varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಮನೆಯೊಳಗಿನ ಮಾತು

ವಾರ್ತಾಭಾರತಿ ನನ್ನ ಏಳ್ಗೆಯ ಬೆನ್ನೆಲುಬು

ವಾರ್ತಾ ಭಾರತಿ : 3 Nov, 2017
ಸುನೀಲ್ ಎಸ್.ಕೆ., ವಾರ್ತಾಭಾರತಿ ಹಿರಿಯ ಪುಟ ವಿನ್ಯಾಸಕ

ಪತ್ರಿಕೆ ಓದದೇ ಕೆಲವರು ಅದು ಮುಸ್ಲಿಮರ ಪತ್ರಿಕೆ, ಕಾಂಗ್ರೆಸ್ ಬೆಂಬಲಿತ, ಎಡಪಂಥೀಯ ವಿಚಾರಧಾರೆಯ ಪತ್ರಿಕೆ ಎಂದು ಟೀಕಿಸುತ್ತಾರೆ. ಈ ಸಂದರ್ಭ ನನಗೆ ಇರಿಸು ಮುರಿಸು ಆದದ್ದೂ ಇದೆ. ಆದರೆ, ಸಮಸಮಾಜ ನಿರ್ಮಾಣಕ್ಕೆ ವಾರ್ತಾಭಾರತಿ ನೀಡುತ್ತಿರುವ ಕೊಡುಗೆಯನ್ನು ಮರೆಯಲು ಸಾಧ್ಯವೇ? ದಲಿತರು, ದುರ್ಬಲರು, ಬಡವರು, ಅಲ್ಪಸಂಖ್ಯಾತರ ಮೇಲೆ ನಡೆಯುವ ಹಲ್ಲೆ, ಹತ್ಯೆ, ದೌರ್ಜನ್ಯಗಳಂತಹ ಘಟನೆಗಳನ್ನು ಒಳಪುಟಗಳಲ್ಲಿ ಸಿಂಗಲ್ ಕಾಲಂ ಸುದ್ದಿ ಹಾಕಿ ಕೈತೊಳೆದುಕೊಳ್ಳುವ ಬಂಡವಾಳಶಾಹಿ, ಫ್ಯಾಶಿಸ್ಟ್ ಮನಸ್ಸಿನ ಮುಖ್ಯವಾಹಿನಿಯ ಮಾಧ್ಯಮಗಳೆದುರು ಅದೇ ಸುದ್ದಿಯನ್ನು ಅವರ ಜೀವಗಳಿಗೂ ಬೆಲೆ ಇದೆ, ಅವರಿಗೂ ಧ್ವನಿಯಾಗಬೇಕೆಂಬ ನಿಟ್ಟಿನಲ್ಲಿ ಮುಖಪುಟದಲ್ಲಿ ಲೀಡ್ ಆಗಿ ಪ್ರಕಟಿಸುವ ವಾರ್ತಾಭಾರತಿಯನ್ನು ತೆಗಳಲು ಹೇಗೆ ಸಾಧ್ಯ?

ನಾನು ತಂದೆಯನ್ನು ಬಲು ಬೇಗನೇ ಕಳೆದುಕೊಂಡೆ. ಆಗ ಸಂಸಾರದ ಜವಾಬ್ದಾರಿ ಹೊತ್ತುಕೊಂಡವರು ನನ್ನಮ್ಮ. ಬೀಡಿ ಕಟ್ಟಿ ಪಿಯುಸಿ ವರೆಗೆ ಓದಿಸಿದರು. ಮುಂದೆಯೂ ಓದಿಸುವ ಕನಸು ಇಟ್ಟುಕೊಂಡಿದ್ದರು. ಆದರೆ ಆಗ ಅಮ್ಮನ ಆರೋಗ್ಯ ಹದಗೆಟ್ಟಿತು. ಬಡತನ ಕಿತ್ತು ತಿನ್ನುತ್ತಿತ್ತು. ಓದು ಮುಂದುವರಿಸಲು ನನಗೆ ಮನಸ್ಸಾಗಲಿಲ್ಲ. ಅಮ್ಮನಿಗೆ ನೆರವಾಗಲು ಬಯಸಿದೆ. ಅದಕ್ಕಾಗಿ ಒಂದೂವರೆ ಸಾವಿರ ವೇತನಕ್ಕೆ ಮಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಆದರೆ, ಆ ಅಲ್ಪವೇತನದಿಂದ ಮನೆ ಖರ್ಚು ನಿಭಾಯಿಸಲು ಸಾಧ್ಯವಾಗಲಿಲ್ಲ.

 ಹೀಗಾಗಿ ಇದ್ದ ಕೆಲಸ ತ್ಯಜಿಸಿ ಸ್ವಲ್ಪ ಉತ್ತಮ ವೇತನದ ಕೆಲಸಕ್ಕೆ ಸೇರಲು ನಿರ್ಧರಿಸಿದೆ. ಅದಕ್ಕಾಗಿ ಹೊಸ ಕೆಲಸದ ಹುಡುಕಾಟದಲ್ಲಿ ತೊಡಗಿದೆ. ಕೈತುಂಬಾ ಸಂಬಳದ ನಿರೀಕ್ಷೆ ಏನೂ ಇರಲಿಲ್ಲ. ಆದರೆ, ಭವಿಷ್ಯದಲ್ಲಿ ಮುಂದೆ ಬರಬೇಕೆಂಬ ಆಕಾಂಕ್ಷೆ ಇದ್ದೇ ಇತ್ತು. ಇದೇ ಸಂದರ್ಭದಲ್ಲಿ 13 ವರ್ಷಗಳ ಹಿಂದೆ ನನ್ನ ಪರಿಚಯಸ್ಥರು ಹಾಗೂ ವಾರ್ತಾಭಾರತಿಯ ಹಿರಿಯ ಉಪಸಂಪಾದಕರಾಗಿದ್ದ ರಾಜೇಶ್ ನಾಯಕ್ ಅವರು ನನ್ನ ಸಂಬಂಧಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಪತ್ರಿಕೆಯಲ್ಲಿ ಪುಟ ವಿನ್ಯಾಸಕಾರರ ಕೆಲಸ ಖಾಲಿ ಇದೆ ಪ್ರಯತ್ನಿಸಬಹುದು ಎಂದು ಹೇಳಿದರು. ಈ ಮಾಹಿತಿಯಿಂದ ನನಗೆ ತುಂಬಾ ಸಂತೋಷವಾಯಿತು. ಯಾವ ಕೆಲಸ, ಕೆಲಸದ ಅವಧಿ ಎಷ್ಟು ಎಂಬ ಯಾವ ವಿಚಾರದ ಬಗ್ಗೆಯೂ ಚಿಂತಿಸದೆ ಮರುದಿನವೇ ಬೈಕಂಪಾಡಿಯಲ್ಲಿರುವ ವಾರ್ತಾಭಾರತಿ ಪತ್ರಿಕೆಯ ಕಚೇರಿಗೆ ತೆರಳಲು ನಿರ್ಧರಿಸಿ ಅಪರಾಹ್ನ 2 ಗಂಟೆಗೆ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ವಾರ್ತಾ ಭಾರತಿ ಪತ್ರಿಕೆಯ ಕಚೇರಿ ತಲುಪಿದ್ದೆ.

ಅಲ್ಲಿ ನನಗೆ ಸಂದರ್ಶನ ನಡೆಸಿದವರು ಪತ್ರಿಕೆಯ ಸುದ್ದಿ ಸಂಪಾದಕ ಬಿ.ಎಂ. ಬಶೀರ್. ನಿಮ್ಮ ಹೆಸರು, ವಿದ್ಯಾಭ್ಯಾಸ, ಕೆಲಸದ ಅನುಭವದ ಕುರಿತು ಕನ್ನಡದಲ್ಲಿ ಒಂದು ಪುಟ ಬರೆಯಿರಿ ಎಂದು ಅವರು ಹೇಳಿದರು. ಬರೆದು ಕೊಟ್ಟಿರುವುದನ್ನು ನೋಡಿ ನೀವು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಿರುವುದೇ ಎಂದು ಪ್ರಶ್ನಿಸಿದರು. ಈಗ ಉದ್ಯೋಗಾರ್ಥಿಗಳು ಸಂದರ್ಶನಕ್ಕೆ ಬಂದಾಗ ಆಗಿನ ಘಟನೆ ಈಗಲೂ ನೆನಪಾಗಿ ಒಳಗೊಳಗೆ ನಗುತ್ತೇನೆ. ಆನಂತರ ಅವರು ಒಂದೆರೆಡು ಪುಟ ಟೈಪ್ ಮಾಡಿ ಕೊಡುವಂತೆ ಹೇಳಿದರು. ನಾನು ತ್ವರಿತವಾಗಿ ಟೈಪ್ ಮಾಡಿ ಕೊಟ್ಟಿದ್ದೆ. ಅವರಿಗೆ ತೃಪ್ತಿಯಾಗಿತ್ತು. ‘‘ನೀವು ಯಾವಾಗದಿಂದ ಕೆಲಸಕ್ಕೆ ಬರುತ್ತೀರಿ?’’ ಎಂದು ಪ್ರಶ್ನಿಸಿದರು. ನಾನು ಕೆಲಸದ ಅವಧಿ ಬಗ್ಗೆ ಕೇಳಿದಾಗ, ಸಂಜೆ 4ರಿಂದ ರಾತ್ರಿ 10 ಗಂಟೆ ವರೆಗೆ, ವೇತನ 4 ಸಾವಿರ ಕೊಡಬಹುದು ಎಂದರು. ರಾತ್ರಿ ಪಾಳಿಯ ಬಗ್ಗೆ ಅಸಮಾಧಾನವಿದ್ದ ನನಗೆ ಸಮಾಧಾನಕರ ವೇತನ ಸಿಕ್ಕಿರುವುದು ನನ್ನ ಕೆಲಸದ ಅವಧಿಯನ್ನು ಮರೆಸಿತ್ತು. ಅಲ್ಲದೆ ಆಗಿನ ಕಾಲಕ್ಕೆ 4 ಸಾವಿರ ಎಂದರೆ ಈಗಿನ 10ರಿಂದ 12 ಸಾವಿರಕ್ಕೆ ಸಮಾನವಾಗಿತ್ತು. ನಾನು ಮಾರನೇ ದಿನವೇ ಕೆಲಸಕ್ಕೆ ಹಾಜರಾಗಿದ್ದೆ.

 ಆರಂಭದಲ್ಲಿ ಕೇವಲ ಟೈಪಿಂಗ್ ಹಾಗೂ ಒಳ ಪುಟಗಳ ವಿನ್ಯಾಸ ಮಾಡುತ್ತಿದ್ದ ನನಗೆ ಬಶೀರ್ ಅವರು ನಂಬಿಕೆ ಇರಿಸಿ ಮುಖಪುಟ ವಿನ್ಯಾಸ ಮಾಡಲು ಸೂಚಿಸಿದರು. ನಾನು ಸಮರ್ಥವಾಗಿ ನಿಭಾಯಿಸಿದೆ. ಒಂದು ದಿನ ಮುಖಪುಟದಲ್ಲಿ ಒಂದು ದೊಡ್ಡ ಅವಾಂತರವಾಗಿತ್ತು. ಪ್ರಮುಖ ಸುದ್ದಿಯೊಂದರ ಶೀರ್ಷಿಕೆ ಮತ್ತು ವಿಷಯ ಬೇರೆಬೇರೆ ಆಗಿತ್ತು. ಅದು ಕಾಪಿ ಪೇಸ್ಟ್ ಮಾಡುತ್ತಿದ್ದ ಸಂದರ್ಭ ನನ್ನನ್ನು ನನ್ನಿಂದಲೇ ಆದ ಪ್ರಮಾದವಾಗಿತ್ತು. ಆದರೆ, ಆ ಸಂದರ್ಭ ಮೃದುವಾಗಿ ತರಾಟೆಗೆತ್ತಿಕೊಂಡು ಮತ್ತೆ ನನ್ನನ್ನು ಹುರಿದುಂಬಿಸಿದವರು ಸುದ್ದಿ ಸಂಪಾದಕರು.

ಪತ್ರಿಕೆಗೆ ಸೇರಿದ ಮೊದಲ ಐದಾರು ವರ್ಷಗಳು ಸಂಪಾದಕೀಯ ಪುಟ, ವೈವಿಧ್ಯ ಪುಟಗಳನ್ನು ವಿನ್ಯಾಸ ಮಾಡುತ್ತಿದ್ದ ಸಂದರ್ಭ ಬುದ್ಧ, ಮಹಾತ್ಮಾ ಗಾಂಧಿ, ಅಂಬೇಡ್ಕರ್, ನಾರಾಯಣ ಗುರು, ಜ್ಯೋತಿಬಾ ಫುಲೆ ಮೊದಲಾದ ಮಹಾತ್ಮರ ಚಿಂತನೆಗಳನ್ನು ಒಳಗೊಂಡ, ದಲಿತರು ದುರ್ಬಲರು, ಅಲ್ಪಸಂಖ್ಯಾತರು, ತಳಸ್ತರ ಸಮುದಾಯಗಳ ಜನರ ಕುರಿತ ಲೇಖನಗಳನ್ನು ಓದುತ್ತಿದ್ದೆ. ಇದು ನನ್ನ ಮೇಲೆ ಪ್ರಭಾವ ಬೀರಿತು. ಜಾತಿ, ಮತ, ಪಂಥ, ಧರ್ಮದ ಹಂಗಿಲ್ಲದೆ ಮನುಷ್ಯನನ್ನು ನಿಷ್ಕಲ್ಮಶವಾಗಿ ಪ್ರೀತಿಸಲು ಸಾಧ್ಯ ಎಂಬುದನ್ನು ಹೇಳಿಕೊಟ್ಟಿತು. ಪತ್ರಿಕೆಯ ಸಂಪಾದಕೀಯ ಹಾಗೂ ವೈವಿಧ್ಯ ಪುಟಗಳಲ್ಲಿ ಪ್ರಕಟವಾಗುವ ಬುಡಬುಡಿಕೆ, ಮಗುವಿನ ಚಿಂತನೆಗಳು ಕೂಡ ನನ್ನನ್ನು ಪ್ರಭಾವಿಸಿತು.

ಎರಡು ವರ್ಷಗಳ ಹಿಂದೆ ಪತ್ರಿಕೆ ಸಿಬ್ಬಂದಿಗೆ ವಿಶೇಷ ವರದಿ ಸ್ಪರ್ಧೆ ನಡೆಸಿತು. ಪುಟ ವಿನ್ಯಾಸಕಾರ ನಾಗಿರುವ ನಾನು ಈ ಹಿಂದೆ ಕೆಲವು ಸಣ್ಣಪುಟ್ಟ ಬರಹಗಳನ್ನು ಬರೆದದ್ದು ಬಿಟ್ಟರೆ ಬೇರೇನೂ ಬರೆದಿರಲಿಲ್ಲ. ಅಂತಹ ಬರವಣಿಗೆಯ ವಿಶೇಷ ಕೌಶಲ್ಯವೂ ನನಗಿರಲಿಲ್ಲ. ಆದರೆ, ಇದನ್ನೊಂದು ಸವಾಲಾಗಿ ಸ್ವೀಕರಿಸಿದೆ. ತೀವ್ರ ಅನಾರೋಗ್ಯಕ್ಕೆ ಒಳಗಾದ ನನ್ನ ತಾಯಿಯನ್ನು ಆಸ್ಪತ್ರೆಗೆ ಸೇರಿಸುವ ಸಂದರ್ಭ ಅಲ್ಲಿ ಅನುಭವಿಸಿದ ಸಮಸ್ಯೆಗಳನ್ನೇ ವಿಶೇಷ ವರದಿ ಮಾಡಬೇಕು ಎಂದು ನಿರ್ಧರಿಸಿದೆ. ಸಾಕಷ್ಟು ಮಾಹಿತಿ ಸಂಗ್ರಹಿಸಿ, ಆರೋಗ್ಯ ಸಚಿವರು, ಆರೋಗ್ಯ ಅಧಿಕಾರಿಗಳನ್ನು ಸಂದರ್ಶಿಸಿ ‘ಆರೋಗ್ಯ ಭಾಗ್ಯಕ್ಕೆ ಯೋಜ್ಯನೆಗಳುಂಟು ಸಮಸ್ಯೆಗಳು ನೂರೆಂಟು’ ಎಂಬ ವಿಶೇಷ ವರದಿ ಸಿದ್ಧಪಡಿಸಿದೆ. ಆ ವರದಿಗೆ ಎರಡನೇ ಸ್ಥಾನ ಬಂತು. ಪುಟ ವಿನ್ಯಾಸಕಾರನಾದ ನಾನು ಈ ಮಟ್ಟಕ್ಕೆ ಬೆಳೆಯಲು ವಾರ್ತಾ ಭಾರತಿ ಕಾರಣವಾಗಿತ್ತು.

 ವಾರ್ತಾಭಾರತಿ ಕೇವಲ ದುಡಿಮೆಗೆ ಮಾತ್ರ ಮೀಸಲಲ್ಲ. ಇಲ್ಲಿಯ ಸಹೋದ್ಯೋಗಿಗಳ ನಡುವೆ ಭಾವನಾತ್ಮಕವಾದೊಂದು ಸಂಬಂಧವಿದೆ. ಸಿಬ್ಬಂದಿ ನಡುವೆ ಧರ್ಮ, ಜಾತಿ, ವರ್ಗ ಮೀರಿದ ಪ್ರೀತಿ ಇದೆ. ಅದಕ್ಕೆ ಒಂದು ಉತ್ತಮ ಉದಾಹರಣೆ ಇಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ವಿದೇಶಗಳಲ್ಲಿ ದುಡಿಯುತ್ತಿರುವ ಕೆಲವು ಸ್ನೇಹಿತರು. ಅವರು ಈಗಲೂ ಫೋನ್ ಕರೆ ಮಾಡಿ ನನ್ನ ಹಾಗೂ ನನ್ನ ತಾಯಿಯ ಆರೋಗ್ಯ ವಿಚಾರಿಸುತ್ತಿರುತ್ತಾರೆ. ಕಚೇರಿಯಲ್ಲಿರುವವರು ಕೂಡ ನನ್ನ ಎಲ್ಲ ಸಮಸ್ಯೆಗಳನ್ನು ಅವರ ಕುಟುಂಬದ ಸಮಸ್ಯೆ ಎಂಬಂತೆ ಕಾಣುತ್ತಿದ್ದಾರೆ. ಇಂತಹ ಹೃದಯವಂತರನ್ನು ಒಡನಾಡಿಗಳಾಗಿ ವಾರ್ತಾಭಾರತಿ ನನಗೆ ನೀಡಿದೆ..

ಪತ್ರಿಕೆ ಓದದೇ ಕೆಲವರು ಅದು ಮುಸ್ಲಿಮರ ಪತ್ರಿಕೆ, ಕಾಂಗ್ರೆಸ್ ಬೆಂಬಲಿತ, ಎಡಪಂಥೀಯ ವಿಚಾರಧಾರೆಯ ಪತ್ರಿಕೆ ಎಂದು ಟೀಕಿಸುತ್ತಾರೆ. ಈ ಸಂದರ್ಭ ನನಗೆ ಇರಿಸು ಮುರಿಸು ಆದದ್ದೂ ಇದೆ. ಆದರೆ, ಸಮಸಮಾಜ ನಿರ್ಮಾಣಕ್ಕೆ ವಾರ್ತಾಭಾರತಿ ನೀಡುತ್ತಿರುವ ಕೊಡುಗೆಯನ್ನು ಮರೆಯಲು ಸಾಧ್ಯವೇ? ದಲಿತರು, ದುರ್ಬಲರು, ಬಡವರು, ಅಲ್ಪಸಂಖ್ಯಾತರ ಮೇಲೆ ನಡೆಯುವ ಹಲ್ಲೆ, ಹತ್ಯೆ, ದೌರ್ಜನ್ಯಗಳಂತಹ ಘಟನೆಗಳನ್ನು ಒಳಪುಟಗಳಲ್ಲಿ ಸಿಂಗಲ್ ಕಾಲಂ ಸುದ್ದಿ ಹಾಕಿ ಕೈತೊಳೆದುಕೊಳ್ಳುವ ಬಂಡವಾಳಶಾಹಿ, ಫ್ಯಾಶಿಸ್ಟ್ ಮನಸ್ಸಿನ ಮುಖ್ಯವಾಹಿನಿಯ ಮಾಧ್ಯಮಗಳೆದುರು ಅದೇ ಸುದ್ದಿಯನ್ನು ಅವರ ಜೀವಗಳಿಗೂ ಬೆಲೆ ಇದೆ, ಅವರಿಗೂ ಧ್ವನಿಯಾಗಬೇಕೆಂಬ ನಿಟ್ಟಿನಲ್ಲಿ ಮುಖಪುಟದಲ್ಲಿ ಲೀಡ್ ಆಗಿ ಪ್ರಕಟಿಸುವ ವಾರ್ತಾಭಾರತಿಯನ್ನು ತೆಗಳಲು ಹೇಗೆ ಸಾಧ್ಯ? ಶ್ರಮಿಕರ, ರೈತರ, ದಮನಿತರ ಕೂಗಿಗೆ ಧ್ವನಿಯಾಗುವ ನಮ್ಮ ವಾರ್ತಾಭಾರತಿಯನ್ನು ನಿರಾಕರಿಸಲು ಹೇಗೆ ಸಾಧ್ಯ? ಬಡತನದ ಅರಿವಿರುವ, ನೊಂದಿರುವ ನನಗೆ ಇದೆಲ್ಲವೂ ಅರ್ಥವಾಗಿದೆ. ಆದರೆ ಪತ್ರಿಕೆಯನ್ನು ಓದದೇ, ಟೀಕಿಸುವವರಿಗೆ, ವಿರೋಧಿಸುವವರಿಗೆ ಅದನ್ನು ಮನದಟ್ಟು ಮಾಡಲು ಸಾಧ್ಯವಿಲ್ಲ.

ದೀನ ದಲಿತರ, ಅಲ್ಪಸಂಖ್ಯಾತರ, ಶೋಷಿತ ವರ್ಗಗಳ ಧ್ವನಿಯಾಗಿರುವ ‘ಜನದನಿಯ ಸಾರಥಿ ವಾರ್ತಾಭಾರತಿ’ 15ನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಈ ಸಂದರ್ಭ ನನ್ನನ್ನು ಬೆಂಬಲಿಸಿ ಪ್ರೀತಿ ತೋರುತ್ತಿರುವ ಪ್ರಧಾನ ಸಂಪಾದಕ ಸಹಿತ ಎಲ್ಲಾ ಸಹೋದ್ಯೋಗಿಗಳು, ಗೆಳೆಯರಿಗೆ ನಮನಗಳನ್ನು ಸಲ್ಲಿಸುತ್ತೇನೆ.
ವಾರ್ತಾಭಾರತಿಗೆ ಇಪ್ಪತ್ತೈದು, ಐವತ್ತು, ನೂರು ವರುಷವಾಗಲಿ.... ಪತ್ರಿಕೆಯಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ ಯಾವತ್ತೂ ನನಗಿರಲಿ....

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)