ಸರ್ವಿಕಲ್ ಸ್ಪಾಂಡಿಲೋಸಿಸ್ನ್ನು ತಡೆಯಲು ಅತ್ಯುತ್ತಮ ಮಾರ್ಗಗಳು
ನಮ್ಮ ಶರೀರವು ಮೂಳೆಗಳು ಮತ್ತು ಸ್ನಾಯುಗಳಿಂದ ಕೂಡಿದ ಸಂಕೀರ್ಣ ರಚನೆಯಾಗಿದೆ. ನಮ್ಮ ಶರೀರದಲ್ಲಿಯ ಮೂಳೆಗಳು ಉಕ್ಕಿನ ಕೆಲವು ಮಾದರಿಗಳಿಗಿಂತ ಹೆಚ್ಚು ಸದೃಢವಾಗಿವೆ ಎನ್ನುವುದು ನಿಮಗೆ ಗೊತ್ತೇ? ಮೂಳೆಗಳು ಮತ್ತು ಅವುಗಳಿಗೆ ಅಂಟಿಕೊಂಡಿರುವ ಸ್ನಾಯುಗಳು ಮಾನವ ಶರೀರವನ್ನು ಚಲನಶೀಲವಾಗಿಸಿವೆ.
ಮಾನವ ಶರೀರದಲ್ಲಿ 206 ಮೂಳೆಗಳಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಶರೀರದಲ್ಲಿಯ ಸ್ನಾಯುಗಳಿಗೆ ಯಾವುದೇ ನಿಖರ ಸಂಖ್ಯೆಯಿಲ್ಲ. ಶರೀರದಲ್ಲಿ ಸ್ನಾಯುಗಳು ತುಂಬ ಮುಖ್ಯವಾಗಿವೆ. ನಮ್ಮ ಕೈಕಾಲುಗಳು ಮತ್ತು ಕುತ್ತಿಗೆಯ ಸ್ವಯಂ ಚಲನೆಗೆ ಅವು ನೆರವಾಗುತ್ತವೆ. ಸ್ನಾಯುಗಳು ಮುಖ್ಯವಾಗಿ ಪ್ರೋಟಿನ್ನಿಂದ ನಿರ್ಮಾಣಗೊಂಡಿವೆ. ದುರದೃಷ್ಟವಶಾತ್ ಎಲ್ಲ ಸ್ನಾಯುಗಳೂ ಸವಕಳಿಗೊಳಗಾಗುತ್ತವೆ ಮತ್ತು ಒತ್ತಡದಿಂದಾಗಿ ಅಥವಾ ವಯಸ್ಸಾಗುತ್ತಿದ್ದಂತೆ ಹಾನಿಗೀಡಾಗುತ್ತವೆ. ಇದು ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕಬಹುದು ಮತ್ತು ನಮ್ಮ ದೈನಂದಿನ ಕೆಲಸಗಳನ್ನೂ ಕಠಿಣವಾಗಿಸಬಹುದು.
ಕೈಕಾಲುಗಳು, ತೊಡೆ, ಮೊಣಕಾಲು, ಬೆನ್ನಿನ ಮೇಲ್ಭಾಗ ಮತ್ತು ಕುತ್ತಿಗೆಯ ಸ್ನಾಯುಗಳು ಹೆಚ್ಚಿನ ಒತ್ತಡಕ್ಕೆ ಗುರಿಯಾಗುತ್ತಿರುತ್ತವೆ. ಇವುಗಳ ಪೈಕಿ ಕುತ್ತಿಗೆಯ ಸ್ನಾಯುಗಳು ಸದಾ ಒತ್ತಡದಲ್ಲಿದ್ದು, ಹಾನಿಗೆ ಸುಲಭದ ಗುರಿಯಾಗಿವೆ.
ನಮ್ಮ ಕುತ್ತಿಗೆಯು ಚಿಕ್ಕ ಬಿಲ್ಲೆಗಳ ರೂಪದಲ್ಲಿರುವ ಏಳು ಕಶೇರುಕಗಳಿಂದ ರಚನೆಯಾಗಿದೆ. ಈ ಬಿಲ್ಲೆಗಳ ನಡುವಿನ ಜಾಗದಲ್ಲಿ ದ್ರವವು ತುಂಬಿಕೊಂಡಿರುತ್ತದೆ. ನಮ್ಮ ಕುತ್ತಿಗೆಯ ಸ್ನಾಯುಗಳು ದಿನವಿಡೀ ನಿರಂತರವಾಗಿ ಆಕುಂಚನ ಮತ್ತು ಸಂಕುಚನಗೊಳ್ಳುತ್ತಿದ್ದು, ನಮ್ಮ ಶರೀರದ ಅತ್ಯಂತ ಬಲಶಾಲಿ ಸ್ನಾಯುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿವೆ.
ನಮ್ಮ ಕುತ್ತಿಗೆಯ ಸ್ನಾಯುಗಳು ತುಂಬ ಮುಖ್ಯವಾಗಿವೆ, ಅವುಗಳಿಂದಲೇ ನಾವು ತಲೆಯನ್ನು ಅಲ್ಲಾಡಿಸಲು ಸಾಧ್ಯವಾಗುತ್ತದೆ. ನಮ್ಮ ತಲೆಯನ್ನು ಎತ್ತಿ ಹಿಡಿಯುವ ಜೊತೆಗೆ ಉಸಿರಾಟ ಮತ್ತು ಮಿದುಳಿಗೆ ರಕ್ತಸಂಚಾರಕ್ಕೂ ಅವು ನೆರವಾಗುತ್ತವೆ. ಹೀಗಾಗಿ ನಮ್ಮ ಕುತ್ತಿಗೆಯ ಸ್ನಾಯುಗಳನ್ನು ಸದೃಢವಾಗಿ ಮತ್ತು ಒತ್ತಡಮುಕ್ತವಾಗಿಡುವುದು ಮಹತ್ವದ್ದಾಗಿದೆ.
ಕೆಲವೊಮ್ಮೆ ಗಾಯ, ಅಪಘಾತ ಅಥವಾ ಸಾದಾ ಒತ್ತಡ ಕೂಡ ಕುತ್ತಿಗೆಯ ಸ್ನಾಯುಗಳು ಹಿಡಿದುಕೊಳ್ಳುವುದಕ್ಕೆ ಕಾರಣವಾಗುತ್ತವೆ. ವಯೋಸಹಜ ಸವಕಳಿ ಸಹ ಕುತ್ತಿಗೆಯ ಸ್ನಾಯುಗಳಲ್ಲಿ ನೋವನ್ನುಂಟು ಮಾಡಬಹುದು ಮತ್ತು ಇದು ಬಳಿಕ ತೀವ್ರ ನೋವಿಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಸಾಮಾನ್ಯವಾಗಿ ಸರ್ವಿಕಲ್ ಸ್ಪಾಂಡಿಲೋಸಿಸ್ ಅಥವಾ ಕುತ್ತಿಗೆಯ ಸಂಧಿರೋಗ ಎಂದು ಕರೆಯಲಾಗುತ್ತದೆ.
ಹೆಚ್ಚಿನ ದೇಹತೂಕ, ಚಟುವಟಿಕೆಯಿಲ್ಲದ ಜೀವನಶೈಲಿ ಅಥವಾ ಬೆನ್ನುಮೂಳೆಗೆ ಹಿಂದೆ ಬಿದ್ದಿದ್ದ ಪೆಟ್ಟು ಇತ್ಯಾದಿಗಳು ಕುತ್ತಿಗೆಯ ಸಂಧಿರೋಗಕ್ಕೆ ಕಾರಣವಾಗುತ್ತವೆ. ಅದು ವಂಶಪಾರಂಪರ್ಯವಾಗಿಯೂ ಬರಬಹುದು. ಒಮ್ಮೆ ಸರ್ವಿಕಲ್ ಸ್ಪಾಂಡಿಲೋಸಿಸ್ ವಕ್ಕರಿಸಿತೆಂದರೆ ಅದು ವಾಸಿಯಾಗುವ ಸಾಧ್ಯತೆ ಕಡಿಮೆ ಮತ್ತು ಅದರಿಂದ ನರಳುತ್ತಿರುವ ವ್ಯಕ್ತಿ ನೋವಿನಿಂದ ಪಾರಾಗಲು ಔಷಧಗಳನ್ನು ಸೇವಿಸುತ್ತಿರಬೇಕಾಗುತ್ತದೆ. ಹೀಗಾಗಿ ಈ ರೋಗ ಬಂದ ಮೇಲೆ ಒದ್ದಾಡುವುದಕ್ಕಿಂತ ಅದು ಬಾರದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು.
*ತೂಕ ಇಳಿಕೆ
ವ್ಯಕ್ತಿಯು ಅತಿಯಾದ ತೂಕ ಹೊಂದಿದ್ದರೆ ಅದನ್ನು ಇಳಿಸಿಕೊಳ್ಳುವುದು ಒಳ್ಳೆಯದು. ತೂಕವು ಕಡಿಮೆಯಾದರೆ ಕುತ್ತಿಗೆಯ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ ಮತ್ತು ಸ್ಪಾಂಡಿಲೋಸಿಸ್ನ ಅಪಾಯವನ್ನು ನಿವಾರಿಸಿಕೊಳ್ಳಬಹುದು.
*ಸಂತುಲಿತ ಆಹಾರ
ಹಣ್ಣುಗಳು ಮತ್ತು ತರಕಾರಿಗಳು ಯಥೇಚ್ಛವಾಗಿರುವ ಆಹಾರ ಈ ರೋಗವನ್ನು ತಡೆಯಲು ನೆರವಾಗುತ್ತದೆ. ಕ್ಯಾಲ್ಶಿಯಂ, ರಂಜಕ ಮತ್ತು ವಿಟಾಮಿನ್ ಡಿ ಮೂಲಗಳಿಂದ ತುಂಬಿದ ಆಹಾರವು ಶರೀರದಲ್ಲಿಯ ಎಲ್ಲ ಮೂಳೆಗಳು ಮತ್ತು ಸ್ನಾಯುಗಳನ್ನು ಕ್ರಿಯಾಶೀಲವಾಗಿರಿಸುತ್ತದೆ.
*ಬಿಸಿ ಮತ್ತು ತಂಪು ಒತ್ತಡ
ಇದು ಕುತ್ತಿಗೆ ನೋವನ್ನು ತಡೆಯಲು ಸುಲಭದ ಉಪಾಯವಾಗಿದೆ.ಬಿಸಿ ಮತ್ತು ತಂಪು ನೀರಿನ ಒತ್ತಡವನ್ನು ಒಂದಾದ ಬಳಿಕ ಒಂದರಂತೆ ಕೊಟ್ಟರೆ ಕುತ್ತಿಗೆಯಲ್ಲಿ ರಕ್ತಸಂಚಾರ ಸುಗಮಗೊಳ್ಳುತ್ತದೆ ಮತ್ತು ಬಿಗಿದುಕೊಂಡ ಸ್ನಾಯುಗಳು ಸಡಿಲಾಗುತ್ತವೆ.
*ಎಪ್ಸಮ್ ಲವಣ
ಮ್ಯಾಗ್ನೀಷಿಯಂ ಸಮೃದ್ಧವಾಗಿರುವ ಎಪ್ಸಮ್ ಉಪ್ಪು ಶರೀರದಲ್ಲಿಯ ಪಿಎಚ್ ಮಟ್ಟಗಳನ್ನು ನಿಯಂತ್ರಿಸಲು ಮತ್ತು ಸ್ನಾಯುಗಳ ಬಿಗಿತನ, ಊತವನ್ನು ತಗ್ಗಿಸಲು ನೆರವಾಗುತ್ತದೆ. ಎಪ್ಸಮ್ ಉಪ್ಪು ಬೆರೆತ ನೀರಿನಂದ ಸ್ನಾನ ಮಾಡಿದರೆ ಸ್ಪಾಂಡಿಲೋಸಿಸ್ನ ಅಪಾಯದ ದೂರವಾಗುತ್ತದೆ.
*ಬೆಳ್ಳುಳ್ಳಿ
ಬೆಳ್ಳುಳ್ಳಿಯು ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು,ಕುತ್ತಿಗೆಯ ಸ್ನಾಯುಗಳು ಬಾತುಕೊಂಡಿದ್ದರೆ ಅದನ್ನು ಶಮನ ಮಾಡುತ್ತದೆ. ಇದಕ್ಕಾಗಿ ಬೆಳಿಗ್ಗೆ 2-3 ಬೆಳ್ಳುಳ್ಳಿ ಎಸಳುಗಳನ್ನು ಜೇನುತುಪ್ಪದೊಂದಿಗೆ ಚೀಪಬೇಕು.ಬೆಚ್ಚಗಿನ ಬೆಳ್ಳುಳ್ಳಿಯ ಎಣ್ಣೆ ಯನ್ನು ಊದಿಕೊಂಡ ಜಾಗದಲ್ಲಿ ಹಚ್ಚಿಕೊಂಡರೆ ಉತ್ತಮ ಪರಿಹಾರವನ್ನು ನೀಡುತ್ತದೆ.
ಶುಂಠಿ ಶುಂಠಿಯ ಚಹಾ ಸೇವನೆಯಿಂದ ಕುತ್ತಿಗೆಯ ಸ್ನಾಯುಗಳಿಗೆ ರಕ್ತಸಂಚಾರವು ಹೆಚ್ಚುತ್ತದೆ ಮತ್ತು ನೋವನ್ನು ಶಮನಿಸಲು ನೆರವಾಗುತ್ತದೆ.