ದಿಲ್ಲಿ ದರ್ಬಾರ್
ಶ್ರೀ ಶ್ರೀ ಪ್ರಯತ್ನ ಗಂಭೀರವಲ್ಲ?
ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಶುಕ್ರವಾರ ಲಕ್ನೋ ಈದ್ಗಾ ಮಸೀದಿ ಇಮಾಮ್ ಅವರನ್ನು ಭೇಟಿ ಮಾಡಿದ್ದಾರೆ. ಅಯೋಧ್ಯೆ ವಿವಾದಕ್ಕೆ ಪರಿಹಾರ ಕಂಡುಹಿಡಿಯಲು ಮಧ್ಯಸ್ಥಿಕೆ ಪ್ರಯತ್ನಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವವಿದೆ. ರವಿಶಂಕರ್ ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೆಲ ಸಾಧುಗಳು ಮತ್ತು ಮುಸ್ಲಿಂ ಧರ್ಮಗುರುಗಳ ಜೊತೆ ಉತ್ತರ ಪ್ರದೇಶದಲ್ಲಿ ಮಾತುಕತೆ ನಡೆಸಿದ್ದಾರೆ. ಇವರ ಮಧ್ಯಸ್ಥಿಕೆ ಪ್ರಸ್ತಾಪವನ್ನು ಬಹುತೇಕ ಎಲ್ಲರೂ ತಿರಸ್ಕರಿಸಿದ್ದರೂ, ಹೊಸ ಸಂದೇಶದೊಂದಿಗೆ ತಾವು ಬಂದಿದ್ದಾಗಿ ಘೋಷಿಸಿದ್ದಾರೆ. ಆದರೆ ಬಿಜೆಪಿ ಅಥವಾ ಇತರ ಯಾವ ಪಕ್ಷಗಳ ಮುಖಂಡರಿಗೂ ಶ್ರೀ ಶ್ರೀ ಹೇಳಿಕೆ ರೋಮಾಂಚನ ಮೂಡಿಸಿಲ್ಲ. ಕೇಂದ್ರ ಸಚಿವರೊಬ್ಬರು ಮಾಧ್ಯಮ ಪ್ರತಿನಿಧಿಗಳ ಜತೆ ಆಫ್ ದ ರೆಕಾರ್ಡ್ ಸಂವಾದದಲ್ಲಿ ರವಿಶಂಕರ್ ಪ್ರಯತ್ನವನ್ನು ಹೀಗೆ ವಿವರಿಸಿದ್ದಾರೆ. ‘‘ಈ ಗುರುಗಳು ಸುದ್ದಿಯಲ್ಲಿ ಇರಬಯಸುತ್ತಾರೆ ಹಾಗೂ ಏಕವ್ಯಕ್ತಿ ಪ್ರಯತ್ನ ನಡೆಸುತ್ತಿದ್ದಾರೆ. ಮೊದಲು ಸದ್ಗುರು ನದಿಗಾಗಿ ಸುದ್ದಿಯಲ್ಲಿದ್ದರು. ಈಗ ಅದರಿಂದ ಹೊರತಾಗಿದ್ದೇನೆ ಎನಿಸಿ ಅಯೋಧ್ಯೆ ಪರಿಹಾರದೊಂದಿಗೆ ಬಂದಿದ್ದಾರೆ. ಇವರು ಸದಾ ಸುದ್ದಿಯಲ್ಲಿ ಇರಬಯಸುತ್ತಾರೆ. ನೀವು ಅವರಿಗೆ ಪ್ರಚಾರ ನೀಡುತ್ತೀರಿ. ಯಾವುದರ ಬಗ್ಗೆಯೂ ಅವರು ಗಂಭೀರವಾಗಿ ಇರುವುದಿಲ್ಲ’’
ಮೋದಿ ಹೃದಯ
ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ತಮ್ಮ ತವರು ರಾಜ್ಯದಲ್ಲಿ 50ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೃದಯ ಹೇಳುತ್ತಿದೆ. ಆದರೆ 2019ರ ಚುನಾವಣೆಯಲ್ಲಿ ಅದ್ಭುತ ಜಯ ಸಾಧಿಸುವಂಥ ಇನ್ನೂ ಎದುರಿಸಬೇಕಾಗಿರುವ ದೊಡ್ಡ ವಿಷಯಗಳ ಬಗ್ಗೆ ದೂರದೃಷ್ಟಿ ಕಳೆದುಕೊಳ್ಳಬಾರದು ಎಂದು ಅವರ ಮನಸ್ಸು ಹೇಳುತ್ತಿದೆ. ಅವರ ಹೃದಯದ ಅಪೇಕ್ಷೆ ಅವರ ಮನಸ್ಸಿನ ಆಕಾಂಕ್ಷೆಯಾಗಿ ಅಭಿವ್ಯಕ್ತಗೊಂಡಿದೆ. ದಕ್ಷಿಣ ಭಾರತ ರಾಜಕೀಯದಲ್ಲಿ ಯಾರು ಏನು ಎಂದು ತಿಳಿದುಕೊಂಡು ಉತ್ತಮ ಸಂಬಂಧ ಸಾಧಿಸುವ ಮೋದಿ ಪ್ರಯತ್ನದಲ್ಲಿ ಇದು ಸ್ಪಷ್ಟವಾಗಿ ತಿಳಿದು ಬರುತ್ತದೆ.
ಅನಾರೋಗ್ಯದಿಂದ ಬಳಲುತ್ತಿರುವ ದ್ರಾವಿಡ ಮುನ್ನೇಟ್ರ ಕಳಗಂ ಮುಖಂಡ ಎಂ.ಕರುಣಾನಿಧಿಯವರನ್ನು ಮೋದಿ ಇತ್ತೀಚೆಗೆ ದಿಢೀರನೇ ಭೇಟಿಯಾಗಿದ್ದರು. ಮೋದಿ ತಮಿಳುನಾಡಿನ 39 ಲೋಕಸಭಾ ಸ್ಥಾನಗಳಲ್ಲಿ ಪಾಲು ಪಡೆಯಲು ಬಯಸಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಜೆ.ಜಯಲಲಿತಾ ಅವರ ನಿಧನದ ಬಳಿಕ ಡಿಎಂಕೆ ಅವಕಾಶ ಉಜ್ವಲವಾಗುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಅಚ್ಚರಿಯೇನಲ್ಲ. ಜನಪ್ರಿಯ ನಟ ಕಮಲಹಾಸನ್ ಕಣಕ್ಕೆ ಧುಮುಕಿದ್ದು, ದಿಲ್ಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮಾಡಿದಂಥ ಕ್ರಾಂತಿಯನ್ನು ಈ ಮೇರುನಟ ಇಲ್ಲಿ ಮಾಡುತ್ತಾರೆ ಎನ್ನುವುದು ಬಿಜೆಪಿ ಮುಖಂಡರ ಚಿಂತನೆ. ಇದು ಡಿಎಂಕೆಯನ್ನು ಬಿಜೆಪಿ ರಾಡಾರ್‌ನೆಡೆಗೆ ಆಕರ್ಷಿಸಿದೆ. ಬಹುತೇಕ ಹಳೆ ಕಾಂಗ್ರೆಸಿಗರು, ಕಮ್ಯುನಿಸ್ಟರು ಹಾಗೂ ಡಿಎಂಕೆ ಸೇರಿದಂತೆ ಯುಪಿಎಯ ಹಲವು ಘಟಕ ಪಕ್ಷಗಳು ತಮ್ಮ ನಿಷ್ಠೆಯನ್ನು ಬದಲಿಸಲು ಮುಂದಾಗಿವೆ.
ಚಿಂತನೆಗೆ ಹಚ್ಚಿದ ಕೋವಿಂದ್
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೀಡುವ ಅಚ್ಚರಿಗೆ ಕೊನೆ ಇದ್ದಂತಿಲ್ಲ. ಅವರ ಹೇಳಿಕೆಗಳು ಹಲವು ಬಾರಿ ಬಿಜೆಪಿ ಮುಖಂಡರ ಮುಖ ಕೆಂಪಡರಿಸಿದ್ದಿದೆ. ಮೊದಲು ಕರ್ನಾಟಕ ವಿಧಾನಸಭೆಯ ವಜ್ರಮಹೋತ್ಸವದ ಆಕರ್ಷಕ ಸಮಾರಂಭದಲ್ಲಿ ರಾಷ್ಟ್ರಪತಿಗಳು ಬಿಜೆಪಿಯ ಕಡುವೈರಿ ಟಿಪ್ಪುಸುಲ್ತಾನ್‌ನನ್ನು ಹೊಗಳುವ ಮೂಲಕ ಅಚ್ಚರಿ ಮೂಡಿಸಿದರು. ಕೇರಳ ಮಾವೊವಾದಿ- ಜಿಹಾದಿ ಹಿಂಸೆಯ ತಾಣ ಎಂದು ಬಿಜೆಪಿ ಟೀಕಿಸಿದ ಕೆಲವೇ ದಿನಗಳಲ್ಲಿ ಕೇರಳ ಅಭಿವೃದ್ಧಿ ಮಾದರಿಯನ್ನು ಕೋವಿಂದ್ ಹಾಡಿಹೊಗಳಿದರು. ‘‘ಭಾರತದಲ್ಲಿ ಆಹಾರ ನಮ್ಮ ಸಮಾಜದಂತೆ ವೈವಿಧ್ಯಮಯ: ದೇಶದ 29 ರಾಜ್ಯಗಳಲ್ಲಿ ಬಹುಶಃ 290 ವಿಭಿನ್ನ ಬಿರಿಯಾನಿ ಅಥವಾ ಕಿಚಡಿ ರೆಸಿಪಿ ಇರಬಹುದು’’ ಎಂದು ಕೋವಿಂದ್ ಟ್ವೀಟಿಸಿದ್ದರು.
‘ಸಾತ್ವಿಕ’ರ ಕಿಚಡಿ ಹಾಗೂ ಬಾಯಿ ನೀರೂರಿಸುವ ‘ದಾಳಿಕೋರ’ರ ಆಹಾರದ ಈ ಸಂಬಂಧ ಹಲವರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಆದರೆ ಒಳಗಿನವರು ಹೇಳುವಂತೆ, ಪ್ರಧಾನಿ ಕಚೇರಿ ಆಯ್ಕೆ ಮಾಡಿದ ರಾಷ್ಟ್ರಪತಿಗಳ ಅಧಿಕಾರಿಗಳು, ಕೋವಿಂದ್ ಅವರನ್ನು ಸ್ವತಂತ್ರ ಚಿಂತನೆಯ ವ್ಯಕ್ತಿ ಎಂದು ಬಿಂಬಿಸಲು ಹೊರಟಿದೆ. ಹೀಗೆ ಅವರು ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡಾಗ ಜನ ಅವರನ್ನು ಯಾವ ಮಮಕಾರವೂ ಇಲ್ಲದ ನ್ಯಾಯಾಧೀಶ ಎಂಬಂತೆ ನಂಬಬೇಕು ಎನ್ನುವುದು ಉದ್ದೇಶ.
ಶಾ ಕಾರ್ಯತಂತ್ರ
ಗುಜರಾತ್‌ನ ಮೇಲೆ ತಮ್ಮ ಹೃದಯ ಕೇಂದ್ರೀಕರಿಸಿದ ವ್ಯಕ್ತಿ ನರೇಂದ್ರ ಮೋದಿ ಮಾತ್ರ ಅಲ್ಲ. ಅವರ ಸೆಕೆಂಡ್ ಇನ್ ಕಮಾಂಡ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡಾ, ಗುಜರಾತ್‌ನಲ್ಲಿ ತಮ್ಮ ಪಕ್ಷದ ಆಳ್ವಿಕೆಗೆ ಯಾವ ಧಕ್ಕೆಯೂ ಆಗಬಾರದು ಎಂಬ ನಿಟ್ಟಿನಲ್ಲಿ ಅವಿಶ್ರಾಂತವಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಆದರೆ ಮೀಸಲಾತಿಗಾಗಿ ಪಾಟಿದಾರರು, ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ, ಶಾ ಪಕ್ಷಕ್ಕೆ ಮುಳ್ಳಾಗಿ ಕಾಡುತ್ತಿದೆ. ಈ ವಿಚಾರವನ್ನು ಸೂಕ್ತವಾಗಿ ನಿರ್ವಹಿಸುವ ಮಾರ್ಗೋಪಾಯಗಳ ಬಗ್ಗೆ ಶಾ ಹಾಗೂ ಅವರ ತಂಡ ಶತಾಯ ಗತಾಯ ಪ್ರಯತ್ನ ನಡೆಸಿದೆ. ಆದಾಗ್ಯೂ ಶಾ ಧೈರ್ಯದಿಂದ ತಮ್ಮ ಹಿಂದಿನ ಕ್ಷೇತ್ರವಾದ ನಾರಾಯಣಪುರದಲ್ಲಿ ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದಾರೆ.
ಬಿಜೆಪಿಯಲ್ಲಿ ಶಾ ಅನಿರ್ಬಂಧಿತ ಅಧಿಕಾರ ಹೊಂದಿದ್ದರೂ, ಪಾಟಿದಾರ್ ಮನೆಗಳ ಕದ ತಟ್ಟುವ ಧೈರ್ಯ ಅವರಲ್ಲಿಲ್ಲ. ಪಾಟಿದಾರರಿಂದ ಮತ್ತೆ ಉಗ್ರ ಪ್ರತಿಭಟನೆ ಎದುರಾಗಬಹುದು ಎಂಬ ಅಂಜಿಕೆ ಅವರಲ್ಲಿದೆ. ಬಿಜೆಪಿ ಮುಖಂಡನ ಎಲ್ಲ ದೃಷ್ಟಿ ಈಗ ಕಾಂಗ್ರೆಸ್- ಹಾರ್ದಿಕ್ ಪಟೇಲ್ ನಡುವಿನ ವ್ಯವಹಾರದತ್ತಿದೆ. ಅದು ವಿಫಲವಾಗಲಿ ಎಂಬ ನಿರೀಕ್ಷೆ ಅವರದ್ದು. ಆಗ ಅವರು ನಿರ್ಭೀತಿಯಿಂದ ಪಾಟಿದಾರರ ಮನೆಯ ಕದ ತಟ್ಟಬಹುದು.
ಸ್ಮತಿ ನಿರೀಕ್ಷೆಗಳು
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮತಿ ಇರಾನಿ, ತಮ್ಮ ಹೊಸ ವೃತ್ತಿಯನ್ನು ಇಷ್ಟದಿಂದಲೇ ಸ್ವೀಕರಿಸಿರಬಹುದು. ಆದರೆ ಇನ್ನೂ ಅವರು ತಮ್ಮ ಹಳೆಯ ನಟನೆಯ ಬೇರುಗಳ ಜತೆ ಪ್ರಬಲ ಸಂಬಂಧವನ್ನು ಹೊಂದಿದ್ದಾರೆ. ಹಿಂದಿ ಧಾರಾವಾಹಿ ‘ಕಭಿ ಸಾನ್ಸ್ ಭಿ ಬಹೂ ತಿ’ ಮೂಲಕ 1990ರ ದಶಕದಲ್ಲಿ ಜನಪ್ರಿಯತೆ ಗಳಿಸಿದ ಸ್ಮತಿ, ಈಗ ಕೂಡಾ ತಾವು ಸಿನೆಮಾ ಹಾಗೂ ಟೆಲಿವಿಷನ್ ಉದ್ಯಮದ ಬಗ್ಗೆ ಮೆದು ಧೋರಣೆ ಹೊಂದಿದ್ದನ್ನು ಸಾಬೀತುಪಡಿಸಿದ್ದಾರೆ. ಸಿನೆಮಾ ಟಿಕೆಟ್ ಮೇಲೆ ವಿಧಿಸಿರುವ ಶೇ. 28ರ ಜಿಎಸ್‌ಟಿಯನ್ನು ಕಡಿಮೆ ಮಾಡುವಂತೆ ಭಾರತದ ಟಿವಿ ನಿರ್ಮಾಪಕರ ಗಿಲ್ಡ್, ಹಣಕಾಸು ಸಚಿವ ಅರುಣ್ ಜೇಟ್ಲ್ಲಿಯವರನ್ನು ಒತ್ತಾಯಿಸುವಾಗ ಸ್ಮತಿ ಇರಾನಿ ದನಿಗೂಡಿಸಿದ್ದರು. ಅಧಿಕ ತೆರಿಗೆ ದರ ಚಿತ್ರರಂಗದಲ್ಲಿ ಹೂಡಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಇರಾನಿ ಹೇಳಿದ್ದರು. ಇದೀಗ ಎಲ್ಲರ ದೃಷ್ಟಿ ಚಿತ್ರಪ್ರೇಮಿ ಜೇಟ್ಲಿಯತ್ತ ನೆಟ್ಟಿದೆ. ಈಗ ಎಲ್ಲಕ್ಕಿಂತ ಮುಖ್ಯ ವಿಚಾರವೆಂದರೆ ಇರಾನಿ ಹೇಳಿದ್ದನ್ನು ಜೇಟ್ಲಿ ಕೇಳಿಸಿಕೊಳ್ಳುತ್ತಾರೆಯೇ ಎನ್ನುವುದು.