‘ತಾಯವ್ವ’ - ನೀನೇ ಕಾಯಬೇಕವ್ವ
ಸಾಹಿತ್ಯ ರಚನೆಯೂ ಕೈ ಕಸುಬು. ಅದಕ್ಕೂ ತೆರಿಗೆಯೇ? ಹೌದು ಎನ್ನುತ್ತದೆ ಜಿ.ಎಸ್.ಟಿ. ಕಾಯ್ದೆ. ಪುಸ್ತಕ ಪ್ರಕಟಣೋದ್ಯಮ ತನ್ನ ಪ್ರಕಟಣೆಗಳ ಮೇಲೆ ಶೇ.18ರಷ್ಟು ಜಿ.ಎಸ್.ಟಿ. ತೆರಬೇಕು. ಪುಸ್ತಕ ಪ್ರಕಾಶಕರು ಪ್ರಕಟಿಸುವ ಪುಸ್ತಕಗಳು ಮತ್ತು ಸಂಗೀತದಂಥ ಪಠ್ಯಪುಸ್ತಕಗಳ ಮುಖಬೆಲೆ ಮೇಲೆ ಶೇ.18 ಜಿ.ಎಸ್.ಟಿ. ತೆರಬೇಕು.ಹಾಗೂ ಲೇಖರಿಗೆ ಕೊಡುವ ಗೌರವಧನದಿಂದಲೂ ಪ್ರಕಾಶಕರು ಶೇ.18 ಜಿ.ಎಸ್.ಟಿ. ಮುರಿದುಕೊಳ್ಳಬೇಕು. ಅಂದರೆ, ನನ್ನಂಥ ಬಡ ಲೇಖಕನಿಗೆ ದೊರಯುವ ಶೇ.10 ಗೌರವಧನದಲ್ಲಿ ಶೇ.18ರಷ್ಟು ಜಿ.ಎಸ್.ಟಿ. ಯನ್ನು ಪ್ರಕಾಶಕರು ಕಟಾಯಿಸಿಕೊಂಡೇ ಪಾವತಿಸಬೇಕು.
ಧನುರ್ಮಾಸ ಶುರುವಾಗಿದೆ. ಮೈ ನಡುಗಿಸುವ, ಹಲ್ಲು ಕರಕರಗುಟ್ಟಿಸುವ ಚಳಿ ಇರಬೇಕಾಗಿತ್ತು. ಆದರೆ ಈ ವರ್ಷ ಚಳಿಗಾಲ ಬಂದರೂ ಚಳಿ ನಾಪತ್ತೆ. ತಾಪಮಾನ ಏರಿಕೆಯಿಂದಾಗಿ ಹೀಗೆ ಎಂದು ಹವಾಮಾನ ತಜ್ಞರ ಅಂಬೋಣ. ಮೈ ನಡುಗಿಸುವ ಚಳಿಯಲ್ಲೂ ವರ್ತಮಾನ ಪತ್ರಿಕೆ ತುಂಬ ಹೃದಯ ಬೆಚ್ಚಗಾಗಿಸುವ ಸುದ್ದಿಗಳು ಅಂದೆಲ್ಲ. ಇಂದು?
ವರ್ತಮಾನದ ತುಂಬ ರಕ್ತ ಹೆಪ್ಪುಗಟ್ಟಿಸುವ ಶೀತಲ ಸುದ್ದಿಗಳು.ತಲೆದಂಡ ಬೇಡುವ,ರುಂಡ ಚೆಂಡಾಡುವ, ಕೈ ಕತ್ತರಿಸುವ, ಮೂಗು ಕುಯ್ಯುವ,ನಾಲಗೆ ಸೀಳುವ...ಸನ್ನಿಪಾತದ ಮುಕ್ತಕಗಳು.ಇನ್ನು ದಿಲ್ಲಿಯಾದರೋ ಮಂಜು ಮುಸುಕಿದ ಜ್ವಾಲಾಮುಖಿ.....
.....ತಲೆ ತೆಗೆದವರಿಗೆ ಲಕ್ಷ ಬಹುಮಾನ.
ಮೂಗು ಕುಯ್ಯಲಾಗುವುದು
....ಬೆರಳು ಕತ್ತರಿಸಲಾಗುವುದು
...ಕೈ ಕತ್ತರಿಸಲಾಗುವುದು
ವರ್ತಮಾನದ ತುಂಬ ಇಂಥ ಸುದ್ದಿಗಳೇ. ನಾಗರಿಕ ಪ್ರಪಂಚ ವನ್ನು ಕಂಗೆಡಿಸುವ ಸುದ್ದಿಗಳು. ‘‘ಕಾಡುತ್ತಿರುವ ಭೂತ ಕಾಲದ ಭ್ರೂಣಗೂಢಗಳು’’. ಮನಸ್ಸು ಮುದುಡಿಹೋಯಿತು. ಕೈ ಮರಗಟ್ಟಿ ಮುಂದಿನ ಪುಟಕ್ಕೆ ಹೋಗುವುದು ಕಷ್ಟವಾಯಿತು.
‘‘ಹೊಳೆವುದು ಹಠಾತ್ತನೊಂದು ಚಿನ್ನದಗೆರೆ’’ಯ ಭರವಸೆಯಿಂದ ಮುಂದಿನ ಪುಟಕ್ಕೆ ಧಾವಿಸಿದಾಗ ಮೂಲೆಯ ಲ್ಲೊಂದು ಅಂಚುಕಟ್ಟಿದ ತುಣುಕು ಸುದ್ದಿ: ‘‘ತಾಯವ್ವ ನಾಟಕ ಪ್ರದರ್ಶನ’’.
ಸಂಜೆಯಾದರೂ ಬಿಡದ, ಬೆಳಗ್ಗೆಯಿಂದ ಅಮರಿಕೊಂಡ ವರ್ತಮಾನದ ಖಿನ್ನತೆ. ಹೊರಗೆ ಚಳಿ ಇಲ್ಲದ ಚಳಿಗಾಲದ ದಿಗಂತದಲ್ಲೂ ಗಬ್ಬಕಟ್ಟಿದ ನಿರಾಕರ್ಷಕ ಬೂದು. ಖಿನ್ನತೆಯೇ ಹಾಸುಹೊಕ್ಕಾಗಿ ಬೀದಿಗಿಳಿದು ಎ.ಡಿ.ಎ. ರಂಗಮಂದಿರ ತಲುಪಿದಾಗ ಕಂಡದ್ದು ಒಂದು ಪುಟ್ಟ ಜನ ಸಾಗರ. ಈ ಜನ ಸಾಗರದ ಮಧ್ಯೆ ಯಾರದೋ ಕೈಕುಲುಕುತ್ತ, ಇನ್ನಾರದೋ ಮಾತನ್ನಾಲಿಸುತ್ತಾ ನಿಂತ ಬೋಳು ತಲೆಯ, ಬಿಳಿನೀಳ ಗಡ್ಡದ ಪ್ರಸನ್ನ. ಜನ ಸಾಗರದಲ್ಲೂ ಮಿರುಗುವ ಅಸಲಿ ಚಿನ್ನದ ಗೆರೆ ಹುಡುಕುವ ಭರವಸೆಯಿಂದ ನಿಂತ ಹೊಳೆವ ಕಂಗಳ ಪ್ರಸನ್ನ. ಮೂರು ನಾಲ್ಕು ದಶಕಗಳ ಹಿಂದೆ, ಆಗತಾನೆ ಎನ್.ಎಸ್.ಡಿ.ಯಿಂದ ಬೆಂಗಳೂರಿನ ರಂಗಪ್ರವೇಶ ಮಾಡಿದ್ದ ಪ್ರಸನ್ನರ ಚಿತ್ರ ಒಂದು ಕ್ಷಣ ಮನದಲ್ಲಿ ಮೂಡಿತು. ಸುಡುವ ಕೋಪದ,ಉಜ್ವಲ ಪ್ರತಿಭೆಯ, ಹೊಸ ಹಾದಿಗಳ ಹುಡುಕುವ ಹೊಳಪು ಕಂಗಳ, ರಂಗಭೂಮಿಯಿಂದಲೇ ಹೊಸ ಬದುಕನ್ನು ಕಟ್ಟುವ ಛಲದ ಪ್ರಸನ್ನ. ಇಂದೂ ತಾತ್ವಿಕ ನಂಬಿಕೆಯಲ್ಲಿ, ರಂಗಭೂಮಿ ಮೂಲಕವೇ ಹೊಸಬದುಕನ್ನು ಕಟ್ಟುವ ಬದ್ಧತೆಯಲ್ಲಿ, ಅದೇ ಪ್ರಸನ್ನ. ಆದರೆ ತಲೆ ಬೋಳಾಗಿದೆ. ನೀಳ ಗಡ್ಡ ಬೆಳೆಸಿದ್ದಾರೆ. ಮಾತಿನಲ್ಲಿ ಅದೇ ನಿಕರತೆ, ಸೈದ್ಧಾಂತಿಕ ದೃಢತೆ. ಆದರೆ ಕೋಪದ ಕಾವಿಲ್ಲ.ಕಣ್ಣುಗಳಲ್ಲಿ ಭರವಸೆಯ ಅದೇ ಹೊಳಪು. ವಿವೇಕದ ಶಿಖೆ ತಲೆಕೆಳಗಾದಂತೆ ನೀಳವಾದ ಬಿಳಿಗಡ್ಡ. ಬದಲಾಗಿದ್ದರೆ ಅದು ತಾತ್ವಿಕವಾಗಿ ಗಾಂಧಿ ತತ್ವವಿಚಾರಗಳತ್ತ ಕೊಂಚ ವಾಲಿರುವ ಬದ್ಧತೆ. ‘ತಾಯವ್ವ’-ಪ್ರವೇಶ ಶುಲ್ಕ ರೂ.251 ನನ್ನ ಕಿಸೆಗೆ ಕೊಂಚ ಭಾರ ಎನಿಸಿದರೂ ಟಿಕೆಟ್ ಪಡೆದಾಗ ಗಮನಕ್ಕೆ ಬಂದದ್ದು ಅದರ ಹಿಂದಿನ ಈ ಮುದ್ರಿತ ಒಕ್ಕಣೆ: ‘‘ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಜಿ.ಎಸ್.ಟಿ. ಹೇರಿರುವುದನ್ನು ಪ್ರತಿಭಟಿಸುವ ಕರನಿರಾಕರಣ ಚಳವಳಿಯ ಅಂಗವಾದ ಈ ನಾಟಕ ಪ್ರದರ್ಶನದ ಈ ಟಿಕೆಟನ್ನು ತೆರಿಗೆ ವಸೂಲಿಮಾಡದೆ/ತೆರಿಗೆ ಪಾವತಿಸದೆ ನಿಮಗೆ ನೀಡಲಾಗಿದೆ’’.
ಕರ್ನಾಟಕದ ಸಮುದಾಯ ರಂಗ ತಂಡದ ಸಂಸ್ಥಾಪಕರಾದ ಪ್ರಸನ್ನ ರಂಗಭೂಮಿಯ ಪರಿಕಲ್ಪನೆಯನ್ನು ಕೇವಲ ಮನೋರಂಜನೆಗೆ ಸೀಮಿತಗೊಳಿಸಿಕೊಂಡವರಲ್ಲ. ರಂಗಭೂಮಿಯಲ್ಲಿ ಹೋರಾಟದ ಅಭಿವ್ಯಕ್ತಿಯ ಸಾಧ್ಯತೆಗಳನ್ನೂ ಕಂಡುಕೊಂಡವರು. ರೈತರು-ನೇಕಾರರ-ನೂಲುಕಾರರ ಹೋರಾಟದಲ್ಲಿ, ಸಂಘಟನೆಯಲ್ಲಿ ತೊಡಗಿಕೊಂಡವರು. ಸಹಕಾರ ಸಂಘಗಳ ಮೂಲಕ ರೈತರು/ನೇಕಾರರು ಉತ್ಪನ್ನಗಳಿಗೆ ನಗರ ಪ್ರದೇಶಗಳಲ್ಲಿ ಮಾರುಕಟ್ಟೆ ಸೃಷ್ಟಿಸಲು ಪ್ರಯತ್ನಿಸುತ್ತಿರುವವರು. ಗ್ರಾಮ ಸೇವಾ ಸಂಘ ಪ್ರಸನ್ನರ ಇಂಥ ಸಂಘಟನೆಗಳಲ್ಲಿ ಒಂದು. ಕೈ ಉತ್ಪನ್ನಗಳ ಮೇಲೆ ಕೇಂದ್ರ ಸರಕಾರ ಜಿ.ಎಸ್.ಟಿ. ಹೇರಿರುವುದರ ವಿರುದ್ಧ ಗ್ರಾಮ ಸೇವಾ ಸಂಘ ಗಾಂಧಿಪ್ರಣೀತ ಕರ ನಿರಾಕರಣ ಸತ್ಯಾಗ್ರಹ ಪ್ರಾರಂಭಿಸಿದೆ. ಕರನಿರಾಕರಣ ಸತ್ಯಾಗ್ರಹದ ರಂಗ ರೂಪ,‘ತಾಯವ್ವ’. ಪ್ರಸನ್ನ ಹೇಳುವಂತೆ ಈ ನಾಟಕ ಪ್ರದರ್ಶನದ ಉದ್ದೇಶ ರಾಜಕೀಯ. ಯಾವುದೇ ಗ್ರಾಮೀಣ ಕೈ ಕಸುಬುಗಳಂತೆ, ಜಾನಪದ ಕರಕುಶಲ ಕಲೆಗಳಂತೆ ರಂಗಭೂಮಿಯೂ ಕರಕೌಶಲವನ್ನೊಳಗೊಂಡ ಕಲೆ. ಕೈ ಉತ್ಪನ್ನಗಳ ಮೇಲೆ ಜಿ.ಎಸ್.ಟಿ. ಹೇರಿರುವುದರ ವಿರುದ್ಧ ಸತ್ಯಾಗ್ರಹ ಕೈಗೊಂಡಿರುವಾಗ ರಂಗಭೂಮಿಯೂ ಈ ಸತ್ಯಾಗ್ರಹದಲ್ಲಿ ಭಾಗಿಯಾಗುವುದು ನ್ಯಾಯೋಚಿತವಾಗಿಯೇ ಇದೆ. ರಂಗಭೂಮಿ ಸಾಂಸ್ಕೃತಿಕ ಮಾಧ್ಯಮವಾಗಿಯೂ ಈ ರಾಜಕೀಯ ಹೋರಾಟದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ. ಎಂದೇ ಬೌದ್ಧಿಕ ಸಂವಾದಕ್ಕಿಂತ ಒಂದು ಸಂಗೀತ ನಾಟಕ ಹೆಚ್ಚು ಪರಿಣಾಮಕಾರಿ ಎಂದು ಅಂತಬೆರ್ಧೆಯಾಗಿರಬೇಕು ಪ್ರಸನನ್ನರಿಗೆ.
ಮಾತು, ಸಂಭಾಷಣೆಗಳು ಕಡಿಮೆ. ವಸ್ತು ನಿರೂಪಣೆ, ಚರ್ಚೆ ಸಂವಾದಗಳೆಲ್ಲ ಗದ್ಯ ಲಯದ ಹಾಡುಗಳಲ್ಲೇ. ಹಸಿವಿನ ದನಿಯೊಂದಿಗೇ, ಮಗನಿಗೆ ಉಣಬಡಿಸಲಾಗದ ತಾಯಿಯ ಕರುಳಿನ ಸಂಕಟದೊಂದಿಗೆ ಶುರುವಾಗುವ ‘ತಾಯವ್ವ’ ನಾಟಕದ ನಾಯಕಿ ‘ದುರ್ಗವ್ವ’. ಈ ದುರ್ಗವ್ವ ಶೋಷಿತರ ಚಳವಳಿಯ ‘ತಾಯವ್ವ’ಳಾಗುವ ಪ್ರಕ್ರಿಯೆಯಲ್ಲಿ ಈ ಕ್ಷಣದ ಭುಗಿಲಾದ ಜಿ.ಎಸ್.ಟಿ.ಯೂ ಸೇರಿದಂತೆ ಈಗಿನ ಸಮಾಜದ ಶೋಷಿತ ವರ್ಗದ ನೋವು ಮತ್ತು ಸರಕಾರದ ಜನವಿರೋಧಿ ನೀತಿಗಳು, ಬರ್ಬರತೆಗಳು ತಮ್ಮದೇ ಆದ ‘ರಾಗ’ಗಳಲ್ಲಿ ನಮ್ಮೆದುರು ಕಾಣಿಸಿಕೊಳ್ಳುತ್ತವೆ.
ದುರ್ಗವ್ವ ಚಮ್ಮಾರಿಕೆ ಕಸುಬಿನವಳು. ಚಮ್ಮಾರಿಕೆ ಮಾಡುತ್ತಿದ್ದ ಗಂಡ ಈಗಿಲ್ಲ. ಪ್ರಾಯಕ್ಕೆ ಬಂದ ಮಗನೂ ಓದುಬರಹ ಕಲಿತು ಸಾಮಾಜಿಕವಾಗಿ ಜಾಗೃತನಾದವನು. ಚಮ್ಮಾರಿಕೆಯಿಂದ ಬರುತ್ತಿದ್ದ ಆದಾಯ ನಿಂತುಹೋಗಿದೆ. ಅನ್ಯಾಯದ ವಿರುದ್ಧ ಸೊಲ್ಲೆತ್ತುತ್ತಿರುವ ಯುವಕರು ಮಗನನ್ನು ತಪ್ಪು ಹಾದಿಗೆಳೆಯುತ್ತಿದ್ದಾರೆಂಬ ಅಳುಕಿನ ದುರ್ಗವ್ವ, ಅವರಿಂದ ಮಗನನ್ನು ತಪ್ಪಿಸುವ ಪ್ರಯತ್ನದಲ್ಲಿ ಸತ್ಯಾಗ್ರಹಿಗಳೊಂದಿಗೆ ಮುಖಾಮುಖಿಯಾಗುತ್ತಾಳೆ. ಜಿ.ಎಸ್.ಟಿ. ವಿರೋಧಿ ಸತ್ಯಾಗ್ರಹದ ಹೋರಾಟಗಾರ ಮಗ ಚೆಲುವ ಪೊಲೀಸರ ಗುಂಡೇಟಿಗೆ ಬಲಿಯಾದಾಗ ಸತ್ಯಾಗ್ರಹಕ್ಕೆ ಪೂರ್ಣವಾಗಿ ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ. ಸತ್ಯಾಗ್ರಹದ ನೇತಾರಳಾಗುತ್ತಾಳೆ. ಹೀಗೆ, ಶೋಷಿತರ ತಾಯವ್ವಳಾಗಿ, ಸಮಾನ ತೆರಿಗೆಯ ಹಿಂದಿನ ಸಣ್ಣಪುಟ್ಟ ಕೈಕಸುಬಿನವರನ್ನೂ ಶೋಷಿಸುವ ಕರಾಳ ಹುನ್ನಾರವನ್ನು ಬೆಳಕಿಗೊಡ್ಡುತ್ತಾಳೆ. ಇದಿಷ್ಟು ನಾಟಕದ ಕಥಾ ಹಂದರ.
ನಾಟಕದ ಸಂದೇಶವನ್ನು ಜನಕ್ಕೆ ತಲುಪಿಸುವಲ್ಲಿ ಪ್ರಯೋಗ ಯಶಸ್ವಿ ಯಾಯಿತು ಎನ್ನುವುದಕ್ಕೆ, ರಂಗ ಮಂದಿರದ ಕೆಳಗೆ, ಮೇಲೆ ಹಾಗೂ ಇಕ್ಕೆಲೆಗಳಲ್ಲಿ ಕುಳಿತು, ನಿಂತು ವಿಕ್ಷೀಸುತ್ತಿದ್ದ ಪ್ರೇಕ್ಷಕರು ಪ್ರತೀ ದೃಶ್ಯ/ಸನ್ನಿವೇಶಗಳಿಗೆ ತೋರುತ್ತಿದ್ದ ಪ್ರತಿಕ್ರಿಯಗಿಂತ ಮಿಗಿಲಾದ ಮತ್ತೊಂದು ನಿದರ್ಶನ ಬೇಕಿಲ್ಲ. ಜಿ.ಎಸ್.ಟಿ. ಕುರಿತ ಜನಸಾಮಾನ್ಯರ ಭಾವನೆಗಳನ್ನು ನಿರೂಪಿಸುವುದರಲ್ಲಿ ಪ್ರಸನ್ನರೂ ಯಶಸ್ವಿಯಾಗಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗದು. ಪ್ರತಿಭಾವಂತ ಅಭಿನಯಪಟುಗಳ ಆಯ್ಕೆ ಮತ್ತು ಸಂಗೀತ, ವಿಶೇಷವಾಗಿ, ತಮಟೆ ನಗಾರಿಯಂಥ ಜಾನಪದ ವಾದ್ಯಗಳ ಬಳಕೆ ಒಟ್ಟು ಪರಿಣಾಮದ ದೃಷ್ಟಿಯಿಂದ ಹೆಚ್ಚು ಗಮನ ಸೆಳೆಯಿತು. ಪಾತ್ರ ನಿರ್ವಹಣೆಯಲ್ಲಿ ಎಲ್ಲರದೂ ‘ಸೈ’ ಎನ್ನಿಸಿಕೊಳ್ಳುವಂಥ ಅಭಿನಯ. ಬಹಳ ಕಾಲದ ನಂತರ ಕಾಣಿಸಿಕೊಂಡ ಹಳಬ ಎಂ.ಸಿ. ಆನಂದ್, ಹೊಸಬ ಚಿಂತನ್ ವಿಕಾಸ್ ಮತ್ತು ಖ್ಯಾತ ಗಾಯಕಿ ಪಲ್ಲವಿ ವಿಶೇಷ ಉಲ್ಲೇಖಕ್ಕೆ ಅರ್ಹರು. ಗದ್ಯ ಸಾಲುಗಳನ್ನೂ ಹಾಡಿಸುವುದರಲ್ಲಿ ಪ್ರಸನ್ನ ಸಂಗೀತವನ್ನು ಬಳಸಿರುವ ರೀತಿ ಮೆಚ್ಚುವಂಥದ್ದು. ಸಂಗೀತವನ್ನು ತನ್ಮಯಗೊಳಿಸುವ ಶಾಸ್ತ್ರೀಯ ಇಂಪಿನ ಸಾಧನವಾಗಿ ಬಳಸದೆ ಶಕ್ತ ಜಾನಪದ ಧಾಟಿಗತ್ತುಗಳ ‘ರಾಗ’ವಾಗಿ ಬಳಸಿದ್ದು ವಸ್ತುವಿನ ಆಶಯಕ್ಕೆ ಪೂರಕವಾಗಿತ್ತು. ಪ್ರಯೋಗದ ಪರಿಣಾಮ ಹೆಚ್ಚಿಸಿತು.
ಚಿತ್ರವೊಂದನ್ನು ನೋಡದೆಯೇ ಅದರ ಪ್ರದರ್ಶನವನ್ನು ಬಹಿಷ್ಕರಿಸುವ ಮಟ್ಟಕ್ಕೆ ಹೋಗಿರುವ ಅಭಿವ್ಯಕ್ತಿ ಸ್ವಾತಂತ್ರ ವಿರೋಧಿ ಅಸಹನೆ ಇಂದು ದೇಶದಲ್ಲಿ ತಾರಕಕ್ಕೇರಿದೆ.ಇನ್ನೂ ಅಪಾಯಕಾರಿಯಾದ, ಕಳವಳಕಾರಿಯಾದ ಸಂಗತಿ ಎಂದರೆ ಅಧಿಕಾರದಲ್ಲಿರುವವರು ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿಹಿಡಿಯಬೇಕಾದ ತಮ್ಮ ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ಮರೆತು, ಸಾಹಿತಿ/ಕಲಾವಿದರ ರಕ್ತಕ್ಕಾಗಿ ತಹತಹಿಸುತ್ತಿರುವ ಅಂಧಾಭಿಮಾನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು. ಇಂದಿನ ಈ ಖಿನ್ನ ಪರಿಸ್ಥಿತಿಯಲ್ಲಿ, ‘ತಾಯವ್ವ’, ಸಾಂಸ್ಕೃತಿಕ ರಂಗದ ಮೇಲೆ ಆಗುತ್ತಿರುವ ಹಲ್ಲೆಯನ್ನು ಸಾಂಸ್ಕೃತಿಕವಾಗಿಯೇ ಎದುರಿಸಬೇಕಾದ ಅಗತ್ಯವನ್ನು ಮನಗಾಣಿಸುವುದರಲ್ಲಿ, ನೈತಿಕ ಸ್ಥೈರ್ಯ ತುಂಬುವುದರಲ್ಲಿ ಪ್ರಸ್ತುತವಷ್ಟೇ ಅಲ್ಲ, ಹೆಚ್ಚು ಮುಖ್ಯವೂ ಆಗುತ್ತದೆ.
ರಶ್ಯಾದ ಅಕ್ಟೋಬರ್ ಕ್ರಾಂತಿ ನಡೆದು ನೂರು ವರ್ಷಗಳಾಗಿವೆ. ಗಾರ್ಕಿಯ ‘ತಾಯಿ’ಗೂ ನೂರು ವರ್ಷ ತೀರಿದ ಪ್ರಾಯ. ತಾಯಿಗೆ, ತಾಯ್ತನಕ್ಕೆ ಮುಪ್ಪುಂಟೆ? ಎಂದೇ ‘ತಾಯಿ’ಅಂದಿಗೂ ಇಂದಿಗೂ ಭಾಷಾತೀತವಾಗಿ ಪ್ರಸ್ತುತ. ‘ತಾಯಿ’ಪ್ರಸನ್ನರ ನಾಟಕದಲ್ಲಿ ‘ತಾಯವ್ವ’ಳಾಗಿರುವುದರಲ್ಲಿ ಜಾನಪದ ಸೊಗಡಿನ ತಾಯ್ತನದ ಮಮತೆಯ ಜೊತೆಗೆ ‘ದುರ್ಗಿ’ಯರು ತಾಯವ್ವರಾಗಬೇಕಾದ ಪಾಠವೂ ಇದೆ-ಪರಿವಾರದ ವಾಹಿನಿಯ ದುರ್ಗಿಗಳಂಥವರಿಗೆ. ಪರಿವಾರದ ಸೋದರಿಯರೇ, ಕೇಳಿಸುತ್ತಿದೆಯಾ? ‘ತಾಯವ್ವ’ನಾಟಕವನ್ನು ಪ್ರದರ್ಶಿಸಿದ ಗ್ರಾಮ ಸೇವಾ ಸಂಘ ಈ ಸಂದರ್ಭದಲ್ಲಿ ಪ್ರಕಟಿಸಿರುವ ಕರ ನಿರಾಕರಣೆ ಸತ್ಯಾಗ್ರಹದ ಪ್ರಣಾಳಿಕೆಯಲ್ಲಿ ಹೀಗೊಂದು ಮಾತಿದೆ: ಪೃಥ್ವಿ ಮತ್ತಷ್ಟು ಬಿಸಿಯಾಗಬಾರದಿದ್ದರೆ, ವಾತಾವರಣ ಏರುಪೇರಾಗಬಾರದಿದ್ದರೆ .....ಕೈ ಉದ್ಯಮ ತೆರಿಗೆ ಮುಕ್ತವಾಗ ಬೇಕು, ಕೈ ಉದ್ಯಮ ಉಳಿಯಬೇಕು. ವಾತಾವರಣದಲ್ಲಷ್ಟೇ ಅಲ್ಲದೆ ಸಾಂಸ್ಕೃತಿಕ ರಂಗದಲ್ಲೂ ತಾಪಮಾನ ಏರುತ್ತಿರುವ ಈ ದಿನಗಳಲ್ಲಿ, ಇಂಥ ಪರಿಸ್ಥಿತಿಯನ್ನು ಸಾಂಸ್ಕೃತಿಕವಾಗಿಯೇ ಎದುರಿಸಬೇಕಾದ ಅಗತ್ಯವನ್ನು ತೋರುಗಾಣಿಸುವ ಕರ ನಿರಾಕರಣೆ ಸತ್ಯಾಗ್ರಹದ ಮುಂದುವರಿದ ಭಾಗವಾಗಿ, ಇಂದು(ನ.26)ಬೆಂಗಳೂರಿನ ‘ರಾಗಿ ಕಣ’ದಲ್ಲಿ ನಡೆಯಲಿರುವ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸಂಗೀತ ವಿದ್ವಾಂಸ ಟಿ.ಎಂ.ಕೃಷ್ಣನ್ ಅವರ ಉಪನ್ಯಾಸ ಮತ್ತು ಸಂಗೀತ ಕಚೇರಿ ಒಂದು ಮಹತ್ವದ ಬೆಳವಣಿಗೆ. (‘ರಾಗಿ ಕಣ’,ಬೆಂಗಳೂರು ಸಮೀಪ, ಬನ್ನೇರುಘಟ್ಟ ರಸ್ತೆಯಲ್ಲಿದೆ. ಗ್ರಾಮ ಸೇವಾ ಸಂಘ ಕರಕುಶಲ ವಸ್ತುಗಳ ಮಾರಾಟ ಪ್ರೋತ್ಸಾಹಿಸಲು ಏರ್ಪಡಿಸಿರುವ ರವಿವಾರದ ಸಂತೆ ಈ ‘ರಾಗಿ ಕಣ’).
ನಾಟಕದ ಕೊನೆಯಲ್ಲಿ ‘ತಾಯವ್ವ’ ಆಡುವ-
‘‘ಸಹನೆ ಇರಲಿ, ಸಹಕಾರ ಇರಲಿ/ದುಡಿವ ಕೈಗಳು ಚಿಗುರಲಿ/ನಡೆವ ಕಾಲು ಚಿಗುರಲಿ/’’
ಈ ಮಾತುಗಳು, ಇಂದಿನ, ಕೈ ಕತ್ತರಿಸುವ,ಮೂಗು ಕುಯ್ಯುವ ಆಟಾಟೋಪಗಳ ಫಲವಾದ ಖಿನ್ನತೆಯಲ್ಲೂ ಆಶಾ ಭಾವನೆಯನ್ನು ಕೊನರಿಸುತ್ತವೆ.
ಕೊನೆಯದಾಗಿ:
ಸಾಹಿತ್ಯ ರಚನೆಯೂ ಕೈ ಕಸುಬು. ಅದಕ್ಕೂ ತೆರಿಗೆಯೇ? ಹೌದು ಎನ್ನುತ್ತದೆ ಜಿ.ಎಸ್.ಟಿ. ಕಾಯ್ದೆ. ಪುಸ್ತಕ ಪ್ರಕಟಣೋದ್ಯಮ ತನ್ನ ಪ್ರಕಟಣೆಗಳ ಮೇಲೆ ಶೇ.18ರಷ್ಟು ಜಿ.ಎಸ್.ಟಿ. ತೆರಬೇಕು. ಪುಸ್ತಕ ಪ್ರಕಾಶಕರು ಪ್ರಕಟಿಸುವ ಪುಸ್ತಕಗಳು ಮತ್ತು ಸಂಗೀತದಂಥ ಪಠ್ಯಪುಸ್ತಕಗಳ ಮುಖಬೆಲೆ ಮೇಲೆ ಶೆ.18 ಜಿ.ಎಸ್.ಟಿ. ತೆರಬೇಕು.ಹಾಗೂ ಲೇಖರಿಗೆ ಕೊಡುವ ಗೌರವಧನದಿಂದಲೂ ಪ್ರಕಾಶಕರು ಶೇ.18 ಜಿ.ಎಸ್.ಟಿ. ಮುರಿದುಕೊಳ್ಳಬೇಕು. ಅಂದರೆ, ನನ್ನಂಥ ಬಡ ಲೇಖಕನಿಗೆ ದೊರಯುವ ಶೇ.10 ಗೌರವಧನದಲ್ಲಿ ಶೇ.18ರಷ್ಟು ಜಿ.ಎಸ್.ಟಿ.ಯನ್ನು ಪ್ರಕಾಶಕರು ಕಟಾಯಿಸಿಕೊಂಡೇ ಪಾವತಿಸಬೇಕು. ಗೌರವ ಧನ ಮೂವತ್ತು ಸಾವಿರ ಮೀರಿದಲ್ಲಿ ಜಿ.ಎಸ್.ಟಿ. ಜೊತೆ ಶೇ.10 ವರಮಾನ ತೆರಿಗೆಯನ್ನೂ ಮುರಿದುಕೊಳ್ಳಲಾಗುತ್ತದೆ. ಅಂದರೆ ಶೇ.28ರಷ್ಟು ತೆರಿಗೆ. ಈಗಾಗಲೇ ಪ್ರಕಾಶಕರು/ಸಾಹಿತಿಗಳು ಇದರ ವಿರುದ್ಧ ನ್ಯಾಯಾಲಯದ ಮೊರೆಹೊಗಿದ್ದಾರಂತೆ. ಸಾಹಿತಿಗಳೂ ‘ತಾಯವ್ವ’ನ ಮಾರ್ಗ ಹಿಡಿಯುವುದು ಅನಿವಾರ್ಯವಾಗಿದೆ.