ಕತ್ತಲೆ ಹರಿಯದೊಡಾ ಜ್ಯೋತಿಯದೇಕೋ?
ಕಬ್ಬುನ ಪರುಷವೇಧಿಯಾದಡೇನು,
ಕಬ್ಬುನ ಹೊನ್ನಾಗದಡಾ ಪರುಷವದೇಕೊ?
ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ?
ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
ಕರ್ಮ ಹರಿಯದೊಡಾ ಪೂಜೆಯದೇಕೊ?
- ಬಸವಣ್ಣ
ಸಂಚಿತಕರ್ಮ, ಪ್ರಾರಬ್ಧಕರ್ಮ ಮತ್ತು ಆಗಾಮಿಕರ್ಮ ಎಂದು ಕರ್ಮಗಳಲ್ಲಿ ಮೂರು ಪ್ರಕಾರಗಳಿವೆ. ಜನ್ಮಜನ್ಮಾಂತರಗಳಿಂದ ಸಂಗ್ರಹವಾಗುತ್ತ ಬಂದಿರುವ ಪಾಪಕರ್ಮಕ್ಕೆ ಸಂಚಿತಕರ್ಮ ಎಂದು ಕರೆಯುವರು. ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕರ್ಮಕ್ಕೆ ಪ್ರಾರಬ್ಧಕರ್ಮ ಎನ್ನುವರು. ಇದೇ ಜನ್ಮದಲ್ಲಿ ಮಾಡುವ ಪಾಪಕ್ಕೆ ಆಗಾಮಿಕರ್ಮ ಎಂದು ಹೇಳುವರು. ಭಾರತೀಯರ ಮನಸ್ಸಿನಲ್ಲಿ ಈ ಕರ್ಮಸಿದ್ಧಾಂತ ಆಳವಾಗಿ ಬೇರೂರಿದೆ. ಸಾಮಾಜಿಕ ಮನೋವಿಜ್ಞಾನಕ್ಕೆ ಇದೊಂದು ದೊಡ್ಡ ಸವಾಲಾಗಿದೆ. ನಮ್ಮ ಜನ ತಮ್ಮ ಮೇಲೆ ಆಗುವ ಅನ್ಯಾಯಕ್ಕೆ ಕೂಡ ‘ಇದೆಲ್ಲ ನಮ್ಮ ಹಣೆಬರಹ’ ಎಂದು ಹೇಳುತ್ತ ನ್ಯಾಯಕ್ಕಾಗಿ ಹೋರಾಡುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಮನುಷ್ಯನನ್ನು ಮಾನಸಿಕವಾಗಿ ದುರ್ಬಲನನ್ನಾಗಿಸಿ ಆತನ ಕ್ರಿಯಾಶಕ್ತಿಯನ್ನೇ ಹಾಳುಮಾಡುವಂಥ ಕರ್ಮಸಿದ್ಧಾಂತವನ್ನು ಮಹಾನುಭಾವಿ ಬಸವಣ್ಣನವರು ನಿಷ್ಕ್ರಿಯಗೊಳಿಸಲು ಪಣತೊಟ್ಟು ಇಂಥ ವಚನಗಳನ್ನು ಬರೆದಿದ್ದಾರೆ.
ಸರ್ವಸಮತ್ವವನ್ನು ಸಾರುವ ಇಷ್ಟಲಿಂಗದಲ್ಲಿ ಕರ್ಮವನ್ನು ನಾಶಗೊಳಿಸುವ ಶಕ್ತಿ ಇದೆ. ಇಷ್ಟಲಿಂಗ ಪೂಜಕರು ಕರ್ಮಸಿದ್ಧಾಂತವನ್ನು ನಂಬಬಾರದು. ಮಾನವಕಲ್ಯಾಣದ ತತ್ತ್ವಕ್ಕೆ ಬದ್ಧರಾದವರಿಗೆ ಕರ್ಮಸಿದ್ಧಾಂತ ಬಾಧಿಸಲು ಸಾಧ್ಯವಿಲ್ಲ. ದುರ್ಬಲ ಮನಸ್ಸಿನವರ ಮೇಲೆ ಮಾತ್ರ ಕರ್ಮಸಿದ್ಧಾಂತ ಸವಾರಿ ಮಾಡುವುದು. ಒಂದುವೇಳೆ ಇಷ್ಟಲಿಂಗ ಪೂಜೆ ಮಾಡಿಯೂ ಕರ್ಮಸಿದ್ಧಾಂತದ ಮೇಲೆ ನಂಬಿಕೆ ಇಟ್ಟರೆ ಪೂಜೆ ಮಾಡಿ ಉಪಯೋಗವಿಲ್ಲ. ಏಕೆಂದರೆ ಇಷ್ಟಲಿಂಗತತ್ತ್ವ ಮತ್ತು ಕರ್ಮಸಿದ್ಧಾಂತ ತದ್ವಿರುದ್ಧವಾಗಿವೆ. ಕರ್ಮಸಿದ್ಧಾಂತ ಕತ್ತಲೆಯಾದರೆ, ಇಷ್ಟಲಿಂಗ ಬೆಳಕು. ಕರ್ಮಸಿದ್ಧಾಂತವನ್ನು ‘ಕಬ್ಬಿಣ’ ಎಂದು ಭಾವಿಸಿದರೆ, ಇಷ್ಟಲಿಂಗ ಪರುಷ. ಇಷ್ಟಲಿಂಗವೆಂಬ ಬೆಳಕು ಕರ್ಮ ಸಿದ್ಧಾಂತ ವೆಂಬ ಕತ್ತಲೆ ಕಳೆಯದಿದ್ದರೆ ಆ ಇಷ್ಟಲಿಂಗ ಪೂಜೆಯ ಆವಶ್ಯಕತೆ ಏನು? ಎಂದು ಪ್ರಶ್ನಿಸುವಷ್ಟು ಬಸವಣ್ಣನವರು ಕರ್ಮಸಿದ್ಧಾಂತವನ್ನು ತಿರಸ್ಕಾರದಿಂದ ನೋಡುತ್ತಾರೆ. ಏಕೆಂದರೆ ಯುಗಯುಗಗಳಿಂದಲೂ ಜನಸಮುದಾಯ ಈ ಕರ್ಮಸಿದ್ಧಾಂತದ ಬಲೆಗೆ ಸಿಕ್ಕಿ ಒದ್ದಾಡುತ್ತಿದೆ.
ಪರುಷಮಣಿಯನ್ನು ಕಬ್ಬಿಣಕ್ಕೆ ಮುಟ್ಟಿಸಿದಾಗ ಆ ಕಬ್ಬಿಣ ಬಂಗಾರವಾಗುತ್ತದೆ ಎಂಬುದು ಕಾವ್ಯಸತ್ಯ. ಒಂದುವೇಳೆ ಪರುಷಮಣಿ ಮುಟ್ಟಿದ ನಂತರವೂ ಆ ಕಬ್ಬಿಣ ಬಂಗಾರವಾಗದಿದ್ದರೆ ಪರುಷಮಣಿ ನಿರರ್ಥಕ. ಕತ್ತಲೆ ಕಳೆಯಲೆಂದು ಜ್ಯೋತಿಯನ್ನು ಹಚ್ಚುತ್ತೇವೆ. ಜ್ಯೋತಿ ಹಚ್ಚಿದ ನಂತರವೂ ಗಾಢಾಂಧಕಾರ ಹಾಗೆಯೆ ಉಳಿದುಕೊಂಡರೆ, ಆ ಜ್ಯೋತಿಯನ್ನು ಹಚ್ಚಿ ಪ್ರಯೋಜನವೇನು? ಅದೇ ರೀತಿ ಕರ್ಮಬಂಧನದಿಂದ ಮುಕ್ತವಾಗುವುದಕ್ಕಾಗಿಯೇ ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಬೇಕು. ಆದರೂ ಕರ್ಮಪಾಶ ಹರಿದುಹೋಗದಿದ್ದರೆ ಆ ಪೂಜೆ ಮಾಡಿ ಪ್ರಯೋಜನವೇನು ಎಂದು ಬಸವಣ್ಣನವರು ಕೇಳುತ್ತಾರೆ. ಅರಿವಿನ ಸಂಕೇತವಾದ ಇಷ್ಟಲಿಂಗವು ಕರ್ಮಸಿದ್ಧಾಂತದಂಥ ಅನಿಷ್ಟಗಳನ್ನು ಹೊಡೆದೋಡಿಸುವಂಥದ್ದು.
ಇಷ್ಟಲಿಂಗ ಪೂಜೆಯು, ದುರ್ಬಲ ಮನಸ್ಸಿನವರಲ್ಲಿ ಶಕ್ತಿ ತುಂಬುವುದು. ಸಮರ್ಪಣಾ ಭಾವದ ಇಷ್ಟಲಿಂಗ ಪೂಜಕನು ಹೀಗೆ ಮಾನಸಿಕ ಸ್ಥೈರ್ಯವನ್ನು ಹೊಂದುವವನು. ವೈಚಾರಿಕ ನೆಲೆಯಲ್ಲಿ ಬದುಕನ್ನು ನೋಡುವ ದೃಷ್ಟಿಕೋನವನ್ನು ಪಡೆಯುವನು. ಸುಲಿಗೆಯ ವಿಷವರ್ತುಲಗಳಿಂದ ಹೊರ ಬರುವ ಮಾರ್ಗ ಕಂಡುಕೊಳ್ಳುವನು. ಕರ್ಮಸಿದ್ಧಾಂತದಿಂದ ಜಾತಿಗಳು, ಅಸ್ಪಶ್ಯತೆ, ಮೇಲುಕೀಳು ಮತ್ತು ಶೋಷಣೆ ಜನ್ಮತಾಳಿದ್ದನ್ನು ಆತ ಬಹುಬೇಗ ಅರ್ಥಮಾಡಿಕೊಳ್ಳುವನು. ಮಾನವ ಈ ಎಲ್ಲ ರೀತಿಯ ಮನೋದೌರ್ಬಲ್ಯ, ಅಸಹಾಯಕತೆ, ಕೀಳರಿಮೆ ಮತ್ತು ಶೋಷಣೆಯಿಂದ ಹೊರಬಂದು ಕಾಯಕದ ಮೂಲಕ ಆತ್ಮಗೌರವದೊಂದಿಗೆ ಬದುಕುವ ಪ್ರಜ್ಞೆಯನ್ನು ಇಷ್ಟಲಿಂಗ ಪೂಜೆಯು ಮೂಡಿಸುವುದು. ಇಷ್ಟಲಿಂಗವನ್ನು ಕೊಡುವುದರ ಮೂಲಕ ಬಸವಣ್ಣನವರು ಶೋಷಣೆಯ ಕೇಂದ್ರವಾಗಿರುವ ದೇವಾಲಯಗಳಿಗೆ ಜನ ಹೋಗದಂತೆ ಮಾಡಿದರು. ದೇವರು ಮತ್ತು ಭಕ್ತರ ಮಧ್ಯೆ ಮಧ್ಯವರ್ತಿಗಳು ಇಲ್ಲದಂತೆ ಮಾಡಿದರು. ಆಗ ಜನ ಆರ್ಥಿಕ ಮತ್ತು ಮಾನಸಿಕ ಶೋಷಣೆಯಿಂದ ಮುಕ್ತರಾದರು. ದೇವರು ತಮ್ಮೊಳಗೇ ಇರುವುದರಿಂದ ಅವರಿಗೆ ಎಲ್ಲ ಕಾಲವೂ ಒಳ್ಳೆಯ ಕಾಲವೇ ಆಯಿತು. ಎಲ್ಲ ದಿನಗಳೂ ಒಳ್ಳೆಯ ದಿನಗಳೇ ಆದವು. ತಮ್ಮೆಳಗಿನ ದೇವರು ‘ಕರ್ಮಹರ’ ಎಂಬ ನಂಬಿಕೆ ಅವರಲ್ಲಿ ಮೂಡಿತು. ಎಲ್ಲ ಕಾಯಕಗಳೂ ದೇವರ ದೃಷ್ಟಿಯಲ್ಲಿ ಸಮ ಎಂಬ ಅರಿವು ಮೂಡಿದಾಗ ಎಲ್ಲ ಕಾಯಕಜೀವಿಗಳು ಸಮಾನರು ಎಂಬ ಸತ್ಯವನ್ನು ಸಾರಿದರು. ಹೀಗೆ ಇಷ್ಟಲಿಂಗವು ಎಲ್ಲ ಕಾಯಕಜೀವಿಗಳನ್ನು ಒಂದುಗೂಡಿಸಿ ಸಮುದಾಯದ ಶಕ್ತಿಯನ್ನು ನೀಡಿತು. ವೈದಿಕರು ಸೃಷ್ಟಿಸಿದ ಎಲ್ಲರೀತಿಯ ಧಾರ್ಮಿಕ ಭಯ, ಮೂಢನಂಬಿಕೆ ಮತ್ತು ಮೇಲುಕೀಳು ಭಾವಗಳಿಂದ ಮುಕ್ತನಾಗುವ ಮೂಲಕ ‘ಭಯವೇ ಧರ್ಮದ ಮೂಲ’ ಎಂಬುದನ್ನು ಅಲ್ಲಗಳೆದು ‘ದಯವೇ ಧರ್ಮದ ಮೂಲ’ ಎಂಬ ಲಿಂಗತತ್ತ್ವವನ್ನು ಸಾರಿದರು. ಬದುಕಿಗೆ ಅಂಜದ ಈ ಶರಣರು ಸಕಲ ಜೀವಾತ್ಮರಿಗೆ ಲೇಸನೇ ಬಯಸುತ್ತ ಬದುಕಿ ಮಾನವಕುಲಕ್ಕೇ ಮಾರ್ಗದರ್ಶಿಯಾದರು.