಮೇಲೆ ನಿರಂತರವಾಗಿ ಪ್ರಯೋಗಿಸುತ್ತಲೇ ಇರುತ್ತಾರೆ. ಜೊತೆಯಲ್ಲೇ ಈ ಮಾಧ್ಯಮ ನಿರಂತರವಾಗಿ ತನ್ನ ಸ್ವರೂಪವನ್ನು ಬದಲಾಯಿಸುತ್ತಾ, ಕಾಲಧರ್ಮಕ್ಕೆ ತನ್ನನ್ನು ತಾನೇ ಅಳವಡಿಸುತ್ತಾ ಸಾಗಿದೆ.
ಸಿನೆಮಾಗಳನ್ನು ಕಲಾತ್ಮಕ ಹಾಗೂ ವಾಣಿಜ್ಯಾತ್ಮಕ ಎಂದೆಲ್ಲಾ ವಿಭಾಗ ಮಾಡಿ ನೋಡುವ ಕ್ರಮ ಇಂದು ನಮ್ಮಲ್ಲಿ ಬೆಳೆದಿದೆ. ಆದರೆ ಮೂಲತಃ ಅಂಥದ್ದೊಂದಿಲ್ಲ. ಸಿನೆಮಾಗಳು ನಮ್ಮ ಭಾವಪ್ರಪಂಚವನ್ನು ತಲುಪುವ ಕ್ರಮಗಳಲ್ಲಿನ ಭಿನ್ನತೆಯನ್ನೇ ನಾವು ಹೀಗೆ ವಿಂಗಡಿಸಿ ನೋಡುತ್ತಿರುವುದು. ಒಂದು, ಸಾವಕಾಶವಾಗಿ ಕಣ್ಣು-ಕಿವಿಯ ಮೂಲಕ ಒಸರುತ್ತಾ, ಹೃದಯದೆಲ್ಲೆಡೆ ಪಸರಿಸುವ ನಿಧಾನದ, ತೀವ್ರದ ಕ್ರಮವಾದರೆ, ಇನ್ನೊಂದು ವೇಗವಾಗಿ ನಮ್ಮ ಇಂದ್ರಿಯಗಳನ್ನು, ಮನಸ್ಸನ್ನು ಬಡಿದೆಬ್ಬಿಸಿ, ರೊಚ್ಚಿಗೆಬ್ಬಿಸಿ, ಭಾವ ತೀವ್ರತೆಯನ್ನು ಹೇರಿ ಚುರುಕಾಗಿ, ಕ್ಷಣಿಕವಾಗಿ ಉದ್ರೇಕಗೊಳಿಸುವ ರೋಚಕ ಕ್ರಮವಾಗಿದೆ.
ಕಣ್ಣಿಗೆ ಕಾಣುವುದೆಲ್ಲವೂ ವಾಸ್ತವ ಚಿತ್ರಣವೇ ಆಗಿರಬೇಕಾದ ಸಿನೆಮಾ ಮಾಧ್ಯಮದ ಅನಿವಾರ್ಯತೆಯಿಂದಾಗಿ ಸಿನೆಮಾ ವಾಸ್ತವ ಚಿತ್ರಣದೊಳಗೆ ಸುಪ್ತವಾಗಿರುವ ಸಂಜ್ಞೆಗಳ ಬಳಕೆಯ ಮೂಲಕ ಅಮೂರ್ತವನ್ನು ಕಟ್ಟುವ ಕೆಲಸ ಮಾಡುತ್ತದೆ. ನಿತ್ಯ ಜೀವನದಲ್ಲಿ ಮನುಷ್ಯ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು, ಈ ಸಂಜ್ಞೆಗಳನ್ನು ಗಮನಿಸುತ್ತಾ ಅದರ ಮೂಲಕ ತನ್ನ ನಿರ್ಧಾರಗಳನ್ನು ಮಾಡುತ್ತಿರುತ್ತಾನೆ. ಇದು ಸಾಮಾಜಿಕ ಜೀವನದಲ್ಲಿ ತನ್ನ ಉಳಿವಿಗಾಗಿ ಮನುಷ್ಯ ಬೆಳೆಸಿಕೊಂಡಿರುವ ಗುಣ. ಸಾಮಾನ್ಯ ವಿಷಯಗಳು ಎನ್ನಿಸುವಂಥಾ ಅನೇಕ ವಿಚಾರಗಳು ಸಾಮಾಜಿಕವಾಗಿ ವಿಭಿನ್ನ ಅರ್ಥ ಪಡೆದುಕೊಳ್ಳುವುದನ್ನು ನಾವು ಗಮನಿಸಿರಬಹುದು.
ಅಮೆರಿಕದಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ಬಹಳ ಸಮಯದವರೆಗೆ ಉದ್ದನೆ ಗಡ್ಡ ಬಿಟ್ಟಿದ್ದವರನ್ನೆಲ್ಲಾ ಭಯೋತ್ಪಾದಕರು ಎಂದು ಅಮೆರಿಕನ್ನರು ಸಂಶಯ ಪಡುತ್ತಿದ್ದುದು, ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ವಿನಾ ಕಾರಣ ಉದ್ದನೆಯ ಗಡ್ಡ ಬಿಟ್ಟಿರುವವರನ್ನು ಸಂಶಯದಲ್ಲಿ ನೋಡುತ್ತಿದ್ದುದು, ಪ್ರಶ್ನಿಸುತ್ತಿದ್ದುದು ನೆನಪಿಸಿಕೊಳ್ಳಬಹುದು. ಹಾಗೇ ಖಾದಿ ವಸ್ತ್ರಗಳನ್ನು ಧರಿಸುವವರನ್ನು ‘ಬುದ್ಧಿ ಜೀವಿ’ ಎಂದು ಸಾಮಾನ್ಯೀಕರಣ ಮಾಡುವುದೂ ಇರಬಹುದು, ಶಾರ್ಟ್ಸ್ ಧರಿಸುವ ಹುಡುಗಿಯರನ್ನು ಆಧುನಿಕ ಸ್ತ್ರೀ ಎಂದು ಗ್ರಹಿ ಸುವುದೇ ಇರಬಹುದು ಹೀಗೆ ಸಮಾಜದೊಳಗೆ ಹುಟ್ಟುವ ಅನೇಕ ಸಂಜ್ಞೆಗಳು ನಮ್ಮ ನಿತ್ಯ ಜೀವನದಲ್ಲಿ ಗಾಢವಾಗಿ ಅಡಕವಾಗಿವೆ. ಈ ಸಂಜ್ಞೆಗಳನ್ನು ಅಥವಾ ಸಾಮಾನ್ಯೀಕರಣವನ್ನು ವಿಮರ್ಶೆ ಮಾಡುವುದು ನಮ್ಮ ರಾಜಕೀಯ ಚರ್ಚೆಗಳ ಬಹುದೊಡ್ಡ ಭಾಗವೂ ಹೌದು. ಇದು ಕೇವಲ ವಸ್ತ್ರಕ್ಕೆ ಸೀಮಿತವಾಗಿಲ್ಲ. ಜನರಾಡುವ ಭಾಷೆ (ಉದಾಹರಣೆಗೆ, ಕೊಂಕಣಿ ಮಾತನಾಡುವವರು ಚತುರ ವ್ಯಾಪಾರಿಗಳು ಎನ್ನುವಂತಹ ಸಾಮಾನ್ಯೀಕರಣ), ಅವರ ಜನರ ಊರು (ಉದಾಹರಣೆಗೆ ದಕ್ಷಿಣ ಕನ್ನಡದವರು ಬುದ್ಧಿವಂತರು ಎನ್ನುವ ಸಾಮಾನ್ಯೀಕರಣ ಇರಬಹುದು) ಹೀಗೆ ಪ್ರತಿಯೊಂದು ವಿಷಯದಲ್ಲೂ ಒಂದು ಸಾಮಾನ್ಯೀಕರಣ ಮಾಡುವ ಮೂಲಕ ನಮ್ಮ ದೈನಂದಿನ ಬದುಕನ್ನು ಸುಲಭವಾಗಿ ಗ್ರಹಿಸಲು, ಅರ್ಥೈಸಿಕೊಳ್ಳಲು ಮನುಷ್ಯ ಪ್ರಯತ್ನಿಸುತ್ತಲೇ ಇರುತ್ತಾನೆ.
ಹೆಚ್ಚಿನ ಬಾರಿ ನಮಗೆ ಇಷ್ಟವಾಗುವ ಸಿನೆಮಾ ಯಾವುದು ಯಾಕೆ ಎಂದು ಯೋಚಿಸಿದಾಗ, ನೆನಪಿಗೆ ಬರುವ ಸಿನೆಮಾಗಳು ಕಥೆಗಾಗಿ ನಮಗೆ ಇಷ್ಟ ಎಂದು ಅಂದುಕೊಂಡಿರಬಹುದು. ಆದರೆ, ನಿಜವಾಗಿ ನಮಗೆ ಆ ಸಿನೆಮಾ ಇಷ್ಟವಾಗುವುದು ಹೆಚ್ಚಿನ ಸಲವೂ, ಅದು ಕಟ್ಟಿಕೊಡುವ ಭಾವಪ್ರಪಂಚದ ಕಾರಣವಾಗಿಯೇ ಇರುತ್ತದೆ. ಈ ಭಾವ ಪ್ರಪಂಚವನ್ನು ಕಟ್ಟಿಕೊಡುವುದು, ದೃಶ್ಯ ಹಾಗೂ ಶ್ರಾವ್ಯ ಭಿನ್ನ ರೀತಿಗಳಲ್ಲೂ, ಜೊತೆಯಾಗಿಯೂ ಕಟ್ಟಿಕೊಡುವ ಅಮೂರ್ತ ಅನುಭವಗಳಿಂದಾಗಿಯೇ ಆಗಿರುತ್ತದೆ.
ಮನುಷ್ಯನಿಗೆ ನೋಡುವ ಶಿಸ್ತು ಭೂಮಿಯ ಮೇಲೆ ಮನುಷ್ಯ ಓಡಾಡಲು ಆರಂಭಿಸಿದಾಗಿನಿಂದಲೂ ಬೆಳೆಯುತ್ತಲೇ ಬಂದಿದೆ. ನೋಡಿದ್ದನ್ನು ಗ್ರಹಿಸಲು ಒಂದು ಚೌಕಟ್ಟು ಬೇಕಾಗುತ್ತದೆ. ಅದನ್ನು ಇತರರಿಗೆ ವ್ಯಕ್ತಪಡಿಸಲೂ ಈ ಚೌಕಟ್ಟು ಸಹಾಯ ಮಾಡುತ್ತದೆ. ಹೀಗಾಗಿಯೇ ಗುಹೆಗಳಲ್ಲಿ ಆದಿಮಾನವರು ಬರೆಯುತ್ತಿದ್ದ ಚಿತ್ರಗಳನ್ನು ನೋಡಿದರೂ, ಇಂದಿನ ಚಿತ್ರಕಲೆಗೆ ಹೋಲಿಸಿದಲ್ಲಿ, ಅಂದಿನ ವ್ಯಾಕರಣ ತೀರಾ ಆದಿಮವಾದ್ದಾದರೂ, ಅದರಲ್ಲಿ ಒಂದು ಚೌಕಟ್ಟಿನ ಕಲ್ಪನೆ ಇತ್ತು. ಇಷ್ಟೇ ಜನರು ಕಾಣಿಸುತ್ತಿದ್ದಾರೆ, ಇಂಥದ್ದೇ ಪ್ರಾಣಿ, ಬೆಟ್ಟ ಕಾಣಿಸುತ್ತಿದೆ ಎನ್ನುವ ಆಯ್ಕೆಯೇ ಈ ಚೌಕಟ್ಟು.
ಚಿತ್ರಕಲೆ ಮುಂದುವರಿಯುತ್ತಾ ಬಂದಂತೆ ಅದು ಹೆಚ್ಚು ವಾಸ್ತವದ ಸಮೀಪಕ್ಕೆ ಬಂತು. ಆದರೆ ವಾಸ್ತವ ಎನ್ನುವುದೇ ಮನುಷ್ಯನ ಗ್ರಹಿಕೆಯೀ ಮಿತಿಯಾಗಿರುವುದರಿಂದ, ಟಿಸಿಲೊಡೆದು, ಕಲ್ಪಿತ ವಾಸ್ತವದ ಚಿತ್ರಣವನ್ನೂ ರೂಪಿಸಲಾರಂಭಿಸಿದರು. ಇತಿಹಾಸದಲ್ಲಿ ದಾಪುಗಾಲು ಹಾಕುತ್ತಾ ಇಂದಿನೆಡೆಗೆ ಬಂದರೆ, ಚಿತ್ರಕಲೆಯ ಹಲವು ಕಾಲಘಟ್ಟಗಳನ್ನು ದಾಟಿ, ಛಾಯಾಚಿತ್ರಗಳ ಆವಿಷ್ಕಾರ, ಅದರಲ್ಲಿನ ಬೆಳವಣಿಗೆ, ಚಲನ ಚಿತ್ರಗಳ ಆವಿಷ್ಕಾರ, ಟೆಲಿವಿಷನ್ ಹಾಗೂ ಇಂದಿನ ಬಹುಮಾಧ್ಯಮ ಅಭಿವ್ಯಕ್ತಿಯವರೆಗೂ, ಕಾಲಕಾಲಕ್ಕೆ ಮಾಧ್ಯಮಗಳು ಪ್ರೇಕ್ಷಕರ ನೋಡುವ ಶಿಸ್ತನ್ನು ಮುಂದಕ್ಕೆ ತೆಗೆದುಕೊಂಡು ಸಾಗಿದೆ. ಇಂದು ವರ್ಚ್ಯುವಲ್ ರಿಯಾಲಿಟಿ ನೋಡುವ ಶಿಸ್ತಿನಲ್ಲಿನ ಚೌಕಟ್ಟನ್ನೇ ಪ್ರಶ್ನಿಸಲಾರಂಭಿಸಿದ್ದು, ಇದು ನೋಡುವ ಶಿಸ್ತಿನ ಬೆಳವಣಿಗೆಯನ್ನು ತೋರಿಸುತ್ತದೆ. ನೋಡುವುದಕ್ಕೆ ಇಷ್ಟೊಂದು ಪ್ರಾಮುಖ್ಯತೆ ಇರುವುದರಿಂದ, ಇದರ ಪ್ರಭಾವ ಬಹಳ ಗಾಢವಾದದ್ದೇ. ಇದು ಸಿನೆಮಾದಲ್ಲಿ ಪ್ರೇಕ್ಷಕರನ್ನು ಪ್ರಚೋದಿಸಲು, ಭಾವಗಳನ್ನು ಮೂಡಿಸಲು, ಅಮೂರ್ತ ಅವಕಾಶಗಳನ್ನು ಸೃಷ್ಟಿಸಲು ಹೇಗೆ ಬಳಕೆಯಾಗುತ್ತದೆ ಎನ್ನುವುದನ್ನು ನೋಡೋಣ.
ಅನುಭವವನ್ನು ಸ್ವೀಕರಿಸುವವನ ಮನಸ್ಸಲ್ಲಿ ಅಮೂರ್ತವನ್ನು ಸೃಷ್ಟಿಸುವ ಪ್ರಯತ್ನದಲ್ಲಿ, ಸಿನೆಮಾ ಮಾಧ್ಯಮಕ್ಕೆ ಮೊದಲಿಗೆ ಸಿಗುವುದು ಸಮಾಜದಲ್ಲಿ ಇರುವ, ನೋಡುಗನ ಪರಿಸರದಲ್ಲಿ ಇರುವ ಸಂಜ್ಞೆಗಳು. ಕೆಂಪು ದೀಪ ಎಂದರೆ ಅಪಾಯ ಅಥವಾ ನಿಲ್ಲಿ ಎನ್ನುವುದು ನಮಗೆಲ್ಲರಿಗೂ ಗೊತ್ತು. ಎರಡೂ ಕೈಗಳನ್ನು ಮುಗಿದರೆ, ನಮಸ್ಕಾರ ಎನ್ನುವುದು ನಮಗೆಲ್ಲರಿಗೂ ಗೊತ್ತು. ಆದರೆ ಆ ನಮಸ್ಕಾರ ಯಾವ ಸಂದರ್ಭದಲ್ಲಿ ಮಾಡಿದ್ದು ಎನ್ನುವುದನ್ನು ಆಧರಿಸಿ, ಆ ನಮಸ್ಕಾರ ಸ್ವಾಗತಿಸುವ ನಮಸ್ಕಾರವೋ, ಪರಿಚಯದ ನಮಸ್ಕಾರವೋ, ಹಾಸ್ಯಕ್ಕಾಗಿ ನಮಸ್ಕರಿಸುತ್ತಿರುವುದೋ ಅಥವಾ ದೂರ ಇಡಲಿಕ್ಕಾಗಿ ಹಾಕುತ್ತಿರುವ ದೊಡ್ಡ ನಮಸ್ಕಾರವೋ ಇತ್ಯಾದಿ ನಿರ್ಧಾರವಾಗುತ್ತದೆ. ಹೀಗೆ ಸಮಾಜದೊಳಗೆ ಸಂಜ್ಞೆಗಳ ಮೂಲಕ ನಡೆಯುವ ಸಂವಹನ, ಸಿನೆಮಾದಲ್ಲಿ ಬಳಕೆಯಾಗುವ ಒಂದು ಮಹತ್ತರ ಸಂವಹನವಾಗಿದೆ.
ವರ್ಣ ಚಿತ್ರಗಳು ಬಂದಾಗ ಸಿನೆಮಾದಲ್ಲಿ ಬಣ್ಣದ ಬಳಕೆಯ ಬಗ್ಗೆಯೂ ಸಾಕಷ್ಟು ಚಿಂತನೆಗಳು ನಡೆದಿವೆ. ಬಣ್ಣಗಳ ಮೂಲಕ ಮನಸ್ಸನ್ನು ಮುಟ್ಟುವುದು, ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನಗಳು ನಡೆದಿವೆ. ಸಮಾಜದಲ್ಲಿ ಹಸಿರು, ಕೇಸರಿ, ಬಿಳಿ ಹೀಗೆ ಒಂದೊಂದು ಧರ್ಮಕ್ಕೆ ಒಂದೊಂದು ಬಣ್ಣವನ್ನು ಸಂಜ್ಞೆಯ ರೀತಿಯಲ್ಲಿ ಬಳಸಲಾಗುತ್ತದೆ. ಒಂದು ಧರ್ಮದಲ್ಲಿ ಬಿಳಿ ಮದುವೆಯ ಬಣ್ಣವಾದರೆ, ಇನ್ನೊಂದರಲ್ಲಿ ಬಿಳಿ ವಿಧವೆಯ ಬಣ್ಣವಾಗುತ್ತದೆ. ಬಣ್ಣಗಳು ಪ್ರಚೋದಿಸುವ ಭಾವಗಳನ್ನೂ ಅಧ್ಯಯನ ಮಾಡಿ, ಮನುಷ್ಯನ ಕಾಮ, ಮೋಹ, ಮದ, ಮತ್ಸರಗಳಿಗೆಲ್ಲಾ ಸಂವಾದಿಯಾಗಿರುವ ಬಣ್ಣಗಳನ್ನೂ ಕಂಡುಕೊಂಡು ಅವುಗಳನ್ನೂ ಸಿನೆಮಾದಲ್ಲಿ ವಿವಿಧ ರೀತಿಯಲ್ಲಿ ಬಳಸಿರುವುದನ್ನು ನಾವು ಕಾಣಬಹುದು.
ಸಿನೆಮಾದಲ್ಲಿ ಕಾಣುವ ಗೋಡೆಗಳು, ವಸ್ತುಗಳು, ನಟ-ನಟಿಯರು ಧರಿಸಿರುವ ವಸ್ತ್ರಗಳು ಇತ್ಯಾದಿಗಳ ಬಣ್ಣವನ್ನು ಹೊಂದಾಣಿಕೆ ಮಾಡುವ ಮೂಲಕ ಒಟ್ಟು ಒಂದು ಬಣ್ಣದೆಡೆಗಿನ ಅಥವಾ ಒಂದು ಜಾತಿಯ ಬಣ್ಣಗಳೆಡೆಗಿನ ವಾಲುವಿಕೆಯ ಮೂಲಕ ಒಂದು ಭಾವವನ್ನು ಪ್ರಚೋದಿಸುವುದು ಸಾಧ್ಯ. ಬಹಳ ಹೊತ್ತಿನವರೆಗೆ ದೃಶ್ಯಗಳಲ್ಲಿ ಕೆಂಪನ್ನೇ ನೋಡುತ್ತಿದ್ದು ಒಮ್ಮೆಲೇ ತಿಳಿ ನೀಲಿ ಅಥವಾ ಗಿಳಿ ಹಸಿರನ್ನು ಕಂಡಾಗ ಮನಸ್ಸು ಹೇಗೆ ತಿಳಿಯಾಗುತ್ತದೆ ಎನ್ನುವುದನ್ನು ಯೋಚಿಸಿ ನೋಡಿ. ಈ ಭಾವಗಳ ಏರಿಳಿತವನ್ನು ಕಥನದೊಳಗಿನ ಭಾವಗಳ ಏರಿಳಿತಕ್ಕೂ ಸಿನೆಮಾ ಬಳಸುತ್ತದೆ. ಹೀಗಾಗಿಯೇ ಮುಖ್ಯವಾಹಿನಿಯ ಸಿನೆಮಾಗಳಲ್ಲಿ ಅನೇಕ ಬಾರಿ ಹಿತವಾದ ಪ್ರೇಮನಿವೇದನೆಯ ಹಾಡುಗಳಿಗೆ ಹಸಿರಿನ ಮಡಿಲನ್ನೇ ಹುಡುಕಿಕೊಂಡು ಹೋಗುವುದು.
ಹೀಗೆಯೇ, ಆಕೃತಿಗಳ ಕಡೆಗೂ ಮನುಷ್ಯನಿಗೆ ತನ್ನದೇ ಆದ ಸಾಮಾನ್ಯೀಕರಣಗಳಿವೆ. ಎತ್ತರ, ಆಳ, ಅಗಲ, ದಪ್ಪ ಇತ್ಯಾದಿಗಳೂ ಅಂತೆಯೇ ವೃತ್ತ, ಚೌಕ, ತ್ರಿಕೋನ ಇತ್ಯಾದಿ ಆಕೃತಿಗಳ ಕುರಿತಾಗಿಯೂ ಮನುಷ್ಯನಿಗೆ ತನ್ನದೇ ಆದ ನಂಬಿಕೆಗಳಿವೆ, ಅನಿಸಿಕೆಗಳಿವೆ. ಇದೂ ಮನುಷ್ಯನ ಸಾಮಾಜಿಕ ವರ್ತನೆಯನ್ನು ನಿರ್ಣಯಿಸುವ ಒಂದು ವಿಷಯವಾಗಿದೆ. ಕೆಲವರು ಎತ್ತರದ ಸ್ಥಳದಿಂದ ಇಣುಕಿನೋಡಲು ಭಯ ಪಡುವುದು, ಚೌಕಾಕಾರದ ಕೋಣೆಯಲ್ಲಿ ಸಾಧಾರಣಾವಾಗಿ ಎಲ್ಲಿ ಕೂರುತ್ತಾರೆ ಇತ್ಯಾದಿಗಳು ವ್ಯಕ್ತಿತ್ವದ ಭಾಗವೇ ಆಗಿರುತ್ತದೆ. ಅವೆಲ್ಲವೂ ನಮ್ಮಿಳಗಿನ ಒಂದು ಭಾವವನ್ನು ಪ್ರಚೋದಿಸುತ್ತದೆ. ಇದನ್ನು ಸಿನೆಮಾದಲ್ಲೂ ಕಥನದೊಳಗಿನ ಭಾವಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಬಳಸಲಾಗುತ್ತದೆ. ಅಂತೆಯೇ ದುಃಖಕ್ಕೆ ಮಳೆ, ಸಿಟ್ಟಿಗೆ ಬಿರುಬಿಸಿಲು, ಪ್ರೀತಿ, ಪ್ರೇಮಗಳಿಗೆ ಮಂಜು ಹೀಗೆ ಕಾಲ, ಹವೆಯನ್ನೂ ಬಳಸಿಕೊಳ್ಳಲಾಗುತ್ತದೆ. ಒಟ್ಟಿನಲ್ಲಿ ದೃಶ್ಯದಲ್ಲಿ ಕಾಣುವ ಎಲ್ಲಾ ಸಾಧ್ಯತೆಗಳನ್ನು ಕಥನದಲ್ಲಿ ಭಾವಗಳ ಹುಟ್ಟಿಗೆ ಬಳಸಿಕೊಳ್ಳಲಾಗುತ್ತದೆ.
ವರ್ಣ ಚಿತ್ರಗಳು ಬಂದಾಗ ಸಿನೆಮಾದಲ್ಲಿ ಬಣ್ಣದ ಬಳಕೆಯ ಬಗ್ಗೆಯೂ ಸಾಕಷ್ಟು ಚಿಂತನೆಗಳು ನಡೆದಿವೆ. ಬಣ್ಣಗಳ ಮೂಲಕ ಮನಸ್ಸನ್ನು ಮುಟ್ಟುವುದು, ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನಗಳು ನಡೆದಿವೆ. ಸಮಾಜದಲ್ಲಿ ಹಸಿರು, ಕೇಸರಿ, ಬಿಳಿ ಹೀಗೆ ಒಂದೊಂದು ಧರ್ಮಕ್ಕೆ ಒಂದೊಂದು ಬಣ್ಣವನ್ನು ಸಂಜ್ಞೆಯ ರೀತಿಯಲ್ಲಿ ಬಳಸಲಾಗುತ್ತದೆ. ಒಂದು ಧರ್ಮದಲ್ಲಿ ಬಿಳಿ ಮದುವೆಯ ಬಣ್ಣವಾದರೆ, ಇನ್ನೊಂದರಲ್ಲಿ ಬಿಳಿ ವಿಧವೆಯ ಬಣ್ಣವಾಗುತ್ತದೆ.
ಸಿನೆಮಾದ ಇನ್ನೊಂದು ಮುಖ್ಯ ಭಾಗ ಧ್ವನಿ. ನಮ್ಮ ಜೀವನದ ಪ್ರತೀ ಹಂತದಲ್ಲೂ, ನಾವು ಕೈಗೊಳ್ಳುವ ಪ್ರತೀ ನಿರ್ಧಾರದಲ್ಲೂ ಧ್ವನಿಯ ಪಾತ್ರ ಮಹತ್ತರವಾಗಿದೆ. ಅದು ನೋಟದಷ್ಟು ವಾಚ್ಯವಲ್ಲ. ಆದರೂ ಅಷ್ಟೇ ಶಕ್ತ ಶಕ್ತಿಯಾಗಿದೆ. ನೋಟದ ಸಂಜ್ಞೆಗಳಲ್ಲಿ ಭಾಷೆಯ ಲಿಪಿಯೂ ಒಂದು ಪ್ರಮುಖ ಭಾಗ. ಧ್ವನಿಗೆ ಅದರ ಹಂಗೂ ಇಲ್ಲ. ಬಾಲ್ಯದಲ್ಲಿ ಕೇಳಿದ ಶಾಲೆಯ ಗಂಟೆಯ ಶಬ್ದವಾಗಿರಬಹುದು. ಮೊದಲ ಪ್ರೀತಿಯಾದಾಗ ಗುನುಗುತ್ತಿದ್ದ ಸಿನೆಮಾ ಹಾಡು ಆಗಿರಬಹುದು, ರೈಲು ಸೀಟಿಯ ಸದ್ದಾಗಿರಬಹುದು, ಒಂದಿಷ್ಟು ಗಾಳಿಯ ಕಕ್ಕಿ, ಹನಿ ಹನಿ ನೀರು ಸುರಿಸುತ್ತಿರುವ ನಳ್ಳಿಯ ಸದ್ದಾಗಿರಬಹುದು. ಇವೆಲ್ಲವೂ ನಮ್ಮ ಮನಸ್ಸಿನಲ್ಲಿ ನೂರು ಭಾವಗಳನ್ನು ಕೆರಳಿಸುತ್ತವೆ. ಹೀಗಾಗಿ ಸಿನೆಮಾದಲ್ಲಿ ಧ್ವನಿಯ ಸಾಧ್ಯತೆಗಳನ್ನೂ, ತೀವ್ರವಾಗಿ ಬಳಸಿಕೊಳ್ಳಲಾಗುತ್ತದೆ. ರಾತ್ರಿಯ ದೃಶ್ಯಗಳಲ್ಲಿ ದೂರದಿಂದ ಆಗೀಗ ಬೊಗಳುವ ನಾಯಿಯ ಧ್ವನಿ ಇರಬಹುದು, ಮಸೀದಿಯಿಂದ ಕೇಳಿಬರುವ ಆಝಾನ್ ಧ್ವನಿ ಇರಬಹುದು. ಇವೆಲ್ಲವೂ ದೃಶ್ಯ ನಡೆಯುತ್ತಿರುವ ಸ್ಥಳದ ಪರಿಸರವನ್ನು ಕಟ್ಟಿಕೊಡಲು ಸಹಕಾರಿಯಾಗಿದೆ.
ಇವು ಕೇವಲ ಪರಿಸರ ಕಟ್ಟಿಕೊಟ್ಟರೆ, ಇನ್ನೂ ಅನೇಕ ಬಾರಿ ಇದನ್ನು ಸೃಜನಾತ್ಮಕವಾಗಿ, ಕಥಾನಕದ ಮುಂದುವರಿಕೆಗೆ, ನಿರೂಪಣಾ ಶೈಲಿಯಾಗಿ ಬಳಸಲಾಗುತ್ತದೆ. ಇಂಥಾ ಧ್ವನಿಗಳ ಜಕ್ಸ್ಟಪೋಸಿಂಗ್ ಕೂಡಾ ಒಂದು ಅರ್ಥ ಸಾಧ್ಯತೆಯನ್ನು ನಿರೂಪಿಸುತ್ತದೆ. ಧ್ವನಿಯ ಇನ್ನೊಂದು ಮುಖ್ಯ ಭಾಗ, ಸಂಭಾಷಣೆಗಳು. ಇಲ್ಲಿ ಭಾಷೆಯ ಬಳಕೆ, ಭಾಷೆಯ ಪ್ರಾಂತ ಇವೆಲ್ಲವೂ ಪಾತ್ರದ ಪರಿಚಯವನ್ನು ನಿರೂಪಿಸುವಲ್ಲಿ ಸಹಕಾರಿ. ಮತ್ತೆ ಸಿನೆಮಾ ಧ್ವನಿಯ ಮತ್ತೊಂದು ಮಹತ್ತರ ಭಾಗ, ಸಂಗೀತ. ಸರಿಯಾದ ಸಂಗೀತವನ್ನು ಬಳಸುವ ಮೂಲಕ, ದೃಶ್ಯದಲ್ಲಿ ಬರುತ್ತಿರುವ ಕಥೆಗೆ ಸರಿಯಾದ ಭಾವವನ್ನು ಪ್ರೇಕ್ಷಕರಲ್ಲಿ ಮೂಡಿಸುವುದು ಸಾಧ್ಯವಾಗುತ್ತದೆ. ಸಂಗೀತದ ಶೈಲಿಯ ಮೂಲಕ ಕಥೆ ನಡೆಯುತ್ತಿರುವ ಪ್ರಾಂತದ ಪರಿಸರವನ್ನು ಕಟ್ಟುವುದೂ ಸಾಧ್ಯ. ದಕ್ಷಿಣ ಭಾರತದ ಚಿತ್ರಗಳಿಗೆ ಕರ್ನಾಟಕ ಸಂಗೀತದ ರಾಗಗಳು, ಉತ್ತರ ಭಾರತದ ಕಥೆಗಳಿಗೆ ಹಿಂದೂಸ್ಥಾನೀ ಸಂಗೀತ, ಅಮೆರಿಕದ ಸಿನೆಮಾಗಳಿಗೆ ಅಲ್ಲಿನ ಸಂಗೀತ ಪರಂಪರೆಯ ವಿಭಿನ್ನ ಸಂಗೀತ ಇತ್ಯಾದಿಗಳನ್ನು ಅಳವಡಿಸಿರುವುದನ್ನು ಗಮನಿಸಿರಬಹುದು. ಇದು ಕಡ್ಡಾಯವೇನಲ್ಲ. ಎಷ್ಟೋ ಬಾರಿ, ಇದರ ವಿರುದ್ಧ ಶೈಲಿಯ ಸಂಗೀತ ಬಳಸುವುದರ ಮೂಲಕ ಪ್ರೇಕ್ಷಕರ ನೋಟವನ್ನು ಬದಲಿಸಿದ ಅದ್ಭುತ ಅನುಭವಗಳೂ ಇವೆ.
ದೃಶ್ಯ ಹಾಗೂ ಧ್ವನಿಗಳಲ್ಲಿ, ಅದರದ್ದೇ ಆದ ಸಂಜ್ಞಾ ಭಾಷೆಯನ್ನು ಗಮನಿಸಿದೆವು. ಆದರೆ ಒಳ್ಳೆಯ ಸಿನೆಮಾವೊಂದು ದೃಶ್ಯ ಹಾಗೂ ಶ್ರಾವ್ಯದ ಉತ್ಕೃಷ್ಟ ಮಿಶ್ರಣವಾಗಿರುತ್ತದೆ. ಹೀಗಾಗಿ ಜಕ್ಸ್ಟಪೋಸಿಂಗ್ ಈ ಎರಡೂ ವಿಭಾಗಗಳ ನಡುವೆಯೂ ನಡೆಯುತ್ತದೆ. ಎಷ್ಟೋ ಬಾರಿ ದೃಶ್ಯ ಒಂದು ಸಂಜ್ಞೆಯನ್ನು ನೀಡುತ್ತಿದ್ದರೆ, ಧ್ವನಿ ಇನ್ನೊಂದನ್ನೇ ಸೇರಿಸಿ, ಹೊಸತಾದ ಒಂದು ಅರ್ಥಸಾಧ್ಯತೆ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತದೆ. ಹೀಗೆ ಕಥೆಯಲ್ಲಿ ಯಾವ ವಸ್ತುವನ್ನು ಯಾವ ಮಾಧ್ಯಮದ (ದೃಶ್ಯ ಅಥವಾ ಶ್ರಾವ್ಯ) ಮೂಲಕ ನಿರೂಪಿಸಬೇಕು ಎನ್ನುವುದನ್ನು ಜಾಗರೂಕತೆಯಿಂದ ಆಯ್ಕೆ ಮಾಡುತ್ತಾ ಸಾಗುವ ನಿರ್ದೇಶಕ (ಅಥವ ಕತೆಗಾರ) ಸಿನೆಮಾವನ್ನು ಕೇವಲ ಕಥೆಯನ್ನಾಗಿ ಬಿಡದೆ, ಅದನ್ನೊಂದು ಅನುಭವವನ್ನಾಗಿಸುತ್ತಾರೆ.
ಹೆಚ್ಚಿನ ಬಾರಿ ನಮಗೆ ಇಷ್ಟವಾಗುವ ಸಿನೆಮಾ ಯಾವುದು ಯಾಕೆ ಎಂದು ಯೋಚಿಸಿದಾಗ, ನೆನಪಿಗೆ ಬರುವ ಸಿನೆಮಾಗಳು ಕಥೆಗಾಗಿ ನಮಗೆ ಇಷ್ಟ ಎಂದು ಅಂದುಕೊಂಡಿರಬಹುದು. ಆದರೆ, ನಿಜವಾಗಿ ನಮಗೆ ಆ ಸಿನೆಮಾ ಇಷ್ಟವಾಗುವುದು ಹೆಚ್ಚಿನ ಸಲವೂ, ಅದು ಕಟ್ಟಿಕೊಡುವ ಭಾವಪ್ರಪಂಚದ ಕಾರಣವಾಗಿಯೇ ಇರುತ್ತದೆ. ಈ ಭಾವ ಪ್ರಪಂಚವನ್ನು ಕಟ್ಟಿಕೊಡುವುದು, ದೃಶ್ಯ ಹಾಗೂ ಶ್ರಾವ್ಯ ಭಿನ್ನ ರೀತಿಗಳಲ್ಲೂ, ಜೊತೆಯಾಗಿಯೂ ಕಟ್ಟಿಕೊಡುವ ಅಮೂರ್ತ ಅನುಭವಗಳಿಂದಾಗಿಯೇ ಆಗಿರುತ್ತದೆ. ಹೀಗಾಗಿಯೇ, ನಾವು ನೋಡಿರುವ ಸಿನೆಮಾಗಳಲ್ಲಿ, ಅನೇಕವುಗಳ ಕಥೆಯೇ ನೆನಪಿರುವುದಿಲ್ಲ. ಇದ್ದರೂ, ನಿರ್ದಿಷ್ಟ ದೃಶ್ಯದ ನಂತರದ ದೃಶ್ಯ ಯಾವುದು ಎಂದು ನೆನಪಿರದೇ ಹೋಗಬಹುದು. ಆದರೆ, ಒಟ್ಟಿನಲ್ಲಿ, ಆ ಸಿನೆಮಾ ನಮಗೆ ನೀಡಿದ ಅನುಭವವನ್ನು ಮಾತ್ರ ನಾವು ಸದಾಕಾಲ ನೆನಪಿನಲ್ಲಿಟ್ಟುಕೊಂಡಿರುತ್ತೇವೆ.
ಸಿನೆಮಾಗಳನ್ನು ಕಲಾತ್ಮಕ ಹಾಗೂ ವಾಣಿಜ್ಯಾತ್ಮಕ ಎಂದೆಲ್ಲಾ ವಿಭಾಗ ಮಾಡಿ ನೋಡುವ ಕ್ರಮ ಇಂದು ನಮ್ಮಲ್ಲಿ ಬೆಳೆದಿದೆ. ಆದರೆ ಮೂಲತಃ ಅಂಥದ್ದೊಂದಿಲ್ಲ. ಸಿನೆಮಾಗಳು ನಮ್ಮ ಭಾವಪ್ರಪಂಚವನ್ನು ತಲುಪುವ ಕ್ರಮಗಳಲ್ಲಿನ ಭಿನ್ನತೆಯನ್ನೇ ನಾವು ಹೀಗೆ ವಿಂಗಡಿಸಿ ನೋಡುತ್ತಿರುವುದು. ಒಂದು, ಸಾವಕಾಶವಾಗಿ ಕಣ್ಣು-ಕಿವಿಯ ಮೂಲಕ ಒಸರುತ್ತಾ, ಹೃದಯದೆಲ್ಲೆಡೆ ಪಸರಿಸುವ ನಿಧಾನದ, ತೀವ್ರದ ಕ್ರಮವಾದರೆ, ಇನ್ನೊಂದು ವೇಗವಾಗಿ ನಮ್ಮ ಇಂದ್ರಿಯಗಳನ್ನು, ಮನಸ್ಸನ್ನು ಬಡಿದೆಬ್ಬಿಸಿ, ರೊಚ್ಚಿಗೆಬ್ಬಿಸಿ, ಭಾವ ತೀವ್ರತೆಯನ್ನು ಹೇರಿ ಚುರುಕಾಗಿ, ಕ್ಷಣಿಕವಾಗಿ ಉದ್ರೇಕಗೊಳಿಸುವ ರೋಚಕ ಕ್ರಮವಾಗಿದೆ. ದಿನೇ ದಿನೇ ವೇಗಗೊಳ್ಳುತ್ತಿರುವ ನಮ್ಮ ಸಾಮಾಜಿಕ ಜೀವನ ಹಾಗೂ ಕುಂಠಿತವಾಗುತ್ತಿರುವ ನಮ್ಮ ಸಂಯಮದ ನಡುವಿನಲ್ಲಿ, ದೃಶ್ಯ-ಶ್ರಾವ್ಯ ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸುವುದು , ಅದರ ಪರಿಣಾಮಗಳ ಕುರಿತಾಗಿ ಯೋಚಿಸುವುದು ಅಗತ್ಯವಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ