ರಂಗಪ್ರವೇಶಕ್ಕೆ ಕಳೆತಂದ ಕಲಾವಿದೆ ಗೌರಿ ಅರುಣ್ ಮೂರ್ತಿ
ಆ ಹುಡುಗಿ ಜರ್ಜರದೊಂದಿಗೆ ರಂಗಮಂದಿರ ಪ್ರವೇಶಿಸಿದ ರೀತಿಯೇ ಭರ್ಜರಿಯಾಗಿತ್ತು! ಹಾಗೆ ಅನಿಸಿದ್ದು ಗೌರಿ ಅರುಣ್ ಮೂರ್ತಿಯ ಭರತನಾಟ್ಯ ರಂಗಪ್ರವೇಶ ಕಂಡಾಗ. ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮ ನೂರಾರು ಕಲಾರಾಧಕರ ಮನಸೂರೆಗೊಳಿಸಿತು.
ಪುಷ್ಪಾಂಜಲಿ ಆದಿತಾಳದಲ್ಲಿ ವಿಜಯವಸಂತಿ ರಾಗ, ಅಲರಿಪು ತೀಸ್ರಜತಿ ರೂಪಕ ತಾಳ ಅನ್ನಮಾಚಾರ್ಯರಿಂದ ಸಂಯೋಜಿಸಲಾದ ಸ್ವರಜತಿ "ರಾರ ವೇಣು ಗೋಪ ಬಾಲ" ಆದಿತಾಳ ಬಿಹಾರಿ ರಾಗ; ದುರ್ಗಾ ದೇವಿ ಕೃತಿ ಆದಿತಾಳ ನವರಸ ಕನ್ನಡ ರಾಗ, ದ್ವಾರ್ಕಿ ಕೃಷ್ ಸ್ವಾಮಿಯವರಿಂದ ಸಂಯೋಜನೆಗೊಂಡ ವರ್ಣ 'ಸುಂದರ ಮೋಹನ' ಮುರಳೀಧರ ಆದಿತಾಳ ಕೀರವಾಣಿ ರಾಗ ಹೀಗೆ ಪ್ರತಿಯೊಂದರಲ್ಲಿಯೂ ಭರವಸೆ ಮೂಡಿಸುವ ಪ್ರದರ್ಶನ ನೀಡಿದರು ಗೌರಿ.
ಡಿ ವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗವನ್ನು ರಾಗಮಾಲಿಕವಾಗಿ ಬಳಸಿಕೊಂಡಿದ್ದು ವಿಶೇಷವಾಗಿತ್ತು. ಜಯದೇವ ಸಂಯೋಜಿತ ಆದಿತಾಳ ರಾಗಮಾಲಿಕದ 'ಸಂಚಾರ..' ಡಾ. ಶತಾವಧಾನಿ ಗಣೇಶ್ ಆದಿತಾಳದಲ್ಲಿ ಸಂಯೋಜಿಸಿರುವ 'ಸುಮನಸ' ರಂಜಿನಿ ರಾಗ ಕೂಡ ಗೌರಿಯ ವೈವಿಧ್ಯಮಯ ಭಾವ ಭಂಗಿಗಳನ್ನು ವೀಕ್ಷಕರಿಗೆ ಅನಾವರಣಗೊಳಿಸಿತು.
ಮಲ್ಲಿಕಾಮೋದ ತಾಳ ಷಣ್ಮುಖ ಪ್ರಿಯರಾಗ ಮತ್ತು ರಾಗ ಮಾಲಿಕದಲ್ಲಿ 'ಮಯೂರ ನಂದಿನಿ'ಯ ಪ್ರದರ್ಶನದಲ್ಲಿ ಒಂದು ವಿಶೇಷತೆಯಿತ್ತು. ನೃತ್ಯ ಮುಗಿಯುವ ವೇಳೆಗೆ ಗೌರಿ ತಮ್ಮ ಪಾದಗಳನ್ನು ಬಳಸಿ ವೇದಿಕೆಯ ಮೇಲೆ ರಂಗೋಲಿ ಹುಡಿಯಲ್ಲಿ ಮಯೂರದ ಚಿತ್ರವನ್ನು ಬಿಡಿಸಿ ಪೂರ್ಣಗೊಳಿಸಿದ್ದರು.
ಸಂಪ್ರದಾಯದಂತೆ ಅಂತಿಮವಾಗಿ ಮಂಗಳಂ ಮೂಲಕ ಪ್ರೇಕ್ಷಕ ಮತ್ತು ಸಂಗೀತಜ್ಞರಿಗೆ ಸೇರಿದಂತೆ ಗುರುವಂದನೆ ಸಲ್ಲಿಸಿದಾಗ ಗೌರಿಯ ಜತೆಗೆ ವೀಕ್ಷಕರ ಕಂಗಳಲ್ಲಿಯೂ ಆನಂದ ಭಾಷ್ಪ ಕಾಣಬಹುದಿತ್ತು.ಹಿನ್ನೆಲೆಯಲ್ಲಿ ವಿದುಷಿ ದೀಪ್ತಿ ಶ್ರೀನಾಥ್ ಕಂಠ, ಮೃದಂಗ ವಿದ್ವಾನ್ ಲಿಂಗರಾಜು, ರಘು ನಂದನ್ ರ ಕೊಳಲು, ವೀಣೆ ವಿದ್ವಾನ್ ವಿ ಗೋಪಾಲ್ ಮತ್ತು ಕಾರ್ತಿಕ್ ರ ಉಪಸ್ಥಿತಿ, ಬೆಳಕು ಮತ್ತು ಒಟ್ಟು ವೇದಿಕೆಯ ರಂಗಸಜ್ಜಿಕೆ ಆಕರ್ಷಕವಾಗಿತ್ತು.
ಗೌರಿ ತಮ್ಮ ಏಳನೇ ವರ್ಷದಿಂದಲೇ ಅವರ ಅತ್ತೆ ಡಾ. ವೀಣಾ ಮೂರ್ತಿ ವಿಜಯ್ ಯವರಿಂದ ಭರತನಾಟ್ಯದ ಶಿಕ್ಷಣ ಆರಂಭಿಸಿ ಜ್ಯೂನಿಯರ್ ಪರೀಕ್ಷೆ ಪಾಸಾಗಿರುತ್ತಾರೆ. ಅದರ ಒಂದು ವರ್ಷದ ಬಳಿಕ ಕರ್ನಾಟಕ ಸಂಗೀತದಲ್ಲಿಯೂ ಜ್ಯೂನಿಯರ್ ಪಾಸಾದರು. ಬಾಲಿವುಡ್ ನ ಖ್ಯಾತ ನೃತ್ಯನಿರ್ದೇಶಕ ಶಾಮಕ್ ದಾವರ್ ಅವರ ಬಳಿ ಒಂದು ವರ್ಷ ಪಾಶ್ಚ್ಯಾತ್ಯ ನೃತ್ಯ ಪ್ರಕಾರದ ಕಲಿಕೆ, ಯೋಗ, ಬಾಸ್ಕೆಟ್ ಬಾಲ್, ಛಾಯಾಗ್ರಹಣ, ಈಜು.. ಹೀಗೆ ವಿವಿಧ ವಿಭಾಗಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತು ಪಡಿಸಿರುವ ಗೌರಿ ಪ್ರಸ್ತುತ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿನಿಯಾಗಿದ್ದಾರೆ. ಕಿರುತೆರೆ ನಟಿ, ಕಂಠದಾನ ಕಲಾವಿದೆ, ದೃಶ್ಯ, ಸಂಭಾಷಣೆ, ಸಾಹಿತ್ಯ ರಚನಗಾರ್ತಿ ಕುಮುದವಲ್ಲಿ ಅರುಣ್ ಮೂರ್ತಿಯ ಪುತ್ರಿ ಎನ್ನುವುದು ಗಮನಾರ್ಹ.
ಸಮಾರಂಭದಲ್ಲಿ ಖ್ಯಾತ ನೃತ್ಯ ಕಲಾಮಂದಿರ್ ಭಾನುಮತಿ, ಯಕ್ಷಗಾನ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯಾಯ, ಚಿತ್ರ ಕಲಾವಿದ
ಡಾ. ಬಿಕೆಎಸ್ ವರ್ಮ, ಮೊದಲಾದ ಪ್ರಮುಖರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಗೌರಿಯ ತಾತ ಹಿರಿಯ ಗಮಕ ಕವಿ ಜಯರಾಮ ರಾವ್, ಸಂದ್ಯಾ ಕಿರಣ್, ಕರಣ್ ಸುಬ್ರಹ್ಮಣ್ಯ, ಆರ್ ವಿ ರಾಘವೇಂದ್ರ, ನಟ ಸುಮಂತ್, ಲೇಖಕಿ ಗೀತಾ ಉಪೇಂದ್ರ ಸೇರಿದಂತೆ ಸಾಕಷ್ಟು ಗಣ್ಯರ ದಂಡು ಸೇರಿತ್ತು. ಜನಪ್ರಿಯ ನೃತ್ಯ ಕಲಾವಿದೆಯರಾದ ಶಮಾಕೃಷ್ಣ ಮತ್ತು ಸಮನ್ವಿತಾ ಕಾರ್ಯಕ್ರಮ ನಿರೂಪಿಸಿದರು. ಕುಮುದವಲ್ಲಿಯವರು ವಂದಿಸಿದರು.