ಅವಸರದ ಮಾತುಗಳು ತೂಕ ಹೊಂದಿವೆ
ನಾನು ಓದಿದ ಪುಸ್ತಕ
ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ‘ಕಿತ್ತಳೆ, ನೇರಳೆ ಪೇರಳೆ’ ಎಂಬ ಶೀರ್ಷಿಕೆಯಡಿಯಲ್ಲಿ ಅವಸರಕ್ಕೆ ಎಟಕಿದ ಮಾತು, ಬರಹಗಳನ್ನು ಸೇರಿಸಿ ಕೃತಿಯನ್ನು ಹೊರತಂದಿದ್ದಾರೆ.
ಸುಗತ ಶ್ರೀನಿವಾಸರಾಜು
ಪುಸ್ತಕದಲ್ಲಿ ಸಾಕಷ್ಟು ಅರ್ಥಪೂರ್ಣ ಮಾತು, ಬರಹಗಳನ್ನು ಕಾಣಬಹುದಾಗಿದೆ. ಪ್ರಮುಖವಾಗಿ ನಾವೆಲ್ಲರೂ ಅಂದುಕೊಂಡ ಪತ್ರಿಕೋದ್ಯಮದ ಹಾಗೂ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ವಿದೇಶಿಯ ಮತ್ತು ಸಾಹಿತ್ಯದ ಕುರಿತು ಅನೇಕ ಬರಹಗಳು ನಮ್ಮ ಯುವಜನರ ಅದರಲ್ಲೂ ಯುವ ಪತ್ರಕರ್ತರ ಮನಮುಟ್ಟುವಂತಿವೆ. ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಅನುಭವ ಹೊಂದಿರುವ ಸುಗತ ಶ್ರೀನಿವಾಸರಾಜು ಅವರು ದೇಶೀಯ ಹಾಗೂ ವಿದೇಶಿಯ ಪ್ರಚಲಿತ ವಿಷಯಗಳನ್ನು ಕುರಿತು ಚರ್ಚಿಸಿದ್ದಾರೆ. ಕಿತ್ತಳೆ, ನೇರಳೆ ಪೇರಳೆ ಬಡವರ ಮತ್ತು ಮಧ್ಯಮ ವರ್ಗದವರ ಪ್ರಿಯವಾದ ಹಣ್ಣು ಹಾಗೆಯೇ ಇಲ್ಲಿಯ ಬರಹಗಳು ಅಷ್ಟೆ ಪ್ರಿಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪತ್ರಿಕೋದ್ಯಮ ಕಿತ್ತಳೆಯ ಹುಳಿಯನ್ನು ಹಿಡಿದಿಟ್ಟುಕೊಂಡಿರಬಹುದು. ರಾಜಕೀಯ ನೇರಳೆಯ ಮಸಿಯಂತಿರಬಹುದು. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಪೇರಳೆಯ ಘಮವನ್ನು ಹೊಂದಿಸಲು ಪ್ರಯತ್ನಿಸಲಾಗಿದ್ದು, ಅದರಲ್ಲಿ ಯಶಸ್ಸು ಕಾಣಲಾಗಿದೆ ಎನ್ನಬಹುದಾಗಿದೆ. ‘ಸತ್ಯ ನುಡಿಯುವ ಜಾಗದಲ್ಲಿ ನಾವು ಮೌನಕ್ಕೆ ಶರಣಾದರೆ, ಆ ಮೌನಕ್ಕೆ ಸುಳ್ಳಿನ ಸೋಂಕು ಇರುತ್ತದೆ’. ರಶ್ಯನ್ ಕವಿಯ ಮಾತುಗಳನ್ನು ಉಲ್ಲೇಖಿಸಿ ನಾವು ಇತ್ತೀಚಿನ ದಿನಗಳಲ್ಲಿ ಯಾವ ಯಾವ ವಿಷಯಗಳಲ್ಲಿ ಮೌನಕ್ಕೆ ಶರಣಾಗಿದ್ದೇವೆ ಅದರ ಮೇಲೆಯೇ ಪತ್ರಿಕೋದ್ಯೋಗದ ವಿಶ್ವಾಸಾರ್ಹತೆಯೂ ಅಡಗಿದೆ ಎಂದು ಹೇಳಿದ್ದಾರೆ.
ಕಿತ್ತಳೆಯ ಭಾಗದಲ್ಲಿ ಪತ್ರಕರ್ತನಿಗೆ ಸಾಮಾಜಿಕ ಜವಾಬ್ದಾರಿ ಇದೆಯೇ ಎಂಬ ಮಹತ್ವವಾದ ಪ್ರಶ್ನೆಯನ್ನು ಕೇಳಿದ್ದು, ಆ ಪ್ರಶ್ನೆಯೊಂದಿಗೆ ಉತ್ತಮವಾದ ಚರ್ಚೆಯನ್ನು ಇಲ್ಲಿ ಮಾಡಲಾಗಿದೆ. ಚುನಾವಣೆ, ಮಾಧ್ಯಮದ ಕುರಿತು ಬಹಳ ಆರೋಗ್ಯಕರ ಮಾತುಗಳನ್ನು ತಿಳಿಸಿದ್ದಾರೆ. ಚುನಾವಣೆಯಲ್ಲಿ ಮಾಧ್ಯಮಗಳು ತಮ್ಮ ಸಂಯಮ, ಎಲ್ಲೆ ಮೀರಿ ಚುನಾವಣೆಯ ಫಲಿತಾಂಶದ ದಿಕ್ಕನ್ನು ಮೊದಲೇ ವರದಿ ಮಾಡುತ್ತವೆ. ಒಂದು ವೇಳೆ ಹಾಗಾಗದಿದ್ದರೆ ಅದರಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಪೆಟ್ಟು ಬೀಳುವುದು ಖಂಡಿತ. ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳು ತಮ್ಮ ಸ್ವಾತಂತ್ರ ಹರಣಕ್ಕೆ ಅವಕಾಶ ಮಾಡಿಕೊಟ್ಟು ಏಕಪಕ್ಷೀಯವಾಗಿ ವರ್ತಿಸಿವೆ ಎಂಬ ಜನರ ಗ್ರಹಿಕೆಯನ್ನು ತಿಳಿಸಿದ್ದಾರೆ. ಈ ಹೊತ್ತು ಮಾಧ್ಯಮವೆಂಬ ಸಂಸ್ಥೆ ನಮ್ಮ ದೇಶದಲ್ಲಿ ಈ ರೀತಿಯ ಸಂದಿಗ್ದಕ್ಕೆ ಸಿಲುಕಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ದೊಡ್ಡ ಅಭಿವೃದ್ಧಿ ಮತ್ತು ಬದಲಾವಣೆಯನ್ನು ಗ್ರಹಿಸುವುದು, ಯಾವುದೇ ಪೂರ್ವ ತಯಾರಿಯಿಲ್ಲದ ಮಾಧ್ಯಮಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಗಮನಿಸಬೇಕಾದ, ಆದ್ಯ ಕರ್ತವ್ಯವಾದ ಬದಲಾವಣೆಯ ವಿಶಾಲತೆಯನ್ನು ಮರೆತಂತಿರುವುದು ಆ ಕುರಿತು ಆತ್ಮಾವಲೋಕನದ ಅಗತ್ಯವಿದೆ ಎಂದಿದ್ದಾರೆ.
ಪ್ರಜಾಪ್ರಭುತ್ವವೊಂದರಲ್ಲಿ ಒಮ್ಮತ ಏರ್ಪಡುವಂತೆ ಮಾಡುವ ಸಂಸ್ಕೃತಿ ಮತ್ತು ರಾಜಕೀಯ ನಾಯಕತ್ವ ಬಹಳ ಮುಖ್ಯ ಆದರೆ ಈ ತರಹದ ನಾಯಕತ್ವ ಸದ್ಯ ಕಾಣುತ್ತಿಲ್ಲ. ಬದಲಾವಣೆ ಘೋಷಣೆಗಳ ಮೂಲಕ ಸಾಧ್ಯವಿಲ್ಲ. ತಳಮಟ್ಟದಿಂದ ಬದಲಾವಣೆಯಾಗುವ ವಾತಾವರಣವನ್ನು ರೂಪಿಸಬೇಕಾಗಿದೆ. ನೆಹರು ಮತ್ತು ಪಟೇಲರನ್ನು ಪರಸ್ಪರ ಶತ್ರುಗಳಂತೆ ಬಿಂಬಿಸಲು ಪ್ರಾರಂಭಿಸಿದ್ದೇವೆ. ಗಾಂಧಿ ಮತ್ತು ಅಂಬೇಡ್ಕರ್ರನ್ನು ಹೀಗೇ ನೋಡುತ್ತಿದ್ದೇವೆ. ಸಾಧಕರನ್ನು ಒಂದು ತತ್ವದ ಅನುಯಾಯಿಗಳಂತೆ ಸೀಮಿತಗೊಳಿಸುತ್ತಿದ್ದೇವೆ. ಅದರಿಂದ ಬಹಳಷ್ಟು ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ತಪ್ಪಾಗಿ ಗ್ರಹಿಸಿ ತಿರುಚುತ್ತಿದ್ದೇವೆ. ಒಂದು ತತ್ವವನ್ನಷ್ಟೆ ಆಯ್ದುಕೊಳ್ಳಬೇಕು ಎಂಬ ಅವಾಂತರ ಸೃಷ್ಟಿಯಾಗುತ್ತಿದೆ. ಇದಕ್ಕೆ ಮಧ್ಯ ಮಾರ್ಗ ಸಂಯಮವನ್ನು ಮರೆತಿರುವುದೇ ಕಾರಣವಾಗಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳು ರೂಪಿಸುತ್ತಿರುವ ಸಾರ್ವಜನಿಕ ಸಂವಾದಗಳು ಒಂದು ಬಗೆಯ ಸರಳ ಧ್ರುವೀಕರಣಕ್ಕೆ ಒಳಗಾಗಿವೆ. ನಾವು ಪರ- ವಿರೋಧ, ಸರಿ-ತಪ್ಪು, ಕಪ್ಪು-ಬಿಳಪು, ಕೆಂಪು-ಕೇಸರಿ, ಎಡ-ಬಲ ತರಹದ ವೈರುಧ್ಯಗಳ ಮೂಲಕ ಮಾತನಾಡುತ್ತಿದ್ದೇವೆ. ಇದರ ನಡುವೆ ಹಲವು ವಿಚಾರಗಳನ್ನು ಮರೆಯುತ್ತಿದ್ದೇವೆ. ಇದು ಉಸಿರುಗಟ್ಟಿಸುವ ವಾತಾವರಣವನ್ನು ಸೃಷ್ಟಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿಯಾಗಲು ಮಾತಿನ ಚತುರತೆ ಅಗತ್ಯವೇ? ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮೌನರಾಗಿದ್ದ ಕಾರಣ ಆಗ ಇಂತಹ ಪ್ರಶ್ನೆ ಮತ್ತು ಚರ್ಚೆಯ ಅಗತ್ಯವಿತ್ತು ಹಿಂದೆ ದೇಶವಾಳಿದ ಪ್ರಧಾನಿಗಳಲ್ಲಿ ಮೌನಿಗಳು ಸೌಮ್ಯ ಸ್ವಭಾವದವರು, ಮಾತಿನ ಚತುರರೂ ಇದ್ದಾರೆ. ಒಂದು ಮಾತಿಗೆ ಹಲವು ಅರ್ಥವಿರುತ್ತದೆ ಮತ್ತು ಅದರ ನಡುವಿನ ಮೌನ ಅರ್ಥಗರ್ಭಿತವಾಗಿರುತ್ತದೆ. ಉಳಿದದ್ದು ಚರ್ಚೆಯಾಗುತ್ತದೆ. ಭಾವಿಸಿ, ಅನುಭವಿಸಿ ಮಾತನಾಡು ವುದಕ್ಕೂ, ಸುಮ್ಮನೆ ಉಗುಳುವುದಕ್ಕೂ ಅಜಗಜಾಂತರ ವ್ಯತ್ಯಾಸ ವಿದೆ ಎಂದು ‘ಹೊಗಳಿಕೆಯ ಮಾತಿಗೆ ತೂಕ ಕಡಿಮೆ’ ಎಂಬ ನಾಣ್ಣುಡಿಯನ್ನು ಈ ಸಂದರ್ಭಕ್ಕೆ ನೆನಪಿಸಿದ್ದಾರೆ.
ಮಾಜಿ ಪ್ರಧಾನಿ ನೆಹರು ನೆಹರು ಕುರಿತು ಅನೇಕ ತಿಳಿಸಿದ್ದು, ನೆಹರು ನಿವೃತ್ತರಾಗುವುದಿಲ್ಲ ಎಂಬ ಗೋಪಾಲಕೃಷ್ಣ ಅಡಿಗರ ಮಾತನ್ನು ಉಲ್ಲೇಖಿಸಿ, ನೆಹರು ಅವರ ಬಹುತ್ವದ ಕಲ್ಪನೆ ಮತ್ತು ಲೊಕದೃಷ್ಟಿಯನ್ನು ಹಿಂದೆ ಸರಿಯಲು ಬಿಟ್ಟರೆ ಕಾಂಗ್ರೆಸ್ಗೆ ಉಳಿಗಾಲವಿಲ್ಲವೆಂದು ಹೇಳಿ, ಕಾಂಗ್ರೆಸ್ ಮತ್ತು ಬಿಜೆಪಿಯ ಬೆಳವಣಿಗೆಯ ಹಾದಿಯನ್ನು ನಮ್ಮ ಮುಂದಿಟ್ಟಿದ್ದಾರೆ.
ಜೆಎನ್ಯುನ ಕನ್ಹಯ್ಯ ಮತ್ತು ಹುತಾತ್ಮ ಯೋಧ ಹನುಮಂತಪ್ಪರ ಕುರಿತು ಹಾಗೂ ದೇಶ, ರಾಷ್ಟ್ರೀಯತೆಯ ಚರ್ಚೆಯನ್ನು ಮಾಡಲಾಗಿದೆ. ಕವಿ ಜಿಎಸ್ಎಸ್ ಹಾಗೂ ಪತ್ರಕರ್ತ ಪಿ. ಲಂಕೇಶ್ರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದು, ಜಿ.ಎಸ್.ಶಿವರುದ್ರಪ್ಪನವರು ನಮ್ಮ ಕೊನೆಯ ರಾಷ್ಟ್ರಕವಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಪುಸ್ತಕ ಒಳಗೊಂಡಿರುವ ಲೇಖನ, ಭಾಷಣ, ಅವಸರದ ಮಾತುಗಳು ಹೆಚ್ಚಿನ ತೂಕವನ್ನು ಹೊಂದಿವೆ ಎನ್ನಬಹುದಾಗಿದೆ.