varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಬದಲಾಗುತ್ತಿರುವ ತುಳು ಭಾಷೆಯ ಅನನ್ಯತೆಯ ನೆಲೆಗಳು

ವಾರ್ತಾ ಭಾರತಿ : 3 Nov, 2017
ಪ್ರೊ. ಬಿ.ಎ. ವಿವೇಕ ರೈ

‘ತುಳು’ ಎನ್ನುವ ಹೆಸರಿನ ಭಾಷೆಯು ಭಾರತದ ಪಶ್ಚಿಮ ಕರಾವಳಿಯಲ್ಲಿನ ಐತಿಹಾಸಿಕವಾಗಿ ‘ತುಳುನಾಡು/ತುಳು ದೇಶ/ ತುಳುವ’ದಲ್ಲಿನ ಜನರ ಆಡುಭಾಷೆ. ತುಳುನಾಡು/ತುಳು ದೇಶದ ಉಲ್ಲೇಖ ಸುಮಾರು ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ತುಳು ಭಾಷೆಯ ಬಗ್ಗೆ ಸಂಶೋಧನೆ ನಡೆಸಿದ ಭಾಷಾವಿಜ್ಞಾನಿಗಳು ಅದು ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆ ಎಂದೂ ಅದು ಮೂಲದ್ರಾವಿಡದಿಂದ ಆರಂಭದಲ್ಲೇ ಪ್ರತ್ಯೇಕವಾಗಿ ಕವಲೊಡೆದ ಭಾಷೆಯೆಂದೂ ತೀರ್ಮಾನಿಸಿದ್ದಾರೆ.

ಅನನ್ಯತೆ, ‘ಅಸ್ಮಿತೆ’, ‘ಐಡೆಂಟಿಟಿ’ ಎನ್ನುವುದು ವ್ಯಕ್ತಿಗಳಿಗಾಗಲೀ ಸಮುದಾಯಗಳಿಗಾಗಲೀ ವ್ಯಾಪಕ ಸಾಮಾಜಿಕ ಘಟಕಗಳಿಗಾಗಲೀ ಮುಖ್ಯವಾದ ಮನ್ನಣೆಯ ಒಂದು ಅಂಶ. ಒಂದು ಸಮುದಾಯದ ಸದಸ್ಯರನ್ನು ಒಂದುಗೂಡಿಸುವ ಕೊಂಡಿ. ಒಮ್ಮೆಯೂ ಪರಸ್ಪರ ಭೇಟಿ ಆಗದಿದ್ದರೂ ತಾವೆಲ್ಲ ಒಂದೇ ಎನ್ನುವ ಭಾವನೆಯನ್ನು ಸೃಷ್ಟಿಸಿವಂತಹದ್ದು ಅನನ್ಯತೆ. ಅದು ಭಾಷೆ , ವೇಷಭೂಷಣ, ಸಂಗೀತ, ಕುಣಿತ, ವಾಸ್ತುಶಿಲ್ಪ, ಇತಿಹಾಸ, ಪುರಾಣ, ಆಚರಣೆ, ಭೌಗೋಳಿಕ ಸ್ಥಳ ಇತ್ಯಾದಿಗಳಿಗೆ ಸಂಬಂಧಿಸಿದ್ದು ಇರಬಹುದು. ಹೆಸರುಗಳು, ಬಣ್ಣಗಳು, ಧ್ವಜಗಳು ಮುಂತಾದ ಚಿಹ್ನೆಗಳು ಇರಬಹುದು. ಇವುಗಳಿಗೆಲ್ಲಾ ಸಾಂಕೇತಿಕ ಅರ್ಥಗಳು ಇರುತ್ತವೆ. ಅನನ್ಯತೆಯನ್ನು ಹೊಂದಿದ ಸಮುದಾಯವು ಈ ರೀತಿ ಆಯ್ಕೆ ಮಾಡಿದ ಸಂಕೇತಗಳ ಅರ್ಥ ಮತ್ತು ಭಾವನೆಗಳ ಮೂಲಕ ಒಂದುಗೂಡುತ್ತದೆ. ‘ನಾವು’ ‘ನಮ್ಮದು’ ಎನ್ನುವ ಪದಗಳು ವಸ್ತುರೂಪದ ಅಥವಾ ವಿಚಾರರೂಪದ ಸಂಕೇತಗಳಿಗೆ ಭಾವನಾತ್ಮಕ ಐಕ್ಯವನ್ನು ತಂದುಕೊಡುತ್ತವೆ.

ಭಾರತದಂತಹ ರಾಷ್ಟ್ರದಲ್ಲಿ ಅನನ್ಯತೆಯನ್ನು ಗುರುತಿಸುವಾಗ ಪ್ರಾದೇಶಿಕತೆಯಷ್ಟೇ ಮುಖ್ಯವಾಗಿರುವುದು ಸಾಮಾಜಿಕ ಗುಂಪುಗಳು. ‘ಜಾತಿ’ ಎನ್ನುವ ಶಬ್ದವನ್ನು ಭಾರತದ ಸಾಮಾಜಿಕ ಗುಂಪುಗಳಿಗೆ ಹೆಚ್ಚಾಗಿ ಬಳಸಲಾಗಿದೆ. ಕೆಲವು ಸಾಮಾಜಿಕ ಗುಂಪುಗಳ ವಾಸ್ತವ್ಯದ ನೆಲೆಯನ್ನು ಗಮನಿಸಿಕೊಂಡು ಅಂತಹ ಗುಂಪುಗಳನ್ನು ‘ಬುಡಕಟ್ಟು’ ಎನ್ನುವ ಹೆಸರಿನಿಂದಲೂ ಕರೆಯಲಾಗಿದೆ. ಹೆಚ್ಚು ವ್ಯಾಪಕ ಮತ್ತು ಸಡಿಲವಾದ ಅರ್ಥದಲ್ಲಿ ಭಾರತದ ಜನಾಂಗಗಳನ್ನು ‘ಮತಗಳು’ ಎನ್ನುವ ಧಾರ್ಮಿಕ ಸಮುದಾಯದ ರೂಪದಲ್ಲಿ ಕೂಡಾ ವರ್ಗೀಕರಿಸಲಾಗಿದೆ. ಆಧುನಿಕ ಸಮಾಜಗಳ ಜನರು ಅನನ್ಯತೆಯನ್ನು ಬಳಸುವ ಕ್ರಮವು ಪ್ರಾಚೀನ ಸಮಾಜಗಳ ಜನರು ಅನನ್ಯತೆಗಳ ಜೊತೆಗೆ ಹೊಂದಿದ್ದ ಸಂಬಂಧಗಳಿಗಿಂತ ಭಿನ್ನ ಮತ್ತು ಸಂಕೀರ್ಣ. ಜನರು ತಮ್ಮನ್ನು ಒಂದು ಸ್ಥಳದಲ್ಲಿ, ಭಾಷೆಯಲ್ಲಿ, ಜಾತಿಯಲ್ಲಿ, ಮತಧರ್ಮದಲ್ಲಿ, ವೃತ್ತಿಯಲ್ಲಿ, ರಾಜಕೀಯ ಪಕ್ಷದಲ್ಲಿ, ದೇಶದಲ್ಲಿ ಗುರುತಿಸಿಕೊಳ್ಳುವುದು ಕೇವಲ ತಮ್ಮ ಕಾರಣಕ್ಕಾಗಿ ಅಲ್ಲ; ಅದು ಇನ್ನೊಬ್ಬರ ಜೊತೆಗೆ ತಮ್ಮನ್ನು ಹೋಲಿಸಿಕೊಂಡು ತಾವು ಅವರಿಗಿಂತ ಬೇರೆ ಮತ್ತು ವಿಶಿಷ್ಟ ಎಂದು ಅವರಿಗೆ ತಿಳಿಸಲು ಮಾಡುವ ಪ್ರಯತ್ನ ಕೂಡಾ ಹೌದು. ಹೀಗಾಗಿ ಅನನ್ಯತೆಯ ಸಂಕೇತಗಳು ಅವು ಸಂವಹನದ ಸಂಕೇತಗಳೂ ಆಗುತ್ತವೆ.

ಆದ್ದರಿಂದ ಯಾವುದೇ ಅನನ್ಯತೆಗೆ ಎರಡು ಆಯಾಮಗಳಿರುತ್ತವೆ: ಒಂದು ಸಮುದಾಯವನ್ನು ಒಟ್ಟುಮಾಡುವುದು ಮತ್ತು ಒಂದು ಸಮುದಾಯವನ್ನು ಇನ್ನೊಂದು ಸಮುದಾಯದಿಂದ ಪ್ರತ್ಯೇಕಿಸುವುದು. ಹಾಗಾಗಿ ಅನನ್ಯತೆಯ ಒಂದು ಮುಖ್ಯ ಗುಣವೇ ‘ಸಂವಹನ’. ಸಂವಹನಶೀಲತೆ ಇಲ್ಲದ ಪ್ರತ್ಯೇಕತೆಯು ‘ಅನನ್ಯತೆ’ ಯ ಪರಿಕಲ್ಪನೆಯ ವ್ಯಾಪ್ತಿಗೆ ಬರುವುದಿಲ್ಲ. ಪ್ರಾಚೀನ ಸಮಾಜಗಳ ಜನರು ಸಾಮಾನ್ಯವಾಗಿ ಪರಿಮಿತ ಪರಿಸರದಲ್ಲಿ ವ್ಯವಹರಿಸುತ್ತಾ ಇದ್ದರು. ಆದ್ದರಿಂದ ಅವರು ಒಂದು ಅನನ್ಯತೆಯನ್ನೇ ಬಲವಾಗಿ ನೆಚ್ಚಿಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದರು. ಆಧುನಿಕ ಸಮಾಜಗಳ ಜನರು ಬೇರೆ ಬೇರೆ ಪರಿಸರಗಳಲ್ಲಿ ವ್ಯವಹರಿಸುತ್ತಾರೆ, ಸಂವಹನ ನಡೆಸುತ್ತಾರೆ. ಇವರಿಗೆ ಇವರ ಉದ್ದೇಶಗಳ ಈಡೇರಿಕೆಗೆ ಒಂದೇ ಅನನ್ಯತೆ ಸಾಕಾಗುವುದಿಲ್ಲ. ಇದಕ್ಕಾಗಿ ಇವರು ಅನೇಕ ಅನನ್ಯತೆಗಳನ್ನು ವ್ಯಾವಹಾರಿಕ ಜಾಣ್ಮೆಯಿಂದ ಬಳಸುತ್ತಿರುತ್ತಾರೆ. ಭಾಷೆ , ಜಾತಿ, ಮತ, ಪ್ರದೇಶ,ವೃತ್ತಿ, ಪಕ್ಷ ಇವುಗಳನ್ನು ನೆಲೆಯಾಗಿ ಉಳ್ಳ ಅನನ್ಯತೆಗಳನ್ನು ಹೊಂದಿದ್ದು, ಅವುಗಳನ್ನು ತಮ್ಮ ಉದ್ದೇಶಗಳಿಗೆ ಆಯ್ಕೆಮಾಡಿಕೊಂಡು ಬಳಸುತ್ತಿರುತ್ತಾರೆ. ಅನನ್ಯತೆಯ ಪರಿಕಲ್ಪನೆಯಲ್ಲಿ ‘ಭಾಷೆ’ ಎನ್ನುವುದು ಪ್ರಾಥಮಿಕವಾದುದು, ನಿರಂತರವಾದುದು ಮತ್ತು ಇತರ ಎಲ್ಲ ಅನನ್ಯತೆಗಳ ಸಂವಹನ ಮಾಧ್ಯಮವಾಗಿ ಮುಖ್ಯವಾದುದು. ಅದು ಸ್ಥಳ, ಜನಾಂಗ ಮತ್ತು ಪರಿಸರ ಎಂಬ ಮೂರು ಪರಿಮಾಣಗಳ ನಿರ್ಮಾಣವಾಗಿರುತ್ತದೆ.

ಭಾಷೆಯ ಮೂಲಕವೇ ಆಲೋಚನೆ ರೂಪು ತಾಳಿ, ಮೊಟ್ಟೆ ಒಡೆದು ಮರಿಯಾಗುವಂತೆ ವ್ಯಕ್ತಿತ್ವವು ಸಾರ್ವಜನಿಕವಾಗುತ್ತದೆ. ಆದ್ದರಿಂದಲೇ ಭಾಷೆಯ ಅನನ್ಯತೆಯನ್ನು ಹೊರತುಪಡಿಸಿ, ಉಳಿದ ಅನನ್ಯತೆಗಳಿಗೆ ಅಸ್ತಿತ್ವ ಇರುವುದಿಲ್ಲ. ಮನುಷ್ಯರ ಜೀವನವಿಧಾನವನ್ನು ‘ಸಂಸ್ಕೃತಿ’ ಎಂಬ ಪದಪುಂಜದಲ್ಲಿ ಕಟ್ಟಿಕೊಡುವಾಗ, ಅದು ಸಂವಹನಕ್ಕೆ ಸಿದ್ಧವಾಗುವುದು ಭಾಷೆಯ ಮೂಲಕವೇ. ಹಾಗಾಗಿ ‘ಭಾಷೆಯ ಅನನ್ಯತೆ’ಯು ಒಂದು ಸಾಂಸ್ಕೃತಿಕ ಮತ್ತು ರಾಜಕೀಯ ಪರಿಕರವಾಗಿ ರೂಪಿತವಾಗಿದೆ. ‘ತುಳು’ ಎನ್ನುವ ಹೆಸರಿನ ಭಾಷೆಯು ಭಾರತದ ಪಶ್ಚಿಮ ಕರಾವಳಿಯಲ್ಲಿನ ಐತಿಹಾಸಿಕವಾಗಿ ‘ತುಳುನಾಡು/ತುಳು ದೇಶ/ ತುಳುವ’ದಲ್ಲಿನ ಜನರ ಆಡುಭಾಷೆ. ತುಳುನಾಡು/ತುಳು ದೇಶದ ಉಲ್ಲೇಖ ಸುಮಾರು ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ತುಳು ಭಾಷೆಯ ಬಗ್ಗೆ ಸಂಶೋಧನೆ ನಡೆಸಿದ ಭಾಷಾವಿಜ್ಞಾನಿಗಳು ಅದು ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆ ಎಂದೂ ಅದು ಮೂಲದ್ರಾವಿಡದಿಂದ ಆರಂಭದಲ್ಲೇ ಪ್ರತ್ಯೇಕವಾಗಿ ಕವಲೊಡೆದ ಭಾಷೆಯೆಂದೂ ತೀರ್ಮಾನಿಸಿದ್ದಾರೆ.

ರಶ್ಯನ್ ಭಾಷಾವಿಜ್ಞಾನಿ ಎಂ.ಎಸ್ ಆಂಡ್ರೋನೋವ್ ಅವರ ಪ್ರಕಾರ ತುಳು ಭಾಷೆಯು ಮೂಲದ್ರಾವಿಡದಿಂದ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಸ್ವತಂತ್ರ ಭಾಷೆಯಾಗಿ ಪ್ರತ್ಯೇಕವಾಯಿತು. (ಎಂ.ಎಸ್.ಆಂಡ್ರೋನೋವ್ : ದ್ರಾವಿಡಿಯನ್ ಲ್ಯಾಂಗ್ವೇಜಸ್, 1970). ದ್ರಾವಿಡ ಭಾಷಾ ವಿಜ್ಞಾನಿ ಪಿ.ಎಸ್. ಸುಬ್ರಹ್ಮಣ್ಯಂ ಅವರು ತುಳುವನ್ನು ದಕ್ಷಿಣ ದ್ರಾವಿಡದ ಒಂದು ಪ್ರಾಚೀನ ಭಾಷೆ ಎಂದೂ ಅದು ಕನ್ನಡ ತಮಿಳು ಭಾಷೆಗಳಿಗಿಂತ ಭಿನ್ನವಾಗಿ ಹೆಚ್ಚು ಬದಲಾವಣೆಗೆ ಒಳಗಾಗದ ಭಾಷೆ ಎಂದೂ ಹೇಳಿ ಅದರ ಪ್ರಾಚೀನತೆಯನ್ನು ಸುಮಾರು ಎರಡು ಸಾವಿರ ವರ್ಷ ಎಂದು ಅಭಿಪ್ರಾಯ ಪಟ್ಟಿದ್ದಾರೆ. ( ಪಿ.ಎಸ್.ಸುಬ್ರಹ್ಮಣ್ಯಂ: ದಿ ಪೊಸಿಷನ್ ಆಫ್ ತುಳು ಇನ್ ದ್ರಾವಿಡಿಯನ್, 1968). ತುಳುನಾಡಿನ ವ್ಯಾಪ್ತಿ ಮತ್ತು ತುಳು ಭಾಷೆಯ ಪ್ರಾದೇಶಿಕ ಮೇರೆಗಳ ಬಗ್ಗೆ ಇತಿಹಾಸಕಾರು ಭಿನ್ನ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ (ವಸಂತ ಶೆಟ್ಟಿ, ಜಗದೀಶ ಶೆಟ್ಟಿ, ಮೋಹನಕೃಷ್ಣ ರೈ : ತುಳು ಸಾಹಿತ್ಯ ಚರಿತ್ರೆ , 2007). ಪ್ರಾಚೀನ ತುಳುನಾಡಿನ ಗಡಿರೇಖೆಗಳು ಮತ್ತು ತುಳುಭಾಷೆಯ ವ್ಯಾಪ್ತಿಯ ಪ್ರದೇಶ ಕಾಲಕಾಲಕ್ಕೆ ಬದಲಾದ ಉಲ್ಲೇಖಗಳು ದೊರೆಯುತ್ತವೆ.

ತುಳು ಭಾಷೆಯ ಪಶ್ಚಿಮದ ಮೇರೆ -ಅರಬಿ ಸಮುದ್ರ, ಪೂರ್ವದ ಗಡಿ- ಪಶ್ಚಿಮ ಘಟ್ಟಗಳು. ದಕ್ಷಿಣದಲ್ಲಿ ಚಂದ್ರಗಿರಿ ಹೊಳೆಯ ದಕ್ಷಿಣಕ್ಕೂ, ಉತ್ತರದಲ್ಲಿ ಸುವರ್ಣ ಹೊಳೆಯ ಉತ್ತರಕ್ಕೂ ತುಳು ಭಾಷೆಯ ಪ್ರಾದೇಶಿಕ ವ್ಯಾಪ್ತಿಯ ಉಲ್ಲೇಖಗಳು ವೌಖಿಕ ಆಕರಗಳಲ್ಲಿ ದೊರೆಯುತ್ತವೆ. ಆದರೆ ತುಳು ಭಾಷೆಯ ಪ್ರಾದೇಶಿಕ ಅನನ್ಯತೆಗೆ ಮುಖ್ಯವಾದುವು ನೈಸರ್ಗಿಕ ಮೇರೆಗಳಾದ ಅರಬಿ ಸಮುದ್ರ, ಪಶ್ಚಿಮ ಘಟ್ಟಗಳು ಮತ್ತು ಸಮುದ್ರ ಸೇರುವ ನದಿಗಳು. ಈ ಭದ್ರವಾದ ಪ್ರಾಕೃತಿಕ ಗೋಡೆಗಳ ಕಾರಣದಿಂದಲೇ ತುಳು ಭಾಷೆಯು ಬಹಳ ಕಾಲ ಹೊರಗಿನ ಸಂಪರ್ಕಕ್ಕೆ ಹೆಚ್ಚು ಒಳಗಾಗದೆ ತನ್ನ ಭಾಷಿಕ ಅನನ್ಯತೆಯನ್ನು ಉಳಿಸಿಕೊಂಡು ಬಂದಿತ್ತು. ಹೀಗೆ ಸುಮಾರು ಎರಡು ಸಾವಿರ ವರ್ಷಗಳ ಹಿಂದಿನಿಂದ ಈ ತುಳು ಭಾಷೆಯನ್ನು ಮಾತಾಡುತ್ತಿದ್ದವರು ಯಾರು, ಅದು ಯಾರ ಅನನ್ಯತೆಯ ಭಾಷೆ ಆಗಿತ್ತು ಎನ್ನುವುದಕ್ಕೆ ನಮಗೆ ಯಾವ ಪುರಾವೆಗಳೂ ಸಿಗುವುದಿಲ್ಲ. ಬಹುತೇಕ ಕಾಡು ಗುಡ್ಡೆಗಳಿಂದ ತುಂಬಿದ ಈ ಅಗಲಕಿರಿದಾದ ನಾಡಿನಲ್ಲಿ ಹೊರಜಗತ್ತಿನ ಯಾವ ಸಂಪರ್ಕವೂ ಇಲ್ಲದ ಕಾಲದಲ್ಲಿ ವಾಸಿಸುತ್ತಿದ್ದ ಜನರು ‘ತುಳು’ ಎಂದು ಈಗ ನಾವು ಕರೆಯುವ ಈ ಭಾಷೆಯನ್ನು ಮಾತನಾಡುತ್ತಿದ್ದಿರಬೇಕು. ಈಗ ನಮಗೆ ದೊರೆತಿರುವ ದಾಖಲೆಗಳ ಪ್ರಕಾರ ತುಳು ಭಾಷೆಯಲ್ಲಿ ಇರುವ ಅನಂತಪುರದ ಶಾಸನ ಸುಮಾರು 15ನೆಯ ಶತಮಾನದ್ದು. ತುಳುಲಿಪಿಯದ್ದು ಎನ್ನಲಾದ ತುಳು ಲಿಖಿತ ಕಾವ್ಯಗಳ ಕಾಲನಿರ್ಣಯ ಅಸ್ಪಷ್ಟ; ಅವು ಹದಿನೈದನೆಯ ಶತಮಾನಕ್ಕಿಂತ ಹೆಚ್ಚು ಪ್ರಾಚೀನ ಅಲ್ಲ. ಅಂದರೆ ಸುಮಾರು ಸಾವಿರದ ಐನೂರು ವರ್ಷಗಳ ಕಾಲ ತುಳುವನ್ನು ವೌಖಿಕ ಪರಂಪರೆಯಲ್ಲಿ ತಮ್ಮ ತಾಯಿನುಡಿ/ಆಡುಭಾಷೆಯಾಗಿ ಬಳಸುತ್ತಿದ್ದ ತುಳುವರಿಗೆ ಅದು ಒಂದೇ ಭಾಷೆ ಗೊತ್ತಿದ್ದದ್ದು ಮತ್ತು ಅದು ಅವರ ಏಕೈಕ ಅನನ್ಯತೆಯ ಭಾಷೆ ಆಗಿತ್ತು. ಈಗ ತುಳುವಿನಲ್ಲಿ ಸಾಕಷ್ಟು ಗ್ರಂಥಗಳು ಪ್ರಕಟ ಆಗಿದ್ದರೂ, ತುಳುವಿನ ನಿಜವಾದ ಅನನ್ಯತೆ ಈಗಲೂ ಇರುವುದು ವೌಖಿಕ ಪರಂಪರೆಯಲ್ಲಿ. ತುಳುವಿನಲ್ಲಿ ನಮಗೆ ದೊರೆಯುವ ವೌಖಿಕ ಸಾಹಿತ್ಯದ ಬಗ್ಗೆ ಪರಿಶೀಲಿಸುವಾಗ ಅಪಾರ ಪ್ರಮಾಣದಲ್ಲಿ ಅನನ್ಯವಾಗಿ ಕಾಣಿಸಿಕೊಳ್ಳುವುದು ಕಥನಕಾವ್ಯಗಳ ಸ್ವರೂಪದ ಪಾಡ್ದನಗಳು ಮತ್ತು ಸಂದಿಗಳು. ಇವುಗಳಲ್ಲಿ ಬಹುತೇಕ ಪಾಡ್ದನ/ಸಂದಿಗಳು ಭೂತ/ದೈವ ಆರಾಧನೆಗಳ ಸಂಬಂಧ ಇರುವ ಕಥನಕಾವ್ಯಗಳು. ಇವು ಭೂತ /ದೈವಗಳ ಹುಟ್ಟು , ಮಹಿಮೆ ಮತ್ತು ಪ್ರಸರಣಗಳ ಕಥಾನಕಗಳು. ಈ ಕಥಾನಕಗಳನ್ನು ಹೇಳುವವರು ಸಾಮಾನ್ಯವಾಗಿ ಅವುಗಳ ಆರಾಧನೆಗಳಲ್ಲಿ ನೇರವಾಗಿ ಪಾಲುಗೊಳ್ಳುವ ಪರವ, ಪಂಬದ ಮತ್ತು ನಲಿಕೆ ಜನಾಂಗದವರು. ಸಾಹಿತ್ಯಕ ಸಾಂಸ್ಕೃತಿಕ ಮತ್ತು ಸಾಮಾಜಿಕ ವೌಲ್ಯ ಉಳ್ಳ ಇಂತಹ ದೀರ್ಘ ತುಳು ಕಾವ್ಯಗಳನ್ನು ಕಟ್ಟಿದವರು ಯಾರು ಎನ್ನುವುದನ್ನು ಊಹಿಸಿದರೆ ಅದು ಇದೇ ಸಮುದಾಯದ ಪರವ, ಪಂಬದ, ನಲಿಕೆ ಜನಾಂಗದವರಿಂದಲೇ ಖಂಡಿತ ಆಗಿರಬೇಕು. ಹಾಗಾಗಿ ತುಳು ಸಾಹಿತ್ಯದ ಅನನ್ಯತೆಯನ್ನು ಗುರುತಿಸುವಾಗ ತುಳುನಾಡಿನ ಆದಿವಾಸಿಗಳು ಆಗಿರಬಹುದಾದ ಈ ಸಮುದಾಯದವರೇ ಪ್ರವರ್ತಕ ಕವಿಗಳು ಕವಯಿತ್ರಿಯರು ಆಗುತ್ತಾರೆ.

ತುಳುನಾಡಿನಲ್ಲಿ ತುಳು ಒಂದೇ ಭಾಷೆ ಇದ್ದ ಆ ಕಾಲದಲ್ಲಿ ಅವರಿಗೆ ತಮ್ಮ ಸಮಸ್ತ ಚಿಂತನೆಗಳನ್ನು ಸಂವಹನಮಾಡುವ ಏಕೈಕ ಮಾಧ್ಯಮವಾಗಿ ಪಾಡ್ದನ/ಸಂದಿಗಳು ನಿರ್ಮಾಣಗೊಂಡು ಬಳಕೆಯಾಗಿರಬೇಕು. ಈ ಆದಿವಾಸಿ ಸಂಸ್ಕೃತಿಯ ಜೊತೆಗೆ ತುಳುನಾಡಿನಲ್ಲಿ ಕೃಷಿ ಸಂಸ್ಕೃತಿ ಆರಂಭವಾದ ಕಾಲಘಟ್ಟದಲ್ಲಿ ಕೃಷಿಸಂಬಂಧಿಯಾದ ವೌಖಿಕ ಸಾಹಿತ್ಯ ತುಳುವಿನಲ್ಲಿ ಸೃಷ್ಟಿಯಾಗಿರಬೇಕು. ಇಂತಹ ಕೃಷಿಸಂಬಂಧಿ ತುಳು ಸಾಹಿತ್ಯದಲ್ಲಿ ಭತ್ತದ ಕೃಷಿ ಕೆಲಸದ ವೇಳೆಗೆ ಹೆಂಗಸರು ಹಾಡುವ ‘ಕಬಿತಗಳು’ ಮುಖ್ಯವಾಗುತ್ತವೆ. ‘ತುಳು ಕಬಿತಗಳು’ ದುಡಿಯುವ ಹೆಣ್ಣುಮಕ್ಕಳ ಅನನ್ಯತೆಯ ಉತ್ಪನ್ನಗಳು. ಅವುಗಳ ಕವಯಿತ್ರಿಯರು ಅವರೇ, ಗಾಯಕಿಯರೂ ಅವರೇ, ಅವುಗಳಿಗೆ ಕ್ರಿಯಾತ್ಮಕವಾಗಿ ಸ್ಪಂದಿಸುವವರೂ ಅದೇ ಹೆಣ್ಣುಮಕ್ಕಳು. ‘ರಾವೋ ರಾವು ಕೊರೊಂಗೊ, ರಾವಂದೇನ್ ದಾನ್ ಬೇ’ (ಹಾರು ಹಾರು ಕೊಕ್ಕರೆಯೇ, ಹಾರದೆ ನಾನೇನು ಮಾಡಲಿ?) ಎನ್ನುವ ಪಲ್ಲವಿಯ ತುಳು ಕಬಿತವು ಹೆಣ್ಣಿನ ಬಿಡುಗಡೆಯ ಆಶಯವನ್ನು ಧ್ವನಿಸುತ್ತದೆ. ಹೆಣ್ಣುಮಕ್ಕಳು ಸಾಮೂಹಿಕವಾಗಿ ಜಾತ್ರೆಗೆ ಹೊರಡುವ ಸಂಭ್ರಮ, ಭತ್ತದ ನೇಜಿ ನೆಡುವಾಗ ಗಂಡುಹೋರಿಯ ಸೌಂದರ್ಯದ ವರ್ಣನೆ, ಬಡತನದಲ್ಲೂ ಸುಖ ಕಾಣುವ ಅಲಂಕಾರದ ಚಿತ್ರಣ - ಹೀಗೆ ತುಳು ಕಬಿತಗಳು ಹೆಣ್ಣಿನ ಅನನ್ಯತೆಯ ಬಹುರೂಪಗಳ ಅನಾವರಣ ಮಾಡುತ್ತವೆ.

ತುಳು ವೌಖಿಕ ಸಾಹಿತ್ಯದ ಇನ್ನೊಂದು ಬಗೆಯಾದ ‘ಅಜ್ಜಿಕತೆಗಳು’ ಒಂದು ಕಾಲಕ್ಕೆ ತುಳುನಾಡಿನ ಅಜ್ಜಿಯರ ಮತ್ತು ಮೊಮ್ಮಕ್ಕಳ ಸಂಬಂಧದ ಸಾಂಸ್ಕೃತಿಕ ಕೊಂಡಿಗಳಾಗಿದ್ದುವು. ವಯಸ್ಸಾದ ಅಜ್ಜಿಯರಿಗೆ ಮನೆಯಲ್ಲಿ ಕುಟುಂಬದಲ್ಲಿ ದೊರೆಯುತ್ತಿದ್ದ ಮನ್ನಣೆಗೆ ಕಾರಣ ಅವರಲ್ಲಿದ್ದ ಅಪಾರ ಕತೆಗಳ ಭಂಡಾರ. ಕುಟುಂಬದ ಒಳಗೆ ವ್ಯಕ್ತಿಗಳಿಗೆ ಅನನ್ಯತೆ ಸಿಗುವುದು ಅವರ ಇಂತಹ ವಿಶಿಷ್ಟ ಭಾಷಿಕ ಶಕ್ತಿಗಳಿಂದ. ತುಳುವಿನ ಅಜ್ಜಿಕತೆಗಳು ಹಳ್ಳಿಗರ ಬಡವರ ಪರವಾದ ಕಥನಗಳಾಗಿದ್ದುವು. ಅವುಗಳಲ್ಲಿ ರೈತನ ಮಗನೊಬ್ಬನು ಅಹಂಕಾರಿ ರಾಜನನ್ನು ತನ್ನ ಜಾಣತನದಿಂದ ಸೋಲಿಸಿ ಅವನ ಮೂಗನ್ನು ಒತ್ತೆಯಾಗಿ ತರುವ ಸಾಹಸಮಾಡುತ್ತಾನೆ. ಬಡವನ ಕಿರಿಯ ಮಗಳೊಬ್ಬಳು ತನ್ನ ಬುದ್ಧಿವಂತಿಕೆಯಿಂದ ಊರಿನ ಶ್ರೀಮಂತನ ಸೊಕ್ಕು ಮುರಿಯುತ್ತಾಳೆ. ಇಂತಹ ಸಂಗತಿಗಳು ಅನೇಕ ಸಿಗುತ್ತವೆ. ಇಂತಹ ಅಜ್ಜಿಕತೆಗಳನ್ನು ಕಟ್ಟಿದ ಹಳ್ಳಿಯ ಹೆಂಗಸರು ತಮ್ಮ ಬದುಕಿನ ವಸ್ತುಪ್ರತಿರೂಪವನ್ನು ಇವುಗಳಲ್ಲಿ ಬಿಂಬಿಸುತ್ತಾರೆ. ತುಳುವಿನಂತಹ ಭಾಷೆಯೊಂದು ವೌಖಿಕರೂಪದಿಂದ ಲಿಖಿತ ಹಂತಕ್ಕೆ ಬರುವುದು ಸಾಮಾಜಿಕ ಸಂದರ್ಭಗಳ ಒತ್ತಡದಿಂದ. ತುಳು ಭಾಷಿಕರ ಸಂಸ್ಕೃತೀಕರಣ ಮತ್ತು ಆಧುನಿಕೀಕರಣ ಪ್ರಕ್ರಿಯೆಗಳಿಗೂ ತುಳು ಭಾಷೆಯು ವೌಖಿಕದಿಂದ ಲಿಖಿತಕ್ಕೆ ಹೊರಳುವುದಕ್ಕೂ ಸಂಬಂಧವಿದೆ. ಸಂಸ್ಕೃತೀಕರಣ ಪ್ರಕ್ರಿಯೆಯಲ್ಲಿ ತುಳು ಬ್ರಾಹ್ಮಣರ ಪಾತ್ರವೂ ಆಧುನಿಕೀಕರಣದಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರವೂ ಮುಖ್ಯವಾಗಿ ಗೋಚರಿಸುತ್ತದೆ. ಉಡುಪಿ ಮಠದ ಸ್ವಾಮಿಯಾಗಿದ್ದ ವಾದಿರಾಜರು (15ನೆ ಶತಮಾನ) ಸಂಸ್ಕೃತದಲ್ಲಿ ಸಾಕಷ್ಟು ಗ್ರಂಥಗಳನ್ನು ರಚಿಸಿದ್ದವರು ತುಳುವಿನಲ್ಲಿ ವಿಷ್ಣುವಿನ ದಶಾವತಾರವನ್ನು ಕುರಿತು ಭಕ್ತಿಗೀತೆಯನ್ನು ರಚಿಸಿದ ಉಲ್ಲೇಖ ಸಿಗುತ್ತದೆ.

ತುಳು ಮನೆಮಾತಿನ ಉಡುಪಿ ಪರಿಸರದ ಶೂದ್ರರನ್ನು ಮಧ್ವಮತಕ್ಕೆ ಸೇರಿಸಲು ತುಳುವಿನ ಮೂಲಕವೇ ಮಧ್ವ ಭಕ್ತಿಯನ್ನು ಸಾರಬೇಕು ಎನ್ನುವುದನ್ನು ವಾದಿರಾಜ ಸ್ವಾಮಿಗಳು ಮನಗಂಡ ಹಾಗೆ ಕಾಣಿಸುತ್ತದೆ.ಇದರ ಫಲವಾಗಿ ತುಳುವನ್ನು ಮಾತೃಭಾಷೆಯಾಗಿ ಸ್ವೀಕರಿಸಿದ ಮಾಧ್ವ ಮತ ಅನುಯಾಯಿಗಳಾದ ಉಡುಪಿ ಮೂಲದ ಶಿವಳ್ಳಿ ಬ್ರಾಹ್ಮಣರು ಪೂಜಾವೃತ್ತಿಯನ್ನು ಕೈಗೊಂಡು ತುಳುನಾಡಿನ ಹಳ್ಳಿಹಳ್ಳಿಗಳಲ್ಲಿ ನೆಲೆವೂರಿದರು. ಉಡುಪಿಯಿಂದ ದಕ್ಷಿಣಾಭಿಮುಖವಾಗಿ ಚಲಿಸಿದ ಅವರು ಈಗಿನ ಕೇರಳದ ಕರಾವಳಿಯ ಬಹುತೇಕ ದೇವಾಲಯಗಳಲ್ಲಿ ಅರ್ಚಕರಾಗಿ ವಾಸ್ತವ್ಯ ಹೂಡಿದರು. ಅಲ್ಲಿ ಮಲಯಾಳ ಭಾಷೆಯನ್ನೂ ಕಲಿತು ತುಳು-ಮಲೆಯಾಳಗಳ ಸಮ್ಮಿಶ್ರದ ಹಳೆಯ ಲಿಪಿಯೊಂದನ್ನು ರೂಪಿಸಿ, ಸಂಸ್ಕೃತಭೂಯಿಷ್ಠ ತುಳುಭಾಷೆಯೊಂದನ್ನು ಅಭಿಜಾತ ಭಾಷೆಯ ರೂಪದಲ್ಲಿ ತುಳು ಕಾವ್ಯಗಳ ರಚನೆಗೆ ಬಳಸಿಕೊಂಡರು. ಈ ಮಾದರಿಯಲ್ಲಿ ಬಂದ ಕಾವ್ಯಗಳು ಶ್ರೀ ಭಾಗವತೋ, ದೇವಿ ಮಹಾತ್ಮೆ, ಕಾವೇರಿ, ಮಹಾಭಾರತೋ, ರಾಮಾಯಣ ಮುಂತಾದವು. ಆದರೆ ಇವು ಬೆಳಕಿಗೆ ಬಂದದ್ದು ಕಳೆದ ಮೂರು ದಶಕಗಳಲ್ಲಿ ಸುಮಾರು 400 ವರ್ಷಗಳ ಬಳಿಕ. ಅಂದರೆ ಬ್ರಾಹ್ಮಣ ತುಳುವಿನಲ್ಲಿದ್ದ ಶಾಸ್ತ್ರೀಯ ಶೈಲಿಯ ಈ ಕಾವ್ಯಗಳು ಜನಸಾಮಾನ್ಯ ತುಳುವರ ಗಮನಕ್ಕೆ ಬಂದಿರಲಿಲ್ಲ. ಅವುಗಳ ಪ್ರಕಟನೆಯ ಬಳಿಕವೂ ಅವು ವಿದ್ವಾಂಸರ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿವೆ. ತುಳುಭಾಷೆಗೆ ಲಿಖಿತ ಪರಂಪರೆಯ ದಾಖಲೆ ಇದೆ ಮತ್ತು ತುಳುವಿಗೆ ಒಂದು ಲಿಪಿ ಇದೆ ಎನ್ನುವ ಸಾಕ್ಷಿಯ ಹೊರತು ಈ ಕಾವ್ಯಗಳು ತುಳುವರ ಅನನ್ಯತೆಯ ಭಾಗವಾಗಿಲ್ಲ. ನಿಜವಾದ ಅರ್ಥದಲ್ಲಿ ತುಳು ಲಿಖಿತ ಭಾಷೆ ಆದದ್ದು ಮಂಗಳೂರಿಗೆ ಬಾಸೆಲ್ ಮಿಷನರಿಗಳು 1834ರಲ್ಲಿ ಬಂದ ಬಳಿಕ. ಕ್ರೈಸ್ತ ಮತ ಪ್ರಚಾರಕ್ಕೆ ಬಂದ ಮಿಷನರಿಗಳು ಹೆಚ್ಚಿನ ಪ್ರಮಾಣದಲ್ಲಿ ಮತಾಂತರ ಮಾಡಿದ್ದು ಸ್ಥಳೀಯ ತುಳು ಸಮುದಾಯದ ಬಿಲ್ಲವರನ್ನು ಮತ್ತು ಸ್ವಲ್ಪ ಮಟ್ಟಿಗೆ ತುಳುವರಾದ ಬಂಟರು, ಮೊಗವೀರರು ಮುಂತಾದ ಶೂದ್ರರನ್ನು. ಕ್ರೈಸ್ತ ಮತಕ್ಕೆ ಮತಾಂತರ ಮಾಡಬೇಕಾಗಿ ಬಂದಾಗ ಮಿಷನರಿಗಳು ತುಳುವನ್ನು ಕಲಿಯುವುದು ಅನಿವಾರ್ಯವೆಂದು ಮನಗಂಡರು ಮತ್ತು ಬೈಬಲ್ ಸಹಿತ ಕ್ರೈಸ್ತ ಧಾರ್ಮಿಕ ಗ್ರಂಥಗಳನ್ನು ತುಳುವಿಗೆ ಅನುವಾದ ಮಾಡಿದರು. ಇಲ್ಲಿ ಆಧುನಿಕೀಕರಣದ ಮತ್ತು ವಸಾಹತುಶಾಹಿಯ ಪ್ರಕ್ರಿಯೆಗಳು ಒಟ್ಟುಸೇರಿದವು.

ಮಂಗಳೂರಿಗೆ ಮುದ್ರಣ ಯಂತ್ರವನ್ನು 1841ರಲ್ಲಿ ತಂದ ಮಿಷನರಿಗಳು ಕ್ರೈಸ್ತ ಸಾಹಿತ್ಯದ ತುಳು ಅನುವಾದದಲ್ಲಿ ಮೊದಲು ಪರಿಹರಿಸಿಕೊಂಡ ಸಮಸ್ಯೆಯೇ ಲಿಪಿಯದ್ದು. ಬ್ರಾಹ್ಮಣರು ಮತ್ತು ಸಾರಸ್ವತರು ಕನ್ನಡ ಭಾಷೆಯನ್ನ್ನು ಬಳಸುತ್ತಿದ್ದರು. ತುಳುನಾಡಿನ ಎಲ್ಲ ಅರಸರ ಶಾಸನಗಳು ಕನ್ನಡದಲ್ಲಿ ಇದ್ದುವು. ಓಲೆಗರಿಗಳಲ್ಲಿ ಹಸ್ತಪ್ರತಿಗಳಲ್ಲಿ ದೊರೆಯುತ್ತಿದ್ದ ಎಲ್ಲ ಸಾಹಿತ್ಯ ಕನ್ನಡ ಭಾಷೆಯಲ್ಲಿ ಮತ್ತು ಕನ್ನಡ ಲಿಪಿಯಲ್ಲಿ ಇದ್ದುವು. ಆದ್ದರಿಂದ ತುಳುವನ್ನು ಮುದ್ರಿಸಲು ಮಿಷನರಿಗಳು ಕನ್ನಡ ಲಿಪಿಯನ್ನೇ ಬಳಸಿಕೊಂಡರು. ಧಾರ್ಮಿಕ ಸಾಹಿತ್ಯ ಕೃತಿಗಳ ತುಳು ಅನುವಾದಗಳ ಜೊತೆಗೆಯೇ ತುಳು ವ್ಯಾಕರಣ, ತುಳು-ಇಂಗ್ಲಿಷ್ ಮತ್ತು ಇಂಗ್ಲಿಷ್-ತುಳು ನಿಘಂಟು, ತುಳು ಪಠ್ಯ ಪುಸ್ತಕಗಳು, ತುಳು ಪಾಡ್ದನಗಳ ತುಳು ಗಾದೆಗಳ ಸಂಗ್ರಹ -ಈ ರೀತಿ ತುಳು ಗ್ರಂಥಗಳ ಪ್ರಕಟನೆೆ ದೊಡ್ಡ ಪ್ರಮಾಣದಲ್ಲಿ ಆಯಿತು. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಮತಾಂತರಗೊಂಡ ಪ್ರೊಟೆಸ್ಟೆಂಟರ ಧಾರ್ಮಿಕ ಭಾಷೆ ತುಳು ಆಗಬೇಕೇ ಅಥವಾ ಕನ್ನಡ ಆಗಬೇಕೇ ಎನ್ನುವ ಚರ್ಚೆ ನಡೆಯಿತು. ಕೊನೆಗೆ ಮಂಗಳೂರು ವ್ಯಾಪ್ತಿಯಲ್ಲಿ ಒಂದು ಕನ್ನಡ ಮತ್ತು ಒಂದು ತುಳು ಚರ್ಚ್ ಸ್ಥಾಪಿಸುವುದೆಂದು ನಿರ್ಧರಿಸಲಾಯಿತು. ಮತಾಂತರಗೊಂಡ ಶೂದ್ರ ಜಾತಿಯ ಬಿಲ್ಲವ, ಬಂಟ ಮತ್ತು ಮೊಗವೀರರಿಗೆ ಕನ್ನಡ ಬರುತ್ತಿರಲಿಲ್ಲವಾದ್ದರಿಂದ ಆಗ ಮಿಷನರಿಗಳಿಗೆ ತುಳು ಅಗತ್ಯವಾಗಿತ್ತು. ಮಂಗಳೂರು ಬಳಿಯ ಬೆಲ್ಮದ ಚರ್ಚ್‌ನಲ್ಲಿ ತುಳುವಿನಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಈಗ ಕಾಲ ಬದಲಾಗಿದೆ. ಪ್ರೊಟೆಸ್ಟೆಂಟರು ಬಹಳ ಮಂದಿ ಮನೆಯಲ್ಲಿ ಕನ್ನಡ ಮಾತಾಡುತ್ತಾರೆ. ಆದರೆ ತುಳು ವ್ಯಾವಹಾರಿಕ ಭಾಷೆಯಾಗಿ ಬಳಕೆಯಲ್ಲಿದೆ. ಕೆಲವು ಚರ್ಚ್ ಗಳಲ್ಲಿ ಕೆಲವೊಮ್ಮೆ ಮಾತ್ರ ತುಳುವಿನಲ್ಲಿ ಪ್ರಾರ್ಥನೆ ನಡೆಯುತ್ತಿದೆ. ತುಳು ಭಾಷೆಯನ್ನು ತುಳುಜನರ ಅನನ್ಯತೆಯ ಭಾಗವಾಗಿ ಕಟ್ಟಲು ಚಳವಳಿಯ ರೂಪದಲ್ಲಿ ಮೊದಲ ಪ್ರಯತ್ನ ನಡೆದದ್ದು ಉಡುಪಿಯ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರ ಮುಂದಾಳುತನದಲ್ಲಿ ಕಳೆದ ಶತಮಾನದ ಆರಂಭದಲ್ಲಿ. ರಾಷ್ಟ್ರೀಯ ಸ್ವಾತಂತ್ರ ಚಳವಳಿಯ ಭಾಗವಾಗಿ ಪಣಿಯಾಡಿಯವರು 1928ರಿಂದ ತುಳು ಚಳವಳಿಯನ್ನು ಆರಂಭಿಸಿದರು. ‘ತುಳುವ ಮಹಾಸಭೆ’ ಎಂಬ ಸಂಸ್ಥೆಯನ್ನು ಕಟ್ಟಿ ಪಣಿಯಾಡಿಯವರು ಅದರ ಮೂಲಕ ‘ತುಳುವ ಸಾಹಿತ್ಯ ಮಾಲೆ’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು. ಈ ‘ತುಳುವ ಸಾಹಿತ್ಯ ಮಾಲೆ’ಯ ಮೂಲಕ ಆ ಕಾಲದ ಪ್ರಮುಖ ಲೇಖಕರ ಒಂದು ತಂಡವನ್ನು ಕಟ್ಟಿ, ತುಳುವಿನಲ್ಲಿ ಎಲ್ಲ ಪ್ರಕಾರಗಳ ಹೊಸ ಕಾಲದ ಸಾಹಿತ್ಯ ಕೃತಿಗಳನ್ನು ನಿರ್ಮಾಣ ಮಾಡಿಸಿ ಪ್ರಕಟಿಸಿದರು.

ಆಧುನಿಕ ತುಳು ಸಾಹಿತ್ಯ ಚರಿತ್ರೆಯಲ್ಲಿ ಇದು ಬಹಳ ಮಹತ್ವದ ವಿದ್ಯಮಾನ. ಬಡಕಬೈಲ್ ಪರಮೇಶ್ವರಯ್ಯ: ತುಳು ಕಿಟ್ನರಾಜಿ ಪರ್ಸಂಗೊ (ಯಕ್ಷಗಾನ), ಪೊಳಲಿ ಶೀನಪ್ಪ ಹೆಗ್ಗಡೆ: ತುಳುವಾಲ ಬಲಿಯೇಂದ್ರೆ (ಜಾನಪದ) ಮತ್ತು ಮಿತ್ಯನಾರಾಯಣ ಕತೆ (ಕಾದಂಬರಿ), ಸತ್ಯಮಿತ್ರ ಬಂಗೇರ: ಅಳಿಯ ಸಂತಾನ ಕಟ್ಟ್ ದ ಗುಟ್ಟು ( ಸಂಶೋಧನೆ ), ಶ್ರೀನಿವಾಸ ಪಣಿಯಾಡಿ : ತುಳು ವ್ಯಾಕರಣ ಮತ್ತು ‘ಸತಿ ಕಮಲೆ’ ( ಕಾದಂಬರಿ), ಯನ್. ಎಸ್.ಕಿಲ್ಲೆ : ಕಾನಿಗೆ (ಕವನ ಸಂಕಲನ), ಮಾಧವ ತಿಂಗಳಾಯ:ಜನ ಮರ್ಲ್ (ನಾಟಕ ), ಎಂ. ವಿಠ್ಠಲ ಹೆಗ್ಡೆ : ಮದ್ ಮಾಳತ್ತ್ ಮದಿಮಾಯೆ’ (ನೀಳ್ಗತೆ) ಮುಂತಾದ ತುಳು ಗ್ರಂಥಗಳು ಇಂದಿಗೂ ತುಳು ಸಾಹಿತ್ಯದ ಅನನ್ಯ ರಚನೆಗಳು. ಈ ಗ್ರಂಥಗಳ ಪ್ರಕಟಣೆಗಾಗಿ ಪಣಿಯಾಡಿಯವರು ತುಳುನಾಡ್ ಪ್ರೆಸ್ ಆರಂಭಿಸಿದರು. ಗಾಂಧಿ ತತ್ವಗಳಿಂದ ಪ್ರೇರಿತರಾದ ಪಣಿಯಾಡಿಯವರು ತುಳು ಸಾಹಿತ್ಯ ರಚನೆಯನ್ನು ಸಾಮಾಜಿಕ ಕ್ರಾಂತಿಯ ಭಾಗವನ್ನಾಗಿ ಬಳಸಿಕೊಂಡರು. ಆದ್ದರಿಂದಲೇ ಆಗಿನ ಲೇಖಕರು ಬೇರೆ ಬೇರೆ ಸಮುದಾಯಗಳವರು ಆಗಿದ್ದರು ಮತ್ತು ಮೂಢನಂಬಿಕೆ ಹಾಗೂ ಸಂಪ್ರದಾಯಗಳ ವಿರುದ್ಧದ ಆಶಯಗಳು ಅವರ ಕೃತಿಗಳಲ್ಲಿ ಅಡಕವಾಗಿದ್ದವು. ತುಳುಭಾಷೆ ಆಡುವವರಿಗಾಗಿ ಪ್ರತ್ಯೇಕ ತುಳುನಾಡು ಬೇಕು ಎನ್ನುವ ಹೋರಾಟವನ್ನು ಮಾಡಿದ ಪಣಿಯಾಡಿಯವರು ಜನಬೆಂಬಲದ ಕೊರತೆಯಿಂದ ಅದರಲ್ಲಿ ಯಶಸ್ವಿ ಆಗಲಿಲ್ಲ. ಕೆಂಪಂಗಿಯ ಕ್ರಾಂತಿಕಾರಿಯಾಗಿದ್ದ ಪಣಿಯಾಡಿಯವರು ಸ್ಥಳೀಯ ಸಂಪ್ರದಾಯ ಶರಣರ ವಿರೋಧದಿಂದಾಗಿ ಚಿಕ್ಕಮಕ್ಕಳ ಜೊತೆಗೆ ಊರುಬಿಟ್ಟು ಮದ್ರಾಸ್ ಸೇರಿದರು. ಮಕ್ಕಳಾದ ಹರಿಣಿ, ಜವಾಹರ್ ಮತ್ತು ವಾದಿರಾಜ್ ಅವರನ್ನು ಅಲ್ಲಿ ಸಿನೆಮಾಕ್ಕೆ ಸೇರಿಸಿದರು. ನಾನು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷನಾಗಿ ಇದ್ದಾಗ 1997ರ ಜನವರಿಯಲ್ಲಿ ಮಂಗಳೂರಿನಲ್ಲಿ ಪಣಿಯಾಡಿ ಜನ್ಮ ಶತಮಾನೋತ್ಸವವನ್ನು ಆಚರಿಸಿದಾಗ ಪಣಿಯಾಡಿಯವರ ಮಕ್ಕಳು ಹರಿಣಿ, ವಾದಿರಾಜ್, ಜವಾಹರ್ ಭಾಗವಹಿಸಿ ಅಪ್ಪನ ನೆನಪುಗಳನ್ನು ಹಂಚಿಕೊಂಡರು.

ಆಧುನಿಕ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಭಾಗವಾಗಿರುವ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಜನರ ಭಾಷೆಯಾಗಿರುವ ತುಳುವು ರಾಜ್ಯದ ಭಾಷೆಯಾಗಿರುವ ಕನ್ನಡದ ಜೊತೆಗೆ ಇದ್ದುಕೊಂಡೇ ತನ್ನ ಅನನ್ಯತೆಯನ್ನು ಪ್ರಕಟಿಸುವ ಸವಾಲು ಇದೆ. ಭಾಷೆಯೊಂದು ಅನನ್ಯತೆಯ ರೂಪಕವಾಗಲು ಅನೇಕ ಆಯಾಮಗಳು ಬೇಕಾಗುತ್ತವೆ, ಅನೇಕ ನೆಲೆಗಳಲ್ಲಿ ಸ್ಥಾನ ನಿರ್ಮಾಣ ಆಗಬೇಕಾಗುತ್ತದೆ: ಆಡಳಿತ, ಶಿಕ್ಷಣ, ಸಾಹಿತ್ಯ, ಮಾಧ್ಯಮ ಮತ್ತು ಶಾಸನಾತ್ಮಕ ಸಂಸ್ಥೆಗಳ ರೂಪದಲ್ಲಿ. ಭಾರತದ ಸಂವಿಧಾನದಲ್ಲಿ ರಾಜ್ಯದ ಅಧಿಕೃತ ಭಾಷೆಯ ಜೊತೆಗೆ ಒಂದು ಅಥವಾ ಹೆಚ್ಚಿನ ಭಾಷೆಗಳನ್ನು ಎರಡನೆಯ ಅಧಿಕೃತ ಭಾಷೆಗಳನ್ನಾಗಿ ಶಾಸನ ಮಾಡುವ ಅಧಿಕಾರ ಆಯಾ ರಾಜ್ಯಗಳಿಗೆ ಇದೆ. ಬಿಹಾರದಲ್ಲಿ ಹಿಂದಿಯ ಜೊತೆಗೆ ಉರ್ದು, ಗುಜರಾತ್‌ನಲ್ಲಿ ಗುಜರಾತಿ ಜೊತೆಗೆ ಹಿಂದಿ, ಹರ್ಯಾಣದಲ್ಲಿ ಹಿಂದಿ ಜೊತೆಗೆ ಪಂಜಾಬಿ, ಉತ್ತರಪ್ರದೇಶದಲ್ಲಿ ಹಿಂದಿ ಜೊತೆಗೆ ಉರ್ದು ಎರಡನೆಯ ಅಧಿಕೃತ ಭಾಷೆಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಅಧಿಕೃತ ಭಾಷೆ ಬಂಗಾಳಿಯ ಜೊತೆಗೆ ಬೇರೆ ಬೇರೆ ಭಾಷೆಗಳನ್ನಾಡುವ ನಿರ್ದಿಷ್ಟ ಪ್ರದೇಶಗಳಲ್ಲಿ ನೇಪಾಳಿ, ಹಿಂದಿ, ಕುರುಖ್, ಉರ್ದು ಭಾಷೆಗಳನ್ನು ಎರಡನೆಯ ಅಧಿಕೃತ ಭಾಷೆಗಳೆಂದು ಮನ್ನಣೆ ನೀಡಲಾಗಿದೆ. ಇದೇ ಮಾದರಿ ಯಲ್ಲಿ ಕರ್ನಾಟಕದಲ್ಲಿ ತುಳುವನ್ನು ಎರಡನೆಯ ಅಧಿಕೃತ ಭಾಷೆಯಾಗಿ ಸ್ವೀಕರಿಸಬಹುದು. ಇದರಿಂದ ಕನ್ನಡದ ಅಧಿಕೃತತೆಗೆ ಯಾವುದೇ ಭಂಗ ಬರದಂತೆ ನೋಡಿಕೊಳ್ಳಬಹುದು. ಕರಾವಳಿಯ ತುಳುವರು ಕನ್ನಡ ಲಿಪಿಯಲ್ಲಿ ತುಳುವನ್ನು ಬರೆಯುತ್ತಾರೆ ಮತ್ತು ಓದುತ್ತಾರೆ. ಆದ್ದರಿಂದ ಕರಾವಳಿಯಲ್ಲಿ ಕನ್ನಡ ಓದುವವರ ಸಂಖ್ಯೆ ಹೆಚ್ಚಾಗುತ್ತಾ ಇದೆ. ತುಳು ಭಾಷೆಯ ಓದುಬರಹದಿಂದ ಇಂಗ್ಲಿಷ್ ಮೋಹ ಕಡಿಮೆ ಆಗಿದೆ , ಕನ್ನಡದ ಬಳಕೆ ಹೆಚ್ಚಾಗಿದೆ. ಕನ್ನಡ ಪತ್ರಿಕೆಗಳ ಪ್ರಸರಣ ಸಂಖ್ಯೆಗಳು ಇದನ್ನು ಸಮರ್ಥಿಸುತ್ತವೆ. ಶಿಕ್ಷಣದಲ್ಲಿ ತುಳುವಿನ ಅಳವಡಿಕೆಯ ಪ್ರಯತ್ನ ಬಾಸೆಲ್ ಮಿಷನ್ ಕಾಲಕ್ಕೆ ನಡೆದಿತ್ತು.

ಆದರೆ ಪ್ರೋತ್ಸಾಹ ಸಿಗದ ಕಾರಣ ವಿಫಲ ಆಗಿತ್ತು. ಮತ್ತೆ ಪ್ರಾಥಮಿಕ ಹಂತದಲ್ಲಿ ತುಳು ಸೇರ್ಪಡೆ ಆದದ್ದು 2010ರಲ್ಲಿ. ಆದರೆ ಅದಕ್ಕಿಂತ ಬಹಳ ಮೊದಲೇ ಸ್ನಾತಕೋತ್ತರ ಹಂತದಲ್ಲಿ ಶಿಕ್ಷಣದ ಭಾಗವಾಗಿ ತುಳು ಸೇರ್ಪಡೆಗೊಂಡದ್ದು ಐತಿಹಾಸಿಕ ಸಂಗತಿ. ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅಲ್ಲಿನ ಕನ್ನಡ ವಿಭಾಗದಲ್ಲಿ ನಾನು ಉಪನ್ಯಾಸಕನಾಗಿದ್ದೆ.ಆಗ ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ. ಹಾ. ಮಾ. ನಾಯಕ ಅವರು ಕನ್ನಡ ಎಂ.ಎ. ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿದ್ದರು. ಮಂಗಳೂರು ಕೇಂದ್ರದ ಕನ್ನಡ ವಿಭಾಗದ ಪಾಠಪಟ್ಟಿಯಲ್ಲಿ ತುಳುವ ಅಧ್ಯಯನವನ್ನು ಐಚ್ಛಿಕ ವಿಷಯವಾಗಿ ಸೇರಿಸುವ ಸೂಚನೆಯನ್ನು ಹಾ.ಮಾ. ನಾಯಕರು ನನಗೆ ಕೊಟ್ಟು, ಅದಕ್ಕೆ ಸಂಬಂಧಪಟ್ಟ ಪಾಠಪಟ್ಟಿಯನ್ನು ಸಿದ್ಧಪಡಿಸಲು ತಿಳಿಸಿದರು. ನಾನು ತುಳು ಭಾಷೆ, ಸಾಹಿತ್ಯ ಮತ್ತು ತುಳು ಜಾನಪದದ ಬಗ್ಗೆ ಪಾಠಪಟ್ಟಿ ಸಿದ್ಧಪಡಿಸಿ ಕೊಟ್ಟೆ. ಅದನ್ನು ಮೈಸೂರು ವಿವಿ ಅಂಗೀಕರಿಸಿ 1976 ರಲ್ಲಿ ಅದು ಅನುಷ್ಠಾನಕ್ಕೆ ಬಂತು. 1980ರಲ್ಲಿ ಮಂಗಳೂರು ವಿವಿ ಸ್ಥಾಪನೆ ಆದ ಮೇಲೆಯೂ ಅದು ಇಂದಿನವರೆಗೂ ಮುಂದುವರಿದಿದೆ. ಇಲ್ಲಿ ತುಳುವನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ಸಂಶೋಧಕರಾಗಿ ತುಳು ಸಂಬಂಧಿ ವಿಷಯಗಳಲ್ಲಿ ಪಿ.ಎಚ್.ಡಿ. ಮಾಡಿ ಪ್ರಾಧ್ಯಾಪಕರಾಗಿದ್ದಾರೆ. ತುಳು ಸಾಹಿತ್ಯ ಅಕಾಡಮಿಯ ಉಪಕ್ರಮದಿಂದ 2010ರಲ್ಲಿ ಆರಂಭವಾದ ಪ್ರಾಥಮಿಕ ಶಿಕ್ಷಣದಲ್ಲಿ ಮೂರನೆಯ ಭಾಷೆಯಾಗಿ ತುಳುವಿನ ಕಲಿಕೆ ಈಗ ಮುಂದುವರಿದಿದ್ದು ಪ್ರಸ್ತುತ 33 ಶಾಲೆಗಳಲ್ಲಿ ವಿದ್ಯಾರ್ಥಿಗಳು ತುಳುವನ್ನು ಮೂರನೆಯ ಭಾಷೆಯಾಗಿ ಕಲಿಯುವ ಅವಕಾಶ ಕಲ್ಪಿತವಾಗಿರುವುದರಿಂದ ಶಾಲೆಗಳಲ್ಲಿ ತುಳು ಮಾತಾಡುವುದು ಕೀಳರಿಮೆ ಎಂಬ ಭಾವನೆ ಇಲ್ಲವಾಗಿದೆ.

ಗ್ರಾಮೀಣ ಮಕ್ಕಳಿಗಂತೂ ಇದು ಮನ್ನಣೆಯ ಅಂಶ. ತುಳುವಿನಂತಹ ಒಂದು ಪ್ರಾದೇಶಿಕ ಭಾಷೆಗೆ ಸರಕಾರದ ಮನ್ನಣೆ ಸಿಗುವುದು ಭಾಷಿಕ ಅನನ್ಯತೆಯ ಮಹತ್ವದ ಸಂಗತಿ. 1994ರಲ್ಲಿ ತುಳುವರಾದ ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗ ತುಳು ಸಾಹಿತ್ಯ ಅಕಾಡಮಿಯನ್ನು ಸ್ಥಾಪಿಸಿ ತುಳುವಿಗೆ ರಾಜ್ಯ ಸರಕಾರದ ಅಧಿಕೃತ ಮನ್ನಣೆಯನ್ನು ಕೊಟ್ಟರು. ತುಳು ಸಾಹಿತ್ಯ ಅಕಾಡಮಿಯ ಮೊದಲ ಅಧ್ಯಕ್ಷನಾಗಿ ನನ್ನನ್ನು ನೇಮಕಮಾಡಿದಾಗ ನಾನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡವಿಭಾಗದಲ್ಲಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥನಾಗಿದ್ದೆ. ಹಗಲುಹೊತ್ತು ಕನ್ನಡ ಪಾಠಮಾಡಿ, ಸಂಜೆ ಮಂಗಳೂರಿಗೆ ಅಕಾಡಮಿ ಕಚೇರಿಗೆ ಬಂದು ತುಳುವಿನ ಕೆಲಸಮಾಡುವ ಸನ್ನಿವೇಶದಲ್ಲಿ ಕನ್ನಡ ಮತ್ತು ತುಳು ಅನನ್ಯತೆಗಳ ನಡುವೆ ಸಮನ್ವಯದ ದಾರಿಗಳನ್ನು ಕಂಡುಕೊಂಡೆ. ಕರ್ನಾಟಕದ ಒಳಗೆ ಇರುವ ತುಳು ಭಾಷೆಯು ಕನ್ನಡದಿಂದ ಕಲಿಯುವ ಮತ್ತು ಕನ್ನಡಕ್ಕೆ ಕೊಡುವ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದೆ. ‘ತುಳು ಸಾಹಿತ್ಯ ಅಕಾಡಮಿ’ ಎಂಬ ನುಡಿಗಟ್ಟಿನಲ್ಲಿ ಮುಖ್ಯ ಪರಿಕಲ್ಪನೆಗಳು ‘ಸಾಹಿತ್ಯ’ ಮತ್ತು ‘ಇಕಾಡೆಮಿಕ್’ ಎನ್ನುವುದು. ತುಳುವಿನಲ್ಲಿ ಅನನ್ಯವಾದ ಸಾಹಿತ್ಯರಚನೆಯನ್ನು ಯುವಪೀಳಿಗೆ ಮಾಡಬೇಕು ಎನ್ನುವ ಉದ್ದೇಶದಿಂದ ಕಾವ್ಯ ಕತೆ ಕಾದಂಬರಿ ನಾಟಕ ನಿರ್ಮಾಣದ ಕಮ್ಮಟಗಳನ್ನು ಯೋಜಿಸಿ, ಅವುಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತುಳುವಿನ ಗಣ್ಯ ಸಾಹಿತಿಗಳ ಜೊತೆಗೆ ಕನ್ನಡದ ಮುಖ್ಯ ಸಾಹಿತಿಗಳನ್ನು ಆಹ್ವಾನಿಸಿದೆ. ಕೆ. ಮರುಳಸಿದ್ಧಪ್ಪ, ಬಿ.ಸಿ. ರಾಮಚಂದ್ರ ಶರ್ಮಾ, ಸಿ. ಎನ್. ರಾಮಚಂದ್ರನ್, ಎಚ್.ಎಂ. ಚೆನ್ನಯ್ಯ, ಕೆ.ಟಿ. ಗಟ್ಟಿ, ಗಿರಡ್ಡಿ ಗೋವಿಂದರಾಜ, ಬಿ. ದಾಮೋದರ ರಾವ್, ಸದಾನಂದ ಸುವರ್ಣ, ಬೊಳುವಾರು ಮಹಮ್ಮದ್ ಕುಂಞಿ, ಎನ್. ಕೆ. ತಿಂಗಳಾಯ, ಕೆ. ಕುಶಾಲಪ್ಪ ಗೌಡ, ತಾಳ್ತಜೆ ವಸಂತಕುಮಾರ್, ನಾ. ದಾಮೋದರ ಶೆಟ್ಟಿ, ಐ.ಕೆ. ಬೊಳುವಾರು ಮುಂತಾದ ಲೇಖಕರು ಚಿಂತಕರು ಸಾಹಿತ್ಯ ರಚನೆಯ ಮಾರ್ಗದರ್ಶನ ಮಾಡಿದರು. ಪ್ರಧಾನವಾಗಿ ವೌಖಿಕ ಶಕ್ತಿಯ ತುಳು ಭಾಷೆಯಲ್ಲಿ ಆಫ್ರಿಕನ್ ಸಾಹಿತ್ಯ ಮಾದರಿಯ ಚಿನುವಾ ಅಚಿಬೆ, ವೊಲೆ ಸೊಯಿಂಕಾರವರ ರೀತಿಯ ಸಾಹಿತ್ಯ ಸೃಷ್ಟಿಯಾಗಬೇಕು ಎನ್ನುವುದು ನನ್ನ ಉದ್ದೇಶ ಆಗಿತ್ತು. ಅಕಾಡಮಿ ಆಡಳಿತದ ಕಾಲಮಿತಿಯಲ್ಲಿ ಅದು ಪೂರ್ಣ ಈಡೇರಲಿಲ್ಲ. ತುಳು ಭಾಷೆಯು ಕೇವಲ ಭಾವನಾತ್ಮಕ ಮಾತು ಮತ್ತು ಬರಹಕ್ಕೆ ಸೀಮಿತವಾಗಿ ಉಳಿಯದೆ, ಅದು ವೈಚಾರಿಕ ಸಾಹಿತ್ಯ ರಚನೆಗೆ ಪ್ರಯೋಗವಾಗಬೇಕು ಎನ್ನುವ ದೃಷ್ಟಿಯಿಂದ ದಲಿತ ಸಾಹಿತ್ಯದ ಮೂರು ಪುಸ್ತಕಗಳನ್ನು ಅಕಾಡಮಿಯಿಂದ ಪ್ರಕಟಿಸಿದೆ: ಮುಗೇರರು -ಜನಾಂಗ ಜಾನಪದ ಅಧ್ಯಯನ (ಡಾ. ಅಭಯಕುಮಾರ್ ); ಡಾ. ಬಾಬಾ ಸಾಹೇಬ ಅಂಬೇಡ್ಕರ್ (ಪಿ.ಡೀಕಯ್ಯ); ನಿಲೆ ತುಳು ದಲಿತ ಕಾದಂಬರಿ (ಮಾಧವ ಪೆರಾಜೆ). ಈ ರೀತಿಯ ದಲಿತ ಮತ್ತು ವೈಚಾರಿಕ ಸಾಹಿತ್ಯ ತುಳುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಚನೆಯಾಗಿ ಪ್ರಕಟವಾಗುವ ಅಗತ್ಯವಿದೆ.

ಅಂಬೇಡ್ಕರ್ ಅವರ ಮುಖ್ಯ ವಿಚಾರಧಾರೆಗಳನ್ನು ತುಳುವಿನಲ್ಲಿ ಪ್ರಕಟಿಸುವ ಮೂಲಕ ತುಳುವರ ವಿಚಾರವಂತಿಕೆ ಬೆಳೆಯಲು ಸಾಧ್ಯ. ನಾನು ತುಳು ಸಾಹಿತ್ಯ ಅಕಾಡಮಿಯ ಮೊದಲ ಅಧ್ಯಕ್ಷ ಆಗಿದ್ದ ಅವಧಿಯಲ್ಲಿ ( 1994-1998) ಸಾಹಿತ್ಯ ಅಕಾಡಮಿ ದಿಲ್ಲಿ ( ಜನಪ್ರಿಯವಾಗಿ ‘ಕೇಂದ್ರ ಸಾಹಿತ್ಯ ಅಕಾಡಮಿ’)ಯ ಸದಸ್ಯ ಕೂಡಾ ಆಗಿದ್ದೆ. ಆ ಅವಧಿಯಲ್ಲಿ (1993-1998) ಯು.ಆರ್. ಅನಂತಮೂರ್ತಿ ಅವರು ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಆಗಿದ್ದರು. ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷನಾಗಿ ಆಗ ನನ್ನ ಮೇಲೆ ಇದ್ದ ಒತ್ತಡವೆಂದರೆ ತುಳುವಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯ ಮನ್ನಣೆ ದೊರಕಿಸಿಕೊಡುವುದು. ಅಧ್ಯಕ್ಷರಾದ ಅನಂತಮೂರ್ತಿ ಅವರ ಜೊತೆಗಿನ ಆಪ್ತತೆಯಿಂದಾಗಿ ಅಕಾಡಮಿಯ ಮೊದಲ ಸರ್ವಸದಸ್ಯರ ಸಬೆಯಲ್ಲಿ ತುಳುವಿಗೆ ಅಕಾಡಮಿಯ ಮನ್ನಣೆ ಕೊಡುವ ವಿಚಾರ ಪ್ರಸ್ತಾವಿಸಿದೆ. ಅನಂತಮೂರ್ತಿಯವರು ಅಧ್ಯಕ್ಷ ಸ್ಥಾನದಿಂದ ಅದನ್ನು ಬೆಂಬಲಿಸಿ ಆ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಆದರೆ ಮೂರು ವರ್ಷ ಕಳೆದರೂ ಏನೂ ಬೆಳವಣಿಗೆ ಆಗಲಿಲ್ಲ. ಮುಂದಿನ ಸರ್ವ ಸದಸ್ಯರ ಸಭೆಯಲ್ಲಿ ಈ ವಿಷಯವನ್ನು ಮತ್ತೆ ಪ್ರಸ್ತಾವಿಸಿ ಸ್ವಲ್ಪ ಸಿಟ್ಟಿನ ಧ್ವನಿಯಲ್ಲಿ ಮಾತಾಡಿದೆ. ಅಧ್ಯಕ್ಷ ಸ್ಥಾನದಲ್ಲಿ ಇದ್ದ ಅನಂತಮೂರ್ತಿ ಅವರಿಗೂ ಸಿಟ್ಟು ಬಂದು ನನ್ನ ಮಾತಿನ ಬಗ್ಗೆ ಅಸಮಾಧಾನವನ್ನು ಪ್ರಕಟಿಸಿದರು. ಬಿಗುವಿನ ವಾತಾವರಣದಲ್ಲಿ ಸಭೆ ಮುಕ್ತಾಯವಾಯಿತು. ಬಳಿಕ ಊಟದ ವೇಳೆಗೆ ಅನಂತಮೂರ್ತಿ ನನ್ನ ಬಳಿಗೆ ಬಂದು ಕೈ ಹಿಡಿದುಕೊಂಡು ನನಗೆ ಸಾಂತ್ವನ ಹೇಳಿದರು.

ತುಳುವಿಗೆ ಏನಾದರೂ ಮಾಡೋಣ ಎಂದರು. ಮುಂದಿನ ಸಭೆೆಯಲ್ಲಿ ಅಕಾಡಮಿಯ ಇತಿಹಾಸದಲ್ಲಿ ಭಾಷಾ ಸಮ್ಮಾನ್ ಎನ್ನುವ ಹೊಸ ಪ್ರಶಸ್ತಿಯೊಂದನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಂಡರು. ತುಳುವಿನಲ್ಲಿ ಯಾವ ಹಿರಿಯ ಸಾಹಿತಿಗಳಿಗೆ ಕೊಡಬಹುದು ಎಂದು ನನ್ನ ಅಭಿಪ್ರಾಯ ಕೇಳಿದರು. ನನ್ನ ಸಲಹೆಯಂತೆ ಮಂದಾರ ಕೇಶವ ಭಟ್ ಮತ್ತು ಕೆದಂಬಾಡಿ ಜತ್ತಪ್ಪ ರೈ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಮೊದಲ ಭಾಷಾ ಸಮ್ಮಾನ್ 1996ರಲ್ಲಿ ದೊರೆಯಿತು. ಅನಂತಮೂರ್ತಿ ಅವರು ಮಂಗಳೂರಿಗೆ ಬಂದು ನಾವು ಜೊತೆಯಾಗಿ ಕುಡುಪಿವಿನಲ್ಲಿ ಮಂದಾರ ಕೇಶವ ಭಟ್ಟರ ಮನೆಗೆ (ಅವರು ಆಗ ನಿಧನ ಆಗಿದ್ದ ಕಾರಣ ಅವರ ಶ್ರೀಮತಿ ಪ್ರಶಸ್ತಿ ಸ್ವೀಕರಿಸಿದರು) ಮತ್ತು ವಿಟ್ಲದಲ್ಲಿ ಕೆದಂಬಾಡಿ ಜತ್ತಪ್ಪ ರೈ ಮನೆಗೆ ಹೋಗಿ ಭಾಷಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿದೆವು. ಇದು ತುಳುವಿಗೆ ದೊರೆತ ಮೊದಲ ರಾಷ್ಟ್ರೀಯ ಮನ್ನಣೆ. 1996ರ ಬಳಿಕ ತುಳುವಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಭಾಷಾ ಸಮ್ಮಾನ್ ಮತ್ತೆ ದೊರೆತದ್ದು ಈ ವರ್ಷ ಅಮೃತ ಸೋಮೇಶ್ವರರಿಗೆ. ತುಳು ಭಾಷೆಗೆ ಅನನ್ಯತೆ ಕೊಟ್ಟ ಇನ್ನೊಂದು ಮಹತ್ವದ ಕಾರ್ಯ ನಡೆದದ್ದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ. ಕು.ಶಿ. ಹರಿದಾಸ ಭಟ್ಟರ ದೂರದರ್ಶಿತ್ವದಿಂದ ಡಾ. ಯು.ಪಿ. ಉಪಾಧ್ಯಾಯರ ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧಗೊಂಡು ಪ್ರಕಟವಾದ ‘ತುಳು ನಿಘಂಟು’ವಿನ ಆರು ಬೃಹತ್ ಸಂಪುಟಗಳು (1988- 1997) ತುಳು -ಕನ್ನಡ -ಇಂಗ್ಲಿಷ್ ಅರ್ಥಗಳ ವಿಸ್ತಾರವಾದ ಕೋಶಗಳಾಗಿ ತುಳುವರಿಗೆ ಭಾಷಾ ಮನ್ನಣೆಯನ್ನು ತಂದುಕೊಟ್ಟಿವೆ ಮತ್ತು ಜಾಗತಿಕ ಮಟ್ಟದಲ್ಲಿ ವಿದ್ವಾಂಸರಿಗೆ ಉಪಯುಕ್ತ ಭಾಷಾ ಕೈಪಿಡಿಯಾಗಿವೆ.

ಕನ್ನಡ ವಿಶ್ವವಿದ್ಯಾನಿಲಯ ಹೊರತಂದ ‘ತುಳು ಸಾಹಿತ್ಯ ಚರಿತ್ರೆ’ (2007) ಎಂಬ ಬೃಹತ್ ಸಂಪುಟವು ತುಳುವಿನ ವಿಶ್ವಕೋಶದ ಮಾದರಿಯಲ್ಲಿ ಗಣನೀಯವಾದ ಗ್ರಂಥ. ತುಳು ಜನಪದ ಸಾಹಿತ್ಯವಾದ ಪಾಡ್ದನಗಳ ಇಂಗ್ಲಿಷ್ ಅನುವಾದಗಳು ತುಳುವಿಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿವೆ. ಮಾಚಾರು ಗೋಪಾಲ ನಾಯ್ಕರು ಹಾಡಿದ ಸಿರಿ ಸಂದಿಯ ಇಂಗ್ಲಿಷ್ ಅನುವಾದದ ಎರಡು ಸಂಪುಟಗಳು (1998) ಫಿನ್ ಲೆಂಡ್ ನಲ್ಲಿ ಪ್ರಕಟವಾಗಿ, ಮಹಾಕಾವ್ಯಗಳನ್ನು ಕಟ್ಟುವ ಗೋಪಾಲ ನಾಯ್ಕರ ದೇಸಿ ಚಿಂತನೆಯನ್ನು ಅಂತಾರಾಷ್ಟ್ರೀಯ ಸಂಕಿರಣಗಳನ್ನು ಚರ್ಚಿಸಲು ಮತ್ತು ಗುರುತಿಸಲು ಸಾಧ್ಯವಾಯಿತು. (ಸಂ:ಲೌರಿ ಹಾಂಕೋ, ಅನೇಲಿ ಹಾಂಕೋ, ಚಿನ್ನಪ್ಪ ಗೌಡ, ವಿವೇಕ ರೈ). ಜರ್ಮನಿಯ ಇಂಡಾಲಜಿ ಪ್ರಾಧ್ಯಾಪಕಿ ಹೈದ್ರೂನ್ ಬ್ರೂಕ್ನರ್ ಅವರ ಜರ್ಮನ್ ಭಾಷೆಯಲ್ಲಿ ಇರುವ ಪಿಎಚ್‌ಡಿ ಪ್ರಬಂಧದಲ್ಲಿ 24 ತುಳು ಪಾಡ್ದನಗಳ ಜರ್ಮನ್ ಭಾಷಾಂತರದ ಪಠ್ಯಗಳು ಪ್ರಕಟವಾಗಿದ್ದು (1995) ಜರ್ಮನ್ ಓದುಗರ ನಡುವೆ ತುಳುವಿಗೆ ಮನ್ನಣೆ ಸಿಕ್ಕಿದೆ. ’ಕೋಟಿ ಚೆನ್ನಯ’ ಪಾಡ್ದನದ ಇಂಗ್ಲಿಷ್ ಅನುವಾದ (ಎಸ್‌ಎನ್‌ಡಿ ಪೂಜಾರಿ, ದಾಮೋದರ ಕಲ್ಮಾಡಿ, 2007), 19ನೆ ಶತಮಾನದಲ್ಲಿ ಸಂಗ್ರಹವಾದ ಕಾಂತೇರಿ ಜುಮಾದಿ ಮತ್ತು ಮಲರಾಯಿ ಭೂತಗಳ ತುಳು ಪಾಡ್ದನಗಳ ಇಂಗ್ಲಿಷ್ ಅನುವಾದ ( ಹೈದ್ರೂನ್ ಬ್ರೂಕ್ನರ್ ಮತ್ತು ವಿವೇಕ ರೈ, 2015) -ಈ ಪ್ರಕಟಣೆಗಳ ಮೂಲಕ ತುಳು ವೌಖಿಕ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ಪರಿಚಿತವಾಗಿದೆ ಮತ್ತು ಸಾಂಸ್ಕೃತಿಕ ಅಧ್ಯಯನದ ಭಾಗವಾಗಿದೆ.

ಇತ್ತೀಚೆಗೆ ಬಿ. ಸುರೇಂದ್ರ ರಾವ್ ಮತ್ತು ಚಿನ್ನಪ್ಪ ಗೌಡ ಅವರು 114 ಆಧುನಿಕ ತುಳು ಕವನಗಳನ್ನು ಇಂಗ್ಲಿಷಿಗೆ ಅನುವಾದ ಮಾಡುವುದರ ಮೂಲಕ ಆಧುನಿಕ ತುಳು ಸಾಹಿತ್ಯ ಹೊರಜಗತ್ತಿಗೆ ಅನಾವರಣ ಆಗಿದೆ. (ಲೆಡ್ಲ್ ಇನ್ ಎ ಗೋಲ್ಡನ್ ಬೌಲ್, 2017). ಅಂತರ್ಜಾಲದ ಆಧುನಿಕ ಯುಗದಲ್ಲಿ ವೌಖಿಕ ಪರಂಪರೆಯ ತುಳು ತನ್ನ ಅಸ್ತಿತ್ವವನ್ನು ಸ್ಥಾಪಿಸುವುದರ ಮೂಲಕವೇ ತನ್ನ ಅನನ್ಯತೆಯನ್ನು ಬಹುರೂಪಿಯಾಗಿ ಪ್ರಕಟಿಸುವ ಅವಕಾಶಗಳು ತೆರೆದುಕೊಂಡಿವೆ. ತುಳು ಸಂಬಂಧಿಯಾದ ಗುಂಪುಗಳು ಸಾಕಷ್ಟು ಇವೆ. ಆದರೆ ಅವು ತುಳುವಿನ ಅನನ್ಯತೆಯನ್ನು ಪ್ರಕಟಿಸುವ ಸಾಧ್ಯತೆಗಳ ಗಂಭೀರ ಚಿಂತನೆ ಅಗತ್ಯ. ಡಾ.ಯು. ಬಿ. ಪವನಜ ಅವರ ಆಸಕ್ತಿ ಮತ್ತು ಮಾರ್ಗದರ್ಶನದಿಂದ ‘ತುಳು ವಿಕಿಪೀಡಿಯ’ 2016 ಆಗಸ್ಟ್‌ನಲ್ಲಿ ಜೀವ ತಾಳಿ ಕ್ರಿಯಾಶೀಲವಾಗಿದೆ. ಅದರ ಮುಂದುವರಿಕೆಯ ಕೆಲಸಕ್ಕೆ ಮತ್ತೆ ಈ ವರ್ಷ ಚಾಲನೆ ಸಿಕ್ಕಿದೆ. ಅಂತರ್ಜಾಲದಲ್ಲಿ ತುಳುವಿಗೆ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ತುಳುವನ್ನು ಕನ್ನಡ ಲಿಪಿಯಲ್ಲಿ ತುಳು ವಿಶಿಷ್ಟ ಧ್ವನಿಮಾಗಳಿಗೆ ಚಿಹ್ನೆಗಳನ್ನು ಕೊಟ್ಟು ಬರೆಯಲು ಅನುಕೂಲ ಆಗುವ ತಂತ್ರಾಂಶದ ಅಗತ್ಯ ಇದೆ. ಹಾಗೆಯೇ ತುಳುವನ್ನು ರೋಮನ್ ಲಿಪಿಯಲ್ಲಿ ತುಳು ಉಚ್ಚಾರಗಳಿಗೆ ಹೊಂದುವಂತೆ ಕೀ ಬೋರ್ಡ್ ಉಳ್ಳ ತಂತ್ರಾಂಶದ ನಿರ್ಮಾಣ ಜಾಗತಿಕ ಮಟ್ಟದಲ್ಲಿ ತುಳುವನ್ನು ಓದಲು ಬರೆಯಲು ಸಹಕಾರಿ ಆಗಬಲ್ಲುದು. ತುಳುವಿನ ಇರುವಿಕೆ ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಕಡಮೆಯಾಗುತ್ತಿದೆ.

ಕಳೆದ ಶತಮಾನದ ಅರುವತ್ತರ ದಶಕದಿಂದ ತೊಂಬತ್ತರ ದಶಕದವರೆಗೆ ಕ್ರಿಯಾಶೀಲವಾಗಿದ್ದ ತುಳು ಯಕ್ಷಗಾನ ಬಯಲಾಟಗಳು ಕಣ್ಮರೆಯಾಗಿವೆ. ಯಕ್ಷಗಾನ ಬಯಲಾಟದ ಡೇರೆ ಮೇಳಗಳು ಮುಚ್ಚಿ, ಈಗ ಹರಕೆ ಮೇಳಗಳು ಮಾತ್ರ ಉಳಿದುಕೊಂಡಿರುವುದರಿಂದ ಬಯಲಾಟಗಳಲ್ಲಿ ತುಳು ಪ್ರಸಂಗಗಳು ಪ್ರದರ್ಶನಗೊಳ್ಳುತ್ತಿಲ್ಲ. ದೇವರುಗಳಿಂದ ತುಳುವನ್ನು ದೂರಮಾಡಿರುವುದು ವಿಪರ್ಯಾಸದ ಸಂಗತಿ. ತುಳು ನಾಟಕಗಳು ಜನಪ್ರಿಯ ಆಗಿದ್ದರೂ ರಂಗಭೂಮಿಯ ಬೆಳವಣಿಗೆ ತುಳುವಿನ ಐಡೆಂಟಿಟಿಯನ್ನು ತೋರಿಸುವ ರೀತಿಯಲ್ಲಿ ಇಲ್ಲ. ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿನ ತುಳು ಸಿನೆಮಾಗಳ ನಿರ್ಮಾಣದಿಂದ ಆಧುನಿಕ ಪೀಳಿಗೆಯ ತುಳುವರು ತುಳುವಿನ ಬಗ್ಗೆ ಆಸಕ್ತಿ ತಾಳುವ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಕೂಡಾ ತುಳು ತನ್ನ ಬೆಳವಣಿಗೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸುವ ಅವಕಾಶ ಇನ್ನೂ ಮುಕ್ತವಾಗಿದೆ. ಆಕಾಶವಾಣಿ ಮತ್ತು ಸ್ಥಳೀಯ ಟಿವಿ ವಾಹಿನಿಗಳಲ್ಲಿ ತುಳು ಕಾರ್ಯಕ್ರಮಗಳನ್ನು ಕೇಳುವ ಮತ್ತು ನೋಡುವ ಕೇಳುಗರು ಮತ್ತು ನೋಡುಗರು ಹೆಚ್ಚುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ಕಾರ್ಯಕ್ರಮಗಳು ರೂಪಿತವಾಗುತ್ತಿವೆಯೇ ಎನ್ನುವ ಪ್ರಶ್ನೆ ಇದ್ದೇ ಇದೆ. ತುಳುವಿಗೆ ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸ್ಥಾನ ಪಡೆಯುವ ಹಕ್ಕೊತ್ತಾಯ ಕಳೆದ ಮೂರು ದಶಕಗಳಿಂದ ನಡೆಯುತ್ತಿದೆ.

ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ತುಳು ಸಾಹಿತ್ಯ ಅಕಾಡಮಿಯ ಮೂಲಕ 2001ರಲ್ಲಿ ಕೊಟ್ಟ ಮನವಿಯ ಫಲವಾಗಿ ಕೇಂದ್ರ ಸರಕಾರದ ಎಂಟನೆಯ ಪರಿಚ್ಛೇದದ ಸೇರ್ಪಡೆಯ ಕಾಯುವ ಪಟ್ಟಿಯಲ್ಲಿ ತುಳುವಿನ ಹೆಸರು ಸೇರ್ಪಡೆಯಾಗಿದೆ. ತುಳುವಿನ ಬಗ್ಗೆ ಎಲ್ಲಾ ಪಕ್ಷಗಳ ಸಂಸದರು ಲೋಕಸಭೆ ರಾಜ್ಯಸಭೆಗಳಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಆರಂಭದಲ್ಲಿ ಏಳೆಂಟು ಭಾಷೆಗಳ ಜೊತೆಗೆ ತುಳು ಕಾಯುತ್ತಿದ್ದರೆ, ಈಗ ತುಳುವಿನ ಜೊತೆಗೆ ಇನ್ನೂ 37 ಭಾಷೆಗಳು ಸರದಿಯ ಸಾಲಿನಲ್ಲಿ ನಿಂತಿವೆ. 2003ರಲ್ಲಿ ಎನ್‌ಡಿಎ ಸರಕಾರವಿದ್ದಾಗ ಎಂಟನೆ ಪರಿಚ್ಛೇದಕ್ಕೆ ಸಂತಾಲಿ, ಮೈಥಿಲಿ, ಬೋಡೊ ಮತ್ತು ಡೋಗ್ರಿ ಭಾಷೆಗಳ ಸೇರ್ಪಡೆಯಾಯಿತು. ಇವಕ್ಕೆಲ್ಲ ಆಗಿನ ಸರಕಾರದ ರಾಜಕೀಯ ಒತ್ತಡಗಳು ಕೆಲಸ ಮಾಡಿದವು. ಆಗ ಕೂಡ ತುಳು ಸ್ಪರ್ಧೆಯಲ್ಲಿ ಇತ್ತು. ಈಗ 38ರ ದೊಡ್ಡ ಗುಂಪಿನಲ್ಲಿ ತುಳು ಸ್ಪರ್ಧಿಸುವುದು ಬಹು ಕಷ್ಟದ ಕೆಲಸ. ಒಂದೂವರೆ ಸಂಸದರ ವ್ಯಾಪ್ತಿಯ ಭಾಷೆಗೆ ಭಾರತದ ಪಾರ್ಲಿಮೆಂಟ್‌ನಲ್ಲಿ ಸಂಖ್ಯೆಯ ಬಾಹುಳ್ಯದಲ್ಲಿ ಅವಕಾಶ ಕಡಿಮೆ. ಈ ಇಡೀ ಸಂಗತಿಯೇ ರಾಜಕೀಯವಾದುದು. ನಾವು ಸಲ್ಲಿಸುವ ಎಲ್ಲ ದಾಖಲೆಗಳ ಹೊರತಾಗಿಯೂ ನಿರ್ಣಯಗಳು ಅರ್ಹತೆಯ ಮಾನದಂಡದಿಂದಲೇ ಆಗುವುದಿಲ್ಲ ಎನ್ನುವುದನ್ನು ಪೂರ್ವ ನಿದರ್ಶನಗಳು ತೋರಿಸುತ್ತವೆ. ಜೊತೆಗೆ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡೆ ಆಗುವ ಭಾಷೆಯ ಸೌಲಭ್ಯಗಳು ಕೂಡಾ ಕುಂಠಿತವಾಗಿವೆ. ಈಗ ಅದು ವ್ಯಾವಹಾರಿಕಕ್ಕಿಂತ ಭಾವನಾತ್ಮಕ ಅನನ್ಯತೆಯ ವಿಷಯವಾಗಿಯೇ ಪ್ರಚಲಿತವಾಗಿದೆ.

ಕೊನೆಯದಾಗಿ ತುಳುವಿನಂತಹ ಭಾಷೆಯ ಅನನ್ಯತೆಯು ಎಷ್ಟು ಸಾಮೂಹಿಕ ಮತ್ತು ಶಕ್ತಿಯುತ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಬಹುದು. ತುಳುನಾಡಿನಲ್ಲಿ ಈಗ ಜಾತಿ ಮತ್ತು ಮತಧರ್ಮಗಳ ಅನನ್ಯತೆಗಳ ಒತ್ತಡ ಜಾಸ್ತಿ ಇದೆ. ಜಾತಿ ಸಂಘಟನೆಗಳು ಮತ್ತು ಧಾರ್ಮಿಕ ಸಂಘಟನೆಗಳು ಬೇರೆ ಬೇರೆ ಉದ್ದೇಶಗಳಿಗಾಗಿ ಬೇರೆ ಬೇರೆ ಹೆಸರುಗಳಲ್ಲಿ ಧ್ರುವೀಕರಣಗೊಳ್ಳುತ್ತಿವೆ. ಕರಾವಳಿ ಪ್ರದೇಶದಲ್ಲಿ ತುಳುವನ್ನು ಮಾತೃಭಾಷೆಯಾಗಿ ಉಳ್ಳ ಸುಮಾರು ನಲುವತ್ತರಷ್ಟು ಸಮುದಾಯದವರು ಇದ್ದಾರೆ. ತುಳು ಭಾಷೆಯ ಹೆಸರಲ್ಲೇ ಇವರೆಲ್ಲ ಒಂದು ಸಮುದಾಯವಾಗಿ ರೂಪಿತವಾಗಲು ಸಾಧ್ಯ ಆದರೆ ಅದೊಂದು ಆದರ್ಶ. ಹಾಗೆ ಆಗಲು ಇರುವ ಅಡ್ಡಿಗಳೆಂದರೆ ಆಧುನಿಕ ಕಾಲದಲ್ಲಿನ ಇತರ ಅನನ್ಯತೆಗಳ ಅನುಕೂಲಗಳು ಮತ್ತು ಅವು ಸಂವಹನಕ್ಕಿಂತ ಪ್ರತ್ಯೇಕತೆಗೆ ಕೊಡುವ ಆದ್ಯತೆಗಳು, ಮೇಲ್ಮೈ ಪದರದ ಭಾವನಾತ್ಮಕ ಸಂಬಂಧಗಳು... ಭಾಷೆ ಎಂಬುದು ಒಂದು ಆಟವಾಡುವ ಅನನ್ಯತೆ ಆಗಿ ಉಳಿಯದೆ, ಅದು ಸಾಂಸ್ಕೃತಿಕ ಅಗತ್ಯ ಆದಾಗ ಮಾತ್ರ ಅಂತಹ ಭಾಷೆ ನಿಜವಾದ ಅರ್ಥದಲ್ಲಿ ಸೃಜನಶೀಲ ಜೀವಂತಭಾಷೆಯಾಗುತ್ತದೆ, ಬದುಕಿನ ದಾರಿದೀಪವಾಗುತ್ತದೆ..ತುಳು ಹಾಗೆ ಆಗಬೇಕು ಎನ್ನುವುದು ಎಲ್ಲ ಪ್ರಜ್ಞಾವಂತ ತುಳುವರ ಚಿಗುರುವ ಕನಸು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)