varthabharthi


ವಾರದ ವ್ಯಕ್ತಿ

ವಾರದ ವ್ಯಕ್ತಿ

ನಾಯಕನಾದ ರಾಹುಲ್ ಗಾಂಧಿ

ವಾರ್ತಾ ಭಾರತಿ : 3 Dec, 2017
- ಬಸು ಮೇಗಲಕೇರಿ

ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಂಬ ಎರಡು ಎತ್ತುಗಳು ಭಾರತೀಯ ಜನತಾ ಪಕ್ಷದ ನೊಗ ಹೊತ್ತು, ಭಾರತ ದೇಶವೆಂಬ ಗಾಡಿಯನ್ನು ನಾಗಾಲೋಟದಲ್ಲಿ ಎಳೆದುಕೊಂಡು ಓಡುತ್ತಿವೆ. ಓಡುತ್ತಿರುವ ಖಾಲಿ ಗಾಡಿಯನ್ನೇ ‘ಪ್ರಗತಿಪಥದಲ್ಲಿರುವ ಭಾರತ’ ಎಂಬ ಭ್ರಮೆ ಬಿತ್ತಿವೆ. ಸಾಲದು ಎಂದು ತಮ್ಮದೇ ಆದ ಸುಸಜ್ಜಿತ ತಂತ್ರಜ್ಞರ ತಂಡ ಎಂಬ ಸಣ್ಣ ಕೈಗಾರಿಕೆಯಿಂದ ತಯಾರಾದ ‘ಸಿದ್ಧ ಸರಕ’ನ್ನು ಸಾಮಾಜಿಕ ಜಾಲತಾಣದಿಂದ ಮೊಬೈಲ್ಗೆ ಹರಿಸಿವೆ. ಅದನ್ನೇ ಅಧಿಕಾರಸ್ಥರ ಪರವಾಗಿರುವ ಸುದ್ದಿ ಮಾಧ್ಯಮಗಳು ಬಿತ್ತರಿಸಿ ಜನರನ್ನು ಗೊಂದಲಗೊಳಿಸುತ್ತಿವೆ. ಒಟ್ಟಿನಲ್ಲಿ ಸುಳ್ಳಿನ ಭ್ರಮಾ ಜಗತ್ತನ್ನು ಸೃಷ್ಟಿಸಿ, ಅದನ್ನೇ ಸತ್ಯವೆಂದು ಸಾರುವ ವ್ಯವಸ್ಥಿತ ಪಿತೂರಿಯೊಂದು ದೇಶದಲ್ಲಿ ಚಾಲ್ತಿಯಲ್ಲಿದೆ. ಈ ತಂತ್ರದಿಂದಲೇ ಉತ್ತರ ಪ್ರದೇಶವನ್ನು ಗೆದ್ದ ಬಿಜೆಪಿ, ಈಗ ಗುಜರಾತ್ ಗೆಲ್ಲಲು ಮತ್ತದೇ ಗಲೀಜಿಗೆ ಕೈ ಹಾಕಿದೆ. ಅದಕ್ಕೆ ಕೇಂದ್ರದ ಅಧಿಕಾರ, ಅಂಬಾನಿ-ಅದಾನಿಗಳ ಹಣ ಜೊತೆಗೆ ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಗುಜರಾತ್ ವಿಧಾನಸಭಾ ಚುನಾವಣೆ ಹತ್ತಿರವಾದಂತೆಲ್ಲ ರಾಜಕೀಯ ಪಕ್ಷಗಳ ನಾಯಕರ ನಾಲಗೆ ಹೊಲಸಾಗತೊಡಗಿದೆ. ಪರಸ್ಪರ ನಿಂದನೆ, ಟೀಕೆ, ಮೂದಲಿಕೆ, ಆರೋಪ ಅಂಕೆ ಮೀರಿ ಹೋಗುತ್ತಿದೆ. ಬಹಿರಂಗವಾಗಿಯೇ ಕೆಸರೆರಚಿ ಕೆಣಕಿ ಕಿಚಾಯಿಸಿ ಕದನಕ್ಕೆ ಕರೆಯುವುದು ಅತಿಯಾಗುತ್ತಿದೆ. ಮಸೀದಿ-ಮಂದಿರಗಳನ್ನು ಕಂಡಾಕ್ಷಣ ನುಗ್ಗುವ ನಾಯಕರ ಜಾತಿ-ಧರ್ಮಗಳೂ ಚರ್ಚೆಯ ವಸ್ತುಗಳಾಗುತ್ತಿವೆ. ಇರುವುದು ಇಲ್ಲದಿರುವುದು ಎಲ್ಲವೂ ಬಯಲಾಗುತ್ತಿದೆ.
ಚುನಾವಣಾ ಸಮಯದಲ್ಲಿ ಇದೆಲ್ಲ ಇದ್ದದ್ದೆ. ನಾಯಕರ ನಡುವಿನ ಸೆಣಸಾಟವೂ ಸಹಜ. ಆದರೆ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷವನ್ನು ಪ್ರತಿಸ್ಪರ್ಧಿಯೇ ಅಲ್ಲ ಎಂದು ಹಾಸ್ಯ ಮಾಡಿ ನಗುವುದು; ಪರಂಪರೆಯುಳ್ಳ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಬಚ್ಚಾ, ಬೇಬಿ, ಪಪ್ಪುಎಂದೆಲ್ಲ ಲೇವಡಿ ಮಾಡುವುದು; ದೇವರು-ಧರ್ಮ-ದೇಶಪ್ರೇಮಗಳೆಂಬ ಭಾವನಾತ್ಮಕ ಅಸ್ತ್ರಗಳನ್ನು ದೇಶದ ಅಮಾಯಕ ಮತದಾರರ ಮೇಲೆ ಪ್ರಯೋಗಿಸುವುದು- ಮೋದಿಗೆ ಮಾನ ತರುವ ಕೆಲಸವಲ್ಲ. ಪ್ರಜಾಪ್ರಭುತ್ವವನ್ನು ಒಪ್ಪಿದ ಬಹುದೊಡ್ಡ ದೇಶದ ಪ್ರಧಾನಿ ಪಟ್ಟಕ್ಕೆ ಶೋಭೆ ತರುವಂಥದ್ದಲ್ಲ. ಪ್ರಜಾಸತ್ತಾತ್ಮಕ ರೀತಿ-ನೀತಿಯನ್ನೇ ಅಣಕಿಸುವ, ಅವಮಾನಿಸುವ, ಅಗೌರವಿಸುವ ವರ್ತನೆ ಪ್ರಧಾನಿಗೆ ಒಪ್ಪುವಂಥದ್ದಲ್ಲ. ವಿಪರ್ಯಾಸಕರ ಸಂಗತಿ ಎಂದರೆ, ದಿನಗಳುರುಳಿದಂತೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಅವರಿಗೆ, ಅವರ ಮಾತುಗಳೇ ಮುಳುವಾಗುತ್ತಿವೆ. ತಂತ್ರಗಳೇ ತೊಡರುಗಾಲು ಕೊಡುತ್ತಿವೆ.
ಇಲ್ಲಿ ನನಗೆ ಮಹಾತ್ಮಾ ಗಾಂಧೀಜಿಯವರ ಪ್ರಸಿದ್ಧ ವ್ಯಾಖ್ಯಾನ ವೊಂದು ನೆನಪಾಗುತ್ತಿದೆ. ‘‘ಮೊದಲು ನಿನ್ನನ್ನು ನಿರ್ಲಕ್ಷಿಸುತ್ತಾರೆ, ಆನಂತರ ನಿನ್ನ ಕಂಡು ನಗುತ್ತಾರೆ, ನಂತರ ನಿನ್ನ ಜೊತೆಗೆ ಕದನಕ್ಕಿಳಿಯುತ್ತಾರೆ, ಕೊನೆಗೆ ಜಯ ನಿನ್ನದೆ’’. ಈಗ ಹೆಚ್ಚೂಕಡಿಮೆ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಕದನ ಇದೇ ರೀತಿಯಲ್ಲಿದೆ.

ರಾಹುಲ್ ಗಾಂಧಿ ಬೆಣ್ಣೆ ಬಿಸ್ಕತ್‌ನಂತೆ ಕಾಣುವ ಬೇಬಿಯೇ ಇರಬಹುದು. ಪಕ್ವತೆಯಿಲ್ಲದೆ ಪೆದ್ದು ಪೆದ್ದಾಗಿ ಮಾತಾಡುವ ಪುಟಾಣಿಯಂತೆ ಕಾಣಬಹುದು. ಅವರ ನಡವಳಿಕೆ ಹುಡುಗನ ಹುಡುಗಾಟಿಕೆಯಂತಿರಬಹುದು. ಅವರಿಗೆ ಬಡತನ, ಹಸಿವು, ಅವಮಾನಗಳೇ ಗೊತ್ತಿಲ್ಲದಿರಬಹುದು. ದೇಶದ ಹತ್ತಾರು ಧರ್ಮಗಳ ಸಾವಿರಾರು ಜಾತಿಗಳ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಿರಬಹುದು. ಜನರ ಮನಸ್ಥಿತಿ ಅರಿಯಲು ವಿಫಲನಾಗಿರಬಹುದು. ಆದರೆ ಅವಿದ್ಯಾವಂತರಲ್ಲ. ಅಪ್ರಾಮಾಣಿಕರಲ್ಲ. ಸುಳ್ಳರಲ್ಲ-ಕಳ್ಳರಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳವರಲ್ಲ. ಹಣ-ಅಧಿಕಾರದ ಮದದಿಂದ ಮೆರೆದವರಲ್ಲ. ದೇಶದ ಮಾನವನ್ನು ಹರಾಜಿಗಿಟ್ಟವರಲ್ಲ. ಇದ್ದಕ್ಕಿದ್ದಂತೆ ಇವತ್ತೇ ಎದ್ದುನಿಂತ ನಾಯಕನಂತೂ ಅಲ್ಲವೇ ಅಲ್ಲ. ಮುತ್ತಾತ ನೆಹರೂ, ಅಜ್ಜಿ ಇಂದಿರಾ ಗಾಂಧಿ, ಅಪ್ಪ ರಾಜೀವ್ ಗಾಂಧಿ, ಅಮ್ಮ ಸೋನಿಯಾ ಗಾಂಧಿಯವರು ಉನ್ನತ ಸ್ಥಾನಗಳಲ್ಲಿದ್ದರೂ, ಕಾಂಗ್ರೆಸ್ ಪಕ್ಷವೇ ಅವರ ಕೈಯಲ್ಲಿದ್ದರೂ ರಾಹುಲ್ ರಾಜಕೀಯದಿಂದ ದೂರವಿದ್ದವರು. ಓದು ವಿದ್ಯಾಭ್ಯಾಸ ಮುಗಿಸಿ 34ನೇ ವಯಸ್ಸಿಗೆ ರಾಜಕೀಯರಂಗಕ್ಕೆ ಕಾಲಿಟ್ಟವರು. 2004ರಿಂದ 2014ರವರೆಗೆ ಕಾಂಗ್ರೆಸ್ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ಅಮೇಥಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದನಾಗಿದ್ದರೂ, ಮಂತ್ರಿ ಸ್ಥಾನ ಅಲಂಕರಿಸದವರು. ಪಕ್ಷ ಸಂಘಟನೆ, ಕಾರ್ಯಕರ್ತರೊಂದಿಗಿನ ಒಡನಾಟ, ಕ್ಷೇತ್ರ ಸುತ್ತಾಟ, ಹೋರಾಟ, ಚುನಾವಣಾ ರಾಜಕಾರಣ, ಸಂಸದೀಯ ನಡವಳಿಕೆಗಳು.. ಹೀಗೆ ಎಲ್ಲವನ್ನು ಹಂತ ಹಂತವಾಗಿ ಅರಿತು ಅರಗಿಸಿಕೊಂಡವರು.
ಇಂತಹ ರಾಹುಲ್ ಜನಿಸಿದ್ದು 1970ರಲ್ಲಿ. ಆ ಸಂದರ್ಭದಲ್ಲಿ ಅಜ್ಜಿ ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿದ್ದರು. ತಂದೆ ರಾಜೀವ್ ಗಾಂಧಿ ರಾಜಕಾರಣಕ್ಕೆ ಹೊರತಾದ ಪೈಲಟ್ ಹುದ್ದೆಯಲ್ಲಿದ್ದು, ಆ ಕ್ಷೇತ್ರದಲ್ಲಿಯೇ ಮುಂದುವರಿಯುವ ಆಸೆ ಆಕಾಂಕ್ಷೆ ಹೊಂದಿದ್ದವರು. ರಾಜೀವ್ ಸಹೋದರ ಸಂಜಯ್ ಗಾಂಧಿಯ ಅಕಾಲಿಕ ಮರಣದಿಂದ, 1980ರಲ್ಲಿ ರಾಜೀವ್ ಗಾಂಧಿ ರಾಜಕೀಯಕ್ಕೆ ಬರುವಂತಹ ಅನಿವಾರ್ಯ ಸ್ಥಿತಿ ಸೃಷ್ಟಿಯಾಯಿತು. 1984ರಲ್ಲಿ ಇಂದಿರಾ ಗಾಂಧಿಯವರು ತಮ್ಮ ರಕ್ಷಕರಿಂದಲೇ ಗುಂಡಿಗೆ ಬಲಿಯಾದಾಗ, ಕುಟುಂಬದ ಸುರಕ್ಷತೆಯ ದೃಷ್ಟಿಯಿಂದ, ರಾಹುಲ್ ಗಾಂಧಿಯನ್ನು ವಿದ್ಯಾಭ್ಯಾಸದ ನೆಪದಲ್ಲಿ ಹೊರದೇಶಕ್ಕೆ ಕಳುಹಿಸಲಾಯಿತು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್ ಪದವಿ ಪಡೆದ ರಾಹುಲ್ ಗಾಂಧಿ, ಮೂರು ವರ್ಷಗಳ ಕಾಲ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿ ಅನುಭವ ಗಳಿಸಿದರು. 1991ರಲ್ಲಿ ತಂದೆ ರಾಜೀವ್ ಗಾಂಧಿಯ ಅಕಾಲಿಕ ಮರಣದ ನಂತರ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಆಹ್ವಾನದ ಮೇರೆಗೆ, ತಾಯಿ ಸೋನಿಯಾ ಅಥವಾ ಮಗ ರಾಹುಲ್ ರಾಜಕಾರಣಕ್ಕೆ ಇಳಿಯಬೇಕಾಯಿತು. ಅವತ್ತೇ ಅಧಿಕಾರದ ಸ್ಥಾನಗಳನ್ನು ಆಕ್ರಮಿಸಿಕೊಳ್ಳಬಹುದಿತ್ತು. ಆದರೆ ಅಮ್ಮ-ಮಗ ಇಬ್ಬರೂ, ಅಧಿಕಾರಕ್ಕಾಗಿ ಆಸೆ ಪಡದೆ, ಪಕ್ಷದ ಹಿರಿತಲೆಗಳಾದ ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್‌ರನ್ನು ಪ್ರಧಾನಿ ಹುದ್ದೆಗೇರಿಸಿ ಪವರ್ ಪಾಲಿಟಿಕ್ಸ್‌ನಿಂದ ದೂರವೇ ಉಳಿದರು. ಅಮ್ಮ 1997ರಲ್ಲಿ ಸಕ್ರಿಯ ರಾಜಕಾರಣಕ್ಕಿಳಿದರೆ, ಮಗ ರಾಹುಲ್ 2004ರವರೆಗೆ ಕಾದು, ಕಲಿತು ಕಾಲಿಟ್ಟರು.
ಇವತ್ತು ಗುಜರಾತ್ ಚುನಾವಣೆ ಎದುರಾಗಿದೆ. ಗುಜರಾತಿನ ಪಾಟಿದಾರರು, ಠಾಕೂರ್‌ಗಳು, ದಲಿತರು, ಮುಸ್ಲಿಮರು ಮತ್ತು ಹಿಂದೂಗಳ ಜಾತಿ ಲೆಕ್ಕಾಚಾರವನ್ನು ಬಲ್ಲವರಾಗಿರುವ ರಾಹುಲ್, 22 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರವಿಲ್ಲದ ಪಕ್ಷದ ಸ್ಥಿತಿಗತಿಯನ್ನು ಮತ್ತು ಮತದಾರರ ಒಲವು-ನಿಲುವುಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಪಟೇಲ್ ಸಮುದಾಯದ ಹಾರ್ದಿಕ್ ಪಟೇಲ್, ಠಾಕೂರ್ ಸಮುದಾಯದ ಕಲ್ಪೇಶ್ ಮತ್ತು ದಲಿತ ನಾಯಕ ಜಿಗ್ನೇಶ್ ಮೆವಾನಿಯೊಂದಿಗೆ ಮಾತುಕತೆ ನಡೆಸಿ, ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಮತ್ತು ಮೋದಿ-ಶಾರನ್ನು ಎದುರಿಸಲು ಸಜ್ಜಾಗಿದ್ದಾರೆ. ಜನಬೆಂಬಲವೂ ವ್ಯಕ್ತವಾಗುತ್ತಿದೆ.
ಪ್ರತಿಸ್ಪರ್ಧಿಗಳೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದ, ಅದನ್ನೇ ಹೇಳಿಕೊಂಡು ಬಂದಿದ್ದ ಬಿಜೆಪಿಗೆ ಈಗ ಈ ಹೊಸ ಹೊಂದಾಣಿಕೆ ಮತ್ತು ಅದಕ್ಕೆ ವ್ಯಕ್ತವಾಗುತ್ತಿರುವ ಜನಬೆಂಬಲ ತಲೆನೋವಾಗಿ ಕಾಡತೊಡಗಿದೆ. ಕಷ್ಟ ಕೊಡುತ್ತಿದೆ. ಇದು ಗುಜರಾತ್ ಎಂದರೆ ಮೋದಿ ಮತ್ತು ಅಮಿತ್ ಶಾ ಎಂದು ಬಿಂಬಿಸಿದ್ದ, ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡಿದ್ದ ಜೋಡಿಯ ಜಂಘಾಬಲವನ್ನು ಉಡುಗಿಸಿದೆ. ಜೊತೆಗೆ ಕಳೆದ 22 ವರ್ಷಗಳಿಂದ ನಿರಂತರವಾಗಿ ಗುಜರಾತನ್ನು ಆಳಿದ ಬಿಜೆಪಿಗೆ ಹಾಗೂ ‘ಗುಜರಾತ್ ಮಾಡೆಲ್’ ಎಂದು ದೇಶದಾದ್ಯಂತ ಸುದ್ದಿ ಮಾಡಿದ್ದ, ಅಭಿವೃದ್ಧಿ ಹೊಂದಿದ ರಾಜ್ಯ ಎಂದು ತೋರಿದ್ದ, ಅದನ್ನೇ ಸತ್ಯವೆಂದು ಸಾರಿದ್ದ ಮೋದಿ ಮತ್ತು ಶಾಗೆ, ದೇಶದ ಜನರ ಮುಂದೆ ನಿಜಸ್ಥಿತಿ ತೆರೆದುಕೊಂಡಿರುವುದು ಬೆಚ್ಚಿ ಬೀಳಿಸಿದೆ. ಇದನ್ನೇ ರಾಹುಲ್ ಗಾಂಧಿ ನೇರವಾಗಿ ಮೋದಿಗೆ ‘ದಿನಕ್ಕೊಂದು ಪ್ರಶ್ನೆ’ಯ ಮೂಲಕ ಮೊಟಕುತ್ತಿರುವುದು ಇನ್ನಷ್ಟು ಕಂಗೆಡಿಸಿದೆ.
ಮೋದಿ ಮತ್ತು ಅಮಿತ್ ಶಾ ಹೇಳುವಂತೆ ನಿಜಕ್ಕೂ ಗುಜರಾತ್ ಅಭಿವೃದ್ಧಿ ಹೊಂದಿರುವ ರಾಜ್ಯವೇ ಆಗಿದ್ದರೆ, ಅವರು ಪ್ರತಿಸ್ಪರ್ಧಿಗಳ ವಾಗ್ದಾಳಿಗೆ ಬೆದರುವ, ಬೆಚ್ಚುವ ಅಗತ್ಯವೇ ಇರಲಿಲ್ಲ. ಆ ಅಭಿವೃದ್ಧಿಯನ್ನು ದೇಶದ ಜನತೆಯ ಮುಂದೆ ತೆರೆದಿಟ್ಟಿದ್ದರೆ, ಕಾಂಗ್ರೆಸ್ ಕೆಮ್ಮುವಂತೆಯೇ ಇರಲಿಲ್ಲ. ಆದರೆ ಗುಜರಾತ್‌ನ ವಾಸ್ತವ ಸ್ಥಿತಿಯೇ ಬೇರೆ ಇದೆ. ಅಭಿವೃದ್ಧಿ ಎನ್ನುವುದು ಮೋದಿಯ ಭಾಷಣಕ್ಕೆ ಸೀಮಿತವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಗುಜರಾತ್ ಹೇಗಿತ್ತೋ ಇವತ್ತು ಕೂಡ ಹಾಗೆಯೇ ಇದೆ. ಅದೇ ಚರಂಡಿ, ಅದೇ ರಸ್ತೆ, ಶೌಚಾಲಯ ಗಳಿಲ್ಲದ ಗ್ರಾಮಗಳು, ನೀರಿಲ್ಲದ ನಗರಗಳು... ಬಿಜೆಪಿ ಆಡಳಿತ ಭ್ರಮನಿರಸನಗೊಳಿಸಿದೆ.
ಈ ನಿಜಸ್ಥಿತಿಯನ್ನು ರಾಹುಲ್ ಗಾಂಧಿ ಮತ್ತವರ ಗುಂಪು ದೇಶದ ಮುಂದಿಟ್ಟು ಮೋದಿಯನ್ನು ಪ್ರಶ್ನಿಸುತ್ತಿದೆ. ಪ್ರಶ್ನಿಸುವ, ಟೀಕಿಸುವ ಮತ್ತು ಅಭಿವ್ಯಕ್ತಿಸುವ ಕ್ರಮವನ್ನು ಕಂಡರೆ ಉರಿದು ಬೀಳುವ, ಅಂಥವರನ್ನು ಇಲ್ಲದಂತೆಯೇ ಮಾಡುವ ಮೋದಿ ಮತ್ತು ಅಮಿತ್ ಶಾ, ಎದುರಾಳಿಗಳನ್ನು ಬಗ್ಗುಬಡಿಯಲು, ಅವರ ಆತ್ಮಸ್ಥೈರ್ಯ ಕುಗ್ಗಿಸಲು ಹಲವು ತಂತ್ರಗಳ ಮೊರೆ ಹೋಗಿದ್ದಾರೆ. ರಾಹುಲ್ ಗಾಂಧಿ ಹಿಂದೂ ದೇವಾಲಯಕ್ಕೆ ಭೇಟಿ ಕೊಟ್ಟರೆ ಹಿಂದೂವೋ, ಕ್ರಿಶ್ಚಿಯನ್ನೋ ಎಂದು ಹುಯಿಲೆಬ್ಬಿಸುವುದು. ಪಾಟಿದಾರ್ ಸಮುದಾಯದ ಹಾರ್ದಿಕ್ ಪಟೇಲ್‌ರ ಮಾನ ಹರಾಜು ಹಾಕಲು ಸೆಕ್ಸ್ ಸಿಡಿ ಬಿಡುಗಡೆ ಮಾಡುವುದು. ಗುಜರಾತ್‌ನ ಆರ್ಚ್ ಬಿಷಪ್ ಥಾಮಸ್ ಮೆಕ್ವಾನ್ ಎಂಬ ಪಾದ್ರಿ, ತಮ್ಮ ಆಪ್ತ ವಲಯದ ಪಾದ್ರಿಗಳಿಗೆ ‘ರಾಷ್ಟ್ರೀಯವಾದಿ ಶಕ್ತಿಗಳನ್ನು ಚುನಾವಣೆಯಲ್ಲಿ ತಿರಸ್ಕರಿಸಿ’ ಎಂದು ಪತ್ರ ಬರೆದರೆ, ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್ ಕೊಡಿಸುವುದು. ಜಿಗ್ನೇಸ್ ಮೆವಾನಿ ಮೇಲೆ ಸುಖಾಸುಮ್ಮನೆ ದೊಂಬಿ ಕೇಸ್ ದಾಖಲಿಸುವುದು. ಇದೆಲ್ಲವನ್ನು ವ್ಯವಸ್ಥಿತವಾಗಿ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುವಂತೆ, ಅದು ಕಾಂಗ್ರೆಸ್ ವಿರೋಧಿ ಅಲೆಯಾಗಿ ಮಾರ್ಪಡುವಂತೆ ರೂಪಿಸಲಾಗುತ್ತಿದೆ.
ಅಂದರೆ, ಬಿಜೆಪಿ ನಾಯಕರಾದ ಮೋದಿ ಮತ್ತು ಅಮಿತ್ ಶಾ ಅವರ ಈ ಕೃತ್ಯ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಕಾಣುತ್ತಿದೆ. ಜನಕ್ಕೆ ಎಲ್ಲವೂ ಅರ್ಥವಾಗುತ್ತಿದೆ. ಹಾಗೆಯೇ ಇಲ್ಲಿಯವರೆಗೆ ಗುಜರಾತ್‌ನಲ್ಲಿ ಸತ್ತಂತಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೀವ ಬಂದಂತಾಗಿ, ಕಾರ್ಯಕರ್ತರು ಹೊಸ ಹುರುಪಿನಿಂದ ಓಡಾಡತೊಡಗಿದ್ದಾರೆ. ಅವರ ಹುರುಪು, ಹುಮ್ಮಸ್ಸು ಕಂಡ ಕಾಂಗ್ರೆಸ್ ಪಕ್ಷ, ಇದೇ ಸೂಕ್ತ ಸಮಯವೆಂದು ನಿರ್ಧರಿಸಿ, ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಸಿದ್ಧವಾಗಿದೆ. ಅದು ಈ ಗುಜರಾತ್ ಚುನಾವಣೆಯ ಸಂದರ್ಭದಲ್ಲಿಯೇ ಚಾಲ್ತಿಗೆ ಬಂದಿರುವುದು, ರಾಹುಲ್ ನಾಯಕನಾಗಿ ಹೊರಹೊಮ್ಮುತ್ತಿರುವುದು, ಅದನ್ನು ಮೋದಿಯೇ ಮುಂದೆ ನಿಂತು ಮಾಡುತ್ತಿರುವಂತೆ ಅಥವಾ ಮೋದಿಯ ಆರ್ಭಟ-ಅತಿರೇಕಗಳಿಂದ ಬೇಸತ್ತ ಜನ ತಣ್ಣನೆಯ ರಾಹುಲ್‌ರನ್ನು ನಾಯಕನನ್ನಾಗಿ ಒಪ್ಪಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಮತ್ತೆ ಮಹಾತ್ಮಾ ಗಾಂಧೀಜಿಯ...‘‘ಮೊದಲು ನಿನ್ನನ್ನು ನಿರ್ಲಕ್ಷಿಸುತ್ತಾರೆ, ಆನಂತರ ನಿನ್ನ ಕಂಡು ನಗುತ್ತಾರೆ, ನಂತರ ನಿನ್ನ ಜೊತೆಗೆ ಕದನಕ್ಕಿಳಿಯುತ್ತಾರೆ, ಕೊನೆಗೆ ಜಯ ನಿನ್ನದೆ’’ ಅಣಿಮುತ್ತುಗಳು ನೆನಪಾಗುತ್ತಿವೆ. ರಾಹುಲ್ ಗಾಂಧಿ ಗೆಲ್ಲುತ್ತಾರೋ ಇಲ್ಲವೋ.. ಅವರೊಂದಿಗೆ ಕದನಕ್ಕಂತೂ ಇಳಿದಿದ್ದಾರೆ. ಕಾದು ನೋಡೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)