‘ತಾಯವ್ವ’: ಸತ್ಯಾಗ್ರಹದ ಸಾಂಸ್ಕೃತಿಕ ರೂಪಕ
ತಾಯವ್ವ ಐವತ್ತು ದಾಟಿದ, ತಲೆಗೂದಲು ಬಿಳಿಯಾದ ಮುದಿಜೀವ. ಆಕೆಗೊಬ್ಬ ಚೆಲುವಾದ ಮಗ, ಹೆಸರು ಚೆಲುವ. ಚಮ್ಮಾರಿಕೆ ಇವರ ಕುಲವೃತ್ತಿ. ಅದುವೇ ಅವರ ಉದರ ತುಂಬಿಸುವ ಬುತ್ತಿ. ಹೀಗಿದ್ದಾಗ, ಇದ್ದಕ್ಕಿದ್ದಂತೆ ಅವರು ತಯಾರಿಸುವ ಉತ್ಪನ್ನಗಳ ಮೇಲೆ ಕರ ನಿಗದಿಯಾಗುತ್ತೆ. ಬರುವ ಆದಾಯಕ್ಕೆ ಕುತ್ತೊದಗುತ್ತೆ. ಅಧ್ಯಯನದ ಅರಗಿನಿಂದ ಚಳವಳಿಯ ದೃಷ್ಟಿಕೋನವನ್ನು ಮೊನಚು ಮಾಡಿಕೊಂಡಿರುವ ಚೆಲುವನಿಗೆ ತೆರಿಗೆ ಸುಧಾರಣೆಯ ಸರಕಾರದ ನೀತಿಗಳು ಹಿಡಿಸುವುದಿಲ್ಲ. ಅದರ ವಿರುದ್ಧ ಕ್ರಾಂತಿಯಾಗಬೇಕು ಎಂಬುದು ಅವನ ತುಡಿತ. ಇದಕ್ಕೆ ಅವನ ಸಂಗಡಿಗರು ಸಾಥ್ ನೀಡುತ್ತಿರುತ್ತಾರೆ. ಆದರೆ ಮಗ ಚಳವಳಿಯ ಹಾದಿ ತುಳಿದರೆ, ದಾರಿ ತಪ್ಪುತ್ತಾನೆ ಎಂಬುದು ತಾಯವ್ವನ ಆತಂಕ.
ಹೇಗೆ ಬೇಯಿಸಲಿ ಈ ಸಾರು..., ಚಟಾಕು ಕಾಳಿರದೆ, ಚಮಚ ಕೈ ಇರದೆ, ತಟಾಕು ಮಾಂಸದ... ಚೂರಿರದೆ. ಹೇಗೆ ಬೇಯಿಸಲಿ ಹೇಳಿ... ಹಸಿ ಮುದ್ದೆ, ಹಸಿದವಗೆ......
ತಾಯವ್ವಳ (ಎಂ.ಡಿ.ಪಲ್ಲವಿ) ಸ್ವರಮಾಧುರ್ಯದಲ್ಲಿ ಈ ಆದಿಗೀತೆಯೊಂದಿಗೆ ನಾಟಕ ಆರಂಭವಾಗುತ್ತದೆ. ತೆರಿಗೆ ಸುಧಾರಣೆಗಳಿಂದ ಜನಸಾಮಾನ್ಯರ ಜೀವನೋಪಾಯಕ್ಕೆ ಬಂದೊದಗಿದ ಕುತ್ತನ್ನು ಇದು ಸೂಚ್ಯವಾಗಿ ಸೂಚಿಸುವಂತಿದೆ. ಇಲ್ಲಿನ ಅವ್ವನಿಗೆ ಉಪ್ಪಿನಲ್ಲಿ ಉಳಿಸಲು ಹೋದರೆ, ಸೊಪ್ಪಿನಲ್ಲಿ ದುಡಿಮೆ ಪಾಲು ಸರಕಾರದ ಪಾಲಾಗುತ್ತಿದೆಯಲ್ಲ ಎಂಬ ಅಳಲು. ಚೆಲುವನಿಗೆ ‘ಏಕೆ ಬೇಕು ಈ ಜಗದವರಿಗೆ.. ಇಷ್ಟೆಲ್ಲಾ ವರಮಾನ, ಇಷ್ಟೆಲ್ಲಾ ಬಿಗುಮಾನ’ ಎಂದು ಕಾಡುತ್ತಿರುವ ಪ್ರಶ್ನೆಗಳು. ಇವರಿಬ್ಬರ ನೋವು-ಪ್ರಶ್ನೆಗೆ ಒಂದೇ ಉತ್ತರ. ಅದುವೇ, ಸರಕಾರದ ಕರ ದರಗಳು.
ಬಡವರ ಬದುಕನ್ನು ಮೂರಾಬಟ್ಟೆ ಮಾಡಿದ ತೆರಿಗೆ ನೀತಿ ಕುರಿತು ಜನರಲ್ಲಿ ಕರ ನಿರಾಕರಣೆಯ ಜಾಗೃತಿ ಮೂಡಿಸಲು ಸಂಗಡಿಗರೊಂದಿಗೆ ಚಲುವ (ಶಿವ) ಮುಂದಾಗುತ್ತಾನೆ. ಅದಕ್ಕೆ ತಾಯವ್ವ ಅಡ್ಡಗಾಲು ಹಾಕುತ್ತಾಳೆ. ಮಗ ಕರಪತ್ರಗಳನ್ನು ಹಂಚಲು ಮುಂದಾಗುತ್ತಾನೆ. ಅವನು ಹೋದರೆ, ಅವನ ಪ್ರಾಣಕ್ಕೆ ಕುತ್ತೇನಾದರೂ ಬಂದರೆ? ಎಂಬ ಕಾರಣಕ್ಕೆ, ಪತ್ರ ಹಂಚುವ ಹೊಣೆಯನ್ನು ತಾನೇ ಹೊರುತ್ತಾಳೆ. ಆ ಮೂಲಕ ಮೆಷಿನುಗಳ ಪ್ರವೇಶದಿಂದ ಮನುಷ್ಯನ ಕೈಗಳಿಗೆ, ಜೀವಕ್ಕಾದ ನಷ್ಟ ಅರಿತುಕೊಳ್ಳುತ್ತಾಳೆ. ಆಗ ಆಕೆಯೂ ಚಳವಳಿ ಹಾದಿಯ ಸಹಪ್ರಯಾಣಿಕಳಾಗುತ್ತಾಳೆ.
ಉಳ್ಳವರ ಜತೆಗಿದ್ದ ಅಮರ್ ಅಕ್ಬರ್‌ಅಂಥೋನಿ(ಎಂ.ಸಿ.ಆನಂದ್) ಎಂಬಾತನಿಗೂ ಇಲ್ಲದವರ ಬಗ್ಗೆ ಎಲ್ಲಿಲ್ಲದ ಕನಿಕರ. ಹಾಗಾಗಿ ಚಳವಳಿಗಾರರೊಂದಿಗೆ ಆತನೂ ಕೈಜೋಡಿಸುತ್ತಾನೆ. ಅನ್ಯಾಯಗಳ ವಿರುದ್ಧದ ಇವರ ಕೂಗು ಸಮಾಜದ ಹಲವು ರಂಗದಲ್ಲಿನ ಕಾರ್ಮಿಕರ ಪರವಾಗಿ ಮೊಳಗುತ್ತದೆ. ಪ್ರತಿಭಟನೆಯೊಂದರಲ್ಲಿ ಚೆಲುವ ದಾರುಣ ಅಂತ್ಯ ಕಾಣುತ್ತಾನೆ. ಆಗ ತಾಯವ್ವ ಎದೆಗುಂದದೆ, ಶೋಷಿತರೆಲ್ಲರನ್ನು ತನ್ನ ಮಕ್ಕಳೆಂದು ಪರಿಭಾವಿಸಿ, ಚಳವಳಿಗಳಲ್ಲಿ ಚುರುಕಾಗುತ್ತಾಳೆ.
ಆಕೆಯ ಹೋರಾಟದ ಪಯಣದಲ್ಲಿ ಆಹಾರದ ಆಯ್ಕೆ, ಆಧಾರ್ ಕಾರ್ಡ್‌ನ ಕಡ್ಡಾಯ ಜೋಡಣೆ, ಮದ್ಯಮಾರಾಟ ನಿಷೇಧ, ಕಾರ್ಮಿಕ ಹೋರಾಟಗಳ ಬೇಡಿಕೆ, ಪೊಲೀಸರ ದೌರ್ಜನ್ಯ, ನಗರಗಳೆಡೆಗೆ ರೈತರ ವಲಸೆ, ಕೈಗಾರೀಕರಣದ ದುಷ್ಪರಿಣಾಮ, ಪರಿಸರ ನಾಶ, ಗುಡಿ ಕೈಗಾರಿಕೆಗಳ ಅವನತಿ, ಕೊಳ್ಳುಬಾಕುತನ ಸಂಸ್ಕೃತಿಯ ವಿರೋಧ ಮತ್ತು ಕೆಂಪುಯುವಕರ ದುಸ್ಥಿತಿಯ ನಿಲ್ದಾಣಗಳು ಬರುತ್ತವೆ. ‘ಮತ್ತೆ ಚಿಗುರಲಿ ದುಡಿಯುವ ಕೈ, ಮತ್ತೆ ಚಿಗುರಲಿ ನಡೆಯುವ ಕಾಲು’ ಎಂಬ ಸಾಲುಗಳಿಂದ ಮುಕ್ತಾಯವಾಗುವ ಈ ರಂಗರೂಪಕ, ಇಂದಿನ ವ್ಯವಸ್ಥೆಯ ಅವ್ಯವಸ್ಥೆಯ ಕುರಿತು ಇನ್ನೂ ಆಶಾಭಾವನೆ ಉಳಿಸಿಕೊಳ್ಳಬೇಕೆಂದು ಸಾರುವಂತಿದೆ.
ಶ್ರಮಜೀವನವನ್ನೇ ಪ್ರತಿಪಾದಿಸುವ ಪ್ರಸನ್ನ ಅವರು ರಂಗರೂಪಕ ರೂಪಿಸಲು ತಕ್ಕಮಟ್ಟಿನ ಶ್ರಮ ಹಾಕಿದ್ದಾರೆ. ಸಂಭಾಷಣೆಗಳಲ್ಲಿ ಸತ್ವವಿದೆ, ಹಾಸ್ಯವಿದೆ, ವ್ಯಂಗ್ಯವಿದೆ ಹಾಗೆಯೇ ವಿಷಾದವೂ ಇದೆ. ಎಂ.ಡಿ.ಪಲ್ಲವಿಯವರ ಕಂಠಸಿರಿಯಿಂದಾಗಿ ಹಾಡುಗಳು ಮನ ತಟ್ಟುತ್ತವೆ. ಹಾಗೆಯೇ ಅವರ ಅಭಿನಯದಲ್ಲಿಯೂ ಕೊರತೆ ಕಾಣದು. ಅ. ಅ. ಅಂಥೋಣಿಯ ಮಾತುಗಳು ಪ್ರೇಕ್ಷಕರಲ್ಲಿ ನಗೆಯುಕ್ಕಿಸುತ್ತವೆ.
ಸಂಗಡತಿಯಾಗಿ ಸಿತಾರಾ, ಪೊಲೀಸ್‌ಧಾರಿ ಚಿಂತನ್‌ವಿಕಾಸ್ ಪಾತ್ರಗಳು ನೆನಪಿನಲ್ಲಿ ಉಳಿಯು ತ್ತವೆ. ಅಗ್ನಿ ಆರ್ಟ್ ಫಾರ್ ಆಲ್ ಕಲಾಶಾಲೆಯ ವಿದ್ಯಾರ್ಥಿಗಳ ಹಿನ್ನೆಲೆ ವಾದ್ಯಸಂಗೀತ ಕಿವಿಗಳಿಗೆ ಹಿತವೆನಿಸುತ್ತದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಗ್ರಾಮ ಸೇವಾ ಸಂಘದ ವತಿಯಿಂದ ಪ್ರಥಮ ಪ್ರದರ್ಶನ ಕಂಡ ರಂಗಕರ್ಮಿ ಪ್ರಸನ್ನ ನಿರ್ದೇಶನದ ‘ತಾಯವ್ವ’ ನಾಟಕ ಇಂದಿನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಬಿಡಿ-ಬಿಡಿಯಾಗಿ ಚಿತ್ರಿಸಿ, ನಂತರ ಜೋಡಿಸಿದ ಚಿತ್ರಪಟದಂತೆ ಕಾಣುತ್ತದೆ. ಉಪಸಂಹಾರದಲ್ಲಿ ಅಲ್ಪ ನಿರಾಸೆಯೂ ಆಗುತ್ತದೆ.