ಓ ಮೆಣಸೇ..
ಮೀನಿನ ಎಣ್ಣೆ ಮಾರುವ ಸಚಿವ ಪ್ರಮೋದ್ ಮಧ್ವರಾಜ್ ಜನರಿಗೆ ಟೋಪಿ ಹಾಕುತ್ತಾರೆ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ಸಿದ್ದರಾಮಯ್ಯರ ತಲೆಯ ಅಳತೆಗೆ ತಕ್ಕ ಟೋಪಿಯೊಂದನ್ನು ಹೊಲಿಯುವುದರಲ್ಲಿ ಮಗ್ನರಾಗಿದ್ದಾರೆ, ಗಡಿಬಿಡಿ ಮಾಡಬೇಡಿ.
---------------------
ಈಶ್ವರಪ್ಪ ಮೈಯಲ್ಲಿರುವುದು ಪಿಶಾಚಿಗಳ ರಕ್ತ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಇದನ್ನು ಕೇಳಿ ಪಿಶಾಚಿಗಳೆಲ್ಲ ತಮ್ಮ ತಮ್ಮ ರಕ್ತ ಪರೀಕ್ಷೆ ಮಾಡಿಕೊಳ್ಳಲು ಪ್ರಯೋಗಾಲಯದಲ್ಲಿ ಸಾಲು ನಿಂತಿವೆ.
---------------------
ಸಿ.ಎಂ.ಸಿದ್ದರಾಮಯ್ಯ ಭೇಟಿ ನೀಡಿದರೆ ಉಡುಪಿ ಕೃಷ್ಣಮಠ ಅಪವಿತ್ರವಾಗುತ್ತದೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಅವರಿಗಾಗಿ ಕನಕನ ಕಿಂಡಿ ಕೊರೆದಿಟ್ಟರೆ ನಿಮಗಾಗಿ ಪೇಜಾವರ ಶ್ರೀಗಳು ಸಣ್ಣದೊಂದು ಬಿಲ ಕೊರೆದು ಇಟ್ಟಿದ್ದಾರೆ. ಅದರಲ್ಲೇ ನೀವು ಇಣುಕಬೇಕಾಗುತ್ತದೆ.
---------------------
ಪ್ರಶ್ನಿಸುವವರನ್ನೇ ಟೀಕಿಸುವುದು ಅಪಾಯಕಾರಿ - ಪ್ರಕಾಶ್ ರೈ, ನಟ
ಪ್ರಶ್ನಿಸುವವರನ್ನು ಕೊಲ್ಲುವುದಕ್ಕಿಂತ ವಾಸಿ.
---------------------
ಇರುವುದೊಂದೇ ಕಿಂಡಿ, ಅದು ಕನಕನ ಕಿಂಡಿ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಕಿಂಡಿ ಕುರುಬರ ಪಾಲಿಗೆ ಬಾಗಿಲು ಆಗುವುದು ಯಾವಾಗ?
---------------------
ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ - ಜಗದೀಶ್ ಶೆಟ್ಟ್ಟರ್, ಬಿಜೆಪಿ ನಾಯಕ
ಅದಕ್ಕಾಗಿ ಬಿಜೆಪಿಯ ವಿರುದ್ಧ ನೀವೇ ಕಾರ್ಯಾಚರಣೆಗೆ ಇಳಿದ ಹಾಗಿದೆ.
---------------------
ಯೋಗ ಯಾವುದೇ ಜಾತಿಯ ಅಭ್ಯಾಸವಲ್ಲ - ಬಾಬಾರಾಮ್‌ದೇವ್, ಯೋಗ ಗುರು
ಅದೀಗ ಅಭ್ಯಾಸವಲ್ಲ, ಉದ್ಯಮ.
---------------------
ನಿದ್ದೆಯಲ್ಲಿರುವ ಕುಂಭಕರ್ಣ ಸಿದ್ದರಾಮಯ್ಯರನ್ನು ಬದಿಗೊತ್ತಿ ರಾಮಭಕ್ತ ಯಡಿಯೂರಪ್ಪ ಬರುತ್ತಿದ್ದಾರೆ - ನಳಿನ್ ಕುಮಾರ್ ಕಟೀಲು, ಸಂಸದ
ಆಜನ್ಮ ಬ್ರಹ್ಮಚಾರಿ ಆಂಜನೇಯನಿಗೆ ಯಡಿಯೂರಪ್ಪರನ್ನು ಹೋಲಿಸಿರುವುದು ವ್ಯಂಗ್ಯವಲ್ಲದೆ ಇನ್ನೇನು?
---------------------
ಯಡಿಯೂರಪ್ಪರ ಆಡಳಿತ ಈಗಿನ ಕಾಂಗ್ರೆಸ್ ಆಡಳಿತಕ್ಕಿಂತ ಉತ್ತಮವಾಗಿತ್ತು - ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ
ದೋಚುವವರ ಪಾಲಿಗೆ ಮಾತ್ರ.
---------------------
ಭಾರತದಲ್ಲಿ ಶೀಘ್ರವೇ ರಾಮರಾಜ್ಯ ನಿರ್ಮಾಣವಾಗಲಿದೆ - ಯೋಗಿ ಆದಿತ್ಯನಾಥ್, ಉ.ಪ.ಮುಖ್ಯಮಂತ್ರಿ
ಹೆಣ್ಣು ಮಕ್ಕಳೆಲ್ಲ ತಮ್ಮ ತಮ್ಮ ಕಿವಿ, ಮೂಗುಗಳ ರಕ್ಷಣೆಗಾಗಿ ರಾವಣನನ್ನು ಕರೆಯಬೇಕಾಗಿದೆ.
---------------------
ದೇವಾಲಯಕ್ಕೆ ಹೋದ ದಲಿತರು ಉದ್ಧಾರವಾಗಿಲ್ಲ - ಎಚ್.ಆಂಜನೇಯ, ಸಚಿವ
ದಲಿತರ ಉದ್ಧಾರ ಬೇಡವೆಂದು ತಾವು ಕೃಷ್ಣ ಮಠಕ್ಕೆ ಹೋದಿರೆಂದು ಕಾಣುತ್ತದೆ.
---------------------
ಭಾರತ ಜಾತ್ಯತೀತ ರಾಷ್ಟ್ರವಾಗಬೇಕು - ವರುಣ್ ಗಾಂಧಿ, ಸಂಸದ
ಬಿಜೆಪಿ ನಾಯಕರೊಂದಿಗೆ ಭಿನ್ನಮತ ಎದುರಾದಾಗಷ್ಟೇ ಜಾತ್ಯತೀತ ಪದ ನೆನಪಾದರೆ ಸಾಕೇ?
---------------------
ಕನ್ನಡದ ಶ್ರೇಷ್ಠ ಕೃತಿ ಇಂಗ್ಲಿಷ್‌ಗೆ ಅನುವಾದಗೊಂಡರೆ ನೊಬೆಲ್ ಪ್ರಶಸ್ತಿ ಗ್ಯಾರಂಟಿ - ವೀರಪ್ಪ ಮೊಯ್ಲಿ, ಸಂಸದ
ತಮ್ಮ ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಲು ಹೊರಟಂತಿದೆ.
---------------------
ಜೀವ ಇರುವವರೆಗೆ ಬಿಜೆಪಿ ಬಿಡುವುದಿಲ್ಲ - ರಘುಪತಿ ಭಟ್, ಮಾಜಿ ಶಾಸಕ
ಬಿಜೆಪಿಯ ಜೀವ ಇರುವವರೆಗೆ ತಾನೆ?
---------------------
ಸದ್ಯಕ್ಕಂತೂ ಗುಜರಾತ್‌ನಲ್ಲಿ ಬಿಜೆಪಿಗೆ ಯಾವುದೇ ಅಪಾಯ ಇಲ್ಲ - ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
ಜನರಿಗೆ ಅಪಾಯವಿದೆಯೆಂದಾಯಿತು.
---------------------
ನಾನು ನಿದ್ದೆಗೆಟ್ಟಿದ್ದರೆ ಅದು ಜನರಿಗಾಗಿ - ರಮಾನಾಥ ರೈ, ಸಚಿವ
ನಿಮ್ಮನ್ನು ನಿದ್ದೆ ಕೆಡಿಸುವಂತೆ ಮಾಡಿದ ಪೂಜಾರಿ ಮತ್ತು ಪ್ರಭಾಕರ ಭಟ್ಟರಿಗೆ ಹೆಗ್ಗಳಿಕೆ ಸಲ್ಲುತ್ತದೆ.
---------------------
ಈಗ ಕಾಂಗ್ರೆಸ್‌ನಲ್ಲಿರುವವರು ನಿಜವಾದ ಕಾಂಗ್ರೆಸಿಗರಲ್ಲ - ವರ್ತೂರ್ ಪ್ರಕಾಶ್, ಶಾಸಕ
ನೀವೀಗ ನಿಜವಾಗಿ ಯಾರು ಎನ್ನುವುದನ್ನು ಬಹಿರಂಗಪಡಿಸಿ.
---------------------
ಕರ್ನಾಟಕದಲ್ಲಿ ಭಗವಾಧ್ವಜದಡಿ ರಾಮರಾಜ್ಯ ನಿರ್ಮಾಣವಾಗಬೇಕು - ಅನಂತಕುಮಾರ ಹೆಗಡೆ, ಕೇಂದ್ರ ಸಚಿವ
ಕನ್ನಡ ಧ್ವಜ ಹಿಡಿದ ತರುಣರು ಅದಕ್ಕೆ ಆಸ್ಪದ ನೀಡಲಾರರು.
---------------------
ನಾನು ಸಿನೆಮಾವನ್ನು ಸಿನೆಮಾವಾಗಿಯೇ ನೋಡುತ್ತೇನೆ - ಅಬ್ಬಾಸ್ ನಖ್ವ್ವಿ,ಕೇಂದ್ರ ಸಚಿವ
ಇತಿಹಾಸವನ್ನು ಸಿನಿಮಾದಲ್ಲಿ ಹುಡುಕುವ ತಮ್ಮ ಸ್ನೇಹಿತರಿಗೂ ಇದನ್ನು ಹೇಳಿ.
---------------------
ಕುಟುಂಬ ಯೋಜನೆಯನ್ನು ಪ್ರೋತ್ಸಾಹಿಸಲು ಕೆಲ ರಾಜಕಾರಣಿಗಳು ಹಿಂದೇಟು ಹಾಕುತ್ತಾರೆ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಕುಟುಂಬ ಯೋಜನೆ ಯಶಸ್ವಿಗಾಗಿಯೇ ಪ್ರಧಾನಿ ಮೋದಿಯವರು ಪತ್ನಿಯನ್ನು ತ್ಯಜಿಸಿರುವುದಂತೆ.
---------------------
ಸಲಿಂಗಕಾಮ ಎಂಬುದು ಒಂದು ಪ್ರವೃತ್ತಿ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಅದನ್ನು ವೃತ್ತಿ ಮಾಡಿ ಬದುಕಲು ಕಲಿಯಿರಿ ಎನ್ನಲಿಲ್ಲವಲ್ಲ ಸದ್ಯ.
---------------------
ಮಹಾಪ್ರಾಣಗಳು ಇಲ್ಲವಾದರೆ ಕನ್ನಡ ಭಾಷೆಗೆ ಅನುಕೂಲ - ಎಸ್.ದಿವಾಕರ್, ಕತೆಗಾರ
ಮೊದಲು ಕನ್ನಡದ ಪ್ರಾಣ ಇನ್ನೂ ಇದೆಯಾ ಎನ್ನುವುದನ್ನು ಖಚಿತ ಪಡಿಸಿಕೊಳ್ಳೋಣ.