varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಖಡ್ಗದ ಬದಲಿಗೆ ಕಾವ್ಯ

ವಾರ್ತಾ ಭಾರತಿ : 4 Nov, 2017
ಸಂವರ್ಥ ‘ಸಾಹಿಲ್’

ಕವಿತೆಗಳ ಕುರಿತು ನುಡಿಯುತ್ತ ಜಾರಿ ತನ್ನ ಕತೆಯನ್ನೇ ಹೇಳಲಾರಂಭಿಸಿದ ಆಯಿಷಾ ಕ್ಷಮೆ ಕೋರಿ ಮತ್ತೆ ಆಕೆ ಸಂಗ್ರಹಿಸಿ ಸಂಪಾದಿಸಿದ್ದ ಸಂಕಲನದ ಕುರಿತು ಮಾತು ಮುಂದುವರಿಸಿದಳು. ‘‘ಈ ಸಂಕಲನ ಸಾಹಿತ್ಯಕವಾಗಿ ಉತೃಷ್ಟವೋ ಅಲ್ಲವೋ ನನಗೆ ಗೊತ್ತಿಲ್ಲ. ನಾನು ಸಾಹಿತ್ಯ ಅಭ್ಯಾಸ ಮಾಡಿಲ್ಲ. ಸೌಂದರ್ಯಶಾಸ್ತ್ರ ನನಗೆ ತಿಳಿದಿಲ್ಲ’’. ಆ ಮಾತು ಕೇಳಿ ನನಗೆ ನಾನೇ ಕೇಳಿಕೊಂಡೆ: ಪ್ರತಿಕ್ರಿಯೆಯ ಸೌಂದರ್ಯಶಾಸ್ತ್ರ ಯಾವುದು? ಪ್ರತಿರೋಧದ ಸೌಂದರ್ಯಶಾಸ್ತ್ರ ಯಾವುದು? ಕಾಥರಸಿಸ್‌ಗೆ ಎಂಥ ಸೌಂದರ್ಯಶಾಸ್ತ್ರ? ಚಿಕಿತ್ಸೆಗೆ ಯಾವ ಸೌಂದರ್ಯಶಾಸ್ತ್ರ? ನನಗಂತೂ ತಿಳಿಯದು.

ಮೂರನೆ ಮಹಡಿಯಲ್ಲಿರುವ ಆಕೆಯ ಮನೆ ಬಾಗಿಲು ತಟ್ಟಿದೆ. ಅಕ್ಕರೆಯ ನಗುವಿನೊಂದಿಗೆ ಬಾಗಿಲು ತೆಗೆದು ಬರಮಾಡಿಕೊಂಡಳು. ‘ದರ್ಶನ್’ ಎಂಬ ಸಂಘಟನೆ ಕಟ್ಟಿ ಚಳವಳಿ ನಡೆಸುತ್ತಿರುವ ಅಹಮದಾಬಾದಿನ ಹಿರೆನ್ ಭಾಯಿ ಮತ್ತು ಸರೂಪ್ ಬೆಹನ್ ಅವರು ಆಕೆಯ ಕುರಿತು ಹೇಳಿದ್ದರು. ಅವರ ಲೈಬ್ರರಿಯಲ್ಲಿ ಸರೂಪ್ ಬೆಹನ್ ಗುಜರಾತ್ ಹಿಂಸೆಯ ನಂತರ ಅಲ್ಲಿಯ ಸಾಮಾನ್ಯ ಜನರನ್ನು ಸಂದರ್ಶಿಸಿ ಬರೆದಿದ್ದ ‘ಉಮ್ಮೀದ್ ಹೋಗಿ ಕೋಯಿ’ ಪುಸ್ತಕ ಕೈಗೆತ್ತಿಕೊಂಡಾಗ ಅವರಿಬ್ಬರೂ, ‘‘ನೀನು ಆಯಿಷಾ ಖಾನ್ ಸಂಪಾದಿಸಿದ ಪುಸ್ತಕ ಸಹ ಓದಬೇಕು’’ ಎಂದಿದ್ದರು. ಆಯಿಷಾ ಖಾನಳ ಆ ಪುಸ್ತಕದ ವಿವರಣೆ ಕೇಳಿದ ಬಳಿಕವಂತೂ ಆ ಪುಸ್ತಕ ಓದದೆ ಇದ್ದರೆ ಆಗದು ಎಂದು ತಿಳಿಯಿತು. ಅಹಮದಾಬಾದಿನಿಂದ ಮರಳಿದವನೇ ಆಯಿಷಾ ಖಾನ್‌ಗೆ ‘‘ಪುಸ್ತಕದ ಪ್ರತಿ ಬೇಕು’’ ಎಂದು ಒಂದು ಇ-ಮೇಲ್ ಕಳುಹಿಸಿದೆ. ನನ್ನ ವಿಳಾಸ ಪಡೆದು, ‘ಒಂದೆರಡು ವಾರದಲ್ಲಿ ಕಳುಹಿಸುತ್ತೇನೆ’ ಎಂದ ಆಯಿಷಾ ಖಾನ್ ಪುಸ್ತಕ ಕಳುಹಿಸಿ ಕೊಡಲು ಮರೆತೇ ಹೋದಳು. ಆದರೆ ಕೆಲವೇ ಕೆಲವು ದಿನಗಳಲ್ಲಿ ಮುಂಬೈಗೆ ಹೋಗಬೇಕಾಗಿ ಬಂತು. ಆಗ ತಕ್ಷಣ ಆಯಿಷಾ ಖಾನ್‌ಗೆ ಒಂದು ಪತ್ರ ಬರೆದೆ, ‘‘ಮುಂಬೈಗೆ ಬರುತ್ತಿದ್ದೇನೆ. ಮುಖತಃ ಭೇಟಿಯಾಗಿ ಪುಸ್ತಕ ಪಡೆಯುತ್ತೇನೆ. ಮನೆಗೆ ಬಾ..’’ ಎಂದು ಉತ್ತರ ಬಂದಿತ್ತು ಮನೆಯ ವಿಳಾಸದೊಂದಿಗೆ.

‘‘ಆಯಿಷಾ ಖಾನ್ ಮಹಾರಾಷ್ಟ್ರ ಮೂಲದವಳು. ಹುಟ್ಟಿ ಬೆಳೆದದ್ದು ಮಾತ್ರ ಗುಜರಾತಿನಲ್ಲಿ. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ವರದಿಗಾರಳಾಗಿದ್ದ ಆಕೆ 2002ರಲ್ಲಿ ದಂಗೆಯ ಬಳಿಕ ಗುಜರಾತಿನ ಉದ್ದಗಲ ಸಂಚರಿಸಿ ಸಾಮಾನ್ಯರಲ್ಲಿ ಸಾಮಾನ್ಯ ಮುಸಲ್ಮಾನರು ದಂಗೆಯ ಕುರಿತು ಬರೆದಿದ್ದ ಕವಿತೆಗಳನ್ನು ಸಂಗ್ರಹಿಸಿ ಹಿಂದಿ ಮತ್ತು ಆಂಗ್ಲ ಭಾಷೆಗೆ ಅನುವಾದಿಸಿದ್ದಳು. ಅದನ್ನು ಪ್ರಕಟಿಸಲು ಮುಂದೆ ಬಂದ ಪ್ರಕಾಶಕ ಮುದ್ರಿತಗೊಂಡ ಪುಸ್ತಕವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲೇ ಇಲ್ಲ’’ ಎಂದಿದ್ದ ಹಿರೆನ್ ಭಾಯಿ ಮತ್ತು ಸರೂಪ್ ಬೆಹನ್ ಪುಸ್ತಕದ ಕೆಲವು ಪ್ರತಿಗಳು ಆಯಿಷಾ ಬಳಿ ಇವೆ ಎಂದಿದ್ದರು. ಕೆಲವು ಇ-ಮೇಲ್ ವ್ಯವಹಾರದ ಬಳಿಕ ನಾನು ಆಯಿಷಾ ಖಾನ್ ಮನೆಯಲ್ಲಿದ್ದೆ.

ಹಿರೆನ್ ಭಾಯಿ ಮತ್ತು ಸರೂಪ್ ಬೆಹನ್ ಪರಿಚಯ ಹೇಗೆ ಎಂದು ವಿಚಾರಿಸಿದ ಆಯಿಷಾ ತಾನು ಅನುವಾದಿಸಿದ ಮತ್ತು ಸಂಪಾದಿಸಿದ ‘ಸ್ಕ್ಯಾಟರ್ಡ್ ವಾಯ್ಸಸ್’ ಮತ್ತದರ ಹಿಂದಿ ಅನುವಾದ ‘ಕುಚ್ ತೋ ಕಹೋ ಯಾರೋ’ ನನ್ನ ಕೈಗಿತ್ತಳು, ‘‘ಇವು ನನ್ನ ಬಳಿ ಉಳಿದಿರುವ ಕೊನೆಯ ಪ್ರತಿ’’ ಎನ್ನುತ್ತಾ. ಪುಸ್ತಕದ ಮೇಲೆ ನಾನು ಕಣ್ಣಾಡಿಸುತ್ತಿರಲು ಆಯಿಷಾ ಪುಸ್ತಕದ ಹಿಂದಿನ ಕತೆ ಹೇಳತೊಡಗಿದಳು...

ದಂಗೆಯನ್ನು ವರದಿ ಮಾಡಿದ ಆಯಿಷಾಳನ್ನು ದಂಗೆಯ ಬಳಿಕ, ‘‘ಇದು ನಾನು ನನ್ನ ಉದ್ಯೋಗದ ಭಾಗವಾಗಿ ಮಾಡಿದ ಕೆಲಸ. ಮನುಷ್ಯಳಾಗಿ, ಒಬ್ಬ ವ್ಯಕ್ತಿಯಾಗಿ ನಾನು ಏನು ಮಾಡಿದೆ’’ ಎಂಬ ಪ್ರಶ್ನೆ ಕಾಡ ತೊಡಗಿತು. ಈ ಪ್ರಶ್ನೆಯಷ್ಟೇ ಆಕೆಯನ್ನು ಕಾಡಿದ್ದು ಗುಜರಾತಿ ಸಾಹಿತ್ಯ ದಂಗೆಯ ಕುರಿತು ತಾಳಿದ ಮೌನ. ಆಗ ಗುಜರಾತಿನ ಜನ ದಂಗೆಗೆ ಪ್ರತಿಕ್ರಿಯೆಯಾಗಿ ಸಾಹಿತ್ಯ- ಕಾವ್ಯ- ಸೃಷ್ಟಿಸಿದರೇ ಎಂಬ ‘ಕುತೂಹಲದೊಂದಿಗೆ’ ಆಯಿಷಾ ತನ್ನ ಯಾತ್ರೆ ಆರಂಭಿಸಿದಳು. ‘‘ಕುತೂಹಲಕ್ಕಿಂತ ಹೆಚ್ಚಾಗಿ ನನ್ನನ್ನು ತಲ್ಲಣಗೊಳಿಸಿದ್ದ ವರ್ತಮಾನವನ್ನು ಅರ್ಥೈಸಿಕೊಳ್ಳಲು ಒಪ್ಪಿಕೊಳ್ಳಲು ಹೆಣಗಾಡುತ್ತಿದೆ. ಎನೋ ಉತ್ತರ ಬೇಕಿತ್ತು. ಎನೋ ಸಮಾಧಾನ ಬೇಕಿತ್ತು’’ ಎಂದು ಆಕೆ 11 ವರ್ಷಗಳ ಬಳಿಕ ಹೇಳುವಾಗಲೂ ಆಕೆಯ ಸ್ವರದಲ್ಲಿ ಒಂದು ರೀತಿಯ ತಳಮಳವಿತ್ತು.

ಯಾತ್ರೆ ಆರಂಭಿಸಿದ ಆಯಿಷಾ ತಾನು ಕೇವಲ ಮುಸಲ್ಮಾನರು ಬರೆದ ಕವಿತೆಗಳನ್ನ ಸಂಗ್ರಹಿಸುತ್ತೇನೆ ಎಂಬ ನಿರ್ಧಾರಕ್ಕೆ ಬರಲು ಕಾರಣ ಆಕೆಗೆ ಆ ಹೊತ್ತಿಗೆ ತಾನು ‘‘ಕೇವಲ ಧಾರ್ಮಿಕವಾಗಿ ಅಲ್ಲ ಅದಕ್ಕಿಂತ ಹೆಚ್ಚಿನದಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಓರ್ವ ಮುಸಲ್ಮಾನಳು’’ ಎಂಬುದು ಅರಿವಾಗಿತ್ತು. ದಾರಿಯಲ್ಲಿ ಸಿಕ್ಕಿದವರನ್ನು, ‘‘ದಂಗೆಯ ಕುರಿತು ಇಲ್ಲಿ ಯಾರಾದರು ಕಾವ್ಯ ರಚಿಸಿದ್ದರೆ?’’ ಎಂದು ಪ್ರಶ್ನಿಸುತ್ತ ಗೊತ್ತು ಗುರಿಯಿಲ್ಲದೆ ಅಪರಿಚಿತ ಓಣಿಗಳಲ್ಲಿ ಅಪರಿಚಿತ ಜನರ ನಡುವೆ ಕಾವ್ಯ ಅರಸುತ್ತ ಆಯಿಷಾ ನಡೆದಳು. ಆಕಸ್ಮಿಕವೋ ಅದೃಷ್ಟವೋ ಏನೋ ಜನರು ‘‘ಹಾಂ ಹಾಂ’’ ಎನ್ನುತ್ತಾ ಆಕೆಗೆ ಅಲ್ಲೇ ಹತ್ತಿರದ ಒಬ್ಬ ಕವಿಯ ಬಳಿ ಕಳುಹಿಸುತ್ತಿದ್ದರು. ಹೀಗೆ ಭೇಟಿಯಾದ ಹಲವು ಕವಿಗಳು ಯಾವುದೋ ಪ್ಲಾಸ್ಟಿಕ್ ಚೀಲದೊಳಗಿಂದ ಕವಿತೆಯೊಂದನ್ನು ಹೊರಗೆಳೆದು ಕೊಟ್ಟರೆ ಇನ್ನ್ಯಾರೋ ಯಾವುದೋ ಅಂಗಡಿಯ ಬಿಲ್ ಹಿಂದೆ ಬರೆದ ಕವಿತೆಯನ್ನು ಮುಂದಿಟ್ಟರು. ತಮ್ಮ ಬಳಿಯಿದ್ದ ತಮ್ಮ ಕವಿತೆಯ ಏಕೈಕ ಪ್ರತಿಯನ್ನು ಹಲವರು ಆಯಿಷಾಗೆ ಒಪ್ಪಿಸಿದರು. ಆದರೆ ಆಕೆ ಭೇಟಿಯಾದ ಕೆಲವು ಹೆಣ್ಮಕ್ಕಳು ತಮ್ಮ ಕವಿತೆಯನ್ನು ಕೊಡಲು ಒಪ್ಪಲಿಲ್ಲ. ‘‘ನಾವು ಹಂಚಿಕೊಳ್ಳಲು ಬರೆದಿದ್ದಲ್ಲ. ನಮಗಾಗಿಯೇ ಬರೆದುಕೊಂಡಿದ್ದು’’ ಎಂದರು. ಒಂದು ಕಡೆ ತಮ್ಮ ಕವಿತೆಯನ್ನು ನಕಲು ಮಾಡದೆ ಇದ್ದ ಒಂದೇ ಪ್ರತಿಯನ್ನು ಕೊಟ್ಟ ಜನರು ಇನ್ನೊಂದೆಡೆ ತಮ್ಮ ಕವಿತೆಯನ್ನು ಹಂಚಿಕೊಳ್ಳದ ಜನರು. ಇದನ್ನು ಆಯಿಷಾ ಹೇಳುವಾಗ, ‘‘ಕವಿತೆಗೆ ನಿಜವಾಗಿಯೂ ನೋವನ್ನು ನಿವಾರಿಸುವ ಇಲ್ಲ ಸ್ವಲ್ಪವಾದರೂ ಗುಣಪಡಿಸುವ ಶಕ್ತಿ ಇದೆಯೇ?’’ ಎಂದು ನಂಗೆ ನಾನೇ ಕೇಳಿಕೊಂಡೆ. ‘‘ಇಲ್ಲ’’ ಎಂಬುದು ಅಲ್ಲಿ ತನಕ ನನ್ನ ನಂಬಿಕೆಯಾಗಿತ್ತು. ಕಸಾಯಿಖಾನೆ ನಡೆಸುತ್ತಿದ್ದ ಓರ್ವ ಕವಿಯ ಕುರಿತು ಹೇಳುತ್ತಾ, ‘‘ಇಡೀ ಉರ್ದು ಕಾವ್ಯದ ಪರಂಪರೆ ಅವನ ನಾಲಿಗೆ ತುದಿಯಲ್ಲಿತ್ತು’’ ಎನ್ನುತ್ತಾ ಆಕೆ ‘‘ಆತ ಕಲಿತದ್ದು 8ನೆ ಕ್ಲಾಸ್ ತನಕ ಮಾತ್ರ’’ ಎಂದಳು. ಮಾತು ಮುಂದುವರಿಸುತ್ತಾ ಆಕೆ, ‘‘ಪ್ರತೀ ಬಾರಿ ಮುಸಲ್ಮಾನರು ಅನಕ್ಷರಸ್ಥರು ಹಾಗಾಗಿ ಹಿಂದುಳಿದಿದ್ದಾರೆ ಎನ್ನುತ್ತಾರೆ. ಆದರೆ ಅಕ್ಷರಾಭ್ಯಾಸಕ್ಕೂ ಶಿಕ್ಷಣಕ್ಕೂ ಸಂಸ್ಕೃತಿಗೂ ಸಂಸ್ಕಾರಕ್ಕೂ ಯಾವ ಸಂಬಂಧ? ಓದು ಬರಹ ಚೆನ್ನಾಗಿ ಬಲ್ಲ ಪದವೀಧರೆಯಾದ ನನಗೆ ಆ ಕಸಾಯಿಖಾನೆ ಕವಿಗೆ ಇದ್ದ ಉರ್ದು ಕಾವ್ಯದ ಜ್ಞಾನ ಇಲ್ಲ’’ ಎನ್ನುತ್ತಾ ಒಂದು ನಿಮಿಷ ಮೌನವಾಗಿ ಆಯಿಷಾ, ‘‘ತಕ್ಕ ಮಟ್ಟಿಗೆ ಲಿಬರಲ್ ಆದ ನಾನು ಸಹ ಒಬ್ಬ ಕಸಾಯಿ ಖಾನೆಯಾತನನ್ನು ಕವಿಯಾಗಿ ಕಲ್ಪಿಸ್ಕೊಳ್ಳಲಿಕ್ಕೆ ಆಗಿರಲಿಲ್ಲ. ನನ್ನ ದೃಷ್ಟಿ ಪಲ್ಲಟವಾಯಿತು ಈ ಸಂಕಲನ ತಯಾರಿಸುವ ಹೊತ್ತಿಗೆ. ಈ ಸಂಕಲನ ನಮ್ಮ ತಲೆಯಲ್ಲಿ ಇರುವ ಎಷ್ಟೋ ಚಿತ್ರಗಳನ್ನು ತಲೆಕೆಳಗಾಗಿಸುತ್ತದೆ’’ ಎಂದಳು.

‘‘ಈ ಸಂಕಲನದ ಒಂದು ಮುಖ್ಯ ಭಾವ ಎಂದರೆ- ದ್ರೋಹ’’ ಎನ್ನುತ್ತಾ ಆಕೆ, ‘‘ದ್ರೊಹಕ್ಕೊಳಗಾಗಿದ್ದೇವೆ ಎಂದು ಅನ್ನಿಸುವುದು ಯಾವಾಗ?’’ ಎಂದು ಪ್ರಶ್ನಿಸಿದಳು. ನನ್ನ ಉತ್ತರಕ್ಕೆ ಕಾಯದೆ ಆಕೆ, ‘‘ಪ್ರೀತಿ ಇರದೇ ದ್ರೋಹ ಇರಲಾರದು’’, ಎಂದಾಗ ಅವಳೊಳಗಿನ ನೋವು ಅವಳ ಕಣ್ಣಿನಿಂದ ಹೊರಗಿಣುಕುತ್ತಿತ್ತು. ‘‘ದ್ರೋಹಕ್ಕೊಳಗಾದ ಬಳಿಕವೂ ಜನರು ದೇಶ ಬಿಟ್ಟು ಹೋಗುತ್ತಿಲ್ಲ ಎಂದಾದರೆ ಅದು ಅವರು ಈ ದೇಶವನ್ನು ಈ ನೆಲವನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಹೇಳುತ್ತದೆ. ಇಲ್ಲಿ ಪ್ರತಿನಿತ್ಯ ತಮ್ಮ ಬದುಕು ನಡೆಸಲು ನಾವು ನಾವಾಗಿರುವ ಕಾರಣ ಬೆಲೆ ಕಟ್ಟಬೇಕಾಗಿದೆ ನಾವು. ಮನೆ ಸಿಗಬೇಕಿದ್ದರೆ, ಮಕ್ಕಳನ್ನು ಶಾಲೆಗೆ ಸೇರಿಸಬೇಕಿದ್ದರೆ, ಗ್ಯಾಸ್ ಕನೆಕ್ಷನ್ ಬೇಕಿದ್ದರೆ ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಕಷ್ಟ ಇರಬಾರದು. ಆದರೆ ಇಂಥ ಸಾಮಾನ್ಯ ವಿಚಾರಗಳಿಗೆ ನಮಗಾಗುವ ಕಷ್ಟ ಅಷ್ಟಿಷ್ಟಲ್ಲ. ನಮ್ಮ ಬದುಕಿನಲ್ಲಿ ಸಹಜಸ್ಥಿತಿಯೇ ಇಲ್ಲ. ನಮ್ಮ ಧಾರ್ಮಿಕ ಐಡೆಂಟಿಟಿಯ ಕಾರಣ ನಮಗೆ ಇಷ್ಟೆಲ್ಲಾ ಕಷ್ಟ. ಆದರೂ ಈ ದೇಶ ತೊರೆದಿಲ್ಲ ಅಂತಾದರೆ ಅದರರ್ಥ ಈ ದೇಶದ ಬಗ್ಗೆ ಇರುವ ಪ್ರೀತಿ ಅಂಥದ್ದು’’.

ಕವಿತೆಗಳ ಕುರಿತು ನುಡಿಯುತ್ತ ಜಾರಿ ತನ್ನ ಕತೆಯನ್ನೇ ಹೇಳಲಾರಂಭಿಸಿದ ಆಯಿಷಾ ಕ್ಷಮೆ ಕೋರಿ ಮತ್ತೆ ಆಕೆ ಸಂಗ್ರಹಿಸಿ ಸಂಪಾದಿಸಿದ್ದ ಸಂಕಲನದ ಕುರಿತು ಮಾತು ಮುಂದುವರಿಸಿದಳು. ‘‘ಈ ಸಂಕಲನ ಸಾಹಿತ್ಯಿಕವಾಗಿ ಉತೃಷ್ಟವೋ ಅಲ್ಲವೋ ನನಗೆ ಗೊತ್ತಿಲ್ಲ. ನಾನು ಸಾಹಿತ್ಯ ಅಭ್ಯಾಸ ಮಾಡಿಲ್ಲ. ಸೌಂದರ್ಯಶಾಸ್ತ್ರ ನನಗೆ ತಿಳಿದಿಲ್ಲ’’. ಆ ಮಾತು ಕೇಳಿ ನನಗೆ ನಾನೇ ಕೇಳಿಕೊಂಡೆ: ಪ್ರತಿಕ್ರಿಯೆಯ ಸೌಂದರ್ಯಶಾಸ್ತ್ರ ಯಾವುದು? ಪ್ರತಿರೋಧದ ಸೌಂದರ್ಯಶಾಸ್ತ್ರ ಯಾವುದು? ಕಾಥರಸಿಸ್‌ಗೆ ಎಂಥ ಸೌಂದರ್ಯಶಾಸ್ತ್ರ? ಚಿಕಿತ್ಸೆಗೆ ಯಾವ ಸೌಂದರ್ಯಶಾಸ್ತ್ರ? ನನಗಂತೂ ತಿಳಿಯದು.

ಏನು ಹೇಳಬೇಕೋ ತಿಳಿಯದಾಯಿತು. ಸುಮ್ಮನೆ ಕೂರಲೂ ಆಗಲಿಲ್ಲ. ಈ ಪುಸ್ತಕದ ಪ್ರಕಾಶಕರು ಮಾರುಕಟ್ಟೆಗೆ ಪುಸ್ತಕ ಬಿಡುಗಡೆ ಮಾಡದೆ ಹೋದಾಗ ಇನ್ನೊಬ್ಬ ಪ್ರಕಾಶಕರನ್ನು ಯಾಕೆ ಭೇಟಿ ಮಾಡಿ ಪುಸ್ತಕ ಜನರಿಗೆ ತಲುಪುವಂತೆ ಮಾಡಲಿಲ್ಲ ಎಂದು ಕೇಳಿದಾಗ ಆಯಿಷಾ, ‘‘ಅಷ್ಟು ಹೊತ್ತಿಗಾಗಲೇ ನನಗೆ ತುಂಬಾ ಸುಸ್ತಾಗಿ ಹೋಗಿತ್ತು. ಭಾವನಾತ್ಮಕವಾಗಿ ಮಾನಸಿಕವಾಗಿ ಸುಸ್ತಾಗಿದ್ದೆ. ಅದೂ ಅಲ್ಲದೆ ನಾನು ನನಗಾಗಿಯೇ ಉತ್ತರ, ಸಮಾಧಾನ ಹುಡುಕಿಕೊಂಡು ಹೊರಟಿದ್ದು. ಪುಸ್ತಕ ಸಿದ್ಧಪಡಿಸುವ ಹೊತ್ತಿಗಾಗಲೇ ನನಗೆ ಒಂದು ರೀತಿಯ ಭರವಸೆ ಒಂದು ರೀತಿಯ ಆಶಾಭಾವ ದೊರಕಿತ್ತು’’.

ಆಕೆಯ ಮನೆಯಿಂದ ಹೊರಟ ನಾನು ಆಟೋ ಹತ್ತಿದಾಗ ಸುಮ್ಮನೆ ಪುಸ್ತಕದ ಪುಟ ತಿರುವಿದೆ. ಕಣ್ಣಿಗೆ ಕಂಡಿದ್ದು ನದೀಮ್ ಸಯ್ಯದ್ ಅಲಿ ಎಂಬ ಕವಿಯ ಗಜಲ್ ಒಂದರ ಒಂದು ದ್ವಿಪದಿ: ಖುದಾ ಹೀ ಕರ್ತಾ ಹೈ ಹಮ್ ಫೈಸಲಾ ನಹಿ ಕರ್ತೆ,

ಸಿತಮ್ ಕಾ ಕರ್ಜ್ ಸಿತಮ್ ಸೆ ಅದಾ ನಹಿ ಕರ್ತೆ.

ದೇವರೇ ನಿರ್ಧರಿಸುತ್ತಾನೆ ನಾವು ನಿರ್ಧರಿಸುವುದಿಲ್ಲ,

ದ್ವೇಷಕ್ಕೆ ನಾವು ದ್ವೇಷದಿಂದ ಉತ್ತರಿಸುವುದಿಲ್ಲ.

ಹೌದು. ಪ್ರತೀಕಾರದ ಬದಲು ಕವಿತೆ ರಚಿಸಿದ್ದು ಮನುಷ್ಯತ್ವದ ಬಗ್ಗೆ ಭರವಸೆ ಹುಟ್ಟಿಸುವಂಥದ್ದೇ. ಖಡ್ಗದ ಬದಲು ಕಾವ್ಯದ ಮುಖಾಂತರ ಪ್ರತಿಕ್ರಿಯಿಸಿದ್ದು ಮಾನವತ್ವದ ಬಗ್ಗೆ ಆಶಾಭಾವ ಮೂಡಿಸುವಂಥದ್ದೇ. ನೊಂದ ಹೃದಯಗಳು ನೊಂದ ಮನಸ್ಸುಗಳು ನೊಂದ ಸಮಾಜ ಭಾಷೆಯನ್ನು ಅರಸಿದ್ದು, ಬಳಸಿದ್ದು, ಬೆಳೆಸಿದ್ದು ಎಲ್ಲವೂ ಒಂದು ರೀತಿಯ ಸಮಾಧಾನ ನೀಡುವಂಥದ್ದೇ. ಭರವಸೆಯನ್ನು ಉಳಿಸುವಂಥದ್ದೇ.

ಆಯಿಷಾ ಖಾನ್ ಸಂಗ್ರಹಿಸಿ ಸಂಪಾದಿಸಿರುವ ಸಂಕಲನದಲ್ಲಿರುವ ಕೆಲವು ಕವಿತೆಗಳ ನನ್ನ ಕನ್ನಡಾನುವಾದ ಇಗೋ ನಿಮಗಾಗಿ:

ಅಪ್ರಾಮಾಣಿಕವಾಯಿತು ಊರಿಗೆ ಊರೇ ದಂಗೆಯ ದಿನಗಳಲ್ಲಿ

ಸುಟ್ಟುಹೋದದ್ದು ಬರೀ ಬಡವರ ಮನೆಗಳೇ ದಂಗೆಯ ದಿನಗಳಲ್ಲಿ.

ದೇವರಿಗೂ ಸಹ ಬಿಸಿ ತಾಗಿ ಸ್ವಲ್ಪ ಕಸಿವಿಸಿಯಾಯಿತು

ಆಕಾಶ ಮುಟ್ಟಿತ್ತು ಬೆಂಕಿ-ಹೊಗೆ ದಂಗೆಯ ದಿನಗಳಲ್ಲಿ.

ಸಾವು ಎಲ್ಲೆಲ್ಲೂ ಎಲ್ಲೆಂದರಲ್ಲಿ ಮುದ್ರೆಯೊತ್ತಿ ಹೋಗಿದೆ

ಶಾಮ್, ಜಾನ್, ಸತ್ನಾಂ, ರೆಹಮಾನ್ ಎಲ್ಲಾ ಸತ್ತವರೇ ದಂಗೆಯ ದಿನಗಳಲ್ಲಿ.

ಧರ್ಮದ ಅಫೀಮು ಹೇಗೆ ಕುರುಡರನ್ನಾಗಿಸಿತು ನೋಡು,

ಸಲೀಮಿನ ಕೈಯಲ್ಲಾಯಿತು ಸಲ್ಮಾನಿನ ಕೊಲೆ ದಂಗೆಯ ದಿನಗಳಲ್ಲಿ.

ಗುರುವಾಣಿ ಸುಸ್ತಾಗಿ ಹೋಗಿತ್ತು ವೇದ ಮಂತ್ರಗಳು ಸೋತಿದ್ದವು,

ಯಾರ ದೃಷ್ಟಿಯೂ ಬೀಳಲಿಲ್ಲ ಕುರ್‌ಆನ್ ಮೇಲೆ ದಂಗೆಯ ದಿನಗಳಲ್ಲಿ.

ಹೊಸ ಆದರ್ಶಗಳೂ ಹುಟ್ಟಿಕೊಂಡವು ಎಂಬುದು ಸತ್ಯ,

ಅನ್ವರ್ ಮನೆಯಲ್ಲಿ ಮನ್ಹರಿಗೆ ಆಸರೆ ದಂಗೆಯ ದಿನಗಳಲ್ಲಿ.

ಅಜ್ಞಾತ (ಉರ್ದು)

ರೇಪ್

(ಬಿಲ್ಕಿಸ್ ಬಾನುಗೆ)

ಕಡಿದಿವೆ ಚೇಳುಗಳು ಹಲವು ಬಾರಿ

ಹಲವು ಬಾರಿ ಕಚ್ಚಿವೆ ವಿಷ ಸರ್ಪಗಳು

ಕುಕ್ಕಿವೆ ರಣಹದ್ದುಗಳು ಬಾರಿ ಬಾರಿ

ಇರುವೆಗಳು ಮೈಯೆಲ್ಲಾ ಸಂಚರಿಸಿ ಕಚ್ಚಿವೆ

ಆದರೂ ಇನ್ನೂ ಜೀವಂತವಾಗಿರುವೆ

ಆ ದುರಂತದ ವಿಷವುಣ್ಣುತ್ತಾ

ಆಲೋಚಿಸುತ್ತೇನೆ ಆಗಾಗ

ಇಲ್ಲ...

ಕಾಡಲ್ಲಿ ನಾ ಕಂಡದ್ದು

ಮನುಷ್ಯರನ್ನಲ್ಲ

ಯಾರ ಭ್ರೂಣದಿಂದಲೂ ಅವರು ಜನಿಸಿದ್ದಲ್ಲ

ಯಾವ ತಾಯಿಯ ಕರುಳಬಳ್ಳಿಯೊಂದಿಗೂ ಅವರಿಗಿಲ್ಲ ನಂಟು

ತಾಯಿಯ ಅಕ್ಕರೆ

ಅಕ್ಕತಂಗಿಯರ ಪ್ರೀತಿ

ಮಗಳ ಗೌರವ

ಯಾವುದೂ ತಿಳಿಯರು.

ಬಹುಶಃ ಗೊತ್ತೂ ಇಲ್ಲ ಅವರಿಗೆ

‘‘ನನ್ನೊಡಲಿನಿಂದ ಎಂದಾದರೊಮ್ಮೆ ಒಂದು

ಹೊಸ ಜೀವ ಹೊರ ಬರಬಹುದು.

ಅದು ಹೆಣ್ಣೂ ಆಗಿರಬಹುದು’’.

ನ್ಯಾಯಾಲಯದಲ್ಲಿ ನನ್ನೆದುರು

ತಂದು ನಿಲ್ಲಿಸಿರುವ ಈ ಆಕೃತಿ

ಮನುಷ್ಯನಾಕೃತಿಯೇ ಆದರೂ ಯೋಚಿಸುತ್ತೇನೆ

ಇಲ್ಲ...

ಕಾಡಲ್ಲಿ ನಾ ಯಾರನ್ನು ಕಂಡೆನೋ

ಅವರು ಎಲ್ಲಿಯ ಮನುಷ್ಯರು?

ಕಡಿದಿವೆ ಚೇಳುಗಳು ಹಲವು ಬಾರಿ

ರಣಹದ್ದುಗಳು ನನ್ನೆದೆಯ ಕುಕ್ಕಿದವು

ಇರುವೆ ಓಡಾಡಿದವು ಹೊಟ್ಟೆಯ ಮೇಲೆಲ್ಲಾ

ವಿಷಸರ್ಪ ಕಾಲನ್ನೇ ಸುತ್ತಿದ್ದವು.

ಶಕೀಲ್ ಖಾದ್ರಿ (ಉರ್ದು)

ಸಜೆ ಮತ್ತು ನ್ಯಾಯ

(ಶೇಕ್ಸ್‌ಪಿಯರ್‌ಗೆ )

ಹೆಸರಿನಲ್ಲೇನಿದೆ?

- ಎಂದಾತ

ಖಂಡಿತಾ ಕಂಡಿಲ್ಲ ನನ್ನ ಭಾರತವನ್ನು

ಎಷ್ಟಿವೆ ಧರ್ಮಗಳಿಲ್ಲಿ!

ಅವನು ಕಲ್ಪಿಸಿಕೊಂಡಿರಲಿಕ್ಕಿಲ್ಲ.

ಎಷ್ಟಿದ್ದಾರೆ ದೇವರು!

ಆತ ನಂಬಲಿಕ್ಕಿಲ್ಲ.

ಯಾರಾದರು ಸಮಜಾಯಿಸಿ ಅವನಿಗೆ

ನನ್ನ ಭಾರತದಲ್ಲಿ

ಹೆಸರು ಸೂಚಿಸುತ್ತದೆ ಧರ್ಮವನ್ನು

ಹೆಸರು ಮೃಗೀಯವಾಗಿಸುತ್ತದೆ ಮನುಷ್ಯರನ್ನು

ಹೆಸರು ಜೀವಂತವಾಗಿ ಸುಡುತ್ತದೆ

ಹೆಸರು ಜೀವನವನ್ನೇ ಇಲ್ಲವಾಗಿಸುತ್ತದೆ

(ಕಪ್ಪು ಬಿಳುಪಿಗೆ ಇಲ್ಲವಿಲ್ಲಿ ವ್ಯತ್ಯಾಸ)

ದಂಗೆಯ ಅಂತರಾತ್ಮದೊಂದಿಗೆ ಹೆಸರಿಗೆ ನಂಟಿದೆ

ಹೆಸರಿಗೆ ಜಾತಿಯ ಸೋಂಕು ಅಂಟಿದೆ

ಜಾತಿ ಇಲ್ಲಿ ಎಲ್ಲಾ ಕಾರ್ಯಗಳ ಹಿಂದಿದೆ

ಇದರಿಂದಾಗಿಯೇ -

ನ್ಯಾಯಾಧೀಶರು ಒಮ್ಮೊಮ್ಮೆ

ಸಜೆ ಘೋಷಿಸುತ್ತಾರೆ

ಅಪರಾಧಿಗಳಿಗಲ್ಲ

ಹೆಸರುಗಳಿಗೆ!

ಶಕೀಲ್ ಖಾದ್ರಿ (ಉರ್ದು)

ಆತ ಹೇಳುವುದನ್ನೇ

ನಾನೂ ಹೇಳುತ್ತಿರುವುದು

ಅವನು ಯೋಚಿಸುವುದನ್ನೇ

ನಾನೂ ಯೋಚಿಸುತ್ತಿರುವುದು

ಆತ ಮಾಡುವುದನ್ನೇ

ನಾನೂ ಮಾಡುತ್ತಿರುವುದು

ಅವನ ದೂರುಗಳೂ ಅವೇ

ನನ್ನ ದೂರುಗಳೂ ಅವೇ

ಅವನ ಧರ್ಮ ಅಪಾಯದಲ್ಲಿದೆ

ನನ್ನ ಧರ್ಮವೂ ಅಪಾಯದಲ್ಲಿದೆ

ಅವನು ತನ್ನ ಕರ್ತವ್ಯ ನಿಭಾಯಿಸುತ್ತಿದ್ದಾನೆ

ನಾನೂ ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ

ಆದರೆ

ಅವನಿಗೂ ನನಗೂ

ವ್ಯತ್ಯಾಸವಿಷ್ಟೇ:

ಅವನು ರಾಷ್ಟ್ರವಾದಿ ಅನ್ನಿಸಿಕೊಳ್ಳುತ್ತಾನೆ

ನಾನು ಆತಂಕವಾದಿ ಅನ್ನಿಸಿಕೊಳ್ಳುತೇನೆ.

ಮುಹಮ್ಮದ್ ಆರಿಫ್ ದಗಿಯ (ಉರ್ದು)

ಒಂದು ಹಳ್ಳಿ

ಅದು ನಮ್ಮದು

ಎಂಟು ಮಂದಿ ಅಣ್ಣತಮ್ಮಂದಿರು ನಾವು

ಚಟ್-ಚಟ್ ಎಂದು ಉರಿಯುತ್ತಿರುವ ನಮ್ಮ ಮನೆ

ಮನೆಯ ಹಿಂದೆ, ಅಳುತ್ತಿರುವ

ನಮ್ಮ ತಾಳೆ ಮರ, ಅಂಗಳ

ಉರಿಯುತ್ತಿರುವ ಬೇಲಿ ಅಳುತ್ತಿರಲು

ಆ ಕಡೆ

ಕಣ್ಣೀರ ಸುರಿಸುತ್ತಿದೆ ಬಾವಿ

ಬಾವಿಯ ಮಗ್ಗಲಲ್ಲಿ ಅಳುತ್ತಿರುವ ನದಿ

ನದಿಯ ಕಿನಾರೆಯಲ್ಲಿ ಹುಲ್ಲು ಮೇಯುತ್ತಿರುವ

ದನಗಳು

ಹಾಗು ದೂರ

ಬೆಟ್ಟದ ಮೇಲೆ

ಬಂಡೆಗಳ ಅಪ್ಪಿಕೊಂಡು

ಬೊಬ್ಬಿಡುತ್ತಿರುವ ನಾವು

ಎಂಟು ಮಂದಿ ಅಣ್ಣತಮ್ಮಂದಿರು

ಹೊತ್ತಿ ಉರಿಯುತ್ತಿರುವ ನಮ್ಮ ಮನೆಯ ಎದುರು

ಎದೆ ಉಬ್ಬಿಸಿ

ಮೀಸೆ ತಿರುವುತ್ತಿರುವ ಗುಂಪು.

 ಕಾಂತಿಹೀನ ಕಣ್ಣ ಗೊಂಬೆಗಳ ಮೇಲೆ

ಕಣ್ರೆಪ್ಪೆ ಬೀಳುವ ಮೊದಲು

ಈ ದೃಶ್ಯ

ಕಣ್ಣಿನ ಕ್ಯಾಮರಾ ಒಳಗಡೆ

ಸೆರೆಯಾಗುತ್ತದೆ.

ಮುರ್ತಜ ಪಠಾಣ್ (ಗುಜರಾತಿ)

ಆತಂಕ

ನೀಚತನ

ಸುಳ್ಳು

ದಂಗೆ

ಆಹುತಿ

ಕೊಲೆ

ರಕ್ತ

ಕರ್ಫ್ಯೂ

ಗೋಲಿಬಾರ್

ಪೂರ್ವಾರ್ಜಿತ ಆಸ್ತಿ ಎಂಬಂತೆ ನೀಡಿದ್ದೇವೆ ಇವನ್ನೆಲ್ಲ

ಈ ಮಕ್ಕಳೀಗ

ನಮಗೇನು ನೀಡುವರು ?

ಮುಸಾಫಿರ್ ಪಾಲನಪುರಿ (ಉರ್ದು)

ದೇವರೇ ನಿರ್ಧರಿಸುತ್ತಾನೆ ನಾವು ನಿರ್ಧರಿಸುವುದಿಲ್ಲ

ದ್ವೇಷಕ್ಕೆ ನಾವು ದ್ವೇಷದಿಂದ ಉತ್ತರಿಸುವುದಿಲ್ಲ

ನಮ್ಮ ಸಭ್ಯ ವರ್ತನೆಗೆ ದಕ್ಕ ಇನಾಮು ಇದು

ಆದರೂ ಯಾರನ್ನೂ ನಾವು ಶಪಿಸುವುದಿಲ್ಲ

ಹರಿತವಾದ ಮಾತಿನಿಂದಲೇ ಎದೆ ಸೀಳುತ್ತಾರೆ

ಖಡ್ಗವ ಬಟ್ಟೆಯೊಳಗಡೆ ಎಲ್ಲೋ ಬಚ್ಚಿಡುವುದಿಲ್ಲ

ಮೋಸ, ದ್ರೋಹ, ದಬ್ಬಾಳಿಕೆ, ಸಂಚು, ಆಕ್ರಮಣ

ನೀಚರಿಂದ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ

ಪ್ರೀತಿ, ಆದರ್ಶ, ಸ್ನೇಹ, ಭ್ರಾತೃತ್ವ

ಹಳೆ ನಾಣ್ಯಗಳಿವು, ಚಲಾವಣೆಯಲ್ಲಿಲ್ಲ

ಲೋಕವೇ ಹೆದರುವುದು ’ನದೀಮ್’ ಅವರಿಗೆ

ಯಾರು ದೇವರನ್ನಲ್ಲದೆ ಯಾರಿಗೂ ಹೆದರುವುದಿಲ್ಲ.

ನದೀಮ್ ಸೈಯದ್ ಅಲಿ (ಉರ್ದು)

ಅವರಿಗೆ ಸಮಯವಿಲ್ಲ ಭೇಟಿ ಆಗಲು

ನನಗೂ ಮನಸ್ಸಿಲ್ಲ ಅತ್ತ ಹೆಜ್ಜೆ ಹಾಕಲು

ಇದೆಂಥಾ ಕಾಲ ಕೂಡಿ ಬಂದಿದೆ ಅಬ್ಬಬ್ಬಾ !

ಕೂಡಿ ಬಾಳುವ ಜರೂರತ್ತು ಇಲ್ಲ ಯಾರಿಗೂ

ಹೊತ್ತಿ ಉರಿದ ಮನೆಯ ಒಡೆದ ಕನ್ನಡಿಯಲಿ

ಜೀವಂತ ವ್ಯಕ್ತಿಯ ಬಿಂಬವೇ ಒಂದು ಸುಳ್ಳು.

ಜೇವಿತದಲ್ಲೆ ಕಂಡಿರುವೆ ನರಕ ಯಾತನೆ

ದೇವರ ಅನುಗ್ರಹವಲ್ಲ ಮಾತ್ರ ಈ ಪ್ರಳಯವು.

ಅಝಾನ್‌ನಲ್ಲಿರುವ ಭಕ್ತಿ ಆರತಿಯಲ್ಲಿ ಅಡಕ

ಪ್ರಾರ್ಥನೆ,

ಮಾರಬೇಡ ’ಶಮಾ’ ವ್ಯಾಪಾರದ ವಸ್ತುಗಳಲ್ಲ ಇವು.

ಡಾ. ಶಮಾ ಶೇಖ್ (ಉರ್ದು)

ಈಗ ಮನೆ ಲೂಟಿಯಾಗಬಹುದು ಎಂಬ ಭಯ ಕಾಡುತ್ತಿಲ್ಲ

ಕಾರಣ ನಿಂತ ನೆಲದ ಮೇಲೆ ಮನೆ ನಿಂತಿಲ್ಲ

ತಲೆನೋವಾಗಿ ಹೋಗಿತ್ತು ಈ ಬದುಕು ’ದಾನಾ’

ಈಗೆಲ್ಲಿಯ ನೋವು? ಭುಜದ ಮೇಲೆ ತಲೆಯೇ ಉಳಿದಿಲ್ಲ !

 ಅಬ್ಬಾಸ್ ದಾನಾ (ಉರ್ದು)

ಇಷ್ಟೊಂದು ಕೆಲಸ ನಿನ್ನಿಂದ ಮಾಡಲು ಸಾಧ್ಯವೇ

ಕಣ್ಣೀರಿನಿಂದ ಸರೋವರ ತುಂಬಲು ಸಾಧ್ಯವೇ

ರೊಚ್ಚಿನ ಮಾತಿನಿಂದ ತಪ್ಪಿಸಿಕೊಳ್ಳಬಲ್ಲೆಯಾದರೂ

ಭಾಷೆಯ ಮೇಲೆ ಮತ್ತೆ ನಂಬಿಕೆ ಇಡಲು ಸಾಧ್ಯವೇೀ

ನಿನ್ನ ಕೈಗಳ ವ್ಯಾಪ್ತಿ ಬಹಳ, ಒಪ್ಪಿದೆ ನಾ ಒಪ್ಪಿದೆ

ಹಾಗೆಂದು ತಾಯಿಯ ಗೌರವ ಕೆಡಿಸುವುದು ಸಾಧ್ಯವೇೀ?

ರಕ್ತದ ನದಿಗಳೆಲ್ಲಾ ಸಾಗರ ಸೇರುತ್ತಿವೆ

ನಾ ಮುಳುಗುತ್ತಿರಲು ನೀ ಉಳಿಯಲು ಸಾಧ್ಯವೇ

ಯಮರಾಜ ಬಂದೇ ಬರುತ್ತಾನೆ ನಿನ್ನ ಬಾಗಿಲಿಗೂ

ಆ ಕ್ಷಣ ನೀ ಬದುಕನ್ನು ಬೇಡಲು ಸಾಧ್ಯವೇ

ಅಸ್ಥಿಪಂಜರವು ಮತ್ತೆ ಮತ್ತೆ ಮೇಲೇಳುವುದು

ಮೇಲೇಳದಷ್ಟು ಆಳದಲ್ಲಿ ಅಗಿಯಲು ಸಾಧ್ಯವೇ

ಕಿನಾರೆಗಳೆಲ್ಲಾ ಕೊಚ್ಚಿಹೊದವು ಅಲೆಗಳಬ್ಬರಕೆ

ಇಲ್ಲಿ ನಿನ್ನ ನೌಕೆ ಲಂಗರು ಹಾಕಲು ಸಾಧ್ಯವೇ

ಜೀವಂತ ದಹಿಸಿದರು ಹಲವಾರು ಮಂದಿ

ಇಷ್ಟೆಲ್ಲಾ ನಿನ್ನಿಂದ ಮರೆಯಲು ಸಾಧ್ಯವೇ

ಸಾಗರ ನಿನ್ನ ಮುಂದೆ ಮೃತ್ಯು ನಿನ್ನ ಹಿಂದೆ

ಯಾರಿಗಾದರೂ ಈಗ ಬೆನ್ನು ಹಾಕಲು ಸಾಧ್ಯವೇ

ಯಾರಾದರು ಯಾರಿಗಾದರು ಮೋಸ ಮಾಡುವ ಮಾತು ಇನ್ನೆಲ್ಲಿ?

‘ಆದಿಲ್’ ತನಗಲ್ಲದೆ ಇತರರಿಗೆ ಇನ್ನು

ಮೋಸ ಮಾಡಲು ಸಾಧ್ಯವೇ

ಆದಿಲ್ ಮನ್ಸೂರಿ (ಗುಜರಾತಿ)

ಕೆಲವೊಮ್ಮೆ ಆತ ನೆಲದ ನಾಯಕ ಎಂದೆನಿಸುತ್ತಿತ್ತು

ಪರದೆ ಹಾರಲು ಓಡಲಾಳಕ್ಕೆ ಚೂರಿ ಇರಿದಂತಿತ್ತು.

ಇಷ್ಟೊಂದು ಹದಗೆಟ್ಟಿರಲಿಲ್ಲ ವಾತಾವರಣ ಹಿಂದೆಂದು

ಈ ಬಾರಿ ಮೃಗಗಳೆಲ್ಲಾ ನನ್ನೂರ ಸೇರಿದಂತಿತ್ತು

ನಾಯಕನೇ ಇಲ್ಲಿ ಕೊಲೆಗಡುಕನಾಗಿರಲು

ಅವನೆದುರು ರಾಕ್ಷಸರೂ ವಾಸಿ ಎಂಬಂತಿತ್ತು

ಎಲ್ಲೆಲ್ಲೂ ಬೆಂಕಿ ಕಣ ಕಣದಲ್ಲೂ ಪ್ರಳಯಾತ್ಮಕ ಬೆಂಕಿ

ಮರುಭೂಮಿ ಕಂಡಾಗ ಅದು ನನ್ನ ಮನೆಯಂತಿತ್ತು.

 ಅಹ್ಮದ್ ಹುಸೈನ್ ಶೇಖ್ ’ಸರೋಶ್’ (ಉರ್ದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)