ಪ್ರಧಾನ ಧಾರೆಗೆ ತರುವ ಶಿಕ್ಷಣ
ಭಾಗ 1
ಮುಖ್ಯವಾಹಿನಿಗೆ ಯಾರು ಮತ್ತು ಏಕೆ ಬರಬೇಕು?
ಈ ಹೊತ್ತಿಗಾಗಲೇ (2017) ಮಕ್ಕಳು ವಿವಿಧ ರೀತಿಯ ವೈಜ್ಞಾನಿಕ, ವೈಚಾರಿಕ ಮತ್ತು ತಾಂತ್ರಿಕ ವಿಕಸನದ ಪೂರ್ಣ ಪ್ರಮಾಣದ ಫಲಾನುಭವಿ ಗಳಾಗಬೇಕಿತ್ತು. ಆದರೆ, ತಾಂತ್ರಿಕತೆಯ ಅಭಿವೃದ್ಧಿಯು ಮುಂದುವರಿದಂತೆ ವೈಜ್ಞಾನಿಕ ಮತ್ತು ವೈಚಾರಿಕ ವಿಕಾಸವು ಸಮಗ್ರವಾಗಿ ಆಗಿಲ್ಲ. ಹಾಗಾಗಿ ತಾಂತ್ರಿಕ ಅಭಿವೃದ್ಧಿಯು ವ್ಯರ್ಥವಾಗುತ್ತಿದೆ. ಅದು ವೈಜ್ಞಾನಿಕ ಧೋರಣೆ, ಪ್ರಯೋಗಶೀಲತೆ ಮತ್ತು ವೈಚಾರಿಕ ಪ್ರಬುದ್ಧತೆಗೆ ಕಾರಣವಾಗದೇ ಮತ್ತಷ್ಟು ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದಕ್ಕೆ ಎಳೆಯುತ್ತಿರುವುದು ಸದ್ಯದ ಆತಂಕಕ್ಕೆ ಕಾರಣವಾಗಿದೆ. 1970 ಮತ್ತು 80ರ ದಶಕದಲ್ಲಿಯೇ ಹೊಸ ಹೊಸ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವದ ಪ್ರಯೋಗ ಶೀಲ ಬದುಕುಗಳ ಮಾದರಿಗಳು ದೊಡ್ಡ ಪ್ರಮಾಣದಲ್ಲಿಯೇ ಸಿದ್ಧವಾ ಗುತ್ತಿದ್ದವು. ಮದುವೆ, ಆಹಾರ, ಕುಟುಂಬದ ಮಾದರಿ, ಲೈಂಗಿಕತೆ, ಜಾತಿ ಅಥವಾ ಧರ್ಮಗಳಿಂದ ಗುರುತಿಸಿಕೊಳ್ಳುವಿಕೆ, ಅಧ್ಯಾತ್ಮ; ಇತ್ಯಾದಿಗಳ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿದ ವ್ಯಕ್ತಿಗಳು ಇತರರ ಹುಬ್ಬೇರಿಸು ವಂತೆ ಮಾಡುತ್ತಿದ್ದರೂ, ಒಂದು ಯಶಸ್ವಿ ಮಾದರಿಯಾಗಿ ನಿಲ್ಲುತ್ತಿದ್ದರು. ಇವರಲ್ಲಿ ಸಮಾಜದಲ್ಲಿ ಗುರುತಿಸಲ್ಪಟ್ಟಂತವರೂ, ಕಲೆ ಸಾಹಿತ್ಯದಲ್ಲಿ ಹೆಸರು ಮಾಡಿರುವವರೂ ಮತ್ತು ಸಾಮಾನ್ಯರೂ ಕೂಡ ಇದ್ದರು. ಆದರೆ, ಆ ಬೆಳವಣಿಗೆಯು ಇಪ್ಪತ್ತನೆಯ ಶತಮಾನದ ಭಾರತದಲ್ಲಿ ಒಮ್ಮಿಂದೊಮ್ಮೆಲೇ ಕುಸಿಯುವುದು ಮಾತ್ರವಲ್ಲದೇ ಗುರುತರವಾಗಿ ಪತನಕಂಡಿದೆ. ನಲವತ್ತೈದು-ಐವತ್ತು ಮತ್ತು ಅರವತ್ತರ ಆಸುಪಾಸಿನಲ್ಲಿರು ವವರಿಗೆ ಈ ವ್ಯತ್ಯಾಸ ಮತ್ತು ವಿಪರ್ಯಾಸ ಢಾಳಾಗಿ ಕಾಣುತ್ತದೆ. ಅವರನ್ನುನಾನು ಸೇತು ಪೀಳಿಗೆ ಎಂದು ಕರೆಯುತ್ತೇನೆ. ಈ ಸೇತು ಪೀಳಿಗೆಯವರು ಸಮಾಜದ ಕುರಿತಾಗಿ ಮಾತಾಡುವಾಗ ಪ್ರಧಾನಧಾರೆ, ಮುಖ್ಯವಾಹಿನಿ ಅಥವಾ ಮೈನ್ ಸ್ಟ್ರೀಮ್ ಎಂಬುದನ್ನು ಬಹಳ ಬಳಸುತ್ತಿದ್ದರು. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಇರುವವರ ಮತ್ತು ಪ್ರಗತಿಪರ ಸಮಾಜದ ಕನಸು ಹೊತ್ತವರಲ್ಲಿ ಈ ಪದ ಅತೀ ಹೆಚ್ಚು ಬಳಸುತ್ತಿದ್ದರು.
ಶಿಕ್ಷಣದ ವಿಷಯದಲ್ಲಿ ಹಲವು ಭಿನ್ನ ಮತ್ತು ನಿರ್ಲಕ್ಷಿತ ಹಿನ್ನೆಲೆಗಳ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆನ್ನುವ ಉತ್ಸಾಹ ಮತ್ತು ಕಾರ್ಯೋ ತ್ಪರತೆ ಪ್ರಗತಿಪರ ಶಿಕ್ಷಣಾಸಕ್ತರಲ್ಲಿ ಕಾಣುತ್ತಿತ್ತು. ಇದಕ್ಕೆ ಹಲವು ಸಾಮಾಜಿಕ ಮತ್ತು ಮಾನವೀಯ ಕಾರಣಗಳಿದ್ದವು.
1. ನಿರ್ಲಕ್ಷಿತ ಸಮುದಾಯ ಅಥವಾ ವರ್ಗಗಳ ಮಕ್ಕಳು ವಿದ್ಯಾವಂತ ರಾದರೆ, ಅವರ ಮುಂದುವರಿದ ಪೀಳಿಗೆಗಳೂ ವಿದ್ಯಾವಂತರಾಗಿ ಆಹಾರ, ಆರೋಗ್ಯ, ಶಿಕ್ಷಣ ಮತ್ತು ವಸತಿಯ ವಿಷಯಗಳಲ್ಲಿ ಕೊರತೆ ಇಲ್ಲದವರಾಗುತ್ತಾರೆ.
2.ವಿದ್ಯಾವಂತರಾಗುವ ಪೀಳಿಗೆಯ ಹಿಂದಿನವರು ಅಯಾಚಿತವಾಗಿ ಪಡೆದಿರುವಂತಹ ವೌಢ್ಯ, ಕಂದಾಚಾರ ಮತ್ತು ಅವೈಜ್ಞಾನಿಕ ಸಂಪ್ರದಾಯಗಳಿಂದ ಮುಕ್ತರಾಗಿ ಮನಸ್ಸು, ದೇಹ, ಪರಿಸರ; ಈ ಎಲ್ಲವನ್ನೂ ಆರೋಗ್ಯಪೂರ್ಣವಾಗಿರಿಸಿಕೊಳ್ಳುತ್ತಾರೆ. 3.ಅಸ್ಪಶ್ಯತೆ, ಜೀತವೇ ಮೊದಲಾದ ಸಾಮಾಜಿಕ ಶೋಷಣೆಗಳಿಂದ ಮುಕ್ತರಾಗಿ ಸ್ವತಂತ್ರವಾಗಿ ತಮ್ಮ ಶಿಕ್ಷಣ, ಉದ್ಯೋಗ, ಅಧಿಕಾರ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಸಮಾಜದಲ್ಲಿ ಸಮಾನವಾದಂತಹ ಸ್ಥಾನಮಾನಗಳನ್ನು ಹೊಂದಿರುತ್ತಾರೆ.
4.ಒರೆಗೆ ಹಚ್ಚಿಗೆ ಬೆಳಕಿಗೆ ಬರದೇ ಎಲ್ಲೋ ಮುದುಡಿ ಹೋಗುವಂತಹ ಪ್ರತಿಭೆಗಳು ಸಮಾಜದಲ್ಲಿ ಗುರುತಿಸಲ್ಪಟ್ಟು, ನಾಡಿಗೆ, ಸಮಾಜಕ್ಕೆ, ದೇಶಕ್ಕೆ ಕಾಣಿಕೆಗಳನ್ನು ಸಲ್ಲಿಸುವಂತವರಾಗುತ್ತಾರೆ.
5.ಕೆಲವೇ ಸೀಮಿತ ವರ್ಗಗಳು ಸಮಾಜದ ಮತ್ತು ಪರಿಸರದ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆಯುತ್ತಾ ಮತ್ತೆ ಕೆಲವು ವರ್ಗಗಳು ಅವುಗಳಿಂದ ವಂಚಿತರಾಗಿರುವಾಗ, ಅವರಿಗೆ ಅದರ ಬಗ್ಗೆ ಅರಿವು ಮೂಡಿಸದಿರುವುದು ಮತ್ತು ಸೌಲಭ್ಯಗಳನ್ನು ಅನುಭವಿಸದಿರುವುದು ಒಂದು ಸಾಮಾಜಿಕ ಅಸಮಾನತೆ. ಈ ಅಸಮಾನತೆಯನ್ನು ಸಾಕ್ಷೀಕರಿಸಿಕೊಂಡು ಸುಮ್ಮನಿರುವುದು ಒಂದು ಸಾಮಾಜಿಕ ಅಪರಾಧ.
6.ಸಾಂಪ್ರದಾಯಿಕವಾಗಿರುವಂತಹ ಲಿಂಗ ತಾರತಮ್ಯ, ವರ್ಗ ತಾರತಮ್ಯ ಮತ್ತು ವರ್ಣ ತಾರತಮ್ಯಗಳ ಕಾರಣದಿಂದ ವ್ಯಕ್ತಿಗಳು ಶಿಕ್ಷಣದಿಂದ ವಂಚಿತರಾಗುವುದು, ಪ್ರತಿಭೆಯ ಅನಾವರಣವಾಗದೇ ಇರುವುದು, ಉದ್ಯೋಗದಲ್ಲಿ ಘನತೆ ಮತ್ತು ಸೂಕ್ತ ಪ್ರತಿಫಲ ಕಾಣದೇ ಇರುವುದು, ಅನುಮಾನ ಮತ್ತು ಅಪಮಾನಗಳಿಗೆ ಒಳಗಾ ಗುವುದು, ಅರ್ಹತೆಯಿದ್ದರೂ ಪ್ರಗತಿ ಕಾಣದಿರುವುದು, ಆರ್ಥಿಕ ಮತ್ತು ಔದ್ಯೋಗಿಕ ಉನ್ನತಿ ಸಾಧ್ಯವಾಗದಿರುವುದು; ಒಟ್ಟಾರೆ ಸ್ವಾಭಿಮಾನದ, ಘನತೆಯ ಬದುಕನ್ನು ಕಾಣದೇ ಹೋಗುವುದು. ಇವುಗಳೆಲ್ಲಕ್ಕೂ ಪರಿಹಾರವಾಗಿ ಎಲ್ಲಾ ಹಿನ್ನೆಲೆಯ ಮಕ್ಕಳಿಗೆ ಶಿಕ್ಷಣವು ದೊರಕಿ ಅವರು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂಬುದು ಮುಖ್ಯ ಆಶಯ. ಹೀಗೆ ಹಲವಾರು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಎಷ್ಟೆಷ್ಟೋ ಸರಕಾರಿ ಯೋಜನೆಗಳು ರೂಪಿತವಾದವು, ಖಾಸಗಿ ಮತ್ತು ಅರೆ ಸರಕಾರಿ ಸಂಸ್ಥೆಗಳು ದುಡಿಯತೊಡಗಿದವು. ವ್ಯಕ್ತಿಗತವಾಗಿ ಎಷ್ಟೋ ಜನರು ಯಾವ ಸಂಸ್ಥೆಗಳು ಮತ್ತು ಸರಕಾರಗಳ ಸಹಕಾರಗಳಿಲ್ಲದೇ ತಮ್ಮದೇ ಪರಿಮಿತಿಯಲ್ಲಿ ಕೆಲಸ ಮಾಡಿದರು.
ಕಲಿಕೆಯ ಸೂಕ್ಷ್ಮ ಸ್ವರೂಪ
ವಿವಿಧ ಹಿನ್ನೆಲೆಗಳ ಮಕ್ಕಳು ಆಯಾ ಹಿನ್ನೆಲೆಗಳ ರೂಢಿಗೆ ತಕ್ಕಂತೆ ಕೆಲವೊಂದು ಕೌಶಲ್ಯಗಳನ್ನು ಪಡೆದಿರುತ್ತಾರೆ. ಕೆಲವು ಕೌಶಲ್ಯ ಮತ್ತು ತಿಳುವಳಿಕೆಗಳನ್ನು ಪಡೆದಿರುವುದಿಲ್ಲ. ಕೆಲವೊಂದು ವಿಚಾರಗಳು ಅವರಿಗೆ ಸಹ್ಯವಾದರೆ, ಮತ್ತೆ ಕೆಲವು ವಿಚಾರಗಳು ಸಮ್ಮತವಾಗುವುದಿಲ್ಲ. ಕೆಲವೊಂದು ವಿಷಯಗಳಂತೂ ಪರಿಚಯವೇ ಆಗಿರುವುದಿಲ್ಲ. ಆದ್ದರಿಂದ ಇಂತಹ ಮಕ್ಕಳಿಗೆ ಕಲಿಸುವಾಗ ಶಿಕ್ಷಕರು ಬಹಳ ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಮುಖ್ಯವಾಗಿ ಯಾವುದನ್ನು ವೌಢ್ಯವೆಂದೋ, ಅಜ್ಞಾನವೆಂದೋ ಗುರುತಿಸುತ್ತಾರೋ ಆ ವಿಷಯವಾಗಿ ಬಹಳ ಅನುಕಂಪದಿಂದಲೇ ಅದನ್ನು ನಿವಾರಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಏಕೆಂದರೆ, ಶಿಕ್ಷಕರು ಯಾವುದನ್ನು ವೌಢ್ಯವೆಂದು ಗುರುತಿಸುತ್ತಾರೋ ಆ ವಿಷಯಗಳನ್ನು ಮಕ್ಕಳು ಬಹಳ ಭಾವನಾತ್ಮಕವಾಗಿ ಹಚ್ಚಿಕೊಂಡಿರುತ್ತಾರೆ. ಜೊತೆಗೆ, ತಮ್ಮ ಜೊತೆ ಇರುವಂತಹ ತಂದೆ, ತಾಯಿ, ಸೋದರ ಸೋದರಿಯರೇ ಮೊದಲಾದ ರಕ್ತ ಸಂಬಂಧಿಗಳು ಅಥವಾ ಆಪ್ತರು ಕೂಡ ಅವನ್ನು ನೆಚ್ಚಿಕೊಂಡಿರುತ್ತಾರೆ. ಅವರೆಲ್ಲರೂ ಆರಾಧಿಸುವಂತಹ ವಿಷಯವನ್ನು ಒಮ್ಮಿಂದೊಮ್ಮೆಲೇ ಅಪರಿಚಿತ ಅಥವಾ ಪರಕೀಯನೊಬ್ಬ ಆಕ್ಷೇಪಿಸಿದರೆ ಅವರಿಗೆ ಸಾಂಸ್ಕೃತಿಕ ಆಘಾತವಾಗುತ್ತದೆ. ಅಲ್ಲದೇ ಎಷ್ಟೋಕಾಲದಿಂದ ತನ್ನ ಆಪ್ತೇಷ್ಟರು ಒಪ್ಪುವುದನ್ನು ಇದ್ದಕ್ಕಿದ್ದಂತೆ ಸುಳ್ಳು ಮತ್ತು ತಪ್ಪು ಎನ್ನುವ ಶಿಕ್ಷಕರ ಮಾತಿನಿಂದ ಮಕ್ಕಳು ಗೊಂದಲಕ್ಕೆ ಈಡಾಗುತ್ತಾರೆ. ಆದ್ದ ರಿಂದ ಸಣ್ಣ ಸಣ್ಣ ವಿಷಯಗಳಿಂದ, ಸರಳ ವಿಚಾರಗಳಿಂದ ಹಂತಹಂತವಾಗಿ ಅವರಿಗೆ ಅರಿವು ಮೂಡಿಸುತ್ತಾ ಅವರಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಮೂಡಿಸಬೇಕು. ಹಾಗಾಗಿ ಶಿಕ್ಷಣವೆಂಬುದು ಕ್ರಿಯೆ, ಪ್ರತಿಕ್ರಿಯೆಯಾಗಿರದೇ ಒಂದು ಪ್ರಕ್ರಿಯೆಯಾಗಿರುತ್ತದೆ.
ಮಕ್ಕಳ ಹಿನ್ನೆಲೆಗಳನ್ನು ಅರಿಯದೇ ತನ್ನದ್ಯಾವುದೋ ವಿಜ್ಞಾನದ ಅಥವಾ ಸಾಹಿತ್ಯದ ಪಾಠವನ್ನು ಸುಮ್ಮನೆ ಬೋಧಿಸಿ ಹೋಗಿಬಿಟ್ಟರೆ, ಅಂತಹ ಶಿಕ್ಷಕರಿಂದ ಸಮಾಜಕ್ಕೆ ಮತ್ತು ವ್ಯಕ್ತಿಗಳಿಗೆ ಯಾವ ರೀತಿಯ ಪ್ರಯೋಜನವೂ ಆಗುವುದಿಲ್ಲ. ತಾನು ಮಾಡುವ ಪಾಠವನ್ನು ಆಯಾ ಮಕ್ಕಳ ಹಿನ್ನೆಲೆಗಳಿಗನುಗುಣವಾಗಿ ಅರ್ಥೈಸಿ, ಕಲಿಕೆಯು ಬದುಕಿನ ಭಾಗ, ತಮ್ಮ ವೈಚಾರಿಕತೆಯ ಭಾಗ, ವೈಜ್ಞಾನಿಕ ಮುನ್ನಡೆಯುವಿಕೆಯ ಭಾಗ, ಪ್ರಯೋಗ ಶೀಲತೆಯ ಭಾಗವಾಗವಾಗುವಂತೆ ಮಾಡುವುದಾದರೆ ಮಾತ್ರ ಎಲ್ಲಾ ತಳವರ್ಗದ ಅಥವಾ ನಿರ್ಲಕ್ಷಿತ ಸಮುದಾಯಗಳ, ಅಥವಾ ಇನ್ನಾವುದೇ ರೀತಿಯ ಅವಕಾಶ ಮತ್ತು ಅನುಕೂಲ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುವುದು. ಇಂತಹ ಶಿಕ್ಷಣದ ಪ್ರಕ್ರಿಯೆಯ ಪ್ರಜ್ಞಾವಂತ ಸೂತ್ರಧಾರರಾಗುವುದನ್ನು ಶಿಕ್ಷಕರು ಕಲಿಯಬೇಕು.
1.ಮಕ್ಕಳ ಹಿನ್ನೆಲೆಗಳನ್ನು ಗುರುತಿಸಬೇಕು.
2.ಮಕ್ಕಳಿಗೆ ಇರುವಂತಹ ಅಥವಾ ಇಲ್ಲದೇ ಇರುವಂತಹ ಸೌಲಭ್ಯ ಗಳನ್ನು ಗುರುತಿಸಬೇಕು.
3.ಅವರ ಕುಟುಂಬದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಿನ್ನೆಲೆಗಳ ಬಗ್ಗೆ ಮಾಹಿತಿ ಇರಬೇಕು.
4.ಮಕ್ಕಳ ಕುಟುಂಬದ ಜೀವನ ಶೈಲಿ ಮತ್ತು ಜೀವನ ದೃಷ್ಟಿ; ಇವುಗಳ ಬಗ್ಗೆ ತಿಳಿದಿರಬೇಕು.
5.ಮಕ್ಕಳ ತಂದೆ ತಾಯಿಗಳ ಉದ್ಯೋಗ ಮತ್ತು ಒಲವು, ನಿಲುವುಗಳ ಬಗ್ಗೆ ಸ್ಪಷ್ಟತೆ ಇರಬೇಕು.
ಒಬ್ಬ ಶಿಕ್ಷಕನಿಗೆ ಇಷ್ಟೆಲ್ಲಾ ತಿಳುವಳಿಕೆ ಇರುವುದು ಅಪ್ರಾಯೋಗಿಕ ಮತ್ತು ಅತಿಯಾದ ನಿರೀಕ್ಷೆ ಎನಿಸುತ್ತದೆಯೇ? ಏನಿಲ್ಲ. ಸಣ್ಣ ಸಮುದಾಯಗಳ ಮತ್ತು ನಿರ್ಲಕ್ಷಿತ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಇವುಗಳೆಲ್ಲಾ ಆಗಲೇಬೇಕು.
ಇದು ಯಾವಾಗ ಸಾಧ್ಯವಾಗುವುದಿಲ್ಲವೆಂದರೆ;
1.ತರಗತಿಯಲ್ಲಿ ಮಿತಿ ಮೀರಿದ ಸಂಖ್ಯೆಯ ವಿದ್ಯಾರ್ಥಿಗಳಿದ್ದರೆ,
2.ಶಿಕ್ಷಕರಿಗೆ ಪಠ್ಯಕ್ರಮದ ಅವಧಿಯ ಒತ್ತಡವಿದ್ದರೆ,
3.ಶಿಕ್ಷಕರನ್ನು ಅತಿಯಾಗಿ ಇತರ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರೆ,
4.ಶಿಕ್ಷಕರಿಗೆ ಸಮಾಜಮುಖಿ ಚಿಂತನೆಗಳಿರದಿದ್ದರೆ,
5.ಬೇರೆ ಕೆಲಸ ಸಾಧ್ಯವಾಗದೇ, ಅನಿವಾರ್ಯವಾಗಿ ಈ ಶಿಕ್ಷಕ ಕೆಲಸಕ್ಕೆ ಬಂದಿದ್ದರೆ,
6.ಶಿಕ್ಷಣದ ಸೂಕ್ಷ್ಮ ಸ್ವರೂಪವನ್ನೇ ತಿಳಿಯದೇ ಬರಿದೇ ಸ್ಥೂಲಸ್ತರಗಳಲ್ಲಿ ಯಾಂತ್ರಿಕವಾಗಿ ಕೆಲಸ ಮಾಡುವಂತಾದರೆ,
7.ಶಿಕ್ಷಕರಿಗೆ ಶೋಷಿತ, ನಿರ್ಲಕ್ಷಿತ ಮತ್ತು ಅವಕಾಶ ವಂಚಿತ ವರ್ಗ ಅಥವಾ ಸಮುದಾಯಗಳ ಬಗ್ಗೆ ಆಸಕ್ತಿ ಅಥವಾ ಅನುಕಂಪ ಇಲ್ಲದಿದ್ದರೆ.
ಶಿಕ್ಷಣದಲ್ಲಿ ಬೇಕಿದೆ ಆದರ ಮತ್ತು ಆಕರ್ಷಣೆ
ಇತ್ತೀಚೆಗೆ ಒಂದು ಶೋಷಿತ ಮತ್ತು ನಿರ್ಲಕ್ಷಿತವೆನ್ನಬಹುದಾದ ಬುಡ ಕಟ್ಟಿನ ಟೆಂಟಿಗೆ ಭೇಟಿ ಕೊಟ್ಟಿದ್ದೆ. ಅವರ ಮನೆಗಳು ಶಿಥಿಲಾವಸ್ಥೆಗಳ ಲ್ಲಿದ್ದವು. ಜೋಪಡಿಗಳ ನಡುವಲ್ಲಿ ಇರುವ ಗುಂಡಿಗಳಲ್ಲಿ ಮಳೆ ಬಿದ್ದು ನೀರು ನಿಂತು ಪಾಚಿಗಟ್ಟಿ ಕೊಳೆಯುತ್ತಿತ್ತು. ಕ್ರಿಮಿಗಳು ಮತ್ತು ಸೊಳ್ಳೆಗಳು ಹೆಚ್ಚಿದ್ದವು. ಪುಟ್ಟ ಮಕ್ಕಳು ಬಹಳ ಗಲೀಜಾದ ಬಟ್ಟೆ ತೊಟ್ಟಿದ್ದು, ಮೂಗಿಂದ ಸಿಂಬಳ ಸುರಿಯುತ್ತಿತ್ತು. ಮಣ್ಣಲ್ಲಾಡುತ್ತಿದ್ದ ಮಕ್ಕಳು ಅದ್ಯಾವಾಗಲೋ ಧೂಳಲ್ಲಿ ಬಿದ್ದದ್ದ ಕ್ಯಾರೆಟ್ಟಿನ ತುಂಡನ್ನು ಮತ್ತೆ ತಿನ್ನುವ ಕೆಲಸ ಮಾಡುತ್ತಿದ್ದವು. ಅದೇ ಮಕ್ಕಳ ಅಣ್ಣಂದಿರಲ್ಲಿ ಕೆಲವರು ಆ ಮಕ್ಕಳಿಗೂ ಮತ್ತು ಮನೆಗೂ ಸಂಬಂಧವೇ ಇಲ್ಲದವರಂತೆ ತಮ್ಮ ತೋರಿಕೆಯಲ್ಲಿದ್ದರು. ಅವರು ಈಗಿನ ನವೀನ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದರು. ಅದೇನು ಹೇರ್ ಸ್ಟೈಲ್ ಎಂದರೆ ‘ಹೆಬ್ಬುಲಿ ಕಟ್’ ಎಂದು ಉತ್ತರ ಬಂತು. ಅದಕ್ಕೆ ಬರ್ಗಂಡಿ ಬಣ್ಣದ ಲೇಪವೂ ಕೂಡ. ತೊಟ್ಟಿರುವ ಟೀ ಶರ್ಟ್ ಮತ್ತು ಅದರ ಮೇಲೆ ಬಟನ್ ಹಾಕಿರದ ಶರ್ಟ್, ಹೊಸ ಮಾದರಿಯ ಮೊಣಕಾಲಿನವರೆಗಿನ ಟೈಟ್ ಜೀನ್ಸ್ ಪ್ಯಾಂಟ್. ನಾವು ಅಲ್ಲಿಗೆ ಹೋದಾಗ ಅವನು ತನ್ನ ಆಂಡ್ರಾಯ್ಡಾ ಫೋನ್‌ನಲ್ಲಿ ಯಾವುದೋ ತೆಲುಗು ಸಿನೆಮಾ ನೋಡುತ್ತಿದ್ದ. ಮೊದಲು ಅವನ್ಯಾರೋ ಎಲ್ಲಿಂದಲೋ ಬಂದಿರುವವನು ಎಂದುಕೊಂಡರೆ ಅವನು ಅದೇ ಮನೆಯವನಾಗಿದ್ದ. ಮಣ್ಣಲ್ಲಾಡುತ್ತಿದ್ದ ಕೊಳಕು ಮೈಯ ಮಗುವಿನ ಅಣ್ಣನೇ ಆಗಿದ್ದ. ಅವನು ಎಂಟನೆ ತರಗತಿಗೇ ಶಾಲೆಯನ್ನು ಬಿಟ್ಟಿದ್ದಾನಂತೆ. ಈಗ ಓದು ಮುಂದುವರಿಸಲೂ ಆಗುತ್ತಿಲ್ಲವಂತೆ, ಕೆಲಸವೂ ಸಿಗುತ್ತಿಲ್ಲವಂತೆ. ಅವನ ವಯಸ್ಸು ಹದಿನೆಂಟು.
ಯಾಕೆ ಸ್ಕೂಲ್ ಬಿಟ್ಟೆ ಅಂದರೆ, ಸರಿಯಾಗಿ ಹೇಳಿಕೊಡುತ್ತಿರಲಿಲ್ಲ ಎಂದ. ಸರಿಯಾಗಿ ಅಂದರೆ ಹೇಗೆ ಅಂದರೆ, ಅವರು ಹೇಳಿಕೊಡುವುದು ಅರ್ಥವೇ ಆಗುತ್ತಿರಲಿಲ್ಲ ಎಂದ. ಅರ್ಥ ಆಗಲ್ಲ ಅಂದ್ರೆ ಬಿಟ್ಟುಬಿಡೋದೇನೋ ‘ಭಡವಾ ರ್ಯಾಸ್ಕಲ್’ ಎಂದು ಆತ್ಮೀಯವಾಗಿ ಪ್ರೀತಿಯಿಂದ ಗದ್ಧರಿಸಿ, ಬೆನ್ನಿನ ಮೇಲೆ ಗುದ್ದಿ ಕೇಳಿದರೆ, ‘‘ನಿಮಗೇನ್ ಹೇಳ್ಕೊಟ್ರೂ ನೀವು ಕಲಿಯೋಲ್ಲ ಅಂತ ಮೇಷ್ಟ್ರು ಬೈಯ್ಕೊಂಡು ಹೋಗ್ತಿದ್ರು’’ ಎಂದು ಅವನ ಶಾಲೆಯ ಕಥೆ ಹೇಳಿದ. ಅಲ್ಲಿ ತಿಳಿದಿದ್ದೇನೆಂದರೆ, ಸರಕಾರಿ ಶಾಲೆ ಅದು. ವಿವಿಧ ಟೆಂಟುಗಳಿಂದ ಬರುವ ಸಮುದಾಯದ ಮಕ್ಕಳೇ ಅಲ್ಲಿನ ಬಹುಪಾಲು ವಿದ್ಯಾರ್ಥಿಗಳು. ಅವರಿಗೆ ಎಷ್ಟು ಹೇಳಿಕೊಟ್ಟರೂ ತಲೆಗೆ ಹತ್ತುವುದಿಲ್ಲ ಎಂಬ ಮನೋಭಾವ ಆ ಉಪಾಧ್ಯಾಯರಿಗೆ. ಹಾಗಾಗಿ ಹೇಳಿಕೊ ಡುವುದೋ ಒಂದು ನಾಮಕಾವಸ್ಥೆಗೆ, ಅನಿವಾರ್ಯತೆಗೆ. ಹುಡುಗರಿಗೂ ಶಿಕ್ಷಕರ ಬಗ್ಗೆ ಒಲವಿಲ್ಲ ಮತ್ತು ಆಕರ್ಷಣೆಯಿಲ್ಲ. ಶಿಕ್ಷಕರಿಗೂ ಮಕ್ಕಳ ಬಗ್ಗೆ ಒಲವಿಲ್ಲ, ಕಾಳಜಿ ಇಲ್ಲ. ಹುಡುಗ ಹೇಗೋ ಸಹವಾಸಗಳಲ್ಲಿ ಕಾಸು ಗಳನ್ನು ಹೊಂದಿಸಿಕೊಂಡು ಬರುವ ಸಿನೆಮಾಗಳನ್ನೆಲ್ಲಾ ನೋಡುತ್ತಾನೆ. ತನ್ನಾಕರ್ಷಣೆಯ ಸಿನೆಮಾ ನಟರ ಸ್ಟೈಲ್‌ಗಳನ್ನು ತಾನೂ ಮಾಡಿಕೊಳ್ಳು ತ್ತಾನೆ. ಅವರ ಗುಡಿಸಲ ಮನೆಗೆ ಡಿಶ್ ಆ್ಯಂಟೆನಾ ಇದೆ. ಸಿನೆಮಾಗಳನ್ನು ಬಿಡದೇ ನೋಡುತ್ತಾನೆ. ತನ್ನದೇ ಮನೆಯ ಕಿರಿಯ ಸೋದರ ಗಲೀಜಾಗಿ, ಅನಾರೋಗ್ಯಕರವಾಗಿ ಹೊರಳಾಡುತ್ತಿದ್ದರೆ ಅವನಿಗೆ ಯಾವ ಗಮನವೂ ಇಲ್ಲ. ಮನೆಯ ಸ್ಪಲ್ಪ ದೂರದಲ್ಲಿಯೇ ರಾಶಿ ಬಿದ್ದಿರುವ ಮರಳು, ಕಲ್ಲು, ಮಣ್ಣುಗಳನ್ನು ಗುಂಡಿಗೆ ಹಾಕಿ ಮುಚ್ಚಲು ವ್ಯವಧಾನವಿಲ್ಲ. ಆದರವೂ ಇಲ್ಲದ, ಆಕರ್ಷಣೆಯೂ ಇಲ್ಲದ ಶಾಲೆಗೆ ಹೋಗಲ್ಲ. ತನ್ನೊಬ್ಬನ ಹೊಟ್ಟೆ, ಬಟ್ಟೆ, ಮನರಂಜನೆಗೆ ಬೇಕಾದ್ದನ್ನು ಪಡೆಂುಲು ಅಲ್ಲಿಲ್ಲಿ ಕೆಲಸ ಗಿಟ್ಟಿಸಿಕೊಂಡು ಕಾಸು ವಂಚಿಕೊಳ್ಳಲು ಪ್ರಯತ್ನಿಸುತ್ತಾನೆ. ಇವನನ್ನು ಪ್ರಧಾನಧಾರೆಗೆ ಅಥವಾ ಮುಖ್ಯವಾಹಿನಿಗೆ ತಂದಿದ್ದೇವೆಯೇ? ಅವನ ಮೊಬೈಲ್, ಡ್ರೆಸ್ ಸೆನ್ಸ್, ಹೇರ್ ಸ್ಟೈಲ್ ಯಾವ ನವನವೀನ ಪಟ್ಟಣಿಗನಿಗಿಂತ ಕಡಿಮೆ ಇಲ್ಲ. ಅವನು ಎಡವಿರುವುದೆಲ್ಲಿ? ವ್ಯವಸ್ಥೆ ಎಡವಿರುವುದೆಲ್ಲಿ? ಶಿಕ್ಷಣದಲ್ಲಿರುವ ಸಮಸ್ಯೆ ಏನು? ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ತರುವುದೆಂದರೇನು? ಅಸಲಿಗೆ ಮುಖ್ಯವಾಹಿನಿ ಎಂದರೇನು? ಮುಂದೆ ನೋಡೋಣ.