varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಮನೆಯೊಳಗಿನ ಮಾತು

ಎನ್‌ಕೌಂಟರ್‌ಗಳ ನಡುವೆ ಸತ್ಯವನ್ನು ತೆರೆದಿಟ್ಟ ಸಾರ್ಥಕತೆ

ವಾರ್ತಾ ಭಾರತಿ : 3 Nov, 2017
ಶಿಬಿ ಧರ್ಮಸ್ಥಳ, ವಾರ್ತಾಭಾರತಿ ಮುಖ್ಯ ವರದಿಗಾರ, ಬೆಳ್ತಂಗಡಿ

ಬಹಳಷ್ಟು ವಿವಾದಾತ್ಮಕ ಸಂದರ್ಭಗಳಲ್ಲಿ ಇಡೀ ರಾಜ್ಯವೇ ಗಮನಿಸುತ್ತಿದ್ದ ವರದಿಗಳನ್ನು ಮಾಡಲು ಪತ್ರಿಕೆ ಅವಕಾಶ ನೀಡಿತ್ತು. ಎಲ್ಲಿಯೂ ಯಾವುದೇ ಒತ್ತಡಗಳಿಲ್ಲದೆ ಸ್ವತಂತ್ರವಾಗಿ ನೇರವಾಗಿ ವರದಿ ಮಾಡಲು ಅವಕಾಶ ನೀಡಿತ್ತು ಮತ್ತು ಸತ್ಯದ ಪರವಾಗಿ ಪತ್ರಿಕೆ ನಿಂತಿತ್ತು.

ಪತ್ರಿಕಾಲೋಕದಲ್ಲಿ ನನ್ನ ಪಯಣವನ್ನು ಆರಂಭಿಸಿದ ದಿನಗಳದು. ಏಕಾ ಏಕಿ ನಾನು ಕಾರ್ಯನಿರ್ವಹಿಸುತ್ತಿದ್ದ ಪತ್ರಿಕೆ ಬಾಗಿಲು ಮುಚ್ಚಿತ್ತು. ಈ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಉತ್ಸಾಹದಿಂದ ಅವಕಾಶಕ್ಕಾಗಿ ಕಾಯುತ್ತಿದ್ದ ನನಗೆ ಅದೇ ಸಂದರ್ಭದಲ್ಲಿ ಮಿತ್ರ ಬಿ.ಎಂ.ಬಶೀರ್ ಅವರು ಕರೆಮಾಡಿ ಪತ್ರಿಕಾ ಲೋಕದಲ್ಲಿ ಹೊಸ ಪ್ರಯೋಗಕ್ಕೆ ಕಾಲಿಡುತ್ತಿದ್ದೇವೆ ಸೇರಿಕೊಳ್ಳುವಿರಾ ಎಂದು ಕೇಳಿದ್ದರು. ಹಲವಾರು ಸ್ನೇಹಿತರು ಈಗಾಗಲೇ ಅವರೊಂದಿಗೆ ಕೈಜೋಡಿಸಿದ್ದರು. ನಾನೂ ಮಂಗಳೂರಿನ ಕಚೇರಿಗೆ ಹೋದೆ ಆಗ ಇನ್ನೂ ‘ವಾರ್ತಾಭಾರತಿ’ ಕಣ್ಣು ಬಿಡುತ್ತಿದ್ದ ದಿನಗಳು. ಮೊದಲ ಭೇಟಿಯಲ್ಲಿ ಸಂಪಾದಕರು ಹೇಳಿದ್ದು ನಿಮಗೆ ಸ್ವತಂತ್ರವಾಗಿ ವರದಿ ಮಾಡಬಹುದು. ಸತ್ಯವನ್ನು ನೇರವಾಗಿ ಬರೆಯಬೇಕು ಎಂದಷ್ಟೇ ಆಗಿತ್ತು . ಅಂದಿನಿಂದ ಇಂದಿನವರೆಗೆ ‘ವಾರ್ತಾಭಾರತಿ’ಯೊಂದಿಗೆ ನನ್ನ ಪ್ರಯಾಣ ಮುಂದುವರಿದಿದೆ. ಬಹಳಷ್ಟು ವಿವಾದಾತ್ಮಕ ಸಂದರ್ಭಗಳಲ್ಲಿ ಇಡೀ ರಾಜ್ಯವೇ ಗಮನಿಸುತ್ತಿದ್ದ ವರದಿಗಳನ್ನು ಮಾಡಲು ಪತ್ರಿಕೆ ಅವಕಾಶ ನೀಡಿತ್ತು. ಎಲ್ಲಿಯೂ ಯಾವುದೇ ಒತ್ತಡಗಳಿಲ್ಲದೆ ಸ್ವತಂತ್ರವಾಗಿ ನೇರವಾಗಿ ವರದಿ ಮಾಡಲು ಅವಕಾಶ ನೀಡಿತ್ತು ಮತ್ತು ಸತ್ಯದ ಪರವಾಗಿ ಪತ್ರಿಕೆ ನಿಂತಿತ್ತು.

ಕಳೆದ ಹದಿನೈದು ವರ್ಷಗಳಲ್ಲಿ ಪತ್ರಿಕೆಯೊಂದಿಗೆ ನಾನೂ ಸಾಕಷ್ಟು ಬೆಳೆಯಲು ಅವಕಾಶ ದೊರೆತಿದೆ. ಆದಿನಗಳು ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆಗಳು ಗರಿಗೆದರುತ್ತಿದ್ದವು ಪೊಲೀಸರು ಮತ್ತು ನಕ್ಸಲೀಯರ ನಡುವೆ ಸಿಲುಕಿ ಒದ್ದಾಡುತ್ತಿದ್ದ ಮಲೆನಾಡಿನ ಮೂಲನಿವಾಸಿಗಳ ಸಂಕಷ್ಟವನ್ನು ಹೊರಲೋಕಕ್ಕೆ ತಿಳಿಯಪಡಿಸುವ ಅವಕಾಶದೊರಕಿತ್ತು. ಎಲ್ಲರೂ ಒಳಗಿನ ಒಂದು ಕಾಲಂ ಸುದ್ದಿಯಾಗಿಸುತ್ತಿದ್ದ ಅವರ ನೋವುಗಳು ಮೊದಲಬಾರಿಗೆ ಮುಖಪುಟದಲ್ಲಿ ನಿರಂತರ ಪ್ರಕಟಗೊಂಡಿತ್ತು. ಅಧಿಕಾರಿಗಳೂ ಎಚ್ಚೆತ್ತುಕೊಳ್ಳುವಂತಾಯಿತು. ಇಂದಿಗೂ ಈ ಜನರು ಪತ್ರಿಕೆಯನ್ನು ಪ್ರೀತಿಯಿಂದ ನೆನೆದುಕೊಳ್ಳುತ್ತಾರೆ. ಮಲೆನಾಡಿನಲ್ಲಿ ನಡೆದ ಮೊದಲ ನಕ್ಸಲ್ ಎನ್‌ಕೌಂಟರ್ ಕಾರ್ಕಳದ ಈದುವಿನಲ್ಲಿ ನಡೆದಾಗ ವಿಭಿನ್ನ ದೃಷ್ಟಿಕೋನದಲ್ಲಿ ವರದಿಮಾಡಿ ಘಟನೆಯ ಹಿಂದಿರುವ ಮತ್ತೊಂದು ಮುಖವನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯವಾಯಿತು. ನೆರೆಯ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆದ ಇಂತಹ ಹಲವಾರು ಎನ್‌ಕೌಂಟರ್‌ಗಳನ್ನು ವರದಿಮಾಡುವ ಅವಕಾಶವನ್ನು ಪತ್ರಿಕೆ ನನಗೆ ನೀಡಿತ್ತು. ಅದರಲ್ಲಿಯೂ ಮಾವೋವಾದಿ ನಾಯಕ ಸಾಕೇತ್ ರಾಜನ್ ಅವರ ಎನ್‌ಕೌಂಟರ್ ಅನ್ನು ವರದಿ ಮಾಡಿದ್ದ ಘಟನೆ ಮಾತ್ರ ಎಂದಿಗೂ ಮರೆಯಲಾಗದ ಅನುಭವ. ಬೆಳ್ತಂಗಡಿಯಲ್ಲಿ ನಕ್ಸಲ್ ನಿಗ್ರಹ ದಳದವರೇ ಪೇದೆಯನ್ನು ಗುಂಡಿಕ್ಕಿ ಸಾಯಿಸಿ ನಕ್ಸಲರು ಗುಂಡು ಹಾರಿಸಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದಾಗ ಅದರ ಹಿಂದಿರುವ ಸತ್ಯಾಸತ್ಯತೆಯನ್ನು ಮೊದಲು ಬಹಿರಂಗ ಪಡಿಸಿದ್ದು ‘ವಾರ್ತಾಭಾರತಿ’ಯಾಗಿತ್ತು. ಘಟನಾಸ್ಥಳಗಳಿಗೆ ತೆರಳಿದಾಗ ನಿಮಗೆ ಮೂಡುವ ಅನುಮಾನಗಳನ್ನು, ಆಗುವ ಅನುಭವಗಳನ್ನು ನೇರವಾಗಿ ಬರೆಯಿರಿ, ನಾವು ಪ್ರಕಟಿಸುವ ಎಂದು ಧೈರ್ಯ ತುಂಬುತ್ತಿದ್ದ ನಮ್ಮ ಸಂಪಾದಕೀಯ ಬಳಗದ ೆಂಬಲದಿಂದಲೇ ಇದೆಲ್ಲ ಸಾಧ್ಯವಾಯಿತು.

ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ ಪತ್ರಿಕೆಯನ್ನು ಇಡೀ ರಾಜ್ಯದ ಜನ ಗಮನಿಸಿದ ಮತ್ತೊಂದು ಸಂದರ್ಭ. ಅಂದು ಪತ್ರಿಕೆಯನ್ನು ನಿರಂತರ ವಿರೋಧಿಸುತ್ತಾ ಬಂದಿದ್ದವರೂ ಸತ್ಯ ತಿಳಿಯಬೇಕಾದರೆ ‘ವಾರ್ತಾಭಾರತಿ’ಯನ್ನು ಓದಬೇಕು ಎಂದು ಹೇಳುವ ಹಂತಕ್ಕೆ ಬಂದಿದ್ದರು. ವಿವಾದಗಳಲ್ಲಿ ಯಾರ ಪರವೂ ನಿಲ್ಲದೆ ಸತ್ಯವನ್ನು ಹೇಳುವ ಪತ್ರಿಕೆಯ ನಿಲುವು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಆದಿವಾಸಿ ಸಮುದಾಯದ ವಿದ್ಯಾರ್ಥಿ ವಿಠಲ ಮಲೆಕುಡಿಯ ಅವರಿಗೆ ನಕ್ಸಲ್ ನಿಗ್ರಹ ದಳ ನಕ್ಸಲ್ ಪಟ್ಟ ಕಟ್ಟಿದಾಗಲೂ ಸತ್ಯವನ್ನು ಹೊರಜಗತ್ತಿಗೆ ತಿಳಿಸುವಲ್ಲಿ ಪತ್ರಿಕೆ ಮತ್ವದ ಪಾತ್ರ ವಹಿಸಿತ್ತು.
 ಕಳೆದ ಹದಿನೈದು ವರ್ಷಗಳಲ್ಲಿ ಸದಾ ಸತ್ಯದ ಪರವಾಗಿ ನಿಲ್ಲಲು, ನೊಂದವರ ದ್ವನಿಯಾಗಲು ಪತ್ರಿಕೆ ಅವಕಾಶ ಒದಗಿಸಿತ್ತು. ಯಾರೂ ಕೇಳುವವರಿಲ್ಲದೆ ಅಂಚಿಗೆ ತಳ್ಳಲ್ಪಪಟ್ಟಿದ್ದ ಕೊರಗರು, ಮಲೆಕುಡಿಯರ ನೋವುಗಳು ಪತ್ರಿಕೆಯ ಮೂಲಕ ಮುಖಪುಟದ ಸುದ್ದಿಯಾಗಿ, ಎಲ್ಲರೂ ಅತ್ತ ನೋಡುವಂತಾಯಿತು. ಚಾರ್ಮಾಡಿಯ ಕುಂಡಕೊರಗರ ದಯನೀಯ ಬದುಕು ಪತ್ರಿಕೆಯ ಮೂಲಕ ಹೊರಬಂದು ಇದೀಗ ಒಳ್ಳೆಯ ಸುಸಜ್ಜಿತ ಮನೆಯಲ್ಲಿ ಗಾಳಿ ಚಳಿಗೆ ಮೈಯೊಡ್ಡದೆ ಬದುಕುತ್ತಿರುವುದು ಸಂತಸ ಸಂತೃಪ್ತಿಯನ್ನು ನೀಡುವಂತಹದ್ದು. ಒಂದೆರಡು ವರ್ಷಗಳಲ್ಲಿ ಮುಚ್ಚಿಹೋಗಲಿದೆ ಎಂದು ಬಹುಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಪತ್ರಿಕೆ ನೊಂದವರ ದ್ವನಿಯಾಗಿ ಓದುಗರ ಬೆಂಬಲದೊಂದಿಗೆ ಇಲ್ಲಿಯ ವರೆಗೆ ಸಾಗಿ ಬಂದಿದೆ ಮುಂದೆಯೂ ಸಾಗಬೇಕಾದುದು ರಾಜ್ಯದ ಜನತೆಯ ಅನಿವಾರ್ಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)