‘ಹದಿಹರೆಯದ ಎಡವಟ್ಟು’ ಇದು ಬರಿ ಕತೆಯಲ್ಲ
ಈ ಹೊತ್ತಿನ ಹೊತ್ತಿಗೆ
ಡಾ. ಸಾರಾ ಅಬೂಬಕ್ಕರ್ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತ ಹೆಸರು. ಮಹಿಳೆಯರ ಸ್ಥಿತಿಗತಿಯ ಕುರಿತಂತೆ ಅಪಾರ ಲೇಖನಗಳನ್ನು ಮತ್ತು ಕತೆಗಳನ್ನು ಬರೆದ ಹೆಗ್ಗಳಿಕೆ ಇವರದು. ಇದೀಗ ಬಂದಿರುವ ಅವರ ‘ಹದಿಹರೆಯದ ಎಡವಟ್ಟು’ ನೀಳ್ಗತೆಗಳ ಸಂಕಲನ ಮತ್ತೆ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳನ್ನು ಕೇಂದ್ರವಾಗಿಟ್ಟು ಅವರು ಬರೆದಿದ್ದಾರೆ. ಇಲ್ಲಿರುವ ಕತೆಗಳು ಕೆಲವು ಕಾರಣಗಳಿಗಾಗಿ ಕೇವಲ ಕತೆಗಳು ಎನ್ನುವಂತಿಲ್ಲ. ಯಾಕೆಂದರೆ ಇದು ಟಿವಿಯಲ್ಲಿ ಸರಣಿಯಾಗಿ ಹೊರಬರುತ್ತಿದ್ದ ‘ಸಾವಧಾನ ಇಂಡಿಯಾ’ ಸರಣಿಯಿಂದ ಸ್ಫೂರ್ತಿಯನ್ನು ಪಡೆದಿದೆ. ಸಾಕ್ಷಚಿತ್ರದ ಹಿನ್ನ್ನೆಲೆಯಲ್ಲಿ ರೂಪುಗೊಂಡಿರುವ ಈ ಸರಣಿ ಹೆಣ್ಣಿನ ಮೇಲೆ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿರುವ ದೌರ್ಜನ್ಯ ಶೋಷಣೆಗಳ ಮೇಲೆ ಬೆಳಕು ಚೆಲ್ಲಿದೆ. ನಡೆದ ಘಟನೆಗಳನ್ನು ಇಟ್ಟುಕೊಂಡು ಕಿರು ಚಿತ್ರ ರೂಪದಲ್ಲಿ ಟಿವಿಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಶೋಷಣೆಯೆನ್ನುವುದು ಕೇವಲ ಹಳ್ಳಿಗಳಲ್ಲಿ ಮಾತ್ರ ನಡೆಯುವುದಲ್ಲ, ನಗರಗಳಲ್ಲೂ ನಡೆಯುತ್ತವೆ ಅದರಲ್ಲೂ ವಿದ್ಯಾವಂತರೊಳಗೂ ಶೋಷಣೆಗಳಿವೆ ಎನ್ನುವ ಕಟು ಸತ್ಯಗಳನ್ನು ಈ ಟಿವಿ ಸರಣಿಗಳು ಹೊರಚೆಲ್ಲಿವೆ. ಮಾರುಕಟ್ಟೆಗಳಲ್ಲಿ ಹೇಗೆ ಹೆಣ್ಣು ಸರಕಾಗಿ ಬಿಂಬಿತವಾಗುತ್ತಿದ್ದಾಳೆ ಎನ್ನುವುದನ್ನೂ ಈ ಸರಣಿಗಳು ಹೇಳುತ್ತಾ ಬಂದಿವೆ. ಹೆಣ್ಣಿನ ಮೇಲೆ ಹೆಣ್ಣೇ ಎಸಗುವ ದೌರ್ಜನ್ಯ, ಅದಕ್ಕೆ ಸಹಾಯ ಮಾಡುವ ಪುರುಷ ಪ್ರಧಾನ ವ್ಯವಸ್ಥೆಯನ್ನೂ ಇವುಗಳು ವಿಶ್ಲೇಷಿಸುತ್ತವೆ. ಈ ಟಿವಿ ಚಾನಲ್‌ಗಳಲ್ಲಿ ಕಾರ್ಯಕ್ರಮಗಳ ಸ್ಫೂರ್ತಿಯಿಂದ ಸಾರಾ ಅಬೂಬಕ್ಕರ್ ಅವರು ಈ ನೀಳ್ಗತೆಗಳನ್ನು ಬರೆದಿದ್ದಾರೆ.
‘ಹದಿಹರೆಯದ ಎಡವಟ್ಟು’ ಎನ್ನುವ ಹೆಸರೇ ಇದು ಬರೇ ಕತೆಯಲ್ಲ, ವಾಸ್ತವಗಳನ್ನು ಆಧರಿಸಿದ ವರದಿ ರೂಪದ ಕತೆ ಎನ್ನುವುದನ್ನು ಹೇಳುತ್ತದೆ. ರಂಜಿಸುವುದು ಇಲ್ಲಿನ ಗುರಿಯಲ್ಲ, ಬದಲಿಗೆ ಜಾಗೃತಿ ಲೇಖಕಿಯ ಉದ್ದೇಶ. ಹದಿಹರೆಯ ಮಹಿಳೆಯರಿಗೆ ತಂದು ಹಾಕುವ ಆಪತ್ತು, ಮತಾಂಧತೆ ಹೇಗೆ ಮಹಿಳೆಯನ್ನು ಬಲಿಹಾಕಬಹುದು, ವರದಕ್ಷಿಣೆ ಹೆಣ್ಣನ್ನು ಬೇರೆ ಬೇರೆ ನೆಲೆಯಲ್ಲಿ ಹೆಣ್ಣನ್ನು ಬಲಿಯಾಗಿಸಿಕೊಂಡು ಬಂದಿದೆ, ಉದ್ಯೋಗ ಹೊಂದಿದ ಮಹಿಳೆಯೂ ಸಮಾಜದಲ್ಲಿ ಹೇಗೆ ಆತಂಕವನ್ನು, ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಕೃತಿಯಿಂದ ನಮ್ಮದಾಗಿಸಿಕೊಳ್ಳಬಹುದು.