ಮತಾಂತರದ ನೆಪದಲ್ಲಿ ಮಕ್ಕಳಿಗೆ ಹಿಂಸೆ
ಭಾಗ-2
ಧಾರ್ಮಿಕ ಮತಾಂತರವನ್ನು ತಡೆಯುವ ಮಧ್ಯಪ್ರದೇಶ ಸರಕಾರದ ಕಾನೂನೇ ಈ ಗೊಂದಲಕ್ಕೆ ಕಾರಣ. ತಮ್ಮ ಸಮ್ಮುಖದಲ್ಲಿ ನಡೆಯುವ ಯಾವುದೇ ಮತಾಂತರದ ಕುರಿತು ವಾರದೊಳಗಾಗಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕೆನ್ನುತ್ತದೆ ‘ದಿ ಮಧ್ಯಪ್ರದೇಶ್ ಫ್ರೀಡಂ ಆಫ್ ರಿಲಿಜನ್ ಆ್ಯಕ್ಟ್ 1968’.
ಮಕ್ಕಳನ್ನು ಕ್ರಿಶ್ಚಿಯನ್ನ್ನರಾಗಿಯೇ ಬೆಳೆಸಲಾಗಿದೆ ಮತ್ತು ರೋಮನ್ ಕೆಥೊಲಿಕ್ ಚರ್ಚೊಂದರಲ್ಲಿ ಮಕ್ಕಳಿಗೆ ಬ್ಯಾಪ್ಟಿಸಂ ನಡೆಸಲಾಗಿದೆ ಎಂದು ಮಕ್ಕಳ ಪೋಷಕರು ಹೇಳುತ್ತಾರೆ. ಹದಿಹರೆಯದವರು ಕ್ರಿಶ್ಚಿಯನ್ ಧರ್ಮದ ಮೂಲಭೂತ ತತ್ವಗಳಲ್ಲಿ ತಮ್ಮ ನಂಬಿಕೆಯನ್ನು ದೃಢಪಡಿಸುವ ಒಂದು ಧಾರ್ಮಿಕ ಆಚರಣೆಯಾಗಿರುವ ಕನ್‌ಫರ್ಮೇಶನ್ ಕೂಡ ಆ ಮಕ್ಕಳಲ್ಲಿ ಸ್ವಲ್ಪ ಹಿರಿಯ ಮಕ್ಕಳಿಗೆ ನಡೆದಿದೆ.
ಆದರೆ ಹಿಂದೂ ಜಾಗರಣಾ ಮಂಚದ ಸದಸ್ಯರು ಆ ಏಳು ಮಕ್ಕಳಲ್ಲಿ ಕನಿಷ್ಠ ಮೂರು ಮಕ್ಕಳು ಹಿಂದೂ ಕುಟುಂಬಗಳಿಗೆ ಸೇರಿದವರು. ಅವರು ಕ್ರಿಶ್ಚಿಯನ್ನರಲ್ಲ ಎಂದು ವಾದಿಸುತ್ತಿದ್ದಾರೆ. ಅವುಗಳಲ್ಲಿ ಎರಡು ಮಕ್ಕಳ ತಂದೆ ಹಿಂದೂ. ಆತ ತನ್ನ ಕ್ರಿಶ್ಚಿಯನ್ ಪತ್ನಿಯಿಂದ ದೂರವಾಗಿದ್ದಾರೆ. ಆ ಮಕ್ಕಳು ತಮ್ಮ ತಾಯಿಯೊಂದಿಗೆ ವಾಸಿಸುತ್ತಿವೆ. ಇನ್ನೊಂದು ಮಗುವಿನ ತಂದೆಯ ಸಹೋದರಿ ಮತ್ತು ಅಜ್ಜಿ ಹಿಂದೂಗಳು. ಮಗುವಿನ ಅಪ್ಪ ಅಮ್ಮ ಇಬ್ಬರೂ ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಜಾಗರಣಾ ಮಂಚದ ಕಾರ್ಯಕರ್ತರು ಮಕ್ಕಳನ್ನು ಹಾಗೂ ಅವರ ರಕ್ಷಕರನ್ನು ಅವರ ಹೆಸರುಗಳ ಬಗ್ಗೆ ಸತತವಾಗಿ, ಪುನಃ ಪುನಃ ಪ್ರಶ್ನಿಸಿದ್ದಾರೆ. ಮಕ್ಕಳಲ್ಲಿ ಹಲವರಿಗೆ ಎರಡೂ ರೀತಿಯ ಹೆಸರುಗಳಿವೆ. ಹಿಂದೂವಿನಂತೆ ಕೇಳಿಸುವ ಅಧಿಕೃತ ಹೆಸರುಗಳು ಮತ್ತು ಕ್ರಿಶ್ಚಿಯನ್‌ನಂತೆ ಕೇಳಿಸುವ ಮುದ್ದಿನ (ಪೆಟ್) ಹೆಸರುಗಳು. ಹೆಸರುಗಳಲ್ಲಿರುವ ಈ ವ್ಯತ್ಯಾಸವನ್ನಾಧರಿಸಿ ಕಾರ್ಯಕರ್ತರು, ಮಕ್ಕಳು ನಿಜವಾಗಿ ಕ್ರಿಶ್ಚಿಯನ್ನರಲ್ಲ. ಬದಲಾಗಿ ಹಿಂದೂಗಳು ಎಂದು ವಾದಿಸಿದರು.
ಕಾನೂನಿನ ತೊಡಕುಗಳು
ಧಾರ್ಮಿಕ ಮತಾಂತರವನ್ನು ತಡೆಯುವ ಮಧ್ಯಪ್ರದೇಶ ಸರಕಾರದ ಕಾನೂನೇ ಈ ಗೊಂದಲಕ್ಕೆ ಕಾರಣ. ತಮ್ಮ ಸಮ್ಮುಖದಲ್ಲಿ ನಡೆಯುವ ಯಾವುದೇ ಮತಾಂತರದ ಕುರಿತು ವಾರದೊಳಗಾಗಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕೆನ್ನುತ್ತದೆ ‘ದಿ ಮಧ್ಯಪ್ರದೇಶ್ ಫ್ರೀಡಂ ಆಫ್ ರಿಲಿಜನ್ ಆ್ಯಕ್ಟ್ 1968’. ಮತಾಂತರಿಸಲಾದವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮಹಿಳೆಯರು ಅಥವಾ ಮಕ್ಕಳು ಆಗಿದ್ದಲ್ಲಿ ಆಗ ಮತಾಂತರಕ್ಕೆ ಪ್ರಚೋದನೆ ನೀಡಿದವರಿಗೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ನೀಡಬಹುದಾಗಿದೆ.
2013ರಲ್ಲಿ ರಾಜ್ಯ ಸರಕಾರವು ಈ ಕಾನೂನಿಗೆ ತಿದ್ದುಪಡಿಯೊಂದನ್ನು ಮಾಡಿ, ಯೋಜಿತ ಮತಾಂತರಕ್ಕೆ ಒಂದು ತಿಂಗಳ ಮುಂಚಿತವಾಗಿ ಮತಾಂತರಕ್ಕೆ ಜಿಲ್ಲಾಡಳಿತದ ಅನುಮತಿ ಪಡೆದಿರಬೇಕೆಂದು ಹೇಳಿ, ಕಾನೂನನ್ನು ಇನ್ನಷ್ಟು ಕಠಿಣವಾಗಿಸಿತು.
ಈ ಕಾನೂನಿನ ನಿಷೇಧ, ಕಟ್ಟುಪಾಡುಗಳಿಂದಾಗಿ ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸಲು ಭಯಪಡುವಂತಾಗಿದೆ. ತಾವು ಮತಾಂತರಗೊಳ್ಳಲು ಸರಕಾರದ ಒಪ್ಪಿಗೆ ಸಿಗುತ್ತದೋ ಇಲ್ಲವೋ ಎಂಬ ರಿಸ್ಕ್ ತೆಗೆದುಕೊಳ್ಳುವ ಬದಲಾಗಿ, ಹಲವರು ತಮ್ಮ ಹೊಸ ಧರ್ಮವನ್ನು ಸರಕಾರದ ಕೆಂಗಣ್ಣಿನಡಿ ಪಾಲಿಸುತ್ತ, ತಮ್ಮ ಅಧಿಕೃತ ಹೆಸರುಗಳನ್ನು ಹಿಂದಿನಂತೆಯೇ ಉಳಿಸಿಕೊಳ್ಳುತ್ತಾರೆ.
ಇದು ಹಿಂದೂ ಜಾಗರಣಾ ಮಂಚನಂತಹ ಗುಂಪುಗಳ ಅಸಮಾಧಾನಕ್ಕೆ ಕಾರಣವಾಗಿದೆ.
ರೈಲು ನಿಲ್ದಾಣದ ದಾಳಿಗಳ ನೇತೃತ್ವ ವಹಿಸಿದ್ದ ಹಿಂದೂ ಜಾಗರಣಾ ಮಂಚದ ಓರ್ವ ನಾಯಕ ವಿನೋದ್ ಮಿಶ್ರಾ, ‘‘ನಾನೊಬ್ಬ ಬ್ರಾಹ್ಮಣ. ನಾನು ರಾಮಕೃಷ್ಣನನ್ನು ಪೂಜಿಸಿದ ಕೂಡಲೇ ನಾನು ಯಾದವನಾಗುತ್ತೇನಾ? ನಾನು ರಾಮನನ್ನು ಪೂಜಿಸಿದರೆ ಕ್ಷತ್ರಿಯನಾಗುತ್ತೇನಾ? ಆದ್ದರಿಂದ ಯೇಸು ಕ್ರಿಸ್ತನನ್ನು ಪೂಜಿಸುತ್ತಾರೆ ಎನ್ನುವ ಕಾರಣಕ್ಕೆ ಅವರು ಕ್ರಿಶ್ಚಿಯನ್ನ್ನರಾಗಲು ಹೇಗೆ ಸಾಧ್ಯ?’’ ಎಂದು ಪ್ರಶ್ನಿಸಿದ್ದಾರೆ, ವಾದಿಸಿದ್ದಾರೆ.
ಹಾಗಾದರೆ ಅವರು ಯಾರನ್ನು ಕಾನೂನಾತ್ಮಕವಾಗಿ ಹಿಂದೂ ಎಂದು ಪರಿಗಣಿಸುತ್ತಾರೋ, ಅವರು ಇನ್ನೊಬ್ಬ ದೇವರನ್ನು ಪೂಜಿಸಿದರೆ ಏನು ತೊಂದರೆ, ಏನು ಸಮಸ್ಯೆ?
‘‘ಅವರು ಯಾರನ್ನೂ ಬೇಕಾದರೆ ಪೂಜಿಸಲಿ. ಆದರೆ ಅವರು ದೇಶವನ್ನು ಮುರಿದು, ಒಡೆದು, ಅದು ರೋಮ್‌ನ ಬೋಧನೆಯನ್ನು ಅನುಸರಿಸುವಂತೆ ಮಾಡುತ್ತಿದ್ದಾರೆ. ಇದನ್ನು ನಾವು ಒಪ್ಪಲು, ಸ್ವೀಕರಿಸಲು ಸಾಧ್ಯವಿಲ್ಲ’’ ಎಂದಿದ್ದಾರೆ ಜಾಗರಣಾ ಮಂಚದ ಅಧ್ಯಕ್ಷ ಸಂಜಯ್ ಭಾಟಿಯಾ. ಅಲ್ಲದೆ, ಆ ಮಕ್ಕಳ ಪೋಷಕರು ಕಾನೂನು ಪ್ರಕಾರ ಕ್ರಿಶ್ಚಿಯನ್ನ್ನರಾಗಿ ಮತಾಂತರಗೊಂಡಿಲ್ಲವಾದಲ್ಲಿ, ಅವರ ಮಕ್ಕಳನ್ನು ಕ್ರಿಶ್ಚಿಯನ್ನ್ನರಾಗಿ ಬೆಳೆಸುವ ಪ್ರಶ್ನೆಯೇ ಇಲ್ಲ ಎಂದು ಭಾಟಿಯಾ ವಾದಿಸಿದ್ದಾರೆ.
ಆದರೆ ‘‘ಹ್ಯೂಮನ್ ರೈಟ್ಸ್ ಲಾ ನೆಟ್‌ವರ್ಕ್’’ನ ಸ್ಥಾಪಕ ಕಾಲಿನ್ ಗೋನ್ಸಾಲ್ವಿಸ್ ಈ ವಾದವನ್ನು ತಳ್ಳಿ ಹಾಕಿದ್ದಾರೆ. ‘‘ನಾನೊಬ್ಬ ಕ್ರಿಶ್ಚಿಯನ್. ನನ್ನ ಪತ್ನಿ ಹಿಂದೂ. ನಾವು ನಮ್ಮ ಮಗಳನ್ನು ಒಬ್ಬಳು ಹಿಂದೂವಾಗಿ ಬೆಳೆಸುತ್ತಿದ್ದೇವೆ. ಹಾಗಾದರೆ ಇದಕ್ಕಾಗಿ ನೀವು ನನ್ನನ್ನು ಬಂಧಿಸುತ್ತೀರಾ?’’ ಎಂದು ಅವರು ಕೇಳುತ್ತಾರೆ.
‘‘ಹುಟ್ಟುವಾಗ ಮಕ್ಕಳಿಗೆ ಯಾವ ಧರ್ಮವೂ ಇರುವುದಿಲ್ಲ. ಮಕ್ಕಳ ಪೋಷಕರು ತಾವು ಯಾವ ಪರಂಪರೆಯಲ್ಲಿ ಮಕ್ಕಳನ್ನು ಬೆಳೆಸಬೇಕೆಂದು ಆಯ್ದುಕೊಳ್ಳುತ್ತಾರೋ, ಆ ಪರಂಪರೆಯಲ್ಲಿ ಮಕ್ಕಳನ್ನು ಬೆಳೆಸಬಹುದು. ವ್ಯಕ್ತಿಗಳು ತಮಗೆ 18 ವರ್ಷವಾದಾಗಲೇ ತಮ್ಮ ಧರ್ಮದ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವುದು’’ ಎನ್ನುತ್ತಾರೆ ಗೋನ್ಸಾಲ್ವಿಸ್.
1977ರಲ್ಲಿ, ಸುಪ್ರೀಂ ಕೋರ್ಟ್ 1968ರ ಕಾನೂನನ್ನು ಎತ್ತಿ ಹಿಡಿದು, ಭಾರತೀಯರಿಗೆ ಯಾವುದೇ ಧರ್ಮವನ್ನು ಆಚರಿಸಲು ಸ್ವಾತಂತ್ರವಿದೆಯಾದರೂ, ಇತರರನ್ನು ಮತಾಂತರಿಸಲು ಸ್ವಾತಂತ್ರವು ಒಂದು ಮೂಲಭೂತ ಹಕ್ಕು ಅಲ್ಲ ಎಂದು ಹೇಳಿತು. ಕಾನೂನನ್ನು ಅಕ್ಷರಶಃ ಪರಿಶೀಲಿಸಿ, ಅದು ಒಂದು ಕೋಮುವಾದೀಕೃತ ವಾತಾವರಣದಲ್ಲಿ ಹೇಗೆ ಬಳಸಲ್ಪಡುತ್ತದೆ ಎಂಬುದನ್ನು ಗಮನಿಸದೆ ಕೋರ್ಟ್ ತಪ್ಪೆಸಗಿತು. ಅಂತಹ ಒಂದು ವಾತಾವರಣದಲ್ಲಿ ‘‘ಒಂದು ರಾಜ್ಯದ ಆಡಳಿತಶಾಹಿಯೊಳಗಡೆಯೇ ಪ್ರಬಲ ಧರ್ಮದ ಸದಸ್ಯರು ಆ ಧರ್ಮದ ಹೊರಗೆ ಮತಾಂತರಗಳು ನಡೆಯದಂತೆ ತಡೆಯಲು ಈ ಕಾನೂನನ್ನು ಬಳಸಿಕೊಳ್ಳುತ್ತಾರೆ’’ ಎಂದು ಗೋನ್ಸಾಲ್ವಿಸ್ ಅಭಿಪ್ರಾಯಸಿದ್ದಾರೆ. ಅವರ ಪ್ರಕಾರ ಸುಪ್ರೀಂ ಕೋರ್ಟ್ ವಾಸ್ತವಿಕ ನೆಲೆಯನ್ನು ಮರೆತಂತೆ ಕಾಣುತ್ತದೆ.
ಇನ್ನೂ ಮುಂದುವರಿದಿರುವ ಭಯ
ಮಕ್ಕಳು ಮರಳಿ ತಮ್ಮ ಬಳಿಗೆ ಬಂದ ಬಳಿಕ ಮಕ್ಕಳ ಪೋಷಕರು ಪತ್ರಕರ್ತರ ಜೊತೆ ಮಾತಾಡಲು ಇಷ್ಟಪಡಲಿಲ್ಲ. ಮಾತಾಡಿದರೆ ಇನ್ನೇನು ಸಮಸ್ಯೆ ಎದುರಾಗುತ್ತದೋ ಎಂಬ ಭಯ ಅವರಿಗೆ. ಸ್ವತಂತ್ರ ಕ್ರಿಶ್ಚಿಯನ್ನರಾಗಿ ಇಷ್ಟರವರೆಗೆ ಅವರು ಬಿಜೆಪಿಯ ಬೆನ್ನೆಲುಬಾಗಿರುವ ಹಿಂದುತ್ವ ಗುಂಪುಗಳೊಂದಿಗೆ ಯಾವುದೇ ಮುಖಾಮುಖಿ, ಘರ್ಷಣೆಯಾಗದಂತೆ ನೋಡಿಕೊಂಡಿದ್ದಾರೆ. ಆ ಗುಂಪುಗಳ ಮಾತಿಗೆ ಕಿವಿಕೊಟ್ಟು ಸರಕಾರದ ಅಧಿಕಾರಿಗಳು ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ದಲಿತರು ಮತ್ತು ಆದಿವಾಸಿಗಳನ್ನು ತಮ್ಮ ಕಾರ್ಯಾಚರಣೆಗೆ ಗುರಿ ಮಾಡಿದ್ದಾರೆ. ಅದೇ ವೇಳೆ ಅವರು ‘ಘರ್‌ವಾಪ್ಸಿ’ ಅಥವಾ ‘ಮರಳಿ ಮಾತೃ ಧರ್ಮಕ್ಕೆ’ ಕಾರ್ಯಕ್ರಮಗಳನ್ನು ನಡೆಸುವ ಹಿಂದುತ್ವ ಸಂಘಟನೆಗಳನ್ನು ಮುಟ್ಟಲು ಹೋಗಿಲ್ಲ.
ಈಗ ಇಂದೋರ್‌ನ ಕ್ರಿಶ್ಚಿಯನ್ ಸಂಘಟನೆಗಳು ಆ ಮಕ್ಕಳ ಪೋಷಕರಿಗೆ ಅಲ್ಲಿಯ ಕ್ರಿಶ್ಚಿಯನ್ ಸಮುದಾಯದೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಸೂಚನೆ ನೀಡಿದೆ. ಆದರೆ ಆ ಪೋಷಕರ ಅತ್ಯಂತ ದೊಡ್ಡ ಚಿಂತೆ, ತಮ್ಮ ಮಕ್ಕಳಿಗೆ ಏನಾಗುತ್ತದೋ ಎಂಬುದೇ ಆಗಿದೆ. ‘‘ನನಗೆ ನನ್ನ ಮಗಳನ್ನು ಈಗ ಬಿಟ್ಟಿರಲು ಧೈರ್ಯವೇ ಇಲ್ಲ. ಅವಳು ಒಂದೂ ಕ್ಷಣವೂ ನನ್ನ ಕಣ್ಣಿನಿಂದ ಮರೆಯಾಗಕೂಡದು’’ ಎಂದಿದ್ದಾರೆ, 5ರ ಹರೆಯದ ಹೆಣ್ಣು ಮಗುವಿನ ತಾಯಿ ಸುನ್ನಾ. ಆ ಮಗು ಈಗಲೂ ನಿದ್ದೆಯಲ್ಲಿ ರಾತ್ರಿ ಕನಸಿನಲ್ಲಿ ಚೀರಿಕೊಳ್ಳುತ್ತದೆ. 15ರ ಹರೆಯದ ಇನ್ನೊಬ್ಬಳು ಹೆಣ್ಣು ಮಗಳು ಕೂಡ ಹಾಗೆಯೇ ಕಿರುಚಿಕೊಳ್ಳುತ್ತಾಳೆ. ‘‘ನಾವು ಇದನ್ನು ಮರೆಯ ಬಯಸುತ್ತೇವೆ’’ ಎಂದಿದ್ದಾರೆ ಇನ್ನೊಬ್ಬ ತಾಯಿ.
ಕೃಪೆ: scroll.in