varthabharthi


ಮುಂಬೈ ಮಾತು

ಸಂಘಟಕ, ಚಿಂತಕ ರವಿ ರಾ. ಅಂಚನ್ ನೆನಪುಗಳು

ವಾರ್ತಾ ಭಾರತಿ : 7 Nov, 2017
ಶ್ರೀನಿವಾಸ್ ಜೋಕಟ್ಟೆ

ಮುಂಬೈ ಬದುಕಿನ ವೈವಿಧ್ಯಮಯ ಕ್ಷೇತ್ರವನ್ನೆಲ್ಲಾ ಕನ್ನಡಿಗರು ಆವರಿಸಿಕೊಂಡಿದ್ದಾರೆ. ಕನ್ನಡಿಗರ ಸ್ವಾಭಿಮಾನಕ್ಕೆ, ಸಾಧನೆಗಳಿಗೆ ಸಾಕಷ್ಟು ಸಾಕ್ಷಿಗಳಿರುವಂತೆ ಕನ್ನಡಿಗರು ಹೆಂಡ, ಹೆಣ್ಣಿನ ಮಾರಾಟಗಾರರಾಗಿ ‘ಭಯೋತ್ಪಾದಕ’ ಗುರುಗಳಾಗುತ್ತಿರುವುದಕ್ಕೂ ಬೇಕಾದಷ್ಟು ಪುರಾವೆಗಳಿವೆ. ಹಿಂದಿನಿಂದಲೂ ಶ್ರಮ ಸಂಸ್ಕೃತಿ ಮತ್ತು ಸುಖ ಸಂಸ್ಕೃತಿಯ ವಲಯಗಳಲ್ಲಿ ಕನ್ನಡಿಗರಿದ್ದಾರೆ. ಸುಖಸಂಸ್ಕೃತಿಯ ಗುತ್ತಿಗೆದಾರ ಸಾಹಿತಿ ಕಲಾವಿದರಿಗೆ ದೊರೆಯುವಷ್ಟು ಪ್ರಸಿದ್ಧಿ ಶ್ರಮಸಂಸ್ಕೃತಿಯ ಸಾಹಿತಿ ಕಲಾವಿದರಿಗೆ ದೊರೆಯುವುದಾದರೂ ಹೇಗೆ? ಯಾಕೆ? ಈ ಪ್ರಶ್ನೆ ನಮ್ಮ ದೇಶಕ್ಕೆ ಪುರಾತನದ್ದೂ ಹೌದು. ವಿಧಾನಸೌಧದ ಕಟ್ಟಡದೊಳಕ್ಕೆ ಶ್ರಮ ಸಂಸ್ಕೃತಿಯ ಧ್ವನಿ ಬಂದಂತಾದರೂ ಅದು ಬಾಡಿಗೆಯ ಧ್ವನಿಯಾಗಿ ಶಕ್ತಿ ಹೀನವಾಗುತ್ತಿದೆ. ಕನ್ನಡದ ಮನೆ ಮತ್ತು ಸಂಘಟನೆಯಲ್ಲಿ ಸ್ವಾಭಿಮಾನ ಬಲಗೊಂಡಾಗ ಕರ್ನಾಟಕ ಸಂಸ್ಕೃತಿ ತನ್ನ ವೈವಿಧ್ಯತೆಯಿಂದ ಪರಿಶೋಭಿಸುತ್ತದೆ. ಒಟ್ಟಿನಲ್ಲಿ ಸ್ವಾಭಿಮಾನದ ಕೇಂದ್ರಗಳಾಗಬೇಕಿದ್ದ ಕನ್ನಡಿಗರ ಸಂಘಟನೆಗಳು ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿರುವ ದೃಶ್ಯಗಳನ್ನು ಗಮನಿಸುವಾಗ ಅವು ಭಯೋತ್ಪಾದಕರ, ಅಂತೆಯೇ ಗುಲಾಮರ ಅಡಗುದಾಣ ಆಗದಿರಲಿ ಎನ್ನಬೇಕಾಗಿದೆ....

ಮುಂಬೈಯ ಕನ್ನಡ ಕ್ಷೇತ್ರದಲ್ಲಿ ಬಹುಮುಖ ಪ್ರತಿಭೆಯ ಚಿಂತಕ, ವಿಚಾರವಾದಿ, ಕನ್ನಡ ಪ್ರೇಮಿ, ಸಂಘಟಕ..... ಇತ್ಯಾದಿ ಇತ್ಯಾದಿ ಪ್ರಶಂಸೆಗೆ ಒಳಪಟ್ಟಿದ್ದ ರವಿ ರಾ. ಅಂಚನ್ ಅವರನ್ನು ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷ ಸ್ಥಾನದ 3 ವರ್ಷದ ಅವಧಿ ಮುಗಿದ ಸಂದರ್ಭದಲ್ಲಿ, ಇಂದಿಗೆ ಹದಿಮೂರು ವರ್ಷಗಳ ಹಿಂದೆ (2004ರಲ್ಲಿ) ವಿಜಯ ಕರ್ನಾಟಕ ಪತ್ರಿಕೆಗೆ ಸಂದರ್ಶನಕ್ಕಾಗಿ ಮಾತನಾಡಿಸಿದಾಗ ಅವರು ಮುಂಬೈ ಕನ್ನಡ ಕ್ಷೇತ್ರವನ್ನು ಕುರಿತು ಮೇಲಿನ ಮಾತುಗಳನ್ನು ಹೇಳಿದ್ದು ಈಗಲೂ ನನ್ನಲ್ಲಿ ಕೇಳಿಸುತ್ತಲೇ ಇದೆ.

ಮುಂಬೈಯ ಪ್ರಮುಖ ಎರಡು ಕನ್ನಡ ಸಂಘಗಳಾಗಿರುವ ‘ಕರ್ನಾಟಕ ಸಂಘ ಮುಂಬೈ’ ಮತ್ತು ‘ಗೋರೆಗಾಂವ್ ಕರ್ನಾಟಕ ಸಂಘ’ಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ರವಿ ರಾ. ಅಂಚನ್ ಅವರು 2017ರ ಅಕ್ಟೋಬರ್ 28ರಂದು ಅನಿರೀಕ್ಷಿತ ಹೃದಯಾಘಾತಕ್ಕೊಳಗಾಗಿ ನಮ್ಮಿಂದ ದೂರವಾದರು. ಕೆಲವರ್ಷಗಳ ಹಿಂದಷ್ಟೇ ಅವರ ಪತ್ನಿ ಶೈಲಜಾ ಕೂಡಾ ಅನಿರೀಕ್ಷಿತ ನಿಧನ ಹೊಂದಿದ್ದರು. ಆನಂತರದ ದಿನಗಳಲ್ಲಿ ರವಿ ರಾ. ಅಂಚನ್‌ರು ಬರಹ ಓದು ಇದರಲ್ಲೇ ತಮ್ಮ ಹೆಚ್ಚಿನ ಸಮಯವನ್ನು ಕಳೆಯತೊಡಗಿದ್ದರು. ಬರೆಯುತ್ತಲೇ ಹೋದರು. ಬಹುಶ: ತನ್ನ ಜೀವಿತಾವಧಿ ಕಡಿಮೆ ಇರಬಹುದೆಂದು ಅವರಿಗೆ ತಿಳಿದಿತ್ತೋ ಏನೋ!!

ಗೋರೆಗಾಂವ್ ಕರ್ನಾಟಕ ಸಂಘದಲ್ಲಿ 1998-99 ರಲ್ಲಿ ಆರಂಭಿಸಲಾದ ‘ಗೋರೆಗಾಂವ್ ವಿಚಾರ ಭಾರತಿ ಸಮ್ಮೇಳನ’ ಒಂದೂವರೆ ದಶಕಗಳ ಕಾಲ ಹೊರನಾಡು ಒಳನಾಡುಗಳಲ್ಲಿ ತನ್ನ ವೈಚಾರಿಕ ಚರ್ಚೆಗಳ ಮೂಲಕ ಖ್ಯಾತಿ ಗಳಿಸಿದ ಸಮ್ಮೇಳನ. ಇದರ ರೂವಾರಿ ರವಿ ರಾ. ಅಂಚನ್. ತಮ್ಮ ಅಧ್ಯಕ್ಷತೆಯ ಕಾಲಾವಧಿಯಲ್ಲಿ ಇಂತಹ ಒಂದು ಅಪೂರ್ವ ಸಮ್ಮೇಳನವನ್ನು ಅವರು ರೂಪಿಸಿ ಕಾರ್ಯರೂಪಕ್ಕಿಳಿಸಿದವರು. ಕರ್ನಾಟಕದ ಐವತ್ತಕ್ಕೂ ಹೆಚ್ಚು ಪ್ರಮುಖ ಸಾಹಿತಿಗಳು ಒಂದೂವರೆ ದಶಕಗಳ ಕಾಲ ನಡೆದ ಮುಂಬೈಯ ಈ ವಿಚಾರ ಭಾರತಿ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಆನಂತರ 2004ರಲ್ಲಿ ಏಳು ವಿಚಾರ ಭಾರತಿ ಸಮ್ಮೇಳನಗಳ ಅಧ್ಯಕ್ಷ ಭಾಷಣವನ್ನು ಒಳಗೊಂಡ ‘ವಿಚಾರ ಭಾರತಿ’ ಕೃತಿಯನ್ನೂ (ಸಂಪಾದಕ : ಶ್ರೀನಿವಾಸ ಜೋಕಟ್ಟೆ) ಗೋರೆಗಾಂವ್ ಕರ್ನಾಟಕ ಸಂಘವು ಪ್ರಕಟಿಸಿತು. ಎಷ್ಟೋ ಬಾರಿ ನಾನೂ, ಸಂಘದ ಮಾಜಿ ಅಧ್ಯಕ್ಷ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಇಬ್ಬರೂ ಜೊತೆಗೂಡಿ ರವಿ ರಾ. ಅಂಚನ್‌ರ ರಿಲಯನ್ಸ್ ಆಫೀಸ್‌ಗೆ ತೆರಳಿ ಈ ಬಾರಿ ಸಮ್ಮೇಳನಕ್ಕೆ ಯಾವ ವಿಷಯವನ್ನು ಆಯ್ಕೆ ಮಾಡೋಣ, ಯಾರನ್ನು ಅಧ್ಯಕ್ಷರನ್ನಾಗಿ ಮಾಡಬಹುದು? ಯಾರೆಲ್ಲಾ ಉಪನ್ಯಾಸಕರನ್ನು ಕರೆಯೋಣ....? ಇತ್ಯಾದಿ ಚರ್ಚಿಸಲು ತೆರಳುತ್ತಿದ್ದುದು ಈಗಲೂ ಹಸಿ ಹಸಿ ನೆನಪು. ವಿಚಾರ ಭಾರತಿ ಸಮ್ಮೇಳನದ ಬಗ್ಗೆ ರವಿ ರಾ. ಅಂಚನ್‌ರ ಮಾತುಗಳನ್ನು ಹೇಳುವುದಾದರೆ, ‘‘ನಮ್ಮ ನಡುವಿನ ಬಹುರೂಪಿ ಸಂಸ್ಕೃತಿಗಳ ಮಡಿಲಿನಿಂದ ಮಾನವೀಯ ನೆಲೆಗಳನ್ನು ಗುರುತಿಸುತ್ತಾ ಅಮಾನವೀಯ ನೆಲೆಗಳನ್ನು ಬದಿಗೆ ಸರಿಸುತ್ತಾ ಸಾಮಾಜಿಕ ಮತ್ತು ರಾಜಕೀಯ ಎಚ್ಚರವನ್ನು ಪಡೆಯುವ ಆಶಯವೇ ಗೋರೆಗಾಂವ್ ವಿಚಾರ ಭಾರತಿ ಸಮ್ಮೇಳನದ ಮೌಲಿಕ ಆಶಯವಾಗಿದೆ.’’ (ವಿಚಾರ ಭಾರತಿ ಕೃತಿಯಲ್ಲಿ)

ಅದೇ ರೀತಿ ಕರ್ನಾಟಕ ಸಂಘ ಮುಂಬೈ ಇಲ್ಲಿ ಅಂಚನ್‌ರ ಅಧ್ಯಕ್ಷತೆಯ ಕಾಲಾವಧಿಯಲ್ಲಿ (2001-2004) ಹಮ್ಮಿಕೊಂಡಿದ್ದ ‘ಕನ್ನಡ ಮರಾಠಿ ಕಾವ್ಯೋತ್ಸವ  2001’ ಬಹು ಅಪರೂಪದ ಕಾವ್ಯ ಉತ್ಸವವಾಗಿತ್ತು. ಕನ್ನಡ ಮರಾಠಿ ಕವಿಗಳ ಈ ಕಾವ್ಯೋತ್ಸವ 10 ದಿನಗಳ ಕಾಲ ಸಂಘದ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಜರುಗಿತ್ತು. ಆಶ್ಚರ್ಯವೆಂದರೆ ಪ್ರತೀದಿನವೂ ಸಭಾಗೃಹ ಶ್ರೋತೃಗಳಿಂದ ತುಂಬಿ ತುಳುಕಿತ್ತು. ಕನ್ನಡದಲ್ಲಿ ಒಟ್ಟು 10 ಕವಿಗಳು ಹಾಗೂ ಮರಾಠಿಯಲ್ಲಿ 33 ಕವಿಗಳು ದಿನಕ್ಕೆ 4 ಜನರಂತೆ 10 ದಿನಗಳ ಕಾಲ ತಮ್ಮ ಕವಿತೆಗಳನ್ನು ಓದಿದ್ದು ಈ ಕಾವ್ಯೋತ್ಸವ ತುಂಬಾ ರಂಜಿಸಿತ್ತು. ಪ್ರತೀದಿನ ಒಬ್ಬ ಕನ್ನಡ ಕವಿ ಮತ್ತು ಮೂವರು ಮರಾಠಿ ಕವಿಗಳು ಕಾವ್ಯವಾಚನ ಮಾಡಿದ್ದರು. ಕನ್ನಡ ಕವಿಗಳು ಮೊದಲು ಕನ್ನಡದಲ್ಲಿ ಕವನ ವಾಚಿಸಿದ ನಂತರ ಅದನ್ನು ಇಂಗ್ಲಿಷ್ - ಹಿಂದಿ ಅಥವಾ ಮರಾಠಿಯಲ್ಲಿ ಅನುವಾದ ಮಾಡಿ ಓದಬೇಕಾಗಿತ್ತು. ಪೇಜಾವರ ಹರಿಯಪ್ಪ, ಸಿದ್ದಲಿಂಗ ಪಟ್ಟಣ ಶೆಟ್ಟಿ, ಡುಂಡಿರಾಜ್, ಜೀವಿ ಮತ್ತು ನಾನು ಕನ್ನಡದಲ್ಲಿ ವಾಚನ ಮಾಡಿದ್ದೆವು. ನಾನಾ ಪಾಟೇಕರ್ ಅಂತಹವರು ನಿರೂಪಣೆ ಮಾಡಿದ್ದರು. ಸಭಾಗೃಹ ಹೌಸ್‌ಫುಲ್ ಆಗಿದ್ದಷ್ಟೇ ಅಲ್ಲ, ಪ್ರತೀ ದಿನವೂ ಒಳಗಡೆ ಸೀಟ್ ಸಿಗದಿದ್ದವರು ಹಾಲ್‌ನ ಎರಡೂ ಬದಿಗಳಲ್ಲಿ ನಿಂತೇ ನೂರಾರು ಶ್ರೋತೃಗಳು ಈ ಕಾವ್ಯವಾಚನವನ್ನು ಕೇಳುತ್ತಿದ್ದರು. ಒಂದು ಕಾವ್ಯವಾಚನಕ್ಕೂ ಇಂತಹ ಹೌಸ್‌ಫುಲ್!!! ಅದೂ ಹತ್ತು ದಿನಗಳೂ ಹೌಸ್‌ಫುಲ್ ಅಗಿತ್ತೆಂದರೆ ಮರಾಠಿಯವರ ಕಾವ್ಯ ಪ್ರೇಮಕ್ಕೆ ಯಾರೂ ಶಹಬ್ಬಾಸ್ ಅನ್ನಬೇಕಾಗಿದೆ. ಬಹುಶ: ಮುಂಬೈಯಲ್ಲಿ ಅನಂತರ ಆ ರೀತಿಯ ಕಾವ್ಯ ಉತ್ಸವ ಕಾಣಲೇ ಇಲ್ಲ. ರವಿ ರಾ. ಅಂಚನ್ ಅವರು ಮುಂಬೈ ದೈನಿಕ ‘ಕರ್ನಾಟಕ ಮಲ್ಲ’ದಲ್ಲಿ ಏಳೆಂಟು ವರ್ಷಗಳಿಂದ ’ಅಂಕಣ’ ಬರಹ ಬರೆಯುತ್ತಿದ್ದರು. ಅವರು ಬರೆದಿದ್ದ ‘ಜ್ಯೋತಿಬಾ ಫುಲೆ’ ಕೂಡಾ ’ಕರ್ನಾಟಕ ಮಲ್ಲ’ದಲ್ಲೇ ಪ್ರಕಟವಾಗಿದ್ದು ಅದನ್ನು ಸ್ವಪ್ನ ಬುಕ್ ಸ್ಟಾಲ್ ಪ್ರಕಟಿಸಿದೆ. ಇತ್ತೀಚಿನ ‘ಟಾಪ್ ಟೆನ್’ ಬುಕ್ ಸೂಚಿಯಲ್ಲಿ ಒಂದು ದೈನಿಕದಲ್ಲಿ ಅದನ್ನು ಉಲ್ಲೇಖಿಸಿರುವುದು ಕಂಡು ಖುಷಿಯಾಯಿತು.

ಇತ್ತೀಚಿನ ದಿನಗಳಲ್ಲಿ ಅವರು ಇಮೇಲ್‌ನಲ್ಲಿ ಅಂಕಣ ಕಳುಹಿಸುತ್ತಿದ್ದರೂ ಅದಕ್ಕಿಂತ ಮುಂಚೆ ಒಂದೋ ಅವರು ಬರೆದು ‘ಕರ್ನಾಟಕ ಮಲ್ಲ’ ಪತ್ರಿಕಾ ಕಚೇರಿಗೆ ಹಸ್ತಪ್ರತಿ ಮುಟ್ಟಿಸುತ್ತಿದ್ದರು. ಅಥವಾ ಹಸ್ತಪ್ರತಿಯನ್ನು ನೀಡಲು ನನ್ನನ್ನು ಅಂಧೇರಿಗೆ ಬರಲು ಹೇಳುತ್ತಿದ್ದರು. ಇಬ್ಬರೂ ಒಂದಿಷ್ಟು ಹರಟೆ ಹೊಡೆಯಬಹುದೆಂದು ನಾನು ಖುಷಿಯಿಂದ ಅವರನ್ನು ಭೇಟಿಯಾಗುತ್ತಿದ್ದೆ. ಒಂದರ್ಧ ಗಂಟೆ ನಾವು ಹೊಟೇಲ್‌ನಲ್ಲಿ ಕುಳಿತು ಚಹಾ  ತಿಂಡಿ, ಹರಟೆಯ ಜೊತೆ ಸಾಹಿತ್ಯಚರ್ಚೆ ಮಾಡುತ್ತಿದ್ದೆವು. ಅವರು ಆ ವಾರದ ಅಂಕಣದ ಕುರಿತು ತಾನೇನು ಬರೆದಿದ್ದೆ ಎಂದು ಹಸ್ತಪ್ರತಿ ನೀಡುವಾಗ ಹೇಳುತ್ತಿದ್ದರು.

ರವಿ ರಾ. ಅಂಚನ್‌ರ ಇನ್ನೊಂದು ದೊಡ್ಡ ಸಾಹಸದ ಕಾರ್ಯಕ್ರಮ ಅಂದರೆ ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಸೆಪ್ಟಂಬರ್ 12, 1998 ರಲ್ಲಿ ಹಮ್ಮಿಕೊಂಡಿದ್ದ ‘ಪತ್ರಿಕಾ ಶಿಬಿರ’. ಆ ’ಪತ್ರಿಕಾ ಶಿಬಿರ’ದಲ್ಲಿ ಆಗಿನ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಶ್ರೀಧರ ಆಚಾರ್, ಖ್ಯಾತ ಪತ್ರಕರ್ತ ಅರ್ಜುನ್ ದೇವ್, ‘ಮಹಾನಗರ್’ ಪತ್ರಿಕೆಯ ನಿಖಿಲ್ ವಾಗ್ಲೆ ಮುಂತಾದವರು ಬಂದಿದ್ದರು. ಇಲ್ಲಿ ರವಿ ಅಂಚನ್ ಪಾತ್ರ ಪ್ರಮುಖವಿತ್ತು. ನಿಖಿಲ್ ವಾಗ್ಲೆಯವರನ್ನು ಸಂದರ್ಶನ ಮಾಡುವ ಅವಕಾಶವೂ ನನಗೆ ದೊರೆತದ್ದು ಅಲ್ಲಿಯೇ. (ಇದೀಗ ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಇದೇ ನವೆಂಬರ್ 11 ರಂದು ವರದಿ ಹೇಗೆ ಬರೆಯುವುದೆಂಬ ವಿಷಯದ ಬಗ್ಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ).

‘ಕನ್ನಡ ಮರಾಠಿ ಕಾವ್ಯೋತ್ಸವ  2001’ರ ನಂತರ ನಾನು ರವಿ ರಾ. ಅಂಚನ್‌ರನ್ನು ‘ಕರ್ನಾಟಕ ಸಂಘ’ದ ಮುಖಪುಟ ‘ಸ್ನೇಹ ಸಂಬಂಧ’ಕ್ಕಾಗಿ ಸಂದರ್ಶನ ಮಾಡಿದ್ದ ಸಮಯ ಅವರು ಉತ್ತರಿಸಿದ ಮಾತುಗಳು ಹೀಗಿತ್ತು.  ಕವಿಗೋಷ್ಠಿಯಲ್ಲಿ ಪಾಂಡಿತ್ಯ ಪ್ರದರ್ಶನಕ್ಕಿಂತಲೂ ಅಲ್ಲಿ ಕಾವ್ಯದ ಸಂವಹನವೇ ಕಾವ್ಯ ರಸಿಕರಿಗೆ ಆಗಬೇಕಾದುದು. ಕಾವ್ಯ ಸಶಕ್ತವಿದ್ದಾಗ ಮತ್ತು ಅದರ ವಾಚನವೂ ಅಷ್ಟೇ ಚೆನ್ನಾಗಿದ್ದಾಗ ಖಂಡಿತಾ ರಸಿಕರನ್ನು ಕವಿಗಳು ಮುಟ್ಟುತ್ತಾರೆ. ಮರಾಠಿಗರ ಸಂಘಟನಾ ಶಕ್ತಿಯನ್ನೂ ಮೆಚ್ಚಲೇಬೇಕು. ಸಾಮಾನ್ಯವಾಗಿ ಕವಿಗೋಷ್ಠಿಯಲ್ಲಿ ‘ಪ್ರೇಕ್ಷಕ’ರಾಗಿ ಬರುವ ಬದಲು ಯಾವನೋ ಕವಿಯ ಅಭಿಮಾನಿಯಾಗಿ ಅಷ್ಟೇ ನಮ್ಮವರು ಬರುತ್ತಾರೆ. ಆದರೆ ಮರಾಠಿಗರಲ್ಲಿ ಹೆಚ್ಚಿನ ಪ್ರಮುಖ ಕವಿಗಳೆಲ್ಲ ಪ್ರತಿದಿನವೂ ಹಾಜರಿರುತ್ತಿದ್ದುದನ್ನು ವಿಶೇಷವಾಗಿ ಗಮನಿಸಬೇಕು ಎಂದಿದ್ದರು. ಮರಾಠಿಗರು ಕಾವ್ಯದ ಮೇಲಿನ ಪ್ರೀತಿಯಿಂದಲೇ ಬರುತ್ತಿದ್ದರು. ಅಂತಹ ಕಾವ್ಯ ಪ್ರೀತಿ ಕನ್ನಡಿಗರಲ್ಲಿ ಕಂಡು ಬರುತ್ತಿಲ್ಲ ಎಂದಿದ್ದರು.

ರವಿ ರಾ. ಅಂಚನ್ ಅವರ ಸಂಬಂಧಿ, ಲೇಖಕಿ, ಸಂಶೋಧಕಿ ಸಾವಿತ್ರಿ ಅವರು ಸಂಶೋಧನಾ ಪ್ರಬಂಧ ಸಿದ್ಧಪಡಿಸುತ್ತಿದ್ದ ಆ ದಿನಗಳಲ್ಲಿ (ಆಗ ನಾನು ಮಂಗಳೂರಿನಲ್ಲಿದ್ದೆ) ರವಿ ರಾ. ಅಂಚನ್ ಊರಿಗೆ ಬರುತ್ತಿದ್ದಾಗ ನನ್ನನ್ನೂ ಕೆಲವೆಡೆ ಕರೆದೊಯ್ಯುತ್ತಿದ್ದರು. ಯು.ಪಿ. ಉಪಾಧ್ಯಾಯ, ಸುಶೀಲಾ ಉಪಾಧ್ಯಾಯ ಅವರನ್ನೆಲ್ಲಾ ಭೇಟಿಯಾಗುವ ಅವಕಾಶಗಳು ನನಗೆ ಸಿಕ್ಕಿದ್ದೂ ಆಗಲೇ. ಬೆಂಗಳೂರಿನಲ್ಲಿ ನಮ್ಮ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪಅವರ ಪುತ್ರನ ವಿವಾಹ ಸಂದರ್ಭದಲ್ಲಿ ನನ್ನನ್ನೂ ಬಲವಂತವಾಗಿ ಬೆಂಗಳೂರಿಗೆ ಕರೆಸಿದವರು ರವಿ ರಾ. ಅಂಚನ್. ಹೀಗೆ ನಾನು ಐದು ವರ್ಷಗಳ ಕಾಲ ಮಂಗಳೂರಲ್ಲಿದ್ದಾಗಲೆಲ್ಲ ಕರ್ನಾಟಕಕ್ಕೆ ಬಂದರೆ ರವಿ ರಾ ಅಂಚನ್ ಅವರು ನನ್ನನ್ನೂ ಜೊತೆಗೆ ತಿರುಗಾಡಿಸುತ್ತಿದ್ದರು. 2004ರಲ್ಲಿ ತಮ್ಮ ಅಧ್ಯಕ್ಷ ಅವಧಿಯ ಕೊನೆಯಲ್ಲಿ ರವಿ ಅಂಚನ್ ಅವರು ಕರ್ನಾಟಕ ಸಂಘದ ಅಧ್ಯಕ್ಷ ಸ್ಥಾನದಿಂದ ಮಹಾಸಭೆಯಲ್ಲಿ ಮಾಡಿದ ಭಾಷಣ ಅಪೂರ್ವ. ಅಂತಹ ಭಾಷಣ ಯಾವತ್ತೂ ಕೇಳಿಲ್ಲ ನಾನು ಅನ್ನುತ್ತಿದ್ದರು ನನ್ನ ಗೆಳೆಯ ಜೆ.ಡಿ. ಶ್ರೀಯಾನ್.

ರವಿ ರಾ. ಅಂಚನ್ ತಮ್ಮ ಪತ್ನಿ ಶೈಲಜಾ ಅಂಚನ್‌ರ ಹೆಸರಲ್ಲಿ ‘ಶೈಲಜಾ ಫೌಂಡೇಶನ್’ ಸ್ಥಾಪಿಸಿ ಅದರ ಮೂಲಕವೂ ಕೆಲವು ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮುಂಬೈಗೆ ರವಿ ರಾ. ಅಂಚನ್‌ರಂತಹ ಕನ್ನಡಿಗರೊಬ್ಬರು ಬೇಕಿತ್ತು. ತಮ್ಮ ವಿಚಾರಗಳಿಗಾಗಿ ಅವರು ನಿಷ್ಠುರವಾದಿಯಾಗಿದ್ದರು. ಮೇಲ್ಜಾತಿಗಳ ಬಗ್ಗೆ ತೀವ್ರ ಟೀಕಿಸುವುದನ್ನೂ ಇತ್ತೀಚೆಗೆ ಹವ್ಯಾಸವನ್ನಾಗಿಸಿಕೊಂಡಿದ್ದಾರೋ ಏನೋ ಎಂಬಷ್ಟರ ಮಟ್ಟಿಗೆ ಅವರ ಮೇಲಿನ ಸಿಟ್ಟನ್ನು ಬರಹಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ತಮ್ಮ ಬರಹಗಳಲ್ಲಿ ಇನ್ನಿತರ ಬಂಡಾಯ ಸಾಹಿತಿಗಳ ‘ಕೋಟ್’ ಬಹಳಷ್ಟು ಕಾಣಿಸುತ್ತಿದ್ದರು. ಮಹಾರಾಷ್ಟ್ರದ ಇತಿಹಾಸದ ಬಗ್ಗೆ ಅವರಿಗೆ ತುಂಬಾ ಆಸಕ್ತಿ ಇತ್ತು. ಹಾಗಾಗಿಯೇ ಜ್ಯೋತಿಬಾಫುಲೆ ಅಂತಹವರ ಬಗ್ಗೆ ನಿಖರವಾಗಿ ಬರೆಯಲು ಸಾಧ್ಯವಾಗಿತ್ತು. ಯಕ್ಷಗಾನ ಪ್ರೇಮಿ, ಉತ್ತಮ ಸಂಘಟಕ, ಚಿಂತಕ, ಲೇಖಕ ರವಿ ರಾ. ಅಂಚನ್‌ರಿಗೆ ಈ ಅಂಕಣದ ಮೂಲಕ ಭಾವಪೂರ್ಣ ಶ್ರದ್ಧ್ದಾಂಜಲಿ.

ಕರ್ನಾಟಕ ಸಂಘ ಮುಂಬೈ ಅಧ್ಯಕ್ಷರಾಗಿದ್ದಾಗ ಸಂಘದಲ್ಲಿ ಈ ತನಕ ಕೆಲಸ ಮಾಡಿದ ಹಿರಿಯರ ಕುರಿತಂತೆ ‘ನಮ್ಮವರು’ ಎನ್ನುವ ಕೃತಿಯನ್ನು ತರುವ ಆಸೆಯೂ ಅವರಲ್ಲಿತ್ತು. ಲೇಖಕ, ಕಲಾವಿದರು, ಕನ್ನಡ ಶಿಕ್ಷಕರು....... ಇವರ ಕೈಪಿಡಿಯನ್ನೂ ತರಬೇಕು ಅಂದಿದ್ದರು. ಆ ಆಸೆ ನೆರವೇರಲಿಲ್ಲ.

ಕರ್ನಾಟಕ ಮಲ್ಲಕ್ಕೆ ಅ.28 ರಂದು ಬೆಳಗ್ಗೆ ಅವರು ತಮ್ಮ ಅಂಕಣ ‘ಮಾ ‘ನವ’ ದಾರಿ’ ಇಮೇಲ್ ಮಾಡಿದ್ದೇ ಅವರ ಕೊನೆಯ ಲೇಖನವಾಯಿತು. ಮಧ್ಯಾಹ್ನ ಇಹಲೋಕ ತ್ಯಜಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)