ಮತಾಂತರದ ನೆಪದಲ್ಲಿ ಮಕ್ಕಳಿಗೆ ಹಿಂಸೆ
ಭಾಗ-1
ಪೊಲೀಸರು ಇನ್ನಷ್ಟೇ ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಬೇಕಾಗಿದೆ ಎಂದು ಸರಕಾರಿ ರೈಲ್ವೆ ಪೊಲೀಸ್ ಅಧಿಕಾರಿ ಕೆ.ಎಲ್.ವಾರ್ಕಡೆ ಹೇಳಿದ್ದಾರೆ. ಮತೇರಾ ಮತ್ತು ಫ್ರಾನ್ಸಿಸ್ ಮತ್ತು ಮಕ್ಕಳ ಹಲವು ಪೋಷಕರು ಹಾಗೂ ಮಕ್ಕಳು ಕೂಡಾ - ತಮ್ಮದು ಅಪಹರಣ ಮತ್ತು ಅಕ್ರಮ ಮತಾಂತರದ ಪ್ರಕರಣವೇ ಅಲ್ಲ ಎಂದಿದ್ದಾರೆ. ಹಾಗಾದರೆ ನಿಜವಾಗಿಯೂ ನಡೆದದ್ದೇನು?
ಕಳೆದ ವಾರ ಇಂದೋರ್ನ ವಕೀಲರೊಬ್ಬರ ಕಚೇರಿಯಲ್ಲಿ 5ರ ಹರೆಯದ ಹೆಣ್ಣು ಮಗುವೊಂದು ತಾನು ಒಂದು ಪೊಲೀಸ್ಠಾಣೆಯಲ್ಲಿ ಮತ್ತು ಸರಕಾರದ ಒಂದು ಬಾಲಾಶ್ರಮದಲ್ಲಿ ಕಳೆದ ಸಮಯವನ್ನು ನೆನಪಿಸಿಕೊಳ್ಳುವಾಗ, ಆ ಮಗುವಿನ ಪಕ್ಕದಲ್ಲಿದ್ದ, ಆಕೆಗಿಂತ ಸ್ವಲ್ಪ ದೊಡ್ಡ ಹುಡುಗ, ಅವಳನ್ನು ತನ್ನ ತೋಳುಗಳಲ್ಲಿ ರಕ್ಷಣಾತ್ಮಕವಾಗಿ ಹಿಡಿದುಕೊಂಡಿದ್ದ. ಆ ಮಗುವನ್ನು ಸಂತೈಸುತ್ತ, ‘‘ನಮಗೆ ಕೆಟ್ಟದೇನೂ ಆಗಲಿಲ್ಲ. ನಾವು ನಿಜವಾಗಿ ಮುಂಬೈ ತಲುಪಿದೆವು’’ ಎಂದ.
ಅಕ್ಟೋಬರ್ 23ರಂದು, ಮಧ್ಯಪ್ರದೇಶದ ಅತ್ಯಂತ ದೊಡ್ಡ ನಗರ ಇಂದೋರನ್ನು ಮುಂಬೈಗೆ ಜೋಡಿಸುವ ಅವಂತಿಕಾ ಎಕ್ಸ್ಪ್ರೆಸ್ನಲ್ಲಿ ಕುಳಿತು ಆ ಮಕ್ಕಳು ಮುಂಬೈಗೆ ಹೊರಟಿದ್ದವು. 5ರಿಂದ 17ರ ಹರೆಯದ ನಡುವಣ ವಯಸ್ಸಿನ 7 ಮಂದಿ ಮಕ್ಕಳು ಅಲ್ಲಿದ್ದರು. ಅವರೆಲ್ಲ ಇಂದೋರ್ನ ಕ್ರಿಶ್ಚಿಯನ್ ಕಾಲನಿ ಎಂಬ ಪ್ರದೇಶಕ್ಕೆ ಸೇರಿದ ಕೆಳಮಧ್ಯಮ ವರ್ಗದ ಮಕ್ಕಳು. ಆ ಮಕ್ಕಳ ಕುಟುಂಬಗಳಲ್ಲಿ ಕೆಲವು ಕುಟುಂಬಗಳು ‘‘ಇಂಡಿಪೆಂಡೆಂಟ್ ಕ್ರಿಶ್ಚಿಯನ್ಸ್’’ ಎಂಬ ಒಂದು ಚಿಕ್ಕ ಸಮುದಾಯಕ್ಕೆ ಸೇರಿದವರು. ಅವರು ಬೈಬಲ್ನಲ್ಲಿ ನಂಬಿಕೆ ಇಡುವವರಾದರೂ, ಯಾವುದೇ ಚರ್ಚ್ಗೆ ಸೇರಿರದ ನಾನ್ ಡಿನೋಮಿನೇಶನಲ್ ಕ್ರಿಶ್ಚಿಯನ್ನರು. ಶಾಲೆಗಳಿಗೆ ನೀಡಲಾಗಿದ್ದ ದೀಪಾವಳಿ ರಜೆಯನ್ನು ಬಳಸಿಕೊಳ್ಳಲು ಈ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಮುಂಬೈಯಲ್ಲಿ ನಡೆಯುವ ಬೈಬಲ್ ವಾಚಕದ ಒಂದು ತರಗತಿಗೆ ಕಳುಹಿಸಲು ನಿರ್ಧರಿಸಿದ್ದರು. ತುಂಬ ಧಾರ್ಮಿಕರಾದ ಒಬ್ಬ ನಿವೃತ್ತ ಶಿಕ್ಷಕಿ ಅನಿತಾ ಫ್ರಾನ್ಸಿಸ್ ಈ ಮಕ್ಕಳ ಮಾರ್ಗದರ್ಶಿಯಾಗಿದ್ದರು. ಅಕ್ಟೋಬರ್ 23ರ ಸಂಜೆ ಸುಮಾರು 4 ಗಂಟೆಗೆ ಅವರ ತಂಡ ಟ್ರೈನ್ ಹತ್ತಿತು. ಅವರು ತಮ್ಮ ಸೀಟುಗಳಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಹಿಂದೂ ಜಾಗರಣಾ ಮಂಚ್ನ ಒಂದು ದೊಡ್ಡ ಗುಂಪು ಅವರನ್ನು ಸುತ್ತುವರಿಯಿತು . ‘‘ನಾವ್ಯಾಕೆ ಮುಂಬೈಗೆ ಹೋಗುತ್ತಿದ್ದೇವೆ ಮತ್ತು ಈ ಮಕ್ಕಳನ್ನು ಮತಾಂತರಿಸಲು ನಮಗೆ ಎಷ್ಟು ಹಣ ನೀಡಲಾಗಿದೆ ಎಂದು ಅವರು ಕೇಳಿದರು. ನಾವೆಲ್ಲರೂ ಕ್ರಿಶ್ಚಿಯನ್ನರೆಂದು ಹೇಳಿದಾಗ ಅವರು ನಮ್ಮನ್ನು ನಂಬಲಿಲ್ಲ’’ ಎಂದಿದ್ದಾರೆ ಫ್ರಾನ್ಸಿಸ್.
ಹಿಂದೂ ಜಾಗರಣಾ ಮಂಚ್ನ ಕಾರ್ಯಕರ್ತರು ಆ ಮಕ್ಕಳನ್ನು ಟ್ರೈನ್ನಿಂದ ಹೊರಗೆ ಕರೆ ತಂದು ರೈಲು ನಿಲ್ದಾಣದ ಪೊಲೀಸ್ ಠಾಣೆಗೆ ಒಯ್ಯುತ್ತಿದ್ದಂತೆ ಮಕ್ಕಳು ಅಳಲಾರಂಭಿಸಿದರು. ಪೊಲೀಸ್ಠಾಣೆಯಲ್ಲಿ ಒಂದು ಗಲಾಟೆ ನಡೆಯಲಿದೆ ಎಂದು ಮಾಧ್ಯಮದ ಮಂದಿಗೆ ಮೊದಲೇ ಸೂಚನೆ ನೀಡಲಾಗಿತ್ತಾದ್ದರಿಂದ ಅವರು ಅದಾಗಲೇ ಅಲ್ಲಿ ಕಾಯುತ್ತಿದ್ದರು. ಅಲ್ಲಿ ನಡೆದ ಘರ್ಷಣೆಯಲ್ಲಿ ಒಬ್ಬ ಹುಡುಗನ ಕಾಲಿಗೆ ಏಟು ಬಿತ್ತು. ಕಾರ್ಯಕರ್ತರ ಗುಂಪು ತಮಗೆ ತೊಂದರೆ ಮಾಡದಂತೆ ಪೊಲೀಸರು ತಡೆಯಲಿಲ್ಲ ಎಂದು ಆ ಹುಡುಗ ಹೇಳಿದನು.
ರೈಲಿನಿಂದ ಕೆಳಗಿಳಿಸಿದರು:
ತನ್ನ 5 ವರ್ಷದ ಮಗಳನ್ನು ರೈಲಿನಿಂದ ಕೆಳಗಿಳಿಸಿ ಪೊಲೀಸರು ಕರೆದುಕೊಂಡು ಹೋದರೆಂದು ಸಂಜೆ ಸುಮಾರು 4:30ರ ವೇಳೆಗೆ ನೆರಮನೆಯವರೊಬ್ಬರು ಫೋನ್ ಮಾಡಿ ತಿಳಿಸಿದಾಗ ಸಮಿರಾ ಸುನ್ನಾ ಮನೆಯಲ್ಲಿಯೇ ಇದ್ದರು. ತಕ್ಷಣ ಆಕೆ ಪೊಲೀಸ್ಠಾಣೆಗೆ ಧಾವಿಸಿದರು. ಹೀಗೆಯೇ ಮಕ್ಕಳ ತಂಡದಲ್ಲಿದ್ದ ಇನ್ನೊಬ್ಬ ಹುಡುಗನ ತಾಯಿ ಸೂಫಿ ಚೋಹನ್ ಮತ್ತು ಮುಂಬೈಗೆ ಪ್ರಯಾಣಿಸುತ್ತಿದ್ದ ಮೂರು ಮಕ್ಕಳ ತಂದೆ ಡೆನಿಸ್ ಮೈಕೇಲ್ ಕೂಡ ಠಾಣೆಗೆ ಧಾವಿಸಿದರು.
ಅಲ್ಲಿಗೆ ಹೋದಾಗ ಅವರನ್ನು ಕೋಣೆಯೊಂದರೊಳಗೆ ಕೂಡಿ ಹಾಕಲಾಯಿತು. ಕಿಟಕಿಯಿಂದ ಹೊರಗೆ ಇಣುಕಿ ನೋಡಿದಾಗ ಹಿಂದೂ ಜಾಗರಣಾ ಮಂಚ್ನ ಕಾರ್ಯಕರ್ತರು ಅವರನ್ನು ತರಾಟೆಗೆ ತೆಗೆದುಕೊಂಡು ಕಿರುಚುತ್ತಿದ್ದರು. ಅಂತಿಮವಾಗಿ 7 ಗಂಟೆ ಸುಮಾರಿಗೆ ಆ ಮಕ್ಕಳನ್ನು ಟಾಯ್ಲೆಟ್ಗೆ ಕರೆದೊಯ್ಯುವಾಗ ಅವರಿಗೆ ಒಂದು ಕ್ಷಣ ಅವರ ಮಕ್ಕಳ ಮುಖದರ್ಶನವಾಯಿತು.
ರಾತ್ರಿ 11 ಗಂಟೆ ವೇಳೆಗೆ ಪೋಷಕರನ್ನು ಹೊರಗೆ ಕಳುಹಿಸಿದಾಗ ಪೊಲೀಸರು ಅದಾಗಲೇ ಮಕ್ಕಳನ್ನು ಎಲ್ಲಿಗೋ ಕರೆದೊಯ್ದಿದ್ದರು. ಎಲ್ಲಿಗೆ ಎಂದು ಹೇಳಲು ಅವರು ನಿರಾಕರಿಸಿದರು. ಪೋಷಕರು ಗಲಿಬಿಲಿಗೊಂಡರು. ತಾವು ಮುಂದೇನು ಮಾಡಬೇಕೆಂದು ಅವರಿಗೆ ತಿಳಿಯದಾಯಿತು. ಅವರು ರೈಲು ನಿಲ್ದಾಣ ಸಮೀಪವಿದ್ದ ಒಂದು ಸರಕಾರಿ ಆಶ್ರಯ ಗೃಹಕ್ಕೆ ಹೋದರು. ಅಲ್ಲಿ ಅವರನ್ನು ಒಳಗೆ ಹೋಗದಂತೆ ತಡೆಯಲಾಯಿತು. ತಂಡದಲ್ಲಿದ್ದ ಹುಡುಗಿಯರನ್ನು ಅಲ್ಲಿಯೇ ಇಡಲಾಗಿತ್ತೆಂದು ಅವರಿಗೆ ಆ ಬಳಿಕ ತಿಳಿಯಿತು. ಹುಡುಗರನ್ನು ನಗರದ ಹೊರವಲಯದಲ್ಲಿರುವ ಅನಾಥಾಲಯವೊಂದಕ್ಕೆ ಕರೆದೊಯ್ಯಲಾಗಿತ್ತು.
ಆತಂಕ, ಭಯ, ತೀವ್ರ ಹುಡುಕಾಟ
ಮರುದಿನ ಬೆಳಗ್ಗೆ ವರ್ತಮಾನ ಪತ್ರಿಕೆಗಳನ್ನು ನೋಡಿದಾಗ ನಗರದ ಕ್ರಿಶ್ಚಿಯನ್ ಸಮುದಾಯಕ್ಕೆ ಸುದ್ದಿ ತಿಳಿಯಿತು. ಸಮುದಾಯದ ಕೆಲವು ನಾಯಕರು, ಮಕ್ಕಳ ಪೋಷಕರನ್ನು ಹುಡುಕಲು ಹೊರಟರು. ಪೋಷಕರನ್ನು ಸಂಪರ್ಕಿಸಲು ಅವರಿಗೆ ಒಂದು ದಿನ ಬೇಕಾಯಿತು.
ಇಂದೋರ್ನ ಓರ್ವ ಮಾನವ ಹಕ್ಕುಗಳ ವಕೀಲ ಕೆ.ಪಿ. ಗಂಗೋರ್, ಮತಾಂತರದ ಇನ್ನೊಂದು ಪ್ರಕರಣದಲ್ಲಿ ಕ್ರಿಶ್ಚಿಯನ್ ಕುಟುಂಬಗಳ ಪರವಾಗಿ ಅದಾಗಲೇ ವಾದಿಸುತ್ತಿದ್ದವರು, ಈ ಪ್ರಕರಣವನ್ನೂ ಕೈಗೆತ್ತಿಕೊಳ್ಳಲು ಒಪ್ಪಿದರು. ಪೋಷಕರ ಪರವಾಗಿ ಮಧ್ಯಪ್ರದೇಶದ ಹೈಕೋರ್ಟ್ನಲ್ಲಿ ಅವರು ಹೇಬಿಯಸ್ ಅರ್ಜಿಯೊಂದನ್ನು ಸಲ್ಲಿಸಿದರು. ಈ ಅರ್ಜಿಯ ಪ್ರಕಾರ ಸಂಬಂಧಿತ ಅಧಿಕಾರಿಗಳು ತಾವು ಬಂಧನದಲ್ಲಿಟ್ಟಿರುವವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾಗುತ್ತದೆ.
ಮಕ್ಕಳನ್ನು ಕಸ್ಟಡಿಗೆ ತೆಗೆದುಕೊಂಡ ಒಂದು ವಾರದ ಬಳಿಕ ಅಕ್ಟೋಬರ್ 30ರಂದು ಒಂದು ನಾಟಕೀಯ ವಿಚಾರಣೆಯಲ್ಲಿ ಮಕ್ಕಳು ನ್ಯಾಯಾಲಯದಲ್ಲಿ ಕಾಣಿಸಿಕೊಂಡರು. ನ್ಯಾಯಾಧೀಶರು ಪ್ರತಿಯೊಂದು ಮಗುವಿನೊಡನೆಯೂ ಅದು ಯಾರ ವಶದಲ್ಲಿರಲು ಬಯಸುತ್ತದೆಂದು ಕೇಳಿದಾಗ, ಎಲ್ಲ ಮಕ್ಕಳೂ ತಾವು ಪೋಷಕರ ವಶದಲ್ಲೇ ಇರಲು ಬಯಸುವುದಾಗಿ ಹೇಳಿದರು. ನ್ಯಾಯಾಲಯವು ಆ ಮಕ್ಕಳ ಬಿಡುಗಡೆಗೆ ಆದೇಶ ನೀಡಿತು. ಮಕ್ಕಳ ಕಣ್ಣಲ್ಲಿ ಕಣ್ಣೀರು, ಪೋಷಕರ ಸಂತಸದ ಚಪ್ಪಾಳೆಯ ನಡುವೆ ಮಕ್ಕಳು ಪೋಷಕರ ಮಡಿಲು ಸೇರಿದವು.
ಮಕ್ಕಳು ಪೋಷಕರನ್ನು ಸೇರಿದ ಮರುದಿನ ವರ್ತಮಾನ ಪತ್ರಿಕೆಗಳಲ್ಲಿ ಅದು ಮುಖಪುಟದ ದೊಡ್ಡ ಸುದ್ದಿಯಾಯಿತು.
ಅದು ಮತಾಂತರವೇ?
ಮಕ್ಕಳ ಬಿಡುಗಡೆಯಾಯಿತಾದರೂ, ಅನಿತಾ ಫ್ರಾನ್ಸಿಸ್ ಮತ್ತು 53ರ ಹರೆಯದ ಬಂಧಿತರಾಗಿದ್ದ ಅವರ ಸಹೋದರ ಅಮೃತ್ಕುಮಾರ್ ಮತೇರಾ ಹತ್ತು ದಿನಗಳ ಕಾಲ ಜೈಲಿನಲ್ಲಿರಬೇಕಾಯಿತು. ಮೊದಲ ಮಾಹಿತಿ ವರದಿ (ಎಫ್ಐಆರ್)ಯಲ್ಲಿ ಅವರ ಮೇಲೆ ಮಕ್ಕಳನ್ನು ಅಕ್ರಮವಾಗಿ ಅಪಹರಿಸಿ ಮತಾಂತರ ಮಾಡಿದ ಆಪಾದನೆ ಹೊರಿಸಲಾಗಿತ್ತು. ಹೈಕೋರ್ಟ್ ಹೇಬಿಯಸ್ ಕಾರ್ಪಸ್ನಲ್ಲಿ ನೀಡಿದ ತೀರ್ಪಿನ ಬಳಿಕವೂ ನವೆಂಬರ್ 3ರಂದು, ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಪೊಲೀಸರು ಇನ್ನಷ್ಟೆ ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಬೇಕಾಗಿದೆ ಎಂದು ಸರಕಾರಿ ರೈಲ್ವೆ ಪೊಲೀಸ್ ಅಧಿಕಾರಿ ಕೆ.ಎಲ್.ವಾರ್ಕಡೆ ಹೇಳಿದ್ದಾರೆ. ಮತೇರಾ ಮತ್ತು ಫ್ರಾನ್ಸಿಸ್ ಮತ್ತು ಮಕ್ಕಳ ಹಲವು ಪೋಷಕರು ಹಾಗೂ ಮಕ್ಕಳು ಕೂಡಾ - ತಮ್ಮದು ಅಪಹರಣ ಮತ್ತು ಅಕ್ರಮ ಮತಾಂತರದ ಪ್ರಕರಣವೇ ಅಲ್ಲ ಎಂದಿದ್ದಾರೆ.ಹಾಗಾದರೆ ನಿಜವಾಗಿಯೂ ನಡೆದದ್ದೇನು?