ಸಮರತಿ ಸಮಕಳೆ ಸಮಸುಖ
ಲಿಂಗವ ಪೂಜಿಸಿ ಫಲವೇನಯ್ಯ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?
- ಬಸವಣ್ಣ
ಅಂಗಮಯವಾದ ಜೀವಾತ್ಮ ಮತ್ತು ಲಿಂಗಮಯವಾದ ಪರಮಾತ್ಮ ಒಂದಾಗುವುದೇ ಲಿಂಗಾಂಗ ಸಾಮರಸ್ಯ. ಇದನ್ನು ಸಾಧಿಸಲಿಕ್ಕಾಗಿ ಇಷ್ಟಲಿಂಗ ಪೂಜೆ (ಶಿವಯೋಗ) ಇದೆ. ಹೀಗೆ ಸಾಧನೆ ಮಾಡಿದವರು ತಮ್ಮಾಳಗಿನ ಘನವನ್ನು ಅರಿತುಕೊಳ್ಳುತ್ತಾರೆ. ಲಿಂಗಾಂಗ ಸಾಮರಸ್ಯ ಸಾಧಿಸಬೇಕಾದರೆ ಜೀವಾತ್ಮನು ಮೊದಲಿಗೆ ಜಂಗಮಾತ್ಮ ಆಗಬೇಕಾಗುತ್ತದೆ. ಅಂದರೆ ವಿಶ್ವಕಲ್ಯಾಣಕ್ಕಾಗಿ ಬದುಕನ್ನು ಸವೆಸುತ್ತ ಎಲ್ಲ ಜೀವಾತ್ಮರ ಜೊತೆ ಒಂದಾಗಬೇಕಾ ಗುತ್ತದೆ. ಹೀಗೆ ಜೀವಾತ್ಮನು ಜಂಗಮಾತ್ಮ ಆದಮೇಲೆ ಪರಮಾತ್ಮನ ಜೊತೆ ಒಂದಾಗುವ ಯೋಗ್ಯತೆಯನ್ನು ಪಡೆಯುತ್ತಾನೆ. ಈ ರಹಸ್ಯವನ್ನು ಅರಿತು ಸಾಧಿಸುವುದೇ ಇಷ್ಟಲಿಂಗ ಪೂಜಾಫಲವಾಗಿದೆ.
ಜಂಗಮಾತ್ಮನಾಗಲು ಸಮರತಿ, ಸಮಕಳೆ ಮತ್ತು ಸಮಸುಖದ ಅರಿವನ್ನು ಪಡೆಯ ಬೇಕು. ಸಮರತಿ ಎಂದರೆ ಸತಿಪತಿ ಒಂದಾಗಿ ಏಕೋಭಾವದಿಂದ ಸಮಾನತಾ ಪ್ರಜ್ಞೆಯೊಂದಿಗೆ ಬದುಕುವುದು. ಪತ್ನಿಯನ್ನು ಸಮಾನತಾ ಭಾವದಿಂದ ಕಾಣದೆ ಬದುಕುವವನು ದೇವರಿಗೆ ದೂರಾಗುವನು. ಸಕಲ ಜೀವಕೋಟಿಗೆ ಜಗನ್ನಿಯಾಮಕನಾದ ಒಬ್ಬನೇ ದೇವರಿದ್ದಾನೆ. ಎಲ್ಲ ಜೀವಾತ್ಮರು ಆ ವಿಶ್ವಪತಿಗೆ ಸತಿಯಾಗಿರುವಂಥವರು. ಹೆಂಡತಿಯಂತೆ ಗಂಡ ಕೂಡ ಜೀವಾತ್ಮನೇ ಆಗಿರುವುದರಿಂದ ಆತನೂ ವಿಶ್ವಪತಿಗೆ ಸತಿಯಾಗುತ್ತಾನೆ. ಪ್ರೀತಿಗೆ ಪಾತ್ರನಾಗುವ ಪರಮಾತ್ಮನೇ ಪತಿ. ಮಧುರ ಭಕ್ತಿಭಾವದಿಂದ ಪರಮಾತ್ಮನನ್ನು ಪ್ರೀತಿಸುವ ಜೀವಾತ್ಮರೆಲ್ಲರೂ ಸತಿಯರು. ಆದ್ದರಿಂದ ಜೀವಾತ್ಮರಲ್ಲಿ ಲಿಂಗತಾರತಮ್ಯ ಇರಬಾರದು.
ಎಲ್ಲ ಜೀವಾತ್ಮರಿಗೆ ಜೀವಕಳೆ ಎಂಬ ಸಮಕಳೆ ಇದೆ. ಬ್ರಹ್ಮತೇಜಸ್ಸು ಮತ್ತು ಕ್ಷಾತ್ರತೇಜಸ್ಸು ಎಂಬುದು ಸುಳ್ಳು. ಮಾನವ ತೇಜಸ್ಸೊಂದೇ ಸತ್ಯ. ಹೀಗೆ ಎಲ್ಲರೂ ಸಮಕಳೆಯವರಾದ ಕಾರಣ ವರ್ಣಭೇದ ಮಾಡಬಾರದು ಎಂದು ಬಸವಣ್ಣನವರು ತಿಳಿಸಿದ್ದಾರೆ. ಅದೇ ರೀತಿ ಬಡವರು ಮತ್ತು ಶ್ರೀಮಂತರಿಗೆ ಭೌತಿಕ ಜಗತ್ತು ಒಂದೇ ರೀತಿಯ ಸುಖವನ್ನು ನೀಡುವುದು. ಮಾವಿನ ಹಣ್ಣಿನ ರುಚಿ, ಬೇವಿನ ಮರದ ನೆರಳು, ಮಲ್ಲಿಗೆಯ ಸುವಾಸನೆ, ಜೇನಿನ ಸಿಹಿ, ಲಿಂಬೆಯ ಹುಳಿ, ತಣ್ಣೀರಿನ ತೃಪ್ತಿ, ಹೊಂಬಿಸಿಲು, ತಂಗಾಳಿ.... ಹೀಗೆ ಭೌತಿಕ ಜಗತ್ತಿನ ವಸ್ತುಗಳೆಲ್ಲ ಬಡವರಿಗೆ ಮತ್ತು ಶ್ರೀಮಂತರಿಗೆ ಒಂದೇ ರೀತಿಯ ಸುಖವನ್ನು ಕೊಡುತ್ತವೆ. ಈ ಕಾರಣದಿಂದಲೇ ಬಸವಣ್ಣನವರು ಸರ್ವರಿಗೂ ಸಮಸುಖದ ವಾತಾವರಣ ನಿರ್ಮಾಣ ಮಾಡುವಂಥ ಸಮಾಜದ ಪರಿಕಲ್ಪನೆ ಮೂಡಿಸುತ್ತಾರೆ.
ಸಮಸುಖ ಎಂದಮೇಲೆ ದುಃಖವೂ ಸಮನಾಗಿಯೇ ಇರುತ್ತದೆ. ಸಾವುನೋವು ರೋಗರುಜಿನ ಮುಂತಾದ ಸಮಸ್ಯೆಗಳು, ಆಕಸ್ಮಿಕಗಳು, ದುರಂತಗಳು ಮತ್ತು ನೈಸರ್ಗಿಕ ವಿಕೋಪಗಳು ಮಾನವರಲ್ಲಿ ಬಡವ-ಶ್ರೀಮಂತ, ಜಾಣ-ದಡ್ಡ, ಸುಂದರ-ಕುರೂಪಿ, ದುರ್ಬಲ-ಸದೃಢ ಎಂಬ ಭೇದಭಾವ ಮಾಡುವುದಿಲ್ಲ. ಮಾನವರೆಲ್ಲರೂ ದುಃಖದಲ್ಲಿ ಕೂಡ ಒಂದೇ ಆಗಿದ್ದಾರೆ ಎಂಬುದನ್ನು ಬಸವಣ್ಣನವರು ಸೂಚಿಸಿದ್ದಾರೆ.
ಸಮಾಜ ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದ ಎಂಬ ಸಾಮಾಜಿಕ ರೋಗಗಳು ಮಾನವಕುಲವನ್ನು ಕಾಡುತ್ತಲೇ ಇವೆ. ಇವೆಲ್ಲವನ್ನು ಮೀರಿ ಮಾನವ ಬೆಳೆದಾಗ ಮಾತ್ರ ಎಲ್ಲ ರೀತಿಯ ಹಿಂಸಾತ್ಮಕ ವಾತಾವರಣದಿಂದ ಮುಕ್ತನಾಗುತ್ತಾನೆ. ಇಲ್ಲದಿದ್ದರೆ ವರ್ಣವಾದದ ಹಿಟ್ಲರ್‌ಗಳು, ಕೋಮುವಾದದ ಸಂಘಗಳು, ಧಾರ್ಮಿಕ ಮೂಲಭೂತವಾದಿ ಭಯೋತ್ಪಾದಕ ಬಿನ್ ಲಾದೆೆನ್‌ಗಳು, ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದಂಥ ಅಗ್ನಿಗೆ ತುಪ್ಪ ಸುರಿಯುವ ಶ್ರೀಗಳು ಮತ್ತು ಇಂಥ ವಿವಾದಗಳ ರಾಜಕೀಯ ಲಾಭ ಪಡೆಯುವ ರಾಜಕಾರಣಿಗಳು ಜನಿಸುತ್ತಲೇ ಇರುತ್ತಾರೆ.
ಲಿಂಗಭೇದ, ವರ್ಣ/ಜಾತಿಭೇದ, ವರ್ಗಭೇದ ಮುಂತಾದ ಭೇದಭಾವ ಅಳಿದಾಗಲೇ ಮಾನವ ಜನಾಂಗಗಳನ್ನು ಒಂದುಗೂಡಿಸಲು ಸಾಧ್ಯವಾಗುವುದು ಎಂಬ ವಿಚಾರವನ್ನು ಬಸವಣ್ಣನವರು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ಇಂಥ ಭೇದಭಾವಗಳು ಅಳಿದಾಗ ‘ದೇವನೊಬ್ಬ ನಾಮ ಹಲವು’ ಎಂಬ ಸತ್ಯದ ಅರಿವಾಗುವುದು. ಒಬ್ಬನೇ ದೇವನಾದಾಗ ಆತನೇ ಬ್ರಹ್ಮಾಂಡವನ್ನು ಸೃಷ್ಟಿಸಿ ನಿಯಂತ್ರಿಸುವವನಾಗುತ್ತಾನೆ. ಎಲ್ಲ ಮಾನವರು, ಪಶುಪಕ್ಷಿ ಮತ್ತು ಕ್ರಿಮಿಕೀಟಗಳಿಗೆ ಒಬ್ಬನೇ ದೇವರಾಗುವನು. ಸಕಲ ಜೀವಾತ್ಮರನ್ನು ಒಂದೇ ರೀತಿಯಲ್ಲಿ ನೋಡುವನು. ಈ ಪ್ರಜ್ಞೆಯನ್ನು ಮೈಗೂಡಿಸಿಕೊಂಡವರು ಭೇದಭಾವಗಳಿಂದ ಮುಕ್ತರಾಗುವರು. ಅಂಥವರು ಎಂಥ ಕಠಿಣ ಪ್ರಸಂಗದಲ್ಲೂ ಈ ಸತ್ಯದ ಪ್ರತಿಪಾದಕರಾಗೇ ಇರುವರು. ಲಿಂಗಭೇದ, ವರ್ಣಭೇದ, ಜಾತಿಭೇದ, ಧರ್ಮಭೇದ, ದೇವಭೇದ ಮುಂತಾದ ಭೇದಭಾವದ ಮನಸ್ಥಿತಿಯನ್ನು ಹೊಂದಿ ಅಹಂಕಾರದಿಂದ ಮೆರೆಯುವ ಹುಲುಮಾನವರನ್ನು, ಸಕಲ ಜೀವಾತ್ಮರಿಗೆ ಲೇಸನೇ ಬಯಸುವಂಥ ನಿಜಮಾನವರನ್ನಾಗಿಸುವ ಪ್ರಯತ್ನದಲ್ಲಿ ಈ ಸತ್ಯದ ಪ್ರತಿಪಾದಕರು ತೊಡಗುವರು. ಹೀಗೆ ಭೇದಭಾವಗಳಿಂದ ಮುಕ್ತರಾದ ಮಾನವರು ಸಮಾಜದ ವಿವಿಧ ಸಮುದಾಯಗಳೊಂದಿಗೆ ಬೆರತುಹೋಗುವರು. ಮಾನವ ಸಮಾಜವೆಂಬ ಸಾಗರದಲ್ಲಿ ವಿವಿಧ ಸಮುದಾಯಗಳೆಂಬ ನದಿಗಳು ಬೆರೆತು ಹೋದಾಗ ಎಲ್ಲವೂ ಒಂದೇ ಆಗಿ ಸಾಗರದ ರೂಪವನ್ನೇ ತಾಳುವವು. ಆಗ ಎಲ್ಲ ಭೇದಗಳು ಸಹಜವಾಗಿಯೇ ಮಾಯವಾಗಿ ಮಾನವರು ತಮ್ಮ ನಿಜಸ್ವರೂಪವನ್ನು ಕಂಡುಕೊಳ್ಳಲು ಸಾಧ್ಯವಾಗುವುದು.
ವಿಶ್ವಮಾನವ ಪ್ರಜ್ಞೆಯನ್ನು ಕೊಡುವ ಈ ವಚನ ಜಗತ್ತಿನ ಎಲ್ಲ ಧರ್ಮಗಳ ಆಶಯದ ಪ್ರತೀಕವಾಗಿದೆ. ಇಂಥ ಆಶಯಗಳಿಂದ ಕೂಡಿದ ಎಲ್ಲ ಮಾನವರು ಎಲ್ಲ ಧರ್ಮಗಳ ಜನರೊಂದಿಗೆ ಬೆರೆತು ಇಡೀ ಮಾನವಕುಲವನ್ನು ಒಂದಾಗಿಸುವ ಶಕ್ತಿಯನ್ನು ಪಡೆಯುತ್ತಾರೆ.
***