ಟಿಪ್ಪು ಅಮರ, ಆತನ ದೂರದರ್ಶಿತ್ವ ಅಜರಾಮರ
ಮೇ 4ಕ್ಕೆ ಟಿಪ್ಪುತನ್ನ ಖಡ್ಗವನ್ನು ಹಿಡಿದು ವೀರಾವೇಶದಿಂದ ಹೋರಾಡಿ ಶೌರ್ಯವನ್ನು ಮೆರೆದ ಈ ಕ್ಷಣಕ್ಕೆ 218 ವರ್ಷಗಳು ತುಂಬಿವೆ. ಈ ಕ್ಷಣದಲ್ಲಿ ಟಿಪ್ಪುಒಬ್ಬ ರಾಜನಾಗಿ ನನ್ನನ್ನು ಕಾಡಿದ್ದಕ್ಕಿಂತ ಹೆಚ್ಚಾಗಿ ಆತ ಒಬ್ಬ ವಿಷನರ್ ಆಗಿ ಕಾಡಿದ್ದೇ ಹೆಚ್ಚು. ಈ ದೃಷ್ಟಿಯಲ್ಲಿ ನಾವು ಟಿಪ್ಪುವನ್ನು ಗ್ರಹಿಸಿದಾಗ ಮಾತ್ರ ಇತಿಹಾಸದಲ್ಲಿ ಆತ ಅಮರ. ಈ ನೆಲದಲ್ಲಿ ಅಜರಾಮರ ಎಂದೆನಿಸುತ್ತದೆ.
ಇಂತಹ ಸಂದರ್ಭದಲ್ಲಿ ಟಿಪ್ಪು ಕಾಡಿದ್ದು ಹೀಗೆ. ಡಾ.ಅಬ್ದುಲ್ ಕಲಾಂ ಅವರು ಅಮೆರಿಕದ ನಾಸಾ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ಕೆಲವು ಗೋಡೆ ಚಿತ್ರಗಳನ್ನು ನೋಡಿ ಆಶ್ಚರ್ಯಚಕಿತರಾ ದರು. ಏಕೆಂದರೆ ನಾಸಾದ ಗೋಡೆಗಳಲ್ಲಿ ಮೇಲೆ ಟಿಪ್ಪು ಸುಲ್ತಾನ್ ತನ್ನ ಸಂಗಡಿಗರೊಂದಿಗೆ ರಾಕೆಟ್ ಮತ್ತು ಫಿರಂಗಿಯನ್ನು ಬಳಸಿ ಯುದ್ಧಭೂಮಿ ಯಲ್ಲಿ ಹೋರಾಡುತ್ತಿರುವ ದೃಶ್ಯವನ್ನು ಅಲ್ಲಿ ಚಿತ್ರಿಸಲಾಗಿತ್ತು. ಯಾಕೆ ಇಲ್ಲಿ ಚಿತ್ರವನ್ನು ಚಿತ್ರಿಸಿದ್ದಾರೆ ಎಂಬ ಕುತೂಹಲದಿಂದ ಕಲಾಂ ಅವರು ನಾಸಾದ ಅಧಿಕಾರಿಗಳನ್ನು ಕೇಳಿದಾಗ ಅವರು ಉತ್ತರಿಸುತ್ತಾ ‘‘ಟಿಪ್ಪುವಿನ ಈ ಚಿತ್ರ ನಾಸಾದ ನಮ್ಮ ವಿಜ್ಞಾನಿಗಳಿಗೆ ಸ್ಫೂರ್ತಿ. ಜಗತ್ತಿನಲ್ಲಿ ಮೊತ್ತ ಮೊದಲಿಗೆ ಯುದ್ಧ ಭೂಮಿಯಲ್ಲಿ ರಾಕೆಟ್ ಪರಿಕಲ್ಪನೆಯನ್ನು ಪರಿಚಯಿಸಿದ ಟಿಪ್ಪು ನಾಸಾಕ್ಕೆ ಸ್ಫೂರ್ತಿ’’ ಎಂದು ವಿವರಿಸಿದರು. ಈ ವಿಷಯವನ್ನು ಅಬ್ದುಲ್ ಕಲಾಂ ತಮ್ಮ ‘ವಿಂಗ್ಸ್ ಆಫ್ ಫೈರ್’ ಕೃತಿಯಲ್ಲಿ ದಾಖಲಿಸಿಕೊಂಡು ಹೆಮ್ಮೆ ಪಟ್ಟಿದ್ದು ನೆನಪಾಯಿತು.
1980ರಲ್ಲಿ ಬ್ರಿಟನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅಂದಿನ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರು ರಾಣಿ ಎರಡನೆ ಎಲಿಝಬೆತ್ ಅವರಿಗೆ ಪತ್ರ ಬರೆಯುತ್ತಾ, ರಾಷ್ಟ್ರವು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ತಮ್ಮ ರಾಜ ಪರಿವಾರದ ನಿರ್ವಹಣೆಗಾಗಿ ಸರಕಾರವು ಹಣ ನೀಡಲು ಅಸಾಧ್ಯ ಎಂದು ಹಾಗಾಗಿ ರಾಜಧನ ನೀಡುವುದನ್ನು ನಿಲ್ಲಿಸಿದರು. ಆದರೆ ರಾಣಿ ಅವರ ಆಕ್ರೋಶಕ್ಕೆ ತುತ್ತಾದ ಸಂಸತ್ತು ಒಂದು ನಿರ್ಧಾರಕ್ಕೆ ಬಂದು ಶ್ರೀರಂಗಪಟ್ಟಣದಂತಹ ಯುದ್ಧದ ಸಂದರ್ಭದಲ್ಲಿ ಸಂಗ್ರಹಿಸಿದ ಅಪಾರ ಸಂಪತ್ತು ಹಾಗೂ ಅಮೂಲ್ಯ ವಸ್ತುಗಳನ್ನು ಮ್ಯೂಸಿಯಂನಲ್ಲಿಟ್ಟು ಇಲ್ಲಿ ಸಂಗ್ರಹವಾಗುವ ಪ್ರವೇಶ ಶುಲ್ಕದಿಂದ ರಾಣಿ ಪರಿವಾರದ ಕುಟುಂಬ ನಿರ್ವಹಣೆ ಮಾಡಲಾಗುವುದೆಂದು ತೀರ್ಮಾನಿಸಲಾಯಿತು.
ಅದರಂತೆ ಬ್ರಿಟನ್ನಲ್ಲಿ 9 ಮ್ಯೂಸಿಯಂಗಳಲ್ಲಿ ಟಿಪ್ಪುವಿನ ಆಲಂಕಾರಿಕ ವಸ್ತುಗಳು, ಖಡ್ಗ, ಪೇಟ, ರಾಜದಂಡ ಮುಖ್ಯವಾಗಿ ಚಪ್ಪಲಿಗಳನ್ನು ಸಾರ್ವಜನಿಕರ ಪ್ರದರ್ಶನಕ್ಕಿಟ್ಟು ಬರುವ ಈ ಆದಾಯದಿಂದ ರಾಣಿಯ ಪರಿವಾರ ಜೀವನ ನಿರ್ವಹಣೆ ಮಾಡಿದ ಘಟನೆ ನನ್ನ ಕಾಡಿತು. ರೇಷ್ಮೆ ಬೆಳೆದು ಬದುಕು ಕಟ್ಟಿಕೊಂಡ ಸಾವಿರಾರು ರೈತರ ಮುಖದ ಮಂದಹಾಸದಲ್ಲಿ ಸಾವಿರಾರು ಎಕರೆ ಭೂಮಿಯು ರೇಷ್ಮೆಯನ್ನು ಹೊತ್ತು ನಿಂತ ಪಚ್ಚೆಹಸಿರಿನ ತೋಟದಲ್ಲಿ ಟಿಪ್ಪುಕಾಣಿಸುತ್ತಾನೆ. ನಾಡು ಬರಗಾಲದ ಬೇಗೆಯಲ್ಲಿ ಸಿಲುಕಿದಾಗ, ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದಾಗ ಪರ್ಷಿಯಾದಿಂದ ರೇಷ್ಮೆಯನ್ನು ತಂದು ತಜ್ಞರ ತಂಡದೊಂದಿಗೆ ಈ ನೆಲಕ್ಕೆ ರೇಷ್ಮೆಯನ್ನು ಪರಿಚಯಿಸಿದ ಕೀರ್ತಿ ಟಿಪ್ಪುವನ್ನು ಈ ನೆಲದೊಳಗೆ ಅಮರನಾಗಿಸುತ್ತದೆ. ಅಮೃತಮಹಲ್ ತಳಿಗಳ ಎತ್ತುಗಳು ಈ ನಾಡಿನ ಸೊಬಗು ಹಾಗೂ ಹೆಮ್ಮೆ. ಇಂತಹ ಎತ್ತುಗಳು ರೈತರೊಟ್ಟಿಗೆ ಜೀವಿಸುವಂತೆ ಈ ನಾಡಿಗೆ ಗಟ್ಟಿಮುಟ್ಟಿನ ಎತ್ತುಗಳ ತಳಿಯನ್ನು ಪರಿಚಯಿಸಿದವ ಟಿಪ್ಪು.
ಅಂದು ಫಿರಂಗಿಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸುವುದು ಈ ತಳಿಯ ಎತ್ತುಗಳ ಉದ್ದೇಶವಾಗಿದ್ದರೂ ಇಂದು ರೈತನ ಬದುಕಿನಲ್ಲಿ ಎತ್ತುಗಳು ಬಹುಮುಖ್ಯ ಭಾಗವಾಗಿ ಹೋಗಿವೆ. ಇಂದು ಅತ್ಯಾಧುನಿಕವಾಗಿ ನಮ್ಮ ಸೇನೆಯಲ್ಲಿ ಫಿರಂಗಿಗಳ ಮತ್ತು ರಾಕೆಟ್ಗಳ ಸದ್ದು ಕೇಳಿಸಬಹುದು. ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ನಾವು ಮುಂದೆ ಇದ್ದೇವೆ. ಆದರೆ 1780ರ ದಶಕದಲ್ಲೇ ಟಿಪ್ಪುಅತ್ಯಾಧುನಿಕ ಫಿರಂಗಿ ತಯಾರಿಗೆೆ ಕೈಹಾಕಿದ್ದ. ಆದಿಲ್ ಷಾನ ಕಾಲದಲ್ಲಿ ತಯಾರಾಗಿದ್ದ 5 ಸಾವಿರ ಕೆ.ಜಿ.ಯ ಭಾರವುಳ್ಳ ಫಿರಂಗಿಗಳನ್ನು ಕೇವಲ ಒಂದು ಸಾವಿರ ಕೆ.ಜಿಗೆ ಇಳಿಸಿ ಯುದ್ಧ ಭೂಮಿಗೆ ಕೊಂಡೊಯ್ದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ. 16ನೆ ಲೂಯಿಯನ್ನು ತಮ್ಮ ಮೂರು ಜನ ರಾಯಭಾರಿಗಳನ್ನು ಭೇಟಿ ಮಾಡಿಸಿ ರಾಕೆಟ್ ತಜ್ಞರು, ಅತ್ಯಾಧುನಿಕ ಬಾಂಬ್ ತಯಾರಿಕಾ ತಜ್ಞರನ್ನು ಫ್ರಾನ್ಸ್ ನಿಂದ ಕರೆಯಿಸಿ ತನ್ನ ಸಾಮ್ರಾಜ್ಯದ ಐದು ಕಡೆ ತಾರಾಮಂಡಲದ ಹೆಸರಿನಲ್ಲಿ ಫ್ಯಾಕ್ಟರಿಗಳನ್ನು ಆರಂಭಿಸಿದ.
ಬೆಂಗಳೂರಿನ ಇಂದಿನ ತೊರೆಕಾಡಿನ ಹಳ್ಳಿಯಲ್ಲಿ ರಾಕೆಟ್ ತಯಾರಿಕಾ ಫ್ಯಾಕ್ಟರಿಯನ್ನು ಮೊತ್ತ ಮೊದಲು ಪ್ರಾರಂಭಿಸಿ ಪ್ರಪಂಚದ ಮೊದಲ ರಾಕೆಟ್ ಸಂಶೋಧಕನಾಗಿ ನಿಂತು ಯುದ್ಧ ಭೂಮಿಯಲ್ಲಿ ಮೊದಲ ಬಾರಿಗೆ ರಾಕೆಟ್ ಬಳಸಿದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ. ಫ್ರಾನ್ಸ್ ಬುಕಾಲನ್ ಎಂಬ ವಿದೇಶಿ ಚಿತ್ರಗಾರನೊಬ್ಬ ಅಂದು ಬೇಸಿಗೆ ಅರಮನೆಯಲ್ಲಿ ಬರೆದ ಫಿರಂಗಿಯ ಚಿತ್ರ ಟಿಪ್ಪುವಿನ ಯುದ್ಧ ಕೌಶಲವನ್ನು ತೋರಿಸುತ್ತದೆ. ಚಿಕ್ಕದೇವರಾಜ ಒಡೆಯರ್ ಕಟ್ಟಿಸಿದ ಹನುಮಂತ ಕಟ್ಟೆಯನ್ನು ದುರಸ್ತಿಗೊಳಿಸಿ ಪೂರ್ಣಗೊಳಿಸಿದ ಟಿಪ್ಪುಐದು ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸಿದ. ರಾಮಸ್ವಾಮಿ ಅಣೆಕಟ್ಟನ್ನು ನಿರ್ಮಿಸುವುದರ ಮೂಲಕ 4,890 ಎಕರೆ ನೀರಾವರಿ ಭೂಮಿಯನ್ನು ಮತ್ತೆ ಸೃಷ್ಟಿಸಿ ರೈತರ ಪಾಲಿನ ಆಶಾಕಿರಣವಾಗಿದ್ದ.
40 ಸಾವಿರ ಚದರ ಮೈಲಿಯಿದ್ದ ಮೈಸೂರು ರಾಜ್ಯವನ್ನು 80 ಸಾವಿರ ಚದರ ಮೈಲಿ ವಿಸ್ತರಿಸಿ ಸ್ಥಳೀಯ ಸಾಮ್ರಾಜ್ಯಗಳೊಟ್ಟಿಗೆ ಅಲ್ಲದೆ ಬ್ರಿಟಿಷರಿಗೂ ಸಿಂಹಸ್ವಪ್ನವಾಗಿ ಟಿಪ್ಪುಕಾಡಿದ. ಟಿಪ್ಪುವಿನ ಕಾಲದ ಒಂದು ಸಾಮಾಜಿಕ ಕ್ರಾಂತಿ ಎಂದರೆ ದಲಿತರು ಮತ್ತು ಅಸ್ಪಶ್ಯರಿಗೆ ಭೂಮಿಯನ್ನು ಹಂಚಿದ್ದು. ನಿರ್ಗತಿಕವಾಗಿ ಸಮಾಜದ ಕಟ್ಟಕಡೆಯ ಪಶುಗಳಂತೆ ಜೀವಿಸುತ್ತಿದ್ದ ಶೋಷಿತ ಸಮುದಾಯವನ್ನು ಮುಖ್ಯವಾಹಿನಿಗೆ ತರುವುದರ ಮೂಲಕ ಭೂಮಿಯನ್ನು ನೀಡಿ ತನ್ನ ಸೈನ್ಯದಲ್ಲಿ ಅವಕಾಶವನ್ನು ನೀಡಿದ ಟಿಪ್ಪುವಿನ ಸಾಮಾಜಿಕ ಕಳಕಳಿಯನ್ನು ಸ್ಮರಿಸಬೇಕು. ಇಂದು ಏನಾದರೂ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ಹಾಸನ ಭಾಗಗಳಲ್ಲಿ ದಲಿತರಿಗೆ ಭೂ ಒಡೆತನವಿದೆ ಎಂದರೆ ಅದರಲ್ಲಿ ಟಿಪ್ಪುವಿನ ಶ್ರಮವು ಕೂಡ ಬಹುಮುಖ್ಯ ಭಾಗವಾಗಿದೆ. ಕೇರಳದಲ್ಲಿ ಕೆಳವರ್ಗದ ಹೆಣ್ಣು ಮಕ್ಕಳಿಗೆ ಶತಮಾನಗಳಿಂದ ರೂಢಿಸಿಕೊಂಡು ಬಂದಿದ್ದ ಸೊಂಟದ ಮೇಲ್ಭಾಗದ ಬಟ್ಟೆಯನ್ನು ಧರಿಸಬಾರದೆಂದು ವಿಧಿಸಿದ್ದ ಕಾನೂನನ್ನು ನಿಷೇಧಿಸಿ ಶೋಷಿತ ಸಮುದಾಯವು ಘನತೆಯಿಂದ ಬದುಕಲು ಆಶಾಕಿರಣವಾದ. ಟಿಪ್ಪುಗ್ರಂಥಪ್ರೇಮಿಯಾಗಿದ್ದ. ಶ್ರೀರಂಗಪಟ್ಟಣವನ್ನು ಕೊಳ್ಳೆ ಹೊಡೆದಾಗ ಬ್ರಿಟಿಷರು ಅಲ್ಲಿನ ಎಲ್ಲ ಸಂಪತ್ತಿನ ಜತೆಗೆ ಅಪಾರ ಪ್ರಮಾಣದ ಪುಸ್ತಕಗಳನ್ನು ಕೊಳ್ಳೆ ಹೊಡೆದರು.
ಸುಮಾರು 1,110 ಪುಸ್ತಕಗಳನ್ನು ಬ್ರಿಟಿಷರು ಬ್ರಿಟನ್ಗೆ ಸಾಗಿಸಿದರು. ಪರ್ಷಿಯಾ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಹೊರತರಲಾಗಿದ್ದ ನ್ಯಾಯಶಾಸ್ತ್ರ, ತರ್ಕಶಾಸ್ತ್ರ, ಖಗೋಳ, ಗಣಿತ, ಭೂಗೋಳ ವಿಷಯ ಸೇರಿದಂತೆ ಎಲ್ಲ ಧರ್ಮ ಗ್ರಂಥಗಳನ್ನು ಟಿಪ್ಪು ಸಂಗ್ರಹಿಸಿಟ್ಟಿದ್ದ. ಟಿಪ್ಪುಮುಖ್ಯವಾಗಿ ಸೆಣಸಿದ್ದು ಶಾನಭೋಗಿಕೆ ಮತ್ತು ಪುರೋಹಿತಶಾಹಿ ವಿರುದ್ಧ. ಸಾಮಾಜಿಕ ಪಿಡುಗುಗಳಾದ ಕುಡಿತ, ಜೂಜು, ಅಕ್ರಮ, ವ್ಯಭಿಚಾರ, ವೇಶ್ಯಾವಾಟಿಕೆ ವಿರುದ್ಧ. ಹಿಂದೆ ಯಾವ ರಾಜನೂ ನಿರ್ಧರಿಸಲಾಗದ ಕಠಿಣ ಶಿಕ್ಷೆಗಳನ್ನು ಈ ಸಾಮಾಜಿಕ ಪಿಡುಗಿನ ವಿರುದ್ಧ ತೆಗೆದುಕೊಂಡಿದ್ದ ಟಿಪ್ಪು ಶೋಷಿತರ, ಬಡವರ, ದಲಿತ ಪರ ಕಾಳಜಿಯನ್ನು ಹೊಂದಿದ್ದ. ಇವರನ್ನು ಮುಖ್ಯವಾಹಿನಿಗೆ ತರುವ ಬಹುದೊಡ್ಡ ವಿಷನ್ ಇಟ್ಟುಕೊಂಡಿದ್ದ. ಆತನದು ಬಡವರ ಪರವಾದ ಕಾಳಜಿ. ಶ್ರೀಮಂತಿಕೆಯ ವಿರುದ್ಧದ ಹೋರಾಟ.
ನಂಜನಗೂಡಿನ ನಂಜುಂಡೇಶ್ವರ, ಶೃಂಗೇರಿಯ ಶಾರದೆ, ಶ್ರೀರಂಗಪಟ್ಟಣದ ಶ್ರೀರಂಗ, ಕೊಲ್ಲೂರು ಮೂಕಾಂಬಿಕೆ, ಮೇಲುಕೋಟೆ ಗವಿ ಗಂಗಾಧರೇಶ್ವರ ದೇವಸ್ಥಾನಗಳಿಗೆ ನೀಡಿದ ದಾನ ದತ್ತಿಗಳು ಟಿಪ್ಪುವಿನ ಧಾರ್ಮಿಕ ಸಹಿಷ್ಣುತೆಯನ್ನು ಎತ್ತಿ ತೋರಿಸುತ್ತದೆ. ಶ್ರೀರಂಗನ ದೇವಾಲಯದ ಗೋಡೆ ಕುಸಿದು ಬಿದ್ದಾಗ ಧನ ಸಹಾಯ ಮಾಡಿ, ಆ ದೇವಾಲಯದ ಜೀರ್ಣೋದ್ಧಾರ ಮಾಡಿದ್ದನ್ನು ನಾವು ನೆನೆಯಬೇಕು. ಶೃಂಗೇರಿಯಲ್ಲಿ ಶ್ರೀಗಳು ಇಂದು ಕೂರುವ ಮಂಟಪ ಹಾಗೂ ಧರಿಸುವ ಕಂಠಿಹಾರಗಳು ಟಿಪ್ಪುವಿನ ಕೊಡುಗೆ. ಇಂದು ಆ ದೇವಾಲಯಗಳಲ್ಲಿ ನಡೆಯುವ ಪ್ರಭೋಸ್ಮಂಗಳಾರತಿಗಳು, ಸಲಾಮಾರತಿಗಳು ಟಿಪ್ಪುವಿನ ಧಾರ್ಮಿಕ ಸಹಿಷ್ಣತೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಒಬ್ಬ ರಾಜನಾದವನ ಉದ್ದೇಶ ಆ ಕಾಲಘಟ್ಟಕ್ಕೆ ಮುಖ್ಯವಾಗಿ ರಾಜ್ಯದ ವಿಸ್ತರಣೆಯಾಗಿರುತ್ತದೆ. ಅಲ್ಲಿ ಜಾತಿ, ಧರ್ಮ, ಮತಗಳು ನಗಣ್ಯವಾಗುತ್ತವೆ. ಟಿಪ್ಪುಹೇಗೆ ಹಿಂದೂ, ಬ್ರಿಟಿಷರೊಡನೆ ಹೋರಾಡಿದ್ದಾನೆಯೋ ಹಾಗೆಯೇ ಮುಸ್ಲಿಂ ದೊರೆ ನಿಜಾಮನ ವಿರುದ್ಧವೂ ಹೋರಾಡಿದ್ದಾನೆ. ಟಿಪ್ಪುಏಕಕಾಲದಲ್ಲಿ ಆಂತರಿಕ ಹಾಗೂ ಬಾಹ್ಯ ಶತ್ರುಗಳು ಮತ್ತು ಪುರೋಹಿತಶಾಹಿಯ ವಿರುದ್ಧ ಹೋರಾಡಬೇಕಾಯಿತು.
ಇಲ್ಲಿ ಮುಖ್ಯವಾಗಿ ಟಿಪ್ಪುಒಬ್ಬ ಮುಸ್ಲಿಂ ಎಂದು ಮುಸ್ಲಿಮರು ಪ್ರೀತಿಸಬೇಕಿಲ್ಲ. ಹಾಗೆಯೇ ಆತ ಮುಸ್ಲಿಂ ಎಂದು ಹಿಂದೂಗಳು ದ್ವೇಷಿಸ ಬೇಕಿಲ್ಲ. ಆತನನ್ನು ಒಬ್ಬ ರಾಜನನ್ನಾಗಿ ನೋಡಬೇಕಷ್ಟೆ ಎಂದು ಆತನನ್ನು ಅಷ್ಟಕ್ಕೆ ಸೀಮಿತಗೊಳಿಸಬೇಕಾಗಿಲ್ಲ. ಇದರಾಚೆಗೂ ಟಿಪ್ಪುವನ್ನು ಒಬ್ಬ ದೊಡ್ಡ ವಿಷನರ್ ಆಗಿ ಇಂದಿನ ಯುವ ಜನಾಂಗ ಗ್ರಹಿಸಬೇಕಿದೆ. ಟಿಪ್ಪುವಿನ ಆಲೋಚನೆಯನ್ನು ನಾಲ್ವಡಿಯವರು, ದೇವರಾಜ ಅರಸು ಅವರು ಮೈಗೂಡಿಸಿಕೊಂಡಂತೆ ಇಂದಿನ ಸರಕಾರಗಳು ಮೈಗೂಡಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಇತರರ ಹಾಗೆ ಟಿಪ್ಪು ಕೂಡ ಓಟ್ ಬ್ಯಾಂಕ್ ಆಗುವ ಅಪಾಯ ನಮ್ಮ ಮುಂದಿದೆ. ಟಿಪ್ಪುವಿನ ಪರ ವಿರೋಧ ಚರ್ಚೆಗಳು ಟಿಪ್ಪುವಿಗಿಂತ ಅಧಿಕವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಮತ, ಧರ್ಮದ ಆಚೆ ನಿಂತು ನೋಡಿದಾಗ ನನಗೆ ಕಾಡಿದಂತೆ ಟಿಪ್ಪುನಿಮ್ಮನ್ನೂ ಕಾಡಬಹುದು.