ತಾಜ್ ಮಹಲ್ ಮತ್ತು ಹಳೆಯ ಮಿತ್‌ಗಳು
‘‘ಭಾರತೀಯ ಸಂಸ್ಕೃತಿಯಲ್ಲೊಂದು ಕಪ್ಪುಚುಕ್ಕೆ’’ ಎಂದು ತಾಜ್‌ಮಹಲ್ ಮತ್ತು ಷಹಜಹಾನ್ ಬಗ್ಗೆ ಸಂಗೀತ್ ಸೋಮ್ ಹಳೆಯ ಮಿತ್‌ಗಳನ್ನು ರೀಸೈಕಲ್ ಮಾಡುತ್ತಿದ್ದಾರೆ.
ವಿಶ್ವದ ಅತ್ಯಂತ ಸುಂದರವಾದ ಅದ್ಭುತವಾದ ಕಟ್ಟಡವನ್ನು ಭಾರತೀಯ ಸಂಸ್ಕೃತಿಯ ಒಂದು ಕಪ್ಪುಚುಕ್ಕೆ ಎಂದು ಕರೆಯುವ ಮೂಲಕ ಭಾರತೀಯ ಜನತಾಪಕ್ಷದ ಸಂಗೀತ್ ಸೋಮ್ ಮೊಗಲ್ ಚಕ್ರವರ್ತಿ ಷಹಜಹಾನ್‌ನನ್ನು ಅವನ ಉತ್ತರಾಧಿಕಾರಿ ಔರಂಗಜೇಬ್‌ನೊಂದಿಗೆ ಬೆರೆಸಿಬಿಟ್ಟಿದ್ದಾರೆ. ಸೋಮ್‌ರ ಜಗತ್ತಿನಲ್ಲಿ, ತಾಜ್‌ಮಹಲನ್ನು ಕಟ್ಟಿಸಿದ ಷಹಜಹಾನ್ ತನ್ನ ತಂದೆಯನ್ನು ಸೆರೆಮನೆಯಲ್ಲಿ ಇಟ್ಟ; ಆದರೆ ನಿಜ ಸಂಗತಿ ಹೆಚ್ಚಿನ ಭಾರತೀಯರಿಗೆ ತಿಳಿದಿರುವಂತೆ, ಅವನನ್ನು ಅವನ ಬದುಕಿನ ಕೊನೆಯ ದಿನಗಳಲ್ಲಿ ಮಗ ಔರಂಗಜೇಬ್ ಜೈಲಿಗೆ ತಳ್ಳಿದ. ಬೊಬ್ಬೆಹೊಡೆಯುವ ಹಿಂದುತ್ವ ‘ಇತಿಹಾಸ ಗ್ಯಾಂಗ್’ನ ಒಂದು ಕಾರ್ಡ್ ಹೊಂದಿರುವ ಸದಸ್ಯರಾಗಿರುವ ಉತ್ತರಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮ, ಸೋಮ್‌ರವರ ಪರವಾಗಿ ನಿಂತರು. ‘‘ತಂದೆಯನ್ನು ಕೊಲ್ಲುವ ಮಕ್ಕಳ ಮೊಗಲ್ ಪರಂಪರೆ ಭಾರತೀಯ ಸಂಸ್ಕೃತಿಯ ಮೂಲ ಆಶಯಕ್ಕೇ ವಿರುದ್ಧವಾದುದು’’ ಎಂದರು. ಯಾವನೇ ಮೊಗಲ್ ರಾಜಕುಮಾರ ಅಥವಾ ದೊರೆ ತನ್ನ ತಂದೆಯನ್ನು ಕೊಂದದ್ದಿಲ್ಲ. ಆದರೆ ಹಿಂದೂ ರಜಪೂತರ ಇತಿಹಾಸಗಳು ಪಿತೃಹತ್ಯೆಯ ಎರಡು ಪ್ರಕರಣಗಳನ್ನು ದಾಖಲಿಸಿದೆ. ಕ್ರಿ.ಶ 1468ರಲ್ಲಿ ಮೇವಾರ್‌ನ ರಾಣಾ ಕುಂಭನನ್ನು ಅವನ ಮಗ ಹತ್ಯೆಗೈದ ಮತ್ತು 1724ರಲ್ಲಿ ರಾಜಕುಮಾರರಾದ ಬಕ್ತ್‌ಸಿಂಗ್ ಮತ್ತು ಅಭಯ್ ಸಿಂಗ್ ಮೇವಾರ್‌ನ ದೊರೆ, ತಮ್ಮ ತಂದೆ ಅಜಿತ್‌ಸಿಂಗ್‌ನನ್ನು ಕೊಲೆ ಮಾಡಿದರು. ಭಾರತೀಯ ಸಂಸ್ಕೃತಿಯ ಪಿತೃಹತ್ಯೆ ಪರಂಪರೆ ಬಗ್ಗೆ ಇಷ್ಟು ಹೇಳಿದರೆ ಸಾಕು.
ಮೊಗಲರು ರಾಜಪೂತರಿಗಿಂತ ನೈತಿಕವಾಗಿ ಮೇಲು ಎಂದು ಇದರ ಅರ್ಥವಿಲ್ಲ. ಮೊಗಲ್ ಇತಿಹಾಸದಲ್ಲಿ ಭ್ರಾತೃಹತ್ಯೆ ಮತ್ತು ವಿಶ್ವಾಸ ದ್ರೋಹಿಗಳಿಲ್ಲವೆಂದಲ್ಲ. ಜಹಾಂಗೀರ್ ತನ್ನ ತಂದೆ ಅಕ್ಬರನ ವಿರುದ್ಧ, ಷಹಜಹಾನ್ ತನ್ನ ತಂದೆ ಜಹಾಂಗೀರ್‌ನ ವಿರುದ್ಧ ನಡೆಸಿದ ದಂಗೆಗಳು ಯಶಸ್ವಿಯಾಗಿದ್ದಲ್ಲಿ ಅವರು ಅಧಿಕಾರ ಕಳೆದುಕೊಂಡ ಚಕ್ರವರ್ತಿಯನ್ನು ಕೊಲ್ಲದೆ ಬಿಡುತ್ತಿದ್ದರೋ ಎಂದು ಹೇಳುವಂತಿಲ್ಲ.
ಷಹಜಹಾನ್ ವಿರುದ್ಧ ಶರ್ಮಾ ಜನಜನಿತವಾಗಿರುವ ಒಂದು ಅಪಪ್ರಚಾರವನ್ನು ಪುನರುಚ್ಚರಿಸಿದ್ದಾರೆ. ಕಟ್ಟಡ ಕಟ್ಟಿದ ಬಳಿಕ ಕೆಲಸಗಾರರ ಕೈಗಳನ್ನು ಕತ್ತರಿಸಿ ಹಾಕಲಾಗುತ್ತಿತ್ತು ಎಂಬ ಅಪಪ್ರಚಾರ ಅದು. ಇದು ಯಾವುದೋ ಒಂದು ಕಾಲಘಟ್ಟದಲ್ಲಿ ತಾಜ್‌ಮಹಲ್ ಜೊತೆ ಸೇರಿಕೊಂಡ ಒಂದು ಕತೆ, ಒಂದು ಭಯಾನಕವಾದ ನೆರಳಿಲ್ಲದೆ ಅಷ್ಟೊಂದು ಸುಂದರವಾದ ಕಟ್ಟಡ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲವೇನೋ ಎಂಬಂತೆ ಹುಟ್ಟಿಕೊಂಡ ಒಂದು ಕತೆ ಇದು ಮತ್ತು ಈ ಕತೆ ಮುಮ್ತಾಝ್ ಮಹಲ್ ಕಟ್ಟಡದ ಕುರಿತ ಜನಸಾಮಾನ್ಯರ ಜನಪ್ರಿಯ ಕಲ್ಪನೆಯೊಂದಿಗೆ ತಳಕುಹಾಕಿಕೊಂಡಿದೆ. ಇಂತಹ ಕತೆಗಳು ಹಲವು ಸಂಸ್ಕೃತಿಗಳಲ್ಲಿ ಕಾಣಸಿಗುತ್ತದೆ. ನಿಜವಾದ ಅಥವಾ ಕಾಲ್ಪನಿಕ ಪೌರಾಣಿಕ ಕಟ್ಟಡಗಳಿಗೆ ಅಂಟಿಕೊಂಡಿರುವ ಕತೆಗಳಿವು. ರಷ್ಯಾದ ದೊರೆ ಐವಾನ್ ದಿ ಟೆರಿಬಲ್ ಮಾಸ್ಕೊದ ಪ್ರಸಿದ್ಧ ಸೈಂಟ್ ಬೆಸಿಲ್ ಕೆಥೆಡ್ರಲ್(ಚರ್ಚ್)ನ ಶಿಲ್ಪಿ ಪೋಸ್ಟಿಕ್ ಯಕೊವ್ಲಿನ್‌ನನ್ನು ಇದಕ್ಕಿಂತ ಉತ್ತಮವಾದ ಭವ್ಯವಾದ ಚರ್ಚ್ ನಿರ್ಮಿಸದಂತೆ ತಡೆಯುವುದಕ್ಕಾಗಿ ಅವನನ್ನು ಕೊಲ್ಲಿಸಿದನೆಂದು ಹೇಳಲಾಗುತ್ತಿದೆ. ಆಗ್ರಾದ ಗೋರಿಯ ಹೆಸರನ್ನೇ ಹೊತ್ತಿರುವ ಮುಂಬೈಯ ತಾಜ್‌ಮಹಲ್ ಹೊಟೇಲ್‌ಗೆ ಸಂಬಂಧಿಸಿ ಕೂಡ ಇಂತಹದೇ ಒಂದು ಕತೆಯಿದೆ. ಅದರ ವಾಸ್ತುಶಿಲ್ಪಿ ಕಟ್ಟಡದ ತನ್ನ ಯೋಜನೆಯನ್ನು ಹಿಂದುಮುಂದು ಮಾಡಲಾಯಿತೆಂದು ಆತನಿಗೆ ಗೊತ್ತಾದ ಮೇಲೆ ಕಟ್ಟಡದ ಮೇಲಿನ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ.
ಶರ್ಮಾ ಹೇಳುವಂತಹ ಘಟನೆ ಏನಾದರೂ ಷಹಜಹಾನನ ಕಾಲದಲ್ಲಿ ನಡೆಯುತ್ತಿದ್ದಲ್ಲಿ ಆ ಬಗ್ಗೆ ಯುರೋಪಿಯನ್ ಇತಿಹಾಸಕಾರರಿಂದ ತಿಳಿಯುತ್ತಿತ್ತು. ಇಟಲಿಯವನಾದ ಜೆರೊನಿಮೊ ವೆರ್ಯೊನಿಯೋ ತಾಜ್‌ಮಹಲನ್ನು ವಿನ್ಯಾಸಗೊಳಿಸಿದನೆಂದು ಫಾದರ್ ಸೆಬಾಸ್ಟಿಯನ್ ಮಾಂಡ್ರಿಕ್ ಸುಳ್ಳು ಬರೆದಿದ್ದಾನೆ.
ಪ್ರಾಯಶಃ ಯಾಕೆಂದರೆ ಅಷ್ಟೊಂದು ಅದ್ಭುತವಾದ ಒಂದು ಕಟ್ಟಡವನ್ನು ಒಬ್ಬ ಏಷ್ಯನ್ ಕಟ್ಟಸಿದನೆಂದು ಕಲ್ಪಿಸಿಕೊಳ್ಳುವುದು ಅವನಿಗೆ ಅಸಾಧ್ಯವಾಗಿರಬೇಕು. ಮುಮ್ತಾಝ್ ಮಹಲ್ ನಿಧನ ಹೊಂದಿದ ವರ್ಷವಾದ 1631ರಿಂದ ಆರಂಭಿಸಿ ಜೊಹಾನಸ್ ಡಿ ಲಾಯೆಟ್ ನಂತಹ ಹಲವಾರು ಯುರೋಪಿಯನ್ ಲೇಖಕರು ಷಹಜಹಾನ್ ಮತ್ತು ಅವನ ಹಿರಿಯ ಮಗಳಾದ ಜಹಾನಾರಾ ಬೇಗಂ ಪ್ರೇಮಿಗಳೆಂದು ವದಂತಿಗಳನ್ನು ಹರಡಿದ್ದರು. ‘ಪೌರ್ವಾತ್ಯ ಸರ್ವಾಧಿಕಾರಿ ದೊರೆ ಕುಶಲಕರ್ಮಿಗಳ ಕೈಗಳನ್ನು ಕಡಿಯುತ್ತಾನೆ’ ಎಂಬುದು ಲೇಖಕರಿಗೆ ಭಾರೀ ಆಕರ್ಷಣೀಯ ಒಂದು ಮುಖ್ಯ ಸುದ್ದಿಯಾಗುತ್ತಿತ್ತು.
ತಾಜ್‌ಮಹಲ್ ಒಂದು ಶಿವದೇವಾಲಯ ಎನ್ನುವ ಸುಳ್ಳುಕತೆ ಹುಟ್ಟುವ ಬಹಳ ಮೊದಲೇ, ಆದರೆ ತಾಜ್‌ಮಹಲ್ ಪೂರ್ಣಗೊಂಡು ಎಷ್ಟೋ ದಶಕಗಳ ನಂತರ ಕುಶಲಕರ್ಮಿಗಳ ಕೈ ಕಡಿಯುವ ಕತೆ ಹುಟ್ಟಿಕೊಂಡಿರುವುದು ಸ್ಪಷ್ಟ.
ಸುಳ್ಳುಗಳಿಂದ ಸತ್ಯವನ್ನು ಪ್ರತ್ಯೇಕಿಸುವುದು
ಷಹಜಹಾನ್ ತನ್ನ ಎಳವೆಯಿಂದಲೇ ಕಟ್ಟಡಗಳನ್ನು ಕಟ್ಟಿಸುವುದರಲ್ಲಿ ಆಸಕ್ತನಾಗಿದ್ದ. ಜಹಾಂಗೀರ್ ತನ್ನ ನೆನಪುಗಳಲ್ಲಿ ಖುರ್ರಂ ಕೇವಲ 15 ವರ್ಷದವನಾಗಿದ್ದಾಗ ಕಾಬೂಲ್‌ನಲ್ಲಿ ತನ್ನ ಮಗನನ್ನು ಭೇಟಿಯಾಗಿ (ಜುಲೈ 30,1607) ಅಲ್ಲಿ ಆತ ಕಟ್ಟಿಸಿದ ಅದ್ಭುತವಾದ ಮನೆಗೆ ಹೋಗಿರುವುದನ್ನು ಜ್ಞಾಪಿಸಿಕೊಂಡಿದ್ದಾನೆ. ಒಂದು ವೇಳೆ ಷಹಜಹಾನ್ ತಾಜ್‌ಮಹಲನ್ನು ಕಟ್ಟಿಸದೆ ಇರುತ್ತಿದ್ದರೂ ವಿಶ್ವದ ಪ್ರಸಿದ್ಧ ಹಾಗೂ ಮುಖ್ಯ ಕಟ್ಟಡ ನಿರ್ಮಾಣಕಾರರಲ್ಲಿ ಒಬ್ಬನಾಗಿ ಅವನ ಹೆಸರು ದಾಖಲಾಗುತ್ತಿತ್ತು. ಯಮುನಾ ನದಿ ತೀರದಲ್ಲಿ ತಾಜ್‌ಮಹಲ್ ನಿರ್ಮಾಣಗೊಳ್ಳುತ್ತಿದ್ದ ಅವಧಿಯಲ್ಲಿ ಮತ್ತು ನಂತರದ ವರ್ಷಗಳಲ್ಲಿ ಆತ ಆಗ್ರಾ, ದಿಲ್ಲಿ, ಲಾಹೋರ್ ಮತ್ತು ಅಜ್ಮೀರ್‌ನಂತಹ ಪ್ರಾಂತ ರಾಜಧಾನಿಗಳಲ್ಲಿ ಹತ್ತಾರು ಕಟ್ಟಡಗಳನ್ನು ನಿರ್ಮಿಸಿದ್ದ. ಒಂದು ಕಟ್ಟಡ ಪೂರ್ಣವಾದ ಬಳಿಕ ಅದೇ ಕಟ್ಟಡವನ್ನು ನಿರ್ಮಿಸಿದ ಕುಶಲಕರ್ಮಿಗಳನ್ನು ಇನ್ನೊಂದು ಕಡೆಗೆ ಕಳುಹಿಸುತ್ತಿದ್ದ. ಹಾಗಿರುವಾಗ ನುರಿತ ಕುಶಲಕರ್ಮಿಗಳ ಕೈಗಳನ್ನು ಆತ ಕಡಿಸುತ್ತಿದ್ದನೆಂಬ ವಾದದಲ್ಲಿ ಹುರುಳಿಲ್ಲ. ಅಲ್ಲದೆ ಮೊಗಲರ ಆಡಳಿತದಲ್ಲಿ ಉತ್ತಮ ವೇತನವೂ ದೊರಕುತ್ತಿತ್ತು. ಅವರು ಗುಲಾಮ ಕೆಲಸಗಾರರಾಗಿರಲಿಲ್ಲ. ಬದಲಾಗಿ ಪ್ರತಿಭಾವಂತ ವೃತ್ತಿಪರರಾಗಿದ್ದರು. ತಮ್ಮ ಶ್ರಮಕ್ಕೆ ಉತ್ತಮ ಪ್ರತಿಫಲವನ್ನೂ ಪಡೆಯುತ್ತಿದ್ದರು. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ರವರು,‘‘ತಾಜ್‌ಮಹಲ್ ಭಾರತೀಯ. ಯಾಕೆಂದರೆ ಅದು ಭಾರತೀಯ ಕಾರ್ಮಿಕರ ನೆತ್ತರು ಮತ್ತು ಬೆವರಿನಿಂದ ಕಟ್ಟಲ್ಪಟ್ಟದ್ದು’’ ಎಂದು ವಿವಾದದಿಂದ ಬದಿಗೆ ಸರಿಯಲು ಯತ್ನಿಸಿದ್ದಾರೆ. ಬೆವರಿನಿಂದ ಕಟ್ಟಿದ್ದು ಹೌದು, ಆದರೆ ರಕ್ತದಿಂದ ಅಲ್ಲ. (ಕೈ ಕಡಿದ ರಕ್ತದಿಂದ ಅಲ್ಲ) ಸೋಮ್ ಶರ್ಮಾ ಬಣದ ಅಂತಿಮ ತಪ್ಪು ಅಭಿಪ್ರಾಯವೆಂದರೆ ಷಹಜಹಾನ್ ಒಬ್ಬ ವಿದೇಶೀಯ ಎಂಬುದು. ಆದರೆ ತನ್ನ ಇಡೀ ಬದುಕನ್ನು ಭಾರತೀಯ ಉಪಖಂಡದೊಳಗೆಯೇ ಕಳೆದ ಹಾಗೂ ಮೂವರು ರಜಪೂತ ತಾತ ಮುತ್ತಾತಂದಿರನ್ನು ಹೊಂದಿದ್ದ ಒಬ್ಬ ವ್ಯಕ್ತಿಯನ್ನು ವಿದೇಶಿಯನೆಂದು ಹೇಳುವುದು ಎಷ್ಟು ಸರಿ?
ತಾಜ್‌ಮಹಲ್‌ನ ಇತಿಹಾಸದ ಬಗ್ಗೆ ಇರುವ ಇತಿಹಾಸದ ಎರಡು ವಿವರಗಳಿವು:
1. ಅದನ್ನು ನಿರ್ಮಿಸಿದಾತ ತನ್ನ ತಂದೆಯನ್ನು ಜೈಲಿಗಟ್ಟಿ ತನ್ನ ಮಗಳೊಂದಿಗೆ ಮಲಗುತ್ತಿದ್ದ. ತನ್ನ ಮೋಜಿನಿಂದಾಗಿ ಅರ್ಥ ವ್ಯವಸ್ಥೆಯನ್ನು ದಿವಾಳಿ ಮಾಡಿದ ಮತ್ತು ಕುಶಲಕರ್ಮಿಗಳ ಕೈಕಡಿಯುತ್ತಿದ್ದ ಒಬ್ಬ ವಿದೇಶೀಯ.
2. ಅತ್ಯುತ್ತಮ ಆಭಿರುಚಿ ಇದ್ದ, ತನ್ನ ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದ, ಕಾರ್ಮಿಕರ ಕೌಶಲ್ಯವನ್ನು ಮೆಚ್ಚುತ್ತಿದ್ದ ಮತ್ತು ಕಾರ್ಮಿಕರಿಗೆ ಉತ್ತಮ ವೇತನ ನೀಡುತ್ತಿದ್ದ ಒಬ್ಬ ವ್ಯಕ್ತಿ ಅದನ್ನು ಕಟ್ಟಿಸಿದ. ಸತ್ಯ ಇವೆರಡರ ಮಧ್ಯೆ ಎಲ್ಲೋ ಮಲಗಿಲ್ಲ.
ಕೃಪೆ: scroll.in