ಬಯಲು ಬಹಿರ್ದೆಸೆ ಮುಕ್ತಿ ಎಂದು?
ತನ್ನ ಮಲವನ್ನು ತಾನೇ ತಿಂದು ಬದುಕುವ ಜಗತ್ತಿನ ಏಕೈಕ ಪ್ರಾಣಿ ಯಾವುದು ಎಂದು ಕೇಳಿದರೆ ನಾಯಿ, ಹಂದಿ ಇತ್ಯಾದಿ ಎಂದು ಹೆಚ್ಚಿನವರು ಉತ್ತರಿಸಬಹುದು. ಆದರೆ ಇದಕ್ಕೆ ನಿಖರವಾದ ಉತ್ತರ ಮಾನವ. ಆಶ್ಚರ್ಯವಾಗುತ್ತಿದೆಯೇ ಹಂದಿ ಮತ್ತು ನಾಯಿ ಮನುಷ್ಯನ ಮಲವನ್ನು ತಿನ್ನುತ್ತದೆಯೇ ಹೊರತು ತನ್ನ ಮಲವನ್ನು ತಿನ್ನುವುದಿಲ್ಲ. ಆದರೆ ಮಾನವ ಬಯಲಿನಲ್ಲಿ ಮಲ ವಿಸರ್ಜನೆ ಮಾಡುವ ಪರಿಣಾಮ ಗಾಳಿ, ನೀರು, ಮಣ್ಣು ಮತ್ತು ಆಹಾರದ ಮೂಲಕ ದಿನವೊಂದಕ್ಕೆ ಒಂದರಿಂದ ಒಂದೂವರೆ ಚಮಚ ಮಲವನ್ನು ತನ್ನ ಅರಿವಿಗೆ ಬಾರದಂತೆ ತಾನೇ ತಿನ್ನುತ್ತಿದ್ದಾನೆ. ಒಂದು ನೊಣ ಒಮ್ಮೆ ಮಲದ ಮೇಲೆ ಕುಳಿತರೆ ಆರು ಮಿಲಿಯಷ್ಟು ಮಲವನ್ನು ನಮ್ಮ ಮನೆಗೆ ರವಾನೆ ಮಾಡುತ್ತದೆ (ಸಿ.ಎಲ್.ಟಿ.ಎಸ್. ಸಮೀಕ್ಷೆ ಪ್ರಕಾರ). ಅದು ನಮ್ಮ ದೇಹವನ್ನು ಸೇರುವ ಎಲ್ಲಾ ವಸ್ತುಗಳ ಮೇಲೂ ಪಾದಾರ್ಪಣೆ ಮಾಡುತ್ತದೆ. ಹೀಗೆ ನೆನೆಸಿಕೊಳ್ಳಿ ನೊಣವಿಲ್ಲದ ಮನೆ ಯಾವುದಾದರೂ ಇದೆಯಾ?
ವಿಶ್ವ ಮಕ್ಕಳ ಸಂರಕ್ಷಣಾ ಸಂಸ್ಥೆಯು ಇನ್ನೊಂದು ಪ್ರಶ್ನೆಯನ್ನು ಕೇಳುತ್ತದೆ. ಅದೆಂದರೆ ಜಗತ್ತಿನಲ್ಲಿ ಅತಿದೊಡ್ಡ ಭಯೋತ್ಪಾದನೆ ಯಾವುದು? ನೀವು ದೊಡ್ಡ ದೊಡ್ಡ ಉಗ್ರಗಾಮಿ ಸಂಘಟನೆಗಳನ್ನು ಹೆಸರಿಸಲು ಪ್ರಯತ್ನಿಸಬಹುದು. ಅದರೆ ಜಗತ್ತಿನ, ಅದರಲ್ಲೂ ಭಾರತದ ಬಹುದೊಡ್ಡ ಭಯೋತ್ಪಾದನೆ ಎಂದರೆ ಬಯಲು ಬಹಿರ್ದೆಸೆಯ ಸಮಸ್ಯೆಯಾಗಿದೆ. ಭಯೋತ್ಪಾದಕರ ಉಗ್ರ ಸಂಘಟನೆಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿನ ತಮ್ಮ ವೈರಿ ಬಣಗಳನ್ನು ಮಾತ್ರ ತೊಂದರೆಗೆ ಒಳಗಾಗಿಸುತ್ತವೆ. ಆದರೆ ಬಯಲು ಬಹಿರ್ದೆಸೆಯ ಕಾರಣದಿಂದ ಪ್ರತಿನಿತ್ಯ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ನೂರಾರು ಮಹಿಳೆಯರ ಗರ್ಭಪಾತ ಪ್ರಕರಣ ಸಂಭವಿಸುತ್ತಿವೆ, ಹಲವಾರು ಬಾಣಂತಿಯರ ಮಾರಣಹೋಮ ನಡೆಯುತ್ತಿವೆ. ಇದು ಅತ್ಯಂತ ಆಘಾತಕಾರಿ ಅಂಶ. ಇದು ಯಾವ ಭಯೋತ್ಪಾದನಾ ಸಂಘಟನೆಯೂ ತೆಗೆದುಕೊಳ್ಳಲಾರದಷ್ಟು ಬಲಿಯನ್ನು ತೆಗೆದುಕೊಳ್ಳುತ್ತಿದೆ.
ಬಯಲು ಬಹಿರ್ದೆಸೆ ವಿಚಾರದಲ್ಲಿ ಬೆಕ್ಕನ್ನು ನಮ್ಮ ಜನಪದರು ಅತ್ಯಂತ ಪ್ರಜ್ಞೆಯುಳ್ಳ ಪ್ರಾಣಿ ಎಂದು ಗುರುತಿಸಿದ್ದಾರೆ. ಇದು ಇಂದಿನ ವೈಜ್ಞಾನಿಕ ಯುಗದಲ್ಲಿ ಬದುಕುತ್ತಿರುವ ಮಾನವ, ಬೆಕ್ಕಿಗಿಂತ ಪ್ರಜ್ಞಾಹೀನನಾಗಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದೆ. ಬೆಕ್ಕು ಕಕ್ಕಸು ಮಾಡಿ ತನ್ನ ಕಕ್ಕಸಿನ ಮೇಲೆ ತಾನೇ ಮಣ್ಣು ಮುಚ್ಚುತ್ತದೆ. ಮತ್ತೆ ಅದನ್ನು ಮೂಸಿ ನೋಡಿ ಎಲ್ಲಿಯವರೆಗೆ ವಾಸನೆ ಕೊನೆಗೊಳ್ಳುತ್ತದೋ ಅಲ್ಲಿಯವರೆಗೂ ಮಣ್ಣನ್ನು ಮುಚ್ಚುತ್ತದೆ. ಅದರ ಅರ್ಥ ತನ್ನ ಕಕ್ಕಸಿನಿಂದ ಉಂಟಾಗುವ ಪ್ರಾಕೃತಿಕ ಹಾನಿಯನ್ನು ತಡೆಯುವುದಾಗಿದೆ. ಇಲ್ಲಿ ನಮಗೆ ಬೆಕ್ಕಿನ ಪ್ರಜ್ಞೆ ಮೂಡಬೇಕಿದೆ. ಒಬ್ಬ ಮನುಷ್ಯ ಒಂದು ವೇಳೆಗೆ ಕನಿಷ್ಠ 250 ಗ್ರಾಂ ಮಲ ವಿಸರ್ಜನೆ ಮಾಡಿದರೆ ಅವನ ಜೀವಿತದ ಅವಧಿಯಲ್ಲಿ (60 ವರ್ಷಕ್ಕೆ) 7 ಸಾವಿರ ಕೆ.ಜಿ. ಆಗುತ್ತದೆ. ಎರಡು ಸಾವಿರ ಜನಸಂಖ್ಯೆ ವಾಸಿಸುವ ಒಂದು ಗ್ರಾಮದಲ್ಲಿ ಒಂದು ದಿನಕ್ಕೆ 500 ಕೆ.ಜಿ. ಮಲವು ಪ್ರಕೃತಿಯಲ್ಲಿ ಸೇರುವುದರಿಂದ ಉಂಟಾಗುವ ಹಾನಿಯನ್ನು ಊಹಿಸಲೂ ಸಾಧ್ಯವಿಲ್ಲ. (ಸಿ.ಎಲ್.ಟಿ.ಎಸ್. ಸಂಸ್ಥೆ ವರದಿಯಂತೆ)
ಒಬ್ಬ ಮನುಷ್ಯ ಸತ್ತರೆ ಅವನ ಹೆಣಕ್ಕೊಂದು ಸಂಸ್ಕಾರವಿದೆ. ಅದು ಸುಡುವುದರ ಮೂಲಕವೂ ಇಲ್ಲ ಹೂಳುವುದರ ಮೂಲಕವೂ ನಡೆಯತ್ತದೆ. ಹಾಗೆಯೇ ಮಾನವನ ಮಲಕ್ಕೂ ಒಂದು ಸಂಸ್ಕಾರ ಇರಬೇಕಾಗಿದೆ. ಆ ನಿಟ್ಟಿನಲ್ಲಿ ಇನ್ನೂ ಕೂಡ ನಾವು ಚಿಂತಿಸುತ್ತಿಲ್ಲ. ಮನುಷ್ಯನ ಅಸ್ತಿಗೆ ಒಂದು ಗೌರವ ವಿಸರ್ಜನೆಯಿದೆ ಹಾಗೆ ನಾವೂ ಕೂಡ ಮಲವನ್ನು ಗೌರವದಿಂದ ವಿಸರ್ಜಸಬೇಕಿದೆ. ಇಲ್ಲಿ ಗೌರವ ಇರಬೇಕಿರುವುದು ಮಲಕ್ಕಲ್ಲದಿದ್ದರೂ ಅದನ್ನು ವಿಸರ್ಜಿಸುವ ಸ್ಥಳಕ್ಕೆ.
ಪ್ರತೀ ಊರಿನ ಹೆಬ್ಬಾಗಿಲುಗಳು, ನಮ್ಮ ಊರಿನ ರಸ್ತೆಯ ಬದುಗಳು, ಕೆರೆಕಟ್ಟೆಯ ಮೈದಾನಗಳು, ಹಿತ್ತಿಲು, ಮನೆಯ ಅಕ್ಕಪಕ್ಕದ ಖಾಲಿ ನಿವೇಶನಗಳು, ಬೇಲಿ, ಗುತ್ತಿ, ಗಿಡಗಂಟಿಯ ಪೊದೆಗಳು ಗೌರವ ಮಲವಿಸರ್ಜನೆಗೆ ಪೂರಕ ಸ್ಥಳಗಳಲ್ಲ. ಇವು ಮಾನಹಾನಿಯ ಮೂಲಗಳು. ಅನಾದಿಕಾಲದಿಂದಲೂ ಬಯಲು ಬಹಿರ್ದೆಸೆ ನಮ್ಮ ಬದುಕಿನ ಸಂಸ್ಕೃತಿಯ ಒಂದು ಭಾಗವಾಗಿದೆ. ಯಾಕೆಂದರೆ, ಅದನ್ನು ನಾವು ಒಪ್ಪಿಕೊಂಡಿದ್ದೇವೆ. ನಾವು ಯಾವುದನ್ನು ಒಪ್ಪಿಕೊಳ್ಳುತ್ತೇವೋ ಅದು ನಮ್ಮ ಸಂಸ್ಕೃತಿಯಾಗಿ ಬಿಡುತ್ತದೆ. ಆದರೆ ಇಂದು ನಾವಿದನ್ನು ಕೆಟ್ಟ ಸಂಸ್ಕೃತಿ ಎಂದು ಪರಿಗಣಿಸಿ ಬಯಲು ಬಹಿರ್ದೆಸೆಯನ್ನು ಒಪ್ಪಿಕೊಳ್ಳದೆ ನಿಲ್ಲಿಸಿದರೆ ಆ ಸಂಸ್ಕೃತಿ ನಾಶವಾಗುತ್ತದೆ. ಆ ಮೂಲಕ ಈ ಸಂಸ್ಕೃತಿಯನ್ನು ಬಹಿಷ್ಕರಿಸಬೇಕಿದೆ.
ಏಕೆಂದರೆ ಈ ಬಹಿಷ್ಕರಣದ ಹಿಂದೆ ಒಂದು ಹೆಣ್ಣಿನ ಸಹಿಸಲಸಾಧ್ಯವಾದ ನೋವುಗಳಿವೆ. ಮುಕ್ತವಾಗಿ ಹೇಳಿಕೊಳ್ಳಲಾಗದ ಆಕೆಯ ವೇದನೆಗಳಿವೆ. ನಮ್ಮ ಮನೆಯ ವಯಸ್ಸಿಗೆ ಬಂದ ಹೆಣ್ಣು ಮಗುವಿನ ಗೌರವ ಅಡಗಿದೆ, ನಮ್ಮ ತಾಯಿ, ತಂಗಿ, ಅಕ್ಕ, ಅತ್ತಿಗೆಯ ಮಾನದ ಸಂರಕ್ಷಣೆಯೂ ಅಡಗಿದೆ. ಮುಂಜಾನೆಯ ಸೂರ್ಯ ಕಣ್ಣು ತೆರೆಯುವ ಮೊದಲು ಮುಸ್ಸಂಜೆ ಸೂರ್ಯ ಕಣ್ಣು ಮುಚ್ಚಿದ ನಂತರದ ಗಳಿಗೆಗಳಿಗಾಗಿ ಕಾದು ಕೂರುವ ಹೆಣ್ಣು ಮಕ್ಕಳ ರೋದನೆ ಅಡಗಿದೆ. ನಮ್ಮ ಮಕ್ಕಳ ಬದುಕು, ಆರೋಗ್ಯ ಅಡಗಿದೆ. ನಾವು ಬದಲಾಗಬೇಕಿದೆ. ನಮ್ಮ ಮನೆಯ ಪ್ರತಿಯೊಬ್ಬ ಹೆಣ್ಣು ಮಗಳ ಗೌರವಕ್ಕಾಗಿ ಬದಲಾಗಬೇಕಿದೆ. ಆ ಮೂಲಕ ನಮ್ಮ ಊರಿನ, ನಮ್ಮ ದೇಶದ ಗೌರವಕ್ಕಾಗಿ ಬದಲಾಗಬೇಕಿದೆ. ಮುಂದಿನ ಪೀಳಿಗೆಗೆ ತಾಜಾ ಪ್ರಕೃತಿಯನ್ನು ಸಂರಕ್ಷಿಸಲು ನಾವು ಬದಲಾಗಬೇಕಿದೆ.
ಶೌಚಾಲಯ ನಿರ್ಮಾಣದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಚರ್ಚಿಸಿದಾಗ ಕೆಲವರು ಹಣದ ಸಮಸ್ಯೆ, ಜಾಗದ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ, ಹಣದ ಸಮಸ್ಯೆ ಎಂದವರಿಗೆ ನಿಮ್ಮ ಮನೆಯಲ್ಲಿ ಎಷ್ಟು ಮೊಬೈಲ್ಗಳಿವೆ ಎಂದು ಪ್ರಶ್ನೆ ಕೇಳಿದರೆ ಮೂರ್ನಾಲ್ಕು ಎನ್ನುತ್ತಾರೆ. ಟಿವಿ, ಬೈಕ್, ಚಿನ್ನಾಭರಣ ಇದೆ. ಹಾಗಾದರೆ ಶೌಚಾಲಯ ಯಾಕಿಲ್ಲ ಅಂದರೆ ಮುಗುಳುನಗೆ ಬಿರುತ್ತಾರೆ. ಶೌಚಾಲಯ ನಮಗೆ ಅತ್ಯಂತ ಮೂಲಭೂತ ಅತ್ಯವಶ್ಯಕ ಅನ್ನುವ ಅರಿವು ಅವರಿಗಿಲ್ಲ. ಜಾಗದ ಸಮಸ್ಯೆ ಇದ್ದವರನ್ನು ಮನೆ ಇದೆಯಾ? ಕೊಟ್ಟಿಗೆ ಇದೆಯಾ? ಶೌಚಾಲಯ ಯಾಕಿಲ್ಲ? ಎಂದು ಪ್ರಶ್ನಿಸಿದರೆ ನಗುತ್ತಾರೆ.
ಅಂದರೆ ಇಲ್ಲಿ ಶೌಚಾಲಯ ಕಟ್ಟಲು ಬೇಕಿರುವುದು ಜಾಗವಲ್ಲ ಮನಸ್ಸು. ಸರಕಾರ ಸಹಾಯ ಧನವನ್ನು ನೀಡುತ್ತದೆ. ಆದರೆ ಸರಕಾರದ ಸಹಾಯಧನಕ್ಕಾಗಿಯೇ ಮುಷ್ಕರ ಹೂಡಿ ಕಾದು ಕೂರುವುದು ಎಷ್ಡು ಸರಿ? ನಮ್ಮ ಮನೆಯ ಗೌರವವನ್ನು ಸರಕಾರ ನೀಡುವ ಸಬ್ಸಿಡಿಗಾಗಿ ಕಾಯ್ದಿದಿರಿಸುವುದು ಎಷ್ಡು ಸರಿ? ಈಗ ನಮ್ಮ ಅರಿವಿಗೆ ಬರಬೇಕಿದ್ದು ನಮಗೆ ಅವಶ್ಯವಿರುವ ಎಲೆಕ್ಟ್ರಾನಿಕ್ ವಸ್ತುಗಳಿಗಿಂತ ಒಂದು ಶೌಚಾಲಯ ನಮ್ಮ ಗೌರವನ್ನು ಹೆಚ್ಚಿಸುತ್ತದೆ ಎಂಬುದು. ಹಾಗೆ ನೋಡಿದರೆ ಸಬ್ಸಿಡಿಯಿಂದ ಕಟ್ಟಿದ ಎಷ್ಟೊ ಶೌಚಾಲಯಗಳು ಇಂದು ಕೋಳಿ ಗೂಡಾಗಿವೆ. ಸಾಮಗ್ರಿಗಳ ದಾಸ್ತಾನುಗಳ ಗೋದಾಮುಗಳಾಗಿವೆ. ಸೌದೆ ತುಂಬುವ ಪಾತ್ರೆ ಪಗಡಗಳನ್ನಿಡುವ ಸ್ಥಳಗಳಾಗಿವೆ.
ಇದನ್ನು ಸರಿಪಡಿಸುವ ಬಹುದೊಡ್ಡ ಜವಾಬ್ದಾರಿ ಅಧಿಕಾರಿ ವರ್ಗದ ಹೆಗಲ ಮೇಲಿದೆ. ಅದಕ್ಕೊಂದು ಬಹುದೊಡ್ಡ ಜಾಗೃತಿಯ ಅಭಿಯಾನವೇ ನಡೆಯಬೇಕಿದೆ. ಅದು ಚಳವಳಿಯ ರೂಪದಲ್ಲಿರಬೇಕು. ಶೌಚಾಲಯವನ್ನು ನಿರ್ಮಿಸುವುದು ಮಾತ್ರ ಚಳವಳಿಯ ಗುರಿಯಾಗಬಾರದು. ಬಯಲು ಬಹಿರ್ದೆಸೆಯನ್ನು ಬಹಿಸ್ಕರಿಸುವುದು ಮತ್ತು ಅದನ್ನು ಬಹಿಷ್ಕರಿಸುವಂತೆ ಮನವೊಲಿಸುವುದು ಸರ್ವೋತೃಷ್ಟ ಧ್ಯೇಯವಾಗಬೇಕು. ಮನೆಯ ಮಗುವಿನಿಂದ ಮುದುಕರವರೆಗೆ ಬಯಲು ಬಹಿರ್ದೆಸೆಯ ಪರಿಣಾಮಗಳ ಗ್ರಹಿಕೆ ಮೂಡಬೇಕು. ಕಲ್ಲಿನ ದೇವತೆಗೆ ಸೀರೆಯನ್ನು ತೊಡಿಸಿ ಪೂಜಿಸುವ ನಾವು, ನಮ್ಮ ಮನೆಯ ನಿಜ ದೇವತೆಯರನ್ನು ಬಯಲು ಬಹಿರ್ದೆಸೆಗೆ ದೂಡಿ ಅಗೌರವಿಸಬಾರದು.