ಬೆನ್ನುನೋವಿನಿಂದ ಪಾರಾಗಲು ಆರು ಸುಲಭ ಮಾರ್ಗಗಳು
ಬೆನ್ನುನೋವು ಯಾರನ್ನೂ ಬಿಟ್ಟಿದ್ದಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಬೆನ್ನುನೋವು ಮತ್ತು ಬೆನ್ನು ಹಿಡಿದುಕೊಳ್ಳುವುದನ್ನು ಅನುಭವಿಸಿರುತ್ತಾರೆ. ಇದಕ್ಕೆ ಸ್ನಾಯುಸೆಳೆತ, ವಾತ ಅಥವಾ ತಪ್ಪಾದ ದೇಹಭಂಗಿ ಕಾರಣವಾಗಿರಬಹುದು. ಕಾರಣವೇನೇ ಆಗಿರಲಿ, ಬೆನ್ನುನೋವಿನಿಂದ ಪಾರಾಗಲು ಸುಲಭ ಮಾರ್ಗಗಳಿವೆ.
►ಕೋಲ್ಡ್ ಥೆರಪಿ
ಬೆನ್ನುನೋವಿಗೆ ಕಾರಣವಾಗುವ ಏಟು ಬಿದ್ದ 24ರಿಂದ 48 ಗಂಟೆಗಳಲ್ಲಿ ಕೋಲ್ಡ್ ಥೆರಪಿ ಅಥವಾ ಶೀತಲ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿ ನೋವನ್ನು ಶಮನಗೊಳಿಸುತ್ತದೆ. ಕೋಲ್ಡ್ ಪ್ಯಾಕ್ ಅಥವಾ ಮಂಜುಗಡ್ಡೆಗಳಿಂದ ಏಟು ಬಿದ್ದ ಜಾಗದಲ್ಲಿ ಮಸಾಜು ಮಾಡುವುದರಿಂದ ಉರಿಯೂತ ಮತ್ತು ಬಾವು ಕಡಿಮೆಯಾಗುತ್ತದೆ. ಮಂಜುಗಡ್ಡೆ ಲಭ್ಯವಿಲ್ಲದಿದ್ದರೆ ಫ್ರಿಝ್ನಲ್ಲಿಟ್ಟ ಯಾವುದೇ ವಸ್ತುವನ್ನು ಇದಕ್ಕಾಗಿ ಬಳಸಿಕೊಳ್ಳಬಹುದು. ಕೋಲ್ಡ್ ಥೆರಪಿಯ ಬಳಿಕ ನೋವು ನಿವಾರಕ ಸ್ಪ್ರೇ ಅಥವಾ ಜೆಲ್ ಹಚ್ಚುವುದು ಅತ್ಯಂತ ಪರಿಣಾಮಕಾರಿಯಾಗುತ್ತದೆ.
►ಹೀಟ್ ಥೆರಪಿ
ಹೀಟ್ ಥೆರಪಿ ಅಥವಾ ಉಷ್ಣ ಚಿಕಿತ್ಸೆ ನೋವನ್ನು ಉಪಶಮನಗೊಳಿಸುವ ಅತ್ಯಂತ ಹಳೆಯ, ಈಗಲೂ ಚಾಲ್ತಿಯಲ್ಲಿರುವ ಪದ್ಧತಿಯಾಗಿದೆ. ಆದರೆ ಏಟು ಬಿದ್ದ ತಕ್ಷಣ ಹಾಟ್ ಪ್ಯಾಕ್ ಅಥವಾ ಬಿಸಿನೀರಿನಿಂದ ಶಾಖ ಕೊಡಬಾರದು. 72 ಗಂಟೆಗಳ ಬಳಿಕ ಅಥವಾ ನೋವು ತೀವ್ರವಾಗಿದ್ದರೆ ಈ ವಿಧಾನವನ್ನು ಅನುಸರಿಸಬೇಕು.
ಉಷ್ಣತೆಯು ರಕ್ತಸಂಚಾರವನ್ನು ಉತ್ತೇಜಿಸುವ ಮೂಲಕ ಶಮನಕಾರಿ ಪೋಷಕಾಂಶಗಳು ಕೆಳಬೆನ್ನಿನ ಪೀಡಿತ ಜಾಗವನ್ನು ತಲುಪುವುಂತೆ ಮಾಡುತ್ತದೆ. ಬೆನ್ನು ಹಿಡಿದುಕೊಂಡ ಸಂದರ್ಭದಲ್ಲಿಯೂ ಇದು ಶಮನವನ್ನು ನೀಡುತ್ತದೆ. ತೀವ್ರ ನೋವು ಇದ್ದಾಗ ಕೋಲ್ಡ್ ಥೆರಪಿ ಮತ್ತು ಹೀಟ್ ಥೆರಪಿಗಳನ್ನು ಸರದಿಯಲ್ಲಿ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು. ಹೀಟ್ ಥೆರಪಿಯ ಬಳಿಕ ಜೆಲ್ ಹಚ್ಚಿದರೆ ತುಂಬ ಪರಿಣಾಮ ಕಾರಿಯಾಗಿರುತ್ತದೆ.
►ಔಷಧಿಗಳು
ಅವಸರದಲ್ಲಿದ್ದಾಗ ನೋವು ನಿವಾರಕ ಮಾತ್ರೆಯ ಸೇವನೆ ತುರ್ತು ಶಮನಕ್ಕೆ ಸುಲಭದ ಮಾರ್ಗವಾಗಿದೆ. ಸ್ನಾಯು ಸೆಳೆತದಿಂದ ಉಂಟಾಗಿರುವ ನೋವಿಗೆ ಸ್ನಾಯುಗಳನ್ನು ಸಡಿಲಿಸುವ ಸ್ಪ್ರೇ ಅಥವಾ ಜೆಲ್ ಅನ್ನು ಬಳಸಬಹುದು.
►ಬೆನ್ನಿಗೆ ಲಘು ವ್ಯಾಯಾಮ
ಸ್ನಾಯುಗಳಲ್ಲಿ ಅತಿಯಾದ ಬಿಗಿತನವೂ ಬೆನ್ನುನೋವಿಗೆ ಕಾರಣವಾಗಬಹುದು. ಮಂಡಿಗಳನ್ನು ನೇರವಾಗಿಟ್ಟುಕೊಂಡು ಬೆನ್ನನ್ನು ಮುಂದಕ್ಕೆ ಬಗ್ಗಿಸಿ 10 ಸೆಕೆಂಡ್ಗಳ ಕಾಲ ಇದೇ ಭಂಗಿಯಲ್ಲಿರಬೇಕು. ಇದೇ ರೀತಿ ಬೆನ್ನನ್ನು ಹಿಂದಕ್ಕೆ,ಪಕ್ಕಕ್ಕೆ ಬಗ್ಗಿಸಬೇಕು.
ಹ್ಯಾಮ್ಸ್ಟ್ರಿಂಗ್ ಮಸಲ್ಸ್ ಅಥವಾ ತೊಡೆಯ ಸ್ನಾಯುವಿನ ಹಿಭಾಗಕ್ಕೆ ಲಘು ವ್ಯಾಯಾಮ ನೀಡುವುದು ಒಳ್ಳೆಯ ವಿಧಾನವಾಗಿದೆ. ಮಂಚದ ತುದಿಯಲ್ಲಿ ಕುಳಿತುಕೊಂಡು ಒಂದು ಕಾಲನ್ನು ನೆಲದ ಮೇಲಿರಿಸಬೇಕು ಮತ್ತು ಇನ್ನೊಂದು ಕಾಲನ್ನು ಎದುರಿನ ಖುರ್ಚಿಯ ಮೇಲೆ ಚಾಚಬೇಕು. ಬೆನ್ನನ್ನು ತಟಸ್ಥ ಭಂಗಿಯಲ್ಲಿಟ್ಟುಕೊಂಡು ಮುಂದಕ್ಕೆ ಬಗ್ಗಬೇಕು. ಈ ಚಾಚುವಿಕೆ ವ್ಯಾಯಾಮಗಳು ಬೆನ್ನ್ನಿನ ಪೆಡಸುತನವನ್ನು ತಗ್ಗಿಸುತ್ತವೆ.
►ಸರಿಯಾದ ಭಂಗಿ
ಕಚೇರಿಯಲ್ಲಿ ಸುದೀರ್ಘ ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವುದು ಬೆನ್ನುನೋವಿಗೆ ಕಾರಣವಾಗಬಹುದು. ನೀವು ಖುರ್ಚಿಯಲ್ಲಿ ಯಾವಾಗಲೂ ಸರಿಯಾದ ಭಂಗಿಯಲ್ಲಿಯೇ ಕುಳಿತುಕೊಳ್ಳಬೇಕು. ನಿಮ್ಮ ಬೆನ್ನು ಖುರ್ಚಿಯ ಹಿಂದಿನ ಆಧಾರಕ್ಕೆ ನೇರವಾಗಿರಬೇಕು. ಕೆಳಬೆನ್ನು ಮತ್ತು ಆಧಾರದ ನಡುವೆ ಯಾವುದೇ ಅಂತರವಿರಬಾರದು(ಇದಕ್ಕಾಗಿ ನೀವು ಸಣ್ಣ ದಿಂಬನ್ನು ಬಳಸಬಹುದು) ಮತ್ತು ಪಾದಗಳು ನೆಲಕ್ಕೆ ಪೂರ್ಣವಾಗಿ ಅಂಟಿಕೊಂಡಿರಬೇಕು.
ಹೆಚ್ಚಿನವರು ನಿಂತುಕೊಂಡಿದ್ದಾಗ ಹೊಟ್ಟೆಯ ಭಾಗ ಮುಂದಕ್ಕೆ ಬಂದಿರುತ್ತದೆ ಅಥವಾ ಒಂದು ಕಾಲಿನ ಮೇಲೆ ಹೆಚ್ಚಿನ ಭಾರವನ್ನು ಹಾಕಿರುತ್ತಾರೆ. ಇವು ಬೆನ್ನುನೋವಿಗೆ ಕಾರಣವಾಗುವ ಕೆಟ್ಟ ಭಂಗಿಗಳಾಗಿವೆ. ನಿಂತಿರುವಾಗ ನಮ್ಮ ಬೆನ್ನುಮೂಳೆಯು ನೇರವಾಗಿರಬೇಕು ಮತ್ತು ಹೊಟ್ಟೆಯು ಸರಿಯಾದ ಸ್ಥಿತಿಯಲ್ಲಿರಬೇಕು. ದೇಹದ ಭಾರ ಎರಡೂ ಕಾಲುಗಳ ಮೇಲೆ ಸಮಾನವಾಗಿ ಹಂಚಿಕೊಂಡಿರಬೇಕು.
►ನಿದ್ರಾಭಂಗಿ
ಒಳ್ಳೆಯ ನಿದ್ರೆಯೊಂದಿಗೆ ಒಳ್ಳೆಯ ಭಂಗಿಯೂ ಅಗತ್ಯವಾಗಿದೆ. ನೀವು ಬೆನ್ನಿನ ಮೇಲೆ ಮಲಗುವಿರಾದರೆ ನಿಮ್ಮ ಮಂಡಿಗಳ ಕೆಳಗೆ ದಿಂಬನ್ನಿಟ್ಟುಕೊಂಡರೆ ಕೆಳಬೆನ್ನಿನ ಮೇಲಿನ ಒತ್ತಡವನ್ನು ನಿವಾರಿಸಬಹುದು. ಮಗ್ಗುಲಾಗಿ ಮಲಗುವುದಾದರೆ ಬೆನ್ನುಮೂಳೆಯ ಸ್ಥಿರ ಭಂಗಿಯನ್ನು ಕಾಯ್ದುಕೊಳ್ಳಲು ಮಂಡಿಗಳ ನಡುವೆ ದಿಂಬನ್ನಿಟ್ಟುಕೊಳ್ಳಬೇಕು. ಹೊಟ್ಟೆಯಡಿಯಾಗಿ ಮಲಗಿಕೊಂಡರೆ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ನೀವು ಬೆನ್ನುನೋವಿನಿಂದ ನರಳುತ್ತಿದ್ದರೆ ಹೊಟ್ಟೆಯ ಮೇಲೆ ಮಲಗುವುದನ್ನು ನಿವಾರಿಸಿ.
ನೀವು ಮಲಗುವ ಹಾಸಿಗೆ ತುಂಬ ಗಟ್ಟಿಯಾಗಿರಬಾರದು, ಅದು ತುಂಬ ಮೆತ್ತಗೂ ಇರಬಾರದು ಎನ್ನುವುದನ್ನು ನೆನಪಿಟ್ಟುಕೊಳ್ಳಿ.