ವಿವರಗೇಡಿಗಳ ಮಾತು ಕೇಳಲಾಗದು
ಶಿವನ ನೆನೆದಡೆ ಭವ ಹಿಂಗೂದೆಂಬ ವಿವರಗೇಡಿಗಳ ಮಾತು ಕೇಳಲಾಗದು.
ಹೇಳದಿರಯ್ಯ, ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ?
ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ?
ರಂಭೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯ?
ನೆನೆದರಾಗದು, ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ,
ಸದ್ಗುರು ಸಿದ್ಧಸೋಮನಾಥಲಿಂಗನ ನೆನೆಯಬಾರದು.
- ಅಮುಗಿ ದೇವಯ್ಯ
ಸೊನ್ನಲಾಪುರದಲ್ಲಿ ನೆಯ್ಗೆ ಕಾಯಕ ಮಾಡಿಕೊಂಡಿದ್ದ ಅಮುಗಿ ದೇವಯ್ಯನವರು ಬಸವಾದಿ ಪ್ರಮಥರ ಜೊತೆಗೂಡುವುದಕ್ಕಾಗಿ ಕಲ್ಯಾಣಕ್ಕೆ ಬಂದರು. ಕಲ್ಯಾಣಕ್ರಾಂತಿಯ ನಂತರ ಪಂಡರಾಪುರ ಸಮೀಪದ ಹೂಳಜ (ಪುಳಜ) ಗ್ರಾಮದಲ್ಲಿ ನೆಲೆನಿಂತು ಅನುಭಾವ ನೀಡುತ್ತ ಜನಮನ ಸೂರೆಗೊಂಡರು. ದೇವಗಿರಿಯ ಯಾದವರಾಜ ಸಿಂಘಣ ಹೂಳಜೆಗೆ ಬಂದು ಅಮುಗಯ್ಯನವರ ದರ್ಶನ ಪಡೆದು ಇಥ್ಥೆ ಹೆಸರಿನ ಗ್ರಾಮವನ್ನು ಅವರಿಗೆ ಕಾಣಿಕೆಯಾಗಿ ಕೊಟ್ಟ ಎಂಬ ವಿಚಾರ ಕ್ರಿಸ್ತಶಕ 1200ರ ಹೂಳಜೆಯ ಲಿಂಗೇಶ್ವರ (ಸಿದ್ಧಸೋಮನಾಥ) ದೇವಸ್ಥಾನದ ಕನ್ನಡ ಶಿಲಾಶಾಸನದಲ್ಲಿದೆ.
ಅಮುಗಿ ದೇವಯ್ಯನವರ ಇಷ್ಟಲಿಂಗನಿಷ್ಠೆ ಪ್ರಖರ ವೈಚಾರಿಕತೆಯ ನೆಲೆಯಲ್ಲಿತ್ತು ಎಂಬುದು ಮೇಲಿನ ವಚನದಿಂದ ತಿಳಿದುಬರುತ್ತದೆ. ಶಿವನ ನೆನೆದರೆ ಭವಬಂಧನದಿಂದ ಮುಕ್ತರಾಗುತ್ತೇವೆ ಎಂಬ ತಿಳಿಗೇಡಿಗಳ ಮಾತನ್ನು ಕೇಳಲಿಕ್ಕಾಗದು. ಕತ್ತಲಾದಾಗ ದೀಪ ಹಚ್ಚುವ ಬದಲು ಕೇವಲ ಬೆಳಕನ್ನು ನೆನೆದರೆ ಕತ್ತಲೆ ಕಳೆಯುವುದೇ? ಹಸಿವಾದಾಗ ಬಯಸಿದ ಆಹಾರವನ್ನು ಪಡೆಯುವ ಬದಲು ಬರೀ ನೆನೆಯುತ್ತ ಕುಳಿತರೆ ಹೊಟ್ಟೆ ತುಂಬುವುದೇ? ಸುರಸಂದರಿಯರಲ್ಲಿ ಪ್ರಸಿದ್ಧಳಾದ ರಂಭೆಯ ನೆನೆದರೆ ಕಾಮ ಶಮನವಾಗುವುದೇ? ಎಂದು ಪ್ರಶ್ನಿಸುತ್ತಾರೆ. ಸತ್ಯವನ್ನು ಪ್ರತಿಪಾದಿಸುವ ಉದ್ದೇಶದಿಂದ ವಚನದ ಆರಂಭದಲ್ಲಿ, ದೇವರ ಬಗ್ಗೆ ಮೂಢನಂಬಿಕೆಯುಳ್ಳವರ ವಿಚಾರದಲ್ಲಿ ಕಠೋರಭಾವ ತಾಳುತ್ತಾರೆ. ಆದರೆ ವಚನದ ಕೊನೆಯ ಭಾಗದಲ್ಲಿ ‘ಅಯ್ಯಾ’ ಎಂದು ಸಂಬೋಧಿಸುವುದರ ಮೂಲಕ ಅಂಥವರಿಗೆ ಸತ್ಯದ ದರ್ಶನ ಮಾಡುವ ಕಾಳಜಿ ತೋರುತ್ತಾರೆ. ದೇವರನ್ನು ಬರೀ ನೆನೆದರೆ ಪ್ರಯೋಜನವಿಲ್ಲ ಎಂದು ತಿಳಿಹೇಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ನಿಜದ ನಿಲುವನ್ನು ತಾಳಿ ತನ್ನ ಒಳಗಿನ ಘನವನ್ನು ಅರಿಯುವುದಕ್ಕೋಸ್ಕರ ನಿಜಸ್ವರೂಪದರ್ಶನ ಮಾಡಿಕೊಳ್ಳಬೇಕೆನ್ನುತ್ತಾರೆ.
‘‘ಪ್ರಾಣಲಿಂಗವೆಂಬುದೊಂದು ಮಾತಿನಂತುಟಲ್ಲ. ಲೋಗರ ಸುಖದುಃಖ ತನ್ನದೆನ್ನದನ್ನಕ್ಕ ಚೆನ್ನ ಸಿದ್ಧಸೋಮನಾಥನೆಂಬ ಲಿಂಗ ಬರಿದೆ ಒಲಿವನೆ?’’ ಎಂದು ಇನ್ನೊಂದು ವಚನದಲ್ಲಿ ಪ್ರಶ್ನಿಸುತ್ತ ಲೋಕ ಕಲ್ಯಾಣ ಬಯಸದವರು ದೇವರಿಗೆ ದೂರವೆನ್ನುತ್ತಾರೆ. ಪ್ರಾಣಲಿಂಗಕ್ಕೆ ಸಮಷ್ಟಿಯ ಅರ್ಥ ಕಲ್ಪಿಸುತ್ತಾರೆ. ಪ್ರಾಣಲಿಂಗವೆಂಬುದು ಮಾತನಾಡಿದಷ್ಟು ಸುಲಭವಲ್ಲ. ಪ್ರಾಣಲಿಂಗದ ಅರಿವುಳ್ಳವನು ಲೋಕದ ಜನರ ಸುಖದುಃಖಗಳನ್ನು ತನ್ನ ಸುಖದುಃಖವೆಂದು ಭಾವಿಸಬೇಕಾಗುತ್ತದೆ. ಆಗ ಮಾತ್ರ ದೇವರು ಒಲಿಯುವನು ಎಂದು ಕಿವಿಮಾತು ಹೇಳುತ್ತಾರೆ. ಇಂಥ ಮನಸ್ಥಿತಿಯನ್ನು ಹೊಂದಿದ್ದೇ ಹನ್ನೆರಡನೆ ಶತಮಾನದ ಶರಣರ ಬಹುದೊಡ್ಡ ಸಾಧನೆ. ಮನುಷ್ಯರು ಆಂತರಿಕವಾಗಿ ಬದಲಾವಣೆಯನ್ನು ಹೊಂದಿದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದು ಶರಣರ ದೃಢ ನಿಲುವಾಗಿತ್ತು.
ಮಾನವ ಗಾಣದೆತ್ತಿನ ಹಾಗೆ ಕಾಮದ ಸುತ್ತ ಸುತ್ತುತ್ತಿರುತ್ತಾನೆ ಎಂಬುದು ಜಗತ್ ಪ್ರಸಿದ್ಧ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡಾ ಅವರ ಸಂಶೋಧನೆಯಾಗಿದೆ. ‘ಲವ್ ಆ್ಯಂಡ್ ಹಂಗರ್ ರೂಲ್ ದ ವರ್ಲ್ಡ್’ (ಪ್ರೀತಿ ಮತ್ತು ಹಸಿವು ಜಗತ್ತನ್ನು ಆಳುತ್ತವೆ) ಎಂದು ರಷ್ಯದ ಮಹಾನ್ ಕ್ರಾಂತಿಕಾರಿ ಸಾಹಿತಿ ಮ್ಯಾಕ್ಸಿಂ ಗಾರ್ಕಿ ಹೇಳಿದ್ದಾರೆ. ಆದರೆ ಅಮುಗಿ ದೇವಯ್ಯನವರು ಇವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಈ ವಚನ ಮಹತ್ವದ್ದಾಗಿದೆ. ಮನುಷ್ಯನನ್ನು ಕಾಡುವ ವಿಷಯಗಳ ಬಗ್ಗೆ ದೇವಯ್ಯ ಆಳವಾಗಿ ಚಿಂತನೆ ಮಾಡಿದ್ದಾರೆ. ತಾನು ಯಾರು? ತಾನು ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ? ಎಂಬ ಪ್ರಶ್ನೆಗಳಿಗೆ ಎಂದೂ ಉತ್ತರ ಸಿಕ್ಕಿಲ್ಲ. ಕೋಟ್ಯಂತರ ಜನರು ಸಹಸ್ರ ಸಹಸ್ರ ವರ್ಷಗಳಿಂದ ಈ ಪ್ರಶ್ನೆಗಳನ್ನು ಎದುರಿಸುತ್ತಲೇ ಮುಂದುವರಿದಿದ್ದಾರೆ. ಈ ಪ್ರಶ್ನೆ ಪ್ರತಿಯೊಬ್ಬರಿಗೆ ಕಾಡುತ್ತಲೇ ಇದೆ. ಇದು ಜ್ಞಾನದ ಹಸಿವು. ಆ ಮೂಲಕ ಕಣ್ಣಿಗೆ ಕಾಣದ ಜಗನ್ನಿಯಾಮಕ ಶಕ್ತಿಯನ್ನು ಅರಿಯುವ ತವಕ. ಇದರ ಜೊತೆಗೆ ಹೊಟ್ಟೆಯ ಹಸಿವು ಮತ್ತು ಮೈಮನಗಳಲ್ಲಿ ಸುಳಿಯುವ ಕಾಮದ ಹಸಿವು ಕಾಡುತ್ತಲೇ ಇವೆ. ಶಿವ, ಜ್ಯೋತಿ, ಇಷ್ಟಾನ್ನ ಮತ್ತು ರಂಭೆಯ ಪ್ರತೀಕಗಳ ಮೂಲಕ ದೇವರು, ಜ್ಞಾನ, ಹಸಿವು ಮತ್ತು ಕಾಮದ ತೀವ್ರತೆಯ ಬಗ್ಗೆ ಅಮುಗಿ ದೇವಯ್ಯ ತಿಳಿಸುತ್ತಾರೆ. ಇವುಗಳನ್ನು ನೆನೆದರೆ ಪ್ರಯೋಜನವಿಲ್ಲ ನಿಜದಲ್ಲಿ ನಿರ್ಧರಿಸಬೇಕೆಂದು ಸಲಹೆ ನೀಡುತ್ತಾರೆ.