ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ
ಈ ಹೊತ್ತಿನ ಹೊತ್ತಿಗೆ
‘ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ’ ಕೃತಿಯನ್ನು ತೆಲುಗು ಲೇಖಕ ಜಸ್ಟಿಸ್ ಕೊತ್ತಪಲ್ಲಿ ಪುನ್ನಯ್ಯ ಅವರು ಬರೆದಿದ್ದು, ಬಿ. ಸುಜ್ಞಾನ ಮೂರ್ತಿ ಕನ್ನಡಕ್ಕಿಳಿಸಿದ್ದಾರೆ. ವರ್ತಮಾನದ ಸಂಘರ್ಷಮಯ ವಾತಾವರಣದಲ್ಲಿ ಮತ್ತೆ ಅಂಬೇಡ್ಕರ್ ಚಿಂತನೆಗಳು ಮುನ್ನೆಲೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯವನ್ನು ಅಂಬೇಡ್ಕರ್ ಕಂಡ ರೀತಿ ಏನು ಎನ್ನುವುದು ಹೆಚ್ಚು ಪರಿಚಿತವಾಗಬೇಕಾಗಿದೆ. ಅಂಬೇಡ್ಕರ್ ಸಾಮಾಜಿಕ ನ್ಯಾಯದಲ್ಲಿ ಅಸ್ಪಶ್ಯತೆಯ ಬಲೆಗೆ ಸಿಕ್ಕಿಕೊಂಡಿದ್ದ ತಳಸ್ತರದ ಜನರನ್ನು ಮೇಲೆತ್ತುವುದು ಪ್ರಮುಖವಾಗಿತ್ತು. ಜಾತಿಯನ್ನು ಮೀರುವುದು ಸಾಮಾಜಿಕ ನ್ಯಾಯದ ಪ್ರಮುಖ ಹಂತ ಎಂದು ಅವರು ಭಾವಿಸಿಕೊಂಡಿದ್ದರು. ಹಿಂದೂ ಧರ್ಮದಲ್ಲಿದ್ದುಕೊಂಡು ಜಾತಿಯನ್ನು ಮೀರಿ ಬದುಕುವುದು ಅಸಾಧ್ಯ ಎನ್ನುವುದನ್ನು ಮನಗಂಡೇ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯತತ್ವ ಮೂರು ಬಗೆಯ ನ್ಯಾಯಗಳ ಸಮಗ್ರತೆಯಿಂದ ಕೂಡಿದೆ. ಸ್ವಾತಂತ್ರ, ಸಮಾನತೆ, ಸೌಭ್ರಾತೃತ್ವಗಳ ಮೇಲೆ ಆಧಾರಪಟ್ಟು, ನಡೆಯುವ ಸಾಮಾಜಿಕ ಆರ್ಥಿಕ, ರಾಜಕೀಯ ಸಂಬಂಧಿತ ನ್ಯಾಯರೀತಿ ಅದು. ಸ್ವಾತಂತ್ರ ಎಂಬುದು ಸಮಾನತೆಯಿಂದ ಬೇರ್ಪಡಿಸಲಾಗದುದು. ಸಮಾನತೆ ಎಂಬುದು ಸೌಭ್ರಾತೃತ್ವದಿಂದ ಬೇರ್ಪಡಿಸಲಾಗದುದು. ಸಮಾನತೆಯನ್ನು ಕಳೆದುಕೊಂಡ ಸ್ವಾತಂತ್ರವೆಂಬುದು ಬಹುಸಂಖ್ಯಾತರ ಮೇಲೆ ಕೇವಲ ಕೆಲವೇ ಮಂದಿಗೆ ಅಧಿಕಾರವನ್ನು ನೀಡುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಆದುದರಿಂದಲೇ, ಬ್ರಿಟಿಷರು ತೊಲಗಿದಾಕ್ಷಣ ಭಾರತಕ್ಕೆ ಸ್ವಾತಂತ್ರ ಸಿಗುತ್ತದೆ ಎನ್ನುವುದರ ಕುರಿತಂತೆ ಅವರು ಸಂಶಯವನ್ನು ಹೊಂದಿದ್ದರು. ಅಂಬೇಡ್ಕರ್ ಸಂವಿಧಾನದಲ್ಲಿ ಪ್ರಕಟಪಡಿಸಿರುವ ಸಾಮಾಜಿಕ ನ್ಯಾಯದ ಆಶಯಗಳನ್ನು ಇಟ್ಟುಕೊಂಡು ಅವರ ಚಿಂತನೆಗಳನ್ನು ತೆರೆದಿಡಲಾಗಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ದೃಷ್ಟಿಯಲ್ಲಿ ಸ್ವಾತಂತ್ರ, ಸಮಾನತೆ, ಭ್ರಾತೃತ್ವ, ಸಂವಿಧಾನ-ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳು, ಸ್ವಾತಂತ್ರಹಕ್ಕುಗಳು, 17 ನೇ ವಿಧಿ, ಹಿಂದೂಕೋಡ್ ಬಿಲ್ ಮೊದಲಾದ ಅಧ್ಯಾಯಗಳ ಮೂಲಕ ಸಾಮಾಜಿಕ ನ್ಯಾಯದ ವಿವಿಧ ನೆಲೆಗಳನ್ನು ಚರ್ಚಿಸಲಾಗಿದೆ. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಣೆಯೂ ಸಾಮಾಜಿಕ ನ್ಯಾಯದ ಭಾಗವೇ ಆಗಿತ್ತು
ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 95. ಕೃತಿಯ ಮುಖಬೆಲೆ 70 ರೂ.