varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಒಂದೇ ಕಥಾನಕ, ಎರಡು ಭಾಷೆಗಳು

ವಾರ್ತಾ ಭಾರತಿ : 4 Nov, 2017
ಡಾ. ಬಿ. ಭಾಸ್ಕರ ರಾವ್

ಮತೀಯ ಸೌಹಾರ್ದದ, ಕೋಮುಸಾಮರಸ್ಯದ ಆವಶ್ಯಕತೆಯನ್ನು ಚಿಕ್ಕಮಕ್ಕಳಿಗೆ ಮನದಟ್ಟು ಮಾಡುವ ಸದುದ್ದೇಶದಿಂದ ನಮ್ಮ ಸಮಾಜ ವಿಜ್ಞಾನ ಪುಸ್ತಕಗಳಿರುವುದು ಸ್ಪಷ್ಟ. ಆದರೆ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಆರಂಭದಿಂದಲೇ, ಭಾರತದಲ್ಲಿರುವವರು ಎಂದರೆ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಎಂಬ ಮೂರೇ ಪಂಗಡಗಳು ಎನ್ನುವ ಭಾವನೆಯನ್ನು ತುಂಬಬಾರದು.

ಯಾವುದೇ ಒಂದು ವಿಷಯವನ್ನು ಅಥವಾ ಘಟನೆಯನ್ನು ಯಾರು ಎಲ್ಲಿ ಯಾವ ಸಾಮಾಜಿಕ-ರಾಜಕೀಯ ಅಥವಾ ಧಾರ್ಮಿಕ-ಸಾಂಸ್ಕೃತಿಕ ಹಿನ್ನೆಲೆಯಿಂದ ನೋಡುತ್ತಾರೆ, ವಿಶ್ಲೇಷಿಸುತ್ತಾರೆ ಎಂಬುದನ್ನು ಅವಲಂಬಿಸಿ ಒಂದು ಕಥಾನಕ ಅನಾವರಣಗೊಳ್ಳುತ್ತದೆ. ಒಂದು ಮಾನಸಿಕ ಚೌಕಟ್ಟನ್ನು ಆಧರಿಸಿ ಆ ನಿರ್ದಿಷ್ಟ ಮನಸ್ಸು ಏನನ್ನೇ ಆದರೂ ಗ್ರಹಿಸುತ್ತದೆ, ಪರಿಭಾವಿಸುತ್ತದೆ, ಮತ್ತು ಅದನ್ನು ಅಭಿವ್ಯಕ್ತಿಸುತ್ತದೆ. ಈ ದೃಷ್ಟಿಯಿಂದ ಗಮನಿಸಿದಾಗ ನಮ್ಮ ಮಕ್ಕಳು ಶಾಲೆ ಕಾಲೇಜುಗಳಲ್ಲಿ ಓದುವ ಇತಿಹಾಸದ ವಿವರಣೆಗಳಲ್ಲಿ ಕಂಡುಬರುವ ಎರಡು ರೀತಿಯ ಭಾಷೆಗಳನ್ನು ಗುರುತಿಸಬಹುದು. ಕಥಾನಕವು ಸುಮಾರಾಗಿ ಒಂದೇ ಆದರೂ, ಒಂದೇ ಕಥಾನಕ ಯಾಕೆ ಎರಡು ರೀತಿಯ ಪದಪುಂಜಗಳಲ್ಲಿ ಅನಾವರಣಗೊಳ್ಳುತ್ತದೆ ಎಂಬ ಪ್ರಶ್ನೆಗೆ ಸಿಗುವ ಉತ್ತರ, ಪ್ರಭುತ್ವದ ಕುರಿತ ನಮ್ಮ ನಿಲುವುಗಳ ಹಿಂದೆ ಇರುವ ಸೈದ್ಧಾಂತಿಕ ದ್ವಂದ್ವಗಳನ್ನು, ಮತಾಂಧ ಮನೋಧರ್ಮವನ್ನು ತೆರೆದಿಡಬಲ್ಲದು.

ಈ ಹಿನ್ನೆಲೆಯಲ್ಲಿ, ನಮ್ಮ ದೇಶವನ್ನಾಳಿದ ಎರಡು ಪ್ರಭುತ್ವಗಳ ಬಗ್ಗೆ ನಮ್ಮ ಶಿಕ್ಷಣ ಕ್ರಮದಲ್ಲಿ ಬಳಸಲಾದ ಪಠ್ಯಗಳಲ್ಲಿ ನನಗೆ ದೊರಕಿದ ಕೆಲವು ಒಳನೋಟಗಳು ಇಲ್ಲಿವೆ.
ಇಲ್ಲಿ ಸದ್ಯದ ಶಿಕ್ಷಣ ವ್ಯವಸ್ಥೆಗೂ ಸಮಾಜದಲ್ಲಿ ಪ್ರಚಲಿತವಿರುವ ಕೆಲವು ಸಮೀಕರಣಗಳಿಗೂ ಸಾಮಾನ್ಯೀಕರಣಗಳಿಗೂ ಇರುವ ಅಥವಾ ಇರಬಹುದಾದ ಕೊಂಡಿಗಳನ್ನು ಹುಡುಕುವ ಪ್ರಯತ್ನ ನಡೆಸಿದ್ದೇನೆ. ಉದಾಹರಣೆಗೆ ಇಂದು ಭಯೋತ್ಪಾದನೆಯನ್ನು ಒಂದು ನಿರ್ದಿಷ್ಟ ಧರ್ಮದೊಂದಿಗೆ, ಭಯೋತ್ಪಾದಕರನ್ನು ಒಂದು ಧಾರ್ಮಿಕ ಸಮುದಾಯದ ಸದಸ್ಯರೊಂದಿಗೆ ಸಮೀಕರಿಸಲಾಗುತ್ತಿದೆ. ‘ಬಾಂಬ್ ಸ್ಫೋಟ’ ಎಂಬ ಸುದ್ದಿ ಕಿವಿಯ ಮೇಲೆ ಬೀಳುತ್ತಲೇ ‘‘ಓಹೋ, ಹಾಗಾದರೆ ‘ಅವರೇ’ ಇರಬೇಕು’’ ಎಂಬ ಸಾಮಾನ್ಯೀಕರಣದ ಉದ್ಗಾರ ಹೊರಡುತ್ತದೆ. ಒಂದು ಅಲ್ಪಸಂಖ್ಯಾಕ ಸಮುದಾಯದ ಸದಸ್ಯರ ಬಗ್ಗೆ ಇಂತಹ ಸಮೀಕರಣ ಹಾಗೂ ಸಾಮಾನ್ಯೀಕರಣಗಳಿಗೆ ನಾವು ನಮ್ಮ ಪಠ್ಯ ಪುಸ್ತಕಗಳಲ್ಲಿ ಬೋಧಿಸುವ ಇತಿಹಾಸದ ಪಾಠಗಳು ಕಾರಣವಿರಬಹುದು. ಇಲ್ಲದೆ ಇರಬಹುದು. ಅದೇನಿದ್ದರೂ ಈ ಸಮೀಕರಣ ಹಾಗೂ ಸಾಮಾನ್ಯೀಕರಣಗಳ ಕಾರಣಗಳನ್ನು ಗುರುತಿಸದೆ ಇರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಸೋಲುಗಳಲ್ಲಿ ಒಂದು. ಈ ಕಾರಣಗಳನ್ನು ಯಾಕೆ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಪತ್ತೆ ಮಾಡಬೇಕಾಗಿದೆ.

ಅಲ್ಲದೆ ನಮ್ಮ ಶಾಲೆಗಳಲ್ಲಿ 1980-2010ರ ಅವಧಿಯಲ್ಲಿ ಬಳಕೆಯಲ್ಲಿದ್ದ ಮತ್ತು ಈಗ ಬಳಕೆಯಲ್ಲಿರುವ ಕೆಲವು ಪಠ್ಯಪುಸ್ತಕಗಳ ಕೆಲವು ಪ್ರಾತಿನಿಧಿಕ ಪಾಠಗಳನ್ನು ವಿವರವಾದ ವಿಶ್ಲೇಷಣೆಗೆ ಇದುವರೆಗೆ ಒಳಪಡಿಸಲಾಗಿಲ್ಲ. ಪರಿಣಾಮವಾಗಿ ಪಠ್ಯಗಳಲ್ಲಿರುವ ಇತಿಹಾಸ ಪಾಠಗಳಿಗೂ ಮಕ್ಕಳ ಮನಸ್ಸಿನಲ್ಲಿ ಬಲಪಂಥೀಯ ವಿಚಾರ ಗಳನ್ನು ತುಂಬುವುದಕ್ಕೂ, ಅಥವಾ ಒಂದು ನಿರ್ದಿಷ್ಟ ಸಮುದಾಯದ ಸದಸ್ಯರ ಬಗ್ಗೆ ದ್ವೇಷಭಾವ ತುಂಬುವುದಕ್ಕೂ ಇರಬಹುದಾದ ನೇರ ಸಂಬಂಧದ ಅಧ್ಯಯನ ನಡೆದಿಲ್ಲ. ಇದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿರುವ ಒಂದು ಸಮಸ್ಯೆ ಎಂದರೂ ತಪ್ಪಾಗಲಾರದು.
ಸಾಹಿತ್ಯ/ಸಮಾಜದ ವಿದ್ಯಾರ್ಥಿಯಾಗಿ, ಓರ್ವ ಅಧ್ಯಾಪಕನಾಗಿ ನಮ್ಮ ಪಠ್ಯಕ್ರಮವನ್ನು ಗಮನಿಸಿದಾಗ ಕೋಮುಸಾಮರಸ್ಯದ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳು ಎದ್ದು ಕಾಣುತ್ತವೆ.

ಇವತ್ತಿಗೂ ಬಲಪಂಥೀಯ ಶಕ್ತಿಗಳು, ಹಿಂದೂ ಮತೀಯವಾದಿಗಳು ದೇಶದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಹರಡಲು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುವ ಒಂದು ವಿಷಯವೆಂದರೆ, ಮುಸ್ಲಿಮರು/ಮುಸ್ಲಿಂ ದೊರೆಗಳು ಈ ದೇಶದ ಮೇಲೆ ದಾಳಿ ಮಾಡಿ ಈ ದೇಶದ ಸಂಪತ್ತನ್ನು ದೋಚಿದರು ಮತ್ತು ಸೋಮನಾಥ ದೇವಾಲಯವೊಂದನ್ನೇ ಹದಿನೇಳು ಬಾರಿ ದೋಚಲಾಯಿತು ಎಂಬುದನ್ನು, ಆದರೆ ಈ ದೊರೆಗಳು ದೋಚಿದ್ದಕ್ಕಿಂತ ನೂರಾರು ಪಾಲು ಸಂಪತ್ತನ್ನು ಬ್ರಿಟಿಷರು ಭಾರತದಿಂದ ದೋಚಿದರು ಎಂಬ ಸತ್ಯವನ್ನು ಮರೆಮಾಚುವ ಇತಿಹಾಸ ಪಠ್ಯಗಳು ಪ್ರಸಕ್ತ ಸಮಾಜದಲ್ಲಿ ಜನರು ಕೋಮುವಾದಿಗಳಾಗಲು ಸಹಕರಿಸುತ್ತವೆ.

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ, ಕರ್ನಾಟಕದಲ್ಲಿಯೂ ಕೂಡ ದೇಶದ ಧಾರ್ಮಿಕ ಬಹುಸಂಖ್ಯಾತರಲ್ಲಿ ಪ್ರತೀಕಾರ ಮನೋಭಾವದ ಛಾಯೆ ಇರುವ ಒಂದು ರೀತಿಯ ಧಾರ್ಮಿಕ ಪುನರುಜ್ಜೀವನ ಕಂಡುಬರುತ್ತಿದೆ. ಧಾರ್ಮಿಕ ಬಹುಸಂಖ್ಯಾತರ ವಿವಿಧ ಜಾತಿಗೆ ಸೇರಿದ ವಿವಿಧ ಗುಂಪುಗಳು ಧಾರ್ಮಿಕ ಸಮಾವೇಶ, ವಿವಿಧ ಪಂಗಡಗಳ ಮಠಾಧಿಪತಿಗಳ ಉಪಸ್ಥಿತಿ ಇರುವ ವಿವಿಧ ಸಮ್ಮೇಳ ಹಾಗೂ ಧಾರ್ಮಿಕ ಸಮಾರಂಭಗಳನ್ನು ನಡೆಸುತ್ತಿವೆ. ಕರಾವಳಿ ಕರ್ನಾಟಕದಲ್ಲಂತೂ ಪ್ರತಿದಿನ ಒಂದಲ್ಲ ಒಂದು ರೀತಿಯ ನೇಮೋತ್ಸವ, ದೈವದೇವರುಗಳ ಮೂರ್ತಿಗಳ ಪ್ರತಿಷ್ಠಾಪನೆ ಮಹೋತ್ಸವ, ದೇವ, ದೈವಸ್ಥಾನಗಳ ಜೀರ್ಣೋದ್ಧಾರ, ಸಾರ್ವಜನಿಕ ಭಜನಾ ಮಂಗಲೋತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜೆಗಳು ನಡೆಯುತ್ತಿರುತ್ತವೆ. ದಿನಪತ್ರಿಕೆಗಳ ಸ್ಥಳೀಯ ಸಂಪದಗಳಲ್ಲಿ ಇಂತಹ ಸುದ್ದಿಗಳ ಜಾಹೀರಾತುಗಳು, ಅರ್ಧಪುಟದ, ಇಡೀ ಪುಟದ ಮಾರುಕಟ್ಟೆ ಸೂತ್ರದ ಜಾಹೀರಾತುಗಳು ರಾರಾಜಿಸುತ್ತಿರುತ್ತವೆ.

‘ಭಜನಾ ಮಂದಿರ ಪುನಃ ಪ್ರತಿಷ್ಠೆ ಸಮಾರೋಪ’, ‘ಪ್ರತಿಷ್ಠಾ ಮಹೋತ್ಸವ ಮತ್ತು ಬ್ರಹ್ಮಕಲಶಾಭಿಷೇಕ’, ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರವಚನ ಮಂಗಲೋತ್ಸವ. ಸಹಸ್ರ ಚಂಡಿಕಾ ಯಾಗ, ಇತ್ಯಾದಿ ಶೀರ್ಷಿಕೆಗಳಡಿಯಲ್ಲಿ ಜಾಹೀರಾತುಗಳು ಪ್ರಕಟವಾಗುತ್ತವೆ.
ಇದನ್ನೆಲ್ಲ ನೋಡುವಾಗ ಜನರು ತುಂಬ ನೀತಿವಂತರಾಗಿದ್ದಾರೆ. ದೈವದೇವರುಗಳಲ್ಲಿ ಅಪಾರ ನಂಬಿಕೆ ಇರುವ ಸಜ್ಜನರಾಗಿದ್ದಾರೆ. ಪರಧರ್ಮ ಸಹಿಷ್ಣುಗಳಾಗಿದ್ದಾರೆ ಎಂಬ ಭಾವನೆ ಮೂಡುತ್ತದೆ. ಆದರೆ ಅದೇ ವೇಳೆ ಅಲ್ಪಸಂಖ್ಯಾತ ಸಮುದಾಯಗಳ ಪೂಜಾಸ್ಥಳಗಳ ಮೇಲೆ ದಾಳಿ ನಡೆಸಿದ ಪ್ರಕರಣಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತವೆ. ಯಾಕಾಗಿ ಈ ವಿರೋಧಾಭಾಸ? ವೈದೃಶ್ಯ? ಇದರ ಹಿಂದೆ ಏನು ಕಾರಣಗಳಿರಬಹುದು?

ಹಿಂಸೆಗೆ ಕಾರಣವಾಗುವ ಕೋಮುವಾದ ಅಥವಾ ಮತೀಯವಾದದ ಬೆಳವಣಿಗೆಗೂ, ಈ ದೇಶದಲ್ಲಿ ಹಿಂದೂ-ಮುಸ್ಲಿಂ ಎಂಬ ಮನೋವಿಭಜನೆಯ ಸ್ಥಾಪನೆಗೂ ನಮ್ಮ ಪಠ್ಯಪುಸ್ತಕಗಳಲ್ಲಿರುವ ಕೆಲವು ಪಠ್ಯಗಳಿಗೂ ಏನಾದರೂ ಸಂಬಂಧವಿರಬಹುದೇ? ಅಥವಾ ನಮ್ಮ ಪಠ್ಯಗಳ ಲೇಖಕರು ತಮಗೇ ಅರಿವಿಲ್ಲದಂತೆ ಇಂತಹ ಸಂಬಂಧ ಸೃಷ್ಟಿಗೆ ಕಾರಣವಾಗುವ ಪಠ್ಯಗಳನ್ನು ಬರೆದಿರಬಹುದೇ?

ಮತೀಯ ಸೌಹಾರ್ದದ, ಕೋಮುಸಾಮರಸ್ಯದ ಆವಶ್ಯಕತೆಯನ್ನು ಚಿಕ್ಕಮಕ್ಕಳಿಗೆ ಮನದಟ್ಟು ಮಾಡುವ ಸದುದ್ದೇಶದಿಂದ ನಮ್ಮ ಸಮಾಜ ವಿಜ್ಞಾನ ಪುಸ್ತಕಗಳಿರುವುದು ಸ್ಪಷ್ಟ. ಆದರೆ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಆರಂಭದಿಂದಲೇ, ಭಾರತದಲ್ಲಿರುವವರು ಎಂದರೆ ಹಿಂದುಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಎಂಬ ಮೂರೇ ಪಂಗಡಗಳು ಎನ್ನುವ ಭಾವನೆಯನ್ನು ತುಂಬಬಾರದು. ಕರ್ನಾಟಕದಲ್ಲಿ ಬಳಕೆಯಲ್ಲಿದ್ದ ಎರಡನೆ ತರಗತಿಯ ‘ಸಮಾಜ ಪರಿಚಯ’ದ ಮೂರನೆ ಪಾಠದಲ್ಲಿ ಒಂದು ಪುಟದಲ್ಲಿ ಹಿಂದೂಗಳ ದೇವಸ್ಥಾನದ ಜೊತೆಗೆ ಮಸೀದಿಯ ಚಿತ್ರವಿದೆ. ಮತ್ತೊಂದು ಪುಟದಲ್ಲಿ ಪ್ರತ್ಯೇಕವಾಗಿ ಕ್ರೈಸ್ತ ದೇವಾಲಯವಿದೆ. ಮೊದಲ ನೋಟಕ್ಕೆ ಮಗುವಿನ ಮನಸ್ಸಿನಲ್ಲಿ ದಾಖಲಾಗುವ ಚಿತ್ರ ದೇವಸ್ಥಾನ ಮತ್ತು ಮಸೀದಿಯದ್ದು. ಯಾಕೆಂದರೆ ದೇವಸ್ಥಾನದ ಜೊತೆಗೆ ಜಿನಬಸದಿಯಾಗಲಿ, ಬೌದ್ಧ ದೇವಾಲಯವಾಗಲಿ ಯಾವುದೂ ಇಲ್ಲ.

ಘಜನಿ ಮತ್ತು ಘೋರಿಯ ದಂಡಯಾತ್ರೆಗಳ ವಿವರಣೆ ಮತ್ತು ಭಾರತಕ್ಕೆ ಯೂರೋಪಿಯನ್ನರ ಆಗಮನದ ವಿವರಣೆಗಳನ್ನು ಹೋಲಿಸಿ ನೋಡಿದರೆ ಇತಿಹಾಸ ಪಠ್ಯ ರಚನೆಕಾರರ ದೃಷ್ಟಿಕೋನ ಗೊತ್ತಾಗುತ್ತದೆ. ಒಂದೇ ಕಥಾನಕಕ್ಕೆ ಎರಡು ರೀತಿಯ ಭಾಷೆಗಳ ಬಳಕೆ ಕಾಣಿಸುತ್ತದೆ. ಮೊದಲ ವಿವರಣೆಯಲ್ಲಿ ಬಳಸಲಾಗಿರುವ ಪದಗಳು ಲೂಟಿ.

ದೇವಸ್ಥಾನ(ಹಿಂದೂ), ಮಸೀದಿ(ಮುಸ್ಲಿಂ) ಎಂಬ ಈ ಅಪ್ರಜ್ಞಾಪೂರ್ವಕವಾದ ವಿಭಜನೆ ಭವಿಷ್ಯದಲ್ಲಿ ಅದೇ ಮಕ್ಕಳ ಮನಸ್ಸಿನಲ್ಲಿ ‘ಹಿಂದೂ-ಮುಸ್ಲಿಂ’ ಎಂಬ ಮುದ್ರೆಯೊತ್ತಿ, ‘ಮುಸ್ಲಿಂ’ ಎಂಬ ಕಾಲ್ಪನಿಕ ಶತ್ರುವಿನ ಸೃಷ್ಟಿಗೆ ಹಾದಿಯಾಗಬಹುದು. ಒಂಬತ್ತನೆಯ ತರಗತಿಯ ಸಮಾಜ ವಿಜ್ಞಾನ, ಇತಿಹಾಸ ಮತ್ತು ಪೌರನೀತಿಯಲ್ಲಿ ಇತಿಹಾಸ ಭಾಗದ ‘ಮಧ್ಯಕಾಲೀನ ಭಾರತ ಮುಹಮ್ಮದ್ ಘಜನಿ ಮತ್ತು ಮುಹಮ್ಮದ್ ಘೋರಿ- ಇವರ ದಂಡಯಾತ್ರೆಗಳು’ ಎನ್ನುವ ಪಾಠದಲ್ಲಿ ಈ ಅಂಶಗಳು ಗಮನಾರ್ಹ.
ಮುಹಮ್ಮದ್ ಘಜನಿ ಕ್ರಿ.ಶ.997ರಲ್ಲಿ ಅಫ್ಘಾನಿಸ್ತಾನದಲ್ಲಿ ಪಟ್ಟಕ್ಕೆ ಬಂದನು. ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ನಂತರ ಕ್ರಿ.ಶ. 1000ದಿಂದ 1027ರ ಅವಧಿಯಲ್ಲಿ ಅವನು ಹದಿನೇಳು ಬಾರಿ ಭಾರತದ ಮೇಲೆ ಆಕ್ರಮಣ ನಡೆಸಿದನು.

ಕ್ರಿ.ಶ.1009ರಲ್ಲಿ ಮುಹಮ್ಮದ್ ಘಜನಿಯು ಲಾಹೋರಿನ ಬಳಿ ಇರುವ ಕಾಂಗ್ರ (ನಾಗರಕೋಟೆ)ಗೆ ಮುತ್ತಿಗೆ ಹಾಕಿ ಅಲ್ಲಿಯ ಸಂಪದ್ಭರಿತ ದೇವಾಲಯಗಳನ್ನು ಲೂಟಿ ಮಾಡಿದನು. ತನ್ನ ಸಂಪತ್ತಿನ ದಾಹವನ್ನು ತಣಿಸಿಕೊಳ್ಳಲು ಕ್ರಿ.ಶ.1009ರಿಂದ 1019ರ ವರೆಗೆ ಅನೇಕ ದಂಡಯಾತ್ರೆಗಳನ್ನು ಮಾಡಿ ಯಶಸ್ವಿಯಾದನು. ಸ್ಥಾನೇಶ್ವರ, ಮಥುರಾ, ಕನೋಜ್‌ಗಳು ಅವನ ದಾಳಿಗೆ ತುತ್ತಾಗಿ ನೂರಾರು ದೇವಾಲಯಗಳು ನಾಶ ಹೊಂದಿದವು.

ಕ್ರಿ.ಶ.1024ರ ಸೋಮನಾಥ ದೇವಾಲಯದ ಮುತ್ತಿಗೆ

ಮುಹಮ್ಮದ್ ಘಜನ್ನಿಯ ಮಹತ್ವದ ದಾಳಿಗಳಲ್ಲಿ ಸೋಮನಾಥ ದೇವಾಲಯದ ದಾಳಿಯೂ ಒಂದು. ಕಾಥೇವಾಡದ ದಕ್ಷಿಣ ತುದಿಯಲ್ಲಿರುವ ಸೋಮನಾಥ ದೇವಾಲಯ ಅತ್ಯಂತ ಮಹತ್ವದ ಹಿಂದೂ ದೇವಾಲಯಗಳಲ್ಲಿ ಒಂದಾಗಿತ್ತು. ಅನುಪಮ ಸೌಂದರ್ಯದಿಂದಲೂ, ಅಪಾರ ಸಂಪತ್ತಿನಿಂದಲೂ ಕಂಗೊಳಿಸುತ್ತಿದ್ದ ದೇವಾಲಯ ಇದು. ಈ ದೇವಾಲಯವನ್ನು ಮುತ್ತಿ ಸಂಪತ್ತನ್ನು ಕೊಳ್ಳೆ ಹೊಡೆದ ಘಜನಿಯು ದೇವಾಲಯದ ಮೂರ್ತಿಯನ್ನು ನಾಶಪಡಿಸಿದನು. ಮುಹಮ್ಮದ್ ಘಜನಿಯ ಮುಖ್ಯ ಆಶಯವೆಂದರೆ ಭಾರತದ ಅಪಾರ ಸಂಪತ್ತನ್ನು ದೋಚುವುದೇ ಆಗಿತ್ತು. ಈತನ ದಾಳಿಯಿಂದಾಗಿ ಭಾರತದ ಕಲೆ ಮತ್ತು ವಾಸ್ತುಶಿಲ್ಪಗಳಿಗೆ ಭಾರೀ ಹೊಡೆತ ಬಿದ್ದಿತು. ಭಾರತದಿಂದ ಹೊಡೆದು ತಂದ ಅಪಾರ ಸಂಪತ್ತಿನಿಂದ ಆತನು ಘಜನಿಯಲ್ಲಿ ಅಪಾರ ಸಂಖ್ಯೆಯಲ್ಲಿ ಅರಮನೆಗಳನ್ನು, ಮಸೀದಿಗಳನ್ನು, ವಿದ್ಯಾಮಂದಿರಗಳನ್ನು ಕಟ್ಟಿಸಿದನು.

ಮುಹಮ್ಮದ್ ಘೋರಿಯ ದಾಳಿಗಳು

ಮುಂದೆ ಒಂದು ವರ್ಷದಲ್ಲಿ ಘೋರಿಯು, ಭಾರೀ ಸೇನೆಯೊಂದಿಗೆ ಬಂದು ಕ್ರಿ.ಶ.1192ರಲ್ಲಿ ಅದೇ ತರೈನಲ್ಲಿ ಪೃಥ್ವಿರಾಜನನ್ನು ಕೊಂದು ಅನೇಕ ದೇವಾಲಯಗಳನ್ನು ನಾಶಪಡಿಸಿದನು. ಮುಹಮ್ಮದ್ ಘೋರಿಯು 1194ರಲ್ಲಿ ಮತ್ತೆ ಭಾರತಕ್ಕೆ ಬಂದು ಕನೋಜಿನ ದೊರೆ ಜಯಚಂದ್ರನನ್ನು ಚಾಂದ್ವಾರದ ಯುದ್ಧದಲ್ಲಿ ಸೋಲಿಸಿದನು. ವಾರಣಾಸಿಯನ್ನು ಕೊಳ್ಳೆ ಹೊಡೆದು ಕನೋಜನ್ನು ಆಕ್ರಮಿಸಿದನು.(ಪು.31)

ಈ ಇಡೀ ಕಥಾನಕದಲ್ಲಿ ಬಳಸಲಾಗಿರುವ ಆಕ್ರಮಣ, ಲೂಟಿ, ಸಂಪತ್ತಿನ ದಾಹ, ಮುತ್ತಿಗೆ, ದಾಳಿ, ಮುತ್ತಿ, ಕೊಳ್ಳೆಹೊಡೆದ, ದೋಚು, ಹೊಡೆದು ತಂದ, ಕೊಳ್ಳೆಹೊಡೆದು - ಪದಗಳನ್ನು ಗಮನಿಸಬೇಕು. ದರೋಡೆಕೋರನೊಬ್ಬನಿಗೆ ಸಂಬಂಧಿಸಿ ಬಳಸಲಾಗುವ ಪದಗಳಿವು.

ಈಗ ಸಮಾಜ ವಿಜ್ಞಾನ ಭಾಗ-1-10ನೆಯ ತರಗತಿ (1998)ಯ ಪಠ್ಯದ ಈ ಕೆಳಗಿನ ಕಥಾನಕವನ್ನು ಓದೋಣ.

ಭಾರತಕ್ಕೆ ಯುರೋಪಿಯನ್ನರ ಆಗಮನ ಭಾರತದಲ್ಲಿ ಯುರೋಪಿಯನ್ ವಾಸ್ತವ್ಯಗಳ ಸ್ಥಾಪನೆ:

ಯುರೋಪಿನೊಂದಿಗೆ ಭಾರತದ ವ್ಯವಹಾರ ಸಂಬಂಧವು ಪ್ರಾಚೀನ ಗ್ರೀಕರ ಕಾಲದಿಂದಲೂ ನಡೆದುಬಂದಿದೆ. ಮಧ್ಯಯುಗದಲ್ಲಿ ಭಾರತವು ಯುರೋಪ್ ಮತ್ತು ದಕ್ಷಿಣಪೂರ್ವ ಏಷ್ಯಗಳೊಂದಿಗೆ ಮುಖ್ಯವಾಗಿ ಎರಡು ಮಾರ್ಗಗಳ ಮೂಲಕ ವ್ಯಾಪಾರ ಸಂಬಂಧವನ್ನು ಹೊಂದಿತ್ತು.

ಅಧ್ಯಾಯ2: ಭಾರತದಲ್ಲಿ ಬ್ರಿಟಿಷ್ ಅಧಿಕಾರದ ವಿಸ್ತರಣೆ ಬಂಗಾಳ ಬ್ರಿಟಿಷರ ಕೈವಶವಾದದ್ದು.

ಕರ್ನಾಟಕದಲ್ಲಿ ತಮ್ಮ ಹಿಡಿತವನ್ನು ಭದ್ರಪಡಿಸಿಕೊಂಡ ನಂತರ ಇಂಗ್ಲಿಷರು ಬಂಗಾಳದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸುವ ಕಡೆಗೆ ಗಮನವನ್ನು ಹರಿಸಿದರು. ಮೊಗಲ್ ಸಾಮ್ರಾಟನಿಂದ ಅವರು ಒಂದು ಫರ್ಮಾನನ್ನು ಪಡೆದುಕೊಂಡರು. ಈ ಫರ್ಮಾನಿನಿಂದಾಗಿ ತೆರಿಗೆಯನ್ನು ಕೊಡದೆ ಅವರು ಆಮದು ರಫ್ತುಗಳಲ್ಲಿ ತೊಡಗಬಹುದಾಗಿತ್ತು. ಅಲ್ಲದೆ ತಮ್ಮ ಸಾಮಗ್ರಿಗಳನ್ನು ಮುಕ್ತವಾಗಿ ಸಾಗಿಸಲು ಅವು ‘ದಸ್ತಕ’ಗಳನ್ನು (ಅಪ್ಪಣೆ ಚೀಟಿ) ನೀಡುವ ಹಕ್ಕನ್ನು ಪಡೆದುಕೊಂಡರು. ಈ ಫರ್ಮಾನುಗಳ ಸೌಲಭ್ಯವನ್ನು ಕಂಪೆನಿ ಮತ್ತು ಅದರ ಅಧಿಕಾರಿಗಳು ಸ್ವಂತ ಲಾಭಕ್ಕೆಂದು ಬಳಸಿಕೊಳ್ಳಲಾರಂಭಿಸಿದ್ದರಿಂದ ನವಾಬನಿಗೆ ಆರ್ಥಿಕವಾಗಿ ನಷ್ಟವಾಯಿತು.

ಆಧುನಿಕತೆಯನ್ನು ತಿರಸ್ಕರಿಸುವ ಅಥವಾ ತಿರಸ್ಕಾರದಿಂದ ಕಾಣುವ ಜನರು ‘ವಿದೇಶೀ ಸಂಸ್ಕೃತಿ ನಮಗೆ ಬೇಡ. ಜೀನ್ಸ್ ಬೇಡ. ಪ್ರಣಯಿಗಳ ದಿನಾಚರಣೆ ಬೇಡ. ವಿದೇಶೀ ವಿಚಾರಗಳು ಬೇಡ. ನಮಗೆ ನಮ್ಮ ಆರ್ಷೇಯ ಸಂಸ್ಕೃತಿ, ಸನಾತನ ಧರ್ಮ ಇರಲಿ’ ಎನ್ನುತ್ತ, ಅಂತಿಮವಾಗಿ, ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಬ್ಬ ನಾಯಕ, ಒಂದು ಆಜ್ಞೆ’ ಎಂಬಲ್ಲಿಗೆ ಬರುತ್ತಾರೆ. ಆದ್ದರಿಂದ ಇತಿಹಾಸ ಪಠ್ಯವನ್ನು ಬರೆಯುವಾಗ ಸಮದರ್ಶಿತ್ವ-ವಸ್ತುನಿಷ್ಠತೆಯಿಂದ ಬರೆಯುವ, ಯಾವುದೇ ಪಕ್ಷ ವಹಿಸದೆ ಯಾವುದೇ ತೀರ್ಮಾನ-ತೀರ್ಪು ನೀಡದೆ ನಿಷ್ಪಕ್ಷಪಾತವಾಗಿ ಬರೆಯುವ ಅಗತ್ಯವಿದೆ.

ಮೂರನೆಯ ಆಂಗ್ಲೋ-ಮೈಸೂರು ಯುದ್ಧ (1789-92)

ಇಂಗ್ಲಿಷರು ದಕ್ಷಿಣದಲ್ಲಿ ಟಿಪ್ಪು ತಮ್ಮ ಅತ್ಯಂತ ಪ್ರಬಲ ಸ್ಪರ್ಧಿ ಹಾಗೂ ದಕ್ಷಿಣ ದೇಶವನ್ನು ತಾವು ಆಳಲು ಇರುವ ಏಕೈಕ ಅಡ್ಡಿಯೆಂದು ಭಾವಿಸಿದರು. ಹಾಗೆಯೇ ಟಿಪ್ಪು ಬ್ರಿಟಿಷರನ್ನು ಮನಸಾರೆ ದ್ವೇಷಿಸಿದ್ದೇ ಅಲ್ಲದೆ ಅವರನ್ನು ಈ ದೇಶದಿಂದಲೇ ಓಡಿಸಬೇಕೆಂಬ ಸಂಕಲ್ಪ ಹೊಂದಿದ್ದನು. ಟಿಪ್ಪು ವಿದ್ಯಾವಂತ, ಧೀರ ಮತ್ತು ಚಾಣಾಕ್ಷ ಯೋಧನಾಗಿದ್ದನು. ‘ಮೈಸೂರು ಹುಲಿ’ ಎಂಬ ಬಿರುದು ಅವನಿಗೆ ಸಾರ್ಥಕವಾಗಿತ್ತು.

ತಿರುವಾಂಕೂರಿನ ದೊರೆಯ ಮೇಲೆ ಟಿಪ್ಪು ಆಕ್ರಮಣ ಮಾಡಿದಾಗ ಮೂರನೆಯ ಮೈಸೂರು ಯುದ್ಧ ಆರಂಭವಾಯಿತು. ಇಂಗ್ಲಿಷರು ಬೆಂಗಳೂರನ್ನು ಗೆದ್ದು ಶ್ರೀರಂಗಪಟ್ಟಣಕ್ಕೆ ನುಗ್ಗಿದರು. ಟಿಪ್ಪುವು ಸಂಧಾನಕ್ಕೆ ಬರದೆ ಬೇರೆ ಮಾರ್ಗವಿರಲಿಲ್ಲ. 1792ರ ಶ್ರೀರಂಗಪಟ್ಟಣದ ಕೌಲಿನಂತೆ ಟಿಪ್ಪುವು ಬ್ರಿಟಿಷ್ ಹಾಗೂ ಮಿತ್ರ ಸೇನೆಗಳಿಗೆ ತನ್ನ ರಾಜ್ಯದ ಅರ್ಧಭಾಗದಷ್ಟನ್ನು ಒಪ್ಪಿಸಿ ಕೊಡಬೇಕಾಯಿತು. ಅಲ್ಲದೆ ಯುದ್ಧದ ನಷ್ಟವನ್ನು ತುಂಬಿಕೊಡಲು 30 ಲಕ್ಷ ರೂ.ಗಳನ್ನು ಕೊಡಬೇಕಾಯಿತು. ಈ ಪರಿಹಾರವನ್ನು ಕೊಡುವ ವರೆಗೆ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಳುಗಳಾಗಿ ಇಡಬೇಕಾಯಿತು. ಹೀಗೆ ಮೂರನೆಯ ಮೈಸೂರು ಯುದ್ಧವು ದಕ್ಷಿಣದಲ್ಲಿ ಟಿಪ್ಪುವಿನ ಪ್ರಾಬಲ್ಯವನ್ನು ಇಳಿಸಿ ಬ್ರಿಟಿಷ್ ಪರಮಾಧಿಕಾರವನ್ನು ಸ್ಥಾಪಿಸಲು ನೆರವಾಯಿತು.

ಆಂಗ್ಲೊ-ಸಿಖ್ ಯುದ್ಧಗಳು

ಮರಾಠರ ಪತನದ ಕಾರಣಗಳೇ ಸಿಖ್ಖರಿಗೂ ಸರಿಯಾಗಿ ಅನ್ವಯಿಸುತ್ತವೆ. ಇವರ ಒಳವೈರ ಮತ್ತು ಅಂತಯುದ್ಧಗಳಿಂದಾಗಿ ಇಡೀ ಭಾರತಕ್ಕೆ ಬ್ರಿಟಿಷರು ಸಾರ್ವಭೌಮರಾದರು.

ಘಜನಿ ಮತ್ತು ಘೋರಿಯ ದಂಡಯಾತ್ರೆಗಳ ವಿವರಣೆ ಮತ್ತು ಭಾರತಕ್ಕೆ ಯೂರೋಪಿಯನ್ನರ ಆಗಮನದ ವಿವರಣೆಗಳನ್ನು ಹೋಲಿಸಿ ನೋಡಿದರೆ ಇತಿಹಾಸ ಪಠ್ಯ ರಚನೆಕಾರರ ದೃಷ್ಟಿಕೋನ ಗೊತ್ತಾಗುತ್ತದೆ. ಒಂದೇ ಕಥಾನಕಕ್ಕೆ ಎರಡು ರೀತಿಯ ಭಾಷೆಗಳ ಬಳಕೆ ಕಾಣಿಸುತ್ತದೆ. ಮೊದಲ ವಿವರಣೆಯಲ್ಲಿ ಬಳಸಲಾಗಿರುವ ಪದಗಳು ಲೂಟಿ. ಸಂಪತ್ತಿನ ದಾಹ, ಕೊಳ್ಳೆ, ದೋಚು ಇತ್ಯಾದಿಯಾದರೆ, ಭಾರತವನ್ನು ಮುಸ್ಲಿಂ ದೊರೆಗಳಿಗಿಂತಲೂ ಹೆಚ್ಚು ಸಮರ್ಥವಾಗಿ ಸುಮಾರು ಎರಡು ಶತಮಾನಗಳ ಕಾಲ ವ್ಯವಸ್ಥಿತವಾಗಿ ಕೌಲ್, ರೂಲ್‌ಗಳ ಮರೆಯಲ್ಲಿ ಲೂಟಿ, ದರೋಡೆ ಮಾಡಿದ ಬ್ರಿಟಿಷರಿಗಾಗುವಾಗ ನಮ್ಮ ಪಠ್ಯಗಳು ಬಳಸುವ ವಾಣಿಜ್ಯ ಭಾಷೆಯ ಮೃದು ಪದಗಳಿವು: ಯುರೋಪಿಯನ್ನರ ಆಗಮನ, ವಾಸ್ತವ್ಯ, ಸ್ಥಾಪನೆ, ತೆರಿಗೆಯನ್ನು ಕೊಡದೆ ಆಮದು-ರಫ್ತುಗಳಲ್ಲಿ ತೊಡಗುವುದು, ಹಕ್ಕನ್ನು ಪಡೆದುಕೊಳ್ಳುವುದು. ಘಜನಿ ಮತ್ತು ಘೋರಿ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದರೆ ಬ್ರಿಟಿಷರು ನವಾಬನಿಗೆ ‘ಆರ್ಥಿಕವಾಗಿ ನಷ್ಟ’ ಉಂಟು ಮಾಡಿದರು.

ಇವತ್ತಿಗೂ ಬಲಪಂಥೀಯ ಶಕ್ತಿಗಳು, ಹಿಂದೂ ಮತೀಯವಾದಿಗಳು ದೇಶದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಹರಡಲು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುವ ಒಂದು ವಿಷಯವೆಂದರೆ, ಮುಸ್ಲಿಮರು/ಮುಸ್ಲಿಂ ದೊರೆಗಳು ಈ ದೇಶದ ಮೇಲೆ ದಾಳಿ ಮಾಡಿ ಈ ದೇಶದ ಸಂಪತ್ತನ್ನು ದೋಚಿದರು ಮತ್ತು ಸೋಮನಾಥ ದೇವಾಲಯವೊಂದನ್ನೇ ಹದಿನೇಳು ಬಾರಿ ದೋಚಲಾಯಿತು ಎಂಬುದನ್ನು, ಆದರೆ ಈ ದೊರೆಗಳು ದೋಚಿದ್ದಕ್ಕಿಂತ ನೂರಾರು ಪಾಲು ಸಂಪತ್ತನ್ನು ಬ್ರಿಟಿಷರು ಭಾರತದಿಂದ ದೋಚಿದರು ಎಂಬ ಸತ್ಯವನ್ನು ಮರೆಮಾಚುವ ಇತಿಹಾಸ ಪಠ್ಯಗಳು ಪ್ರಸಕ್ತ ಸಮಾಜದಲ್ಲಿ ಜನರು ಕೋಮುವಾದಿಗಳಾಗಲು ಸಹಕರಿಸುತ್ತವೆ. ಬಲಪಂಥೀಯ ಶಕ್ತಿಗಳಿಗೆ ಕೋಮು ದ್ವೇಷ ಹರಡಲು ಒಂದು ಸಲಕರಣೆಯಾಗುತ್ತವೆ. ಆದ್ದರಿಂದ ಮುಸ್ಲಿಂ ದೊರೆಗಳ ಕುರಿತಾದ ಕಥಾನಕದಲ್ಲಿ ಮತ್ತೆ ಮತ್ತೆ ಬಳಸಲಾಗುವ ದರೋಡೆಯ ಭಾಷೆಯನ್ನು ಮೃದುಗೊಳಿಸುವುದು ಅಗತ್ಯ ಹಾಗೂ ಬ್ರಿಟಿಷರು ಕೂಡ ಭಾರತಕ್ಕೆ ಬಂದದ್ದು ಇಲ್ಲಿಯ ಸಂಪತ್ತಿಗಾಗಿಯೇ.

‘ಸಂಪತ್ತಿನ ದಾಹ’ ದಿಂದಾಗಿಯೇ ಹೊರತು ಈ ದೇಶವನ್ನು ಉದ್ಧಾರ ಮಾಡುವುದಕ್ಕಾಗಿ ಅಲ್ಲವೆಂಬ ಕನಿಷ್ಠ ಪಕ್ಷ, ಸೂಚನೆಯನ್ನಾದರೂ ಇತಿಹಾಸ ಪಠ್ಯಗಳು ನೀಡಬೇಕು. ಹೀಗೆ ಮಾಡುವಾಗಲೂ ಆಧುನಿಕತೆಯನ್ನು ಸಾರಾಸಗಟಾಗಿ ತಿರಸ್ಕಾರದಿಂದ ನೋಡುವ ಪ್ರವೃತ್ತಿ ಇದೆ. ಉದಾಹರಣೆಗೆ, ಆಧುನಿಕತೆ ನಮಗೆ ಕೊಡಮಾಡಿದ ಇಂಗ್ಲಿಷ್ ಭಾಷೆ. ಈ ಭಾಷೆಯ ಮೂಲಕ ದೊರಕಿದ ವೈಚಾರಿಕತೆ, ವಿಚಾರ ಸ್ವಾತಂತ್ರ, ಆಧುನಿಕ ದೃಷ್ಟಿಕೋನ-ಎಲ್ಲವನ್ನೂ ‘ಬಿಳಿ ತೊಗಲಿನವನ ಹೊರೆ’ ಎಂದೋ, ಆಧುನಿಕತೆ ಹಾಗೂ ಬಹುರೂಪಿ ಸಂಸ್ಕೃತಿಯನ್ನು ಮೆಚ್ಚುವವರನ್ನು ‘ಮೆಕಾಲೆಯ ಮಕ್ಕಳು’ ಎಂದೋ ಕೀಳಾಗಿ ಮಾತಾಡುವ, ಹಂಗಿಸುವ ಪ್ರವೃತ್ತಿ ಈಗ ಕಂಡುಬರುತ್ತಿದೆ. ಹೀಗೆ ತಿರಸ್ಕಾರದಿಂದ ನೋಡುವ, ಹಂಗಿಸುವ ‘ಗಣ್ಯ’ರು ತಮ್ಮನ್ನು ಬಲಪಂಥೀಯ ಶಕ್ತಿಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂಬುದೂ ಗಮನಿಸಬೇಕಾದ ಅಂಶ.

ಆಧುನಿಕತೆಯನ್ನು ತಿರಸ್ಕರಿಸುವ ಅಥವಾ ತಿರಸ್ಕಾರದಿಂದ ಕಾಣುವ ಜನರು ‘ವಿದೇಶೀ ಸಂಸ್ಕೃತಿ ನಮಗೆ ಬೇಡ. ಜೀನ್ಸ್ ಬೇಡ. ಪ್ರಣಯಿಗಳ ದಿನಾಚರಣೆ ಬೇಡ. ವಿದೇಶೀ ವಿಚಾರಗಳು ಬೇಡ. ನಮಗೆ ನಮ್ಮ ಆರ್ಷೇಯ ಸಂಸ್ಕೃತಿ, ಸನಾತನ ಧರ್ಮ ಇರಲಿ’ ಎನ್ನುತ್ತ, ಅಂತಿಮವಾಗಿ, ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಬ್ಬ ನಾಯಕ, ಒಂದು ಆಜ್ಞೆ’ ಎಂಬಲ್ಲಿಗೆ ಬರುತ್ತಾರೆ. ಆದ್ದರಿಂದ ಇತಿಹಾಸ ಪಠ್ಯವನ್ನು ಬರೆಯುವಾಗ ಸಮದರ್ಶಿತ್ವ-ವಸ್ತುನಿಷ್ಠತೆಯಿಂದ ಬರೆಯುವ, ಯಾವುದೇ ಪಕ್ಷ ವಹಿಸದೆ ಯಾವುದೇ ತೀರ್ಮಾನ-ತೀರ್ಪು ನೀಡದೆ ನಿಷ್ಪಕ್ಷಪಾತವಾಗಿ ಬರೆಯುವ ಅಗತ್ಯವಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)