ಓ ಮೆಣಸೇ..
ಹಿಂದೂ ಧರ್ಮದಲ್ಲಿ ಅಸ್ಪಶ್ಯತೆಗೆ ಅವಕಾಶ ಇಲ್ಲ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಬ್ರಾಹ್ಮಣ ಧರ್ಮದೊಳಗೆ ಮಾತ್ರ ಅವಕಾಶ.
---------------------
ರಾಹುಲ್ ಗಾಂಧಿ ಪ್ರಶ್ನೆಗಳನ್ನು ಮಾತ್ರ ಕೇಳುತ್ತಾರೆ, ಉತ್ತರಿಸುವುದಿಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಉತ್ತರ ಹೇಳುವ ಹೊಣೆಗಾರಿಕೆ ಆಡಳಿತ ನಡೆಸುವವರದಲ್ಲವೇ?
---------------------
ನಾನೊಬ್ಬ ರಾಜಕೀಯ ಬಲಿಪಶು - ವಿಜಯ ಮಲ್ಯ, ಉದ್ಯಮಿ
ಬ್ಯಾಂಕ್‌ಗಳನ್ನು ಸಾರ್ವಜನಿಕ ಗೋಮಾಳವೆಂದು ಭಾವಿಸಿದ ಪಶು ತಾವು.
---------------------
ವಿರೋಧ ಪಕ್ಷಗಳು ನಿರ್ದಿಷ್ಟ ವಿಷಯಗಳಲ್ಲಿ ಮರೆಗುಳಿತನ ಪ್ರದರ್ಶಿಸುತ್ತವೆ - ಅನಂತ್‌ಕುಮಾರ್, ಕೇಂದ್ರ ಸಚಿವ
ರಾಜ್ಯದ ವಿರೋಧ ಪಕ್ಷಗಳ ಬಗ್ಗೆ ನಿಮ್ಮ ಅಭಿಪ್ರಾಯವಿರಬೇಕು.
---------------------
ರಾಹುಲ್ ಗಾಂಧಿ ಗುಜರಾತನ್ನು ಪ್ರವಾಸಿ ತಾಣವೆಂದು ತಿಳಿದುಕೊಂಡಂತಿದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಗುಜರಾತ್‌ನ್ನು ಸ್ಮಶಾನವೆಂದು ತಿಳಿದುಕೊಂಡ ತಮಗಿಂತ ವಾಸಿ.
---------------------
ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾದರೆ ಬಿಜೆಪಿಗೆ ‘ಕಾಂಗ್ರೆಸ್ ಮುಕ್ತ ಭಾರತ’ ಸುಲಭವಾಗಲಿದೆ - ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ
ಅಂತೂ ಬಡತನ ಮುಕ್ತ, ಅನಾರೋಗ್ಯ ಮುಕ್ತ ಭಾರತ ಮಾಡುವ ಉದ್ದೇಶ ಇಲ್ಲವೇ ಇಲ್ಲ ಎಂದಾಯಿತು.
---------------------
ಉತ್ತರ ಕರ್ನಾಟಕವನ್ನು ಹಾಳು ಮಾಡಿದ್ದು ಬಿಜೆಪಿಯವರು - ಸಿದ್ದರಾಮಯ್ಯ, ಮುಖ್ಯಮಂತ್ರಿ
ನೀವೇನು ಮಾಡಲು ಹೊರಟಿದ್ದೀರಿ ಎನ್ನುವುದನ್ನು ಹೇಳಿ.
ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು - ಕೆ.ಬಿ.ಕೋಳಿವಾಡ, ವಿಧಾನಸಭಾಧ್ಯಕ್ಷ
ರಾಜಕಾರಣಿಗಳು ಕೂಡ.
---------------------
ದೀಪಿಕಾ ಪಡುಕೋಣೆಯ ದೇಹಕ್ಕಿಂತ ತಲೆಯನ್ನೇ ನಾನು ಹೆಚ್ಚು ಗೌರವಿಸುತ್ತೇನೆ - ಕಮಲ್‌ಹಾಸನ್, ನಟ
ತಲೆ ನಿಮಗಿರಲಿ, ದೇಹ ನಮಗಿರಲಿ ಎಂದರಂತೆ ಪದ್ಮಾವತಿ ವಿರೋಧಿಗಳು.
---------------------
ಗೂಂಡಾಗಿರಿ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿದೆ - ಯಡಿಯೂರಪ್ಪ, ಮಾಜಿ ಸಿಎಂ
ಈಶ್ವರಪ್ಪರ ಇತಿಶ್ರೀ ಅಷ್ಟು ಸುಲಭವಿಲ್ಲ.
---------------------
ಮದ್ಯ ಮಾರಾಟದಿಂದ ಬರುವ ಆದಾಯವನ್ನು ಗುರಿ ಮುಟ್ಟುವ ಭರವಸೆ ಇದೆ - ಆರ್.ಬಿ.ತಿಮ್ಮಾಪುರ, ಸಚಿವ
ಬಡತನ ನಿವಾರಣೆಯ ಗುರಿ ಯಾವಾಗ ಮುಟ್ಟುತ್ತೀರಿ?
---------------------
ಈ ಸರಕಾರದ ಮುಂದೆ ಏನು ಮಾತನಾಡಿದರೂ ಕೋಣದ ಮುಂದೆ ಕಿನ್ನರಿ ಬಾರಿಸಿದಂತೆ - ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ
ನರಿ ಎಂದರೆ ಚೆನ್ನಾಗಿತ್ತು.
---------------------
ಸಿಎಂ ಸಿದ್ದರಾಮಯ್ಯರನ್ನು ಶ್ರೀಕೃಷ್ಣ ಮಠಕ್ಕೆ ಬರದಂತೆ ಕೆಲವು ಬುದ್ಧಿ ಜೀವಿಗಳು ತಡೆಯುತ್ತಿದ್ದಾರೆ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಬಹುಶಃ ಅಂದು ಮಧ್ಯಾಹ್ನ ಮೀನು ತಿಂದಿರಬೇಕು. ಅದಕ್ಕೆ ವಿವಾದ ಬೇಡವೆಂದು ಬರಲಿಲ್ಲ.
---------------------
ಮೈಸೂರು ಜಿಲ್ಲೆಯನ್ನು ಕಾಪಾಡಲು ಚಾಮುಂಡೇಶ್ವರಿ ಕೈಯಲ್ಲೂ ಆಗಲ್ಲ - ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
ಚಾಮುಂಡೇಶ್ವರಿಗೆ ಸವಾಲೇ?
---------------------
ಸಾಯಿಬಾಬಾ 25 ವರ್ಷಗಳ ಹಿಂದೆ ಕೊಟ್ಟ ಉಂಗುರದಿಂದ ನನ್ನ ಅದೃಷ್ಟದ ಬಾಗಿಲು ತೆರೆಯಿತು - ಕೆ.ಎಚ್.ಮುನಿಯಪ್ಪ, ಕೇಂದ್ರದ ಮಾಜಿ ಸಚಿವ
ಮತ್ತು ಜನಸಾಮಾನ್ಯರ ಅದೃಷ್ಟದ ಬಾಗಿಲು ಮುಚ್ಚಿತು.
---------------------
ಕರ್ನಾಟಕಕ್ಕೆ ಒಂದು ಪ್ರಾದೇಶಿಕ ರಾಜಕೀಯ ಪಕ್ಷದ ಅಗತ್ಯವಿದೆ - ಚಂದ್ರಶೇಖರ ಪಾಟೀಲ, ಸಾಹಿತಿ
ಅದು ಜನ ಸಾಮಾನ್ಯರ ಅಗತ್ಯವೂ ಆಗಬೇಕು.
---------------------
ನಮಗೆ ಇಂದಿರಾ ಗಾಂಧಿಯವರ ಆದರ್ಶಗಳೇ ದಾರಿದೀಪ - ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
ತುರ್ತುಪರಿಸ್ಥಿತಿ ವಿಷಯದಲ್ಲಿ ಮೋದಿಗೂ ಅವರ ಆದರ್ಶ ಪ್ರಿಯವಂತೆ.
---------------------
ಸಿಎಂ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ ಅವರಿಗಿಂತ ದೊಡ್ಡ ನಾಯಕರೇನೂ ಅಲ್ಲ - ದೇವೇಗೌಡ, ಮಾಜಿ ಪ್ರಧಾನಿ
ರಾಮಕೃಷ್ಣ ಹೆಗಡೆಯವರನ್ನು ನೀವು ಮೂಲೆಗೆ ತಳ್ಳಲು ಯಶಸ್ವಿಯಾದಿರಿ. ಆದರೆ ಸಿದ್ದರಾಮಯ್ಯರ ವಿಷಯದಲ್ಲಿ ನಡೆಯಲಿಲ್ಲ.
---------------------
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರೂ ಸೋನಿಯಾ ಗಾಂಧಿ ಪಾತ್ರ ಕುಗ್ಗದು - ವೀರಪ್ಪ ಮೊಯ್ಲಿ, ಸಂಸದ
ಛತ್ರಿ ಹಿಡಿಯುವ ನಿಮ್ಮ ಪಾತ್ರದ ಗತಿ ಏನು ಹೇಳಿ.
---------------------
ಪ್ರಧಾನಿ ಮೋದಿ ಕುರಿತು ನಾನು ಹೊಂದಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿದೆ - ಅಣ್ಣಾ ಹಝಾರೆ, ಸಾಮಾಜಿಕ ಕಾರ್ಯಕರ್ತ
ಮತ್ತೇಕೆ ತಡ, ಉಪವಾಸ ಕುಳಿತುಕೊಳ್ಳಿ.