ಭಾರತದ ತೈಲ ಪರಿಸ್ಥಿತಿ ಹೇಗಿದೆ?
ತೈಲ ಬಳಕೆಗೆ ಒಂದು ಪರ್ಯಾಯವನ್ನು ಹುಡುಕದಿದ್ದರೆ ಭಾರತದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಭಾರತದಲ್ಲಿ ತೈಲದ ಬೇಡಿಕೆ ಮತ್ತು ಆಮದುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಪೆಟ್ರೋ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತಹ ಯೋಜನೆಗಳನ್ನು ರೂಪಿಸಬೇಕಿದೆ. ಅದು ಮಾತ್ರ ಪರಿಸರ ಮತ್ತು ಆರ್ಥಿಕತೆಗೂ ಸಹ್ಯವಾದ ಪರಿಹಾರವಾಗಿರುತ್ತದೆ. ಏಕೆಂದರೆ ಇಂದು ನಾವು ಮಾಡುವ ಆರ್ಥಿಕ ಆಯ್ಕೆಗಳು ಮುಂದಿನ ಪೀಳಿಗೆಯ ಜೀವನದ ಗುಣಮಟ್ಟವನ್ನು ಮಾತ್ರವಲ್ಲದೆ ನಮ್ಮದೇ ಜೀವನದ ಗುಣಮಟ್ಟವನ್ನೂ ನಿರ್ಧರಿಸುತ್ತದೆ.
ಜಗತ್ತಿನಲ್ಲಿ ಭಾರತವು ಮೂರನೆ ಅತಿದೊಡ್ಡ ತೈಲ ಬಳಕೆದಾರ ರಾಷ್ಟವಾಗಿದೆ. ಆದರೆ ಹಳೆಯ ಕೈಗಾರೀಕರಣಗೊಂಡ ರಾಷ್ಟ್ರಗಳಲ್ಲಿ ತೈಲ ಬೇಡಿಕೆ ಕುಗ್ಗುತ್ತಿರುವ ಸಮಯದಲ್ಲಿ ಭಾರತದ ತೈಲ ಬೇಡಿಕೆ ಮಾತ್ರ ಹೆಚ್ಚಾಗುತ್ತಲೇ ಇದೆ. ಜಾಗತಿಕ ತೈಲ ಉದ್ಯಮವು ಮುಂದಿನ ಎರಡು ದಶಕಗಳ ಕಾಲದವರೆಗೆಯಾದರೂ ತಮ್ಮ ರಫ್ತಿಗೆ ಭಾರತವನ್ನು ಒಂದು ಪ್ರಮುಖ ಮಾರುಕಟ್ಟೆಯೆಂದೇ ಪರಿಗಣಿಸಿದೆ. ಈಗಾಗಲೇ ಭಾರತವು ತನಗೆ ಅವಶ್ಯವಿರುವ ತೈಲದ ಶೇ. 80 ಭಾಗವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತದ ಆಂತರಿಕ ತೈಲ ಉತ್ಪಾದನೆಯು ಕುಸಿಯುತ್ತಿರುವುದರಿಂದ ಭವಿಷ್ಯದಲ್ಲಿ ಆಮದಿನ ಮೇಲಿನ ಅವಲಂಬನೆಯು ಮತ್ತು ಆ ಮೂಲಕ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಏರುಪೇರಿನ ಪ್ರಭಾವಗಳಿಗೂ ಭಾರತ ಬಲಿಯಾಗುವ ಅವಕಾಶಗಳು ಹೆಚ್ಚಿವೆ. 2014ರ ಮಧ್ಯಭಾಗದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಕುಸಿತಗೊಂಡಿದ್ದರಿಂದ ಅದರ ಲಾಭವನ್ನು ಭಾರತವು ಪಡೆದುಕೊಂಡಿರುವುದು ನಿಜ. ಆದರೆ ಈಗ ಅದು ಬದಲಾಗುತ್ತಿದೆ ಮತ್ತು ಭಾರತದ ಪರಿಸ್ಥಿತಿಯನ್ನು ಮತ್ತಷ್ಟು ದಿಕ್ಕೆಡಿಸಲಿದೆ.
2013-14ರಲ್ಲಿ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 105 ಡಾಲರ್ ಇದ್ದದ್ದು 2015-16ರಲ್ಲಿ 46 ಡಾಲರ್ಗೆ ಇಳಿಯಿತು. ಆದರೆ ಅದಕ್ಕೆ ಕೆಲವು ತಿಂಗಳ ಮುಂಚೆಯಷ್ಟೇ ಅಧಿಕಾರಕ್ಕೇರಿದ್ದ ನರೇಂದ್ರ ಮೋದಿ ಸರಕಾರ ಬೆಲೆ ಇಳಿಕೆಯ ಲಾಭವನ್ನು ಬಳಕೆದಾರರಿಗೆ ವರ್ಗಾಯಿಸದೆ ತೈಲದ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಹೆಚ್ಚಿನ ತೆರಿಗೆ ಆದಾಯವನ್ನು ಪಡೆದುಕೊಂಡಿತು. ಇದರಿಂದಾಗಿ ಕಚ್ಚಾ ತೈಲದ ಬೆಲೆಯು ಬ್ಯಾರೆಲ್ಗೆ 105 ಡಾಲರ್ ಇದ್ದಾಗ ಬಳಕೆದಾರರು ಎಷ್ಟು ಬೆಲೆಯನ್ನು ತೆರುತ್ತಿದ್ದರೋ ಬ್ಯಾರೆಲ್ಗೆ 45 ಡಾಲರ್ ಆದಾಗಲೂ ಅಷ್ಟೇ ಬೆಲೆಯನ್ನು ತೆರುವುದನ್ನು ಮುಂದುವರಿಸಬೇಕಾಯಿತು. ಆದರೆ ಭಾರತವು ಆಮದು ಮಾಡಿಕೊಳ್ಳುತ್ತಿದ್ದ ಮಿಶ್ರ ತೈಲಗಳ ಬೆಲೆ ಇದೇ ವರ್ಷದ ಜುಲೈ 31ರಂದು ಬ್ಯಾರೆಲ್ಗೆ 51.2 ಡಾಲರ್ಗೆ ಏರಿತ್ತು. ಕಳೆದ ಅಕ್ಟೋಬರ್ 31ಕ್ಕೆ ಅದು ಬ್ಯಾರೆಲ್ಗೆ 59 ಡಾಲರ್ ಆಗಿದೆ. ಹೀಗಾಗಿ ದಿನನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯಿಂದಾಗಿ ರೋಸಿದ ಜನರ ಆಕ್ರೋಶ ಮತ್ತು ವಿರೋಧ ಪಕ್ಷಗಳ ಒತ್ತಡದಿಂದ ಸರಕಾರವು ಅವುಗಳ ಮೇಲೆ ಹಾಕುತ್ತಿದ್ದ ತೆರಿಗೆಗಳನ್ನು ಕಡಿತಗೊಳಿಸಬೇಕಾಯಿತು.
ಹಿಂದೆ ಕಚ್ಚಾ ತೈಲದ ಬೆಲೆ ಇಳಿಯುವುದಕ್ಕೆ ಪ್ರಧಾನ ಕಾರಣ ಜಾಗತಿಕ ತೈಲ ಮಾರುಕಟ್ಟೆಯಲ್ಲಾದ ಬದಲಾವಣೆಗಳು. ಜಾಗತಿಕ ತೈಲ ಮಾರುಕಟ್ಟೆಯನ್ನು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪಿಇಸಿ)ಯು ಅದರಲ್ಲೂ ಜಗತ್ತಿನಲ್ಲೇ ಅತಿ ಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರವಾದ ಸೌದಿ ಅರೇಬಿಯಾವು ವಿಶೇಷವಾಗಿ ಪ್ರಭಾವಿಸುತ್ತದೆ. 2011-14ರ ನಡುವೆ ಕಚ್ಚಾ ತೈಲದ ಬೆಲೆಯು ವಿಪರೀತವಾಗಿ ಹೆಚ್ಚಿದ್ದರಿಂದ ಅಮೆರಿಕವು ತನ್ನ ಶೇಲ್ ತೈಲದ (ಸಾಂಪ್ರದಾಯಿಕವಲ್ಲದ ತೈಲ ಮೂಲ)ಮೇಲೆ ಹೂಡಿಕೆ ಮತ್ತು ಉತ್ಪಾದನೆಯನ್ನು ಹೆಚ್ಚಿಸಿತು. ಶೇಲ್ ಪದ್ಧತಿಯಿಂದ ತೈಲವನ್ನು ಪಡೆಯುವಾಗ ಭೂಮಿಯೊಳಗಿನ ಶಿಲಾಪದರಗಳಲ್ಲಿರುವ ಬಿರುಕುಗಳನ್ನು ಹೆಚ್ಚಿಸಲು ತೀವ್ರ ಒತ್ತಡದ ದ್ರವವನ್ನು ನುಗ್ಗಿಸಲಾಗುತ್ತದೆ. ಅದು ಶಿಲಾಪದರಗಳ ಬಿರುಕನ್ನು ಹಿಗ್ಗಿಸಿ ಅದರೊಳಗಿಂದ ತೈಲ ಅಥವಾ ಅನಿಲಗಳನ್ನು ಹೊರಗೆ ಬರುವಂತೆ ಮಾಡುತ್ತದೆ. ಈ ಹಿಂದೆ ಶೇಲ್ ಮಾದರಿಯಲ್ಲಿ ತೈಲೋತ್ಪಾದನೆಯನ್ನು ಮಾಡುವುದು ಅತೀ ದುಬಾರಿಯೆಂದು ಪರಿಗಣಿಸಲಾಗಿತ್ತಲ್ಲದೆ ಒಂದು ನಿರ್ದಿಷ್ಟ ಬೆಲೆಗೆ ಮಾರದ ಹೊರತು ಈ ಬಗೆಯ ತೈಲೋತ್ಪಾದನೆಯನ್ನು ಮಾಡಲು ಅಸಾಧ್ಯ ಎಂದು ಭಾವಿಸಲಾಗಿತ್ತು. 2014ರ ಮಧ್ಯಭಾಗದಿಂದ ತೈಲ ಬೆಲೆಯು ಕುಸಿಯಲು ಪ್ರಾರಂಭಿಸಿದರೂ ಒಪಿಇಸಿ ದೇಶಗಳು ಉತ್ಪಾದನೆಯನ್ನು ಕಡಿತಗೊಳಿಸಿ ಬೆಲೆ ಕುಸಿತವನ್ನು ತಡೆಗಟ್ಟಲು ಪ್ರಯತ್ನಿಸಲಿಲ್ಲ. ಏಕೆಂದರೆ ಅದು ಅಮೆರಿಕದ ಶೇಲ್ ತೈಲೋತ್ಪಾದನೆಯನ್ನು ಲಾಭರಹಿತ ಮಾಡುವ ಉದ್ದೇಶವನ್ನು ಹೊಂದಿತ್ತು. ಒಪಿಇಸಿ ತೈಲಗಳ ಬೆಲೆ ಕಡಿಮೆ ಇರುವುದು ಪ್ರಾರಂಭದಲ್ಲಿ ಶೇಲ್ ತೈಲೋತ್ಪಾದನೆಗೆ ಕಷ್ಟಗಳೊನ್ನೊಡ್ಡಿದರೂ ಉನ್ನತ ಉತ್ಪಾದನಾ ತಂತ್ರಜ್ಞಾನ ಮತ್ತು ಉತ್ಪಾದಕರ ಸಂಯಮಗಳ ಕಾರಣದಿಂದ ಶೇಲ್ ತೈಲೋತ್ಪಾದನೆ ಹೆಚ್ಚತೊಡಗಿತು.
ಪರಿಣಾಮವಾಗಿ ಕುಸಿಯುತ್ತಿದ್ದ ಕಚ್ಚಾ ತೈಲದ ಬೆಲೆಯು ಒಪಿಇಸಿ ದೇಶಗಳ ಸದಸ್ಯ ರಾಷ್ಟ್ರಗಳ ಆರ್ಥಿಕತೆಯ ಮೇಲೆಯೇ ಪ್ರಭಾವ ಬೀರಲಾರಂಭಿಸಿತು. ಏಕೆಂದರೆ ಅದರ ಹಲವು ಸದಸ್ಯ ರಾಷ್ಟ್ರಗಳ ಆರ್ಥಿಕತೆಯು ಸಂಪೂರ್ಣವಾಗಿ ತೈಲ ರಫ್ತನ್ನೇ ಅವಲಂಬಿಸಿದೆ. ಹೀಗಾಗಿ 2016ರಲ್ಲಿ ಒಪಿಇಸಿ ದೇಶಗಳು ತೈಲೋತ್ಪಾದನೆಯೆ ಮೇಲೆ ಮಿತಿಯನ್ನು ವಿಧಿಸಿಕೊಂಡು ಅಧಿಕ ತೈಲ ಸರಬರಾಜಿನಿಂದ ಜಾಗತಿಕ ತೈ ಮಾರುಕಟ್ಟೆಯಲ್ಲಿ ಆಗಿದ್ದ ತೈಲ ಬೆಲೆ ಕುಸಿತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಾರಂಭಿಸಿದವು. ಆಗಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಒಂದೇ ಸಮನೆ ಏರುತ್ತಿವೆ. ಭಾರತವು ಕಚ್ಚಾತೈಲದ ಮೇಲೆ ಸಾಕಷ್ಟು ಅವಲಂಬಿಸಿರುವುದರಿಂದ ತನಗೆ ಅಗತ್ಯವಿರುವ ತೈಲವನ್ನು ಒಂದೇ ದೇಶದಿಂದಲ್ಲದೆ ವಿವಿಧ ದೇಶಗಳ ಸರಬರಾಜುದಾರರಿಂದ ಪಡೆದುಕೊಳ್ಳುವ ನೀತಿಯನ್ನು ಅನುಸರಿಸುತ್ತದೆ. ಭಾರತವು ತನಗೆ ಅಗತ್ಯವಿರುವ ತೈಲದ ಬಹುಭಾಗವನ್ನು ಒಪಿಇಸಿ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದರೂ ವಾಣಿಜ್ಯ ಇಲಾಖೆಯಲ್ಲಿ ಲಭ್ಯವಿರುವ ಅಂಕಿಅಂಶಗಳು ತೋರಿಸುವಂತೆ 2017ರ ಜನವರಿ- ಜುಲೈ ನಡುವಿನ ಅವಧಿಯಲ್ಲಿ ತೈಲ ರಫ್ತಿನಲ್ಲಿ ಆದ 13,500 ಮಿಲಿಯನ್ ಡಾಲರ್ ಹೆಚ್ಚಳದಲ್ಲಿ 2,491 ಮಿಲಿಯನ್ ಡಾಲರಿನಷ್ಟು ತೈಲವನ್ನು ಒಪಿಇಸಿಯೇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗಿತ್ತು. ಇದರಿಂದ ಅರ್ಥವಾಗುವುದೇನೆಂದರೆ ಒಪಿಇಸಿ ದೇಶಗಳು ತಮ್ಮ ಸದಸ್ಯ ರಾಷ್ಟ್ರಗಳಿಗೆ ಉತ್ಪಾದನಾ ನಿರ್ಬಂಧಗಳನು ಹೇರಿದ ನಂತರದಲ್ಲಿ ಅದರ ಮಾರುಕಟ್ಟೆಯ ಸ್ವಲ್ಪಭಾಗವನ್ನು ಇತರ ದೇಶಗಳು ಕಬಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತವು ಅಮೆರಿಕದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದು ಒಂದು ಪ್ರಮುಖ ಬೆಳವಣಿಗೆಯೆಂದೇ ಪರಿಗಣಿಸಬೇಕು. ಅದಕ್ಕೆ ಕಾರಣ ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣವಲ್ಲ. ಅದಿನ್ನೂ ತುಂಬಾ ಕಡಿಮೆಯೇ ಇದೆ. ಆದರೆ ಅಮೆರಿಕವು ಅತ್ಯಧಿಕವಾಗಿ ಶೇಲ್ ತೈಲ ಉತ್ಪಾದನೆಯನ್ನು ಮಾಡುತ್ತಿರುವುದರಿಂದ ಅದು ಜಗತ್ತಿನಲ್ಲಿ ವೇಗವಾಗಿ ಒಂದು ಪ್ರಮುಖ ತೈಲ ರಫ್ತು ಮಾಡುವ ರಾಷ್ಟ್ರವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಭಾರತವು ತನಗೆ ತೈ ಸರಬರಾಜು ಮಾಡುವ ದೇಶಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ದೊಡ್ಡ ಒಪಿಇಸಿ ಸದಸ್ಯ ರಾಷ್ಟ್ರಗಳೊಡನೆ ಬೆಲೆ ಚೌಕಾಸಿ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತದೆ.
ಬೆಳವಣಿಗೆಗಳು ಅತ್ಯಂತ ಮಹತ್ವದ್ದಾಗಿವೆ. ಏಕೆಂದರೆ ಸಾಮರ್ಥ್ಯಗಳ ಹೆಚ್ಚಳ ಮತ್ತು ಪರ್ಯಾಯ ಇಂಧನ ಮೂಲಗಳು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ಶಾಶ್ವತವಾಗಿ ಕಡಿತಗೊಳಿಸಬಹುದೇ ಎಂಬ ಕಳವಳವನ್ನು ಅವರಲ್ಲಿ ಹುಟ್ಟುಹಾಕಿವೆ. ಅಭಿವೃದ್ಧಿಶೀಲ ದೇಶಗಳಲ್ಲಿ ಅದರಲ್ಲೂ ಸಾರಿಗೆ ಕ್ಷೇತ್ರದಲ್ಲಿ ತೈಲಮೂಲಕ್ಕೆ ಪರ್ಯಾಯದ ಬಳಕೆಗಳ ವೇಗ ನಿರೀಕ್ಷೆಗಿಂತಲೂ ಕಡಿಮೆಯೇ ಇದೆ. ಸಾರಿಗೆ ಕ್ಷೇತ್ರದಲ್ಲಿ ಪರ್ಯಾಯ ಮತ್ತು ಕಡಿಮೆ ತೈಲಾವಲಂಬಿ ಸಾಧನಗಳ ಬಳಕೆಯೆಡೆಗೆ ನಡೆಯುತ್ತಿರುವ ಬದಲಾವಣೆಯು ಅತ್ಯಂತ ಸ್ವಾಗತಾರ್ಹವಾಗಿದೆ. ಆದರೆ ಭಾರತದಲ್ಲಿ ಅದಿನ್ನೂ ಪಾಕ್ಷಿಕವಾಗಿ ಮಾತ್ರ ಜಾರಿಯಾಗುತ್ತಿದೆ. ಮಾಲಿನ್ಯ ಉಂಟುಮಾಡದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಥವಾ ನಿಯಂತ್ರಿತ ವೈಯಕ್ತಿಕ ಸಾರಿಗೆ ಬಳಕೆಯ ಮತ್ತೊಂದು ಜೋಡಿ ಲಾಭವೇನೆಂದರೆ ಅದು ನಮ್ಮ ನಗರಗಳಲ್ಲಿ ಈಗಾಗಲೇ ಭರಿಸಲಾಗದಷ್ಟಾಗಿರುವ ಮಾಲಿನ್ಯದ ತೀವ್ರತೆಯನ್ನು ತಗ್ಗಿಸುತ್ತದೆ. ನಮ್ಮ ನಗರಗಳಲ್ಲಿ ಕೆಲವು ಜಗತ್ತಿನಲ್ಲೇ ಅತೀ ಹೆಚ್ಚು ಕಲುಷಿತಗೊಂಡ ನಗರಗಳಾಗಿವೆ.
ಭಾರತದಲ್ಲಿ ತೈಲದ ಬೇಡಿಕೆ ಮತ್ತು ಆಮದುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಪೆಟ್ರೋ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತ ಯೋಜನೆಗಳನ್ನು ರೂಪಿಸಬೇಕಿದೆ. ಅದು ಮಾತ್ರ ಪರಿಸರಕ್ಕೂ ಮತ್ತು ಆರ್ಥಿಕತೆಗೂ ಸಹ್ಯವಾದ ಪರಿಹಾರವಾಗಿರುತ್ತದೆ. ಏಕೆಂದರೆ ಇಂದು ನಾವು ಮಾಡುವ ಆರ್ಥಿಕ ಆಯ್ಕೆಗಳು ಮುಂದಿನ ಪೀಳಿಗೆಯ ಜೀವನದ ಗುಣಮಟ್ಟವನ್ನು ಮಾತ್ರವಲ್ಲದೆ ನಮ್ಮದೇ ಜೀವನದ ಗುಣಮಟ್ಟವನ್ನೂ ನಿರ್ಧರಿಸುತ್ತದೆ.
ಕೃಪೆ: Economic and Political Weekly