ಎನ್ನ ಕಣ್ಣು ಕಾಲಿಂಗೆ ನೀನೆಯಯ್ಯ
ಕಾಲಿಲ್ಲದವಂಗೆ ಕಾಲ ಕೊಟ್ಟೆ ಬಸವಾ,
ಕಣ್ಣಿಲ್ಲದವಂಗೆ ಕಣ್ಣ ಕೊಟ್ಟೆ ಬಸವಾ,
ಎನ್ನ ಕಣ್ಣು ಕಾಲಿಂಗೆ ನೀನೆಯಯ್ಯ ಬಸವಾ,
ಕಪಿಲಸಿದ್ಧಮಲ್ಲಿನಾಥಯ್ಯ.
- ಸಿದ್ದರಾಮ
ಸೊನ್ನಲಾಪುರದ ಕಾಯಕಯೋಗಿ ಸಿದ್ದರಾಮೇಶ್ವರರು ಅಲ್ಲಮಪ್ರಭುವಿನ ಕೃಪೆಯಿಂದ ಕಲ್ಯಾಣಕ್ಕೆ ಬಂದು ಇಷ್ಟಲಿಂಗದ ಮಹತ್ವವನ್ನು ಅರಿತು ಚೆನ್ನಬಸವಣ್ಣನವರಿಂದ ದೀಕ್ಷೆ ಪಡೆದು ವಚನ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಚಳವಳಿಯ ರೂವಾರಿಯಾದ ಬಸವಣ್ಣನವರು ಸಿದ್ದರಾಮರ ಪಂಚಪ್ರಾಣವಾಗಿದ್ದರು.
ಮಾನವ ಈ ಬದುಕಿನ ಪಯಣವನ್ನು ಹೇಗೆ ಆರಂಭಿಸಬೇಕು ಎಂಬುದನ್ನಷ್ಟೇ ಬಸವಣ್ಣನವರು ತಿಳಿಸಲಿಲ್ಲ. ಹಾಗೆಯೇ ಮುನ್ನಡೆಯುವ ಇಚ್ಛಾಶಕ್ತಿಯನ್ನೂ ಕೊಟ್ಟರು. ಬಸವಣ್ಣನವರಿಂದಾಗಿ ಶರಣರಿಗೆ ಬದುಕನ್ನು ನೋಡುವ ಹೊಸ ದೃಷ್ಟಿ ಮತ್ತು ಹೊಸ ಬದುಕಿನ ಕಡೆಗೆ ಸಾಗುವ ಶಕ್ತಿ ಪ್ರಾಪ್ತವಾಗಿದೆ. ಹೀಗೆ ತಮ್ಮ ಜೀವನಕ್ರಮವೇ ಬದಲಾಯಿತು ಎಂದು ಸಿದ್ದರಾಮೇಶ್ವರರು ಈ ವಚನದಲ್ಲಿ ಸೂಚಿಸಿದ್ದಾರೆ.
‘‘ನಾನು ಕುರುಡನ ಕಣ್ಣು, ಹೆಳವನ ಕಾಲು’’ ಎಂದು ರಷ್ಯಾ ದೇಶದ ಮಾನವತಾವಾದಿ ಕವಿ ರಸೂಲ್ ಗಮ್ಜತೊವ್ ಅವರು ತಮ್ಮ ಕವನವೊಂದರಲ್ಲಿ ತಿಳಿಸಿದ್ದಾರೆ.
ಬಸವಣ್ಣನವರ ಸಮಾಜದಲ್ಲಿ ಕುರುಡರು ತಮ್ಮ ಅಂಧತ್ವವನ್ನು ಮರೆತಿದ್ದರು. ಏಕೆಂದರೆ ಇಡೀ ಶರಣ ಸಂಕುಲವೇ ಕುರುಡರಿಗೆ ಕಣ್ಣಾಗಿತ್ತು. ಹೆಳವರು ತಮಗೆ ಕಾಲಿಲ್ಲದ್ದನ್ನು ಮರೆತಿದ್ದರು. ಏಕೆಂದರೆ ಶರಣರು ಕಾಲಾಗಿ ನಿಂತಿದ್ದರು. ಅಂದರೆ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಶರಣರಿಗೆ ಇರುವ ಸಾಮಾಜಿಕ ಕಾಳಜಿಯಿಂದಾಗಿ ಸಮಾಜದಲ್ಲಿ ಯಾವುದೇ ರೀತಿಯ ಅನಿಶ್ಚಿತತೆ ಇರಲಿಲ್ಲ. ಇದಷ್ಟೇ ಅಲ್ಲ ಬಸವಣ್ಣನವರು ಅನುಭಾವ ಲೋಕಕ್ಕೆ ಹೋಗುವ ಕಾಲನ್ನು ಮತ್ತು ಅನುಭಾವ ಲೋಕವನ್ನು ನೋಡುವ ಕಣ್ಣನ್ನು ಕೊಟ್ಟರು ಎಂದು ಸಿದ್ದರಾಮ ಶಿವಯೋಗಿ ಮನದುಂಬಿ ಹೇಳಿದ್ದಾರೆ. ಅಂತೆಯೇ ‘‘ಗುರುವಿಂಗಾದಡೆಯೂ ಬಸವಣ್ಣನೇ ಬೇಕು; ಲಿಂಗಕ್ಕಾದಡೆಯೂ ಬಸವಣ್ಣನೇ ಬೇಕು; ಜಂಗಮಕ್ಕಾದಡೆಯೂ ಬಸವಣ್ಣನೇ ಬೇಕು’’ ಎಂದು ತಿಳಿಸಿದ್ದಾರೆ.
‘‘ನೋಟದ ಭಕ್ತಿ ಬಸವನಿಂದಾಯಿತು; ಕೂಟದ ಜ್ಞಾನ ಬಸವನಿಂದಾಯಿತು ಕಾಣಾ. ಎಲ್ಲಿಯ ಶಿವಜ್ಞಾನ ಎಲ್ಲಿಯ ಮಾಟಕೂಟ ಬಸವನಲ್ಲದೆ? ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯಿ, ಕಪಿಲಸಿದ್ಧಮಲ್ಲಿನಾಥಯ್ಯಿ.’’ ಎಂದು ಸಿದ್ದರಾಮೇಶ್ವರರು ಹೇಳುವಲ್ಲಿ ಬಸವಣ್ಣನವರ ಮೇರುವ್ಯಕ್ತಿತ್ವದ ದರ್ಶನವಾಗುತ್ತದೆ.
ಇಷ್ಟಲಿಂಗ ಪೂಜಾ ವಿಧಾನವನ್ನು ಬಸವಣ್ಣನಿಂದ ಕಲಿತೆ. ಜೀವಾತ್ಮ ಮತ್ತು ಪರಮಾತ್ಮರ ಸಮ್ಮಿಲನ ಜ್ಞಾನವೂ ಬಸವಣ್ಣನವರಿಂದಲೇ ಆಯಿತು. ಬಸವಣ್ಣನವರಿಲ್ಲದೆ ಈ ಜ್ಞಾನವೆಲ್ಲ ಸಿಗದೆ ಹೋಗುತ್ತಿತ್ತು ಎಂದು ಲಿಂಗಾಂಗಸಾಮರಸ್ಯದ ಮಹತ್ವವನ್ನು ತಿಳಿಸಿದ್ದಾರೆ. ಬಸವಣ್ಣನವರ ಧರ್ಮವೆಂದರೆ ನಮ್ಮ ಒಳಗಿನ ಮತ್ತು ಹೊರಗಿನ ಲೋಕಗಳ ಒಡೆಯನ ಅರಿವು ಹಾಗೂ ಆ ಅರಿವಿನಿಂದ ನಮ್ಮಾಳಗೆ ಉಂಟಾಗುವ ಅನುಭಾವದ ಬೆಳಕಿನ ಕಡೆಗೆ ಒಯ್ಯುವ ಮಾರ್ಗ.
ಸಿದ್ದರಾಮರು ಲೌಕಿಕದಲ್ಲಿ ಕಟ್ಟುವ ಕ್ರಿಯೆಯಲ್ಲಿ ನಿಷ್ಣಾತರಾಗಿದ್ದರು. ಜನಸಮುದಾಯಕ್ಕೆ ಬೇಕಾದ ಕೆರೆಕಟ್ಟೆ, ಗುಡಿಗುಂಡಾರ ಮುಂತಾದವುಗಳನ್ನು ನಿರ್ಮಿಸುವುದರ ಮೂಲಕ ಕಾಯಕಯೋಗಿ ಎನಿಸಿದರು. ಆದರೆ ಸ್ಥಾವರಗಳ ನಿರ್ಮಾಣಕ್ಕಿಂತ ಒಳಲೋಕದ ನಿರ್ಮಾಣ ಮಹತ್ವದ್ದು ಎಂಬುದನ್ನು ಅಲ್ಲಮ ಪ್ರಭುಗಳು ಮನವರಿಕೆ ಮಾಡಿಕೊಟ್ಟರು. ಕಲ್ಯಾಣದಲ್ಲಿ ಹೊಸ ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣನವರು ನವಮಾನವರ ‘ಸೃಷ್ಟಿಕ್ರಿಯೆ’ಯಲ್ಲಿ ತೊಡಗಿದ್ದನ್ನು ಸಿದ್ದರಾಮರ ಗಮನಕ್ಕೆ ತಂದರು. ಅಲ್ಲಮ ಪ್ರಭುಗಳ ಮೂಲಕ ಸಿದ್ದರಾಮರು ಬಸವಣ್ಣನವರ ಮಹತ್ವವನ್ನು ಅರಿತರು. ಸ್ಥಾವರಲಿಂಗದಿಂದ ಇಷ್ಟಲಿಂಗಕ್ಕೆ ಬಂದರು. ಮಾನವನಿಗಾಗಿ ಐಹಿಕ ಅಭ್ಯುದಯ ಸಾಧಿಸುವುದರ ಜೊತೆಗೇ ಆಂತರಿಕ ಅಭ್ಯುದಯದ ಮಹತ್ವವನ್ನು ಮನಗಂಡರು. ಅಂತೆಯೇ ಬಸವಣ್ಣನವರು ನುಡಿದದ್ದು ಮತ್ತು ನಡೆದದ್ದು ಸಿದ್ದರಾಮರಿಗೆ ಧರ್ಮವಾಯಿತು.
ಐಹಿಕ ಅಭ್ಯುದಯವೊಂದೇ ಮಾನವನನ್ನು ಔನ್ನತ್ಯಕ್ಕೆ ಏರಿಸಲಾರದು. ಆತ ತನ್ನ ಆಂತರಿಕ ಅಭ್ಯುದಯದೊಂದಿಗೆ ಮಾತ್ರ ಔನ್ನತ್ಯವನ್ನು ಸಾಧಿಸಬಲ್ಲನು. ಈಗ ಹದಿನೈದು ದೇಶಗಳಾಗಿ ಹರಿದುಹಂಚಿ ಹೋಗಿರುವ ಸೋವಿಯತ್ ದೇಶದ ಮುಖ್ಯಸ್ಥರಾಗಿದ್ದ ಆಂದ್ರಪೊವ್ ಅವರು ನಿಧನರಾಗುವ ಕೆಲವೇ ದಿನಗಳ ಮೊದಲು ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದ್ದರು. ನಾವು ಸೋವಿಯತ್ ಜನರಿಗಾಗಿ ಐಹಿಕ ಅಭ್ಯುದಯವನ್ನು ಸಾಧಿಸಿದೆವು. ಆದರೆ ಅವರ ಅಂತರ್ಯದ ನೋವನ್ನು ಶಮನಗೊಳಿಸಲಿಕ್ಕಾಗಲಿಲ್ಲ ಎಂದು ಅವರು ತಿಳಿಸಿದ್ದರು.
ವಿಶ್ವದಲ್ಲಿ ಮೊದಲ ಬಾರಿಗೆ ಕಾಯಕಜೀವಿಗಳ ಸರಕಾರ ಅಸ್ತಿತ್ವಕ್ಕೆ ಬಂದು ಸೋವಿಯತ್ ದೇಶದ ನಿರ್ಮಾಣವಾಯಿತು. ಜಗತ್ತೇ ಆಶ್ಚರ್ಯಗೊಳ್ಳುವಂಥ ಆರ್ಥಿಕ ಅಭ್ಯುದಯವನ್ನು ಸಾಧಿಸಿತು. ಆದರೆ ಕಮ್ಯುನಿಸಂನ ವ್ಯಕ್ತಿತ್ವ ನಿರ್ಮಾಣ ಪರಿಪೂರ್ಣವಾಗಿ ಆಗದೆ ಇದ್ದುದಕ್ಕೆ ಭಾರೀ ಸೋಲನ್ನು ಅನುಭವಿಸಬೇಕಾಯಿತು. ಸೋವಿಯತ್ ಮಾನವ ಕಮ್ಯುನಿಸಂ ಪ್ರಕಾರ ಪರಿಪೂರ್ಣ ನವಮಾನವನಾಗಿ ರೂಪುಗೊಂಡಿದ್ದರೆ ಅಮೆರಿಕದ ಸಾಮ್ರಾಜ್ಯಶಾಹಿ ಚಟುವಟಿಕೆಗಳು ಯಶಸ್ಸನ್ನು ಸಾಧಿಸುತ್ತಿರಲಿಲ್ಲ. ಸೋವಿಯತ್ ಜನರ ವ್ಯಕ್ತಿತ್ವವೇ ಆ ದೇಶದ ರಕ್ಷಣೆ ಮಾಡುತ್ತಿತ್ತು!
ಆಂತರಿಕ ಅಭಿವೃದ್ಧಿ ಸಾಧಿಸದೆ ಭೌತಿಕ ಅಭಿವೃದ್ಧಿಯನ್ನು ದೀರ್ಘಾವಧಿಯ ವರೆಗೆ ಸಾಧಿಸಲಿಕ್ಕಾಗದು. ಆಂತರಿಕ ಅಭಿವೃದ್ಧಿಯು ಭೌತಿಕ ಅಭಿವೃದ್ಧಿಯನ್ನು ತಾಳುವಷ್ಟು ಸದೃಢವಾಗಿರಬೇಕು ಎಂಬುದು ಸೋವಿಯತ್ ಪತನದಿಂದ ಕಲಿತ ಪಾಠವಾಗಿದೆ. ಶರಣರು ಇಂಥ ದುರಂತದ ಬಗ್ಗೆ ಪರಿಜ್ಞಾನ ಹೊಂದಿದ್ದರು. ಅಂತೆಯೇ ಭೌತಿಕ ಅಭಿವೃದ್ಧಿಯ ಜೊತೆಗೆ ಆಂತರಿಕ ಅಭಿವೃದ್ಧಿಯನ್ನೂ ಬಯಸಿದ್ದರು. ಬಸವಣ್ಣನವರು ಅಂಥ ಆಂತರಿಕ ಅಭಿವೃದ್ಧಿಯ ಕಡೆಗೆ ಸಾಗುವಂಥ ಕಾಲು (ಚಲನಶೀಲತೆ) ಕೊಟ್ಟರು. ಅಂಥ ಆಂತರಿಕ ಅಭಿವೃದ್ಧಿಯನ್ನು ಸಾಧಿಸುವಂಥ ಕಣ್ಣು (ದೃಷ್ಟಿಕೋನ) ಕೊಟ್ಟರು ಎಂಬುದನ್ನು ಸಿದ್ದರಾಮರು ಮಾರ್ಮಿಕವಾಗಿ ತಿಳಿಸಿದ್ದಾರೆ.
ಇಂದು ಆಧುನಿಕ ಮಾನವ ಎಲ್ಲ ರೀತಿಯ ಭೌತಿಕ ಸೌಲಭ್ಯಗಳನ್ನು ಪಡೆಯುತ್ತಿದ್ದಾನೆ. ಆದರೆ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಮಾನಸಿಕವಾಗಿ ದುರ್ಬಲನಾಗುತ್ತಿದ್ದಾನೆ. ಜಗತ್ತಿನ ಯಾವುದೇ ಭೌತಿಕ ವಸ್ತುವಿನಿಂದ ಆತ ನಿರಂತರ ಸುಖವನ್ನು ಪಡೆಯುತ್ತಿಲ್ಲ. ಶರಣರ ಸಂಗ, ಅನುಭಾವದ ಚಿಂತನೆ ಮತ್ತು ಆಂತರಿಕ ಪರಿಜ್ಞಾನದಿಂದ ಕೂಡಿದ ಸಮೂಹ ಜ್ಞಾನದಿಂದ ಮಾತ್ರ ಮಾನವ ನಿಜವಾದ ಆನಂದ ಮತ್ತು ಉನ್ನತಿಯನ್ನು ಸಾಧಿಸಬಲ್ಲ. ಅಂಥ ಕ್ರಿಯಾಶೀಲತೆ ಮತ್ತು ದೃಷ್ಟಿಕೋನವನ್ನು ಮಾನವರು ಪಡೆಯ ಬೇಕೆಂಬುದೇ ಸಿದ್ದರಾಮರ ಆಶಯವಾಗಿದೆ. ಈ ಸತ್ಯವನ್ನು ಅರುಹಿದ ಬಸವಣ್ಣನವರಿಗೆ ಅವರು ಕೃತಜ್ಞರಾಗಿದ್ದಾರೆ.
***