varthabharthi


ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

ಅಂಬೇಡ್ಕರ್: ತುಮುಲ, ತಲ್ಲಣಗಳ ಜೊತೆ...

ವಾರ್ತಾ ಭಾರತಿ : 4 Nov, 2017
ಕೆ.ಎಲ್. ಚಂದ್ರಶೇಖರ್ ಐಜೂರ್

 ಎಲ್ಲ ಚಿಂತಕರು ಭಾರತಕ್ಕೆ ಬಂದದ್ದು ಸಾಮಾಜಿಕ ಸಂಶೋಧನೆಯ ಸಲುವಾಗಿ. ಹಾಗೆ ಬಂದವರಿಗೆ ಭಾರತದಲ್ಲಿ ದಕ್ಕಿದ್ದು ‘ಅಸ್ಪಶ್ಯತೆ’ ಎಂಬ ವಿಕೃತ ದರ್ಶನ. ಕೇವಲ ಸಂಶೋಧನೆಯ ಸಲುವಾಗಿ ಭಾರತಕ್ಕೆ ಬಂದ ಓಮ್ವೆಡ್ಟ್, ಝೀಲಟ್, ಜ್ಯಾಫೆರ್‌ಲಾಟ್ ಅವರಿಗೆ ಅಂಬೇಡ್ಕರ್ ಬರಹಗಳ ಓದು-ಮರುಓದು, ಇಲ್ಲಿನ ಗ್ರಾಮ ಭಾರತದ ಅಸಮಾನತೆ ಮತ್ತು ಜಾತಿ ಅಹಮ್ಮಿಕೆಯ ವಿರಾಟ್ ದರ್ಶನವನ್ನೇ ಮಾಡಿಸಿತು. ಅದರಲ್ಲೂ ಓಮ್ವೆಡ್ಟ್ ಮತ್ತು ಝೀಲಟ್‌ರಿಗೆ ಅಂಬೇಡ್ಕರ್ ಕಟ್ಟಿಕೊಟ್ಟ ‘ದಲಿತ ಭಾರತ ಕಥನ’ ಇಲ್ಲಿಂದ ಕಾಲ್ತೆಗೆಯದಂತೆ ಮಾಡಿಬಿಟ್ಟಿತ್ತು.

ಮತ್ತೆ ಮತ್ತೆ ನವೀಕರಣಗೊಳ್ಳುತ್ತಲೇ ಇರುವ ಅಂಬೇಡ್ಕರ್ ಚಿಂತನೆಗಳು ದೇಶದ ಅನೇಕ ತಲ್ಲಣಗಳಿಗೆ, ನಿತ್ಯದ ವಿದ್ಯಮಾನಗಳಿಗೆ ಮುಖಾಮುಖಿಯಾಗುತ್ತಲೇ ಬರುತ್ತಿವೆ. ‘‘ದನದ ಬಾಲ ನೀವೇ ಇಟ್ಕೊಳ್ಳಿ; ನಮಗೆ ನಮ್ಮ ಭೂಮಿ ಕೊಡಿ’’ ಎಂದು ಗುಜರಾತಿನ ಯುವನಾಯಕ ಜಿಗ್ನೇಶ್ ಮೇವಾನಿ ರೂಪಿಸಿದ ಹೋರಾಟ ಅಂಬೇಡ್ಕರ್ ಸಂವಿಧಾನ ರಚನೆಗೂ ಮುನ್ನ ಕಟ್ಟಿಕೊಡಲೆತ್ನಿಸಿದ ಭೂಮಿಯ ರಾಷ್ಟ್ರೀಕರಣದ ಮಹತ್ವವನ್ನು ನಮ್ಮಲ್ಲಿ ಕೆಲವರಿಗಾದರೂ ನೆನೆಯುವಂತೆ ಮಾಡಿತು. ಕಳೆದ ಐದು ವರುಷಗಳ ಭಾರತ ಅನೇಕ ಪಲ್ಲಟ, ಪತನ ಮತ್ತು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿ ನಿಂತಿದೆ. ‘ಗ್ರೇಟೆಸ್ಟ್ ಇಂಡಿಯನ್ ಆಫ್ಟರ್ ಗಾಂಧಿ’ ಎಂಬ ಸಿಎನ್ನೆನ್-ಐಬಿಎನ್ ಚಾನೆಲ್ ರೂಪಿಸಿದ ಅಭಿಮತ ಸಮೀಕ್ಷೆಯಲ್ಲಿ ಜನತೆ ಅಂಬೇಡ್ಕರ್‌ರನ್ನು ‘ಗಾಂಧಿ ನಂತರದ ಶ್ರೇಷ್ಠ ಭಾರತೀಯ’ ಎಂದು ಕರೆಯಿತು.

ಕಾಂಗ್ರೆಸ್ ರಾಜಕೀಯವಾಗಿ ರಸಾತಳ ತಲುಪಿರುವ ಈ ಹೊತ್ತಲ್ಲಿ ಬಿಜೆಪಿ ಕಾರ್ಪೊರೇಟ್ ದಲ್ಲಾಳಿಗಳ ಸಟ್ಯೆಾಟೆಜಿಗಳನ್ನು ಬೃಹತ್ ಪ್ರಜಾಪ್ರಭುತ್ವದ ಈ ದೇಶದಲ್ಲಿ ಪ್ರಯೋಗಿಸಿ ಯಶಸ್ಸು ಕಾಣಬಹುದೇ ಎಂದು ನೋಡುತ್ತಿದೆ. ಅಂಬೇಡ್ಕರ್, ಮುಸ್ಲಿಮರ ಕುರಿತು ನಿಷ್ಠುರ ಧೋರಣೆ ತಾಳಿ ಬರೆದ ಬರಹಗಳಿಗಾಗಿ ಸಂಘ ಪರಿವಾರದ ನಾಯಕರು ಅಂಬೇಡ್ಕರ್ ಬರಹಗಳ ಸಂಪುಟಗಳ ಬೆನ್ನುಬಿದ್ದರೆ, ಕಮ್ಯುನಿಸ್ಟರು ‘ಅಂಬೇಡ್ಕರ್ ರಾಜಕೀಯ ಚಿಂತನೆಗಳು ಕಮ್ಯುನಿಸಮ್ ಚಿಂತನೆಯ ಮೂಸೆಯಿಂದ ಬಂದದ್ದು; ಹೀಗಾಗಿ ಅಂಬೇಡ್ಕರ್ ಕೂಡ ಕಮ್ಯುನಿಸ್ಟರೇ’ ಎಂದು ಸಾಧಿಸಿ ತೋರಲು ಹಲಬಗೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹೊತ್ತಿನಲ್ಲಿ ದಲಿತರನ್ನು ಕೊಲ್ಲುವ, ಕೊಂದು ದಕ್ಕಿಸಿಕೊಳ್ಳುವ ಹಿಂದೂ ಧರ್ಮದ ಮೇಲ್ಜಾತಿಗಳು ಮತ್ತಷ್ಟು ಕೊಬ್ಬಿ ಕೂತಿವೆ.

ಆದರೆ ಇದೇ ಹೊತ್ತಿನಲ್ಲಿ ದಲಿತರ ಸಾಂಪ್ರದಾಯಿಕ ಎದುರಾಳಿಗಳು ಕೂಡ ಅಂಬೇಡ್ಕರರ ಹುಸಿ ಭಜನೆ-ಕೀರ್ತನೆಗಳಿಗೆ ನಿಂತಿದ್ದಾರೆ. ಅಂಬೇಡ್ಕರ್ ಬರಹಗಳ ಅಪ್ರೊಯೇಶನ್ ಮತ್ತು ಮಿಸ್-ಅಪ್ರೊಯೇಶನ್ ಎಂಬುದು ನಮ್ಮ ಸಾಮಾಜಿಕ ಹಾಗೂ ರಾಜಕೀಯ ಅಂಗಳದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವಂತಿದೆ.

ಇವತ್ತಿಗೂ ಭಾರತದ ನಿರಕ್ಷರ ಸಮಾಜ, ಅದರಲ್ಲೂ ಗ್ರಾಮಭಾರತದ ದಲಿತ ಸಮುದಾಯ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡ, ಸಂವಿಧಾನ ಹಿಡಿದು ನಿಂತಿರುವ, ಮೀಸಲಾತಿ ಸಿಗುವಂತೆ ಮಾಡಿರುವ ಮೂರು ಚಿತ್ರಗಳಿಗಷ್ಟೇ ತೃಪ್ತಗೊಂಡಂತೆ ಕಾಣುತ್ತಿದೆ. ಅಂಬೇಡ್ಕರ್ ಅವರನ್ನು ಸಂಕೇತವಾಗಿ ನೋಡಲು ಬಯಸುವ ಜನಕ್ಕೆ ಅಂಬೇಡ್ಕರ್ ದಕ್ಕಿರುವುದು ಕೂಡ ಪ್ರತಿಮಾತ್ಮಕ ರೂಪದಲ್ಲಿಯೇ. ಆದರೆ ವೈಚಾರಿಕವಾಗಿ ಅತ್ಯಂತ ದಟ್ಟ ಪ್ರಭಾವ ಬೀರುತ್ತಿರುವ ಇಂಡಿಯಾದ ಚಿಂತಕರಲ್ಲಿ ಅಂಬೇಡ್ಕರ್ ಮುಂಚೂಣಿಯಲ್ಲಿರುವುದು ಗಮನಾರ್ಹವಾಗಿದೆ.

1970ರ ತನಕ ಅಂಬೇಡ್ಕರ್ ಬರಹಗಳು ಸಾರ್ವಜನಿಕರಿಗೆ ಸಿಗುವುದು ತೀರಾ ವಿರಳವಾಗಿತ್ತು. ಒಮ್ಮೆ ಅಂಬೇಡ್ಕರ್ ಅವರ ‘ವಾಟ್ ದ ಕಾಂಗ್ರೆಸ್ ಆ್ಯಂಡ್ ಗಾಂಧಿ ಹ್ಯಾವ್ ಡನ್ ಟು ದ ಅನ್‌ಟಚಬಲ್ಸ್’ ಕೃತಿಯನ್ನು ಪ್ರಕಟವಾಗದಂತೆ ತಡೆಯಲು ಕಾಂಗ್ರೆಸ್ ಸರಕಾರ ಎಲ್ಲಿಲ್ಲದ ಉತ್ಸಾಹ ತೋರಿತ್ತು. ಎಂಬತ್ತರ ದಶಕದ ಆರಂಭದಲ್ಲಿ ಮಹಾರಾಷ್ಟ್ರ ಸರಕಾರ ಪ್ರಕಟಿಸಿದ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂಪುಟಗಳಿಗೆ ಹೆಚ್ಚಿನ ಬೇಡಿಕೆ ಬಂದರೂ ಆಗಿನ ಕಾಂಗ್ರೆಸ್ ಸರಕಾರ ಸಂಪುಟಗಳ ಮರುಮುದ್ರಣಕ್ಕೆ ಆಸಕ್ತಿ ತೋರಿರಲಿಲ್ಲ. ವಸಂತ ಮೂನ್, ಭಗವಾನ್ ದಾಸ್, ನಾನಕ್ ಚಂದ್ ರತ್ತೂ ಮೊದಲಾದ ಅಂಬೇಡ್ಕರ್ ಒಡನಾಡಿಗಳು ಅವರ ಬರಹಗಳ ಉಳಿವಿಗಾಗಿ ಮುತುವರ್ಜಿ ತೋರದೇ ಇದ್ದಿದ್ದರೆ ಇಷ್ಟೊತ್ತಿಗೆ ಶೇಕಡಾ ಎಪ್ಪತ್ತರಷ್ಟು ಅಂಬೇಡ್ಕರ್ ಚಿಂತನೆಗಳು ನಮ್ಮ ನಡುವೆ ಕಾಣೆಯಾಗುತ್ತಿದ್ದವು. ಇದಲ್ಲದೇ ಅಂಬೇಡ್ಕರ್ ಬದುಕು ಬರಹವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಚರ್ಚೆಗೆ ಬರುವಂತೆ ನೋಡಿಕೊಂಡವರಲ್ಲಿ ಗೇಲ್ ಓಮ್ವೆಡ್ಟ್, ಎಲಿನಾರ್ ಝೀಲಟ್, ಕ್ರಿಸ್ಟೋಪ್ ಜ್ಯಾಪೆರ್‌ಲಾಟ್... ಮೊದಲಾದವರು ಪ್ರಮುಖರು. ಈ ಎಲ್ಲ ಚಿಂತಕರು ಭಾರತಕ್ಕೆ ಬಂದದ್ದು ಸಾಮಾಜಿಕ ಸಂಶೋಧನೆಯ ಸಲುವಾಗಿ. ಹಾಗೆ ಬಂದವರಿಗೆ ಭಾರತದಲ್ಲಿ ದಕ್ಕಿದ್ದು ‘ಅಸ್ಪಶ್ಯತೆ’ ಎಂಬ ವಿಕೃತ ದರ್ಶನ. ಕೇವಲ ಸಂಶೋಧನೆಯ ಸಲುವಾಗಿ ಭಾರತಕ್ಕೆ ಬಂದ ಓಮ್ವೆಡ್ಟ್, ಝೀಲಟ್, ಜ್ಯಾಫೆರ್‌ಲಾಟ್ ಅವರಿಗೆ ಅಂಬೇಡ್ಕರ್ ಬರಹಗಳ ಓದು-ಮರುಓದು, ಇಲ್ಲಿನ ಗ್ರಾಮ ಭಾರತದ ಅಸಮಾನತೆ ಮತ್ತು ಜಾತಿ ಅಹಮ್ಮಿಕೆಯ ವಿರಾಟ್ ದರ್ಶನವನ್ನೇ ಮಾಡಿಸಿತು. ಅದರಲ್ಲೂ ಓಮ್ವೆಡ್ಟ್ ಮತ್ತು ಝೀಲಟ್‌ರಿಗೆ ಅಂಬೇಡ್ಕರ್ ಕಟ್ಟಿಕೊಟ್ಟ ‘ದಲಿತ ಭಾರತ ಕಥನ’ ಇಲ್ಲಿಂದ ಕಾಲ್ತೆಗೆಯದಂತೆ ಮಾಡಿಬಿಟ್ಟಿತ್ತು. ಈ ಲೇಖನ ಅಂಬೇಡ್ಕರ್ ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ವಿವರಗಳನ್ನು ಅವರ ಪತ್ರಗಳ ಮುಖೇನ; ಹಾಗೂ ಕೆಲವು ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಅವರ ಕೆಲವು ಬರಹಗಳ ಮುಖೇನ ಸಂಕ್ಷಿಪ್ತವಾಗಿ ಮಂಡಿಸುವ ಯತ್ನ.

1. ತುಮುಲ

ಪತ್ರ ಒಂದು

ಪ್ರಿಯ ದತ್ತೋಬಾ, ಈಗಷ್ಟೇ ಮಗನನ್ನು ಮಣ್ಣುಮಾಡಿ ಬಂದೆವು. ಈ ನೋವಿನಿಂದ ಚೇತರಿಸಿಕೊಳ್ಳಲು ನನಗೂ ರಮಾಗೂ ಇನ್ನಷ್ಟು ಕಾಲಬೇಕು; ಇಷ್ಟರಲ್ಲೇ ಈ ನೋವಿನಿಂದ ಹೊರಬರುತ್ತೇವೆ ಎನ್ನುವುದು ನಮ್ಮ ಸೋಗಿನ ಮಾತಾದೀತು. ನಾಲ್ಕು ಮಕ್ಕಳು: ಮೂರು ಗಂಡು ಒಂದು ಹೆಣ್ಣು- ನಾಲ್ಕು ಮುತ್ತುಗಳನ್ನು ಕಳೆದುಕೊಂಡೆವು. ಈ ನಾಲ್ಕು ಸಾವಿನ ನೆನಪುಗಳು ನನ್ನನ್ನು ತೀವ್ರವಾಗಿ ಹಿಂಸಿಸಲಿವೆ. ನನ್ನ ಕೊನೆಯ ಮಗ ರಾಜರತ್ನ, ನಾನು ಬೇರೆಲ್ಲೂ ಕಾಣದ ಬೆರಗು ಅವನಲ್ಲಿತ್ತು. ಅವನ ದಣಿವು ಕಾಣದ ನಿತ್ಯದ ಚಟುವಟಿಕೆಗಳು ನನ್ನಲ್ಲೊಂದು ಹೊಸ ಬಗೆಯ ಉತ್ಸಾಹ ತರಿಸಿತ್ತು. ಅವನ ಹಠಾತ್ ಸಾವಿನಿಂದ ನನ್ನ ಬದುಕು ಬರೀ ಧೂಳು, ಕಸ ತುಂಬಿಕೊಂಡ ಒಣ ಉದ್ಯಾನದಂತಾಗಿದೆ. ಇದೆಲ್ಲದರಿಂದ ನಾನು ಅಷ್ಟು ಸುಲಭಕ್ಕೆ ಹೊರಬರಲಾರೆ. ಇಷ್ಟು ಸಾಕು. ಹೆಚ್ಚು ಬರೆಯಲು ನನ್ನ ದುಃಖ ಮತ್ತು ಕಣ್ಣೀರು ಬಿಡುತ್ತಿಲ್ಲ. ಇಂತಿ ಛಿದ್ರಗೊಂಡವನ ನಮಸ್ಕಾರಗಳು,

ಬಿ.ಆರ್.ಅಂಬೇಡ್ಕರ್ (19ನೆ ಆಗಸ್ಟ್ 1926)

-----------------------------------

ಪತ್ರ ಎರಡು

ಪ್ರಿಯ ಮಹಾರಾಜರೇ,

 ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ನೀವು ನನಗೆಂದು ಕಳಿಸಿದ ಹಣ ನನ್ನ ಕೈ ಸೇರುವಷ್ಟರಲ್ಲಿ ಲಂಡನ್ನಿನಲ್ಲಿ ಪೌಂಡಿನ ಮುಖಬೆಲೆ ಕುಸಿದು ಸುಮಾರು 150 ಪೌಂಡುಗಳಷ್ಟು ಹಣದ ಕೊರತೆ ಉಂಟಾಗಿದೆ. ಸುಮಾರು 100 ಪೌಂಡುಗಳಷ್ಟು ಹಣ ನನ್ನ ನ್ಯಾಯಶಾಸ್ತ್ರ (ಜ್ಯೂರಿಸ್‌ಪ್ರುಡೆನ್ಸ್) ಪದವಿ ಪರೀಕ್ಷೆಯ ಶುಲ್ಕ ಕಟ್ಟಲು ಬೇಕಿದ್ದರೆ, ಮತ್ತೆ 100 ಪೌಂಡುಗಳಷ್ಟು ಹಣ ನನಗೆ ಭಾರತಕ್ಕೆ ಹಿಂದಿರುಗಲು ಬೇಕು. ದಯಮಾಡಿ ಈಗ ಕಳಿಸಿರುವ ಹಣದ ಜೊತೆಗೆ 200 ಪೌಂಡುಗಳಷ್ಟು ಹೆಚ್ಚುವರಿ ಹಣವನ್ನು ಸಾಲದ ರೂಪದಲ್ಲಿ ಕಳುಹಿಸಿ ನನ್ನನ್ನು ಈ ಸಂಕಟದಿಂದ ಪಾರುಮಾಡಿ. ನಾನು ಭಾರತಕ್ಕೆ ಬಂದ ಕೂಡಲೇ ನಿಮ್ಮ ಸಾಲವನ್ನು ಬಡ್ಡಿಯೊಂದಿಗೆ ತೀರಿಸುತ್ತೇನೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡಿಲ್ಲವೆಂದು ತಿಳಿಯುತ್ತೇನೆ.

ಇಂತಿ ತಮ್ಮ ವಿಶ್ವಾಸಿ,

ಬಿ.ಆರ್.ಅಂಬೇಡ್ಕರ್

(4ನೆ ಸೆಪ್ಟಂಬರ್ 1921ರಂದು ಕೊಲ್ಲಾಪುರದ ದೊರೆ ಛತ್ರಪತಿ ಶಾಹು ಮಹಾರಾಜರಿಗೆ ಬರೆದ ಪತ್ರ)

-----------------------------------

ಪತ್ರ ಮೂರು

ಪ್ರಿಯ ಗಾಯಕ್ವಾಡ್,

‘ಭಾರತ ಹಿಂದುಳಿದ ಸಂಘ’ದ ಸದಸ್ಯರು ಮುಂಬೈಯಲ್ಲಿ ದೇವಸ್ಥಾನ ನಿರ್ಮಿಸುವ ಸಲುವಾಗಿ ಹಣದ ವಸೂಲಿಗಾಗಿ ನಿಮ್ಮಲ್ಲಿಗೆ ಬಂದಿರುವ ಸುದ್ದಿಯೊಂದು ಬಂದಿದೆ. ಇವರ ಹಣದ ವಸೂಲಿಯನ್ನು ನೀವು ತಡೆಯಲೇಬೇಕು. ಇದೊಂದು ಕಪಟಿಗಳ ಸಂಘ; ನಮ್ಮ ಜನರ ಶ್ರಮದ ಹಣವನ್ನು ಇಂಥವರ ದೇವಸ್ಥಾನದ ಸ್ಥಾಪನೆಗೆ ಕೊಡುವುದು ಯಾವ ಕಾರಣಕ್ಕೂ ಸರಿಯಲ್ಲ ಎಂಬುದನ್ನು ನಮ್ಮ ಜನಕ್ಕೆ ತಿಳಿಸಬೇಕು.

ನಿಮ್ಮ ವಿಶ್ವಾಸಿ,

ಬಿ.ಆರ್.ಅಂಬೇಡ್ಕರ್

-----------------------------------

ಪತ್ರ ನಾಲ್ಕು

ಪ್ರಿಯ ಭಾವುರಾವ್,

 ನನ್ನ ಸಹಿಸಲಾಗದ ವೌನ ನಿಮಗೆ ದಿಗಿಲು ಹುಟ್ಟಿಸಿರಬಹುದು. ಈಗ ನನಗೆ ವೌನದ ಹೊರತು ಇನ್ನಾವ ದಾರಿಯೂ ಕಾಣಿಸುತ್ತಿಲ್ಲ. ನೀವೆ ಬಲ್ಲಂತೆ ನನ್ನ ಆರೋಗ್ಯ ಕ್ಷೀಣಿಸಿ, ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ನನ್ನ ಅನಾರೋಗ್ಯದ ನಡುವೆಯೂ ಚೌದಾರ್ ಕೆರೆ ಮೊಕದ್ದಮೆಗೆ ಸಜ್ಜಾಗಿದ್ದೆ. ಮೊನ್ನೆ 11ರಂದು ನನ್ನ ದೈಹಿಕ ಅನಾರೋಗ್ಯವನ್ನು ಲೆಕ್ಕಿಸದೆ ಮಹಾಡ್ ನ್ಯಾಯಾಲಯಕ್ಕೆ ಹೋದೆ. ಎದುರು ಕಕ್ಷಿದಾರನ ಅನಾರೋಗ್ಯದ ಕಾರಣ ಕೇಸು ಮುಂದೂಡಿರುವ ಸಂಗತಿ ನನಗೆ ತಿಳಿದುಬಂತು. ತೀವ್ರ ನಿರಾಶೆಯಲ್ಲಿ ಕುಸಿದುಹೋದೆ.

ನಿಮ್ಮ ವಿಶ್ವಾಸಿ,

ಬಿ.ಆರ್.ಅಂಬೇಡ್ಕರ್ (2ನೆ ಎಪ್ರಿಲ್ 1930)

-----------------------------------

ಪತ್ರ ಐದು

  ಮಾನ್ಯರೇ,

   ಹಸನ್ ಎಂಬ 14 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೋರ್ವ ಎಸಗಿದ ಅತ್ಯಾಚಾರ ಮತ್ತು ಅದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ನ್ಯಾಯಾಲಯವು ನೀಡಿದ ಶಿಕ್ಷೆ ಹಾಗೂ ಮಧ್ಯಪ್ರದೇಶ ಸರಕಾರದ ಗೃಹಮಂತ್ರಿಗಳು ಆ ಶಿಕ್ಷೆಯನ್ನು ಕಡಿತಗೊಳಿಸಿದ ವಿಚಾರವಾಗಿ ಈ ಪತ್ರ ಬರೆಯುತ್ತಿರುವೆ. 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾರಣಕ್ಕೆ ಆರೋಪಿಯೋರ್ವನಿಗೆ ಮಧ್ಯಪ್ರದೇಶ ನ್ಯಾಯಾಲಯವು 3 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿತು. ಮಧ್ಯಪ್ರದೇಶ ಸರಕಾರದ ಗೃಹಮಂತ್ರಿಗಳು ತಮ್ಮ ಅಧಿಕಾರ ಹಾಗೂ ಪ್ರಭಾವಗಳನ್ನು ಬಳಸಿಕೊಂಡು ಈ ಶಿಕ್ಷೆಯ ಅವಧಿಯಲ್ಲಿ ಒಂದು ವರ್ಷ ಕಡಿತಗೊಳಿಸಿ ಅಂತಿಮವಾಗಿ ಎರಡು ವರ್ಷಕ್ಕೆ ಇಳಿಯುವಂತೆ ಮಾಡಿದ್ದಾರೆ. ಮಧ್ಯಪ್ರದೇಶದ ಗೃಹಮಂತ್ರಿಗಳ ಈ ನಿರ್ಣಯ ಅತ್ಯಂತ ನಾಚಿಕೆಗೇಡಿನದು. ಇದಕ್ಕಿಂತಲೂ ಹೇಯ ಅನ್ನಿಸುವ ಇನ್ನೊಂದು ಸಂಗತಿ ನನಗೆ ಕಾಣಿಸುತ್ತಿಲ್ಲ. ಕುರುಡಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವ ಹಿಂದೂಗಳು ಗೃಹಮಂತ್ರಿಗಳ ಈ ನಿರ್ಣಯದ ಕುರಿತು ಏನು ಹೇಳುವರು?

ಶೋಷಿತರಾಗಿರುವುದು, ಅಲ್ಪಸಂಖ್ಯಾತರಾಗಿರುವುದು ಕೆಲವರ ವಿಧಿಬರಹ ಎಂದು ಈ ದೇಶ ತಿಳಿದಂತಿದೆ. ಇಂಥದ್ದೇ ಕೃತ್ಯ ಹಿಂದೂ ಧರ್ಮದ ಮೇಲ್ಜಾತಿ ಬಾಲಕಿಯೊಬ್ಬಳ ಮೇಲೆ ನಡೆದಿದ್ದರೆ ಆಗಲೂ ಕೂಡ ತೀರ್ಪು ಈ ರೀತಿಯೇ ಇರುತ್ತಿತ್ತೇ? ಇಂಥದ್ದೊಂದು ಘಟನೆ ಬೇರೆ ಯಾವುದೇ ದೇಶದಲ್ಲಿ ಘಟಿಸಿದ್ದರೂ ಸಂಬಂಧಪಟ್ಟ ಮಂತ್ರಿಯನ್ನು ವಜಾಮಾಡಲಾಗುತ್ತಿತ್ತು. ಆದರೆ, ಇದು ಭಾರತ. ಇಂಥ ಸಾಧ್ಯತೆಗಳನ್ನು ಇಲ್ಲಿ ಕಾಣಲು ಆಗುವುದಿಲ್ಲ.

-ಬಿ.ಆರ್.ಅಂಬೇಡ್ಕರ್

ಮುಂಬೈ

(19 ಮಾರ್ಚ್ 1938ರಂದು ‘ದಿ ಟೈಮ್ಸ್ಸ್ ಆಪ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರಕಟಗೊಂಡ ಪತ್ರ)

-----------------------------------
ಪತ್ರ ಆರು

 ಪ್ರಿಯ ಶಾರದ ಕಬೀರ್,

  ನಾನೊಬ್ಬ ಸುಲಭಕ್ಕೆ ಅರ್ಥವಾಗದ ಕಠಿಣ ಮನುಷ್ಯ. ತಿಳಿನೀರಿನ ವೌನ ಮತ್ತು ಹುಲ್ಲುಗರಿಕೆಯ ವಿನಯ ನನ್ನಲ್ಲಿವೆ. ತೀವ್ರ ಸಿಟ್ಟು ಮತ್ತು ಆಕ್ರೋಶದಲ್ಲಿದ್ದಾಗ ನನ್ನನ್ನು ಯಾರಿಂದಾದರೂ ತಡೆಯುವುದು ಕಷ್ಟ. ನನ್ನದು ವಿಲಾಸಿ ಬದುಕಲ್ಲ; ಎಲ್ಲರೂ ಬಯಸುವ ಜೀವನದ ಸುಖಗಳು ನನ್ನನ್ನು ಇವತ್ತಿಗೂ ಆಕರ್ಷಿಸಲು ಸೋತಿವೆ. ನನ್ನಲ್ಲಿರುವ ಪುಸ್ತಕಗಳೇ ನನ್ನ ನಿಜಸ್ನೇಹಿತರು; ನನ್ನ ಹೆಂಡತಿ ಮಕ್ಕಳಿಗಿಂತ ಇವೇ ನನಗೆ ಹೆಚ್ಚು ಪ್ರಿಯವಾದವು.               ಗೌರವಗಳೊಡನೆ,

ನಿಮ್ಮ ವಿಶ್ವಾಸಿ

ಬಿ.ಆರ್.ಅಂಬೇಡ್ಕರ್ (1ನೇ ಜನವರಿ 1948)

-----------------------------------

ಪತ್ರ ಏಳು

 ಪ್ರಿಯ ಶಾರದ ಕಬೀರ್,

   ಗಾಂಧಿಯವರ ಹತ್ಯೆ ನಿಮ್ಮನ್ನು ಕಂಗೆಡಿಸಿರುವಂತೆ ನನಗೂ ಅತೀವ ನೋವು ತಂದಿದೆ. ಇಂಥ ಕೊಲೆಯನ್ನು ಯಾರೂ ಸಹಿಸಲು ಸಾಧ್ಯವಿಲ್ಲ; ಇಂಥ ಪಾತಕ ಕೃತ್ಯ ಎಸಗುವುದು ಯಾರಿಗೂ ತಕ್ಕುದಲ್ಲ. ನನ್ನ ಮತ್ತು ಗಾಂಧಿಯವರ ಸಂಬಂಧ ಹೇಗಿತ್ತು ಎಂಬುದು ನಿಮಗೆ ತಿಳಿದಿದೆ. ವೈಯಕ್ತಿಕವಾಗಿ ನಾನು ಗಾಂಧಿಯವರಿಗೆ ಋಣಿಯಾಗಿರಲೇಬೇಕಾದ ಯಾವ ಉಪಕಾರವೂ ಅವರಿಂದ ನನಗೆ ಆಗಿಲ್ಲ. ನನ್ನ ಸಾಮಾಜಿಕ, ನೈತಿಕ ಹಾಗೂ ಆಧ್ಯಾತ್ಮಿಕ ವ್ಯಕ್ತಿತ್ವ ರೂಪುಗೊಂಡಿರುವುದು ಗೌತಮ ಬುದ್ಧನಿಂದ. ನಾನು ಸದಾ ಋಣಿಯಾಗಿರುವುದು ಬುದ್ಧನಿಗೆ.

  ಇಷ್ಟಾಗಿಯೂ ಅವರ ಹತ್ಯೆಯ ಸುದ್ದಿ ಕೇಳಿದೊಡನೆ ತೀವ್ರ ದುಃಖಿತನಾದೆ. ನನ್ನ ಬಗ್ಗೆ ಅವರಿಗಿದ್ದ ಅಸಹನೆ, ಹಗೆ ಎಲ್ಲವನ್ನೂ ಬದಿಗೊತ್ತಿ ಅವರ ಕಳೇಬರ ನೋಡಲೆಂದು ಬಿರ್ಲಾಮಂದಿರಕ್ಕೆ ಹೋದೆ. ಅವರ ಮೃತ ಶರೀರ, ಎದೆಯ ಮೇಲಿನ ಗುಂಡು ಹೊಕ್ಕ ಗಾಯ ನನ್ನನ್ನು ನೋವಿನ ಮಡುವಿಗೆ ನೂಕಿತು.

  ಒಂದಷ್ಟು ದೂರ ಅವರ ಶವಸಂಸ್ಕಾರದ ಮೆರವಣಿಗೆಯೊಂದಿಗೆ ನಡೆದೆ; ಸುಸ್ತಾಗಿ ನಿಂತೆ. ಹೆಚ್ಚುದೂರ ನಡೆಯಲು ಸಾಧ್ಯವಾಗದ ಕಾರಣ ಮನೆಗೆ ಹಿಂದಿರುಗಿದೆ. ಒಂದಷ್ಟು ಹೊತ್ತಿನ ನಂತರ ಜಮುನಾ ನದಿ ತೀರದ ರಾಜಘಾಟಿಗೆ ಹೋದೆ. ಅಲ್ಲಿನ ಜನಸಂದಣಿ ದಾಟಿಕೊಂಡು ಗಾಂಧಿಯವರ ಚಿತೆಯತ್ತ ತಲುಪುವುದು ಕೊನೆಗೂ ನನಗೆ ಸಾಧ್ಯವಾಗಲಿಲ್ಲ.

      ಗೌರವಗಳೊಡನೆ,

ನಿಮ್ಮ ವಿಶ್ವಾಸಿ

ಬಿ.ಆರ್.ಅಂಬೇಡ್ಕರ್ (ಫೆಬ್ರವರಿ 1948)

...ಇವೆಲ್ಲವೂ ಅಂಬೇಡ್ಕರ್ ತಮ್ಮ ಬದುಕಿನ ಅತ್ಯಂತ ದುಃಖದ, ದಿಗಿಲಿನ, ಆತಂಕದ ಕ್ಷಣಗಳಲ್ಲಿ ಬರೆದ ಪತ್ರಗಳಾಗಿವೆ. ಅಂಬೇಡ್ಕರ್ ಬದುಕಿನ ವೈಯಕ್ತಿಕ ಚಿತ್ರಣಗಳೇ ಎಲ್ಲೂ ದಾಖಲಾಗದ ಈ ಕಾಲಘಟ್ಟದಲ್ಲಿ ಆತ್ಮಮರುಕದ ಧಾಟಿ ಮೀರಿ ಬೆಳೆಯುವ ಇಲ್ಲಿನ ಎಲ್ಲ ಪತ್ರಗಳಲ್ಲೂ ಅಂಬೇಡ್ಕರ್ ಅವರ ವೈಯಕ್ತಿಕ ಮತ್ತು ಸಾರ್ವಜನಿಕ ವ್ಯಕ್ತಿತ್ವದ ಪ್ರಭೆೆ ಕಾಣಬಹುದು.

2. ತಲ್ಲಣ

ಧಮ್ಮ

1935ರ ತನಕ ಅಂಬೇಡ್ಕರರಿಗೆ ಹಿಂದೂ ಧರ್ಮ ತೊರೆದು ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವುದರ ಕುರಿತು ಹೆಚ್ಚಿನ ಸ್ಪಷ್ಟತೆಗಳಿರಲಿಲ್ಲ. ಆಗಲೂ ಕೂಡ ಈಗಿನಂತೆ ಮೀಸೆ ಬಿಡುವ ದಲಿತ ಯುವಕರ ಮೇಲೆ ಹಲ್ಲೆ ನಡೆಯುತ್ತಿದ್ದವು. ಹಬ್ಬದೂಟಕ್ಕೆ ತುಪ್ಪ ಬಳಸಿದರೆ, ಮದುವೆ ದಿಬ್ಬಣದಲ್ಲಿ ಮದುಮಗನನ್ನು ಕುದುರೆಯ ಮೇಲೆ ಕೂರಿಸಿ ಮೆರವಣಿಗೆ ಹೊರಟರೆ, ದೇವಸ್ಥಾನದ ರಸ್ತೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಿದರೆ, ಹೆಣಗಳನ್ನು ಅಂಗಾತ ಮಲಗಿಸಿ ಹೂಳಿದರೆ, ಕಾಲುಗಳಿಗೆ ಕಡಗಗಳನ್ನು ಹಾಕಿಕೊಂಡರೆ, ರವಿಕೆಯನ್ನೋ ಮೇಲು ಹೊದಿಕೆಯನ್ನೋ ಹಾಕಿಕೊಂಡರೆ ದಲಿತರನ್ನು ಸಾಯುವಂತೆ ಬಡಿಯಲಾಗುತ್ತಿತ್ತು. ದಲಿತರ ಜೋಪಡಿಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. ಬ್ರಿಟಿಷರು ಭಾರತಕ್ಕೆ ಬಂದ ಮೇಲೂ ತಮಿಳುನಾಡಿನ ಬಹುತೇಕ ಹಳ್ಳಿಗಳಲ್ಲಿ ದಲಿತರು ಗಂಡು ನಾಯಿ ಸಾಕುವಂತಿರಲಿಲ್ಲ!

ಚೌದಾರ್ ಕೆರೆ ನೀರು ಕುಡಿಯುವ ಹೋರಾಟ ಮತ್ತು ನಾಸಿಕದ ಕಾಳರಾಮ ದೇವಾಲಯದ ಪ್ರವೇಶದ ಸಂಘರ್ಷಗಳು ಅಂಬೇಡ್ಕರರಿಗೆ ಹಿಂದೂಗಳು ಎಂದೆಂದೂ ಬದಲಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿದವು. ‘ತಪ್ಪು ಹಿಂದೂಗಳದ್ದಲ್ಲ; ಮನುಷ್ಯ ಮನುಷ್ಯನನ್ನು ದ್ವೇಷಿಸುವುದನ್ನು ಹೇಳಿಕೊಡುವ ಹಿಂದೂ ಧರ್ಮದ್ದು’ ಎಂಬ ನಿಲುವಿಗೆ ಅಂಬೇಡ್ಕರ್ 1935ರ ಹೊತ್ತಿಗೆ ಬಂದು ನಿಂತಿದ್ದರು. ‘ಜಾತಿ ಅಸಮಾನತೆ ಮತ್ತು ಹಿಂದೂ ಧರ್ಮ ಒಂದನ್ನೊಂದು ಅವಲಂಬಿಸಿವೆ; ಇವೆರಡು ಒಂದನ್ನು ಬಿಟ್ಟು ಮತ್ತೊಂದು ಬದುಕಿರಲಾರವು. ಭಾರತದ ಶಕ್ತಿಶಾಲಿ ಜಾತಿಯೊಂದು ಇವೆರಡನ್ನು ಶಾಶ್ವತವಾಗಿ ಜೀವಂತವಾಗಿಡಲು ಅನೇಕ ಬಗೆಯಲ್ಲಿ ಶ್ರಮಿಸುತ್ತಿದೆ’ ಎಂಬುದನ್ನು ಅಂಬೇಡ್ಕರ್ ಮನಗಂಡಿದ್ದರು. ಅಕ್ಟೋಬರ್ 13, 1935ರಂದು ಹಿಂದೂ ಧರ್ಮ ತೊರೆಯುವ ಸ್ಪಷ್ಟ ಸೂಚನೆಗಳನ್ನು ಅಂಬೇಡ್ಕರ್ ಕೊಟ್ಟರೂ ಕೂಡ ತಾವು ಸೇರಲಿರುವ ಹೊಸ ಧರ್ಮದ ಬಗ್ಗೆ ಅವರಿಗಿನ್ನೂ ಖಚಿತತೆ ಇರಲಿಲ್ಲ. ಇಸ್ಲಾಂ, ಕ್ರೈಸ್ತ ಮತ್ತು ಸಿಖ್ ಧರ್ಮಗಳ ನಾಯಕರು ತಮ್ಮ ಧರ್ಮಗಳತ್ತ ನೋಡುವಂತೆ ಅಂಬೇಡ್ಕರರಿಗೆ ಕುತೂಹಲ ಹುಟ್ಟಿಸಿದರಾದರೂ ಅಂಬೇಡ್ಕರರಿಗೆ ಇವೆಲ್ಲ ದಲಿತರಿಗೆ ಶೋಷಣೆಯಿಂದ ತಕ್ಷಣಕ್ಕೆ ಬಿಡುಗಡೆ ತರಬಲ್ಲ ಧರ್ಮಗಳು ಎಂದು ಅನ್ನಿಸಲಿಲ್ಲ.

ನೆಲೆ

ಪೂನಾ ಒಪ್ಪಂದದಲ್ಲಿ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಕೇಳುವುದಕ್ಕೂ ಮುನ್ನ ಅಂಬೇಡ್ಕರ್ ದಲಿತರಿಗೆಂದೇ ಪ್ರತ್ಯೇಕ ಗ್ರಾಮಗಳ ಬೇಡಿಕೆ ಇಟ್ಟಿದ್ದರು. ಗಾಂಧಿಯವರ ಗ್ರಾಮಭಾರತದ ರೊಮ್ಯಾಂಟಿಕ್ ಕಲ್ಪನೆಯನ್ನು, ಗ್ರಾಮವೇ ಭಾರತದ ಸ್ವರ್ಗವೆನ್ನುವ ನೋಟಕ್ರಮವನ್ನು ಅಂಬೇಡ್ಕರ್ ಎಂದೂ ಒಪ್ಪಿರಲಿಲ್ಲ. ‘ಎಲ್ಲಿ ತಮ್ಮ ಸಂಖ್ಯೆ ಕಮ್ಮಿಯಿರುತ್ತದೋ ಅಲ್ಲೆಲ್ಲ ದಲಿತರು ಪ್ರತಿದಿನ ಆತಂಕದಿಂದಲೇ ಬದುಕು ಸಾಗಿಸಬೇಕು. ಭಾರತದಲ್ಲಿ ಹಳ್ಳಿಗಳಿರುವ ತನಕ ಜಾತಿ ಅಸಮಾನತೆ ಮತ್ತು ಅಸ್ಪಶ್ಯತೆಯನ್ನು ನಾಶಮಾಡಲು ಸಾಧ್ಯವಿಲ್ಲ’ ಎಂದು ಅಂಬೇಡ್ಕರ್ ಮನಗಂಡಿದ್ದರು.

   ಭಾರತದ ಹಳ್ಳಿಗಳು ನಿಜವಾದ ಜಾತಿಬಿಲಗಳು ಎಂದು ಅರಿತಿದ್ದ ಅವರು ಅದನ್ನು ಬ್ರಿಟಿಷರಿಗೂ ಅರ್ಥಮಾಡಿಸುವುದಕ್ಕೆ ಅನೇಕ ಬಗೆಯಲ್ಲಿ ಪ್ರಯತ್ನಿಸಿದ್ದರು. ತಮ್ಮ ‘ಸ್ಟೇಟ್ಸ್ ಆ್ಯಂಡ್ ಮೈನಾರಿಟೀಸ್’ ಕೃತಿಯಲ್ಲಿ ಅಂಬೇಡ್ಕರ್ ಗ್ರಾಮಭಾರತದ ಕ್ರೌರ್ಯದ ಮುಖಗಳನ್ನು ಎಳೆಎಳೆಯಾಗಿ ಬಿಚ್ಚಿ ತೋರುತ್ತಾರೆ. ಇಷ್ಟಾಗಿಯೂ ಗ್ರಾಮಗಳ ದಲಿತರಲ್ಲಿ ಭೂಮಿಯ ಒಡೆತನ ಇಲ್ಲದ ಕಾರಣ ಅಂಬೇಡ್ಕರರ ಪ್ರತ್ಯೇಕ ಗ್ರಾಮ ಬೇಡಿಕೆಯತ್ತ ಬ್ರಿಟಿಷರು ಅಷ್ಟಾಗಿ ಒಲವು ತೋರಲಿಲ್ಲ.

   ‘ಭಾರತದ ಯಾವುದೇ ಹಳ್ಳಿಯನ್ನು ಗಮನಿಸಿ: ನೂರು ಸವರ್ಣೀಯರ ಮನೆಗಳಿರುವ ಗ್ರಾಮದಲ್ಲಿ ಎರಡೇ ಎರಡು ಮುಸಲ್ಮಾನರ ಮನೆಗಳಿದ್ದರೂ ಎಂಥ ಸಂದರ್ಭದಲ್ಲೂ ಆ ಸವರ್ಣೀಯರು ಮುಸ್ಲಿಮರ ತಂಟೆಗೆ ಹೋಗುವುದಿಲ್ಲ; ಮೈಮುಟ್ಟುವ ಧೈರ್ಯ ಮಾಡುವುದಿಲ್ಲ. ಅದೇ ಹಳ್ಳಿಯಲ್ಲಿ ದಲಿತರ ಹತ್ತು ಮನೆಗಳಿದ್ದರೂ ಎಲ್ಲರ ಮೇಲೂ ಹಿಂದೂಗಳು ನಿರ್ಭಿಡೆಯಿಂದ ದಬ್ಬಾಳಿಕೆ ನಡೆಸುತ್ತಾರೆ’ ಎಂಬುದು ಅಂಬೇಡ್ಕರ್ ಅವರ ವಾದವಾಗಿತ್ತು.

   ಮುಂದುವರಿದು ಅಂಬೇಡ್ಕರ್ ಮುಸ್ಲಿಮರ ತಂಟೆಗೆ ಹಿಂದೂಗಳು ಬಂದರೆ ಇಡೀ ದೇಶದ ಮುಸ್ಲಿಮರು ರೊಚ್ಚಿಗೇಳುವ ಭಯ ಹಿಂದೂಗಳಲ್ಲಿದೆ. ಆದರೆ ಹಳ್ಳಿಗಳಲ್ಲಿ ದಲಿತರ ಪರಿಸ್ಥಿತಿ ನಿಜಕ್ಕೂ ಶೋಚನೀಯ. ದಲಿತರು ನಿಸ್ಸಹಾಯಕರೆಂಬ ಕಾರಣದಿಂದಲೇ ಇವರ ಮೇಲೆ ಹಿಂದೂಗಳ ದೌರ್ಜನ್ಯ, ದಬ್ಬಾಳಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳುತ್ತಾರೆ.

   ಹಳ್ಳಿಗಳಿಂದ ದಲಿತರನ್ನು ಪ್ರತ್ಯೇಕವಾಗಿ ವಿಂಗಡಿಸಿ ಒಂದೆಡೆ ನೆಲೆ ನಿಲ್ಲುವಂತೆ ಮಾಡಬೇಕು ಎಂಬುದು ಅಂಬೇಡ್ಕರ್ ಅವರ ಕನಸಾಗಿತ್ತು. ಈ ಕನಸು ಸಾಕಾರಗೊಳ್ಳಲು ದಲಿತರಿಗೆ ಕೃಷಿಭೂಮಿಯ ಆವಶ್ಯಕತೆಯಿತ್ತು. ಕೃಷಿಭೂಮಿಯ ಮೇಲೆ ದಲಿತರಿಗೆ ಒಡೆತನ ಇಲ್ಲದ ಕಾರಣದಿಂದಲೇ ಹಳ್ಳಿಗಳ ಜಮೀನ್ದಾರರು, ಭೂಮಾಲಕರು ಇವರನ್ನು ನಿತ್ಯವೂ ಹರಿದು ಮುಕ್ಕುತ್ತಿದ್ದಾರೆ ಮತ್ತು ಭೂಮಿಯ ಒಡೆತನ ಇಲ್ಲದೆ ದಲಿತರನ್ನು ಅಷ್ಟು ಸುಲಭಕ್ಕೆ ಭೂಮಾಲಕರ ಶೋಷಣೆಯಿಂದ ಪಾರುಮಾಡಲು ಸಾಧ್ಯವಿಲ್ಲ ಎಂದು ಅಂಬೇಡ್ಕರರಿಗೆ ತೀವ್ರವಾಗಿ ಅನ್ನಿಸಿತ್ತು.

ನೆಲ

ತಮ್ಮ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಕೃತಿಯಲ್ಲಿ ಅಂಬೇಡ್ಕರ್ ‘ಭೂಮಿಯ ರಾಷ್ಟ್ರೀಕರಣ’ ಎಂಬ ಕ್ರಾಂತಿಕಾರಿ ಅಧ್ಯಾಯವೊಂದನ್ನು ಬರೆದಿದ್ದಾರೆ. ಭಾರತ ಸಂವಿಧಾನದಲ್ಲಿ ಅಡಕಗೊಳಿಸಬಹುದಾಗಿದ್ದ ‘ಭೂಮಿಯ ರಾಷ್ಟ್ರೀಕರಣ’ದ ಅನೇಕ ಸಂಗತಿಗಳನ್ನು ಈ ಕೃತಿಯಲ್ಲಿ ಅವರು ಚರ್ಚಿಸಿದ್ದಾರೆ. ಅಂಬೇಡ್ಕರರ ‘ಭೂಮಿಯ ರಾಷ್ಟ್ರೀಕರಣ’ದ ತತ್ವ ಭಾರತ ಸಂವಿಧಾನದ ಭಾಗವಾಗಿಬಿಟ್ಟಿದಿದ್ದರೆ ಭಾರತ ಸಂವಿಧಾನವು ತನ್ನ ಸ್ವರೂಪದಲ್ಲಿ ತೀವ್ರ ಕ್ರಾಂತಿಕಾರಕತನವನ್ನು ಪಡೆದುಕೊಳ್ಳುತ್ತಿತ್ತು.

‘ಭೂಮಿಯ ರಾಷ್ಟ್ರೀಕರಣ’ದ ಪರಿಕಲ್ಪನೆಯ ಕೆಲ ಅಂಶಗಳು ಹೀಗಿದ್ದವು:

1. ಕೃಷಿಯನ್ನು ರಾಷ್ಟ್ರದ ಕೈಗಾರಿಕೆಯೆಂದು ಪರಿಗಣಿಸುವುದು.

2. ಕೈಗಾರಿಕೆಗಳು, ಬೃಹತ್ ಕೈಗಾರಿಕೆಗಳು, ಮುಖ್ಯ ಕೈಗಾರಿಕೆಗಳು ಅಥವಾ ಮೂಲ ಕೈಗಾರಿಕೆಗಳನ್ನು ರಾಷ್ಟ್ರದ ಸಂಪತ್ತನ್ನಾಗಿಸಿ ಅದನ್ನು ರಾಷ್ಟ್ರವೇ          ಖಾಸಗಿಯವರ ಪಾಲಾಗದಂತೆ ಮುನ್ನಡೆಸಬೇಕು.

3. ಕೈಗಾರಿಕೆಗಳು ಹೊಂದಿರುವ ಎಲ್ಲ ಹಕ್ಕುಗಳನ್ನು ರಾಷ್ಟ್ರವೇ ತನ್ನದಾಗಿಸಿಕೊಳ್ಳಬೇಕು.

4. ಕೃಷಿ ಭೂಮಿ, ಕಾಯ್ದಿರಿಸಿಕೊಂಡ ಭೂಮಿ, ಬೇರೊಬ್ಬರ ಸ್ವತ್ತಾಗಿರುವ ಕೃಷಿಯೋಗ್ಯ ಭೂಮಿಯ -ಸ್ವಂತದ್ದಾಗಿರಲಿ, ಸಾಗುವಳಿ ಮಾಡುವವನದಾಗಿರಲಿ,      ಗೇಣಿದಾರನದಾಗಿರಲಿ- ಸ್ವಂತದ ಹಕ್ಕುಗಳನ್ನು ಸರಕಾರವೇ ಪಡೆದು ಅದಕ್ಕೆ ತಕ್ಕ ಪ್ರತಿಫಲವನ್ನು ಹಣದ ರೂಪದಲ್ಲಾಗಲಿ ಇಲ್ಲವೇ ಸಾಲಪತ್ರಗಳ            ಮೂಲಕವಾಗಲಿ ಕೊಡುವುದು.

5. ರಾಷ್ಟ್ರವು ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಸ್ಥಳೀಯ ಹಳ್ಳಿಗರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಈ ಕೆಳಗಿನ ಷರತ್ತುಗಳ ಮೇಲೆ ಕೊಡಬೇಕು: ಎ.      ಭೂಮಿಯಲ್ಲಿ ಸಹಕಾರ ಪದ್ಧತಿಯ ಬೇಲೆ ಕೃಷಿ ಮಾಡುವುದು. ಬಿ. ಸರಕಾರದ ಆದೇಶ ಮತ್ತು ನಿಯಮಕ್ಕೆ ತಕ್ಕಂತೆಯೇ ಕೃಷಿ ಮಾಡುವುದು. ಸಿ.              ಭೂಮಿಯನ್ನು ಜಾತಿಮತಗಳನ್ನು ಪರಿಗಣಿಸದೆ ಹಳ್ಳಿಗರಿಗೆ ಬಿಟ್ಟುಕೊಡುವುದು. ಈ ರೀತಿ ಮಾಡಿದಾಗ ಮಾತ್ರ ಜಮೀನಿನ ಒಡೆಯ, ಜಮೀನಿಲ್ಲದ              ಶ್ರಮಿಕ, ಸಾಗುವಳಿದಾರ ಎಂಬುದೆಲ್ಲ ಕೊನೆಯಾಗುತ್ತದೆ.

     ಡಿ. ರಾಷ್ಟ್ರವೇ ಧನಸಹಾಯದ ಮೂಲಕ ಕೃಷಿ ಮಾಡಿಸಬೇಕು. ನೀರು, ಕೃಷಿಯೋಗ್ಯ ದನಕರುಗಳು, ಗೊಬ್ಬರ, ಬೀಜ ಮತ್ತಿತರೆ ಉಪಕರಣಗಳನ್ನೆಲ್ಲ        ರಾಷ್ಟ್ರವೇ ಕೃಷಿಕರಿಗೆ ಕೊಡಿಸಬೇಕು.

     ಇ. ಕೃಷಿಕರು ಕೃಷಿಭೂಮಿ ಮತ್ತು ಉತ್ಪನ್ನಗಳಿಗೆ ಸರಿಯಾದ ಕ್ರಮದಲ್ಲಿ ಲೆವಿ, ತೆರಿಗೆ ಇತ್ಯಾದಿಗಳನ್ನು ಪಾವತಿಸಿ ಉಳಿದುದನ್ನು ತಮ್ಮ ತಮ್ಮಲ್ಲೇ            ಹಂಚಿಕೊಳ್ಳಬೇಕು.

    ಅಂಬೇಡ್ಕರ್ ರೂಪಿಸಿದ ಭೂಮಿಯ ರಾಷ್ಟ್ರೀಕರಣದ ತತ್ವ ಸಂವಿಧಾನ ಜಾರಿಯಾದ ಹತ್ತು ವರ್ಷಗಳ ಮಟ್ಟಿಗೆ ಅದರೊಳಗೆ ಅಡಕಗೊಂಡಿದ್ದರೂ              ಸಾಕಿತ್ತು. ಭಾರತ ಕೃಷಿ, ಕೈಗಾರಿಕೆ ಮತ್ತು ಭೂಮಿ ಹಂಚಿಕೆಗಳಲ್ಲಿ ಅಗಾಧ ಪ್ರಮಾಣದಲ್ಲಿ ಆರ್ಥಿಕಾಭಿವೃದ್ಧಿಯನ್ನು ಕಾಣುತ್ತಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)