ತಂತ್ರಾಂಶಗಳ ಪ್ರಾದೇಶೀಕರಣ ಮತ್ತು ಕನ್ನಡೀಕರಣ
ನಮ್ಮ ಭಾಷೆಯಲ್ಲಿಯೇ ವಿದ್ಯುನ್ಮಾನ ಉಪಕರಣಗಳನ್ನು ಬಳಸಲು
ಇಂಗ್ಲಿಷ್ ಜೊತೆಗೆ ಇತರ ಭಾಷೆಗಳನ್ನು ವಿದ್ಯುನ್ಮಾನ ಉಪಕರಣಗಳಲ್ಲಿ ಅಳವಡಿಸಿ ಬಳಸಬೇಕೆಂದರೆ, ಮೊದಲಿಗೆ ಆಯಾಯ ಭಾಷೆಯ ಲಿಪಿಗಳಿಗೆ ಸ್ಥಳಾವಕಾಶವನ್ನು ಮಾಡಿಕೊಡಬೇಕಿತ್ತು. ಆದರೆ, ಹಳೆಯ ಎನ್‌ಕೋಡಿಂಗ್ ವ್ಯವಸ್ಥೆಯಲ್ಲಿ ಅಕ್ಷರ ಸ್ಥಾನಗಳ ಸಂಖ್ಯೆಯು ಸೀಮಿತವಾಗಿದ್ದ ಕಾರಣ ಅಂತಾರಾಷ್ಟ್ರೀಯ ಮಟ್ಟದ ಕೆಲವೇ ಭಾಷೆಗಳ ಲಿಪಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಪ್ರಾದೇಶಿಕ ಭಾಷೆಗಳನ್ನು ವಿದ್ಯುನ್ಮಾನ ಉಪಕರಣಗಳಲ್ಲಿ ಬಳಸಬೇಕಾದರೆ, ಉಪಕರಣ ತಯಾರಕರಲ್ಲದವರು ಸಿದ್ಧಪಡಿಸಿದ (ಥರ್ಡ್ ಪಾರ್ಟಿ) ತಂತ್ರಾಂಶಗಳನ್ನೇ ಅವಲಂಬಿಸಬೇಕಾಗಿತ್ತು. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಯ ಫಾಂಟುಗಳು ಇದಕ್ಕೊಂದು ಉತ್ತಮ ಉದಾಹರಣೆ. ಮೂಲ ಉಪಕರಣಗಳ ತಂತ್ರಾಂಶಕ್ಕೂ ಥರ್ಡ್ ಪಾರ್ಟಿ ತಂತ್ರಾಂಶಕ್ಕೂ ಹಲವಾರು ಸಂದರ್ಭಗಳಲ್ಲಿ ಸಂಘರ್ಷ ಗಳು ಉಂಟಾಗುತ್ತಿದ್ದ ಕಾರಣ, ಬಳಕೆದಾರರು ಕಿರಿಕಿರಿಯನ್ನು ಅನುಭವಿಸುವುದು ಸರ್ವೇಸಾಮಾನ್ಯವಾಗಿತ್ತು. ಈ ಸಮಸ್ಯೆ ಗಳನ್ನು ಪರಿಹರಿಸಲು ವಿದ್ಯುನ್ಮಾನ ಉಪಕರಣಗಳಲ್ಲಿ ಎಲ್ಲ ಭಾಷೆಗಳಿಗೆ ಮೂಲದಲ್ಲಿಯೇ ಅವಕಾಶವನ್ನು ಕಲ್ಪಿಸುವುದು ಅಗತ್ಯವಾಗಿತ್ತು. ಮೂಲ ಉಪಕರಣ ತಯಾರಕರೇ ಎಲ್ಲ ಭಾಷೆ ಗಳನ್ನು ತಮ್ಮತಮ್ಮ ಉಪಕರಣಗಳಲ್ಲಿ ಅಳವಡಿಸಿ ನೀಡಬೇಕಿತ್ತು. ಆದರೆ, ನಾನಾ ಕಾರಣಗಳಿಗೆ ಇದು ಸಾಧ್ಯವಾಗಿರಲಿಲ್ಲ.
►ಅಕ್ಷರ ಸ್ಥಳಾವಕಾಶ ಹೆಚ್ಚಿಸಿದ ಆಧುನಿಕ ಎನ್‌ಕೋಡಿಂಗ್: ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನುಗಳಲ್ಲಿ ಬಳಸಲಾಗುವ ಅಂತಾರಾಷ್ಟ್ರೀಯ ಮಟ್ಟದ ತಂತ್ರಾಂಶಗಳಲ್ಲಿ ಜಗತ್ತಿನ ಎಲ್ಲ ಭಾಷೆಗಳನ್ನು ಸಮರ್ಥವಾಗಿ ಅಳವಡಿಸಿ ಬಳಸಲು ಆಯಾಯ ಭಾಷೆಗಳ ಲಿಪಿಗಳಿಗೆ ‘ಆಧುನಿಕ ಕ್ಯಾರೆಕ್ಟರ್ ಎನ್‌ಕೋಡಿಂಗ್’ ವ್ಯವಸ್ಥೆಯನ್ನು ಆರಂಭಿಸುವ ಅನಿವಾರ್ಯತೆ ಬಂದೊದಗಿತು. 8 ಬಿಟ್‌ಗಳ ಎನ್‌ಕೋಡಿಂಗ್ ವ್ಯವಸ್ಥೆಯಲ್ಲಿ ಕೇವಲ 256 ಅಕ್ಷರಗಳಿಗೆ ಮಾತ್ರವೇ ಸ್ಥಾನವಿದ್ದ ಕಾರಣ ಎಲ್ಲ ವಿಶ್ವಭಾಷೆಗಳಿಗೆ ಸ್ಥಾನವಿರಲಿಲ್ಲ. ಆಧುನಿಕ ರೀತಿಯಲ್ಲಿ 16 ಬಿಟ್‌ಗಳ ಎನ್‌ಕೋಡಿಂಗ್‌ನ್ನು ಆರಂಭಿಸಲಾದ ಕಾರಣ 65 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕಂಪ್ಯೂಟರಿನ ಅಕ್ಷರಸ್ಥಾನಗಳು ದೊರೆಯಿತು. ಎನ್‌ಕೋಡಿಂಗ್ ವ್ಯವಸ್ಥೆಯನ್ನು ಬದಲಿಸುವ ಮೂಲಕ ಅಕ್ಷರ ಸಂಕೇತ ಗಳ ಸಂಖ್ಯೆಯನ್ನು ಹೆಚ್ಚಿಸಲಾದ ಕಾರಣ ವಿಶ್ವದ ಎಲ್ಲ ಭಾಷೆಗಳಿಗೂ ಕಂಪ್ಯೂಟರಿನಲ್ಲಿ ಸ್ಥಾನವನ್ನು ಕಲ್ಪಿಸುವುದು ಸಾಧ್ಯವಾಯಿತು. ಈಗ, ಒಂದು ಡಾಕ್ಯುಮೆಂಟಿನಲ್ಲಿ ಕೇವಲ ಇಂಗ್ಲಿಷ್ ಮತ್ತು ಅದರೊಂದಿಗೆ ಪ್ರಾದೇಶಿಕ ಭಾಷೆಯೊಂದರ ಪಠ್ಯವನ್ನು ಟೈಪ್‌ಮಾಡಬಹುದಾದ ಕಾಲ ಮುಗಿಯಿತು. ಒಂದೇ ಡಾಕ್ಯುಮೆಂಟಿನಲ್ಲಿ ನಮಗೆ ಅಗತ್ಯ ವಾದ ಅನೇಕ ಭಾಷೆಗಳನ್ನು ಟೈಪ್‌ಮಾಡಿ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ತಂತ್ರಜ್ಞಾನದ ಸುಧಾರಣೆಯಿಂದಾಗಿ ಏಕಭಾಷೆಯ ಫಾಂಟು, ದ್ವಿಭಾಷಾ ಫಾಂಟುಗಳು ಈಗ ಇಲ್ಲವಾಗಿ ಬಹುಭಾಷಾ ಫಾಂಟುಗಳು ಬಳಕೆಗೆ ಲಭ್ಯವಾಗಿವೆ.
►ವಿವಿಧ ಉದ್ದೇಶದ ಫಾಂಟುಗಳು: ಕನ್ನಡ ಭಾಷೆಯ ಬಳಕೆಗಾಗಿ (ಡಿ.ಟಿ.ಪಿ.ಉದ್ದೇಶಕ್ಕಾಗಿ) ವಿವಿಧ ಅಕ್ಷರ ರೂಪದ (ಫಾಂಟ್ ಸ್ಟೈಲ್) ಏಕಭಾಷೆಯ ಫಾಂಟುಗಳು ಆವಿಷ್ಕಾರಗೊಂಡವು. ಪ್ರೋಗ್ರಾಮಿಂಗ್ ಉದ್ದೇಶಕ್ಕೆ ಅನುಕೂಲವಾಗುವಂತೆ ಇಂಗ್ಲಿಷ್ ಜೊತೆಗೆ ಮತ್ತೊಂದು ಪ್ರಾದೇಶಿಕ ಭಾಷೆಯ ಅಕ್ಷರಗಳು ಒಂದೇ ಫಾಂಟಿನಲ್ಲಿ ದೊರೆಯುವಂತೆ ‘ದ್ವಿಭಾಷಾ ಫಾಂಟು’ಗಳು ಬಳಕೆಗೆ ಬಂದವು. ಈಗ ಯುನಿಕೋಡ್ ಸ್ಟಾಂಡರ್ಡ್ ಅನುಷ್ಠಾನ ಗೊಂಡ ನಂತರದಲ್ಲಿ ಎಲ್ಲ ಉದ್ದೇಶಗಳಿಗೂ ಅನುಕೂಲವಾಗುವ ಬಹು ಭಾಷಾ ಫಾಂಟುಗಳು ಬಳಕೆಗೆ ಬಂದಿವೆ. ಇಂಗ್ಲಿಷ್ ಭಾಷಾ ಇಂಟರ್‌ಫೇಸ್ ಇರುವ ಎಲ್ಲ ತಂತ್ರಾಂಶಗಳಲ್ಲಿ ಬಹುಭಾಷೆ ಗಳನ್ನು ಬಳಸಲು ಅನುವಾಗುವಂತೆ ಲಿಪಿತಂತ್ರಜ್ಞಾನವನ್ನು ಅಳವಡಿಸಲಾಯಿತು.
►ತಂತ್ರಾಂಶಗಳ ಪ್ರಾದೇಶೀಕರಣ: ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ತಮ್ಮ ತಮ್ಮ ತಂತ್ರಾಂಶಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯನ್ನು ಹುಡುಕುವ ಪ್ರಯತ್ನಗಳಲ್ಲಿ, ತಂತ್ರಾಂಶಗಳನ್ನು ಆಯಾಯ ದೇಶಗಳ ಬಳಕೆದಾರರ ಆವಶ್ಯಕತೆಗೆ ಅನುಗುಣವಾಗಿ ಪ್ರಾದೇಶೀಕರಿಸುವ ಅಗತ್ಯಗಳನ್ನು ಮನಗಂಡರು. ಪ್ರಾದೇಶೀಕ ರಣದ ಪ್ರಮುಖ ಅಂಗವಾಗಿ ತಂತ್ರಾಂಶಗಳಿಗೆ ಭಾಷೆಗಳನ್ನು ಅಳವಡಿಸುವುದು ಅತ್ಯಗತ್ಯವಾಗಿತ್ತು. ಈಗಾಗಲೇ ಆಯಾಯ ದೇಶ ಭಾಷೆಗಳು ಕಂಪ್ಯೂಟರ್‌ನ ಬಳಕೆಯ ಭಾಷೆಯಾಗಿದ್ದರೂ ಸಹ, ಅವುಗಳಲ್ಲಿ ಏಕರೂಪತೆ ಇರಲಿಲ್ಲ ಮತ್ತು ಹಲವಾರು ಗೊಂದಲಗಳು ಮತ್ತು ಸಮಸ್ಯೆಗಳು ಇದ್ದವು. ಇಂತಹ ಸಮಸ್ಯೆ ಗಳು ಮತ್ತು ಗೊಂದಲಗಳಿಗೆ ಪರಿಹಾರವಾಗಿ ತಮ್ಮ ತಂತ್ರಾಂಶಗಳನ್ನು ಪ್ರಾದೇಶೀಕರಿಸಲು ವಿಶ್ವಮಟ್ಟದಲ್ಲಿ ಮಾನಕ ಗಳು (ಸ್ಟಾಂಡರ್ಡ್ಸ್) ಅಗತ್ಯ ಎಂದು ಅವು ಮನಗಂಡವು. ಅಂತಹ ಮಾನಕಗಳನ್ನು ಆಯಾಯ ದೇಶಗಳ ಬಳಕೆದಾ ರರು ಒಪ್ಪಿಕೊಳ್ಳುವಂತೆ ನಿರ್ಧರಿಸುವುದು ತಂತ್ರಾಂಶ ಪ್ರಾದೇಶೀಕ ರಣದತ್ತ ಇಡುವ ಮೊದಲ ಹೆಜ್ಜೆಯಾಗಿರಬೇಕು ಎಂಬುದನ್ನೂ ಸಹ ಅರ್ಥಮಾಡಿಕೊಳ್ಳಲಾಯಿತು.
ಜಾಗತಿಕ ಮಟ್ಟದಲ್ಲಿ ಎಲ್ಲಾ ವಿಶ್ವಭಾಷೆಗಳಿಗೆ ಅಕ್ಷರ ಸಂಕೇತೀಕರಣವನ್ನು ಏಕರೂಪವಾಗಿ ನಿರ್ಧರಿಸಿ, ಮಾನಕವನ್ನು ರೂಪಿಸಿ, ಅಂತಹ ಮಾನಕದ ಅನುಸಾರ ತಂತ್ರಾಂಶಗಳನ್ನು ಪ್ರಾದೇಶೀಕರಿಸುವುದು ಕ್ರಮಬದ್ಧ ವಿಧಾನ. ತಂತ್ರಾಂಶ ತಯಾರಿಕಾ ಉದ್ದಿಮೆಯ ಜಾಗತಿಕ ದೈತ್ಯ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಹೆಚ್ಚಿನ ಉತ್ಸಾಹದೊಂದಿಗೆ, ಇಂತಹ ಜಾಗತಿಕ ಮಾನಕವನ್ನು ರೂಪಿಸಲು ಹೊರಟಿತು. ಯಾವುದೇ ಒಂದು ಕಂಪೆನಿಯು ಒಂದು ಮಾನಕವನ್ನು ರೂಪಿಸಿ ಅದನ್ನು ಬಳಕೆದಾರರ ಮೇಲೆ ಹೇರುವುದು ಸಾಧ್ಯವಿಲ್ಲ ಎಂದು ಭಾವಿಸಿದ ಆ ಕಂಪೆನಿಯು, ‘ಯುನಿಕೋಡ್ ಕನ್ಸಾರ್ಷಿಯಂ’ ಎಂಬ ಹೆಸರಿನಲ್ಲಿ, ಅಂತಾರಾಷ್ಟ್ರೀಯ ಮಟ್ಟದ ತಂತ್ರಾಂಶ ತಯಾರಕರು ಮತ್ತು ಕಂಪ್ಯೂಟರ್ ತಯಾರಕರು ಹಾಗೂ ಜಗತ್ತಿನ ನಾನಾ ದೇಶಗಳ, ರಾಜ್ಯಗಳ ಸರಕಾರಗಳನ್ನು ಒಳಗೊಂಡ ಒಂದು ಸ್ವಯಂಸೇವಾ ಸಂಘಟನೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾ ಯಿತು. ಜಗತ್ತಿನ ಬಹುತೇಕ ಭಾಷೆಗಳಿಗೆ ಈಗಾಗಲೇ ಆಯಾಯ ದೇಶಗಳಲ್ಲಿ ಲಭ್ಯವಿದ್ದ ದೇಶೀಯ ಮಾನಕಗಳನ್ನೇ ಇಡಿಯಾಗಿ ತೆಗೆದುಕೊಂಡು ‘ಯುನಿಕೋಡ್ ಕನ್ಸಾರ್ಷಿಯಂ’ ಮೊದಲಿಗೆ ಅವುಗಳನ್ನು ಯುನಿಕೋಡ್ ರೂಪದಲ್ಲಿ ಅಳವಡಿಸಿ ಜಾಗತಿಕ ಮಾನಕದ ಪ್ರಥಮ ಆವೃತ್ತಿಯನ್ನು 1991ರಲ್ಲಿ ರೂಪಿಸಿತು. ಭಾರತೀಯ ಭಾಷೆಗಳ ಯುನಿಕೋಡ್ ಬಗ್ಗೆ ಹಲವಾರು ಚರ್ಚೆ ಗಳು, ಸಭೆಗಳು ನಡೆದಿವೆ. ಆ ಮೂಲಕ ಈ ಜಾಗತಿಕ ಮಾನಕ ವನ್ನು ಭಾರತೀಯ ಭಾಷೆಗಳ ಬಳಕೆಗಾಗಿ ಉತ್ತಮಪಡಿಸಿ ಹೊಸ ಆವೃತ್ತಿಗಳನ್ನು ಹೊರತರಲಾಗಿದೆ. ಪ್ರಸ್ತುತ, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ತಮ್ಮ ತಂತ್ರಾಂಶಗಳಲ್ಲಿ ವಿಶ್ವ ಭಾಷೆಗಳನ್ನು ಅಳವಡಿಸಿ, ಬಹುಭಾಷಾ ಯೂಸರ್ ಇಂಟರ್‌ಫೇಸ್‌ಗಳನ್ನು ನೀಡುವ ಮೂಲಕ ತಮ್ಮ ತಂತ್ರಾಂಶಗಳನ್ನು ಪ್ರಾದೇಶೀಕರಿಸಿದ್ದಾರೆ. ಆ ಮೂಲಕ ತಮ್ಮ ತಂತ್ರಾಂಶಗಳ ಮಾರಾಟಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೈಕ್ರೋಸಾಫ್ಟ್ ಭಾರತೀಯ ಭಾಷೆಗಳಿಗೆ ಯುನಿಕೋಡ್ ಬೆಂಬಲವನ್ನು ಅಳವಡಿಸಿ, ತನ್ನ ವಿಂಡೋಸ್ 2000, ವಿಂಡೋಸ್-ಎಕ್ಸ್‌ಪಿ ಮತ್ತು ವಿಂಡೋಸ್ 2003 ಹಾಗೂ ವಿಂಡೋಸ್ ವಿಸ್ತಾ ಕಾರ್ಯಾಚರಣೆ ವ್ಯವಸ್ಥೆ ಗಳನ್ನು ಹಾಗೂ ಆಫೀಸ್ 2000, ಎಕ್ಸ್‌ಪಿ ಮತ್ತು 2003 ಹಾಗೂ 2007 ಆವೃತ್ತಿಗಳಲ್ಲಿ ಕ್ರಮವಾಗಿ ಮೊದಲಿಗೆ ವಿವಿಧ ಭಾರತೀಯ ಭಾಷೆಗಳನ್ನು ಊಡಿಸುವ ಮತ್ತು ಮೂಡಿಸುವ ಅವಕಾಶವನ್ನು ಒದಗಿಸಿತು. ನಂತರದಲ್ಲಿ ಅವುಗಳಿಗೆ ಅಗತ್ಯವಿರುವ ಬಹುಭಾಷಾ ಇಂಟರ್‌ಪೇಸ್‌ನ್ನು ಎಲ್‌ಐಪಿಗಳು ಅಂದರೆ, ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳನ್ನು ರೂಪಿಸುವ ಮೂಲಕ ತನ್ನ ಎಲ್ಲಾ ಉತ್ಪನ್ನಗಳನ್ನು ಪ್ರಾದೇಶೀಕರಿಸಿದೆ. ಮೈಕ್ರೋಸಾಫ್ಟ್ ಉತ್ಪನ್ನಗಳಾದ ವಿಂಡೋಸ್-ಎಕ್ಸ್‌ಪಿ ಮತ್ತು ಆಫೀಸ್-2003ರ ಆನಂತರದ ಆವೃತ್ತಿಗಳಲ್ಲಿ ಪೂರ್ಣಪ್ರಮಾಣದ ಕನ್ನಡ ಯುನಿಕೋಡ್ ಬೆಂಬಲವನ್ನು ನೀಡಲಾಗಿದೆ. ಮೈಕ್ರೋಸಾಫ್ಟ್ ಉತ್ಪನ್ನಗಳಲ್ಲಿ ಕನ್ನಡ ಭಾಷಾ ಬಳಕೆಯೊಂದಿಗೆ ಪ್ರಾದೇಶಿಕ ಸಂದರ್ಭದಲ್ಲಿ ಅಗತ್ಯವಿರುವ ಅನೇಕ ಸೌಲಭ್ಯಗಳನ್ನು ಅಳವಡಿಸಿ ನೀಡಲಾಗಿದೆ. ವಿಶ್ವಭಾಷೆಗಳಿಗೆ ಯುನಿಕೊಡ್ ಬಳಕೆಯ ಬೆಂಬಲ ದೊರೆತ ಆನಂತರದಲ್ಲಿ, ಲಿನಕ್ಸ್‌ನ ಕನ್ನಡದ ಆವೃತ್ತಿಯ ಪ್ರಾದೇಶೀಕರಣದ ಕಾರ್ಯವನ್ನು ಲಿನಕ್ಸ್ ಸಮುದಾಯದ ಉತ್ಸಾಹಿ ಕನ್ನಡಿಗ ತಂತ್ರಜ್ಞರು 2002ರಲ್ಲಿಯೇ ಆರಂಭಿಸಿ, ಕಾಲಕ್ರಮೇಣ ಈ ಕೆಲಸವನ್ನು ಪೂರೈಸಿದ್ದಾರೆ. ಮೈಕ್ರೋಸಾಫ್ಟ್ ಆಫೀಸ್ ಸೂಟ್‌ಗೆ ಲಿನಕ್ಸ್‌ನ ಪರ್ಯಾಯ ಆಫೀಸ್ ಸೂಟ್ ಆಗಿರುವ ಓಪನ್ ಆಫೀಸ್‌ನ ಕನ್ನಡೀಕರಣ ಕಾರ್ಯವನ್ನು, ಕನ್ನಡ ಗಣಕ ಪರಿಷತ್ತಿನ ಅನುವಾದ ಸಹಕಾರದೊಂದಿಗೆ, ಸಿ-ಡಾಕ್ ಸಂಸ್ಥೆಯು ಕೈಗೊಂಡು ಪೂರ್ಣಗೊಳಿಸಿದೆ. ಹಲವು ಉದ್ದೇಶಗಳಿಗೆ ಬಳಸಲಾಗುವ ವಿವಿಧ ರೀತಿಯ ಆನ್ವಯಿಕ ತಂತ್ರಾಂಶಗಳು (ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳು) ಈಗ ಕನ್ನಡದಲ್ಲಿಯೇ ದೊರೆಯುತ್ತವೆ. ತಂತ್ರಾಂಶಗಳ ಕನ್ನಡೀಕರಣ ಎಂಬುದು ಒಂದು ನಿರಂತರ ಪ್ರಕ್ರಿಯೆಯಾಗಿದೆ.